ಬರಹ ನೂರು ನೂರು ತರಹ...!

ಶತಕ - ಸೆಂಚುರಿ - ಹಂಡ್ರೆಡ್! ಅದೇನು ರೋಮಾಂಚನ, ವಿಶೇಷವಾಗಿ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ, ಆಸೇತುಹಿಮಾಚಲ ಆಬಾಲವೃದ್ಧರಾದಿಯಾಗಿ ಸಮಸ್ತ ಭಾರತೀಯ ಮನಸ್ಸುಗಳಿಗೆ! ಆಟಗಾರನಿಗೆ, ತಂಡಕ್ಕೆ, ಗ್ಯಾಲರಿಯಲ್ಲಿರುವ ಪ್ರೇಕ್ಷಕರಿಗೆ, ಟಿವಿ/ರೇಡಿಯಾಗಳಿಗಾತುಕುಳಿತ ಕೋಟ್ಯಾನುಕೋಟಿ ಜನಸಾಮಾನ್ಯರಿಗೆ - ಹೀಗೆ ಎಲ್ಲರಿಗೂ. 'ಶತಕ’ ಎಂದೊಡನೆ ವಿದ್ಯುತ್ ಸಂಚಾರವಾದಂತಾಗುವ ಸಂಭ್ರಮ ಪುಳಕಗಳ ವಿಶೇಷವದು.
ನಮ್ಮೆಲ್ಲರ ನೆಚ್ಚಿನ 'ವಿಚಿತ್ರಾನ್ನ’ ಅಂಕಣಕ್ಕೆ ಇದೀಗ ಆ ಪರಿಯ ಶತಕ ಸಂಭ್ರಮದ ಹೊತ್ತು ; ವಿಶ್ವಕನ್ನಡಿಗರು ಮೆಚ್ಚಿ ಚಪ್ಪರಿಸಿದ ವಾರಾನ್ನದ್ದಿದು ನೂರನೆ ತುತ್ತು. ಸವಿಯೋಣ ಬನ್ನಿ ಸವೆದ ಹಾದಿಯ ಸಂಭ್ರಮದ ಗತ್ತು-ಗಮ್ಮತ್ತು ; ಏಕೆಂದರೆ, ಈ ಸಾಧನೆಯ ಹಿರಿಮೆ-ಗರಿಮೆ ನನ್ನದು ಮಾತ್ರವಲ್ಲ - ನಿಮ್ಮೆಲ್ಲರ ಸ್ವತ್ತು!
* * *
ಇಷ್ಟೆಲ್ಲ ಮಾಹಿತಿ ನಿಮಗೆಲ್ಲಿಂದ ಮಾರಾಯ್ರೆ?
ವಿಚಿತ್ರಾನ್ನ ಲೇಖನಗಳಿಗೆ ನಿಯಮಿತವಾಗಿ ಪ್ರತಿಕ್ರಿಯೆ ಬರೆದುಕಳಿಸುವವರಲ್ಲೊಬ್ಬರಾದ ಎಸ್.ಎಮ್.ಪೆಜತ್ತಾಯ ಒಮ್ಮೆ ಬರೆದಿದ್ದರು - 'ಜೋಶಿಯವರೆ ನೀವು ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ ದಿನ ಜಗತ್ತು ಒಬ್ಬ ಶಿಕ್ಷಕನನ್ನು ಕಳಕೊಂಡಿತು. ಸಾಫ್ಟ್ವೇರ್ ಉದ್ಯಮವನ್ನೇಕೆ ಆಯ್ದುಕೊಂಡಿರಿ, ನೀವೊಬ್ಬ ಅತ್ಯುತ್ತಮ ಅಧ್ಯಾಪಕನಾಗಬಹುದಿತ್ತು...’ ಎಂದಿದ್ದರವರು. ಇದೇ ರೀತಿಯ ಅಭಿಪ್ರಾಯವನ್ನು ಬೇರೆ ಕೆಲವು ಓದುಗರೂ ಆಗಾಗ ವ್ಯಕ್ತಪಡಿಸಿದ್ದುಂಟು. ಆದರೆ ನಿಜ ಹೇಳಬೇಕೆಂದರೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದರಿಂದಲೇ, ಅದೂ ದಾವಣಗೆರೆಯೆ ಬಿಡಿಟಿ ಇಂಜನಿಯರಿಂಗ್ ಕಾಲೇಜಿಗೆ ಸೇರಿದ್ದರಿಂದಲೇ ನನಗೆ ಈ 'ಮಾಹಿತಿ ಸಂಗ್ರಹ - ಪ್ರಸ್ತುತಿ’ ಕಲೆ ಕರಗತವಾಗಲು ಸಹಕಾರಿಯಾದದ್ದು ಎಂದರೆ ನಂಬುತ್ತೀರಾ?
