ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನ ರಂಜನೆ ಮನೋಲ್ಲಾಸಗಳ ಅದ್ಭುತ ಮಿಕ್ಸ್‌ - ಕಾಮಿಕ್ಸ್‌!

By * ಶ್ರೀವತ್ಸ ಜೋಶಿ
|
Google Oneindia Kannada News

ಅಮರ ಚಿತ್ರ ಕಥೆ ಪುಸ್ತಕಗಳಲ್ಲಿ ಒಂದನ್ನಾದರೂ ಒಮ್ಮೆಯಾದರೂ ಓದದೇ ಇರುವವರು ಕೈಯೆತ್ತಿ!"

ಪ್ರಾಯಶಃ ಈ ಲೇಖನವನ್ನೋದುತ್ತಿರುವವರಾರೂ ಆ ಸಾಲಿಗೆ ಸೇರಿರಲಾರಿರಿ ಎಂದು ನಾನು ದೃಢವಿಶ್ವಾಸದಿಂದ ಹೇಳಬಲ್ಲೆ. ತೀರಾ 'ಪುಸ್ತಕಹುಳು"ವಾಗಿರುವವರಿಂದ ಹಿಡಿದು ನನ್ನಂತೆ ಅದೊಂದು-ಇದೊಂದು ಪುಸ್ತಕ ಮಾತ್ರ ಓದಿರುವಂಥವರ ವರೆಗೆ ಓದಿನ ಹುಚ್ಚು ನಮಗೆಲ್ಲರಿಗೂ ಹೆಚ್ಚುಕಡಿಮೆ ವ್ಯಾಪಕವಾಗಿಯೇ ಇದೆ. ಹಾಗೆಯೇ ನಾವು ಓದಿರುವ ಸಾಮಗ್ರಿಯಲ್ಲಿ ಕಾದಂಬರಿ, ಕಥೆ-ಕವನ ಸಂಕಲನಗಳು, ವಿಮರ್ಶೆಗಳು, ಆಕರಗ್ರಂಥಗಳು, ನಿಯತಕಾಲಿಕಗಳು, ಸ್ಮರಣಸಂಚಿಕೆಗಳು, ಮತ್ತಿತರ ಪುಸ್ತಕಗಳ ಜತೆಯಲ್ಲೇ ಅಮರಚಿತ್ರಕಥೆ, ಟಿಂಕಲ್‌, ಇಂದ್ರಜಾಲ ಕಾಮಿಕ್ಸ್‌ ಇತ್ಯಾದಿ ಸಹ ಖಂಡಿತವಾಗಿಯೂ ಸ್ಥಾನ ಪಡೆದಿವೆ ಎನ್ನಲಿಕ್ಕಡ್ಡಿಯಿಲ್ಲ.

ಕಾಮಿಕ್ಸ್‌ ಪುಸ್ತಕಗಳ ಮಾತಿರಲಿ, ದೈನಿಕ, ಸಾಪ್ತಾಹಿಕ, ಮಾಸಪತ್ರಿಕೆಗಳಲ್ಲಿ ಬರುವ ಕಾಮಿಕ್‌ಸ್ಟ್ರಿಪ್‌ಗಳ ಪೈಕಿ ಕೆಲವನ್ನಾದರೂ ಓದದೇ ಇರುತ್ತೇವೆಯೇ? ಪ್ರಜಾವಾಣಿ ತೆರೆಯುತ್ತಲೇ ಕ್ರೀಡಾಸುದ್ದಿ, ಚಲನಚಿತ್ರ ಸುದ್ದಿ, ಮುಖಪುಟ ವಾರ್ತೆಗಳಿಗಿಂತ ಮುಂದಾಗಿ 'ಮೊದ್ದು ಮಣಿ" ಕಾಮಿಕ್‌ಸ್ಟ್ರಿಪ್‌ ನೋಡಿಮುಗಿಸುತ್ತಿದ್ದ ದಿನಗಳು ನಿಮಗೆ ನೆನಪಿಲ್ಲವೇ? ಸುಧಾದಲ್ಲಿ ಬರುತ್ತಿದ್ದ ಡಾಬೂ, ಮಜನೂ, ಕಪೀಶ, ಫ್ಯಾಂಟಮ್‌, ಶೂಜ, ರಹಸ್ಯ ಏಜೆಂಟ್‌ ವಿಕ್ರಮ್‌, ಮಯೂರದಲ್ಲಿ ಬರುತ್ತಿದ್ದ ಪುಟ್ಟೂ... ಇವನ್ನೋದಲು ನಾಮುಂದು ತಾಮುಂದು ಎಂದು ಪತ್ರಿಕೆ ಬಂದ ಕೂಡಲೆ ನಮ್ಮ ಮನೆಗಳಲ್ಲಿ ಸಣ್ಣಮಟ್ಟಿನ ಸ್ಪರ್ಧೆಯೇ ಇರುತ್ತಿತ್ತಲ್ಲವೇ? ನನಗೀಗಲೂ ನೆನಪಿದೆ - ಚಿಕ್ಕಂದಿನಲ್ಲಿ ಉದಯವಾಣಿಯ ರವಿವಾರದ ಸಾಪ್ತಾಹಿಕ ಪುರವಣಿಯಲ್ಲಿ ಬರುತ್ತಿದ್ದ 'ರಾಮು ಮತ್ತು ಶಾಮು" ಓದಲು ನಾವೆಲ್ಲ ತುದಿಗಾಲಲ್ಲಿ ನಿಂತು ಕಾಯುತ್ತಿದ್ದೆವು. ಇಡೀ ವಾರದಲ್ಲಿ ಬರೀ ಒಂದು ದಿನವಷ್ಟೆ ಪತ್ರಿಕೆಯ ಒಂದು ಪುಟದ ಮೂಲೆಯಲ್ಲಿ ಮಿನುಗುತ್ತಿದ್ದ ಆ ಕಾಮಿಕ್‌ಸ್ಟ್ರಿಪ್‌ಗೋಸ್ಕರ ಮೇಲಾಟ. ಈಗ ವಾಷಿಂಗ್ಟನ್‌ ಪೋಸ್ಟ್‌ ದಿನಪತ್ರಿಕೆಯನ್ನೋದುವ ಜಮಾನಾದಲ್ಲಿ ಇಲ್ಲಿ ದಿನಾ ಒಂದು ಪುಟವಿಡೀ ಕಾಮಿಕ್‌ಸ್ಟ್ರಿಪ್‌ಗಳಿದ್ದರೆ ಭಾನುವಾರವಂತೂ ಆರು ಪುಟಗಳ ಎರಡು ಪುರವಣಿಗಳಲ್ಲಿ ಅಷ್ಟೂ ಕಾರ್ಟೂನ್‌/ಕಾಮಿಕ್‌ಸ್ಟ್ರಿಪ್‌ಗಳೇ ಇರೋದು. ಹೀಗಿದ್ದೂ ರಾಮು-ಶಾಮು, ಡಾಬೂ, ಕಪೀಶ... ಇತ್ಯಾದಿ ಸಿಕ್ಕರೆ ಅವನ್ನೋದುವ ಹಸಿವು ನನಗೆ ಈಗಲೂ ಇದೆ!

