• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಾಸ ಸಾಹಿತ್ಯ ಮತ್ತು ಚಿತ್ರಗೀತೆಗಳು

By Staff
|

ಕಾಮಿಡಿ ಟೈಮ್ ಗಣೇಶ್ ಅಭಿನಯದ 'ಚೆಲ್ಲಾಟ' ಚಿತ್ರದಲ್ಲಿ 'ಇಂದು ಎನಗೆ ಗೋವಿಂದ' ಹಾಡಿನ ಸಾಲುಗಳನ್ನು ಬಳಸಿಕೊಂಡು, ದಾಸ ಸಾಹಿತ್ಯಕ್ಕೆ ಅಪಚಾರವೆಸಗಲಾಗಿದೆ. ಇತ್ತೀಚೆಗೆ ಇಂಥ ಅಸಂಬದ್ಧ ಪ್ರಯೋಗಗಳು ಹೆಚ್ಚುತ್ತಿವೆ. ಇದು ತಪ್ಪು ತಪ್ಪು ತಪ್ಪು.

ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

Dasa Sahithya in Kannada Movies!"ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ" ಇದು "ಎರಡು ಕನಸು" ಚಿತ್ರಕ್ಕಾಗಿ ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿರುವ ಹಾಡು. ಎಸ್.ಜಾನಕಿಯವರ ಸಿರಿದನಿಯಲ್ಲಿ ಸೆರೆಯಾಗಿರುವ ಈ ಗೀತೆಯ ಮಾಧುರ್ಯಕ್ಕೆ ತಲೆದೂಗದವರಾರು? ಮಂತ್ರಾಲಯದ ಯತಿಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಏಕೈಕ ಕನ್ನಡ ರಚನೆ(ಈವರೆಗೆ ನಮಗೆ ಲಭ್ಯವಾಗಿರುವುದು ಇದೊಂದೇ)ಎಂಬುದು ಈ ಹಾಡಿನ ವೈಶಿಷ್ಟ್ಯ. ಒಲ್ಲದ ಗಂಡನ ಹೆಂಡತಿಯಾಗಿ ಬಂದು, ದಾಂಪತ್ಯ ಸುಖದಿಂದ ವಂಚಿತಳಾದ ನಾಯಕಿ "ನೊಂದೆನಯ್ಯಾ....ಭವಬಂಧನದೊಳು ಸಿಲುಕಿ, ಮುಂದೆ ದಾರಿ ಕಾಣದೆ..." ಎಂದು ಗದ್ಗದ ದನಿಯಲ್ಲಿ ಹಾಡುತ್ತಿದ್ದರೆ, ಅವಳ ದುಃಖದೊಡನೆ ನಮ್ಮ ವೈಯುಕ್ತಿಕ ಬದುಕಿನ ನೂರೆಂಟು ಸಂಕಟಗಳೆಲ್ಲವೂ ಮೇಳೈಸಿ ನಿಂದು, ಕಣ್ತುಂಬಿ ಬಂದು, ನಮಗೇ ಅರಿವಿಲ್ಲದಂತೆಯೇ "ಆರೂ ಕಾಯುವರಿಲ್ಲ... ಸಾರಿದೆ ನಿನಗಯ್ಯಾ" ಎಂಬ ವಿನೀತ ಭಾವವೊಂದನ್ನು ಮನಸ್ಸು ಹೊದ್ದುನಿಂತಿರುತ್ತದೆ. ಭಕ್ತಿಗೀತೆಯೊಂದು ಚಿತ್ರಗೀತೆಯ ರೂಪ ತಾಳಿದ್ದರೂ ಅದು ಉಂಟುಮಾಡಬೇಕಾದ ಅಂತಿಮ ಪರಿಣಾಮ ಅದೇ. ಅದು ಯಾವುದೇ ಭಕ್ತಿಗೀತೆಯೊಂದರ ಸಾರ್ಥಕ್ಯ!