1986-90ರ ಅವಧಿಯಲ್ಲಿ ನಮ್ಮ ಬಿಡಿಟಿ ಕಾಲೇಜಲ್ಲಿ (ಆಗ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿ) ಕಂಪ್ಯೂಟರ್ ಸೈನ್ಸ್ ಇತ್ಯಾದಿ ಹೊಸಶಾಖೆಗಳಿಗೆ ಸರಿಯಾಗಿ ಬೋಧಕವರ್ಗ ಇರುತ್ತಿರಲಿಲ್ಲ . ಇಲೆಕ್ಟ್ರಾನಿಕ್ಸ್ , ಇಲೆಕ್ಟ್ರಿಕಲ್ ಇತ್ಯಾದಿ ಬೇರೆ ಬ್ರಾಂಚ್ಗಳ ಪ್ರಾಧ್ಯಾಪಕರೇ ನಮಗೂ ಪಾಠ ಮಾಡಬೇಕಾದ ಸ್ಥಿತಿ. ಆ ಬ್ರಾಂಚ್ಗಳಲ್ಲೇ ಲೆಕ್ಚರರ್ಸ್ ಸಂಖ್ಯೆ ಕಮ್ಮಿಯಿದ್ದರೆ ಮತ್ತೆ ಕೇಳಬೇಕೆ? ಆದರೂ ನಮಗೆ ಸ್ವಲ್ಪವಾದರೂ ಸಹಾಯವಾಗುವಂತೆ ದಾವಣಗೆರೆಯ ಬಾಪೂಜಿ ಇಂಜನಿಯರಿಂಗ್ ಕಾಲೇಜಿನಿಂದ ಕೆಲ ಪ್ರಾಧ್ಯಾಪಕರು ಸಂಜೆಯಹೊತ್ತು ಅಥವಾ ವಾರಾಂತ್ಯಗಳಲ್ಲಿ ನಮ್ಮ ಕಾಲೇಜಿಗೆ ಬಂದು ಪಾಠಮಾಡುತ್ತಿದ್ದರು. ಸುರತ್ಕಲ್ ಕೆ.ಆರ್.ಇ.ಸಿಯ ಪ್ರಾಧ್ಯಾಪಕರೊಬ್ಬರೂ ಒಂದು ವಾರ ಕಾಲ ದಾವಣಗೆರೆಯಲ್ಲಿ ಕ್ಯಾಂಪ್ ಹೂಡಿ ಒಂದು ಸಬ್ಜೆಕ್ಟ್ನ ಸಿಲೆಬಸ್ಸನ್ನೆಲ್ಲ ಒಂದೇ ವಾರದಲ್ಲಿ ಮುಗಿಸಿ ನೆರವಾದದ್ದುಂಟು.
