ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠರು ಪಾಣಿಪತ್ ಯುದ್ಧದಲ್ಲಿ ಜಯ ಗಳಿಸಿದ್ದರೆ!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನನ್ನ ಕಳೆದ ವಾರದ ಬರಹದಲ್ಲಿ ಒಂದು ಪ್ರಶ್ನೆ ಮಾಡಿದ್ದೆ. ಬ್ರಿಟಿಷರಿಗೆ ಭಾರತವನ್ನು ತಮ್ಮ ಆಳ್ವಿಕೆಗೆ ಒಳಪಡಿಸಲು ಸಾಧ್ಯವಾಗಿರದಿದ್ದರೇ? ಅಂದಿನ ಭಾರತದ ಸನ್ನಿವೇಶವನ್ನು ಗಮನಿಸಿದರೆ ಅಂತಹ ಸಂದರ್ಭ ಅಸಹಜ ಎಂದು ನಮಗೆ ಈಗ ಅನಿಸುತ್ತಿರಬಹುದು. ಆದರೆ ಪ್ರತೀ ದೇಶದ ಇತಿಹಾಸದಲ್ಲಿ ಹಲವು ಮಹತ್ತರ ತಿರುವುಗಳು ಉಂಟಾಗುತ್ತವೆ ಎಂದು ಇತಿಹಾಸದ ಬಗ್ಗೆ ಅಪಾರ ಒಲವಿರುವ ನನ್ನ ನಿಲುವು.

ನಮ್ಮ ದೇಶದ ಇತಿಹಾಸದಲ್ಲಿ ಮೂರು ಪಾಣಿಪತ್ ಕದನಗಳು ಅಂತಹ ಮಹತ್ತರ ತಿರುವನ್ನು ನೀಡಿದವು ಎಂದೆನಿಸುತ್ತದೆ. ಅದರಲ್ಲೂ ಮೂರನೆಯ ಪಾಣಿಪತ್ ಕದನ ಅತ್ಯಂತ ನಿರ್ಣಾಯಕವಾದದ್ದು. ಮೂರನೆಯ ಪಾಣಿಪತ್ ಕದನ ಮರಾಠರು ಮತ್ತು ಅಫ್ಘನ್ ದೊರೆ ಅಹಮದ್ ಶಾ ಅಬ್ದಾಲಿಯ ನಡುವೆ ಕ್ರಿ ಶ 1761ರಲ್ಲಿ ನಡೆದ ನಿರ್ಣಾಯಕ ಕದನ.
ಈ ಕದನ ನಡೆದಾಗ ಭಾರತದಲ್ಲಿ ಮರಾಠರು ಪ್ರಬಲವಾಗಿದ್ದರು. ಉತ್ತರ ಭಾರತದಲ್ಲಿ ಮೊಘಲರ ಆಡಳಿತ ಕೇವಲ ದೆಹಲಿಗೆ ಸೀಮಿತವಾಗಿತ್ತು. ದಕ್ಷಿಣ ಭಾರತ, ಬಂಗಾಲ ಮತ್ತು ಅವಧ್ ಪ್ರದೇಶಗಳನ್ನು ಬಿಟ್ಟರೆ ಉಳಿದೆಡೆ ಮರಾಠರ ಪ್ರಾಬಲ್ಯವೇ ಹೆಚ್ಚಾಗಿತ್ತು.