ಕನ್ನಡ ಚಿತ್ರರಂಗದಲ್ಲಿ ಚಿತ್ರಸಾಹಿತಿಗಳು ಬರೆದ ಗೀತೆಗಳೊಂದಿಗೆ ಕವಿಗಳ ಭಾವಗೀತೆ, ದಾಸರ ಪದ, ಶರಣರ ವಚನಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡಿರುವ ಅನೇಕ ನಿದರ್ಶನಗಳಿವೆ. ಕೆಲವು ಹಾಡುಗಳಂತೂ ಆ ಸನ್ನಿವೇಶಕ್ಕೆಂದೇ ಬರೆದಿವೆಯೇನೋ ಎನ್ನುವಷ್ಟು ಸೂಕ್ತವಾಗಿ ಹೊಂದಿಕೆಯಾಗುವಂತಿವೆ.

"ಭಲೇ ಅದೃಷ್ಟವೋ ಅದೃಷ್ಟ" ಚಿತ್ರದ "ಕಂಡು ಕಂಡು ನೀ ಎನ್ನ ಕೈಬಿಡುವರೇ ಕೃಷ್ಣ?","ಕಿತ್ತೂರು ಚೆನ್ನಮ್ಮ" ಚಿತ್ರದಲ್ಲಿನ ಅಕ್ಕನ ವಚನ "ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು", "ಕಣ್ತೆರೆದು ನೋಡು" ಚಿತ್ರದ "ಕಲ್ಲು ಸಕ್ಕರೆ ಕೊಳ್ಳಿರೊ", "ಉಪಾಸನೆ" ಚಿತ್ರದ "ಆಚಾರವಿಲ್ಲದ ನಾಲಿಗೆ" - ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ಹಾಡುಗಳು ಚಿತ್ರದ ಕಥೆಗೆ ಪೂರಕವಾಗಿ, ಹಾಲಿಗೆ ಸಕ್ಕರೆ ಬೆರೆಸಿದಂತೆ ಗೀತೆಯ ಮಾಧುರ್ಯವನ್ನು ಮತ್ತಷ್ಟು ಹೆಚ್ಚಿಸುವಂತಿರುತ್ತಿದ್ದವೇ ಹೊರತು ಮೂಲ ಗೀತೆಯ ಮೌಲ್ಯವನ್ನು ಕುಗ್ಗಿಸುವಂತಿರಲಿಲ್ಲ. ಆದರೆ ಇದೇ ಭಾವನೆ ಈಗಿನ ಚಿತ್ರಗಳಲ್ಲಿ ಬಳಸಿಕೊಂಡಿರುವ ದಾಸರಪದಗಳು ಮತ್ತು ಇತರ ಪ್ರಾರ್ಥನಾ ಗೀತೆಗಳನ್ನು ನೋಡಿದಾಗ ಖಂಡಿತ ಉಳಿಯುವುದಿಲ್ಲ.