ಅಂತೂ ನಿಮಗರ್ಥವಾಗಿರಬಹುದು - ಇಂಜಿನಿಯರಿಂಗ್ ಕಾಲೇಜಲ್ಲಿ ನಾವೆಲ್ಲ ಹೆಚ್ಚುಕಡಿಮೆ 'ಏಕಲವ್ಯ’ರಾಗಿದ್ದೆವು. ಆಗ ಶುರುವಾದದ್ದು ನನಗೆ ಈ ಟಿಪ್ಪಣಿ (ನೋಟ್ಸ್) ತಯಾರಿಸಿಡುವ ಅಭ್ಯಾಸ. ಪ್ರತಿ ಸೆಮಿಸ್ಟರ್ನಲ್ಲೂ ಆರಂಭದಿಂದಲೇ ಪ್ರತಿಯಾಂದು ಸಬ್ಜೆಕ್ಟ್ಗೂ (ಪ್ರಾಧ್ಯಾಪಕರಿಂದ ಪಾಠಗಳು ಇರಲಿ ಇಲ್ಲದಿರಲಿ) ನಾನೇ ಲೈಬ್ರರಿಯಿಂದ ಅಥವಾ ಖರೀದಿಸಿದ/ ಸ್ನೇಹಿತರಿಂದ ಎರವಲು ಪಡೆದ ರೆಫರೆನ್ಸ್ ಪುಸ್ತಕಗಳಿಂದ ನೀಟಾಗಿ ನೋಟ್ಸ್ ತಯಾರಿಸುತ್ತಿದ್ದೆ. ಸೆಮಿಸ್ಟರ್ ಅವಧಿ ಮುಗಿದು ಪರೀಕ್ಷೆಗಳು ಬರುವ ಹೊತ್ತಿಗೆ ಒಂದೊಂದು ಸಬ್ಜೆಕ್ಟ್ಗೂ ವಿಪುಲವಾದ, ಅಚ್ಚುಕಟ್ಟಾಗಿ ಜೋಡಿಸಿದ, ಪರೀಕ್ಷೆಯ ಸಂಭವನೀಯ ಪ್ರಶ್ನೆಗಳಿಗುತ್ತರವಾಗಬಹುದಾದ ಟಿಪ್ಪಣಿಗಳ ಸಂಗ್ರಹ ನನ್ನಲ್ಲಿರುತ್ತಿತ್ತು. ಹಾಸ್ಟೆಲ್ನಲ್ಲಿ , ಕಾಲೇಜಲ್ಲಿ ಇತರ ಸಹಪಾಠಿಗಳೆಲ್ಲ ಈ ನೋಟ್ಸನ್ನೇ ಕ್ಸೆರಾಕ್ಸ್ ಮಾಡಿಕೊಳ್ಳುತ್ತಿದ್ದುದುಂಟು!
ಇಂಜಿನಿಯರಿಂಗ್ ಕಾಲೇಜಿನಲ್ಲಿದ್ದಾಗಿನ ವಿದ್ಯಾರ್ಥಿಜೀವನವು ನನ್ನ ವೃತ್ತಿ-ಪ್ರವೃತ್ತಿಗಳೆರಡಕ್ಕೂ ಬುನಾದಿಯಾಯಿತು. ಹಾಗೆ ಆರಂಭವಾದ ನನ್ನ 'ಮಾಹಿತಿ ಸಂಗ್ರಹ - ಇತರರಿಗೂ ವಿತರಣೆ’ಯೇ ವಿಚಿತ್ರಾನ್ನ ಅಂಕಣದ (ಅಥವಾ 'ಅಮೆರಿಕದ ಬಗ್ಗೆ ತಿಳಿಯೋಣ’ ಮೊದಲಾದ ನನ್ನ ಇತರ ಪ್ರಯೋಗಗಳ) ಹಿಂದಿನ ಮೂಲಹೇತು. ನಾನು ಸರ್ವಜ್ಞನಲ್ಲ ; ನನಗೆ ಎಲ್ಲ ಗೊತ್ತಿದೆ ಎಂದು ದಂತಗೋಪುರ ಅಥವಾ ಎತ್ತರದ ಕಟ್ಟೆಯ ಮೇಲೆ ನಿಂತು ಕೆಳಗಿನವರನ್ನುದ್ದೇಶಿಸಿ ಮಾತನಾಡುವವರಂತೆ ಬರೆಯುವ ಶೈಲಿ ನನಗೆ ಇಷ್ಟವಾಗುವುದೂ ಇಲ್ಲ , ನಾನದನ್ನು ರೂಢಿಸಿಕೊಳ್ಳುವುದೂ ಇಲ್ಲ . ನನ್ನದೇನಿದ್ದರೂ ಜೀವನಪ್ರೀತಿಯ, ನಮ್ಮ ದೈನಂದಿನ ಬದುಕಿಗೆ ತೀರಾ ಹತ್ತಿರದ ಸಣ್ಣಸಣ್ಣ ಸಂಗತಿಗಳ ಮೇಲೊಂದು ಆತ್ಮೀಯ ಕ್ಷ-ಕಿರಣ ಬೀರುವಿಕೆ, ನೋಡಿಯಪ್ಪಾ ಈ ಒಂದು ವಿಷಯ ನನಗೆ ಆಸಕ್ತಿಕರವಾಗಿ ಕಂಡಿತು ನೀವೂ ಬೇಕಿದ್ದರೆ ಓದಿಕೊಳ್ಳಿ ಎಂದು ಸಂಚಯಿತ ಜ್ಞಾನದ ಹಂಚುವಿಕೆ - ಇಷ್ಟೆ . ಅದನ್ನಷ್ಟೇ ನಿಮಗೆಲ್ಲ ವಿಚಿತ್ರಾನ್ನದಲ್ಲಿ ನಾನು ಉಣಬಡಿಸುವುದು.
