• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾರ್ಥಕತೆಯ ಎರಡು ಕ್ಷಣಗಳು..

By Staff
|

S.M. Pejathaya and Sarojamma Pejathayaನಮ್ಮ ವಿಚಿತ್ರಾನ್ನ ಅಂಕಣಕಾರ ಶ್ರೀವತ್ಸ ಜೋಶಿ ಅವರ ಅಭಿಮಾನಿ ಬಳಗ ನಾವಂಕೊಂಡಿರುವುದಕ್ಕಿಂತ ದೊಡ್ಡದು. ನಮ್ಮ ವಾಹಿನಿಯಲ್ಲಿ ಅವರ ಅಂಕಣ ಶುರುವಾದಾಗಿನಿಂದ ದಟ್ಸ್‌ಕನ್ನಡ ಓದುಗ ಬಳಗದ ವಿಸ್ತಾರ-ವೈಶಾಲ್ಯ ಹಲವುಪಟ್ಟು ಬೆಳೆದಿದೆ. ವಿಚಿತ್ರಾನ್ನವನ್ನು ಭಾರತದ ಓದುಗರು ಮಂಗಳವಾರ ಮಧ್ಯಾನ್ಹದ ಊಟದಂತೆಯೂ, ಹೊರನಾಡ ಕನ್ನಡಿಗರು ಅವರವರ ಭೌಗೋಳಿಕ ಪ್ರದೇಶದ ಸಮಯಾಸಮಯಗಳ ಅನುಕೂಲಕ್ಕೆ ತಕ್ಕಂತೆ ಬೆಳಗಿನ ಉಪಾಹಾರವಾಗಿಯೋ, ಲಂಚ್‌ ಅಥವಾ ಡಿನ್ನರ್‌ ಆಗಿಯೋ ತಪ್ಪದೆ ಸವಿಯುತ್ತಾ ಬಂದಿದ್ದಾರೆ. ಅದಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಸಂಪನ್ನ ಓದುಗರ ನಡುವಿನ ಪರಸ್ಪರ ಒಡನಾಟವನ್ನು ಜೋಷಿಯವರ ಬರಹ ಹೆಚ್ಚಿಸಿದೆ.

ಅಂತರ್‌ಜಾಲ ಮುಖೇನ ಅಕ್ಷರ-ಒಡನಾಟದ ಪ್ರಯೋಜನಗಳು ಹಲವಾರು. ನಮ್ಮ ಓದುಗರು ನಾಲ್ಕು ಪ್ಯಾರಾ ಓದಿದನಂತರ ಬ್ರೌಸರ್‌ ಆಫ್‌ ಮಾಡಿ ಸುಮ್ಮನಾಗುವುವರಲ್ಲ. ಸಮಯದ ಒತ್ತಡ ಎಷ್ಟೇ ಇದ್ದರೂ ಕನ್ನಡದಲ್ಲಿ ಒಂದಿಷ್ಟು ಸಮಾಚಾರ-ವಿಚಾರ-ಕ್ಷೇಮ ಕಲರವಗಳನ್ನು ಸಮಾಧಾನ ಚಿತ್ತರಾಗಿ ಪರಾಂಬರ್ಷಿಸಿ ತಮಗೇನ್ನನಿಸಿತು ಎನ್ನುವುದನ್ನು ಮನಬಿಚ್ಚಿ ಹೇಳಿಕೊಳ್ಳುವರು. ತನ್ಮೂಲಕ ಬರಹಗಾರ ಮತ್ತು ಓದುಗನ ನಡುವಿನ ನಿರ್ವಾತ (Vacuum) ಕ್ರಮೇಣ ಕಡಿಮೆಯಾಗುತ್ತಾ ಆ ಜಾಗದಲ್ಲಿ ಭಾವನಾತ್ಮಕವಾದ ಸುಮಧುರ, ಸೌಹಾರ್ದ ಸಂಬಂಧಗಳು ಬೆಸಗೊಳ್ಳುವವು. ಹೊಸ ಮಾಧ್ಯಮವನ್ನು ದುಡಿಸಿಕೊಳ್ಳಲು ಶ್ರಮಿಸುತ್ತಿರುವ ಭಾರತೀಯ ಭಾಷಾ ಪತ್ರಿಕೋದ್ಯಮದ ಒಬ್ಬ ವಿದ್ಯಾರ್ಥಿಗೆ ಇದಕ್ಕಿಂತ ಇನ್ನೇನು ಸಂತೋಷ ಬೇಕು.