ಮೇಲೆ ತಿಳಿಸಿದ "ಇಂದು ಎನಗೆ ಗೋವಿಂದ" ದೇವರನಾಮವನ್ನು "ಮುಂಗಾರು ಮಳೆ" ಖ್ಯಾತಿಯ ಗಣೇಶ್ ನಾಯಕನಾಗಿ ನಟಿಸಿದ ಮೊದಲ ಚಿತ್ರ "ಚೆಲ್ಲಾಟ"ದಲ್ಲಿ ಪೂರ್ತಿಯಾಗಿಲ್ಲದಿದ್ದರೂ ಕೆಲವು ಸಾಲುಗಳನ್ನು ಬಳಸಿಕೊಂಡಿದ್ದಾರೆ. ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್ "ಇಂದು ಎನಗೆ...." ಎಂದು ಪ್ರಾರಂಭಿಸುವ ಹಾಡು ಅಣಕದಂತೆ ಕೇಳಿಸುತ್ತದೆ. ನಂತರದ ಸಾಲುಗಳನ್ನು ಎಲ್ಲೆಂದರಲ್ಲಿ ತುಂಡರಿಸಿ, ಮೂಲಗೀತೆಗೆ ಕಿಂಚಿತ್ತೂ ಒಗ್ಗದ ವಾದ್ಯಗಳನ್ನು ಬಳಸಿ ಈ ಅಪೂರ್ವ ಕೃತಿಯನ್ನು ವಿರೂಪಗೊಳಿಸಲಾಗಿದೆ. ಚಿತ್ರದಲ್ಲಿರುವ ದೃಶ್ಯಕ್ಕೂ ಈ ಕೀರ್ತನೆಗೂ ಕಿಂಚಿತ್ತೂ ಸಂಬಂಧವಿಲ್ಲ. ಇನ್ನೂ ಹೇಳಬೇಕೆಂದರೆ, ಆ ದೃಶ್ಯಕ್ಕೆ ಈ ಹಾಡನ್ನು ತೆಗೆದುಕೊಳ್ಳುವ ಅಗತ್ಯವೇ ಇರಲಿಲ್ಲ. ಇಂತಹ ಸನ್ನಿವೇಶಕ್ಕೆ ಸೂಕ್ತವಾಗಿ ಹಾಡು ಬರೆದುಕೊಡುವ ಸಿನಿಮಾ ಸಾಹಿತಿಗಳಿಗೂ ನಮ್ಮಲ್ಲಿ ಕೊರತೆಯೇನಿಲ್ಲ. ಜನರಿಂದ ದೂರಾಗಿ ಬೃಂದಾವನ ಸೇರಿಕೊಂಡ ಪರಮ ವಿರಕ್ತ ಮುನಿಗೂ, ತುಂಡುಡುಗೆಯುಟ್ಟು, ಲಂಗುಲಗಾಮಿಲ್ಲದೆ ಕುಣಿದು ಕುಪ್ಪಳಿಸುವ ಪಡ್ಡೆಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ "ಗುರು"ವೇ?

ಇದೇ ರೀತಿ "ಮೈ ಆಟೋಗ್ರಾಫ್" ಚಿತ್ರದಲ್ಲಿ ಪುರಂದರ ದಾಸರ ಜನಪ್ರಿಯ ಕೀರ್ತನೆಯಾದ "ಆಡಿಸಿದಳೆಶೋದಾ ಜಗದೋದ್ಧಾರನ...." ಬಳಕೆಯಾಗಿದೆ. ಜಗವನಾಡಿಸುವ ಜಗದೀಶನನ್ನೇ ಮಗನೆಂದು ತಿಳಿದುಕೊಂಡು ಅವನನ್ನು ಲಾಲಿಸಿ, ಪಾಲಿಸಿ ನಲಿಯುವ ಮಮತಾಮಯಿ ತಾಯಿ ಯಶೋದೆಯ ಚಿತ್ರವನ್ನು ಕಣ್ಮುಂದೆ ತರುವ ಈ ಸುಂದರ ಗೀತೆಯನ್ನು ಚಿತ್ರಗೀತೆಯಾಗಿ ಕೇಳಿದಾಗ ಕೆಟ್ಟ ಸಂಕಟವಾಗುತ್ತದೆ. ಇಲ್ಲಿ ಕನ್ನಡ ಬಾರದ ಗಾಯಕಿಯರು "ಯಶೋದಾ"ಳನ್ನು ನಿರ್ದಾಕ್ಷಿಣ್ಯವಾಗಿ "ಎಸೋದಾ" ಆಗಿಸುತ್ತಾರೆ. "ಜಗದೋದ್ಧಾರನ" ಎನ್ನಲು "ಜಗದೋದ್ಧಾರಣ", "ತಿಳಿಯುತ" ಎನ್ನುವಲ್ಲಿ "ತಿಳಿಯುದ" ಎಂದು ಕರ್ಕಶವಾಗಿ ಉಚ್ಚರಿಸುತ್ತಾರೆ. ಒಂದೇ ಹಾಡಿನಲ್ಲಿ ಇಷ್ಟೆಲ್ಲಾ ತಪ್ಪುಗಳು ಎದ್ದು ಕಾಣುವಂತೆ ನುಸುಳಿದ್ದರೂ ನಮ್ಮ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಅದನ್ನು ತಿದ್ದುವ ಗೋಜಿಗೇ ಹೋಗಿಲ್ಲ. ಹೋಗಲಿ ಬಿಡಿ, ಬಡದಾಸರ ಆತ್ಮ ನೊಂದರೆ ನೊಂದುಕೊಳ್ಳಲಿ. ಒಂದಕ್ಕೆರಡು ದುಡ್ಡು ಕೊಟ್ಟು ಕರೆತಂದಿರುವ ಪರಭಾಷಾ ಗಾಯಕರನ್ನು ಎಲ್ಲಿಯಾದರೂ ತಿದ್ದುವುದುಂಟೇ?