* * *
'ಈ’ಶಾವಾಸ್ಯಮಿದಂ ಸರ್ವಂ?
ಎಲೆಕ್ಟ್ರಾನಿಕ್ ಮಾಧ್ಯಮ ಅಂತರ್ಜಾಲದ ಈ-ಪತ್ರಿಕೆಯಲ್ಲಿನ ಈ-ಅಂಕಣದ ಈ-ಲೇಖನಗಳೆಲ್ಲ ಸಂಪೂರ್ಣವಾಗಿ ಕಾಗದರಹಿತ (paperless); ಎಲ್ಲಿಯವರೆಗೆ ಎಂದರೆ ನೂರು ಲೇಖನಗಳ ಪೈಕಿ ಒಂದೇಒಂದನ್ನು ಸಹ ಮೊದಲು ಕಾಗದದ ಮೇಲೆ ಲೇಖನಿಯಿಂದ ಬರೆದದ್ದೇ ಇಲ್ಲ . ಬರಹ ಬಳಸಿ ನೇರವಾಗಿ ಕಂಪ್ಯೂಟರಲ್ಲೇ ಟೈಪಿಸಿ ಈಮೈಲ್ ಮೂಲಕ ದಟ್ಸ್ಕನ್ನಡ ಕಚೇರಿಗೆ ರವಾನೆ ಮಾಡಿದ ಲೇಖನಗಳಿವು (ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ನೂರನೇ ಸಂಚಿಕೆಯನ್ನು ನಾನು ವಾಷಿಂಗ್ಟನ್ನಿಂದ ಒರ್ಲಾಂಡೊಗೆ ವಿಮಾನದಲ್ಲಿ ಪ್ರಯಾಣಿಸುತ್ತ ಲ್ಯಾಪ್ಟಾಪ್ ಕಂಪ್ಯೂಟರ್ನಲ್ಲಿ ಟೈಪ್ ಮಾಡಿದ್ದು !)
ಅಂಕಣದ ಲೇಖನಗಳನ್ನೋದಿ ಓದುಗರ ಬರೆಯುವ ಈ-ಪ್ರತಿಕ್ರಿಯೆಗಳೂ, ಅವುಗಳಿಗೆಲ್ಲ ಈ-ಪ್ರತ್ಯುತ್ತರಗಳೂ ಈಮೈಲ್ನಲ್ಲೇ! ಅಂಕಣದಲ್ಲಿ ಆಗಾಗ ನಡೆಸಿದ ರಸಪ್ರಶ್ನೆಗಳ ಪ್ರವೇಶಪತ್ರಗಳನ್ನು ಕಳಿಸಲೂ ವೆಬ್-ಫಾರ್ಮ್ನ ವ್ಯವಸ್ಥೆ. ಲೇಖನದ ವಿಷಯಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಒದಗಿಸಲು ಇತರ ವೆಬ್-ಪುಟಗಳಿಗೆ ಕೊಂಡಿ. ಲೇಖನ ಮನದಟ್ಟಾಗುವಂತೆ ಸಾಕಷ್ಟು ಚಿತ್ರಗಳ ಬಳಕೆ. ಶಂಖ ಕುರಿತ ಲೇಖನದಲ್ಲಂತೂ 'ಶಂಖನಾದ’ದ ಧ್ವನಿಮುದ್ರಿಕೆಯನ್ನೂ ಅಳವಡಿಸಲಾಗಿತ್ತು (ಇದೇ ತರಹ 'ನಾಗಸ್ವರ’ ಲೇಖನಕ್ಕೆ ಯಾಕೆ ಧ್ವನಿಮುದ್ರಿಕೆ ಕೊಟ್ಟಿಲ್ಲ ಎಂದು ಕೇಳಿದವರಿದ್ದಾರೆ)! ಮತ್ತೆ , ನನ್ನ ವಿಷಯ ಸಂಗ್ರಹಕ್ಕೆ ಆಕರವಾದರೂ ಯಾವುದು? ಬಹುತೇಕವಾಗಿ ಗೂಗಲ್.ಕಾಮ್! ಅಂದರೆ, 'ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಬೇಡುವರಂತೆ ಕಾಣಿರೊ...’ ಎನ್ನಲಿಕ್ಕಡ್ಡಿಯಿಲ್ಲ, ಅಲ್ಲವೇ?