ಬೆಂಗಳೂರು ನಿವಾಸಿ ಆಗಿರುವ ಉಡುಪಿ ಮೂಲದವರಾದ ಶ್ರೀ ಪೆಜತ್ತಾಯ ನಮ್ಮ ನಿತ್ಯ ಓದುಗರಲ್ಲೊಬ್ಬರು. ಬೆಂಗಳೂರಲ್ಲೇ ಇದ್ದರೂ ಅವರನ್ನು ಭೇಟಿಯಾಗುವ ಅವಕಾಶ ನನಗಿನ್ನೂ ಬಂದಿಲ್ಲ. ಅವರು ನಮ್ಮ ಅಂಕಣಕಾರ ಜೋಶಿ ಅವರಿಗೆ ಇತ್ತೀಚೆಗೆ ಬರೆದುಕೊಂಡ ಒಂದು ಆತ್ಮೀಯ ಪತ್ರ ಪ್ರತಿಕ್ರಿಯೆ ರೂಪದಲ್ಲಿ ನನಗೆ ಬಂದಿದೆ. ಕನ್ನಡಿಗನೊಬ್ಬನ ಆತ್ಮ ನಿವೇದನೆಯಂತಿರುವ ಈ ಪತ್ರವನ್ನು ಮನಸ್ಸಿಟ್ಟು ಓದಿ. ಮೇಲ್ನೋಟಕ್ಕೆ ಒಂದು ಖಾಸಗಿ ಪತ್ರದಂತೆ ಕಾಣಿಸುತ್ತದೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ ಕಂಡೂ ಕಾಣದಂತಿರುವ ಅನೇಕಾನೇಕ ಸಂಗತಿಗಳನ್ನು ವೈಚಾರಿಕ ನೆಲೆಗೆ ತಂದು ನಿಲ್ಲಿಸುವ ಶಕ್ತಿ ಯ ಅಕ್ಷರ ಅನುಸಂಧಾನದಂತಿದೆ ಈ ಪತ್ರ. ಗಮನಿಸಿ

- ಸಂಪಾದಕ , ದಟ್ಸ್‌ಕನ್ನಡ.ಕಾಂ


ಶ್ರೀಮತಿ ಸರೋಜಮ್ಮ ಮತ್ತು ಎಸ್‌. ಎಂ. ಪೆಜತ್ತಾಯ ಎಂ. ಎ.

ನಾರ್ಥ್‌ ಪಾಯಿಂಟ್‌ ಅಪಾರ್ಟ್‌ ಮೆಂಟ್ಸ್‌,

ನಾರ್ಥ್‌ ರೋಡ್‌, ಕೂಕ್‌ ಟೌನ್‌, ಬೆಂಗಳೂರು -

ಆತ್ಮೀಯರಾದ ಶ್ರೀ ಜೋಶಿಯವರಿಗೆ ನಮಸ್ಕಾರಗಳು

ಹಿರಿಯರಾದ ಶ್ರೀ ಎಂ. ಎಸ್‌. ನಟರಾಜರಿಗೆ ನಮ್ಮೆಲ್ಲರ ವಂದನೆ ತಿಳಿಸಿರಿ. ಅವರು ನನಗೆ ಈ-ಮೈಲ್‌ ಕಳುಹಿಸುವರು ಎಂಬ ವಿಚಾರ ತಿಳಿದು ಪುಳಕಗೊಂಡೆನು. ಅವರ ಹೃದಯ ವೈಶಾಲ್ಯಕ್ಕೆ ನಾನು ಆಭಾರಿ.

ಶ್ರೀ ಶ್ಯಾಮಸುಂದರ್‌ ರವರ ಪರಿಚಯವಾದರೆ ನಾನು ಸುದೈವಿ ಎಂದು ತಿಳಿಸಲು ಹರ್ಷಿಸುತ್ತೇನೆ.

ನನ್ನ ಪತ್ರಗಳನ್ನು ಶ್ರೀ ನಟರಾಜರಿಗೆ ತಲುಪಿಸಿರುವುದಕ್ಕೆ ನಿಮಗೆ ಧನ್ಯವಾದಗಳು.