ಇದಕ್ಕೆ ಸಂಬಂಧಿಸಿದಂತೆ ನನಗೆ ಒಂದು ಪ್ರಸಂಗ ನೆನಪಾಗುತ್ತಿದೆ. ಕೆಲವು ತಿಂಗಳ ಹಿಂದೆ ಈಟಿವಿಯ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೆಲುಗುನಾಡಿನ ಬಾಲಕನೊಬ್ಬ ಇದೇ ಹಾಡನ್ನು ಸುಶ್ರಾವ್ಯವಾಗಿ ಹಾಡಿದ. ಬಹುಶಃ ಅವನು ಕೂಡ ಮೇಲೆ ತಿಳಿಸಿದ ಚಲನಚಿತ್ರ ಗೀತೆಯನ್ನು ಕೇಳಿಯೇ ಅಭ್ಯಾಸ ಮಾಡಿದ್ದಿರಬಹುದು. ಹಾಡಿನಲ್ಲಿದ್ದ ತಪ್ಪುಗಳನ್ನೆಲ್ಲಾ ಸೇರಿಸಿಕೊಂಡು ಯಥಾವತ್ತಾಗಿ ಹಾಡಿದ. ಕೂಡಲೇ ಕಾರ್ಯಕ್ರಮ ನಿರೂಪಕರಾಗಿದ್ದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹುಡುಗನನ್ನು ತಿದ್ದಿದರು. ಆಡಿಸಿದಳು "ಶೋದಾ" ಎಂದು ಹಾಡುವುದು ತಪ್ಪು, ಅದು "ಯಶೋದಾ" ಆಗಿರಬೇಕು ಎಂದು ಹಾಡಿನ ಆರ್ಥವನ್ನು ಸ್ಪಷ್ಟವಾಗಿ, ಆದರೆ ಹಾಡಿದ ಎಳೆಯನ ಮನಸ್ಸಿಗೆ ನೋವಾಗದಂತೆ ತಿಳಿಹೇಳಿದರು. ತೆಲುಗು ಮಾತೃಭಾಷೆಯಾಡುವ ಎಸ್.ಪಿ.ಬಿ. ಈ ಕೆಲಸವನ್ನು ನಿರ್ಭಯವಾಗಿ ಮಾಡಬಹುದಾದರೆ, ಪರಭಾಷಾ ಗಾಯಕರ ತಪ್ಪು ಉಚ್ಚಾರಣೆಯನ್ನು ತೆಪ್ಪಗೆ ಸಹಿಸಿಕೊಳ್ಳುವ ನಮ್ಮದೇ ಚಿತ್ರೋದ್ಯಮದ ಜನರೇಕೆ ಮಾಡುವುದಿಲ್ಲ?