ಒಟ್ಟಿನಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಸಾಕಷ್ಟು ಪರಿಣಾಮಕಾರಿಯಾಗಿ ಅರ್ಥಪೂರ್ಣವಾಗಿ ಬಳಸಿದ ಹೆಮ್ಮೆ ವಿಚಿತ್ರಾನ್ನಕ್ಕಿದೆ.
* * *
ಸವಿನೆನಪುಗಳು ಬೇಕು ಸವಿಯಲೀ ಬದುಕು...
ವಿಚಿತ್ರಾನ್ನದ ಕೆಲವು ಲೇಖನಗಳೂ ಸೇರಿದಂತೆ ದಟ್ಸ್ಕನ್ನಡದಲ್ಲಿ ಪ್ರಕಟವಾಗುವ ಹೆಚ್ಚಿನ ಲೇಖನಗಳು, ಪ್ರಬಂಧಗಳು, ಕವನಗಳು (ವಿಶೇಷವಾಗಿ ಅನಿವಾಸಿ ಕನ್ನಡಿಗರು ಬರೆದವು) ಒಂದು ನಮೂನೆಯಲ್ಲಿ 'ತವರೂರ ನೆನಪಿನ ಡೈರಿ’ಯ ತರಹ ಇರುತ್ತವೆ ಎಂಬ ಅಭಿಪ್ರಾಯವಿದೆ. ಅದನ್ನು ಕಾಂಪ್ಲಿಮೆಂಟ್ ಎಂದೂ ಪರಿಗಣಿಸಬಹುದು, ಕಂಪ್ಲೇಂಟ್ ಎಂದೂ ಅನ್ನಬಹುದು. ಲೇಖಕರಿಗೂ, ಲೇಖನಗಳನ್ನು ಆಯ್ದು ಪ್ರಕಟಿಸುವ ಸಂಪಾದಕರಿಗೂ ಇದೊಂದು ಸೂಕ್ಷ್ಮ ಪರಿಸ್ಥಿತಿ.
ಅತಿ ಸರ್ವತ್ರ ವರ್ಜ್ಯಯೇತ್ ಎಂಬಂತೆ ತೀರಾ ನೆನಪುಗಳದೇ ಸರಮಾಲೆಯಾದರೆ ಸಪ್ಪೆಯಾಗತೊಡಗುತ್ತದೆ. ಆದರೆ ಯಾಕೆ ಹೀಗಾಯ್ತೆಂದರೆ, ಮೊದಲೆಲ್ಲ ಸಾಕಷ್ಟು ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರೇ ಓದುಗರಿದ್ದ ಈ ಪತ್ರಿಕೆಯಲ್ಲಿ ಅಂಥ ನೆನಪುಗಳು (ಆಹಾ... ನಮ್ಮೂರಲ್ಲಿ ನಮ್ಮ ತಾಯ್ನಾಡಲ್ಲಿ ಕಳೆದಿದ್ದ ಬಾಲ್ಯದ ದಿನಗಳು ಎಷ್ಟು ಚೆನ್ನಾಗಿದ್ದುವು... ಈಗ ಸಪ್ತಸಾಗರಗಳಾಚೆ ಪರದೇಸಿಗಳಾಗಿ ತಾಯ್ನಾಡ ತುಡಿತದಲ್ಲಿ ಕಳೆವ ದಿನಗಳೆಲ್ಲಿ ಬಾಲ್ಯದ ಆ ದಿನಗಳೆಲ್ಲಿ...) ತುಂಬಾ ಮಂದಿಗೆ ಒಂಥರಾ ಹಿತಾನುಭವ ಒದಗಿಸುತ್ತಿದ್ದುದು ಹೌದು. ಬರೆಯುವವರಿಗೂ ಓದುವವರಿಗೂ ಸಮಪ್ರಮಾಣದಲ್ಲಿ ಇಷ್ಟವಾಗುತ್ತಿದ್ದರಿಂದ ಅದೇ ಟ್ರೆಂಡ್ ಮುಂದುವರೆಯಿತು.
