• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರ್ಲಿನ್‌ನಿಂದ ಬರಲಿ ಇನ್ನೂ ಇಂಥ ಪತ್ರಗಳು...

By Super
|

ಪ್ರಿಯ ಶ್ರೀವತ್ಸ ಜೋಶಿಯವರಿಗೆ ನಮಸ್ಕಾರ.

ನಾನು ನಿಮಗೆ ಅಪರಿಚಿತ ಕನ್ನಡಿಗ.

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ... ನಿಮ್ಮ ಲೇಖನವನ್ನು ಆಸಕ್ತಿಯಿಂದ ಓದಿದೆ. ನನ್ನ ಗಮನ ಸೆಳೆದ ಕಾರಣ ... ನಿಮ್ಮ ಲೇಖನದಲ್ಲೊಂದು ವಿಶಿಷ್ಟ ವಿಷಯವನ್ನು ನೀರೀಕ್ಷಿಸಿದ್ದೆ. ನಾನದನ್ನು ಕಾಣಲಿಲ್ಲ ಒಂದಿಷ್ಟು ತೃಣ.

‘ನಮ್ಮ ಬಾವುಟ...' ಅದು ಒಂದು ಮುದ್ದು ಪುಸ್ತಕದ ಶಿರನಾಮ. 15 ಆಗಸ್ಟ್‌ 1948 ರಲ್ಲೇ ಪ್ರಕಟವಾಗಿತ್ತು. ನನ್ನ ಮನ ಹಿಡಿದಿತ್ತು. ಪ್ರಸಿದ್ಧ ಕನ್ನಡ ಸಾಹಿತಿ ಜಿ. ಪಿ. ರಾಜರತ್ನಂ ಸ್ವತ್ತು. ನಿಮ್ಮ ಲೇಖನದಲ್ಲಿ ಉಲ್ಲೇಖಿಸದ ಅನೇಕ ಸಂಗತಿಗಳನ್ನು ಮಕ್ಕಳಿಗೂ ಅರ್ಥವಾಗುವಂತೆ ಮನೋಹರವಾಗಿ ವರ್ಣಿಸಿದ್ದಾರೆ. ಆ ಪುಸ್ತಕವನ್ನು ಪ್ರತಿಯಾಬ್ಬ ವಿದ್ಯಾರ್ಥಿ/ನಿ ಮತ್ತು ದೇಶಪ್ರೇಮವಿರುವ ಪ್ರಜೆ ಎಲ್ಲರೂ ಓದಿ ಅರ್ಥಮಾಡಿಕೊಂಡಿರಬೇಕು ಎಂದು ನನ್ನ ಭಾವನೆ.

ಬಾವುಟದ ಪವಿತ್ರತೆ, ಅದರ ಬಗ್ಗೆ ನಮಗಿರಬೇಕಾದ ಭಕ್ತಿ ಗೌರವಗಳನ್ನು ಕುರಿತು ನೀವು ನಿಮ್ಮ ಲೇಖನದಲ್ಲಿ ವಿವರವಾಗಿ ವರ್ಣಿಸಿದ್ದೀರಿ. ಆದರೆ ನಿಮ್ಮ ಬರೆಹದ ಉದ್ದೇಶ ಮುಖ್ಯವಾಗಿ ಬಾವುಟದ ಬಗ್ಗೆ ನಮ್ಮಲ್ಲಿರಬೇಕಾದ ನಡವಳಿಕೆಯನ್ನು ಸ್ಪಷ್ಟ ಮಾಡಲು ಪ್ರಸಿದ್ಧ ದೇಶವೊಂದನ್ನು ಜೊತೆಗೆ ತುಲನ ಮಾಡಿ ಅನೇಕ ದೃಷ್ಟಿಕೋನಗಳ ಹೋಲಿಕೆ ಮಾಡಿ ತೋರಿಸಿರುವ ದೀರ್ಘ ಪ್ರಯತ್ನ. ನಮ್ಮ ಬಾವುಟ... ದಲ್ಲಿರುವ ಹಲವು ವಿಷಯಗಳು ನಿಮ್ಮ ಲೇಖನದಲ್ಲಿ ಸೇರಿ ಬಂದಿದ್ದರೆ, ನಿಮ್ಮ ಪ್ರಬಂಧವು ಇನ್ನೂ ಮೇಲು ಪಾಲು ಗಮನಾರ್ಹವಾಗಿರುತ್ತಿತ್ತು ಎಂದು ನನ್ನ ದೃಢ ಭಾವನೆ.

ಶ್ರೀವತ್ಸ , ನನ್ನ ಭಾವನೆಯಲ್ಲಿ ಒಂದು ಅತಿ ಗಮನಾರ್ಹವಾದ ವಿಷಯವೆಂದರೆ ...

