ಸ್ಮಾರ್ಟ್ ಕಾರ್ಡ್ ಕುರಿತು ಮತ್ತಷ್ಟು ಸ್ವಾರಸ್ಯಕರ ಸಂಗತಿ

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಕಳೆದ ವಾರ ಸಿಂಗಪುರದಲ್ಲಿ ಸ್ಮಾರ್ಟ್ ಕಾರ್ಡುಗಳ ಉಪಯೋಗವನ್ನುಕುರಿತು ಬರೆದಿದ್ದೆ. ಆದರೂ ಕೆಲವು ಪ್ರಶ್ನೆಗಳು ಉಳಿದುಕೊಂಡಿದ್ದವು. ಈ ಕಾರ್ಡುಗಳನ್ನು ಯಾರು ಮತ್ತು ಹೇಗೆ ತಯಾರಿಸುತ್ತಾರೆ? ಯಾರು ವಿತರಿಸುತ್ತಾರೆ? ಯಾರು ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ? ಹೇಗೆ ರಿಚಾರ್ಜ್ ಮಾಡಲಾಗುತ್ತದೆ? ಇತ್ಯಾದಿ.

ಎಲ್ಲಕ್ಕಿಂತ ಮುಖ್ಯವಾಗಿ ಸಿಂಗಪುರದ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಈ ಸ್ಮಾರ್ಟ್ ಕಾರ್ಡುಗಳನ್ನು ಭಾರತದಂತಹ ಸಂಕೀರ್ಣ ಮತ್ತು ಬಡ ದೇಶದಲ್ಲಿ ಜಾರಿಗೊಳಿಸುವುದು ಮತ್ತು ಜನಪ್ರಿಯಗೊಳಿಸುವುದು ಸಾಧ್ಯವೇ ಎಂಬುದು ಬಹು ಮುಖ್ಯ ಪ್ರಶ್ನೆ.

ಸಿಂಗಪುರದಲ್ಲಿ ಸ್ಪರ್ಷರಹಿತ ಸ್ಮಾರ್ಟ್ ಕಾರ್ಡುಗಳನ್ನು ಬಳಕೆಗೆ ತರಲು ಯೋಜಿಸಿದ್ದು ಇಲ್ಲಿಯ ಭೂ ಸಾರಿಗೆ ಪ್ರಾಧಿಕಾರ (Land Transport Authority). 1994ರಲ್ಲಿಯೇ ಅದು ಈ ಯೋಜನೆಯ ರೂಪು ರೇಷೆಗಳನ್ನು ರೂಪಿಸಿತು ಮತ್ತು 1996ರಲ್ಲಿ ಐದು ನೂರು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡುಗಳನ್ನು ಒದಗಿಸಿ ಪ್ರಯೋಗವನ್ನು ಆರಂಭಿಸಿತು. [ಸ್ಮಾರ್ಟ್ ಸಿಂಗಪುರದಲ್ಲಿ ಪ್ರತಿಯೊಂದಕ್ಕೂ ಸ್ಮಾರ್ಟ್ ಕಾರ್ಡ್]

How smart card is utilized in Singapore

ಈ ಪ್ರಯೋಗ ಯಶಸ್ವಿಯಾದ ಬಳಿಕ ಈ ತಂತ್ರಜ್ಞಾನವನ್ನ ಮತ್ತಷ್ಟು ವಿನ್ಯಾಸಗೊಳಿಸಿ ಜನವರಿ 2002ರಲ್ಲಿ ಸುಮಾರು 45,000 ಜನರಿಗೆ ಕಾರ್ಡುಗಳನ್ನು ಒದಗಿಸಿ ಸುಮಾರು ಆರು ವಾರಗಳ ಮಟ್ಟಿಗೆ ಇಲ್ಲಿಯ ಮೆಟ್ರೋ ರೈಲು ಮತ್ತು ಸಿಟಿ ಬಸ್ಸುಗಳಲ್ಲಿ ಉಪಯೋಗಿಸಲು ಅನುವು ಮಾಡಿ ಕೊಟ್ಟು ದೊಡ್ಡ ಪ್ರಮಾಣದಲ್ಲಿ ಪ್ರಾತ್ಯಕ್ಷಿಕೆ ಬಳಕೆಯ ಪ್ರಯೋಗವನ್ನು ಆರಂಭಿಸಿತು.