ಈಗ ಹಾಗಲ್ಲ ; ಅಮೆರಿಕ ಅಥವಾ ವಿದೇಶಗಳ ಕನ್ನಡಿಗರು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿರುವ ಕನ್ನಡಿಗರೂ ದಟ್ಸ್ಕನ್ನಡವನ್ನು ಜಾಲಾಡಿಸುತ್ತಾರೆ. ವಿಪ್ರೊ, ಇನ್ಫೊಸಿಸ್, ಲುಸೆಂಟ್, ಎಚ್ಪಿ ಇತ್ಯಾದಿ ಸಾಫ್ಟ್ವೇರ್ ಕಂಪೆನಿಗಳ ಉದ್ಯೋಗಿಗಳಲ್ಲಿ ತುಂಬಾ ಮಂದಿ ಕನ್ನಡಾಭಿಮಾನದಿಂದ ಈ ಪತ್ರಿಕೆಯನ್ನು ಪ್ರತಿದಿನ ಓದುತ್ತಾರೆ. ಸಹಜವಾಗಿಯೇ ಅವರಿಗೆಲ್ಲ ಸಮಕಾಲೀನ ನವನವೀನ ವಿಷಯಗಳು ಬೇಕು, ದೇಶಸುತ್ತಿ ಕೋಶ ಓದಿದವರು ಕನ್ನಡದಲ್ಲಿ ಬರೆದ ಲೇಖನಗಳು ಬೇಕು. ಪ್ರಚಲಿತ ವಿದ್ಯಮಾನಗಳನ್ನು ಸರಳಗನ್ನಡದಲ್ಲಿ ಮನದಣಿಯೆ ಓದುವುದಕ್ಕಿರಬೇಕು.
ತಾತ್ಪರ್ಯವೆಂದರೆ ಓದುಗರ ಸಂಖ್ಯೆ, ವ್ಯಾಪ್ತಿ, ಅಭಿರುಚಿಗಳು ವಿಶಾಲವಾದಂತೆಲ್ಲ ವಿಚಿತ್ರಾನ್ನ ಅಂಕಣದ ಲೇಖನಗಳ ವಿಷಯ ಆಯ್ಕೆ, ಪ್ರಸ್ತುತಿಯ ಶೈಲಿ, ಮಾಹಿತಿಯ ವಿಸ್ತಾರಗಳೆಲ್ಲ ಅಷ್ಟಿಷ್ಟು ಬದಲಾಗಬೇಕಾದದ್ದಿದೆ. ಬೆಳವಣಿಗೆ - ವಿಕಸನ ಎಂದರೆ ಅದೇ ಅಲ್ಲವೇ?
ವಿಚಿತ್ರಾನ್ನ ಅಂಕಣದ ಲೇಖನಗಳನ್ನು ಮೆಚ್ಚಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೇ ಅಲ್ಲದೆ, 'ಓಹೊ ಬರೆಯುವುದೆಂದರೆ ಇಷ್ಟು ಸುಲಭವಾಗಿ ಇದೆಯಲ್ಲ , ನಾನೂ ಬರೆಯಬಲ್ಲೆ !’ ಎಂದು ಸ್ಫೂರ್ತಿ ಪಡೆದು ಬರೆಯಲಾರಂಭಿಸಿದವರಿದ್ದಾರೆ. ವಿಚಿತ್ರಾನ್ನ ಲೇಖನಗಳನ್ನು ಆಧರಿಸಿ ಮನರಂಜನಾ ಕಾರ್ಯಕ್ರಮ, ಪ್ರಹಸನಗಳನ್ನು ನಡೆಸಿದವರಿದ್ದಾರೆ. ಲೇಖನದ ಯಾವುದೋ ಒಂದು ಪದಪುಂಜ, ವಾಕ್ಯಸರಣಿ, ಯೋಚನಾಲಹರಿಗಳಿಂದ ಪ್ರಭಾವಿತರಾಗಿ ಕವನ ಕಥನ ಬರೆದವರಿದ್ದಾರೆ. ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿದ್ದಾರೆ. ಬೆಂಗಳೂರು ಆಕಾಶವಾಣಿಯ ಉದ್ಘೋಷಕಿಯಾಬ್ಬರು 'ಚಿತ್ರಗೀತೆಗಳ ಒಗ್ಗರಣೆಯ ಘಮಘಮ’ ಲೇಖನವನ್ನೋದಿ ಅದೇ ರೀತಿಯ ಕಾರ್ಯಕ್ರಮ ಪ್ರಸಾರಿಸಿದ್ದಾರಂತೆ. ಅತ್ತ ದೂರದ ಆಸ್ಟ್ರೇಲಿಯಾದಲ್ಲಿ ಸಿಡ್ನಿ ರೇಡಿಯಾದಿಂದ ಪ್ರಸಾರವಾಗುವ ಕನ್ನಡ ಕಾರ್ಯಕ್ರಮದಲ್ಲಿ ವಿಚಿತ್ರಾನ್ನ ಬಗ್ಗೆ ಒಂದು ಪ್ರಸ್ತುತಿ ನಡೆಸಲೇ ಎಂದು ಅನುಮತಿ ಕೋರಿ ಬರೆದವರಿದ್ದಾರೆ.