ಸ್ವಾತಂತ್ರ್ಯದಿನದಂಥ ಹಬ್ಬ ಭಾನುವಾರ ಬಂದರೆ ಮಾರನೆ ದಿನ ರಜೆ ಸಾರುವುದು ಸ್ವಲ್ಪ ಅತಿಯಾಯಿತೇನೊ ಎಂದು ನನಗನಿಸುವುದಿದೆ...(ನಿಮ್ಮ ಮಾತು). ಅದು ಬರೀ ಅತಿಯಾದ ವಿಷಯ ಮಾತ್ರವಲ್ಲ. ಅದಕ್ಕಿಂತ ಉತ್ಪ್ರೇಕ್ಷೆ ಮಾಡಿದ ರಾಷ್ಟ್ರೀಯ ಆರ್ಥಿಕತೆಗೆ ಸಂಬಂಧಿಸಿದ ಹೆಚ್ಚಿನ ಮೂರ್ಖತನ ಇನ್ನೊಂದು ವಿಷಯವಿಲ್ಲ. ಕೆಲವು ಕಾಲ ಮಾತ್ರ ಅಧಿಕಾರದಲ್ಲಿದ್ದ ಅತಿ ಸಾಧಾರಣವಾದ ಕೇವಲ ಮಂತ್ರಿಯಾಬ್ಬ ಕಾಲಾಧೀನವಾದಾಗ ಇಡಿ ಭಾರತಕ್ಕೆ ರಜಾ ಘೋಷಣೆ ಮಾಡುವರು. ಕಳೆದ ವರ್ಷ ಒಬ್ಬ ಚಲನಚಿತ್ರ ನಟನಿಗಾಗಿ ಇಡೀ ಕರ್ನಾಟಕದಲ್ಲಿ ಎರಡು ಮೂರು ವಾರಗಳವರೆಗೆ ಎಲ್ಲಾ ಶಾಲೆಕಾಲೇಜುಗಳಿಗೆ ಮತ್ತು ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ರಜಾ ಘೋಷಿಸಿದ್ದರು. ಅದೆಂಥ ಮಹಾ ಮುರ್ಖತನವೆಂದು ಎಷ್ಟು ಜನರಿಗೆ ಅರಿವಾಗುವುದು?

ಉದಾಹರಣೆಗೆಸ ಉದಾಹರಣೆಯನ್ನು ಅರ್ಥಮಾಡಿಕೊಳ್ಳವ ಮೊದಲು, ಪ್ರಸಿದ್ಧರು ಮತ್ತು ಪ್ರಸಿದ್ಧತೆ ಎಂದರೆ ಏನರ್ಥ ಎಂದು ತಿಳಿದುಕೊಂಡಿರಬೇಕು. ಗಾಂಧಿ, ಐನ್‌ಸ್ಟೈನ್‌, ಡಾರ್ವಿನ್‌, ನೇತಾಜಿ, ಕಿಟ್ಟೆಲ್‌, ಕಾಳಿದಾಸ, ಕುವೆಂಪು, ಕೈಲಾಸಂ, ... ಮೊದಲಾದ ಸಾವಿರಾರು ಮಹನೀಯರು ಪ್ರಸಿದ್ಧರು.

ಜರ್ಮನಿಯಲ್ಲಿ ಪ್ರಸಿದ್ಧರಾದವರು ಅಸಂಖ್ಯರಿದ್ದಾರೆ ಸಮಾಜದ ಎಲ್ಲಾ ವಿಭಾಗಗಳಲ್ಲಿ. ಆದರೆ ಇಲ್ಲಿ ಎಂತಹ ಮುಖ್ಯಸ್ಥನಾದ ರಾಜಕಾರಣಿಯಾಗಲಿ, ವಿದ್ವಾಂಸನಾಗಲಿ, ವಿಜ್ಞಾನಿಯಾಗಲಿ ಅತ್ಯಂತ ಪ್ರಸಿದ್ಧ ನಟನಟಿಯರಾಗಲಿ ಮೃತರಾದಾಗ ಯಾವ ಶಾಲೆಗೂ ಯಾವ ಸಂಸ್ಥೆಗೂ ರಜಾಕೊಡುವುದಿಲ್ಲ. ಕೊನೆಯಪಟ್ಟು ಅಂತವರ ಬಗ್ಗೆ ಯಾವುದಾದರು ಒಂದು ಚಲನಚಿತ್ರ ಅಥವ ದಾಖಲೆಯ ಚಿತ್ರ ದೂರದರ್ಶನದಲ್ಲಿ ಆ ದಿನ ಕಾಲಕ್ರಮ ಬದಲಿಸಿ ತೋರುವ ವಿಶೇಷ ಪ್ರದರ್ಶನವೆಂದು ತೋರಿಸುತ್ತಾರೆ. ಒಂದು ವೇಳೆ ಈಗ ಅಧಿಕಾರದಲ್ಲಿರುವ ಜರ್ಮನಿಯ ಪ್ರಧಾನಿ ಚಾನ್ಸೆಲ್ಲೆರ್‌ ಶ್ರೋಯ್‌ಡರ್‌ ತೀರಿದರೆ ಕೂಡ ಈ ದೇಶದಲ್ಲಿ ಸಾಮಾನ್ಯೀಕರಣ ರಜಾ ಘೋಷಣೆ ಇರುವುದಿಲ್ಲ. ಬರೀ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಿ ಗೌರವ ಮತ್ತು ನೆನಪನ್ನು ಪ್ರದರ್ಶನ ಮಾಡುತ್ತಾರೆ ಅಷ್ಟೆ.