ಈ ದಿಶೆಯಲ್ಲಿ Ezlink ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಈ ಸ್ಮಾರ್ಟ್ ಕಾರ್ಡುಗಳ ವಿತರಣೆ ಮತ್ತು ವ್ಯವಸ್ಥಾಪನೆಯನ್ನು ನೋಡಿಕೊಳ್ಳಲು ಆದೇಶಿಸಿತು. ಅಂದಿನಿಂದ ಇಲ್ಲಿಯವರೆಗೆ ಈ Ezlink ಸಂಸ್ಥೆ ಈ ಸ್ಮಾರ್ಟ್ ಕಾರ್ಡುಗಳನ್ನು ಯಶಸ್ವಿಯಾಗಿ ವಿತರಣೆ ಮತ್ತು ನಿರ್ವಹಣೆ ಮಾಡಿಕೊಂಡಿದೆ. ಅಲ್ಲದೇ ಅದರ ಉಪಯೋಗವನ್ನು ವಿಸ್ತರಿಸಿದೆ ಕೂಡ. [ಬ್ಯಾಂಕಿನ ಮುಂದೆ ಉದ್ದುದ್ದ ಕ್ಯೂ ಮತ್ತು ಲೀ ಕ್ವಾನ್ ಯೂ!]

ಈಗ ಈ Ezlink ಕಾರ್ಡು ಎಂದೇ ಪ್ರಸಿದ್ಧಗೊಂಡ ಸ್ಮಾರ್ಟ್ ಕಾರ್ಡ್‍ ಇಂದು ಕೇವಲ ಮೆಟ್ರೊ ರೈಲು ಮತ್ತು ಸಿಟಿ ಬಸ್ಸುಗಳಲ್ಲದೇ ಅನೇಕ ಅಂಗಡಿಗಳು, ರೆಸ್ಟೋರಾಂಟುಗಳು, ಪೆಟ್ರೋಲ್ ಪಂಪುಗಳು ಇತ್ಯಾದಿಗಳಲ್ಲಿ ಕೂಡ ಬಳಕೆಯಾಗಲ್ಪಡುತ್ತಿದೆ.

ಇದರ ರಿಚಾರ್ಜ್ ಕೂಡ ಅತ್ಯಂತ ಸುಲಭ. ಇದನ್ನು ಯಾವುದೇ ಮೆಟ್ರೋ ರೈಲುಗಳಲ್ಲಿ ಇರಿಸಲ್ಪಟ್ಟ ಟಿಕೆಟ್ ಯಂತ್ರಗಳಲ್ಲಿ ಮಾತ್ರವಲ್ಲ ಅನೇಕ ಪ್ರಮುಖ ಬೀದಿಗಳಲ್ಲಿ ಇರಿಸಲ್ಪಟ್ಟ AXS ಮತ್ತು SAM ಎಂಬ ಈ-ಟಿಕೆಟಿಂಗ್ ಯಂತ್ರಗಳಲ್ಲಿ ಕೂಡಾ ರಿಚಾರ್ಜ್ ಮಾಡಬಹುದು. ಅಲ್ಲದೇ ಬ್ಯಾಂಕುಗಳ ATM ಯಂತ್ರಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಕೂಡಾ ರಿಚಾರ್ಜ್ ಮಾಡಬಹುದು.

ಮುಖ್ಯವಾಗಿ ಈ ಸ್ಮಾರ್ಟ್ ಕಾರ್ಡುಗಳಲ್ಲಿ ಒಂದು ಮೈಕ್ರೋ ಪ್ರೊಸೆಸರ್ ಚಿಪ್‍ಅನ್ನು ಅಡಗಿಸಲಾಗಿದ್ದು ಅದರ ಜೊತೆ ಒಂದು ಅಂಟೆನಾವನ್ನು ಜೋಡಿಸಲಾಗಿರುತ್ತದೆ. ಚಿಪ್ ಈ ಕಾರ್ಡಿನ ಮಿದುಳಾಗಿದ್ದು ತನ್ನಲ್ಲಿ ಅನೇಕ ಮಾಹಿತಿಯನ್ನು ಅಡಗಿಸಿಕೊಂಡಿರುತ್ತದೆ ಮತ್ತು ಕಂಪ್ಯೂಟರ್‍ ನಂತೆ ಮಾಹಿತಿಯನ್ನು ಪರಿಷ್ಕರಿಸಿ ಅದನ್ನು ಸೂಕ್ತವಾದ ರಿಸೀವರ್ ಗೆ ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದು ರಿಸೀವರ್ ನಿಂದ ಸುಮಾರು 1-5 ಮಿಲಿಮೀಟರ್ ನಷ್ಟು ದೂರದಿಂದಲೇ ಕ್ಷಣ ಮಾತ್ರದಲ್ಲಿ ವರ್ಗಾಯಿಸಬಲ್ಲದು. ಆದುದರಿಂದ ಹಣ ಸಂದಾಯ ಮಾಡಲು ತೀರ ಸುಲಭವಾದ ಈ ತಂತ್ರಜ್ಞಾನ ಬಹಳ ಜನಪ್ರಿಯವಾಗುತ್ತಿದೆ. [ಸಿಂಗಪುರದ ಮಾಜಿ ಪ್ರಧಾನಿ ಯೂ ಅವರನ್ನು ನೆನೆಯುತ್ತ]

