ಪ್ರೊ ಯುಆರ್ ರಾವ್ ಅವರು ನಿಜಕ್ಕೂ 'ಭಾರತದ ರತ್ನ'!

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ನಿನ್ನೆ ಬೆಳಿಗ್ಗೆ ಏಳುತ್ತಿದ್ದಂತೆ ಭಾರತದ ಪ್ರಖ್ಯಾತ ಖಗೋಳ ವಿಜ್ಞಾನಿ ಪ್ರೊಫೆಸರ್ ಉಡುಪಿ ರಾಮಚಂದ್ರ ರಾವ್ ಇನ್ನಿಲ್ಲ ಎಂಬ ಸುದ್ದಿ ಬಂದೆರಗಿತು. ಅವರ ಊರಾದ ಉಡುಪಿಯಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಸುರತ್ಕಲ್‍ನಲ್ಲಿರುವಾಗ ಈ ಸುದ್ದಿ ಬಂದಿದ್ದು ಇನ್ನಷ್ಟು ಖಿನ್ನನಾಗಿಸಿತು.

ಉಡುಪಿ ರಾಮಚಂದ್ರರಾಯರಿಗೆ ಸದಾ ಅದೇ ಧ್ಯಾನ - ವಿಜ್ಞಾನ

85 ವರ್ಷದ ತುಂಬು ಜೀವನ ನಡೆಸಿದ ಯು ಆರ್ ರಾವ್ ನಾನು ಚಿಕ್ಕವನಾಗಿದ್ದಾಗಿನಿಂದ ನನ್ನ ಹೀರೋ ಆಗಿದ್ದರು. 1975ರ ಭಾರತದ ಪ್ರಪ್ರಥಮ ಉಪಗ್ರಹ ಆರ್ಯಭಟವನ್ನು ವಿನ್ಯಾಸಗೊಳಿಸಿ ಅದನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ವಿಜ್ಞಾನಿಗಳ ತಂಡಕ್ಕೆ ಪ್ರಮುಖರಾಗಿದ್ದವರು ಪ್ರೊಫೆಸರ್ ಉಡುಪಿ ರಾಮಚಂದ್ರ ರಾವ್. ಭಾರತದ ಖಗೋಳ ವಿಜ್ಞಾನದ ಪ್ರಧಾನ ಸಂಸ್ಥೆಯಾದ ಇಸ್ರೋವನ್ನು ಸುಮಾರು ಹತ್ತು ವರ್ಷಗಳ ಕಾಲ ಮುನ್ನಡೆಸಿ ಭಾರತದ ಬಾಹ್ಯಾಕಾಶ ಯೋಜನೆಗಳ ಮಹತ್ತರ ಬೆಳವಣಿಗೆಗೆ ಕಾರಣಕರ್ತರಾದರು ಪ್ರೊಫೆಸರ್ ಯು ಆರ್ ರಾವ್.

Undoubtedly Prof UR Rao is really Bharat Ratna

ಯು ಆರ್ ರಾವ್ 1932ರಲ್ಲಿ ಉಡುಪಿಯ ಬಳಿಯ ಅದಮಾರು ಗ್ರಾಮದಲ್ಲಿ ಜನಿಸಿದರು. ತಮ್ಮ ಮಾಧ್ಯಮಿಕ ಶಾಲೆಯನ್ನು ಉಡುಪಿಯಲ್ಲಿ ಮುಗಿಸಿದ ಅವರು ಅನಂತಪುರದಲ್ಲಿ ತಮ್ಮ ಬಿ ಎಸ್ ಸಿ ಡಿಗ್ರಿ ಮುಗಿಸಿದ ನಂತರ ಖ್ಯಾತ ಬನಾರಸ್‍ ಹಿಂದು ವಿಶ್ವವಿದ್ಯಾಲಯದಿಂದ ಎಮ್ ಎಸ್ ಸಿ ಪದವಿಯನ್ನು ಪಡೆದರು. ನಂತರ ಮೈಸೂರಿನಲ್ಲಿ ಭೌತ ವಿಜ್ಞಾನವನ್ನು ಕಲಿಸುತ್ತಿರುವಾಗ ಭಾರತದ ಆಧುನಿಕ ಖಗೋಳ ವಿಜ್ಞಾನದ ಜನಕ ಎಂದೇ ಹೆಸರಾದ ಡಾ. ವಿಕ್ರಮ್ ಸಾರಾಭಾಯಿ ಅವರ ಗಮನ ಸೆಳೆದರು. ಅವರನ್ನು ಅಹಮದಾಬಾದ್‍ನ ತಮ್ಮ ಫಿಜಿಕಲ್ ರೀಸರ್ಚ್ ಲ್ಯಾಬೊರೇಟರಿಯಲ್ಲಿ ಪಿ ಎಚ್ ಡಿ ಮಾಡಲು ಆಹ್ವಾನಿಸಿದ ಡಾ. ವಿಕ್ರಮ್ ಸಾರಾಭಾಯಿ ಕಾಸ್ಮಿಕ್ ಕಿರಣಗಳನ್ನು ಕುರಿತು ಸಂಶೋಧನೆ ಮಾಡಲು ಪ್ರೇರೇಪಿಸಿದರು. 1960ರಲ್ಲಿ ತಮ್ಮ ಪಿ ಎಚ್ ಡಿ ಮುಗಿಸಿದ ಪ್ರೊಫೆಸರ್ ಯು ಆರ್ ರಾವ್ ಅಲ್ಲಿಂದ ಮುಂದೆ ಅಮೆರಿಕದ ಪ್ರಖ್ಯಾತ ಮೆಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಶಿಕ್ಷಕ, ಸಂಶೋಧಕರಾಗಿ ನೇಮಕಗೊಂಡರು. ಅಲ್ಲಿಂದ ಮುಂದೆ ಅಮೆರಿಕದ ಸೆಂಟರ್ ಫಾರ್ ಅಡ್ವಾನ್ಸಡ್ ಸ್ಟಡೀಸ್‍ನಲ್ಲಿ ಸಂಶೋಧಕರಾಗಿ ಸೋಲಾರ್ ರೇಡಿಯೇಶನ್ ಮತ್ತು ಇತರ ಪ್ರಮುಖ ಸಂಶೋಧನೆಗಳಲ್ಲಿ ಗಣನೀಯ ಪಾತ್ರವಹಿಸಿದರು.