ಒಂದು ದೊಡ್ಡ ಕಾರ್ಖಾನೆ ಅಥವಾ ಸಂಸ್ಥೆಗೆ ಒಂದು ದಿನ ರಜಾ ಕೊಟ್ಟರೆ ಆ ಸಂಸ್ಥೆ ಆ ಒಂದು ದಿನಕ್ಕೆ ಎಷ್ಟು ಆರ್ಥಿಕ ನಷ್ಟ ಅನುಭವಿಸುವುದು, ಅದನ್ನು ಯಾರು ಮತ್ತೆ ಒದಗಿಸುವರು ಎಂಬ ಪ್ರಶ್ನೆ ಬರುತ್ತದೆ. ಅಂತಹ ಆರ್ಥಿಕ ದೃಷ್ಟಿಯ ಗಣಿತಾಲೋಚನೆಗಳು ಭಾರತದಲ್ಲಿ ಗೊತ್ತೇಯಿಲ್ಲವೆಂದು ನನಗನಿಸುತ್ತದೆ. ಕೆಲವು ದಶಕಗಳ ಹಿಂದೆ ಕೇಂದ್ರ ಸರ್ಕಾರದಲ್ಲಿ ಒಬ್ಬ ಉಪಮಂತ್ರಿ ಸತ್ತಾಗ ಭಾರತದಲ್ಲೇ ಎಲ್ಲಾ ಕಚೇರಿಗಳಿಗೆ ಶಾಲೆಕಾಲೇಜುಗಳಿಗೆ ರಜಾಘೋಷಿಸಿದರು. ಅದರರ್ಥ ನನಗಿನ್ನೂ ತಿಳಿದಿಲ್ಲ. ಅದರ ಅನರ್ಥವೆಷ್ಟು , ಆರ್ಥಿಕ ನಷ್ಟವೆಷ್ಟು ಯಾರಿಗೆ ಗೊತ್ತಾಗುವುದು? ಅದೆಂತಹ ಅನಾಚಾರಿಕ ರಾಜಕೀಯ ನೋಡಿ. ಧರ್ಮ ನೀತಿ ಸಂಸ್ಕೃತಿ ಭಾರತದಲ್ಲಿ ವಿಶ್ವಪ್ರಸಿದ್ಧತೆ ಗಳಿಸಿ ಖ್ಯಾತಿ ಪಡೆದಿದ್ದ ಕಾಲವೇನಾಯಿತು?

1950ರಲ್ಲಿ ಮೈಸೂರು ಸರ್ಕಾರದಲ್ಲಿ ಸುಮಾರು 20 ಮಂತ್ರಿಗಳಿದ್ದರು. ಈಗ 70 ಬಕಪಕ್ಷಿಗಳಿದ್ದರೂ ಸಾಲದಂತೆ! ಆಗಲೂ ಸಚಿವ ಸಂಪುಟವನ್ನು ವಿಸ್ತರಿಸಲು ಹೊಡೆದಾಡುತ್ತಿರುತ್ತಾರೆ. ಪುಂಡರಾಳುತಿವರು ನೋಡಿದಿರಾ? - ಅನಿಸುತ್ತದೆ!

