ವಿಚಿತ್ರಾನ್ನದಲ್ಲಿ ವಿಚಿತ್ರ ಭಕ್ಷ್ಯ!

*ಶ್ರೀವತ್ಸ ಜೋಶಿ

ಪದಬಂಧ ಎಂದೊಡನೆ ಅದರ ಚೌಕಟ್ಟುಗಳು (ಗ್ರಿಡ್‌) ಎಲ್ಲಿದೆ ಎಂದಿರಾ ? ಇದೊಂದು ವಿಶೇಷ, ವಿನೋದದ ಪದಬಂಧ. ಮಾಮೂಲಿ ಪದಬಂಧದಂತೆ ಸುಳಿವು (ಕ್ಲೂ)ಗಳನ್ನು ಕೊಡಲಾಗಿದೆ. ಆದರೂ ಈ ಪದಬಂಧಕ್ಕೆ ಗ್ರಿಡ್‌ ಬೇಕಾಗಿಲ್ಲ , ಹಾಗಾಗಿಯೇ ಇದನ್ನು ಪದಬಂಡಿ ಎಂದದ್ದು. ಇದೊಂದು 15 ಬೋಗಿಗಳ ಟ್ರೈನ್‌.

  • ಎಲ್ಲ ಉತ್ತರಗಳೂ ನಾಲ್ಕಕ್ಷರದವು. (ನಾಲ್ಕಕ್ಷರಗಳ ನಾಮಬಲ ಮಹಿಮೆ ಈಗಾಗಲೇ ನಿಮಗೆ ವಿಚಿತ್ರಾನ್ನದಲ್ಲಿ ಪರಿಚಿತ!)
  • ಪ್ರತಿಯಾಂದು ಉತ್ತರಕ್ಕೆ ಎರಡೆರಡು ಕ್ಲೂ ಕೊಟ್ಟಿದ್ದರೂ ಉತ್ತರ ಒಂದೇ. (ನಿಮ್ಮ ಅನುಕೂಲಕ್ಕಾಗಿ ‘ಒಂದು ಕ್ಲೂನೊಡನೆ ಇನ್ನೊಂದು ಉಚಿತ’! ಬಿಸಿನೆಸ್‌ ಟೆಕ್ನಿಕ್‌:-)
  • ಮೊದಲ ಉತ್ತರದ ಒಂದನೇ ಅಕ್ಷರ ‘ಅ’. ಕೊನೆಯ(ಹದಿನೈದನೆಯ) ಉತ್ತರದ ಕೊನೆಯ ಅಕ್ಷರ ‘ನ್ನ’. (ಹಾಗಾಗಿ ‘ಅನ್ನ’ ಬ್ರಹ್ಮಾಂಡದ ಒಳಗೇ ಎಲ್ಲವೂ:-))
  • ಎರಡನೆಯ ಉತ್ತರದಿಂದ, ಪ್ರತಿಯಾಂದು ಉತ್ತರದ ಮೊದಲ ಅಕ್ಷರ ಮತ್ತು ಹಿಂದಿನ ಉತ್ತರದ ಕೊನೆಯ ಅಕ್ಷರ - ಒಂದೇ ಆಗಿರುತ್ತವೆ. (ಬಂಡಿಯ ಲಿಂಕ್‌ ಅದೇ!)
  • ಕ್ಲೂಗಳು ಮತ್ತು ಉತ್ತರಗಳು ಕರ್ನಾಟಕದ, ಕನ್ನಡಿಗರ, ಕನ್ನಡದ ವಿಷಯ ವೈವಿಧ್ಯಗಳ ಚೌಕಟ್ಟಿನೊಳಗೇ ಇವೆ. (ಕನ್ನಡ ಬಿಟ್ಟು ನಮಗೆ ಬೇರೇನು ಬೇಕು?)
ಸರಿ, ಈಗ ಈ ಪದಬಂಡಿಯ ಎಂಜಿನ್‌ ನೀವು. ಹದಿನೈದು ಬೋಗಿಗಳನ್ನೂ ಸರಿಯಾಗಿ ಜೋಡಿಸಬಲ್ಲಿರಿ ಎಂದುಕೊಂಡೇ ನಿಮ್ಮ ಕೈಗಿದನ್ನು ಕೊಡುತ್ತಿದ್ದೇನೆ. ಹಸಿರುಬಾವುಟ ತೋರಿಸಿ ಆಯಿತು; ಹೊರಡಿ!*

1. ಅ -------

ಅ) ಕೆಲಸ ಸಿಗಬೇಕಿದ್ದರೆ ಎಕ್ಸ್‌ಪೀರಿಯನ್ಸ್‌ ಇರಬೇಕು, ಎಕ್ಸ್‌ಪೀರಿಯನ್ಸ್‌ ಇರಬೇಕಿದ್ದರೆ ಮೊದಲು ಕೆಲಸದಲ್ಲಿರಬೇಕು! ಇದನ್ನೇ ‘ಕ್ಯಾಚ್‌ 22 ಸಿಚ್ಯುವೇಷನ್‌’ ಅನ್ನುವುದು. ಒಳ್ಳೆಯ ವಿದ್ಯಾರ್ಹತೆಯಿದ್ದೂ ನೌಕರಿ ಸಿಗುವುದು ಕಷ್ಟವಾಗುವಂತಾಗುವ ಈ ಎಕ್ಸ್‌ಪೀರಿಯನ್ಸೇ ಕನ್ನಡದಲ್ಲಿ.

ಆ) ಕಾಶಿನಾಥ್‌ನ ಈ ಸಿನೆಮಾ ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿ ಹಿಂದಿಯಲ್ಲೂ ನಿರ್ಮಾಣವಾಗಿ ಸುದ್ದಿಮಾಡಿತ್ತು.

2. -------

ಅ) ಕಾಡಿನ ಹೂ ಎಂಬ ಅರ್ಥ ಬರುವ ಸಂಸ್ಕೃತ ಪದಗಳ ಶೀರ್ಷಿಕೆ ಕೊಟ್ಟಿದ್ದಾರೆ ಡಿ.ವಿ.ಗುಂಡಪ್ಪನವರು ಈ ಕವಿತೆಗೆ.

ಆ) ಕೀರ್ತಿ, ಪ್ರಶಸ್ತಿಗಳ ಬೆನ್ನಟ್ಟದೆ ಕೆಲವರು ಎಲೆಮರೆಯ ಕಾಯಿಯಾಗಿಯೇ ಇರಬಯಸುತ್ತಾರೆ.

3. -------

ಅ) ಕಳೆದ ಒಂದೂವರೆ ವರ್ಷದಿಂದ ಕನ್ನಡಿಗರ (ಮುಖ್ಯವಾಗಿ ಗೃಹಿಣಿಯರ) ಮನಸೂರೆಗೊಂಡಿರುವ ಈ ದೈನಿಕ ಟಿ.ವಿ. ಧಾರಾವಾಹಿ ‘ಮಾಯಾಮೃಗ’ ಟೀಮ್‌ನವರದ್ದೇ ಇನ್ನೊಂದು ಕೊಡುಗೆ.

ಆ) ಕಾಲಗಣನೆಯಲ್ಲಿ ವರ್ಷ, ಶತಮಾನ, ಯುಗ ಬದಲಾವಣೆಯಂತೆಯೇ ಇದೂ ಒಂದು ಪರ್ಯಾಯ.

4. -------

ಅ) ಕದಳೀಫಲ (ಅದೇ ಸ್ವಾಮಿ, ಬಾಳೆಹಣ್ಣು!) ಗಳ ಸಿಪ್ಪೆತೆಗೆದು ಸಣ್ಣಸಣ್ಣತುಂಡು ಮಾಡಿ ಅದಕ್ಕೆ 1/4 ಕಪ್‌ ತುರಿದ ಬೆಲ್ಲ, 1/4 ಕಪ್‌ ತುರಿದ ತೆಂಗಿನಕಾಯಿ, ಒಂದು ಚಮಚ ಏಲಕ್ಕಿ ಪುಡಿ ಹಾಕಿ. ಹೀಗೆ ತಯಾರಿಸಿ ನೋಡಿ ಒಂದು ಹೊಸ ಭಕ್ಷ್ಯ!

