ಬೇಸಿಗೆ ರಜೆಯಲ್ಲಿ ತಪ್ಪದೇ ಭೇಟಿ ನೀಡಬೇಕಾದ ಕರ್ನಾಟಕದ 5 ಸುಂದರ ಪ್ರವಾಸಿ ತಾಣಗಳು
ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಅನೇಕರು ಪ್ರವಾಸದ ಯೋಜನೆ ರೂಪಿಸುತ್ತಾರೆ. ಪ್ರಕೃತಿ ಸೌಂದರ್ಯ, ಸಮುದ್ರ ಕಡಲ ತೀರ, ದೇವಸ್ಥಾನಗಳು ಹಾಗೂ ಸಾಹಸ ಚಟುವಟಿಕೆಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಬೇಕೆಂದರೆ ಕರ್ನಾಟಕದ ಕರಾವಳಿ ಭಾಗಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಇಲ್ಲಿವೆ ಬೇಸಿಗೆ ರಜೆಯಲ್ಲಿ ತಪ್ಪದೇ ಭೇಟಿ ನೀಡಬೇಕಾದ ಕರ್ನಾಟಕದ 5 ಜನಪ್ರಿಯ ಪ್ರವಾಸಿ ತಾಣಗಳು.
1. ಮಂಗಳೂರು
ಅರಬ್ಬಿ ಸಮುದ್ರ ತೀರದಲ್ಲಿರುವ ಮಂಗಳೂರು ತನ್ನ ಸುಂದರ ಕಡಲತೀರಗಳು ಮತ್ತು ಧಾರ್ಮಿಕ ತಾಣಗಳಿಂದ ಪ್ರಸಿದ್ಧಿ ಪಡೆದಿದೆ. ತಣ್ಣೀರ್‌ಭಾವಿ ಬೀಚ್ ಮತ್ತು ಪಣಂಬೂರು ಬೀಚ್ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಇಲ್ಲಿ ಸೂರ್ಯಾಸ್ತದ ಮನಮೋಹಕ ದೃಶ್ಯವನ್ನು ನೋಡಬಹುದು.
ಇದೇ ವೇಳೆ, ಸೇಂಟ್ ಆಲೋಶಿಯಸ್ ಚಾಪೆಲ್ ಮತ್ತು ಮಿಲಾಗ್ರಿಸ್ ಚರ್ಚ್‌ಗಳಂತಹ ಐತಿಹಾಸಿಕ ಸ್ಥಳಗಳು ವಿಶೇಷ ಗಮನ ಸೆಳೆಯುತ್ತವೆ. ಪ್ರಕೃತಿ ಪ್ರಿಯರಿಗಾಗಿ ಬೆಳವಾಯಿಯಲ್ಲಿರುವ ಬಟರ್‌ಫ್ಲೈ ಪಾರ್ಕ್ ಉತ್ತಮ ತಾಣವಾಗಿದೆ.

2. ಉಡುಪಿ
ಮಂಗಳೂರಿನಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿರುವ ಉಡುಪಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ನಗರವಾಗಿದೆ. 13ನೇ ಶತಮಾನದಲ್ಲಿ ನಿರ್ಮಿಸಲಾದ ಶ್ರೀಕೃಷ್ಣ ದೇವಸ್ಥಾನ ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಸೆಳೆಯುತ್ತದೆ.
ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ನಡೆಯುವ "ಪಿಲಿ ವೇಷ" (ಹುಲಿ ವೇಷ) ಜನಪದ ನೃತ್ಯ ಇಲ್ಲಿ ವಿಶೇಷ ಆಕರ್ಷಣೆಯಾಗಿದೆ. ಉಡುಪಿ ತನ್ನ ಸಸ್ಯಾಹಾರಿ ಆಹಾರ ಪದ್ಧತಿಗೂ ಪ್ರಸಿದ್ಧಿ ಪಡೆದಿದೆ.