ಈ ತಂತ್ರಜ್ಞಾನ ಈಗ ನಿಧಾನವಾಗಿ ಕ್ರೆಡಿಟ್ ಕಾರ್ಡ್ ಗಳಿಗೂ ಹರಡುತ್ತಿದೆ. ಅನೇಕ ಕ್ರೆಡಿಟ್ ಕಾರ್ಡ್ ಕಂಪನಿಗಳು ಈಗ ತ್ವರಿತ ಹಣ ಸಂದಾಯ(Flash Pay)ವನ್ನು ಅಳವಡಿಸಿಕೊಳ್ಳುತ್ತಿವೆ. ಸಿಂಗಪುರದ ಸ್ಕೂಲುಗಳು ಕೂಡಾ ತಮ್ಮ ಗುರುತಿನ ಕಾರ್ಡಿನಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡಿದ್ದರಿಂದ, ಮಕ್ಕಳಿಗೆ ಈ ಕಾರ್ಡಿನಿಂದ ಅನೇಕ ಲಾಭಗಳು. ಆ ಕಾರ್ಡು ಕೇವಲ ಗುರುತಿನ ಕಾರ್ಡಲ್ಲದೇ, ಬಸ್ಸು ಮತ್ತು ಮೆಟ್ರೋಗಳ ಟಿಕೆಟ್ಟೂ ಹೌದು ಹಾಗೂ ಉಪಹಾರ ಮತ್ತು ಸ್ಕೂಲಿನ ಸ್ಟೇಶನರಿ ಸಾಮಾನುಗಳನ್ನು ಕೊಳ್ಳುವ ಸಾಧನವೂ ಹೌದು.

ಇನ್ನು ನಮ್ಮ ಭಾರತದಲ್ಲಿ ಇದನ್ನು ಅಳವಡಿಸಿಕೊಳ್ಳಲು ಸಾಧ್ಯವೇ? ಏಕಿಲ್ಲ ಸ್ವಾಮಿ? ಕಾಗದದ ಹಣ ಮುದ್ರಿಸಿ ಅದರ ನಕಲು ಮಾಡುವ ಖದೀಮರು ಮತ್ತು ಕಪ್ಪು ಹಣವನ್ನಾಗಿ ಪರಿವರ್ತಿಸುವ ಖೂಳರಿಂದ ರಕ್ಷಿಸಲು ಮಾಡುವ ಖರ್ಚಿಗಿಂತ ಈ ತಂತ್ರಜ್ಞಾನ ಅಗ್ಗ ಎಂಬುದು ನನ್ನ ಭಾವನೆ.

ಇನ್ನು ಈ ತಂತ್ರಜ್ಞಾನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರಸರಿವುದು ಹೇಗೆ ಮತ್ತು ಅನಕ್ಷರಸ್ಥರು ಇದನ್ನು ಉಪಯೋಗಿಸಬಲ್ಲರೇ ಎಂಬ ಪ್ರಶ್ನೆ ಹಾಕುವವರಿಗೆ ನನ್ನದೊಂದೇ ಸವಾಲು. ಹದಿನೈದು ವರ್ಷಗಳ ಹಿಂದೆ ನಾವು ಮೊಬೈಲು ತಂತ್ರಜ್ಞಾನ ಈ ಮಟ್ಟಿಗೆ ಪಸರಿಸುವುದು ಎಂದು ಅಂದುಕೊಂಡಿದ್ದೇವೆಯೇ? ಈಗ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಯಾರೂ ಯಾವ ತರಬೇತಿಯಿಲ್ಲದೇ ಮೊಬೈಲನ್ನು ಬಳಸುತ್ತಿದ್ದಾರಲ್ಲವೇ? ಅಂದ ಮೇಲೆ ಕೇವಲ ಟ್ಯಾಪ್ ಮಾತ್ರ ಮಾಡಬೇಕಾಗಿರುವ ಈ ತಂತ್ರಜ್ಞಾನ ಉಪಯೋಗಿಸಲು ತುಂಬಾ ಸುಲಭ ಅಲ್ಲವೇ? ಇಂತಹ ತಂತ್ರಜ್ಞಾನಗಳನ್ನು ಬಳಕೆಗೆ ತರಲು ಬೇರೇ ಯಾವುದೇ ವಿಘ್ನಗಳು ಇಲ್ಲ. ಕೇವಲ ರಾಜಕೀಯ ಇಚ್ಛಾಶಕ್ತಿ ಬೇಕು. ಅಷ್ಟೇ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How smart card is utilized in Singapore? How it is recharged, how it is used by millions of people with ease? Vasant Kulkarni write more interesting things about smart card used in Singapore. He wishes this system can be implemented in India too.
Please Wait while comments are loading...