• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆ ಪ್ರಪಂಚದ ಮೇಲೊಂದು ಎಕ್ಸ್‌-ರೇ

By Staff
|

*ಶ್ರೀವತ್ಸ ಜೋಶಿ

Srivathsa Joshiಮನುಷ್ಯನಿಗೆ, ಇತರ ಪ್ರಾಣಿ-ಪಕ್ಷಿಗಳಿಗಿಂತ ಹೆಚ್ಚಿಗೆ, ದೇವರು ಕರುಣಿಸಿದ್ದು ಆಲೋಚನಾಶಕ್ತಿ, ಕಲ್ಪನಾಶಕ್ತಿ ; ಹಾಗೆಯೇ ರೀಸನಿಂಗ್‌ ಪವರ್‌. ಈ ಕಲ್ಪನಾ ಶಕ್ತಿ, ರೀಸನಿಂಗ್‌ ಪವರ್‌ಗಳ ಫಲಶ್ರುತಿಯೇ ‘ರೆ’ ಪ್ರಪಂಚ. ‘ಆದರೆ, ಹೋದರೆ, ಅಜ್ಜಿಗೆ ಮೀಸೆ ಬಂದರೆ, ಎತ್ತು ಕರು ಹಾಕಿದರೆ, ಕೋಣ ಹಾಲು ಕೊಟ್ಟರೆ.....’ ಅಂತ ಏನೋ ಒಂದು ಬಾಲ್ಯದಲ್ಲಿ ಕೇಳಿದ ನೆನಪು. ಇದರಲ್ಲಿ, ಅಜ್ಜಿಗೆ ಮೀಸೆ ಬರುವುದಿಲ್ಲ, ಎತ್ತು ಕರು ಹಾಕಲಾರದು, ಕೋಣ ಹಾಲು ಕೊಡದು. ಆದರೂ ಒಂದು ವೇಳೆ ಇದೆಲ್ಲ ಆದರೆ.... ಎಂಬುದು ಈ ಮಾತಿನ ಇಂಗಿತ.

ಮೊದಲನೆಯದಾಗಿ, ‘ರೆ’ ಪ್ರಪಂಚವನ್ನು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ನೋಡೋಣ. ಕನಕದಾಸರು, ವ್ಯಾಸರಾಯರ ಶಿಷ್ಯರಾಗಿದ್ದ ಕಾಲ. ಗುರುಕುಲದ ಎಲ್ಲ ವಿದ್ಯಾರ್ಥಿಗಳಿಗೂ ಗುರುವರ್ಯರು ಒಂದು ದಿನ ಒಂದು ಪ್ರಶ್ನೆ ಕೇಳಿದರು: ‘ನಿಮ್ಮಲ್ಲಿ ಯಾರು ಸ್ವರ್ಗಕ್ಕೆ ಹೋಗಬಲ್ಲಿರೆಂದುಕೊಂಡಿದ್ದೀರಿ?’. ಶಿಷ್ಯವೃಂದದಲ್ಲಿ ಗುಸುಗುಸು ಪಿಸುಪಿಸು. ಒಬ್ಬನಿಗೂ ತಾನು ಸ್ವರ್ಗಕ್ಕೆ ಹೋಗಬಲ್ಲೆ ಎಂಬ ದೃಢವಾದ ಆತ್ಮವಿಶ್ವಾಸವಿಲ್ಲ. ಏಕೆಂದರೆ ಎಲ್ಲರೂ ಸಣ್ಣಪುಟ್ಟ ಪಾಪ ಮಾಡಿದವರೇ. ಕನಕ ಒಬ್ಬನೇ ಕೈ ಎತ್ತಿದ!