3. ಮುರುಡೇಶ್ವರ
ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಅರಬ್ಬಿ ಸಮುದ್ರದ ತೀರದಲ್ಲಿರುವ ಮುರುಡೇಶ್ವರವು ತನ್ನ ಭವ್ಯವಾದ ಶಿವಮೂರ್ತಿಯಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿ ಇರುವ ಶಿವನ ಪ್ರತಿಮೆ ವಿಶ್ವದ ಎರಡನೇ ಅತಿ ಎತ್ತರದ ಶಿವಮೂರ್ತಿಗಳಲ್ಲಿ ಒಂದಾಗಿದೆ.
ಕಂದುಕ ಬೆಟ್ಟದ ಮೇಲಿರುವ ಮುರುಡೇಶ್ವರ ದೇವಸ್ಥಾನ ಮೂರು ಕಡೆ ಸಮುದ್ರದಿಂದ ಸುತ್ತುವರಿದಿದ್ದು ಮನಸೆಳೆಯುವ ದೃಶ್ಯ ನೀಡುತ್ತದೆ. ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್ ಸೇರಿದಂತೆ ಹಲವು ಸಾಹಸ ಚಟುವಟಿಕೆಗಳನ್ನು ಅನುಭವಿಸಬಹುದು.
4. ಗೋಕರ್ಣ
ಗೋಕರ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ಮತ್ತು ಕಡಲತೀರದ ತಾಣವಾಗಿದೆ. ಗಂಗಾವಳಿ ಮತ್ತು ಅಘನಾಶಿನಿ ನದಿಗಳ ನಡುವೆ ಇರುವ ಗೋಕರ್ಣ ಶಾಂತ ವಾತಾವರಣಕ್ಕಾಗಿ ಹೆಸರುವಾಸಿಯಾಗಿದೆ. ಗೋವಾದ ಗದ್ದಲದಿಂದ ದೂರ ಇರುವ ಈ ತಾಣ ಸ್ವಚ್ಛ ಕಡಲತೀರಗಳು ಮತ್ತು ಸಾಹಸ ಕ್ರೀಡೆಗಳಿಗೆ ಜನಪ್ರಿಯವಾಗಿದೆ.
ಸರ್ಫಿಂಗ್, ಪ್ಯಾರಾಸೈಲಿಂಗ್, ಸ್ನಾರ್ಕೆಲಿಂಗ್ ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದು. ಮಹಾಬಲೇಶ್ವರ ದೇವಸ್ಥಾನವೂ ಭಕ್ತರ ಪ್ರಮುಖ ಆಕರ್ಷಣೆಯಾಗಿದೆ.
5. ಕಾರವಾರ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾದ ಕಾರವಾರ, ಐತಿಹಾಸಿಕ ಹಿನ್ನೆಲೆ ಮತ್ತು ನೈಸರ್ಗಿಕ ಸೌಂದರ್ಯ ಎರಡನ್ನೂ ಹೊಂದಿರುವ ಕಾರವಾರ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಕಾಳಿ ನದಿಯ ತೀರದಲ್ಲಿರುವ ಈ ಪ್ರದೇಶದಲ್ಲಿ ಸುಂದರ ಕಡಲತೀರಗಳು ಮತ್ತು ದ್ವೀಪಗಳನ್ನು ನೋಡಬಹುದು.
ದೇವಬಾಗ್ ಬೀಚ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿ ಡಾಲ್ಫಿನ್ ವೀಕ್ಷಣೆ, ಬೋಟ್ ರೈಡ್ ಮತ್ತು ವಾಟರ್ ಸ್ಪೋರ್ಟ್ಸ್‌ಗಳನ್ನು ಆನಂದಿಸಬಹುದು. ಸಮೀಪದ ದಾಂಡೇಲಿ ಕಾಡುಪ್ರದೇಶವೂ ಸಾಹಸ ಪ್ರಿಯರನ್ನು ಸೆಳೆಯುತ್ತದೆ.














Click it and Unblock the Notifications