ಲಂಚ ಮತ್ತು ಅಧರ್ಮ ಯುಗಯುಗಾಂತರಗಳಿಂದ ಬಂದಿರುವ ಮಾನವತ್ವದ ಒಂದು ಉ(ಅ)ಪಗುಣ. ಅದು ಪ್ರಪಂಚದ ಎಲ್ಲಾ ದೇಶಗಳಲ್ಲೂ ಇರುವುದು. ಆದರೆ ಎಲ್ಲಕ್ಕೂ ಮಿತಿ ರೀತಿ ಇರಬೇಕು. ಜರ್ಮನಿಯಲ್ಲೂ ಇದೆ. ಆದರೆ ವರ್ಷಕ್ಕೊಂದು ಅಲ್ಲೊಂದು ಇಲ್ಲೊಂದು ಬೆಳಕಿಗೆ ಬರುತ್ತದೆ. ಅತಿ ಸಾಮಾನ್ಯನಾದ ನಾನೊಬ್ಬ ಪ್ರಜೆ ಇಲ್ಲಿ. ನಾನೂ ಕೂಡ ಅನ್ಯಾಯ ಎದುರಿಸಲು ಎಂತಹ ಅಧಿಕಾರಿಯನ್ನಾದರೂ ನಿಬಂಧನೆಬದ್ಧವಾಗಿ ಎದುರಿಸಬಹುದು.

ಆಯಿತು, ಇನ್ನು ನಿಮ್ಮ ಲೇಖನದ ಬಗ್ಗೆ ಬರೆಯುತ್ತೇನೆ. ರಾಜರತ್ನಂ ಅವರ ‘ನಮ್ಮ ಬಾವುಟ...'ವನ್ನು ನಿಮ್ಮ ಗಮನಕ್ಕೆ ತರುವ ಇಚ್ಛೆಯಿಂದ ಬರೆಯಲು ಪ್ರಾರಂಭಿಸಿದ ಪತ್ರ ವಿಷಯಾಂತರ ಮಾಡಿ ಎಲ್ಲೆಲ್ಲಿಗೋ ಹೋಯ್ತು. ಕ್ಷಮಿಸಿ.

ಅದುವೆಕನ್ನಡದಲ್ಲಿ ನಿಮ್ಮ ಅನೇಕ ಲೇಖನಗಳನ್ನು ಓದಿ ಕೆಳಗಿಳಿಸಿಕೊಂಡು ಸಂಗ್ರಹಿಸಿದ್ದೇನೆ. ನೀವು ವಿವಿಧ ವಿಚಾರಗಳ ಬಗ್ಗೆ ವಿಮರ್ಶೆಯ ಹಾಗೂ ವಿಚಾರವತ್ತಾದ ಲೇಖನಗಳನ್ನು ಬರೆದಿರುವಿರಿ. ಎಲ್ಲಕ್ಕೂ ಗೌರವದ ಶುಭಾಶಯಗಳು. ನಿಮ್ಮ ಪಾಂಡಿತ್ಯಕ್ಕೆ ನನ್ನ ಗೌರವವಿದೆ.

ನಿಮ್ಮಂಥವರು ಹೆಚ್ಚಾಗಿ ಕನ್ನಡ ಭಾಷೆಯ ಉದ್ಧಾರಕ್ಕೆ ಮತ್ತು ಮರುಪೋಷಣೆಗೆ ಮುಂದಾಳಾಗಿ ಹೋರಾಡಬಹುದು, ಉದ್ಧರಿಸಬಹುದು. ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕು, ವಿಶಾಲವಾಗಿ ಬಳಸಬೇಕು, ಬೆಳೆಸಬೇಕು... ಮುಂತಾಗಿ ಹೇಳುತ್ತಿರುವ ಮತ್ತು ಬರೆಯುತ್ತಿರುವ ಲೇಖನಗಳನ್ನು ಆಗಾಗ ಓದಿದ್ದೇನೆ. ಅಂತಹ ವಿಚಾರದಲ್ಲಿ ಮಂತ್ರಿಗಳು ಮುಂದಾಗುವರು. ಅದೆಲ್ಲ ಬರಿಯ ಟೊಳ್ಳು ಮಾತು. ಆಂಥವರಿಗೆ ಸ್ವಚ್ಛ ಕನ್ನಡದಲ್ಲಿ ಇಂಗ್ಲಿಷ್‌ ಬೆರಕೆ ಮಾತುಗಳಿಲ್ಲದೆ ಬರಿಯ ನಾಲ್ಕು ಸಾಲುಗಳನ್ನು ಪೂರ್ಣಗೊಳಿಸಲು ಬಾರದು.