‘ಎಲಾ ಇವನ, ಎಷ್ಟು ಧೈರ್ಯದಿಂದ ಹೇಳುತ್ತಿದ್ದಾನಲ್ಲ ತಾನು ಸ್ವರ್ಗ ಸೇರಬಲ್ಲೆ ಎಂದು!’ - ಗುರುಗಳಿಗೂ, ಇತರ ಶಿಷ್ಯರಿಗೂ ಆಶ್ಚರ್ಯ. ಅದು ಹೇಗೆ ಹೋಗುತ್ತೀಯಪ್ಪಾ, ನಮಗೂ ವಿವರಿಸು... ಎಂದು ಗುರುಗಳು ಕೇಳಿದರು. ಆಗ ಕನಕದಾಸನ ಉತ್ತರ- ‘ನಾನು’ ಹೋದರೆ ಹೋಗುತ್ತೇನೆ’! ‘ರೆ’ ಪ್ರಪಂಚದ ಅತ್ಯಂತ ಫಿಲಾಸಫಿಕಲ್‌ ಉದಾಹರಣೆ ಇದು. ಕನಕದಾಸನ ಮಾತಿನ ಅರ್ಥ, ನನ್ನಲ್ಲಿನ ‘ನಾನು’ ಎಂಬ ಅಹಂಕಾರ ತೊಲಗಿದರೆ ನಾನು ಖಂಡಿತವಾಗಿಯೂ ಸ್ವರ್ಗಕ್ಕೆ ಹೋಗಬಲ್ಲೆ ! ಗುರುಗಳಿಂದ ಕನಕನಿಗೆ ಭೇಷ್‌. ಬಹುಶಃ ಕನಕದಾಸನ ಮಾತಿನ ಅರ್ಥವನ್ನು ಉಳಿದ ಶಿಷ್ಯರಿಗೆ ತಿಳಿಸಬೇಕಾದರೆ ಗುರುವರ್ಯರಿಗೆ ಬಹಳ ಕಷ್ಟವಾಗಿರಬಹುದು, ಇರಲಿ.

ನಾವೂ, ನೀವೂ ದೇವರ ಜೊತೆ ಚೌಕಾಶಿ ಮಾಡಿ ಹರಕೆ ಹೊರುವುದೂ ‘ರೆ’ ಪ್ರಪಂಚದಲ್ಲೇ. ಪರೀಕ್ಷೆಯಲ್ಲಿ ಪಾಸಾದರೆ ಅರ್ಚನೆ ಮಾಡಿಸುತ್ತೇನೆ...ದಿಂದ ಹಿಡಿದು ಈ ಸಲ ಪ್ರೊಮೋಷನ್‌ ಸಿಕ್ಕರೆ ತಿರುಪತಿಗೆ ಹೋಗಿ ಬರುತ್ತೇನೆ...ತನಕ. ಮಕ್ಕಳಾದರೆ ಚಿನ್ನದ ಆಭರಣ (ಮಗುವಿಗೆ? ದೇವರಿಗೆ?) ಅರ್ಪಿಸುತ್ತೇನೆ...ದಿಂದ ಹಿಡಿದು ಚುನಾವಣೆಯಲ್ಲಿ ಈ ಸಲ ಗೆದ್ದರೆ ಸಮ್‌ಥಿಂಗ್‌ ಮಾಡಿಸುತ್ತೇನೆ.... ವರೆಗೆ. ಬಹುಶಃ ದೇವರಿಗೆ ಇದನ್ನೆಲ್ಲ ನೋಡಿ ನಗು ಬರುತ್ತದಿರಬಹುದು!