ಈಗ ಇನ್ನೊಂದು ಉದಾಹರಣೆ. ಇದು ದಾಸರ ಪದವಲ್ಲ, ಶ್ರೀ ವೆಂಕಟೇಶ್ವರ ಸ್ತೋತ್ರ. "ಕೌಸಲ್ಯಾ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೇ.. ಮುಗಿದೊಡನೆ ಅದರ ಹಿಂದೆಯೇ ಶುರುವಾಗುವ ಕಮಲಾ ಕುಚ ಚೂಚುಕ ಕುಂಕುಮತೋ" - ಎಂ.ಎಸ್.ಸುಬ್ಬುಲಕ್ಷ್ಮಿಯವರ ಶ್ರೀಮಂತ ಕಂಠದಲ್ಲಿರುವ ವೆಂಕಟೇಶ್ವರ ಸುಪ್ರಭಾತ ನನ್ನಂತೆ ಅದೆಷ್ಟೋ ಜನರ ನೆನಪಿನ ಅವಿಭಾಜ್ಯ ಭಾಗವಾಗಿ ಉಳಿದುಹೋಗಿದೆ. ಎಲ್ಲೇ ಇರಲಿ, ಈ ಸುಪ್ರಭಾತ ಕಿವಿಗೆ ಬಿದ್ದೊಡನೆ ಕಣ್ಣೆದುರು ಆಹ್ಲಾದಮಯ ಬೆಳಗು ಜಾವವೊಂದು ಮೆಲ್ಲಗೆ ತೆರೆದುಕೊಳ್ಳುತ್ತದೆ. ಮನದ ತುಂಬಾ ಅಲೆಯಾಗಿ ಸುತ್ತಿಕೊಳ್ಳುವ ಧೂಪ, ದೀಪ, ಅಂಗಳದಲ್ಲಿ ಹರಡಿ ಬಿದ್ದಿರುವ ಜಾಜಿ, ಮಲ್ಲಿಗೆ ಪಾರಿಜಾತ ಸುಮಗಳ ನರುಗಂಪು....

ಸುಪ್ರಭಾತದ ನೆಪದೊಂದಿಗೆ ಹಾಗೇ ಬಾಲ್ಯದ ನೆನಪುಗಳಲ್ಲಿ ಜಾರಿಹೋಗುವ ಮುನ್ನ "ಖುಷಿ" ಚಿತ್ರದ ಈ ಹಾಡನ್ನೂ ಕೇಳಿಬಿಡಿ. ಕಮಲಾ ಕುಚ ಚೂಚುಕ ಕುಂಕುಮತೋ ಇಲ್ಲಿ ಕಮಲಾ ಸುಮ ಸೂಸುವ ಕೊಂಕುನಗುವಾಗಿ ರೂಪಾಂತರಗೊಂಡಿದೆ. ಈ ಹಾಡಿಗೆ ಡಿಸ್ಕೋ ಕ್ಲಬ್ಬಿನಲ್ಲಿ, ಮತ್ತೇರಿದ ಪಬ್ಬಿನಲ್ಲಿ ಕುಣಿಯುವ ಯುವಕ-ಯುವತಿಯರು. ಕಮಲಾ..ಕಮಲಾ..Heyyy, step on the dancing floor, heyyy! Sing your song more and more, heyyyy! Come let's rock and roll yaaahhh!....ಹಾಡು ಯಾವುದಾದರೇನಂತೆ? ಹಾಡಿಗೆ ಸ್ಫೂರ್ತಿ ಎಲ್ಲಿಂದ ಬಂದಿದ್ದರೇನಂತೆ? ಕುಡಿದು ಕುಣಿದಾಡುವ ಕಾಲುಗಳಿಗೆ, ತೊನೆದಾಡುವ ಮೈಗಳಿಗೆ ಭೇದಭಾವವಾದರೂ ಅದೆಲ್ಲಿಯದು?

ಎಂಭತ್ತರ ದಶಕದಲ್ಲಿ ತಯಾರಾದ ಕೆ.ಎಸ್.ಎಲ್. ಸ್ವಾಮಿ ನಿರ್ದೇಶನದ "ಮಲಯ ಮಾರುತ" ಚಿತ್ರದಲ್ಲಿ ಕನಕದಾಸರ ರಚನೆಯಾದ "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" ಹಾಡನ್ನು ಅಳವಡಿಸಿಕೊಳ್ಳಲಾಗಿತ್ತು. ಈ ಚಿತ್ರದ ನಾಯಕನಾಗಿದ್ದ ನಟ ವಿಷ್ಣುವರ್ಧನ್ ಅವರು ಕ್ಯಾಬರೆ ನರ್ತಕಿಯ ನೃತ್ಯಕ್ಕೆ ಈ ಹಾಡನ್ನು ಹಾಡುತ್ತಿರುವಂತೆ ಚಿತ್ರದ ಸನ್ನಿವೇಶವಿತ್ತೆಂದು ಕೇಳಿದ ನೆನಪು. ಆದರೆ ದಾಸರ ಪದವನ್ನು ಕ್ಲಬ್ಬಿನಲ್ಲಿ ಹಾಡುವಂತೆ ಚಿತ್ರೀಕರಿಸಿದ್ದಕ್ಕಾಗಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳದಂತೆ ಈ ಹಾಡಿಗೆ ಕತ್ತರಿ ಬಿದ್ದಿತ್ತು!