ಆದರೆ ನೀವಾದರೂ ಮತ್ತು ನಿಮ್ಮಂಥವರೇಕೆ ಸ್ವಚ್ಛ ಕನ್ನಡ ಬರೆಯಬಾರದು? ಸಾಧ್ಯವಿದ್ದರೂ ಬಳಸದಿರುವುದು ಬಹಳ ವಿಷಾದದ ಸಂಗತಿ. ಅಂದರೆ ನಿಮ್ಮ ಲೇಖನವನ್ನು ಎಂತಹ ಓದುಗರಿಗೆ ಬರೆಯುತ್ತೀರಿ? ಬರಿಯ ಪದವೀಧರರಿಗೆ? ಅಥವಾ ಸಾರ್ವಜನಿಕರಿಗೆ ಮತ್ತು ಸರ್ವ ಜನಸಂಕುಲಕ್ಕೆ ಬರೆಯಬಯಸುವಿರೇನು? 99 ಭಾಗದಷ್ಟು ಲೇಖಕರು, ಅದರಲ್ಲಿ ಅನೇಕ ಪ್ರಸಿದ್ಧ ಸಾಹಿತಿಗಳು ಕೂಡ ಬೆರಕೆ ಭಾಷೆಯಲ್ಲಿ ಬರೆಯುತ್ತಾರೆ. ಆಯಿತು. ಒಂದುವೇಳೆ ಒಂದು ಭಾವನೆಗೆ ಅಥವಾ ಒಂದು ಪರಭಾಷೆಯ ಮಾತಿಗೆ ಕನ್ನಡದಲ್ಲಿ ಭಾವಾರ್ಥವಿರುವ ಮಾತು ಇಲ್ಲದಿದ್ದರೆ, ಅದನ್ನು ವಿಶಾಲ ದೃಷ್ಟಿಯಿಂದ ಒಪ್ಪಿಕೊಳ್ಳಬಹುದು. ಸಾಮಾನ್ಯವಾಗಿ ಅದು ಅಪರೂಪ. ಮತ್ತೊಮ್ಮೆ ಹೇಳಬಯಸುತ್ತೇನೆ. ನೀವು ಕನ್ನಡ ಮೇಧಾವಿಗಳ ಸಮಾನರು. ನಿಮ್ಮ ನುಡಿವೈಖರಿ ಬಹಳ ಸೊಗಸಾಗಿದೆ. ನಿಮ್ಮ ಕನ್ನಡಭಾಷೆಯ ಸಿರಿತನ ಜೋರಾಗಿದೆ. ನನ್ನ ಈ ಭಾವನೆಯನ್ನು ಎತ್ತಿ ತೋರಲು, ನಿಮ್ಮ ಲೇಖನದಲ್ಲಿ ಹರಡಿರುವ ಪರಿಪರಿಯ ಪ್ರಬುದ್ಧ ಪದಸಂಕುಲವನ್ನು ಇಲ್ಲಿ ಸಂಗ್ರಹಿಸಿ ತೋರಿಸುತ್ತೇನೆ:

ಪಥಸಂಚಲನ, ಪರಮೋಚ್ಚ ದ್ಯೋತಕ, ಅಗೋಚರ, ಅನಿರ್ವಚನೀಯ, ಬಾಹ್ಯಾಕಾಶಕ್ಕೂ, ಭಾವುಕ ವಿಚಾರಗಳು, ಪ್ರಭಾತಫೇರಿ, ಧ್ವಜಾರೋಹಣ, ಕೃಪಣರು, ದೀರ್ಘವಾರಾಂತ್ಯ, ಸುಡುಮದ್ದಿನ ಪ್ರದರ್ಶನ, ಮತಾಪು, ಆಮಂತ್ರಿಸಿ, ಪ್ರಾಯೋಜಕತ್ವ, ಗಗನಚುಂಬಿ, ದೇಶಭಕ್ತ ಹುತಾತ್ಮರಿಗೊಂದು, ಪರಿಪಾಠ... ಇತ್ಯಾದಿ.

ಆ ಸೊಗಸಿನ ಮಾತುಗಳು - ಬೃಂದಾವನದಲ್ಲಿ ಅರಳಿ ಮೆರೆದಿರುವ ನಾನಾವರ್ಣಗಳ ಮನೋಹರ ಪುಷ್ಪಗಳಂತೆ, ಮನೋಹರ ಸುಂದರಿಯ ಶೃಂಗಾರದಂತೆ ನಿಮ್ಮ ಭಾಷೆಗೆ ಹೆಚ್ಚಾದ ಭಾವಸಂಪತ್ತು ತರುವುದಲ್ಲದೆ ನಿಮ್ಮ ಹೇಳಿಕೆಗಳು ಗುರಿಯನ್ನು ಸೇರಿ ಓದುಗರಲ್ಲಿ ನಂಬಿಕೆ ತರುವ ಪ್ರೇರಣೆ ಉಂಟುಮಾಡುತ್ತದೆ.