ಅಂತಹ ದಿನಗಳಲ್ಲಿ ಇಂಗ್ಲಿಷರು ಮರಾಠರಿಗೆ ಸವಾಲು ಹಾಕುವ ಸ್ಥಿತಿಯಲ್ಲಿ ಎಳ್ಳಷ್ಟೂ ಇರಲಿಲ್ಲ. ಆಗ ರೋಹಿಲರ ಸರದಾರರು ಮತ್ತು ಅವಧ್ ನವಾಬ ಶುಜಾ ಉದ್ ದೌಲರೊಂದಿಗೆ ಧಾರ್ಮಿಕ ಒಪ್ಪಂದ ಮಾಡಿಕೊಂಡ ಅಫ್ಘನ್ ದೊರೆ ಅಹಮದ್ ಶಾ ಅಬ್ದಾಲಿ ಉತ್ತರ ಭಾಗಗಳಲ್ಲಿ ಮರಾಠರಿಗೆ ಸವಾಲು ಹಾಕಲು ಪ್ರಯತ್ನಿಸಿದ. ಮರಾಠರ ಅತಿ ಆತ್ಮವಿಶ್ವಾಸ ಮತ್ತು ನಿರಂಕುಶ ಪ್ರವೃತ್ತಿಯಿಂದ ನೊಂದ ಅನೇಕ ರಜಪೂತರು ಅವರಿಗೆ ಅಗತ್ಯ ಬೆಂಬಲ ನೀಡಲಿಲ್ಲ. ಅದರೊಂದಿದೆ ದುರಾದೃಷ್ಟವೂ ಜೊತೆಗೂಡಿ ಒಟ್ಟಿನಲ್ಲಿ ಮರಾಠರ ಸೈನ್ಯ ತನ್ನ ಅತ್ಯಂತ ನಿರ್ಣಾಯಕ ಸೋಲನ್ನು ಅನುಭವಿಸಿತು. ಒಂದು ವೇಳೆ ಮರಾಠರ ಸೈನ್ಯ ಈ ಯುದ್ಧದಲ್ಲಿ ವಿಜಯ ಗಳಿಸಿದ್ದರೆ? ಭಾರತದ ಇತಿಹಾಸವೇ ಬದಲಾಗುತ್ತಿತ್ತು.

The adventure by Jayant Narlikar

***
ನಾನು ಡಾ.ಜಯಂತ ನಾರಳೀಕರ್ ಅವರ "The Adventure" ಎಂಬ ಅದ್ಭುತ ಕಥೆಯ ಕನ್ನಡ ಭಾಷಾಂತರವನ್ನು ಓದಿದ್ದು ಸುಮಾರು ವರ್ಷಗಳ ಹಿಂದೆ, ನಾನು ಆವಾಗ ಕಾಲೇಜು ಓದುತ್ತಿರಬಹುದು. ಕಸ್ತೂರಿಯ ಪುಸ್ತಕ ವಿಭಾಗದಲ್ಲಿ ಪ್ರಕಟವಾಗಿತ್ತು ಎಂದು ನೆನಪು.

ಈ ಕಥೆಯ ಕಥಾನಾಯಕ ಪ್ರೊಫೆಸರ್ ಗಂಗಾಧರಪಂತ್ ಗಾಯತೊಂಡೆ ಒಬ್ಬ ಪ್ರಸಿದ್ಧ ಇತಿಹಾಸ ತಜ್ಞ. ಇತಿಹಾಸದ ಮೇಲೆ ಅನೇಕ ಪುಸ್ತಕಗಳನ್ನು ಬರೆದವರು. ಸುದೀರ್ಘ ಸಂಶೋಧನೆ ನಡೆಸಿದವರು. ಅದರಲ್ಲೂ ಮರಾಠರ ಇತಿಹಾಸ ಮತ್ತು ಮೂರನೆಯ ಪಾಣಿಪತ್ ಕದನದ ಮೇಲೆ ಅವರ ಪರಿಜ್ಞಾನ ಅಪಾರ.

ಅದೊಂದು ದಿನ ಅವರು ಅಪಘಾತಕ್ಕೊಳಗಾಗಿ ಅದು ಹೇಗೋ ಒಂದು ಹೊಸ ಜಗತ್ತನ್ನು ಪ್ರವೇಶಿಸುತ್ತಾರೆ. ಆ ಹೊಸ ಜಗತ್ತಿನ ಇತಿಹಾಸ ಪ್ರೊಫೆಸರ್ ಗಾಯತೊಂಡೆ ಕಂಡಿರುವ ಇತಿಹಾಸಕ್ಕಿಂತ ಸಂಪೂರ್ಣವಾಗಿ ಬೇರೆಯದಾಗಿರುತ್ತದೆ. ಈ ಹೊಸ ಜಗತ್ತಿನಲ್ಲಿ ಭಾರತದ ವಿಭಜನೇ ಆಗಿರುವುದೇ ಇಲ್ಲ. ಭಾರತ ಪ್ರಜಾಪ್ರಭುತ್ವ ಹೊಂದಿದ್ದರೂ ಅದೊಂದು Constitutional Monarchy ಆಗಿರುತ್ತದೆ. ಭಾರತಕ್ಕೊಬ್ಬ ಚಕ್ರವರ್ತಿ ಇರುತ್ತಾನೆ. ಇಂಗ್ಲಿಷರು ಚಕ್ರವರ್ತಿಯ ಕೃಪೆಯಿಂದ ತಮ್ಮ ಆಡಳಿತವನ್ನು ಮುಂಬಯಿಯಲ್ಲಿ ಮಾತ್ರ ಇನ್ನೂ ಮುಂದುವರೆಸಿರುತ್ತಾರೆ!