ನಿಮ್ಮ ‘ಕಾವೇರಿ’ ಸಂಘಕ್ಕೆ ನಮ್ಮ ಶುಭಕಾಮನೆಗಳು. ನಾವು ಕೂಡಾ ಬೆಂಗಳೂರಲ್ಲಿ ಬಳಗದವರೆಲ್ಲಾ ಸೇರಿ ಮೀಟಿಂಗ್‌ ಯಾನೆ ‘ಗೆಟ್‌ ಟುಗೆದರ್‌’ ಆಗಾಗ ಮಾಡುತ್ತೇವೆ. ಮೀಟಿಂಗ್‌ ನಲ್ಲಿ ‘ಈಟಿಂಗ್‌’ ಕಾರ್ಯಕ್ರಮ ಮಾತ್ರ ಸುಸೂತ್ರವಾಗಿ ನಡೆಯುತ್ತೆ. ನಾನು ಎರಡನೇ ಕಾರ್ಯಕ್ರಮಕ್ಕೆ ಮಾತ್ರ ಲಾಯಕ್ಕು. ನಾನು ಸಂಘ ಸಂಸ್ಥೆ ಗಳಿಂದ ಬಲುದೂರ. ನಾನು ಕಾಫಿ ಬೆಳೆಗಾರರ ಒಕ್ಕೂಟದಲ್ಲೂ ಹಿಂಬದಿಯ ಬೆಂಚಿನವನು. ಅಪರೂಪಕ್ಕೆ ಸಕ್ರಿಯ ಪಾತ್ರ ವಹಿಸುವ ಎರಡು ಸಂಸ್ಥೆ ಗಳೆಂದರೆ 1) ಕರ್ನಾಟಕ ರೈಫಲ್‌ ಅಸ್ಸೋಸಿಯೇಶನ್‌ 2) ಸ್ಪಾರ್ಕ್‌ ಎಂಬ ರಾಕ್‌ ಕ್ಲೈಂಬಿಂಗ್‌ ಸಂಸ್ಥೆ. ಈಗ ಸ್ವಲ್ಪ ಕಣ್ಣಿನಲ್ಲಿ ಕ್ಯಾಟರಾಕ್ಟ್‌ ಬರುತ್ತಾ ಇದೆ ಮತ್ತು ಆಗಾಗ ಬರುತ್ತಿರುವ ತಲೆ ಸುತ್ತುವಿಕೆ ನನ್ನನ್ನು ಈ ಸಂಸ್ಥೆ ಗಳಿಂದ ದೂರವಿರಿಸಿವೆ. ಚಾರಣಮಾಡುವ ಹಾಗೂ ನದಿಗಳಲ್ಲಿ ಈಜುವ ಹವ್ಯಾಸದಿಂದ ಕೂಡಾ ಈಗ ನಾನು ದೂರ. ಈಗ ನಾನು ಫುಲ್‌ ಟೈಂ ನಮ್ಮ ಫ್ಯಾಮಿಲಿ ಕ್ಲಬ್‌ ಮೆಂಬರ್‌. ಎಲ್ಲಾದರೂ ಅಪರೂಪಕ್ಕೆ ಪಿಕ್ನಿಕ್‌ ಹೋಗಬೇಕಾದರೆ ಮಗಳಂದಿರು ಡ್ರೈವ್‌ ಮಾಡುತ್ತಾರೆ ನಾನು ಸರೋಜ ‘ಬ್ಯಾಕ್‌ ಸೀಟ್‌ ಡ್ರೈವರ್ಸ್‌’. ತಲೆಸುತ್ತುವ ಅಭ್ಯಾಸ ಇರುವುದರಿಂದ ನನ್ನ ಜೀಪ್‌ಗೆ ಒಬ್ಬ ಡ್ರೈವರ್‌ ಕೊಟ್ಟೇ ನನ್ನ ಮಡದಿಮಕ್ಕಳು ನನ್ನನ್ನು ತೋಟಕ್ಕೆ ಕಳುಹಿಸುತ್ತಿದ್ದಾರೆ. ತೋಟದಲ್ಲಿ ನಾನು ಸ್ವತಂತ್ರನಾಗಿ ಜೀಪ್‌, ಟ್ರಾಕ್ಟರ್‌ ಓಡಿಸುತ್ತೇನೆ. ತಲೆಸುತ್ತಿದರೆ ನಿಲ್ಲಿಸುವಷ್ಟು ವ್ಯವಧಾನ ಯಾವಾಗಲೂ ಇರುತ್ತೆ. ನನಗೆ ತಲೆ ಸುತ್ತುವಿಕೆ ಮಾತ್ರ ಇದೆ - ಕಣ್ಣು ಕತ್ತಲೆ ಬರುತ್ತಿಲ್ಲ ವೆಂದು ಹೆಮ್ಮೆಪಡುತ್ತಿದ್ದೇನೆ.