ನಾನು ನಿಮ್ಮ ಹಾಗೆ ಕನ್ನಡ ಮೇಧಾವಿಯಲ್ಲ. ಮೂರು ದಶಕಗಳು ಕೈಬಿಟ್ಟಿದ್ದ ದುರ್ಭಾಗ್ಯ ಸಂಗತಿಯಾಗಿದ್ದ ದುಸ್ಥಿತಿಯಾಗಿತ್ತಾದರೂ, ಇಂಗ್ಲಿಷ್‌ ಮತ್ತು ಜರ್ಮನ್‌ ಪರಭಾಷೆಗಳ ಜ್ಞಾನ ಚೆನ್ನಾಗಿದ್ದರೂ, ನನ್ನ ಕನ್ನಡ ಪ್ರೇಮ ಇನ್ನೂ ಬಹಳವಾಗಿದೆ. ಆಯಿತು. ಅವೆಲ್ಲ ಭಾವನೆಗಳು ಒಂದು ಪೀಠಿಕೆಯಂತೆ. ನಿಮ್ಮ ಗಮನಕ್ಕೆ ತರಲು ಬಯಸುವ ಒಂದು ಯೋಚನೆ ಇಲ್ಲಿದೆ.

ನಿಮ್ಮ ಲೇಖನದಲ್ಲೂ ಅನೇಕ ಪರಭಾಷೆಯ ಮಾತುಗಳನ್ನು ಬಳಸಿದ್ದೀರಿ. ಆ ಎಲ್ಲಾ ಪದಗಳ ಬದಲು ಕನ್ನಡ ಭಾಷೆಯ ನುಡಿಗಳನ್ನು ಉಪಯೋಗಿಸಬಹುದಾಗಿತ್ತು. ಒಂದುವೇಳೆ ಒಂದು ಮಾತಿಗೆ ಸರಿಯಾದ ಸಮಾನಾರ್ಥವುಳ್ಳ ಕನ್ನಡ ಮಾತು ಇಲ್ಲದಿದ್ದರೆ ಆ ಮಾತಿಗೆ ಒಂದು ಹೊಸ ಮಾತನ್ನು ಸೃಷ್ಟಿಸಲು ನಿಮ್ಮಂಥ ಮೇಧಾವಿಗಳಿಗೆ ಸಾದ್ಯವಿದೆ ಎಂದು ನನ್ನ ಭಾವನೆ. ಇಲ್ಲಿದೆ ನೋಡಿ ನೀವು ಬಳಸಿದ ಕನ್ನಡೇತರ ಪದಗಳ ಪಟ್ಟಿ.

ಟಿವಿ, ಕ್ರೇಜ್‌, ಫೋಕಸ್‌, ಮೈಕ್ರೊಸೆಕೆಂಡ್‌, ಮ್ಯಾಜಿಕಲ್‌ ಪವರ್‌, ಮೌಂಟ್‌ ಎವರೆಸ್ಟ್‌, ಡಬಲ್‌, ಮೊಬೈಲ್‌ಫೋನ್‌, ಚಾರ್ಜ್‌, ಫೋನಾಸಕ್ತರಿಗೆ, ಕ್ರೇಜ್‌, ಪಬ್ಲಿಕ್‌ ಹಾಲಿಡೇ, ಮೆಮೊರಿಯಲ್‌ ಡೇ, ಲೇಬರ್‌ ಡೇ, ಪ್ರೆಸಿಡೆಂಟ್ಸ್‌ ಡೇ, ಆಸೋಟಿಸುವ, ವಾಷಿಂಗ್ಟನ್‌ ಮಾನ್ಯುಮೆಂಟ್‌, ಫೈರ್‌ವರ್ಕ್ಸ್‌ ಡಿಸ್ಪ್ಲೆ, ಸ್ಪೆಷಾಲಿಟಿ, ಇಂಡಿಪೆಂಡೆನ್ಸ್‌ ಡೇ, ರೌಂಡ್‌ಟ್ರಿಪ್‌ ಟಿಕೆಟ್‌, ರ್ಯಾಫೆಲ್‌ (ಲಕ್ಕಿಡಿಪ್‌), ಲೈಟಿಂಗ್‌, ಗ್ರಾಫಿಕಲ್‌ ಎಟಾಚ್‌ಮೆಂಟ್‌ಗಳ ಈಮೈಲ್‌, ಕಲರ್‌ಕೋಡ್‌, ಬಾಂಬ್‌, ಸೆಕ್ಯುರಿಟಿ ಕೋಡ್‌, ಇಂಟೆಲಿಜೆನ್ಸ್‌, ಬ್ಯೂರೊಗಳ, ಕೋಡ್‌ ರೆಡ್‌, ಸೆಲ್ಯೂಟ್‌!

