• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಶಾಲೆಯಲ್ಲಿ ಕೆಲವು ರಸನಿಮಿಷಗಳು!

By Staff
|

* ಶ್ರೀವತ್ಸ ಜೋಶಿ

Fun in Kitchen‘ವಿವಾಹ ಭೋಜನವಿದು...ವಿಚಿತ್ರ ಭಕ್ಷಗಳಿವು...’ ಎಂಬ ರಸವತ್ತಾದ ಚಿತ್ರಗೀತೆಯಾಗಲೀ, ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ....’ ಎಂಬ ಪುರಂದರದಾಸರ ಭಕ್ತಿಗೀತೆಯಾಗಲೀ - ವಿವಿಧ ತಿಂಡಿ ತಿನಿಸುಗಳ ಉಲ್ಲೇಖ ಬರುವ ಈ ಹಾಡುಗಳನ್ನು ಕೇಳಿದಾಗ ಬಾಯಲ್ಲಿ ನೀರೂರುವುದಿಲ್ಲವೇ? ಈ ಸಲದ ವಿಚಿತ್ರಾನ್ನದಲ್ಲೂ ತಿಂಡಿ-ತಿನಿಸಿನ ಉಲ್ಲೇಖವುಳ್ಳ ಕೆಲವು ಮಿನಿಗವನಗಳು, ಅಣಕವಾಡುಗಳು ಇತ್ಯಾದಿ ಒಂದು ಕಲಸುಮೇಲೋಗರ ಇದೆ. ಈ ರಸಪಾಕದ ರುಚಿನೋಡುತ್ತೀರಾ?

*

ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು ಎಷ್ಟು ದಿನ ಅಂತ ಸಹಿಸೋದು? ನಮ್ಮ ಇಂಜನಿಯರಿಂಗ್‌ ಹಾಸ್ಟೇಲಲ್ಲಂತೂ ಉಪ್ಪಿಟ್ಟಿಗೆ ‘ಕಾಂಕ್ರೀಟ್‌’ ಎಂದು ಉಪನಾಮವಿತ್ತು. ಬಹುಷಃ ಸಿವಿಲ್‌ ಇಂಜನಿಯರಿಂಗ್‌ನವರು ಆ ಹೆಸರಿಟ್ಟದ್ದು. ದಿನಾ ಬೆಳಿಗ್ಗೆ ಉಪ್ಪಿಟ್ಟು ತಿನ್ನಬೇಕಾದ ಬಡಪಾಯಿ ಕೊನೆಗೂ ದೇವರಲ್ಲಿ ಮೊರೆಯಿಡುತ್ತಾನೆ, ಸುಪ್ರಭಾತದ ಭಕ್ತಿಪರವಶತೆಯಾಂದಿಗೆ:

ಉಪ್ಪಿಟ್ಟೊ ಉಪ್ಪಿಟ್ಟು ಗೋವಿಂದ ಉಪ್ಪಿಟ್ಟು ಗರುಡಧ್ವಜ ಉಪ್ಪಿಟ್ಟು ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ।।

ಉಪ್ಪಿಟ್ಟಿನ ಬಗ್ಗೆಯೇ ಇನ್ನೊಂದು: ಕಾಳಿದಾಸ ಉಪಮಾಲಂಕಾರಕ್ಕೆ ಪ್ರಸಿದ್ಧ. ‘ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಮ್‌। ದಂಡಿನಃ ಪದಲಾಲಿತ್ಯಮ್‌ ಮಾಘೕ ಸಂತಿ ತ್ರಯೋ ಗುಣಾಃ ’ ಎಂದು ಪ್ರಖ್ಯಾತಿ. ಕಾಳಿದಾಸನಿಗೆ ‘ಉಪಮಾ’ (ಅದೇ, ಬೆಂಗಳೂರು ಕಡೆಯ ಖಾರಾಭಾತ್‌) ವಿಷಯ ಗೊತ್ತಿತ್ತೇ?