ಈ ಹೊಸ ಭಾರತ ಮತ್ತು ಅದರ ಬದಲಾದ ಇತಿಹಾಸದಿಂದ ಉಂಟಾದ ಗೊಂದಲವನ್ನು ಬಗೆಹರಿಸಲು ಒಬ್ಬ ನಿಜವಾದ ಇತಿಹಾಸಜ್ಞನಂತೆ ಪ್ರೊಫೆಸರ್ ಗಾಯತೊಂಡೆ ಮುಂಬಯಿಯ ಗ್ರಂಥಾಲಯವನ್ನು ಪ್ರವೇಶಿಸಿ, ಅಲ್ಲಿ ತಮ್ಮ ಹೆಸರಿನ ಲೇಖಕನೇ ರಚಿಸಿದ ಐದು ಸಂಪುಟಗಳ ಭಾರತದ ಇತಿಹಾಸವನ್ನು ಓದುತ್ತಾರೆ. ಮೂರನೆಯ ಪಾಣಿಪತ್ ಕದನದವರೆಗೆ ಇತಿಹಾಸ ಅವರ ಅನಿಸಿಕೆಗೆ ಅನುಗುಣವಾಗಿಯೇ ಇರುತ್ತದೆ.

ಆದರೆ ಈ ಹೊಸ ಜಗತ್ತಿನಲ್ಲಿ ನಮ್ಮ ಜಗತ್ತಿನ ಇತಿಹಾಸಕ್ಕೆ ವಿರುದ್ಧವಾಗಿ ಮೂರನೆಯ ಪಾಣಿಪತ್ ಕದನದಲ್ಲಿ ಮರಾಠರ ವಿಜಯವಾಗಿರುತ್ತದೆ. ಅಲ್ಲಿಂದ ಮೊದಲೇ ಪ್ರಬಲರಾಗಿದ್ದ ಮರಾಠರು ಇನ್ನೂ ಹೆಚ್ಚು ಪ್ರಬಲರಾಗಿ ಹೊಸ ಪೇಶ್ವಾ ವಿಶಾಸರಾವ್ ಮತ್ತು ಅವನ ತಮ್ಮ ಮಾಧವರಾವ್ ಮೊಘಲರನ್ನು ಕೇವಲ ರಬ್ಬರ್ ಸ್ಟ್ಯಾಂಪ್ ದೊರೆಗಳನ್ನಾಗಿಸಿ ಭಾರತದ ನಿಜವಾದ ಆಡಳಿತವನ್ನು ಕೈಗೆತ್ತಿಕೊಳ್ಳುತ್ತಾರೆ.

