ನನ್ನ ಅಂಕಣ ಆರಂಭವಾಗಿ ಸರಿಯಾಗಿ ಒಂದು ವರ್ಷ!

Posted By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಈ ಲೇಖನ ನನ್ನ ಅಂತರ್ಮಥನ ಅಂಕಣದ ಐವತ್ತೆರಡನೆಯ ಲೇಖನ. ಎಂದರೆ ಈ ವಾರಕ್ಕೆ ನನ್ನ ಅಂಕಣ ಆರಂಭವಾಗಿ ಸರಿಯಾಗಿ ಒಂದು ವರ್ಷವಾಯಿತು. "Anything is possible" ಎಂದು ಹೇಳುತ್ತಲೇ ಸ್ವಲ್ಪ ಅಳುಕಿನಿಂದಲೇ ಆರಂಭಿಸಿದ್ದೆ ಈ ಯಾತ್ರೆಯನ್ನು. ಪ್ರತೀ ವಾರ ಒಂದು ಲೇಖನದಂತೆ ಅದೆಷ್ಟು ದಿನ ಬರೆಯ ಬಲ್ಲೆನೋ ಎಂಬ ಸಂದೇಹವಿತ್ತು. ಆದರೆ ಇಂದು ಸರಿಯಾಗಿ ಒಂದು ವರ್ಷ ಪೂರ್ಣಗೊಳಿಸಿದ್ದೇನೆ. ಈ ಕೆಲಸಕ್ಕೆ ಅನೇಕ ಮಿತ್ರರ ಪ್ರೋತ್ಸಾಹದ ಬೆಂಬಲವಿದೆಯಾದರೂ ನನ್ನೊಳಗೆ ಹತ್ತಿ ಬೆಳಗುತ್ತಿರುವ ಕನ್ನಡದ ಹಣತೆಯೇ ಮುಖ್ಯ ಕಾರಣ ಎಂದು ನನ್ನ ಅನಿಸಿಕೆ.

ಸಿಂಗಪುರದ ಸಾರಿಗೆ ಸಂಪರ್ಕ ಸೂಪರೋ ಸೂಪರು!

ನವೆಂಬರ್ 1 ಇದೀಗ ತಾನೆ ಮುಗಿದಿದೆ. ಕನ್ನಡಿಗರಿಗೆಲ್ಲ ಪವಿತ್ರವಾದ ಈ ದಿನದಂದು ಕನ್ನಡಿಗರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಈಗ ಬಂದಿದೆ. ನಮ್ಮ ದಕ್ಷಿಣ ಭಾರತದಲ್ಲಿ ಅತ್ಯಂತ ನಿರಾಡಂಬರ ಜನ ನಾವು ಕನ್ನಡಿಗರು. ಗುಂಪಿನಲ್ಲಿ ಒಂದಾಗಿ ಹೋಗುವುದು ನಮ್ಮ ಸಹಜ ಗುಣ. ತಮಿಳರು, ಮಲಯಾಳಿಗಳು ಮತ್ತು ತೆಲುಗಿನವರು ತಮ್ಮತನವನ್ನು ಎತ್ತಿ ತೋರಿಸುತ್ತಾರೆ. ಗುಂಪಿನಲ್ಲಿ ಕೂಡ ಅವರನ್ನು ಸುಲಭವಾಗಿ ಕಂಡು ಹಿಡಿಯಬಹುದು. ನಾವು ಕನ್ನಡಿಗರು ಹಾಗಲ್ಲ. ನೀರಿನಲ್ಲಿ ಸಕ್ಕರೆ ಕರಗುವಂತೆ ಸುಲಭವಾಗಿ ಸೇರಿ ಮಾಯವಾಗಿ ಹೋಗುತ್ತೇವೆ.