Putti - comic strip from Prajavaniಕಾಮಿಕ್ಸ್‌ಗಳ ಕಮಾಲ್‌ ಅದು. ಯಾಕೆ ಆ ಪರಿಯಲ್ಲಿ ಅವಕ್ಕೆ ಕಾಂತಶಕ್ತಿ? ಕಾರಣ ಸರಳ - ಒಟ್ಟಂದದಲ್ಲಿ ಅವು ಜನಜೀವನದ, ಜೀವಸೆಲೆಯ ಸರಳ ಸಾಮಾನ್ಯ ಪ್ರತಿಫಲನ. ಬದುಕಲ್ಲಿ ಭ್ರಮನಿರಸನವಾದಾಗ ಒಂದು ನಗೆಬುಗ್ಗೆ ಮರುಭೂಮಿಯ ಓಯಸಿಸ್‌ನಂತೆ ಆಗುವುದಿಲ್ಲವೇ? ಸಪ್ಪೆಯಾದ ಬದುಕಿಗೆ ಸಾಹಸಗಳ ಕಲ್ಪನೆ ರೋಚಕವಾಗುವುದಿಲ್ಲವೇ? ದೈನಂದಿನ ಜಂಜಾಟ ಸ್ಟುಪಿಡ್‌ ಅನಿಸುವ ಮಟ್ಟಕ್ಕೆ ತಲುಪಿದಾಗ ವ್ಯಂಗ್ಯ-ವಿಡಂಬನೆಯ ಒಂದು ಡೋಸ್‌ ಉತ್ತೇಜನಕಾರಿಯಾಗುವುದಿಲ್ಲವೇ? ಒಂಟಿತನ ಕಾಡಿದಾಗ ರೋಮ್ಯಾಂಟಿಕ್‌ ಕಲ್ಪನೆ ಮುದನೀಡುವುದಿಲ್ಲವೇ? ಅಸಲಿಗೆ ಕಾಮಿಕ್‌ ಸ್ಟ್ರಿಪ್‌ಗಳ ಅಗಾಧ ಜನಪ್ರಿಯತೆಯ ಹಿಂದಿನ ನಾಲ್ಕು ಸರಳತತ್ವಗಳಿವು - ಹಾಸ್ಯ, ಸಾಹಸ, ವಿಡಂಬನೆ, ಮತ್ತು ಸರಸ. ನಿಮ್ಮ ನೆಚ್ಚಿನ ಕಾಮಿಕ್‌ಸ್ಟ್ರಿಪ್‌ - ಅದು ಡೂನ್ಸ್‌ಬರಿ, ಪೀನಟ್ಸ್‌, ಹೇಗರ್‌ನಂಥದಿರಬಹುದು, ಸೂಪರ್‌ಮ್ಯಾನ್‌, ಫ್ಲಾಷ್‌ಗಾರ್ಡನ್‌ನಂಥದಿರಬಹುದು, ಡೆನಿಸ್‌ ದ ಮೆನಾಸ್‌ ಇರಬಹುದು, ದಿಲ್ಬರ್ಟ್‌ ಇರಬಹುದು - ಅವೆಲ್ಲದರ ಮೋಡಿಯ ಒಳಗುಟ್ಟು ಈ ನಾಲ್ಕು ಅಂಶಗಳಲ್ಲೇ ಅಡಗಿರುತ್ತದೆ.

ಆದರೆ ನೋಡಿ, 'ಮಕ್ಕಳ ಪುಟ"ದಲ್ಲಿ ಪ್ರಕಟಣೆಗೆ ಯೋಗ್ಯ ಅಥವಾ ವಿನೋದಪತ್ರಿಕೆಗಳಿಗಷ್ಟೇ ಮೀಸಲು ಎಂಬ ತಪ್ಪುಕಲ್ಪನೆಗೊಳಗಾಗಿದ್ದ ಕಾಮಿಕ್‌ಸ್ಟ್ರಿಪ್‌ಗಳನ್ನು ವಾಸ್ತವವಾಗಿ ಎಲ್ಲ ವರ್ಗದ ಓದುಗರೂ ಓದುತ್ತಾರೆ! ಒಂದು ರೀತಿಯಲ್ಲಿ ಸಾಮಾಜಿಕ ಪರಿವರ್ತನೆಯ, ಮಾರ್ಗದರ್ಶನದ ಜವಾಬ್ದಾರಿಯನ್ನವು ವಹಿಸುತ್ತವೆ ಎಂಬ ಸತ್ಯ ಕ್ರಮೇಣ ಎಲ್ಲರಿಗೂ ಅರ್ಥವಾಗುತ್ತಿದೆ. ಒಂದು ಸ್ವಲ್ಪ ಎಜುಕೇಟಿಂಗ್‌, ಮತ್ತೊಂಚೂರು ಇರಿಟೇಟಿಂಗ್‌, ಒಂದಿನಿತು ಟಿಕಲಿಂಗ್‌ ಮತ್ತೊಂದಿಷ್ಟು ಟೀಸಿಂಗ್‌, ಸ್ವಲ್ಪವಾದರೂ ಇನ್ಫಾರ್ಮಿಂಗ್‌ ಜತೆಯಲ್ಲೇ ರಿಫಾರ್ಮಿಂಗ್‌ - ಇದೆಲ್ಲವನ್ನೂ ಮಾಡುತ್ತವೆ ಕಾಮಿಕ್‌ಸ್ಟ್ರಿಪ್ಸ್‌. ಇನ್ನೊಂದೆಂದರೆ ಅವು ಸಾರ್ವತ್ರಿಕವಾಗಿ ಜನಾನುರಾಗಿಯಾಗಿರುವುದರಿಂದ ಕಾಮಿಕ್‌ ಪಾತ್ರಗಳೆಲ್ಲ ವಿಶ್ವಾದ್ಯಂತ ಪರಿಚಿತ, ಜನಪ್ರಿಯ. ಪಕ್ಕದ್ಮನೆಯವರೇನೊ ಅನ್ನುವಷ್ಟು ಆತ್ಮೀಯ, ಅಪ್ಯಾಯಮಾನ.