ಮರಾಠರ ಹೊಸ ಪ್ರಾಬಲ್ಯದಿಂದ ಕಂಗೆಟ್ಟ ಬ್ರಿಟಿಷರು ತಮ್ಮ ರಾಜ್ಯ ವಿಸ್ತರಣೆಯ ಯೋಜನೆಯನ್ನು ಬದಿಗೊತ್ತಿ ತಮ್ಮ ಚಟುವಟಿಕೆಗಳನ್ನು ಕೇವಲ ವ್ಯಾಪಾರಕ್ಕೆ ಸೀಮಿತಗೊಳಿಸುತ್ತಾರೆ. ಮರಾಠ ಪೇಶ್ವಾಗಳು ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮಗಳನ್ನು ಗಮನಿಸಿ ಭಾರತದಲ್ಲೂ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ ಕ್ರಮೇಣ ಭಾರತದ ಆಧುನಿಕತೆಯ ಹರಿಕಾರರಾಗುತ್ತಾರೆ. ಹೊಸ ಭಾರತ ನವೀನ ಜಗತ್ತಿನ ಅತ್ಯಂತ ಗೌರವವುಳ್ಳ, ಆತ್ಮವಿಶ್ವಾಸ ಹೊಂದಿದ ಮತ್ತು ಶಕ್ತಿಶಾಲಿ ರಾಷ್ಟ್ರವಾಗಿ ಕ್ರಮೇಣ ಪ್ರಜಾಪ್ರಭುತ್ವವನ್ನು ಅಂಗೀಕರಿಸಿ Constitutional Monarchy ಆಗಿ ಪರಿವರ್ತನೆ ಹೊಂದುತ್ತದೆ.

ಗಂಗಾಧರಪಂತ ಈ ಹೊಸ ಭಾರತವನ್ನು ಹೆಚ್ಚು ಹೆಚ್ಚು ತಿಳಿದುಕೊಂಡಂತೆ ಅದನ್ನು ಹೆಚ್ಚು ಹೆಚ್ಚು ಗೌರವಿಸತೊಡಗುತ್ತಾರೆ. ಈ ದೇಶ ಬಿಳಿಯರ ಆಳ್ವಿಕೆಗೆ ಎಂದಿಗೂ ಒಳಪಡದೇ ತನಗೇ ತಾನೆ ತನ್ನ ಕಾಲುಗಳ ಮೇಲೆ ನಿಂತು ತನ್ನ ಪ್ರಯತ್ನಗಳಿಂದಲೇ ಆಧುನಿಕ ಜಗತ್ತಿನ ಗೌರವಾನ್ವಿತ ರಾಷ್ಟ್ರವಾಗಿರುತ್ತದೆ. ಅವರು ಕಂಡ ಈ ಹೊಸ ಭಾರತ ಅವರ ಕನಸಿನ ಭಾರತವಾಗಿತ್ತೇನೋ ಎಂಬ ಭಾಸ ಅವರಿಗಾಗುತ್ತದೆ. ಆದರೆ ಈ ಇತಿಹಾಸ ಹೇಗೆ ಬದಲಾಯಿತು?

ಈ ಪ್ರಶ್ನೆಗೆ ಈ ಕಥೆಯ ಲೇಖಕ ಭೌತ ವಿಜ್ಞಾನಿ ಡಾ. ಜಯಂತ ನಾರಳೀಕರ್ ಅವರು Catastrophe Theory ಮತ್ತು Many worlds Interpretation ಗಳನ್ನು ಉಪಯೋಗಿಸಿಕೊಂಡು ಕಥೆಯ ಮತ್ತೊಂದು ಪಾತ್ರವಾದ ಭೌತ ವಿಜ್ಞಾನದ ವಿದ್ಯಾರ್ಥಿ ರಾಜೇಂದ್ರ ದೇಶಪಾಂಡೆಯಿಂದ ಅದು ಹೇಗೋ ಪ್ರೊಫೆಸರ್ ಗಂಗಾಧರಪಂತ್ ಗಾಯತೊಂಡೆ ನಮ್ಮ ಈಗಿನ ಜಗತ್ತಿನಿಂದ ಸ್ಥಿತ್ಯಂತರ ಹೊಂದಿ ಮತ್ತೊಂದು ಜಗತ್ತಿಗೆ ಹೋಗಿ ಈ ಜಗತ್ತಿಗೆ ವಾಪಸ್ಸಾಗಿರುವುದನ್ನು ವೈಜ್ಞಾನಿಕವಾಗಿ ನಿರೂಪಿಸುತ್ತಾರೆ.