Let's speak, breath, promote Kannada everywhere

ಇಪ್ಪತ್ತೈದು ವರ್ಷಗಳ ಹಿಂದೆ ನಾನು ಕೆಲಸದ ನಿಮಿತ್ತವಾಗಿ ಗುಜರಾತಿಗೆ ಹೋದಾಗ ನನ್ನ ಅಡ್ಡ ಹೆಸರನ್ನು ಕೇಳಿ "ನೀವು ಮಹಾರಾಷ್ಟ್ರೀಯರಲ್ಲವೇ?" ಎಂದು ಕೇಳುವವರೇ ಹೆಚ್ಚು. "ಅಲ್ಲ, ಸೌಥ್ ಇಂಡಿಯನ್" ಎಂದರೆ ಅವರಿಗೆ ಆಶ್ಚರ್ಯ! "ಮದರಾಸಿಗಳಲ್ಲೂ ಕುಲಕರ್ಣಿ ಇರುತ್ತಾರೆಯೇ?" ಎಂಬುದು ಅವರ ಪ್ರಶ್ನೆ. ನಾನು ಭೇಟಿಯಾದ ಉತ್ತರ ಭಾರತದವರಲ್ಲಿ ಅನೇಕರಿಗೆ ಕರ್ನಾಟಕ ಎಂಬ ರಾಜ್ಯವಿದೆ, ಅಲ್ಲಿಯ ಜನರನ್ನು ಕನ್ನಡಿಗರು ಎಂದು ಕರೆಯುತ್ತಾರೆ ಮತ್ತು ಅವರ ಭಾಷೆ ಕನ್ನಡ ಎಂಬುದು ಗೊತ್ತಿರಲೇ ಇಲ್ಲ. ಎಲ್ಲ ದಕ್ಷಿಣ ಭಾರತದ ಜನರು ಅವರಿಗೆ ಮದರಾಸಿಗಳೇ ಆಗಿದ್ದರು. ಇಂದಿನ ಅಂತರ್ಜಾಲ ಯುಗದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯಾದರೂ ದಕ್ಷಿಣ ಭಾರತದಲ್ಲಿ ತಮಿಳರು, ತೆಲುಗಿನವರು ಮತ್ತು ಮಲಯಾಳಿಗಳಿಗೆ ಸಿಗುವ ಪ್ರಚಾರ, ಮನ್ನಣೆಗಳು ಕನ್ನಡಿಗರಿಗೆ ಸಿಗುವುದಿಲ್ಲ. ಅನೇಕರಿಗೆ ಕರ್ನಾಟಕದವರು ಎಂದರೆ ತುಳು ಭಾಷಿಕರು ಮಾತ್ರ ಎಂಬ ತಪ್ಪು ಕಲ್ಪನೆ ಇದೆ!

ಸಿಂಗಪುರದ ನನ್ನ ನಿಕಟ ಪರಿಚಯದ ಬರಹಗಾರ್ತಿಯೊಬ್ಬರ ಅನುಭವವೂ ಹೆಚ್ಚು ಕಡಿಮೆ ಹೀಗೆಯೇ. ಅವರ ಮಾತುಗಳಲ್ಲಿಯೇ ಹೇಳಬೇಕೆಂದರೆ "ನನ್ನ ಒಡನಾಟ ಹೆಚ್ಚಾಗಿ ಉತ್ತರ ಭಾರತೀಯರೊಂದಿಗೆ ಇದೆ. ಅದು ಏಕೆಂದು ನನಗೂ ಗೊತ್ತಿಲ್ಲ, ಅದೇಕೋ ಭಾರತದ ಹೊರಗೆ ನನಗೆ ದಕ್ಷಿಣ ಭಾರತೀಯ ಮಿತ್ರರು, ಅದರಲ್ಲೂ ಕನ್ನಡಿಗ ಮಿತ್ರರು ಕಡಿಮೆಯೇ. ಆದರೆ ನನಗೆ ಯಾರಾದರೂ ಹೊಸ ಉತ್ತರ ಭಾರತೀಯರು ಭೇಟಿಯಾದಾಗ, ನಾನು ದಕ್ಷಿಣ ಭಾರತೀಯಳು ಎಂದು ಗೊತ್ತಾದ ತಕ್ಷಣ ಅವರು ಕೇಳುವ ಪ್ರಶ್ನೆಯೆಂದರೆ "ಓ! ಹಾಗಾದರೆ ನೀವು ತಮಿಳು ಮಾತನಾಡುತ್ತೀರಲ್ಲವೇ?" ನಾನು ಸಾರಾಸಗಟಾಗಿ ನಿರಾಕರಿಸಿ "ನಾನು ಕರ್ನಾಟಕದವಳು" ಎಂದು ಹೇಳಿದಾಗ ಅವರ ಪ್ರತಿಕ್ರಿಯೆ ಏನೆಂದರೆ "ಹಾಗಾದರೆ ನೀವು ತುಳು ಭಾಷೆಯನ್ನು ಮಾತನಾಡುತ್ತೀರಲ್ಲವೇ?" ಎಂಬುದು! ನನಗೆ ಈ ಸಂವಾದದಿಂದ ಆಶ್ಚರ್ಯವಾಗುತ್ತದೆ. ನಾವು ಕನ್ನಡಿಗರು ಇತರ ಭಾರತೀಯರಿಗೆ ಅಷ್ಟೊಂದು ಅಪರಿಚಿತವೇ? ಒಂದು ಜನಸಮುದಾಯವಾಗಿ ನಾವಷ್ಟು ನೇಪಥ್ಯಕ್ಕೆ ಸರಿದಿದ್ದೇವೆಯೇ?"