ಇಲ್ಲಿ ಕೆಸುವಿನ ಎಲೆ ಮಂಗಳೂರು ಸ್ಟೋರ್‌ ನಲ್ಲಿ ಯಾವಾಗಲೂ ಸಿಕ್ಕುತ್ತೆ. ಕಮರ್ಷಿಯಲ್‌ ಸ್ಟ್ರೀಟ್‌ ‘ವೂಡೀಸ್‌’ ರೆಸ್ಟೋರಂಟ್‌ನಲ್ಲಿ ವಾರಕ್ಕೆ ಮೂರುದಿನ ಪತ್ರೊಡೆ ಸಿಗುತ್ತೆ.

ಇಲ್ಲಿ ಸೆಖೆಗಾಲ. ಆದರೆ ಆಗಾಗ ಮಳೆಬರುತಿದೆ. ನಮ್ಮ ತೋಟದಲ್ಲಿ ಅಂದರೆ ಕಳಸದ ಸಮೀಪದ ಬಾಳೆಹೊಳೆಯಲ್ಲಿ ಈ ತನಕ ಏಳು ಇಂಚು ಮಳೆ ಆಯಿತು. ಪ್ರೀ ಮಾನ್ಸೂನ್‌ ಗೊಬ್ಬರದ ಡೋಸ್‌ ಕೊಟ್ಟೇ ಬಿಟ್ಟೆವು.

ಇನ್ನು ನನ್ನ ಬರಹದ ಬಗ್ಗೆ :

ನಾನು ಬರೆಯುತ್ತಿರುವುದು ಇಂಗ್ಲಿಷ್‌ನಲ್ಲಿ. ನನ್ನ ಮಡದಿ ಸರೋಜಳಿಗೆ ಇಂಗ್ಲಿಷ್‌ ಸ್ವಲ್ಪ ದೂರ. ಆವಳಿಗೆ ಆಂಗ್ಲ ಭಾಷೆ ಬರೆಯುವ ಇಚ್ಛೆ ಇಲ್ಲ; ಓದುವ ಆಸಕ್ತಿ ಇಲ್ಲವೇ ಇಲ್ಲ. ವಿದೇಶಗಳಿಗೆ ಹೋದಾಗ ಕೂಡಾ ಇಂಗ್ಲಿಷ್ನಲ್ಲೇ ನಕ್ಕು ಬೇಕಾದ ಕೆಲಸಗಳನ್ನು ಮಾಡಿಸುವ ಜಾಣೆ ಅವಳು. ‘ಇಷ್ಟು ಬರೀತೀರಿ ಸ್ವಲ್ಪ ಕನ್ನಡದಲ್ಲಿ ಹೇಳಬಾರದಾ?’ ಅನ್ನುತ್ತಾಳೆ. ಅವಳಿಗೋಸ್ಕರ ಕನ್ನಡಕ್ಕೆ ಮೂರು ಚಾಪ್ಟರ್‌ ತರ್ಜುಮೆ ಮಾಡಿ ಬರೆದೆ. ಆನಂತರ ತರ್ಜುಮೆ ಮಾಡಿಲ್ಲ. ಇನ್ನು ನನ್ನ ಮುದ್ದು ಮಗಳಂದಿರ ಕತೆ! ಕಾನ್ವೆಂಟಿನ ಏಳನೇ ಕ್ಲಾಸಿಗೇ ಕನ್ನಡ ಭಾಷೆ ಯನ್ನು ಬೇರು ಸಮೇತ ಕಿತ್ತು ಹುಗಿದು ಬಿಟ್ಟ ಧೀರೆಯರು ಅವರು. ಕನ್ನಡಕ್ಕೇ ನಕಾರಾತ್ಮಕ ಭಾವ ಬೆಳೆಸಿಕೊಂಡು, ಕನ್ನಡದಲ್ಲಿ ಕಂದಾಯ ಇಲಾಖೆಯ ನೋಟೀಸು ಅವರು ತೋಟದಲ್ಲಿರುವಾಗ ಬಂದರೆ, ರೈಟರನ್ನು ಕರೆದು ಓದಿಸುವ ಕನ್ನಡನಾಡಿನ ವೀರ ಕುವರಿಯರು ನಮ್ಮ ರಾಧಿಕಾ (30) ಮತ್ತು ರಚನಾ ( 26 ).