ಆ) ಕೊನೆಯ ತಿಂಗಳ (ಡಿಸೆಂಬರ್‌) ಕೊನೆಯ ವಾರ ಬೆಂಗಳೂರಿನ ‘ಹಾಸ್ಯಬ್ರಹ್ಮ’ದ ಆಶ್ರಯದಲ್ಲಿ ಹರಿಯುವ ಹಾಸ್ಯದ ಹೊನಲು.

5. -------

ಅ) ಕರ್ನಾಟಕದ ಉತ್ತರಭಾಗದಲ್ಲಿದೆ ಗದಗ ಜಿಲ್ಲೆ , ಅಲ್ಲಿನ ಒಂದು ತಾಲೂಕುಕೇಂದ್ರ. ಮೊದಲು ಇದು ಧಾರವಾಡ ಜಿಲ್ಲೆಯಲ್ಲಿತು ್ತ.

ಆ) ಕೃಷ್ಣ (ಮುಖ್ಯಮಂತ್ರಿ) ಮತ್ತು ಈ ಊರಿನ ರೈತರ ಮುಖಾಮುಖಿಯ ಸುದ್ದಿ ನವಂಬರ್‌ 18, 2002ದಂದು ದಟ್ಸ್‌ಕನ್ನಡದಲ್ಲಿ ಬಂದಿತ್ತು.

6. -------

ಅ) ‘ಕಬೂತರ್‌ ಜಾ... ಜಾ...’ ಎಂದು ಮೈನೆಪ್ಯಾರ್‌ಕಿಯಾದಲ್ಲಿ ಭಾಗ್ಯಶ್ರೀ ಪಾರಿವಾಳದ ಮೂಲಕ ಸಂದೇಶ ಕಳಿಸಿದ್ದರೆ, ಪುರಾಣದಲ್ಲಿ ಬರುವ ಈ ಪ್ರಿಯತಮೆ ಸಂದೇಶ ಕಳಿಸಲು ಬಳಸಿದ್ದು ಹಂಸವನ್ನು.

ಆ) ಕಾರ್ಕೋಟಕ ವಿಷದಿಂದಾಗಿ ಗುರುತು ಸಿಗಲಾರದಷ್ಟು ವಿಲಕ್ಷಣನಾಗಿದ್ದರೂ ನಳನ ಗುರುತು ಹಿಡಿದ ಸತಿ ಶಿರೋಮಣಿ.

7. -------

ಅ) ಕಡಲ ಕಿನಾರೆಯಲ್ಲಿ ಆಗೊಮ್ಮೆ ಈಗೊಮ್ಮೆ ಈ ಬೃಹದ್ಗಾತ್ರದ ಮೀನು ಸತ್ತು ಬಿದ್ದಿರುವುದು ನಮ್ಮ ಕರಾವಳಿ ಕರ್ನಾಟಕದ ಸುಂದರ ಕನ್ನಡ ದೈನಿಕದಲ್ಲಿ ಫೋಟೋ ಸಮೇತ ಪ್ರಕಟವಾಗುವುದುಂಟು.

ಆ) ಕಬಳಿಸುವ ಕ್ರಿಯೆಯನ್ನು ಚೆನ್ನಾಗಿಯೇ ಮಾಡುವ ಪುಢಾರಿಗಳಿಗೆ, ಮೇಲಧಿಕಾರಿಗಳಿಗೆ, ರಾಜಕಾರಣಿಗಳಿಗೆ ಇದೊಂದು ಅನ್ವರ್ಥನಾಮ.

8. -------

ಅ) ಕೋಣಗಳನ್ನು ಕೆಸರುಗದ್ದೆಯಲ್ಲಿ ಓಡಿಸುವ ಒಂದು ಜನಪದ ಕ್ರೀಡೆ ‘ಕಂಬಳ’ ಕರಾವಳಿ ಜಿಲ್ಲೆಗಳಲ್ಲಿ ಪ್ರಖ್ಯಾತವಾಗಿದೆ. ಮಿಜಾರು ಎಂಬಲ್ಲಿ ನಡೆಯುವ ಜೋಡುಕೆರೆ ಕಂಬಳಕ್ಕೆ ‘ಕೋಟಿ ಚೆನ್ನಯ’ ಎಂದು ಹೆಸರಾದರೆ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ನಡೆಯುವುದಕ್ಕೆ ಈ ಹೆಸರು.