ಇನ್ನು ಭಯೋತ್ಪಾದಕರ ಸೊಲ್ಲೂ ‘ರೆ’ಪ್ರಪಂಚವೇ. ಅಝರ್‌ ಮಸೂದ್‌ನನ್ನು ನಮಗೆ ಬಿಟ್ಟುಕೊಟ್ಟರೆ ಹೈಜಾಕಿಸಿದ ವಿಮಾನಯಾನಿಗಳನ್ನು ಬಿಡುತ್ತೇವೆ. ಏಕಗಂಟಿನಲ್ಲಿ ಇಂತಿಷ್ಟು ಲಕ್ಷ ರೂಪಾಯಿ (ಡಾಲರ್‌?) ಕೊಟ್ಟರೆ ಅಪಹೃತ ವ್ಯಕ್ತಿಯನ್ನು ಬಿಟ್ಟುಕೊಡುತ್ತೇವೆ. ವೀರಪ್ಪನ್‌ ಕ್ಯಾಸೆಟ್‌ನಲ್ಲಂತೂ ‘ರೆ’ಗಳ ದೊಡ್ಡ ಲಿಸ್ಟೇ ಇರುತ್ತದೆ! ಕೃಪಾಕರ-ಸೇನಾನಿ, ಅಣ್ಣಾವ್ರು ಇವರಿಗೆಲ್ಲ ಈ ಲಿಸ್ಟ್‌ ಬಾಯಿಪಾಠ ಆಗಿರಬಹುದು. ಕೃಷ್ಣ ಅವರ ಬಾಯಲ್ಲೂ ಇಂಥ ‘ರೆ’ ಗಳು ಕಾಣಿಸಿಕೊಳ್ಳುತ್ತಿವೆ. ವೀರಪ್ಪನನ್ನು ಹಿಡಿದ‘ರೆ’ 2 ಕೋಟಿ ರೂಪಾಯಿ ಬಹುಮಾನ ಕೊಡುತ್ತಾರಂತೆ! ಇತ್ತೀಚೆಗೆ ಬಂದಿರುವ ಸುದ್ದಿಯ ಪ್ರಕಾರ ವೀರಪ್ಪನ್‌ ಕಾಡಿನಲ್ಲಿ ಬ್ರೌಸ್‌ ಮಾಡುತ್ತಾ ನಂತೆ ! ಆದ‘ರೆ’ ಕನ್ನಡದಲ್ಲಿ ಫಾಂಟ್‌ ಪ್ರಾಬ್ಲಂ ಕಾಣಿಸಿಕೊಳ್ಳುವುದರಿಂದ, ಆತ ದಟ್ಸ್‌ಕನ್ನಡದಲ್ಲಿ ವಿಚಿತ್ರಾನ್ನ ಓದುವುದಿಲ್ಲ ಎಂಬ ಎಣಿಕೆಯಿಂದ ಈ ಪ್ಯಾರಾಗಳನ್ನು ಅತ್ಯಂತ ಭರವಸೆಯಿಂದ ಬ‘ರೆ’ಯಲಾಗಿದೆ. ಆಹಾ ..ಇದು ಭಯಾನಕ ‘ರೆ’ ಪ್ರಪಂಚ.

ಚಿತ್ರಗೀತೆಗಳು ‘ರೆ’ ಪ್ರಪಂಚದಿಂದ ಮುಕ್ತವೆ? ಖಂಡಿತ ಇಲ್ಲ. ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು... ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು....’, ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ... ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು...’, ‘ಒಳಗೆ ಸೇರಿದರೆ ಗುಂಡು... ಹುಡುಗಿಯಾಗುವಳು ಗಂಡು...’ - ಸಾಲದೇ ಉದಾಹರಣೆಗಳು?