ನನ್ನ ನೆನಪಿನ ಬುತ್ತಿಯನ್ನು ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲು ಮುಖ್ಯ ಕಾರಣ ‘ನನ್ನ ಕುವರಿಯರು ಎಂದಾದರೂ ಒಂದು ದಿನ ನನ್ನ ಬರವಣಿಗೆ ಓದಿಯಾರೆಂಬ ಮಹತ್‌ ಆಶೆ’. ನನ್ನ ಬರವಣಿಗೆ ಓದಿ ‘ನಮ್ಮಪ್ಪ ಹೀಗಿದ್ದನು, ಹೀಗೆ ಬಾಳಿದನು’ ಎಂದು ಅರಿತರೆ ನನ್ನೀ ಸರ್ಕಸ್‌ ಸಾರ್ಥಕ. ಯಾಕೆಂದರೆ, ಹಾಲಿ ನನ್ನ ಮಕ್ಕಳಿಗೆ (ಎಲ್ಲಾ ಹುಡುಗ ಹುಡುಗಿಯರಂತೆ ‘ಪುರುಸೋತ್ತೇ ಇಲ್ಲ ’ ) ಇದು ನಮ್ಮ ಮನೆಯ ಸತ್ಯ. ನಾಚಿಕೆ ಬಿಟ್ಟು ಬರೆಯುತ್ತಿದ್ದೇನೆ. ನಮ್ಮ ಮನೆ ಯ ದೋಸೆ ಮಾತ್ರವಲ್ಲ , ನಮ್ಮಂತೆ ಕಾನ್ವೆಂಟ್‌ ಎಜುಕೇಶನ್‌ ಕೊಟ್ಟ ಮಧ್ಯಮ ವರ್ಗದ ಎಲ್ಲರ ಮನೆಯ ದೋಸೆಗಳೂ ತೂತೇ! ) ಈ ವಿಚಾರಕ್ಕೆ ಹೆಮ್ಮೆ ಪಡುವ ಪೋಷಕರೂ ಬಹಳ ಮಂದಿ ನಮ್ಮಲ್ಲಿದ್ದಾರೆ.

ಹಾಗಾಗಿ ನಾನು ಇಂಗ್ಲಿಷ್‌ನಲ್ಲೇ ಬರೆಯಬೇಕಾಯಿತು. ನನ್ನ ಇಂಗ್ಲಿಷ್‌ ಕಾನ್ವೆಂಟ್‌ ಭಾಷೆ ಅಲ್ಲ. ನಾನು ಉಡುಪಿಯ ಬೋರ್ಡ್‌ ಹೈ ಸ್ಕೂಲಲ್ಲಿ ಕಲಿತವನು. ತದನಂತರ ಉಡುಪಿಯ ಎಂ. ಜಿ. ಎಂ. ಕಾಲೇಜ್‌ನಲ್ಲಿ ಕಲಿಯಲು ನನಗೆಲ್ಲಿ ಪುರುಸೊತ್ತಿತ್ತು? ಯಾವಾಗಲೂ ಎನ್‌. ಸಿ. ಸಿ. , ಫುಟ್‌ ಬಾಲ್‌, ಜಿಮ್ನೇಸಿಯಂ ಮತ್ತು ಎಕ್ಸ್ಟ್ರಾ ಕರಿಕುಲರ್‌ ಅಕ್ಟಿವಿಟಿಯಾದ ವಿದ್ಯಾರ್ಥಿಗಳ ಪುಂಡಾಟಿಕೆಯ ಬೀದಿ ಜಗಳ ನಿಭಾಯಿಸುವ ಹೊಣೆ ನನ್ನ ಮೇಲಿತ್ತು. ಆ ಸಮಯ ನಮ್ಮ ನ್ಯಾಶನಲ್‌ ಲೇಂಗ್ವೇಜ್‌ ತುಳು ಭಾಷೆಯೇ ಆಗಬೇಕೆಂಬ ಚಳುವಳಿ ಪ್ರಾರಂಭಿಸುವ ಹುಮ್ಮಸ್ಸಿತ್ತು.