ರಂಗಣ್ಣನಿಗೆ ಕಾಫಿ ಕುಡಿಯುವ ಹುಚ್ಚು. ಗಂಟೆಗೊಮ್ಮೆ ಒಂದರ್ಧ ಕಪ್‌ ಆದರೂ ಕಾಫಿ ಆಗಬೇಕು. ಅವನ ತಾಯಿಯಾದರೋ ಹೆಚ್ಚು ಕಾಫಿ ಕುಡಿಯುವುದು ಒಳ್ಳೆಯದಲ್ಲ ಎಂದು ರಂಗನಿಗೆ ಉಪದೇಶ ಮಾಡಿ ಮಾಡಿ ಸೋತುಹೋಗಿದ್ದರು. ಕಾಫಿಗಿಂತ ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು ಎಂಬುದನ್ನು ಆಮೇಲೆ ಅವರು ದಾಸೋಕ್ತಿಯಂತೆ ಹೇಳುತ್ತಿದ್ದರು. ರಂಗನಿಗದು ಅರ್ಥವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ!

ಕಲಿಯುಗದಲಿ ಕರಿಕಾಪಿಯ ಕುಡಿದರೆ .... ಕುರಿಕಜ್ಜಿಗಳು ಏಳುವವೋ ಮಂಗಾ । ಸುಲಭದ ಮುಕುತಿಗೆ ಸುಲಭವೆಂದೆಣಿಸುವ ... ಜಲಪಾನವನೇ ನೀ ಮಾಡುತಿರೋ ರಂಗಾ।।

ಕಾಫಿ, ಚಹಾ ಭೂಲೋಕವಾಸಿಗಳಿಗೆ ಅಮೃತವಿದ್ದಂತೆ. ಸಕಲ ವೇದಾಂತಸಾರವಾದ ಭಗವದ್ಗೀತೆಯಲ್ಲೂ ಚಹ, ಚಹಾ ಅಥವಾ ಚಾ ಕುರಿತ ಉಲ್ಲೇಖ ನಿಮಗೆ ಗೊತ್ತೇ? ಗೀತೆಯ ಹದಿನೈದನೆಯ ಅಧ್ಯಾಯದ ಈ ಹದಿನೈದನೆಯ ಶ್ಲೋಕವನ್ನು ಪಂಡಿತರ ದೃಷ್ಟಿಯಲ್ಲಲ್ಲದೆ ಸ್ವಲ್ಪ punಡಿತರ ದೃಷ್ಟಿಯಿಂದ ಗಮನಿಸಿ. stove ಉರಿಸಿ ಚಾ ಮಾಡಿ ಕುಡಿ ಎಂದು ಅರ್ಜುನನಿಗೆ ಶ್ರೀಕೃಷ್ಣ ಉಪದೇಶಿಸಿದಂತಿದೆ! ಬಹುಶಃ ಯುದ್ಧ ಮಾಡಲೊಪ್ಪದ ಅರ್ಜುನನನ್ನು, ಪರೀಕ್ಷೆಗೆ ಓದಲೊಪ್ಪದ ಮಗನಿಗೆ ಅಮ್ಮ ಚಾ ಮಾಡಿ ಕೊಟ್ಟು ಪುಸಲಾಯಿಸಿದಂತೆ, ಶ್ರೀಕೃಷ್ಣ ಪುಸಲಾಯಿಸಿರಬೇಕು.

Shrivatsa joshiಸರ್ವಸ್ಯ ‘ಚಾ’ಹಂ ಹೃದಿ ಸನ್ನಿವಿ stove। ಮತ್ತಃ ಸ್ಮೃತಿರ್ಜ್ಞಾನಮಪೋಹನಂ ‘ಚ’। ವೇದೈಶ್ಚ ಸರ್ವೈರಹಮೇವ ವೇದ್ಯೋ। ವೇದಾಂತಕೃದ್ವೇದ ವಿದೇವ ’ಚಾ’ಹಂ ।।

ಭಗವದ್ಗೀತೆಯ ಮಾತಾಯಿತು. ಉಪನಿಷತ್‌ಗಳಲ್ಲಿ ಗಂಜಿ-ಚಟ್ನಿ !