ಭಾಷಾ ಕಲಹದ ನಡುವೆ ಸೊರಗುತ್ತಿರುವ ಬೆಳಗಾವಿ

ಅವರ ಈ ಮಾತು ನನ್ನ ಒಳಗಿನ ಭಾವನೆಗಳೊಂದಿಗೆ ಅನುರಣಿಸುತ್ತದೆ. ಮನಸ್ಸು ಕಾರಣಗಳನ್ನು ಹುಡುಕುತ್ತದೆ. ನಾವು ನಮ್ಮ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮೊಂದಿಗೆ ಓದುತ್ತಿದ್ದ ಎಂತಹ ಜನರನ್ನು ಈಗಲೂ ನೆನಪಿನಲ್ಲಿಟ್ಟಿರುತ್ತೇವೆ? ಕ್ಲಾಸಿನಲ್ಲಿ ಮೊದಲ ಸ್ಥಾನಕ್ಕಾಗಿ ಪೈಪೋಟಿ ಮಾಡುವವರನ್ನು ಬಿಟ್ಟರೆ, ಯಾರು ಸ್ವಲ್ಪ ಗಲಾಟೆ ಮಾಡುತ್ತಿದ್ದರೋ, ಯಾರು ತುಂಟರೋ ಅಥವಾ ಯಾರು ಜಗಳಗಂಟರೋ ಅಂಥವರನ್ನು ನಾವು ನೆನಪಿನಲ್ಲಿಟ್ಟಿರುತ್ತೇವೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಗಲಾಟೆ ಮಾಡುವವರೆಂದರೆ ತಮಿಳರು. ಹಿಂದಿ ವಿರೋಧಿ ಚಳವಳಿ ಎನ್ನಿ ಅಥವಾ ದ್ರಾವಿಡ-ಆರ್ಯ ಎಂಬಂತಹ ಹಾಸ್ಯಾಸ್ಪದ ಹೋರಾಟವೆನ್ನಿ. ಅದರಲ್ಲಿ ಮಂಚೂಣಿಯಲ್ಲಿದ್ದವರು ತಮಿಳರು. ಹೀಗಾಗಿ ಉತ್ತರ ಭಾರತೀಯರ ಗಮನ ಸೆಳೆದರು.

ಮಲಯಾಳಿಗಳು ತಮ್ಮ ಕಮ್ಯೂನಿಸ್ಟ್ ವಿಚಾರಧಾರೆಯಿಂದ ಮತ್ತು ಎಲ್ಲೆಡೆಗೆ ವಲಸೆ ಹೋಗಿ ಅಲ್ಲಿ ತಮ್ಮ ಅಸಾಧ್ಯ ದುಡಿತದಿಂದ ಇತರರ ಗಮನ ಸೆಳೆದರು. ನಮ್ಮ ಮಂಗಳೂರಿನ ತುಳು ಭಾಷಿಕರು ಇತರೆಡೆ ಹೋಗಿ ತಮ್ಮ ಹೋಟೆಲ್ ಉದ್ಯಮದಿಂದ, ಕಾರ್ಯ ದಕ್ಷತೆಯಿಂದ ಹೆಸರಾದರು. ಕನ್ನಡಿಗರು ಮಾತ್ರ ತಮ್ಮ ಗುರುತನ್ನು ಎತ್ತಿ ಹಿಡಿಯುವ ಯಾವುದೇ ಕಸುಬನ್ನು, ಚಳವಳಿಯನ್ನು ಅಥವಾ ರಾಜಕೀಯ ವಿಚಾರಧಾರೆಯನ್ನು ಗಾಢವಾಗಿ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ನಾವು ಕನ್ನಡಿಗರ ಅನನ್ಯತೆಯನ್ನು ಗುರುತಿಸುವ ಯಾವುದೇ ವಿಷಯ ಇತರರಿಗೆ ಗೊತ್ತಾಗಲೇ ಇಲ್ಲ. ಉತ್ತರದ ಜನತೆಗೆ ನಮ್ಮ ಭಾಷೆಗಳಲ್ಲಿರುವ ವ್ಯತ್ಯಾಸಗಳನ್ನು ಗುರುತು ಹಿಡಿಯುವ ಪರಿಜ್ಞಾನ ಇಲ್ಲ. ಅಲ್ಲದೇ ಕನ್ನಡಿಗರು ಎಲ್ಲಿ ಹೋದರೂ ತಮ್ಮನ್ನು ತಾವು ಅಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳುವ ಕಲೆಯನ್ನು ಕಂಡುಕೊಂಡಿದ್ದಾರೆ.