ನನಗೆ ತಿಳಿದಂತೆ ಮನುಷ್ಯನ ಭಾಷಾ ಜ್ಞಾನ ಕಲಿಯುವಿಕೆ ಹೈಸ್ಕೂಲ್ನಲ್ಲೇ ಪರಿಪೂರ್ಣತೆ ಹೊಂದುತ್ತದೆ. ಅದೇನೇ ಇರಲಿ, ಅದು ಸಂದಕಾಲದ ಮಾತು.

ಅಂತೂ ನಾನು ಇಂಗ್ಲಿಷ್ನಲ್ಲೇ ಬರೆದೆ. ಬರೆಯುತ್ತಲೂ ಇದ್ದೇನೆ. ಏ- 4 ಪುಟಗಳಲ್ಲಿ 12 ನೇ ಫಾಂಟ್‌ ಉಪಯೋಗಿಸಿ 425 ಪುಟ ಈತನಕ ಬರೆದಿದ್ದೇನೆ.

ನಿಮಗೆ ನನ್ನ ಬರಹಗಳನ್ನು ಓದುವ ಹಾಗೂ ತಿದ್ದುವ ಛಾತಿಯಿದ್ದರೆ ಕಳುಹಿಸಿಕೊಡಬಲ್ಲೆ . ನೀವು ತಿದ್ದಿಕೊಟ್ಟರೆ ನಾನು ಉಪಕೃತ.

ಈ ಕಾಗದವನ್ನು ನೀವು ಶ್ರೀ ಡಾ. ನಟರಾಜರೊಡನೆ ಹಂಚಿಕೊಂಡರೆ ನನ್ನ ಅಭ್ಯಂತರವಿಲ್ಲ.

ನಿಮ್ಮ ತರಂಗದ ಬರಹ ಚೆನ್ನಾಗಿದೆ.

ವ್ಯಕ್ತಿ - ವ್ಯಕ್ತಿತ್ವದ ‘ಎಸ್ಟೀಂ’ ನನ್ನ ಗ್ರಾಮೀಣ ಭಾಷೆಯ ‘ಕೋಡು’ ಎಂಬ ಪದಕ್ಕೆ ಹತ್ತಿರವಾಗಿದೆ ಅನಿಸುತ್ತದೆ.

ನಿಮ್ಮ ‘ಖಬ್ರಿ’ ಬಹಳ ಒಳ್ಳೇ ಐಡಿಯಾ . ಪ್ರಕಟಿಸುತ್ತಾ ಇರಿ. ಏಳು ಸಮುದ್ರಗಳ ಆಚೆ ಇದ್ದರೂ, ತಮ್ಮವರ ಮನೆಯ ಹರಟೆ ಮಾತಿನಲ್ಲಿ ನಿತ್ಯ ಭಾಗಿಯಾಗುವ ಪ್ರಯತ್ನ ತುಂಬಾ ಶ್ಲಾಘನೀಯ. ನಿನ್ನೆ ಮಳೆ ಬಂದು ನಾಲ್ಕು ಅಡಿಕೆ ಮರ ಉರುಳಿಸಿದ ಸಂಗತಿ; ಬುಟ್ಟಿ ತುಂಬಾ ಮಾವಿನ ಹಣ್ಣು ಆರಿಸಿ ತಂದು, ಇಂದು ಮಾವಿನ ಹಣ್ಣಿನ ಹುಳಿಮಾಡಿದ ಸಂಗತಿ; ನಿಮಗೂ ಗೊತ್ತಾದರೆ ಎಷ್ಟು ಚೆನ್ನ!

ತಮ್ಮ ಶ್ರೀಮತಿಯವರಿಗೆ ಮತ್ತು ವತ್ಸ ಚಿ. ಸೃಜನ್‌ ಇವರುಗಳಿಗೆ ಹರಕೆಗಳು.

ಇಂತೀ ಸಲಾಮು (salutations!)

- ಪೆಜತ್ತಾಯ, ಬೆಂಗಳೂರು

pejathayas@hotmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more