ಆ) ಕಾಡಿನಲ್ಲಿ , ವಾಲ್ಮೀಕಿ ಋಷಿಯ ಆಶ್ರಮದಲ್ಲಿ ಹುಟ್ಟಿ ಬೆಳೆದು ಆಮೇಲೆ ತಂದೆಯ ಚರಿತೆಯನ್ನು ಅವನೆದುರೇ ಸುಶ್ರಾವ್ಯವಾಗಿ ಹಾಡಿದ ಅವಳಿಬಾಲಕರು.

9. -------

ಅ) ಕುಮಾರ್‌ ಬಂಗಾರಪ್ಪ ಕನ್ನಡ ಚಲನಚಿತ್ರರಂಗದ ‘ಸರದಾರ’ನಾಗಲು ಇಷ್ಟು ಸ್ಪೀಡ್‌ನಿಂದ ಬಂದರು. ಆದರೆ ಮಿಂಚಲಿಲ್ಲ. ಈಗವರು ರಾಜ್ಯ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾರೆ.

ಆ) ಕಣ್ಣುಮಿಟುಕಿಸುವಷ್ಟರಲ್ಲಿ ಬಿಲ್ಲಿನಿಂದ ಹೊರಟು ಗುರಿತಲುಪುವ ಬಾಣದ ವೆಲೋಸಿಟಿ.

10. -------

ಅ) ಕಾಲಚಕ್ರ ಉರುಳುತ್ತಿರುವುದನ್ನು ಕ್ಷಣಕ್ಷಣಕ್ಕೂ ನಮಗೆ ಜ್ಞಾಪಿಸುವ ‘ಮೈ ಸಮಯ್‌ ಹೂಂ...’

ಆ) ಕನ್ನಡ ಪಠ್ಯಪುಸ್ತಕದಲ್ಲಿದ್ದ ಪದ್ಯದಲ್ಲಿದು ಗಂಟೆಯ ನೆಂಟ, ಬೆಳ್ಳಿಯ ಬಣ್ಣದ ಗೋಲಾಕಾರ, ಹೊತ್ತನು ತಿಳಿಯಲು ಆಧಾರ, ಟಿಕ್‌ ಟಿಕ್‌ ಗೆಳೆಯ... ಇತ್ಯಾದಿ.

11. -------

ಅ) ಕೆಲಸ ಕೆಲಸ ಎಂದು ವಾರವಿಡೀ ದಣಿದ ದೇಹ ಮನಸ್ಸುಗಳಿಗೆ ತಂಪನೆರೆಯಲೆಂದೇ ಒಂದು ದಿನ ಬಿಡುವು ಕ್ಯಾಲೆಂಡರ್‌ನಲ್ಲಿ ಕೆಂಪಂಕಿಯಲ್ಲಿ .

ಆ) ಕೊನೆಯುಸಿರೆಳೆದ ಜನನಾಯಕನಿಗೆ ಶ್ರದ್ಧಾಂಜಲಿಗಿಂತಲೂ ಅವನು ಸಾಯುತ್ತ ದಯಪಾಲಿಸಿದ ಬೋನಸ್‌ ನಮಗೆಲ್ಲ ಇಂಪಾರ್ಟೆಂಟ್‌ ಎನಿಸುತ್ತದೆ!

12. -------

ಅ) ಕಡಬು, ಕೋಸಂಬರಿ, ಕೋಡುಬಳೆ, ಕಾಫಿ - ಅದೇನೇ ಅಡಿಗೆಯಾದರೂ ಗಂಡಸರು ಮಾಡಿದರೆ ಅದಕ್ಕೆ ವಿಶೇಷ ಉಲ್ಲೇಖ!