ಮೃಗಜಲದ ಬೆನ್ನು ಹತ್ತಿ ಸುಖಿಸುವ ಯಯಾತಿ ಇಂದಿಗೂ ಪ್ರಸ್ತುತ

ಹೊರಗಿನವರಿಗೆ ತಮಿಳುನಾಡಿನ ಬೃಹದೀಶ್ವರ ಮಂದಿರದ ಬಗ್ಗೆ ಗೊತ್ತಿದೆ ಮತ್ತು ಊಟಿ, ಕೊಡೈಕೆನಾಲ್‍ಗಳ ಬಗ್ಗೆ ತಿಳಿದಿದೆ. ಆದರೆ ನಮ್ಮ ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು ಮತ್ತು ಹಂಪೆಗಳ ಬಗ್ಗೆಯಾಗಲಿ, ಕೊಡಗು ಮತ್ತು ಚಿಕ್ಕಮಗಳೂರುಗಳ ಬಗ್ಗೆ ಅಷ್ಟೇನೂ ಪರಿಚಯವಿಲ್ಲ. ಏಕೆಂದರೆ ನಮ್ಮ ಬಗ್ಗೆ ಮತ್ತು ನಮ್ಮ ರಾಜ್ಯದ ಪ್ರವಾಸಿ ಸ್ಥಳಗಳ ಬಗ್ಗೆ ನಾವು ಹೇಳಿಕೊಳ್ಳುವುದು ಕಡಿಮೆಯೇ. ನಮ್ಮ ಬಗ್ಗೆ ನಾವು ಮಾರ್ಕೆಟಿಂಗ್ ಮಾಡಿಕೊಳ್ಳದೇ ಇನ್ನಾರು ಮಾಡುವರು? ಕರ್ನಾಟಕವೆಂದರೆ ಕೇವಲ ಬೆಂಗಳೂರು ಮತ್ತು ಮೈಸೂರು ದಸರಾಗಳಲ್ಲ ಎಂದು ಇತರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಾವೇ ಮಾಡಬೇಕಾಗಿದೆ.

ಹಾಲಿನಲ್ಲಿಯ ನೀರಿನಂತೆ ಹೊಂದಿಕೊಂಡು ಹೋಗುವ ಗುಣ ಕನ್ನಡಿಗರನ್ನು ವಿವಾದರಹಿತರನ್ನಾಗಿ ಮಾಡಿದೆಯಾದರೂ, ನಮ್ಮದೇ ಆದ ಒಂದು ಗುರುತನ್ನು ಕೊಡುವಲ್ಲಿ ವಿಫಲವಾಗಿದೆ. ನಾವು ಕನ್ನಡಿಗರು, ನಮ್ಮದು ಅತ್ಯಂತ ಪುರಾತನವಾದ ಮತ್ತು ಶ್ರೀಮಂತವಾದ ಭಾಷೆ ಮತ್ತು ಸಂಸ್ಕೃತಿ ಎಂದು ಇತರರಿಗೆ ಕೂಡ ತಿಳಿಯಬೇಕು. ಆಗ ಮಾತ್ರ ಜನ ನಮ್ಮನ್ನು ಗುರುತಿಸುತ್ತಾರೆ ಮತ್ತು ಗೌರವದಿಂದ ಕಾಣುತ್ತಾರೆ. ಆದರೆ ಅದು ವಿವಾದಾಸ್ಪದ ವಿಷಯಗಳಿಂದಾಗದೇ ನಮ್ಮ ಸದ್ಗುಣ ಮತ್ತು ಅರ್ಹತೆಗಳಿಂದ ಆಗಬೇಕು. ಕೇವಲ ನವೆಂಬರ್ ಒಂದರಂದು ಕನ್ನಡದ ಭಜನೆಯನ್ನು ಮಾಡಿ ನಂತರ ಅದನ್ನು ಮರೆತುಬಿಡುವುದರಿಂದ ಅದು ಸಾಧ್ಯವಾಗುವುದಿಲ್ಲ.