ನಾವು ಉಜಿರೆಯ ಸಿದ್ಧವನ ಗುರುಕುಲದಲ್ಲಿ ಪಿಯೂಸಿ ವಿದ್ಯಾಭ್ಯಾಸಕ್ಕಿದ್ದ ಸಮಯ. ಹಾಸ್ಟೇಲಲ್ಲಿ ದಿನಾ ಬೆಳಿಗ್ಗೆ ಗಂಜಿ ಮತ್ತು ಚಟ್ನಿ. ಅದರ ಮೊದಲು ಉಪನಿಷತ್‌ನ ಕೆಲವು ಶ್ಲೋಕಗಳನ್ನು ಹೇಳುವ ಕ್ರಮ. ಅವುಗಳಲ್ಲೊಂದು ‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಮ್‌ ಜಗತ್‌.... ತೇನ ತ್ಯಕ್ತೇನ ಭುಂಜೀಥಾ ಮಾಗೃಧಃ ಕಸ್ಯಸ್ವಿದ್ಧನಮ್‌....’ ಎಂಬುದನ್ನು ನಾವು

‘ತೇನ ತ್ಯಕ್ತೇನ ಗಂಜೀ ತಾ ಮಾಗೃಧಃ ಕಸ್ಯ ಚಟ್ನೀ ತಾ... ಎಂದು ಬದಲಾಯಿಸಿದ್ದೆವು!

ದಟ್ಸ್‌ಕನ್ನಡದ ಅಡುಗೆಮನೆ ಸೆಕ್ಷನ್‌ನಲ್ಲಿ ‘ಕ್ಯಾರೆಟ್‌ ಹಲವಾ’ ಓದಿದ ಮೇಲೆ ಕ್ಯಾರೆಟ್‌ ಹಲ್ವಾ ತಿನ್ನಬೇಕೆಂಬ ಆಸೆಯಾದ ಗುಂಡಣ್ಣ ಅವತ್ತೇ ಸಂಜೆ ಮನೆಗೆ ವಾಪಸಾಗುತ್ತ ಮಾರ್ಕೇಟಿನಿಂದ ತಾಜಾ ಕ್ಯಾರೆಟ್‌, ತಾಜಾ (ಹಾಗೆಂದು ಬಾಟಲಿಯ ಮೇಲಿನ ಲೇಬಲ್‌ ಹೇಳುತ್ತಿತ್ತು) ನಂದಿನಿ ತುಪ್ಪ ಮತ್ತು ಸಕ್ಕರೆ ಎಲ್ಲವನ್ನೂ ತಂದು ಮಡದಿಯ ಮುಂದೆ ಸುರಿದ. ನಾಳೆ ಸಂಜೆ ಆಫೀಸಿನಿಂದ ಬಂದಾಗ ಹಲ್ವಾ ಮಾಡಿಡು ಎಂದು ಗುಂಡಾಜ್ಞೆಯನ್ನೂ ಇತ್ತ. ಹೆಂಡತಿಯ ಅಪ್ಪ ಅಂದರೆ ತನ್ನ ಮಾವ ಮನೆಯಲ್ಲಿರುವುದರಿಂದ, ತನ್ನ ಮೇಲಿನ ಪ್ರೀತಿಯಿಂದಲ್ಲದಿದ್ದರೂ ಅಪ್ಪನ ಮೇಲಿನ ಗೌರವದಿಂದ ಹಲ್ವಾ ಮಾಡಿಡಬಹುದೆಂದುಕೊಂಡಿದ್ದ ಗುಂಡ ಮಾರನೆ ದಿನ ಆಫೀಸಿಂದ ಬರುವಾಗ ಹೆಂಡತಿ ಇನ್ನೂ ಟೀವಿ ನೋಡುತ್ತಲೇ ಇದ್ದಳು. ಗುಂಡನಿಂದ ಗುಂಡು ಹಾರಿದಂತೆ ಒಂದು ಕವನ:

ಕ್ಯಾರೆಟ್‌ ಸಕ್ಕರೆ ನಂದಿನಿ ತುಪ್ಪ । ಮಡಗಿದ್ದೆ ನಿನ್ನೇಯೇ ಅಲ್ವಾ? ಕ್ಯಾರೇ ಇಲ್ಲ ಎದುರಿಗಿದ್ದರೂ ಅಪ್ಪ । ಮಾಡಿಟ್ಟೀಯೇನೇ ಹಲ್ವಾ ??

