ಪ್ರಯಾಣಿಕರಿಗೆ ಗುಡ್‌ನ್ಯೂಸ್; ಬೆಂಗಳೂರು-ಹೌರಾ ಸೇರಿ 3 ರೈಲುಗಳ ಸಂಚಾರ ವೇಳಾಪಟ್ಟಿ ಯಥಾಸ್ಥಿತಿ
ಬೆಂಗಳೂರು: ಆಗ್ನೇಯ ರೈಲ್ವೆಯ ಖರಗ್‌ಪುರ ವಿಭಾಗದ ರುಪ್ಸಾ ಯಾರ್ಡ್‌ನಲ್ಲಿ ಯಾರ್ಡ್ ನವೀಕರಣ ಕಾರ್ಯದ ಕಾರಣದಿಂದಾಗಿ ವಿವಿಧ ರೈಲುಗಳ ಸಂಚಾರ ಸೇವೆಯಲ್ಲಿ ತೊಂದರೆ ಆಗಿತ್ತು. ಬೆಂಗಳೂರಿನಿಂದ ಹೊರಡುವ ಹೌರಾ ಎಕ್ಸ್‌ಪ್ರೆಸ್ ರೈಲು ಸೇರಿ 3 ರೈಲುಗಳ ಸಂಚಾರ ವಿಳಂಬ, ನಿಯಂತ್ರಣ ಮಾಡಲಾಗುತ್ತಿತ್ತು. ಇದೀಗ ಆ ಎಲ್ಲ ರೈಲುಗಳನ್ನು ವೇಳಾಪ್ಟಟಿಯಂತೆ ಪುನರ್ ಸ್ಥಾಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸದರಿ ಮೂರು ರೈಲುಗಳ ಮರು ವೇಳಾಪಟ್ಟಿ ಮತ್ತು ನಿಯಂತ್ರಣಕ್ಕಾಗಿ ಈ ಹಿಂದೆ ತಿಳಿಸಲಾಗಿದ್ದ ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ. ಆಯಾ ಪ್ರಯಾಣ ಪ್ರಾರಂಭವಾಗುವ ದಿನಾಂಕ, ಸಮಯದಂತೆ, ನಿಲ್ದಾಣಗಳಿಂದ ಸೇವೆ ನೀಡಲಿವೆ. ಅವುಗಳ ವಿವರ ಇಲ್ಲಿದೆ.

ಮೂರು ರೈಲುಗಳು ಯಾವುವು?
* ಹೌರಾ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12245) ಇಂದು ಮೇ 16 ಮತ್ತು 17 ರಂದು ಪ್ರಾರಂಭವಾಗಲಿದೆ. ಈ ರೈಲಿನ ಪ್ರಯಾಣ ಮೊದಲು ಕ್ರಮವಾಗಿ 60 ನಿಮಿಷ ಮತ್ತು 120 ನಿಮಿಷಗಳ ಕಾಲ ಮರು ನಿಗದಿಪಡಿಸಲಾಗಿದೆ. ಅದರಂತೆ ಸಂಚಾರ ಮಾಡಲಿದೆ.
* ಎಸ್‌ಎಂವಿಟಿ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಇದೇ ಮಾರ್ಗದಲ್ಲಿ ಮೊದಲು 120 ನಿಮಿಷಗಳ ನಿಯಂತ್ರಣಕ್ಕಾಗಿ ಸೂಚಿಸಲಾಗಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿಗದಿಯಂತೆ ಸಂಚರಿಸಲಿದೆ.
* ಎಸ್‌ಎಂವಿಟಿ ಬೆಂಗಳೂರು-ಕಾಮಾಖ್ಯ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12551) ಇಂದು 16ರಂದು ಪ್ರಾರಂಭವಾಗುವ ಪ್ರಯಾಣವನ್ನು ಈ ಹಿಂದೆ ಮಾರ್ಗದಲ್ಲಿ 180 ನಿಮಿಷಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಈ ಮೇಲಿನ ರೈಲುಗಳ ಹಿಂದಿನ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ರೈಲುಗಳು ಅವುಗಳ ನಿಗದಿತ ಸಮಯದ ಪ್ರಕಾರ ಚಲಿಸಲಿವೆ ಎಂದು ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು-ವಿಜಯಪುರ ರೈಲು ಸಂಚಾರಕ್ಕೆ ಅನುಮೋದನೆ
ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರಿನ ಯಶವಂತಪುರದಿಂದ ವಿಜಯಪುರವರೆಗೆ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದಾರೆ. ಈ ರೈಲು ಹುಬ್ಬಳ್ಳಿ ಜಂಕ್ಷನ್ ಪ್ರವೇಶಿಸದೇ ಹುಬ್ಬಳ್ಳಿ ಬೈಪಾಸ್ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರ ತಲುಪಲಿದೆ. ಮುಂದಿನ ಒಂದು ತಿಂಗಳು ಜೂನ್ 28ರವರೆಗೆ ವಾರಾಂತ್ಯದಲ್ಲಿ ಸಂಚರಿಸಲಿದೆ.
ಶನಿವಾರ ಯಶವಂತಪುರದಿಂದ ಹೊರಡಲಿದ್ದು, ಭಾನುವಾರ ಬೆಳಗ್ಗೆ ವಿಜಯಪುರ ತಲುಪುತ್ತದೆ. ಮರಳಿದ ಅದೇ ದಿನ ಸಂಜೆ ವಿಜಯಪುರ ನಿಲ್ದಾಣದಿಂದ ಹೊರಟು ರಾಜಧಾನಿ ಬೆಂಗಳೂರಿಗೆ ಸೋಮವಾರ ಬೆಳಗ್ಗೆ ಬರಲಿದೆ.
ವಿಜಯಪುರ ರೈಲಿನ ನಿಲುಗಡೆ ವಿವರ
19 ಬೋಗಿಗಳ ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ಎಂಬಿ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ. ಜೊತೆಗೆ ಈ ರೈಲನ್ನು ಶಾಶ್ವತವಾಗಿ ಕಾರ್ಯಾಚರಣೆ ಮಾಡುವಂತೆ ಅವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಮುಖೇನ ಮನವಿ ಮಾಡಿಕೊಡಿದ್ದಾರೆ.














Click it and Unblock the Notifications