ಬಾಹ್ಯಾಕಾಶ ವಿಜ್ಞಾನಿ ಡಾ ಯು ಆರ್ ರಾವ್ : ನಡೆದುಬಂದ ದಾರಿ

ಅಮೆರಿಕದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವಾಗಲೇ ತಾಯಿನಾಡಿನ ಸೇವೆ ಮಾಡಲು ಅವರ ಗುರುಗಳಾದ ಡಾ. ವಿಕ್ರಮ್ ಸಾರಾಭಾಯಿ ಅವರ ಕರೆ ಬಂದಾಗ ಮರುಮಾತಿಲ್ಲದೇ ಒಪ್ಪಿಕೊಂಡರು ಯು ಆರ್ ರಾವ್. ಗುರುಗಳ ಅಣತಿಯಂತೆ ಇನ್ನೂ ತನ್ನ ಬಾಲ್ಯಾವಸ್ಥೆಯಲ್ಲಿದ್ದ ಭಾರತದ ಉಪಗ್ರಹ ಯೋಜನೆ ಸಾರಥ್ಯ ವಹಿಸಿದರು. ಅಲ್ಲಿಂದ ಆರ್ಯಭಟ, ಭಾಸ್ಕರ, ರೋಹಿಣಿ, ಇನ್‍ಸ್ಯಾಟ್ ಮಾತು ಇಂಡಿಯನ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಮುಂತಾದ ಅನೇಕ ಯಶಸ್ವಿ ಯೋಜನೆಗಳ ಜನಕರಾದರು. ಭಾರತದ ಉಪಗ್ರಹ ಮನುಷ್ಯ ಎಂದೇ ಹೆಸರುಗಳಿಸಿದರು.

Undoubtedly Prof UR Rao is really Bharat Ratna

ಭಾರತದ ಉಪಗ್ರಹ ಉಡಾವಣಾ ರಾಕೆಟ್‍ಗಳಾದ ಎ ಎಸ್ ಎಲ್ ವಿ ಮತ್ತು ಪಿ ಎಸ್ ಎಲ್ ವಿಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದು ಭಾರತದ "work horse" ಎಂದು ಪ್ರಸಿದ್ಧಿ ಗಳಿಸಿದ ಪಿ ಎಸ್ ಎಲ್ ವಿ ರಾಕೆಟ್ ಯೋಜನೆ ಯಶಸ್ಸು ಪಡೆದದ್ದು ಯು ಆರ್ ರಾವ್ ಸಾರಥ್ಯದಲ್ಲಿಯೇ. ಇಂದು ಇಸ್ರೋ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿ ಹೊರಹೊಮ್ಮಲು ಮತ್ತು ನಮ್ಮ ದೇಶ ಇಂದು ಖಗೋಲ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರಲು ಅವರ ಅಂದಿನ ಅತ್ಯಂತ ಪರಿಶ್ರಮ ಮತ್ತು ದೂರದೃಷ್ಟಿಯೇ ಕಾರಣ ಎಂದರೆ ಅತಿಶಯೋಕ್ತಿಯೇನಲ್ಲ.