ಅಡುಗೆಭಟ್ಟ ಸುಬ್ರಾಯ ಭಟ್ಟರಿಗೆ ದೃಷ್ಟಿ ಸ್ವಲ್ಪ ಮಂದ. ಜೀರಿಗೆ ಬದಲು ಬಡೇಸೋಪು, ಸಾಸಿವೆ ಬದಲು ಎಳ್ಳು ಇತ್ಯಾದಿ ‘ಗಡಿಬಿಡಿ’ಗಳಾಗುವುದಿದೆ.

ಸುಬ್ರಾಯ ಭಟ್ಟರು ಆಲೂಬೋಂಡಾ ಮಾಡಿಕೊಡಲು ಹೋಗಿದ್ದ ಮನೆಯಲ್ಲಿ ಅಡುಗೆಮನೆ ಮೂಲೆಯಲ್ಲೇ ಒಂದು ಕವಾಟಿನಲ್ಲಿ ಪ್ಲಾಸ್ಟಿಕ್‌ ಡಬ್ಬವೊಂದರಲ್ಲಿ ವಾಷಿಂಗ್‌ ಪೌಡರ್‌ ಇತ್ತು. ಅನಂತರ ಏನಾಯಿತು?

ವಾಷಿಂಗ್‌ ಪೌಡರ್‌ ನಿರ್ಮಾ। ಅಡಿಗೆಭಟ್ಟನ ಕರ್ಮ।। ಕಡ್ಲೆಹಿಟ್ಟು ಎಂದು। ನಿರ್ಮಾ ಪೌಡರ್‌ ಹಾಕಿ। ಬೋಂಡ ತಯಾರಿಸಿದ ಮರ್ಮ। ಕರ್ಮಕ್ಕೆ ಕಾರಣವೀ ನಿರ್ಮಾ।।

ಹರಟೆ ಸಾಕು. ಜಾಸ್ತಿ ತಿಂಡಿ ತಿಂದರೆ ಹೊಟ್ಟೆನೋವಾಗಬಹುದು. ನಿಮ್ಮ ಬಾಯಿಯಲ್ಲಿ ರವೆಯುಂಡೆಯ ಸಿಹಿಯ ನೀರೂರಿಸಲು ಮತ್ತು ರಾಷ್ಟ್ರಗೀತೆಯ ಉಲ್ಲೇಖದೊಂದಿಗೆ ಮುಕ್ತಾಯಕ್ಕಾಗಿ ಈ ರಚನೆ.

ರವೀಂದ್ರರ ರಾಷ್ಟ್ರಗೀತೆಯಲ್ಲಿ ದ್ರಾವಿಡ ಉತ್ಕಲ ವಂಗ...ರವೆ ಉಂಡೆಯ ರಸಸ್ವಾದದಲ್ಲಿ ದ್ರಾಕ್ಷಿ ಏಲಕ್ಕಿ ಲವಂಗ...!

ವಿಚಿತ್ರಾನ್ನದ ಈ ಪೊಟ್ಟಣದಿಂದ ನಿಮ್ಮ ಹೊಟ್ಟೆ ತುಂಬಿದರೆ, ಅಥವಾ ತುಂಬದಿದ್ದರೂ, ಪ್ರತಿಕ್ರಿಯೆ ತಿಳಿಸುತ್ತ ಬರೆಯಿರಿ - sjoshim@hotmail.com

ವಿಚಿತ್ರಾನ್ನದ ಓದುಗರಿಗೆ ಹೊಸ ವರ್ಷದ ಶುಭಾಶಯಗಳು

- ಶ್ರೀವತ್ಸ ಜೋಶಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X