ಕಾಮಿಕ್‌ಸ್ಟ್ರಿಪ್‌ ಕಲಾಪ್ರಕಾರವು ಮೂಲತಃ ವಿಶ್ವಕ್ಕೆ ಅಮೆರಿಕದ ಕೊಡುಗೆ. ಹಾಗೆ ನೋಡಿದರೆ ಈಜಿಪ್ಟ್‌ನ ಪುರಾತನ ನಾಗರಿಕತೆಯ ಪಳೆಯುಳಿಕೆಗಳಲ್ಲೂ ಚಿತ್ರಸರಣಿಯ ಮೂಲಕ ಕಥಾನಿರೂಪಣೆಯ ಪ್ರಯತ್ನದ ಕುರುಹುಗಳು ಸಿಕ್ಕಿವೆಯಂತೆ. ಪೆಪಿರಸ್‌ ಕಾಗದದ ಮೇಲೆ ಈ ಸಚಿತ್ರಕಥನ ಲಭ್ಯವಾಗಿದೆಯಂತೆ. ರೋಮನ್‌ ನಾಗರಿಕತೆಯಲ್ಲೂ, 17ನೇ ಶತಮಾನದ ಇಂಗ್ಲಂಡ್‌ ಚರಿತ್ರೆಯಲ್ಲೂ ಚಿತ್ರಸರಣಿಯ ಐತಿಹ್ಯವಿದೆಯಂತೆ. ಆಧುನಿಕ ಜಗತ್ತಿನಲ್ಲಿ, ಅದೂ ಪತ್ರಿಕೆಗಳ ಪುಟಗಳಲ್ಲಿ ವ್ಯಂಗ್ಯಚಿತ್ರಗಳು ಮೊದಲಿಂದಲೂ ಇದ್ದುವಾದರೂ ಕಾಮಿಕ್‌ಸ್ಟ್ರಿಪ್ಸ್‌ ಕಾಣಿಸತೊಡಗಿದ್ದು 20ನೇ ಶತಮಾನದ ಆರಂಭಕಾಲದಿಂದ ಮಾತ್ರ ಎನ್ನುತ್ತಾರೆ. 'ನ್ಯೂಯಾರ್ಕ್‌ ವರ್ಲ್ಡ್‌" ಪತ್ರಿಕೆಯಲ್ಲಿ 1895ರಲ್ಲಿ ಪ್ರಕಟವಾಗಲಾರಂಭಿಸಿದ 'ಯೆಲ್ಲೊ ಕಿಡ್‌" ಮೊಟ್ಟಮೊದಲ ಕಾಮಿಕ್‌ ಎಂದು ಗುರುತಿಸಲ್ಪಡುತ್ತದೆ. ಅಲ್ಲಿಂದ ಆರಂಭವಾದ ಕಾಮಿಕ್‌ಸ್ಟ್ರಿಪ್‌ ಕ್ರೇಜ್‌ ಆಮೇಲೆ ಸೂಪರ್‌ಹಿಟ್‌ ಆಯಿತು. 20ನೇ ಶತಮಾನದ ಕೊನೆಯ ವೇಳೆಗೆ ಕಾರ್ಪೊರೇಟ್‌ ಪ್ರಪಂಚದ ಮೋಸ್ಟ್‌ ಫೇವರಿಟ್‌ ಕಾಮಿಕ್‌ಸ್ಟ್ರಿಪ್‌ 'ದಿಲ್‌ಬರ್ಟ್‌" ಎಷ್ಟು ಜನಪ್ರಿಯವೆಂದರೆ ಪ್ರಪಂಚದಾದ್ಯಂತ ಸುಮಾರು 600ಕ್ಕೂ ಹೆಚ್ಚಿನ ದಿನಪತ್ರಿಕೆಗಳಲ್ಲಿ ಅದು ಮುದ್ರಿತವಾಗುತ್ತದೆ. ದಿಲ್‌ಬರ್ಟ್‌ನಂತೆಯೇ ವಿಶ್ವವ್ಯಾಪಿ ಅಭಿಮಾನಿಗಳನ್ನು ಹೊಂದಿದ ಕಾಮಿಕ್ಸ್‌ ಬಹಳ ಇವೆ. ಕಾಮಿಕ್‌ಸ್ಟ್ರಿಪ್‌ ಯಶಸ್ಸಿನ ನಂತರ ಕ್ರಮೇಣ ಪುಸ್ತಕ ರೂಪದಲ್ಲೂ ಕಾಮಿಕ್ಸ್‌ ಬರತೊಡಗಿದವು; ಅವುಗಳ ಜನಪ್ರಿಯತೆಯಂತೂ ನಿಮಗೆ ಗೊತ್ತೇ ಇದೆ. ಮಾತ್ರವಲ್ಲ, ನಿಮ್ಮಲ್ಲನೇಕರಲ್ಲಿ ಈಗಲೂ ಕಾಮಿಕ್ಸ್‌ಪುಸ್ತಕಗಳ ದೊಡ್ಡ ಸಂಗ್ರಹವೇ ಇರಬಹುದೆಂದುಕೊಂಡಿದ್ದೇನೆ.

<strong>ಅಮರ ಚಿತ್ರಕಥೆಯ ಅಂಕಲ್ ಪೈ ನಿಧನ</strong>ಅಮರ ಚಿತ್ರಕಥೆಯ ಅಂಕಲ್ ಪೈ ನಿಧನ

ಭಾರತದ ಮಟ್ಟಿಗೆ ಹೇಳಬೇಕಿದ್ದರೆ ಅಮರಚಿತ್ರಕಥೆಯ ಅನಂತ ಪೈ ('ಪೈ ಅಂಕಲ್‌" ಎಂದೇ ಮಕ್ಕಳಿಗೆಲ್ಲ ಆತ್ಮೀಯ) ಭಾರತೀಯ ಕಾಮಿಕ್ಸ್‌ನ ಪಿತಾಮಹ ಎನ್ನಬಹುದು. ಸುಮಾರು 450ಕ್ಕೂ ಹೆಚ್ಚು ಶೀರ್ಷಿಕೆಗಳು, 38 ಬೇರೆಬೇರೆ ಭಾಷೆಗಳಲ್ಲಿ, ಸುಮಾರು 80 ಮಿಲಿಯಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಅಮರಚಿತ್ರಕಥೆ ಸರಣಿ ನಿಜವಾಗಿಯೂ ಅಜರಾಮರವಾದುದು. 1967ರಿಂದೀಚೆಗೆ ತಲೆಮಾರಿಂದ ತಲೆಮಾರಿಗೆ 'ಭಾರತೀಯ" ಜ್ಞಾನಾರ್ಜನೆಯ ಹರಿವು ಈ ಪುಸ್ತಕಗಳ ಸರಳಭಾಷೆಯ ನಿರೂಪಣೆ, ಸುಂದರ ಚಿತ್ರಗಳೊಂದಿಗೆ ಸಂಭಾಷಣೆ - ಹೀಗೆ ಕಣ್ಣಿಗೆಕಟ್ಟುವ ರೀತಿಯಲ್ಲಿ ಸಾಧ್ಯವಾಗಿದೆ. ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗದಲ್ಲಿದ್ದಾಗ ಯಾವುದೋ ಒಂದು ಕ್ವಿಜ್‌ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಪೈಯವರಿಗೆ, ಸ್ಪರ್ಧಿಗಳು ಪಾಶ್ಚಾತ್ಯ ತತ್ವಶಾಸ್ತ್ರದ ಪ್ರಶ್ನೆಗಳನ್ನೆಲ್ಲ ಸಲೀಸಾಗಿ ಉತ್ತರಿಸಿಯೂ ಭಾರತೀಯ ಪುರಾಣಗಳಿಗೆ ಸಂಬಂಧಿಸಿದ - ಅದೂ 'ಶ್ರೀರಾಮಚಂದ್ರನ ತಾಯಿಯ ಹೆಸರೇನು?" ಎಂಬಂಥ ಪ್ರಶ್ನೆಯ ಉತ್ತರಕ್ಕೆ ತಡವರಿಸುತ್ತಿದ್ದುದನ್ನು ನೋಡಿದಾಗ ಹೊಳೆದ ಯೋಜನೆಯೇ ಅಮರಚಿತ್ರಕಥೆ! 'ಅನಂತ" ಪೈ ಅವರಿಗೆ ಬಂದ ಆ ಪರಿಕಲ್ಪನೆ 'ಅಮರ"ವೇ ಸೈ. ಉದಯವಾಣಿಯಲ್ಲಿ ಬರುತ್ತಿದ್ದ ರಾಮು-ಶಾಮು ಸಹ ಅನಂತ ಪೈ ರಚನೆ. ಅಮರಚಿತ್ರಕಥೆಯಂತೆಯೇ ಜನಪ್ರಿಯವಾದ ಟಿಂಕಲ್‌ ಕೂಡ ಅವರದೇ ಕೊಡುಗೆ. 'ರಂಗ ರೇಖಾ ಫೀಚರ್ಸ್‌" ಎನ್ನುವ ಕಾರ್ಟೂನ್‌/ಕಾಮಿಕ್‌ ಸಿಂಡಿಕೇಟನ್ನೇ ಅವರು ಸ್ಥಾಪಿಸಿದ್ದಾರೆ. ಪೈ ಅಂಕಲ್‌ ಬಗ್ಗೆ ನನಗಂತೂ ವಿಶೇಷ ಅಭಿಮಾನಕ್ಕೆ ಇನ್ನೂ ಒಂದು ಕಾರಣವಿದೆ - ಅವರ ಹುಟ್ಟೂರು ನಮ್ಮ ಕಾರ್ಕಳ!

ಭಾರತೀಯ ಕಾಮಿಕ್ಸ್‌ ಕಲೆಗೆ ಪ್ರಾಣ ತುಂಬಿದ ಇನ್ನೊಬ್ಬ ಕಲಾವಿದರೆಂದರೆ ಪ್ರಾಣ್‌ (ಪ್ರಾಣ್‌ ಕುಮಾರ್‌ ಶರ್ಮಾ). ಚಾಚಾ ಚೌಧುರಿ, ಡಾಬೂ, ರಾಮನ್‌, ಶ್ರೀಮತೀಜಿ, ಬಿಲ್ಲೂ-ಪಿಂಕಿ-ಸುಲೇಮಾನ್‌, ಪುಟ್ಟೂ, ಪುಟ್ಟಿ - ಇವೆಲ್ಲ ಪ್ರಾಣ್‌ ಪರಿಕಲ್ಪನೆಯ ಮೂಸೆಯಿಂದ ಬಂದವು. 1960ರಲ್ಲಿ ಶುರುವಾದ ಪ್ರಾಣ್‌ ಕಾಮಿಕ್ಸ್‌ ಭಾರತೀಯ ಭಾಷೆಗಳ ಪತ್ರಿಕೆಗಳಲ್ಲೆಲ್ಲ ಕಾಣಿಸುತ್ತವೆ. ಪ್ರಜಾವಾಣಿಯ ಅಂತರ್ಜಾಲ ಆವೃತ್ತಿಯಿಂದಾಗಿ ಪುಟ್ಟಿ ಮತ್ತು ರಾಮನ್‌ ಕಾಮಿಕ್‌ಸ್ಟ್ರಿಪ್ಸ್‌ ಇಂಟರ್‌ನೆಟ್‌ ಓದುಗರಿಗೂ ಲಭ್ಯವಿವೆ.