ನಿವೃತ್ತಿಯ ನಂತರ ಕೂಡ ತಮ್ಮನ್ನು ಅನೇಕ ವೈಜ್ಞಾನಿಕ ಕೆಲಸಗಳಲ್ಲಿ ತೊಡಗಿಸಿಕೊಂಡ ಯು ಆರ್ ರಾವ್, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ವಿಜ್ಞಾನ ವಿಷಯದಲ್ಲಿ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಮಕ್ಕಳೊಂದಿಗೆ ವಿಜ್ಞಾನ ವಿಷಯದಲ್ಲಿ ಚರ್ಚಿಸುವುದು ಮತ್ತು ಅವರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಅವರ ಆಸಕ್ತಿಯ ವಿಷಯವಾಗಿತ್ತು. ಒಮ್ಮೆ ಅವರ ಜೀವನದ ಅತ್ಯಂತ ಸಂತಸದ ಕಾಲ ಯಾವುದಾಗಿತ್ತು ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದಾಗ ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನ ಪೀಣ್ಯದ ಕಾರಖಾನೆಗಳ ಷೆಡ್ಡುಗಳಲ್ಲಿ ಭಾರತದ ಪ್ರಥಮ ಉಪಗ್ರಹ ಆರ್ಯಭಟ ರೂಪುಗೊಳ್ಳುತ್ತಿದ್ದ ಕಾಲ ತಮ್ಮ ಜೀವನದ ಅತ್ಯಂತ ಸಂತಸದ ಕಾಲವಾಗಿತ್ತು ಎಂದುತ್ತರಿಸಿದರಂತೆ.

ತಮ್ಮ ಗುರುವಾದ ಡಾ. ವಿಕ್ರಮ್ ಸಾರಾಭಾಯಿ ಅವರಂತೆ ಯು ಆರ್ ರಾವ್ ಕೂಡ ಅನೇಕ ಭವಿಷ್ಯದ ವಿಜ್ಞಾನಿ ಪ್ರಮುಖರನ್ನು ಮೊದಲಿಗೆ ಗುರುತಿಸಿ ಅವರು ಬೆಳೆಯಲು ಅನುವು ಮಾಡಿದರು ಎಂದು ಅವರ ಶಿಷ್ಯರಲ್ಲೊಬ್ಬರಾದ ಡಾ. ಮಾಧವನ್ ನಾಯರ್ ಹೇಳಿದ್ದಾರೆ. ಎಸ್ ಎಲ್ ವಿ ಉಡಾವಣೆಯ ನಂತರ ಬೇರಾವುದೋ ಕೆಲಸಕ್ಕೆ ವರ್ಗವಾದ ಅವರನ್ನು ಅವರ ಪ್ರಮುಖ ಕ್ಷೇತ್ರವಾದ ಉಪಗ್ರಹ ಉಡಾವಣಾ ರಾಕೆಟ್ ವಿನ್ಯಾಸಕ್ಕೆ ಮರಳಿ ಕರೆದು ಅವರನ್ನು ಪಿ ಎಸ್ ಎಲ್ ವಿ ಯೋಜನೆಯ ಪ್ರೊಜೆಕ್ಟ್ ಡೈರೆಕ್ಟರ್ ಆಗಿ ನೇಮಿಸಿದ್ದು ಪ್ರೊಫೆಸರ್ ಯು ಆರ್ ರಾವ್ ಎಂದು ಅವರನ್ನು ನೆನಪಿಸಿಕೊಂಡಿದ್ದಾರೆ.

Undoubtedly Prof UR Rao is really Bharat Ratna

ಇಂತಹ ದೈತ್ಯ ಪ್ರತಿಭೆಯ ವಿಜ್ಞಾನಿಯನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗುರುತಿಸಿ ಪುರಸ್ಕರಿಸಿದ್ದು ಕಡಿಮೆಯೇ ಎಂದೆನಿಸುತ್ತದೆ. ತಮ್ಮ ಇಳಿಕಾಲದಲ್ಲಿ ಎಂದರೆ ಈ ವರ್ಷದಲ್ಲಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿತು. ಇದು ಯಾವಾಗಲೋ ಲಭಿಸಬೇಕಾಗಿತ್ತು. ನನ್ನ ಅನಿಸಿಕೆಯೇನೆಂದರೆ, ಅವರಿಗೆ ಭಾರತರತ್ನ ದೊರೆಯಬೇಕಾಗಿತ್ತು. ಇಂದು ಭಾರತದ ಬಾಹ್ಯಾಕಾಶ ಯೋಜನೆ ಯಶಸ್ಸು ಪಡೆಯಬೇಕಾದರೆ ಅಂದು ಅವರು ಹಾಕಿದ ಗಟ್ಟಿ ಬುನಾದಿಯೇ ಕಾರಣ ಎಂದು ಹೇಳಿದ ಡಾ. ಮಾಧವನ್ ನಾಯರ್ ಕೂಡಾ ನಮ್ಮ ದೇಶದಲ್ಲಿ ಪ್ರೊಫೆಸರ್ ಯು ಆರ್ ರಾವ್ ಅವರಿಗೆ ದೊರೆಯಬೇಕಾದ ಗೌರವ ಮತ್ತು ಪುರಸ್ಕಾರಗಳು ದೊರೆಯಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಯಾರು ಯಾರಿಗೋ ಏನೇನೋ ಪ್ರಶಸ್ತಿ ಕೊಡುವ ಸರಕಾರಗಳಿಗೆ ನಮ್ಮ ಪ್ರಮುಖ ವಿಜ್ಞಾನಿಗಳ ಬಗ್ಗೆ ನಿರ್ಲಕ್ಷ್ಯವೇಕೆ ಎಂಬುದು ಉತ್ತರಿಸಲಾಗದ ಪ್ರಶ್ನೆ.