ಆ) ಕೆಸರುತುಂಬಿದ ಕೆಂಪುಛಾಯೆಯ ನೀರು ನಿಮ್ಮ ಮನೆಯ ಟ್ಯಾಪ್‌ಗಳಲ್ಲಿ ಬರತೊಡಗಿದರೆ ಅದನ್ನು ಹೀಗೆಂದು ಕರೆಯೋಣವೇ ?

13. -------

ಅ) ಕೋಗಿಲೆಯ ಕುಹೂ ಕುಹೂ, ಕಾಗೆಯ ಕಾ...ಕಾ... ಸೇರಿದಂತೆ ಒಟ್ಟಾರೆ ಪಕ್ಷಿಗಳ ಸಮೂಹಗಾನಕ್ಕೆ ಕನ್ನಡ ಪದ.

ಆ) ಕವಿ ಎನ್‌.ಎಸ್‌ ಲಕ್ಷ್ಮೀನಾರಾಯಣ ಭಟ್ಟರ ‘ನಡೆದಿದೆ ಪೂಜಾರತಿ ವಿಶ್ವದೇವಿಗೆ’ ಕವಿತೆಯ ಸಾಲುಗಳಿವು :

ನಭದ ನೀಲ ಥಣಿಕೆಯಲ್ಲಿ ಚುಕ್ಕಿ ಚೆಲ್ಲಿದೆ
ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿದೆ
ಚಂದನವನ ಚಾಮರ ಬೀಸುತಲಿದೆ ಪರಿಮಳ
ಭೂಖಂಡದಿ ಹೊರ ಹೊಮ್ಮಿದೆ ಹಕ್ಕಿ **********

14. -------

ಅ) ಕನ್ನಡಕ್ಕೆ ಜ್ಞಾನಪೀಠ ತಂದ ಅಂಬಿಕಾತನಯದತ್ತ ಡಾ। ದ.ರಾ.ಬೇಂದ್ರೆಯವರಿಗೊಂದು ಗೌರವದ ಬಿರುದು.

ಆ) ಕನ್ಯಾರ್ಥಿಯಾಗಿ ಬಂದ ಭಾವಿ ಅಳಿಯನಿಗೆ ಕವಿತೆ ಬರೆಯುವ ಹವ್ಯಾಸವೂ ಇದ್ದರೆ ಆತನನ್ನು ಹೀಗನ್ನೋಣವೇ?

15. -------ನ್ನ

ಅ) ಕುತೂಹಲದಿಂದ ಪ್ರತಿ ಮಂಗಳವಾರ ದಟ್ಸ್‌ಕನ್ನಡ.ಕಾಂಗೆ ನೀವು ಭೇಟಿ ನೀಡುವುದಕ್ಕೆ ಕಾರಣ ಇದೇನೇ !?

ಆ) ಕರಿಬೇವು, ಕೊತ್ತುಂಬರಿ, ಲಿಂಬೆಹುಳಿ, ಒಗ್ಗರಣೆ, ಉಪ್ಪು ಇತ್ಯಾದಿ ‘ವಿ’ ಸೇರಿದ ‘ಯೆಲ್ಲೋ ರೈಸ್‌’ ಎಲ್ಲೋ ನೋಡಿದಂತಿದೆಯಲ್ಲ !

*

ಈಗ ನಿಮಗೆ ಎಲ್ಲ 15 ಉತ್ತರಗಳೂ ಗೊತ್ತಾದರೆ ಪಟ್ಟಿ ಮಾಡಿ ಕಳಿಸಿ. ಅಥವಾ 46 ಅಕ್ಷರಗಳ ಒಂದು ಪದಬಂಡಿಯನ್ನು ಮಾಡಿ [email protected] ವಿಳಾಸಕ್ಕೆ ಕಳಿಸಿ. ಅದಕ್ಕಿಂತಲೂ ಮುಖ್ಯವಾಗಿ, ಈ ಪದಬಂಧದ ಎಲ್ಲ ಸುಳಿವು (ಕ್ಲೂ)ಗಳ ಸಾಮಾನ್ಯ ವಿಶೇಷತೆಯಾಂದು ನಿಮ್ಮ ಗಮನಕ್ಕೆ ಈಗಾಗಲೇ ಬಂದಿದ್ದರೆ ಅದನ್ನೂ ಬರೆಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+