ಮನುಷ್ಯನಿಗೆ ಮಾತ್ರ ಕಲ್ಪನಾಶಕ್ತಿ , ರೀಸನಿಂಗ್‌ ಪವರ್‌ ಎಂದು ಮೊದಲು ಹೇಳಿದ್ದೆನಾದರೂ ಪ್ರಾಣಿಗಳಲ್ಲೂ ಅದು ಖಂಡಿತ ಇದೆ ಎಂದು ನನ್ನ ಅಂಬೋಣ. ಅಟ್‌ಲೀಸ್ಟ್‌, ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿತ ಪದ್ಯದ ನಾಯಿಮರಿಗೆ ‘ರೆ’ ಪ್ರಪಂಚ ಗೊತ್ತು. ‘ನಾಯಿಮರಿ ಕಳ್ಳ ಬಂದರೆ ಏನು ಮಾಡುವೆ?’ ಎಂಬ ಮಗುವಿನ ಪ್ರಶ್ನೆಗೆ ಅದು ‘ಲೊಳ್‌ ಲೊಳ್‌ ಭೌ ಎಂದು ಕೂಗಿಯಾಡುವೆ....’ ಎಂಬ ಜಾಣ, ಸಿನ್ಸಿಯರ್‌ ಉತ್ತರ ಕೊಡುವುದಿಲ್ಲವೆ? ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ.... ನೀನಾರಿಗಾದೆಯೋ ಎಲೆ ಮಾನವಾ.... ಎಂದು ಗೋವು ಮನುಷ್ಯನಿಗೆ ಅನ್‌ಆನ್ಸರೆಬಲ್‌ ಪ್ರಶ್ನೆ ಎಸೆಯುತ್ತದೆ! ಇನ್ನೊಂದು ಪದ್ಯ ‘ಸಂತೆಗೆ ಹೋದನು ಭೀಮಣ್ಣ....’ದಲ್ಲಿ ಕೊನೆಗೆ ಕತ್ತೆ ಕುದುರೆಗೆ ಹೇಳುತ್ತದೆ - ‘ನೀ ನನಗಿದ್ದರೆ ನಾ ನಿನಗೆ...ನೆನಪಿರಲೀ ನುಡಿ ನಮ್ಮೊಳಗೆ...’! ಕತ್ತೆಯ ಬಾಯಿಂದಲೂ ಎಂಥ ಅರ್ಥಗರ್ಭಿತ ಮಾತು!

ಮನುಷ್ಯ, ಪ್ರಾಣಿ-ಪಕ್ಷಿ ಮಾತ್ರವೇಕೆ, ಕಂಪ್ಯೂಟರ್‌ಗೂ ಗೊತ್ತು ‘ರೆ’ ಪ್ರಪಂಚ. ನಿಮ್ಮಲ್ಲಿ ಪ್ರೋಗ್ರಾಮ್ಮಿಂಗ್‌ ಮಾಡಿದವರಿದ್ದರೆ ನಿಮಗೆ ಗೊತ್ತೇ ಇದೆ ಪ್ರೋಗ್ರಾಮ್ಮಿಂಗ್‌ನ ಒಂದು ವೆರಿ ಇಂಪಾರ್ಟೆಂಟ್‌ ಕನ್ಸೆಪ್ಟ್‌. ಎಕ್ಸ್‌ ನ ಬೆಲೆ ಸೊನ್ನೆಗಿಂತ ಹೆಚ್ಚಿದ್ದರೆ ಮಾತ್ರ ಇದನ್ನು ಮಾಡು... ಎಂದು ನಾವು ಕೊಟ್ಟ ಆಣತಿ ಕಂಪ್ಯೂಟರ್‌ಗೆ ಅರ್ಥವಾಗುತ್ತದೆ, ಅದನ್ನದು ಶಿರಸಾ ಪಾಲಿಸುತ್ತದೆ.

ಈಗ ‘ರೆ’ ಪ್ರಪಂಚದ ಒಂದು ಕೇವಲ ಕಾಲ್ಪನಿಕ, ಹಾಸ್ಯಭರಿತ ತುಣುಕಿನೊಂದಿಗೆ ಈ ಪ್ರಬಂಧ ಮುಗಿಸುವಾ. ಈ ಕಲ್ಪನೆ, ತ್ರೇತಾ ಯುಗದ ದಶಶಿರ ರಾವಣ ಒಂದು ವೇಳೆ ಈ ಕಲಿಯುಗದಲ್ಲಿ, ನಮ್ಮ ಕಾಲದಲ್ಲಿ ಇರುತ್ತಿದ್ದ‘ರೆ’ ಅವನ ಅವಸ್ಥೆ, ಕಷ್ಟ-ಕಾರ್ಪಣ್ಯಗಳು ಹೇಗಿರುತ್ತಿದ್ದುವು ಎಂಬುದೊಂದು ತಾಜಾ ‘ತಲೆ’ಹರಟೆ.