ಕೇವಲ ರಾಜಕಾರಣಿಗಳು, ಕ್ರಿಕೆಟರುಗಳು ಮತ್ತು ಸಿನೆಮಾ ತಾರೆಯರನ್ನು ಮಾತ್ರ ಗುರುತಿಸಿ ಅವರನ್ನು ವೈಭವೀಕರಿಸುವ ನಮ್ಮ ಮಾಧ್ಯಮಗಳು ಮತ್ತು ವ್ಯವಸ್ಥೆ ವಿಜ್ಞಾನ, ಕಲೆ ಮತ್ತು ತಂತ್ರಜ್ಞಾನಗಳನ್ನು ಕುರಿತು ಮತ್ತು ಅವುಗಳಲ್ಲಿ ಉನ್ನತಿಯನ್ನು ಗಳಿಸಿದ ಸಮರ್ಥರ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತಿರುವುದು ನಮ್ಮ ದೇಶದ ದುರಾದೃಷ್ಟ. ಸದಾ ಇಲ್ಲ ಸಲ್ಲದ ವಿಷಯಗಳನ್ನು ಹಿಗ್ಗಾಮುಗ್ಗಾ ಎಳೆದು ಬಿತ್ತರಿಸಿ ಜನರ ಸಮಯ ಹಾಳು ಮಾಡುವ ನಮ್ಮ ದೂರವಾಹಿನಿಗಳು ನಮ್ಮ ವಿಜ್ಞಾನಿಗಳು, ಕಲಾವಿದರು, ಸಂಗೀತಕಾರರು ಮತ್ತು ಸಾಹಿತಿಗಳ ಬಗ್ಗೆ ಕಾರ್ಯಕ್ರಮಗಳನ್ನೇಕೆ ಬಿತ್ತರುಸುವುದಿಲ್ಲ?

ISRO former chairman U R Rao demise | Senior leaders reacts on Twitter | Oneindia Kannada

ನಮ್ಮ ಮಕ್ಕಳಿಗೆ ಯು ಆರ್ ರಾವ್ ಅವರಂತಹ ದಿಗ್ಗಜ ವಿಜ್ಞಾನಿಗಳು ಮಾದರಿಯಾಗಬೇಕಾದರೆ ಈ ಬಗ್ಗೆ ನಮ್ಮ ಘನ ಸರಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ದಿಗ್ಗಜ ವಿಜ್ಞಾನಿಗಳು ಕಾಲವಾದಾಗ ಎರಡು ಮಾತನಾಡಿ ತುಟಿ ಸೇವೆಯನ್ನು ಮಾಡುವ ಬದಲು, ಇಂತಹ ವಿಜ್ಞಾನಿಗಳ ಕೊಡುಗೆಯನ್ನು ಗುರುತಿಸಿ ಅವರನ್ನು ಗೌರವಿಸಿದಾಗ ಮಾತ್ರ ನಮ್ಮ ಮಕ್ಕಳಿಗೆ ಈ ವಿಷಯದಲ್ಲಿ ಆಸ್ಥೆ ಉಂಟಾಗುತ್ತದೆ. ಇಲ್ಲದಿದ್ದರೆ ಕೇವಲ ಕ್ರಿಕೆಟ್ಟೋ, ಸಿನೆಮಾಗಳೋ ಅಥವಾ ರಾಜಕೀಯವೋ ಅವರ ಗಮನದ ಕೇಂದ್ರವಾಗುತ್ತವೆ ಅಷ್ಟೇ. ಅದರಿಂದ ಉಂಟಾಗುವ ಹಾನಿಯನ್ನು ಕುರಿತು ಇನ್ನೂ ಹೇಳಬೇಕಾಗಿಲ್ಲ ತಾನೇ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Professor Udupi Ramachandra Rao, popularly known as U R Rao was a space scientist and the former chairman of the Indian Space Research Organisation. He should get Bharat Ratna for his contribution to the field of science, says Vasant Kulkarni.
Please Wait while comments are loading...