***
ಈ ಕಥೆ ಓದಿದಾಗ ನನಗೆ ಪದ್ಮ ವಿಭೂಷಣ ಡಾ. ಜಯಂತ ನಾರಳೀಕರ್ ಅವರನ್ನು ಕುರಿತು ಹೆಚ್ಚೇನೂ ಗೊತ್ತಿರಲಿಲ್ಲ. ಮುಂದೆ ಅವರ ಬಗ್ಗೆ ಅವರೊಬ್ಬ ಹೆಸರಾಂತ ಭೌತ/ಖಗೋಲ ವಿಜ್ಞಾನಿ ಎಂದು ತಿಳಿದುಬಂದಿತು. ಅವರು ಖ್ಯಾತ ಬ್ರಿಟಿಷ್ ವಿಜ್ಞಾನಿ ಫ್ರೆಡ್ ಹೊಯಲ್ ಅವರ ಜೊತೆ ಸೇರಿ ಕೊಂಡು Big Bang Theoryಗೆ ವಿರುದ್ಧವಾದ Steady State Theory of Universe ಅನ್ನು ಪ್ರತಿಪಾದಿಸಿದರು ಎಂದೂ ತಿಳಿಯಿತು. ಮುಂದೆ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಈಗ ಅವರು ನನ್ನ ಮೆಚ್ಚಿನ ಭಾರತೀಯ ವಿಜ್ಞಾನಿಗಳಲ್ಲೊಬ್ಬರು.

ಇನ್ನು ಈ ಕಥೆಗೆ ವಾಪಸ್ ಬರೋಣ. ಈ ಕಥೆ ವೈಜ್ಞಾನಿಕ ಕಥೆಯಾದರೂ ಅವರ ಮುಖ್ಯ ವಾಹಿನಿ ಇತಿಹಾಸವಾಗಿತ್ತು. ನನಗೆ ಇತಿಹಾಸ ಮತ್ತು ವಿಜ್ಞಾನಗಳೆರಡೂ ಅಚ್ಚು ಮೆಚ್ಚಿನವುಗಳಾದ್ದರಿಂದ ಈ ಕಥೆ ನನ್ನ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿದ ಕಥೆ. ಅಲ್ಲದೇ ಈ ಕಥೆಯ ಮುಖ್ಯ ಆಶಯ ನಮ್ಮ ಭಾರತದ ಪ್ರಗತಿ ಎಂದು ನನಗನಿಸುತ್ತದೆ. ಈಗಿನ ನಮ್ಮ ಸ್ವತಂತ್ರ ಭಾರತದಲ್ಲಿ ನಾವು ಪರಕೀಯರ ಆಳ್ವಿಕೆಯನ್ನು ಕುರಿತು ಅವಮಾನ ಪಡಬೇಕಾದುದೇನಿಲ್ಲ.

ನಾವು ಈಗ ತ್ವರಿತವಾಗಿ ಬ್ರಿಟಿಷ್‍ರಂತಹ ಪರಕೀಯರ ಆಳ್ವಿಕೆಯ ಕರಿಪುಟಗಳನ್ನು ಮರೆತು ನಮ್ಮ ದೇಶವನ್ನು ಸ್ವಾಭಿಮಾನದಿಂದ, ಒಗ್ಗಟ್ಟಿನಿಂದ ಮತ್ತು ವೈಜ್ಞಾನಿಕ ಮನೋಭಾವನೆಯಿಂದ ಪ್ರಗತಿ ಪಥದತ್ತ ಕೊಂಡೊಯ್ಯಬಹುದು. ಬ್ರಿಟಿಷರ ಆಳ್ವಿಕೆ ಇತಿಹಾಸದ ಒಂದು ಕಪ್ಪು ಚುಕ್ಕೆಯಾಗಿರಬಹುದು. ಆದರೆ ಪ್ರಗತಿಯನ್ನು ಸಾಧಿಸಲು ಇನ್ನೂ ಸಮಯವಿದೆ. ಅದಕ್ಕಾಗಿ ನಮ್ಮ ಜಗತ್ತಿನಿಂದ ಬೇರೊಂದು ಜಗತ್ತಿಗೆ ಹೋಗಬೇಕಾದ ಪ್ರಮೇಯವೇನಿಲ್ಲ.

English summary
How our India would have been had the Marathas won the 3rd Panipat war against the Afghans? Jayant Narlikar, the Indian astrophysicist, take the readers to the new world through his book The Adventure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X