ಮತ್ತೆ ಕಾಮಿಕ್ಸ್‌ ಮೋಡಿಯ ವಿಷಯಕ್ಕೆ ಬಂದರೆ, ದೃಶ್ಯಮಾಧ್ಯಮವಾಗಿ ಅವುಗಳ ಕೊಡುಗೆ, ಟಿವಿ ಬರುವ ಮೊದಲು ಸಚಿತ್ರಕಥನವನ್ನು ಪರಿಣಾಮಕಾರಿಯಾಗಿ ಅವು ಮಾಡಿದ ರೀತಿ, ಕೇವಲ ನಾಲ್ಕಾರು ಫ್ರೇಮ್‌ಗಳಲ್ಲೇ ಕಥೆಯನ್ನು ಮುನ್ನಡೆಸಿ ಪಾತ್ರಗಳನ್ನು ಪರಿಚಯಿಸಿ ಪೋಷಿಸಿ, ಆಕ್ಷನ್‌ ಮೂಲಕ ಕ್ಲೈಮಾಕ್ಸ್‌ ಕಟ್ಟಿ ಮುಂದೇನು ಎಂದು ಕಾಯುವಂತೆ ಮಾಡುವ ಅವುಗಳ ಶಕ್ತಿಯನ್ನು ನಿಜಕ್ಕೂ ಮೆಚ್ಚಲೇಬೇಕು. ಕೇವಲ ರೇಖೆಗಳ ಚಿತ್ತಾರದಿಂದ ನವರಸಗಳ ಅಭಿವ್ಯಕ್ತಿ, 'ಬಲೂನ್‌"ಗಳಲ್ಲಿ ಪಾತ್ರಗಳ ಸಂಭಾಷಣಾ ಪಠ್ಯ, ನಿರೂಪಣೆಯಿದ್ದರೆ ಪ್ಯಾನೆಲ್‌ಗಳ ಮೇಲ್ಭಾಗದಲ್ಲಿ ಚಿಕ್ಕ-ಚೊಕ್ಕ ಪದಪುಂಜಗಳು, 'ಧಡ್‌!", 'ಟ್ರಿಂ ಟ್ರಿಂ..." ಇತ್ಯಾದಿ ಪದಗಳನ್ನು ಮುದ್ರಿಸುವ ರೀತಿಯಲ್ಲೇ ಅವುಗಳ ಸಶಬ್ದ ಪರಿಣಾಮ - ಇವೆಲ್ಲ ಕಾಮಿಕ್ಸ್‌ ಕಲೆಯ ವಿಶಿಷ್ಟ ಗುರುತುಗಳು. ನೀವು ಗಮನಿಸಿದ್ದೀರೋ ಇಲ್ಲವೋ, ಕಾಮಿಕ್ಸ್‌ನಲ್ಲಿ ವ್ಯಕ್ತಿಗಳಿಗೆ ಹೆಚ್ಚಾಗಿ ನಾಲ್ಕೇ ಕೈಬೆರಳುಗಳಿರೋದು, ಹಾಗೆಯೇ ಆಂಗ್ಲ ಭಾಷೆಯ ಕಾಮಿಕ್ಸ್‌ನಲ್ಲಿ ಸಂಭಾಷಣಾ/ನಿರೂಪಣಾ ಪಠ್ಯವು ಬಹುತೇಕವಾಗಿ (ಅಲ್ಲೊಂದು ಇಲ್ಲೊಂದು ಅಪವಾದವಿರಬಹುದು) ಕ್ಯಾಪಿಟಲ್‌ ಅಕ್ಷರಗಳಲ್ಲೇ ಇರೋದು. ಇದೆಲ್ಲವೂ ಡ್ರಾಯಿಂಗ್‌ ಅನುಕೂಲಕ್ಕೋಸ್ಕರ ನಡೆದುಬಂದ ರಿವಾಜು. ಸೂಕ್ಷ್ಮವಾಗಿ ಗಮನಿಸುವವರಿಗೆ ಗೊತ್ತಿರುತ್ತದೆ.