ಅದಕ್ಕೆ ಮುಖ್ಯವಾಗಿ ನಮ್ಮ ಕನ್ನಡ ಜನತೆಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಸದಭಿಮಾನವಿರಬೇಕು. ಇಂಗ್ಲಿಷು, ಹಿಂದಿ ಮತ್ತಿತರ ಭಾಷೆಗಳ ವ್ಯಾಮೋಹ ಕಡಿಮೆಯಾಗಬೇಕು. ಕರ್ನಾಟಕದಲ್ಲಿ ಕನ್ನಡದ ಕಲಿಕೆ ಕಡ್ಡಾಯವಾಗಬೇಕು. ಕನ್ನಡ ಪಠ್ಯದ ಗುಣಮಟ್ಟ ಹೆಚ್ಚಾಗಬೇಕು. ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಉಪಯೋಗವಾಗುವ ಕನ್ನಡದ ಗುಣಮಟ್ಟ ಉನ್ನತವಾಗಿರಬೇಕು. ಈ ದಿಶೆಯಲ್ಲಿ ಕೇವಲ ಸರಕಾರ ಮಾತ್ರವಲ್ಲ, ಜನಸಾಮಾನ್ಯರೂ ತಮ್ಮ ತಮ್ಮ ಮನೆಗಳಿಂದಲೇ ಕನ್ನಡದ ಏಳಿಗೆಗಾಗಿ ದುಡಿಯುವುದನ್ನು ಆರಂಭಿಸಬೇಕು. ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡುವ ಮತ್ತು ಕನ್ನಡದ ಪ್ರಮುಖ ಕೃತಿಗಳ ಬಗ್ಗೆ ಅಧ್ಯಯನ ನಡೆಯುವುದು ಶುರುವಾಗಬೇಕು.

ಹಿಂದೊಮ್ಮೆ ಕುಮಾರವ್ಯಾಸನ ಭಾರತದಂತಹ ಗ್ರಂಥಗಳ ಪಠಣ ಮತ್ತು ಪಾರಾಯಣ ಮನೆಮನೆಗಳಲ್ಲಿ ಆಗುತ್ತಿತ್ತಂತೆ. ಅದೇಕೆ ನಿಂತು ಹೋಯಿತೋ? ಈಗ ಹಿಂದಿನ ಉನ್ನತ ಗ್ರಂಥಗಳೊಂದಿಗೆ ಕುವೆಂಪು, ಕಾರಂತ, ಬೇಂದ್ರೆ ಮತ್ತು ಡಿವಿಜಿಯಂತಹ ಮಹಾನ್ ಲೇಖಕರ ಗ್ರಂಥಗಳ ಪಾರಾಯಣ ಕೂಡ ಆರಂಭವಾಗಬೇಕಾಗಿದೆ.

ಆದರೆ ಈ ಕೆಲಸ ಹೊರಗೆ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಹೋಗಿ ಬಂದು ಕನ್ನಡದ ಅಧ್ಯಯನ ನಿಂತು ಹೋಗಿರುವ ಜನರಿಂದ ಸಾಧ್ಯವಾಗುವುದಿಲ್ಲ. ಇಂಗ್ಲಿಷು ಭಾಷೆಯ ವ್ಯಾಮೋಹ ಮತ್ತು ಆ ಭಾಷೆ ಕೊಡುವ ಆರ್ಥಿಕ ಲಾಭವನ್ನು ಮಾತ್ರ ನೋಡುವ ಮನೋಸ್ಥಿತಿಯಿಂದ ಸಾಧ್ಯವಾಗುವುದಿಲ್ಲ. ಕನ್ನಡದ ಬಗ್ಗೆ ಅಪಾರ ವಾತ್ಸಲ್ಯ ಹೊಂದಿರುವ ಅಚ್ಚ ಕನ್ನಡಿಗರಿಂದ ಮಾತ್ರ ಸಾಧ್ಯ. ಆ ಅಚ್ಚಕನ್ನಡಿಗರಾಗುವತ್ತ ನಾವು ದೃಢ ಹೆಜ್ಜೆಯನ್ನಿಡಬೇಕಾಗಿದೆ. ಕನ್ನಡ ಭಾಷೆಯ ಏಳಿಗೆಯನ್ನು ಬಯಸಿ ನಾವಿಡುವ ಪ್ರತಿ ಹೆಜ್ಜೆಯೂ ನಮ್ಮ ಸರ್ಕಾರವನ್ನು ನಮ್ಮೊಡನೆ ಹೆಜ್ಜೆಯಿಡುವಂತೆ ಮತ್ತು ಇತರ ಭಾಷಿಕರನ್ನು ನಮ್ಮತ್ತ ನೋಡುವಂತೆ ಪ್ರೇರೇಪಿಸುತ್ತದೆ. ಸಿರಿಗನ್ನಡಂ ಗೆಲ್ಗೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It's successful one year for Vasant Kulkarni's Kannada column Antarmathana. Vasant has touched variety of subjects and his articles have been appreciated by one and all. He says, we as Kannadigas have not done enough to promote our Kannada language. Let's celebrate Kannada and Vasant's column.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