ಲೇಖನಗಳ ಸರಳತೆ-ಶೈಲಿ-ಸೌಂದರ್ಯಗಳನ್ನು ಒಗ್ಗಿಸಿಕೊಂಡಿರುವ ಅನೇಕ ಮಂದಿ ಸ್ನೇಹಮಯಿ ಓದುಗರು ನನ್ನನ್ನೊಬ್ಬ ಹಿತೈಷಿ, ಆಪ್ತಸ್ನೇಹಿತನಾಗಿ ಕಂಡುಕೊಂಡಿದ್ದಾರೆ. ಇವರಲ್ಲನೇಕರು ತಮ್ಮ ಸುಖದುಃಖಗಳನ್ನು ಈಮೈಲ್ ಬರೆದು ಹಂಚಿಕೊಳ್ಳುತ್ತಾರೆ. ಯಾವುದಾದರೂ ಸಣ್ಣಪುಟ್ಟ ಮಾಹಿತಿ ಕೋರಿ ಈ-ಪತ್ರಿಸುತ್ತಾರೆ. ಖುಶಿಕೊಡುವ ವಿಚಾರವೆಂದರೆ ಈ ಮಾಹಿತಿ-ಕೋರಿಕೆಗಳೂ ಹೈ-ಫೈ ಏನೂ ಅಲ್ಲ , ಅವು ಸಹ 'ಡೌನ್ ಟು ಅರ್ತ್’. ಕೆಲವನ್ನು ಉದಾಹರಿಸುತ್ತೇನೆ - ವರಲಕ್ಷ್ಮಿ ವ್ರತ ಕಥೆ ಕನ್ನಡಲಿಪಿಯಲ್ಲಿದ್ದರೆ ಕಳಿಸಿಕೊಡುತ್ತೀರಾ, ಕುವೆಂಪು 'ಕಿಂದರಜೋಗಿ’ ನಾಟಕದ ಪ್ರತಿ ಎಲ್ಲಾದರೂ ಸಿಗಬಹುದೆ, ಗಸಗಸೆ ಪಾಯಸದ ರೆಸಿಪಿ ಅಚ್ಚಕನ್ನಡ ಲಿಪಿಯಲ್ಲಿ ಇದ್ದರೆ ಕಳಿಸ್ತೀರಾ, ಸಹೋದ್ಯೋಗಿಯ ಮದುವೆ-ರಿಸೆಪ್ಷನ್ಗೆ ಹೋಗುತ್ತಿದ್ದೇವೆ ಉಡುಗೊರೆ ಏನು ಕೊಡಬಹುದೆಂದು ಐಡಿಯಾ ತಿಳಿಸ್ತೀರಾ, ಹೊಸ ಮನೆ ಕಟ್ಟಿಸ್ತಿದ್ದೇವೆ ಒಂದು ಒಳ್ಳೇ ಹೆಸರು ಸೂಚಿಸ್ತೀರಾ... ಇತ್ಯಾದಿ ಈಮೈಲ್ಗಳೆಲ್ಲ ನನ್ನ ಬಳಿ ಇವೆ. ನೂರು ವಾರಗಳ ಈ ಅವಧಿಯಲ್ಲಿ ನನ್ನ ಔಟ್ಲುಕ್ ಈಮೈಲ್ ಎಡ್ರೆಸ್ ಬುಕ್ಗೆ ಸೇರಿದ ವಿಶ್ವಕನ್ನಡಿಗರ ಸಂಖ್ಯೆ ಸಾವಿರದಮುನ್ನೂರು ದಾಟಿದೆ ಎಂದರೆ ಹುಬ್ಬೇರಿಸಬೇಡಿ!