ಒಟ್ಟಿನಲ್ಲಿ ಜ್ಞಾನ-ಮನರಂಜನೆಗಳನ್ನೊದಗಿಸಿ, ನಮ್ಮ ಕಲ್ಪನೆಗಳು ಗರಿಗೆದರುವುದಕ್ಕೂ ಇಂಬುಮಾಡಿಕೊಡುವ ಕಾಮಿಕ್ಸ್‌ ಒಂದು ರೀತಿಯಲ್ಲಿ ನಮ್ಮದೇ ಬದುಕಿನ ಪ್ರತಿಫಲನ. ಜನಮಾನಸದಲ್ಲಿ ಕಾಮಿಕ್ಸ್‌ ಮೂಡಿಸಿರುವ ಛಾಪು ಅಸದೃಶವಾದುದು, ಅವ್ಯಾಹತವಾದುದು. ಕೆಲವೊಂದು ಗಂಭೀರ, ಕೆಲವು ಸರಸ, ಕೆಲವು ಹಾಸ್ಯಾಸ್ಪದ ಮತ್ತೆ ಕೆಲವು ಭಯೋತ್ಪಾದಕ - ಎಲ್ಲ ಸೇರಿಸಿದರೆ ಕಾಮಿಕ್ಸ್‌ ವ್ಯಕ್ತಪಡಿಸುವುದು ಬರೀ ಅದರೊಳಗಿನ ಪಾತ್ರಗಳನ್ನು ಮಾತ್ರವಲ್ಲ. ಪರೋಕ್ಷವಾಗಿ ಅವು ನಮ್ಮನ್ನೂ, ಅಂದರೆ ಕಾಮಿಕ್ಸ್‌ ಓದುವವರನ್ನೂ, ಅಷ್ಟೇ ಪ್ರಮಾಣದಲ್ಲಿ ವ್ಯಕ್ತಪಡಿಸುತ್ತವೆ.

ಕಾಮಿಕ್ಸ್‌ ಪ್ರಿಯರಾದ ನೀವೇನಂತೀರಿ? ನಿಮ್ಮ ಕಾಮಿಕ್ಸ್‌ ಕ್ರೇಜ್‌ ಬಗ್ಗೆ, ಫೇವರಿಟ್‌ಗಳ ಬಗ್ಗೆ ತಿಳಿಸುತ್ತ ಬರೆಯಿರಿ. ಹಾಗೆಯೇ ಈವಾರ ನಿಮಗೊಂದು ರಸಪ್ರಶ್ನೆ ಸಹ ಇದೆ. ಭಾರತೀಯ ಪತ್ರಿಕೋದ್ಯಮದಲ್ಲೇ ಪ್ರಪ್ರಥಮ ಎಂದು 'ಫೊಟೊ ಕಾಮಿಕ್ಸ್‌" ಎಂಬ ಪ್ರಕಾರವನ್ನು ಎಂಬತ್ತರ ದಶಕದಲ್ಲಿ ಆರಂಭಿಸಿ ಜನಪ್ರಿಯಗೊಳಿಸಿದ ಪತ್ರಿಕೆ ಯಾವುದು? ಆ ಸರಣಿಯ ಮೊದಲ ಕಾಮಿಕ್ಸ್‌ನ ಹೆಸರನ್ನು ಬರೆದರಂತೂ ಇನ್ನೂ ಒಳ್ಳೆಯದೇ. ನೆನಪುಮಾಡಿಕೊಳ್ಳಿ. ಪತ್ರ ಬರೆಯಲು ವಿಳಾಸ ಗೊತ್ತಿದೆಯಲ್ಲ? - [email protected]

English summary
In fond memory of Uncle Ananth Pai [1929 – 2011) the creator of Amara Chitra Kathe, Tinkle: A journey to the world of Indian Comics by Srivatsa Joshi from Karkala, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X