ಕೆಲವು ಬಾರಿ ಪರಭಾಷೆಯ ಸಹಾಯ ಬೇಕಾಗುವುದು ನಿಜ. ನಾನು ಒಂದಿಷ್ಟಾದರೂ ಪರಭಾಷೆಯ ದ್ವೇಷಿಯಲ್ಲ. ಕೆಲವು ಭಾಷೆಗಳನ್ನು ಕಲಿಯಲು ನನಗೆ ಅದೃಷ್ಟವಿರಲಿಲ್ಲವೆಂದು ನನಗೆ ಈಗಲೂ ದುಃಖವಾಗುವುದು. ಅದರಲ್ಲಿ ನನ್ನ ಮಹಾ ದುರಾದೃಷ್ಟವೆಂದರೆ ಸಂಸ್ಕೃತಭಾಷೆ ಕಲಿಯಲು ನನಗೆ ಭಾಗ್ಯವಿರಲಿಲ್ಲ. ಹಾಗೂ ಹಿಂದಿ, ತಮಿಳು, ತೆಲುಗು ಭಾಷೆಗಳು ಚೆನ್ನಾಗಿ ಬರುವುದಿಲ್ಲ. ಹಾಗೆ ನೋಡಿದರೆ ನನ್ನ ಮನೆಯ ಭಾಷೆ ತೆಲುಗು ಆಗಿತ್ತು. ಮಾತಾಡಲು ಬರುತ್ತೆ ಅಷ್ಟೆ.

ನನ್ನ ಈಗಿನ ನಂಬಿಕೆ ಪ್ರತಿಯಾಬ್ಬರೂ ಸಾಧ್ಯವಾದಷ್ಟೂ ಹೆಚ್ಚು ಭಾಷೆಗಳನ್ನು ಕಲಿಯಬೇಕು. ಒಂದೊಂದು ಭಾಷೆಯಲ್ಲಿ ಒಂದೊಂದು ವಿಧವಾದ ಸೊಗಸಿರುತ್ತದೆ. ಒಳ್ಳೆಯ ಮಾತುಗಳನ್ನು ಬಳಸುವ ಸಾಮರ್ಥ್ಯವಿದ್ದರೆ ಒಳ್ಳೆಯ ಭಾವನೆಗಳನ್ನು ಬರೆದು ಅಥವಾ ಹೇಳಿ ತೋರಿಸಬಹುದು. ಇರಲಿ. ಇಲ್ಲಿ ಇಷ್ಟು ಸಾಕು. ಈಗಲೇ ನಿಮಗೆ ಬೇಸರವಿರಬಹುದು. ಅದರ ಜೊತೆಗೆ ಮೇಲಿನ ಕೊನೆಯ ಮಾತುಗಳು ಟೀಕೆ ಮಾಡಿದ ಮಾತುಗಳಂತೆ ಅನಿಸಬಹುದು. ಸಮರ್ಥ ಪಂಡಿತನಿಗೆ ಅದು ಸಾಮಾನ್ಯವಾಗಿ ಸ್ವಾಗತಾರ್ಹವಾಗಿರುತ್ತದೆ. ಆ ಕಿರು ಟೀಕೆಯ ನುಡಿಗಳು ಆ ಮೇಧಾವಿಯನ್ನು ಅಲ್ಲಾಡಿಸದು. ಇದು ಬರೀ ಟೀಕೆ ಮಾತ್ರ. ದೋಷವನ್ನು ತೋರಿಸಿಲ್ಲ. ಅದೊಂದು ಸ್ವಸ್ಥಭಾವದೃಷ್ಟಿಯ ಪ್ರದರ್ಶನ.

ಬೆರಕೆ ಭಾಷೆಯ ಬಗ್ಗೆ ನನ್ನ ಅಭಿಪ್ರಾಯ ಕೆಲವರಿಗೆ ಹಿಡಿಸುವುದಿಲ್ಲ. ದ್ರಾಕ್ಷಿತೋಟದಲ್ಲಿ ನಿರಾಶೆಪಟ್ಟ ನರಿಯಂತೆ ಬೇಸರಿಕೆ ತೋರಿಸುವರು. ಆರೀತಿ ಮಿಶ್ರಭಾಷೆಯನ್ನು ಬರೆಯದಿದ್ದರೆ ಓದುಗರಿಗೆ ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದರೊಬ್ಬರು. ಅದೆಂಥ ಮೂಢ ತರ್ಕ? ಪ್ರಾಚೀನ ಕಾಲದಲ್ಲಿ ಪುರಾತನ ಸಾಹಿತ್ಯದಲ್ಲಿ ಸಂಸ್ಕೃತ ಭಾಷೆಯಲ್ಲಿ ಎಂತೆಂಥ ಅಮೋಘವಾದ ಭಾವನೆಗಳು ಪ್ರದರ್ಶನವಾಗಿವೆ! ಆ ಭಾಷೆಯ ಸೊಗಸಿನಲ್ಲಿ ಸಾಮಾನ್ಯನಾದ ನನಗೆ ಕಾಣಲು ಆಗುತ್ತಿರಲ್ಲಿಲ್ಲವಾದ ಪ್ರಕೃತಿಯ ಮನೋಹರತೆಗಳನ್ನು ಹೃದಯಂಗಮ ಭಾವನೆಗಳನ್ನು ತಿಳಿದುಕೊಳ್ಳಲು ಹಿಂದಿನ ಸಿರಿಭಾಷೆಗಳಲ್ಲಿರುವಷ್ಟು ಸೊಗಸು ಈಗ ಗಳಿಸುವುದು ಅಪರೂಪ.