ಅದಕ್ಕೇ ಹೇಳಿದ್ದು , ವಿಚಿತ್ರಾನ್ನ ಶತಕಸಂಭ್ರಮ ನನ್ನದು ಮಾತ್ರವಲ್ಲ , ನಿಮ್ಮೆಲ್ಲರದು!
* * *
ಸೆಂಚುರಿ ಹೊಡೆದದ್ದಕ್ಕೆ ಸಿಹಿ ವಿತರಣೆ ಇಲ್ಲವೇ?
ಇದೆ, ಆರಂಭದಿಂದಲೂ ನಡುನಡುವೆ ಊಟ-ತಿಂಡಿ-ಆಹಾರವಿಚಾರ-ಹೊಸರುಚಿ ವಿಷಯಗಳನ್ನು ಲಘುಹರಟೆಯ ನೆವದಲ್ಲಿ ಪ್ರಸ್ತುತಪಡಿಸಿದ ವಿಚಿತ್ರಾನ್ನ, ಶತಕ ಬಾರಿಸಿದ ಸಂದರ್ಭದಲ್ಲಿ ಸುಮ್ಮನಿದ್ದೀತೇ? ಇದೋ ಇಲ್ಲಿದೆ ನಿಮಗಾಗಿ ಬಾದೂಷಾ, ಮೈಸೂರ್ಪಾಕ್, ಲಡ್ಡು, ಬರ್ಫಿ ಇತ್ಯಾದಿ ಈ-ಸಿಹಿತಿಂಡಿ (ಚಿತ್ರ ನೋಡಿ)! ಕಣ್ಣಿಗೆ ಹಬ್ಬ ಬಾಯಲ್ಲಿ ಹಾಕಲಿಕ್ಕಿಲ್ಲವಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ. ಸಿಹಿತಿಂಡಿ ಮಾತ್ರವೇಕೆ, ಪಕೋಡಾ-ವಡಾ, ನಿಪ್ಪಟ್ಟು ತೆಂಗೊಳಲು ಕೋಡುಬಳೆ ಇತ್ಯಾದಿ ಎಲ್ಲ ಕನ್ನಡ-ಕರ್ನಾಟಕ ತಿಂಡಿಗಳ ಪಾಕವಿಧಾನವನ್ನು ಸಂಗ್ರಹಿಸಿದ ಒಬ್ಬ ಕನ್ನಡತಿಯ ಅಂತರ್ಜಾಲ 'ಅಡುಗೆ ಪುಸ್ತಕ’ವೊಂದಿದೆ. ಇಲ್ಲಿ ನೋಡಿ, ಸವಿತಾ ಮೂರ್ತಿ ಎನ್ನುವವರು ಆಸ್ಥೆಯಿಂದ ಅಚ್ಚುಕಟ್ಟಾಗಿ ಸರಳವಾಗಿ ಪ್ರಸ್ತುತಪಡಿಸಿಟ್ಟಿರುವ ಕರ್ನಾಟಕ ಸ್ಟೈಲ್ ರೆಸಿಪಿ ಬುಕ್.
* * *
ಶತಕ ಸಂಭ್ರಮ ಸಂದರ್ಭದಲ್ಲಿ ಮತ್ತೊಮ್ಮೆ ನಿಮ್ಮಲ್ಲಿ ಪ್ರತಿಯಾಬ್ಬರಿಗೂ ತುಂಬುಹೃದಯದ ಧನ್ಯವಾದಗಳು. ನಿಮ್ಮ ಶುಭಾಶಿಷಗಳ ಶ್ರೀರಕ್ಷೆ ಸದಾ ಇರಲೆಂಬ ಹಾರೈಕೆಯಾಂದಿಗೆ,


Click it and Unblock the Notifications