* ಅವನ ಕ್ಷೌರ ಮಾಡಲು ನಾಪಿತನಿಗೆ ಒಂದು ಇಡೀ ದಿನ ಬೇಕು. ಅಥವಾ ಬೇಗ ಆಗಬೇಕಿದ್ದರೆ ಹತ್ತು ಜನ ಕ್ಷೌರಿಕರು ಬೇಕು!

* ಮೋಟರ್‌ಬೈಕ್‌ ಅಥವಾ ಸ್ಕೂಟರ್‌ ಚಲಾಯಿಸುವ ಮೊದಲು ಅವನು ಹತ್ತು ಹೆಲ್ಮೆಟ್‌ ಕೊಳ್ಳಬೇಕು. ಮೆಜೆಸ್ಟಿಕ್‌ನ ಇಕ್ಕಟ್ಟು ರಸ್ತೆಗಳಲ್ಲಿ ಅವನು ಮೋಟರ್‌ಸೈಕಲ್‌ ಬಿಡುವಾಗ ಸೈಡ್‌ ಕೊಡುವುದೂ ಕಷ್ಟವಾಗಬಹುದು!

* ಶಬರಿಮಲೈಗೆ ಹೋಗಲು ಅವನು ನಿರ್ಧರಿಸಿದ್ದೇ ಆದರೆ ಹತ್ತು ಇರುಮುಡಿ ಕಟ್ಟಿಕೊಳ್ಳಬೇಕು!

* ಅವನ ಹತ್ತು ಜೋಡಿ ಕಣ್ಣುಗಳೂ ಪರದೆಯನ್ನು ವೀಕ್ಷಿಸುವುದರಿಂದ ನರ್ತಕಿ ಟಾಕೀಸಿನವರು ಹತ್ತು ಟಿಕೇಟ್‌ ಖರೀದಿಸುವಂತೆ ಅವನಿಗೆ ತಾಕೀತು ಮಾಡಬಹುದು!

* ಎಲ್ಲ ಹತ್ತು ತಲೆಗಳೂ ನೋಯಲಾರಂಭಿಸಿದರೆ ಒಂದು ಭರಣಿಯಷ್ಟು ಅಮೃತಾಂಜನ್‌ ಬೇಕಾಗಬಹುದು; ಒಂದು ಕೇ.ಜಿ ಸಾರಿಡಾನ್‌ ಮಾತ್ರೆ ಬೇಕಾಗಬಹುದು!

* ಹತ್ತು ಮುಖಗಳಲ್ಲೂ ಮಂದಹಾಸ ಮಿನುಗಬೇಕಿದ್ದರೆ ವಿಚಿತ್ರಾನ್ನವನ್ನು ಹತ್ತು ಕಂಪ್ಯೂಟರ್‌ ಮಾನಿಟರ್‌ಗಳಲ್ಲಿ ಏಕಕಾಲಕ್ಕೆ ಬ್ರೌಸ್‌ ಮಾಡಬೇಕು?

ಅಂದ ಹಾಗೆ, ರೆ ಪ್ರಪಂಚದ ಬಗ್ಗೆ ಈ ಎಕ್ಸ್‌-ರೇ ವಿಚಿತ್ರಾನ್ನ ನಿಮಗೆ ಇಷ್ಟವಾದ‘ರೆ’ ಅಥವಾ ಆಗದಿದ್ದ ‘ರೆ’ ಯಾಕೆ ಎಂದು ಬರೆದು ತಿಳಿಸುತ್ತೀರಿ ತಾನೆ? sjoshim@hotmail.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X