ಪ್ರಿಯ ಜೋಶಿ! ಖಚಿತ ನನಗೆ ಗೊತ್ತು. ಇಂತಹ ದೀರ್ಘ ಪತ್ರ ಇದುವರೆಗೆ ನಿಮ್ಮ ಪಾಲಿಗಿರಲಿಲ್ಲ. ಇಲ್ಲಿ ಕೆಲವು ಮನೋಭಾವನೆಗಳನ್ನು ತೋರಿಸಲು ಪ್ರಯತ್ನಪಟ್ಟಿದ್ದೇನೆ. ಅದೆಷ್ಟು ನಿಮಗೆ ಹಿಡಿಸುವುದು, ಅದನ್ನು ನಾನೆಂದಿಗೂ ತಿಳಿಯಲಾರೆ. ಅಂದರೆ, ನಾನೀಗಾಗಲೇ ತಿಳಿಸಿರುವೆ. ನಾನೊಬ್ಬ ಸಾಮಾನ್ಯ ಕನ್ನಡಿಗ. ಆದರೆ ಮಹಾ ಕನ್ನಡ ಪ್ರೇಮಿ. ನಿಮ್ಮಂತೆ ವಿಶಾಲ ಜ್ಞಾನಿಯಲ್ಲ. ನನ್ನ ಕನ್ನಡದಲ್ಲಿ ಸಾಕಷ್ಟು ನಿಶ್ಶಕ್ತಿ ಇದೆ. ಈಗ ಅಂಕಣದಲ್ಲಿ ಬರೆಯುವಾಗ ಕೈತಪ್ಪಿದ ಅಥವ ಬೆರಳುರುಳಿದ ದೋಷಗಳೊಂದಿಗೆ ನನ್ನ ಕನ್ನಡದ ಮಹಾ ನಿರ್ಬಲತೆ ಎಂದರೆ ಕೆಲವು ವ್ಯಾಕರಣ ನಿಬಂಧನೆಗಳನ್ನು ಸರಿಯಾಗಿ ತಿಳಿದಿಲ್ಲದ ಅಜ್ಞಾನ. ಉದಾಹರಣೆಗೆ: ಧನ್ಯ ಅಥವ ದನ್ಯ, ಹಾಗೆಯೇ ವಿಶೇಷ, ದನ, ಧನ, ಕಠಿಣ, ಮೊದಲಾದ ಅನೇಕ ಪದಗಳು. ಆಗ ಅನೇಕ ಬಾರಿ ನಿಘಂಟಿನಲ್ಲಿ ನೋಡಿ ಬರೆಯುತ್ತೇನೆ.

ಆದ್ದರಿಂದ ಮೇಲಿನ ಲೇಖನದಲ್ಲಿ ಅನೇಕ ದೋಷಗಳಿರಬಹುದು. ವಿಶಾಲ ಭಾವಿಯಾಗಿ ಕ್ಷಮಿಸಿ. ಕಠಿಣವಾಗುತ್ತಿರುವ ನಿರ್ಬಲ- ಧರ್ಮರಹಿತ- ಅನ್ಯಾಯ ಹೆಚ್ಚುತ್ತಿರುವ ಸಮಾಜದಲ್ಲಿ ನಾಡುನುಡಿಗಳ ಪ್ರೇಮ, ಪ್ರಕೃತಿ ಪ್ರಜೆಗಳ ಪ್ರೇಮ ನಿಮಗೆ ವಿಶೇಷವಾಗಿರಲಿ. ನಿಮ್ಮ ಪ್ರಗತಿ ಸದಾ ಮುನ್ನಡೆಯಲಿ. ಮಹಾತ್ಮರಂತೆ ಮಾರ್ಗದರ್ಶಕರಂತೆ ನಿಮ್ಮ ಬಾಳಾಗಿರಲಿ.

ಪರಮ ವಿಶ್ವಾಸದಿಂದ,

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Celebrating Freedom: German Kannadiga Vijayasheela (Mahendra) writes a letter to Srivathsa Joshi, Thaskannada Vichitranna columnist
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more