ದಾಸ, ವಚನ ಸಾಹಿತ್ಯ ಬೇರಾವ ಭಾಷೆಗೂ ಸಿಕ್ಕಿರದ, ಕನ್ನಡಕ್ಕೆ ಮಾತ್ರ ದೊರಕಿರುವ ಮಹಾನ್ ಭಾಗ್ಯ! ಈ ಸಾಹಿತ್ಯ ಕನ್ನಡಿಗರೆಲ್ಲರ ಆಸ್ತಿ. ಇವುಗಳನ್ನು ಬಳಸಿಕೊಳ್ಳಲು, ಮನದುಂಬಿ ಹಾಡಿಕೊಳ್ಳಲು ಯಾರದೇ ಅನುಮತಿಯನ್ನಾಗಲೀ, ಕೃತಿಸ್ವಾಮ್ಯವನ್ನಾಗಲೀ ಪಡೆಯಬೇಕಿಲ್ಲ. ಹಾಗೆಂದು ಬಿಟ್ಟಿಯಾಗಿ ಸಿಗುತ್ತದೆಂಬ ಕಾರಣಕ್ಕೆ ಅವುಗಳ ದುರುಪಯೋಗವೂ ಸಲ್ಲದು. ಈ ಅಮೂಲ್ಯ ಸಾಹಿತ್ಯ ಸಂಪದ ನಮ್ಮದೆನ್ನುವ ಹಕ್ಕಿನ ಜೊತೆಗೇ ಅವುಗಳ ಘನತೆಯನ್ನು ಕಾಪಾಡುವ ಕರ್ತವ್ಯವೂ ನಮಗಿದೆ. ಸಿನಿಮಾಗಳಲ್ಲಿ ಇಂತಹ ಸಾಹಿತ್ಯವನ್ನು ಬಳಸಿಕೊಳ್ಳುವ ಮುನ್ನ, ಸಮಿತಿಯೊಂದರ ಮುಂದೆ ಚಿತ್ರದ ಸನ್ನಿವೇಶ, ಅಳವಡಿಸಿಕೊಳ್ಳುತ್ತಿರುವ ಸಾಹಿತ್ಯ, ಹಾಡುವ ವಿಧಾನ ಸರಿಯಿದೆಯೇ ಇಲ್ಲವೇ ಎಂಬುದನ್ನು ಪ್ರಸ್ತುತಪಡಿಸಿ, ಪೂರ್ವಭಾವಿ ಒಪ್ಪಿಗೆ ಪಡೆದುಕೊಳ್ಳುವ ಅಗತ್ಯವಿದೆ.

ಇದಕ್ಕಾಗಿ ಸರಕಾರವೇ ಹಣವನ್ನು ವ್ಯಯಿಸಿ, ಮತ್ತೊಂದು ನಿಗಮವನ್ನೋ, ಮಂಡಲಿಯನ್ನೋ ರಚಿಸುವ ಅಗತ್ಯವಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯವೊಂದರ ಕನ್ನಡ ವಿಭಾಗಕ್ಕೆ ಈ ಜವಾಬ್ದಾರಿಯನ್ನು ಹೊರಿಸಬಹುದು. ಅದೂ ಆಗುವುದಿಲ್ಲವೆಂದರೆ, ದಾಸ ಸಾಹಿತ್ಯದ ಬಗ್ಗೆ ಆಸಕ್ತಿ, ಅಭಿಮಾನಗಳಿರುವ ಕೆಲವೇ ಜನರ ತಂಡ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬಹುದು. ದಾಸ ಸಾಹಿತ್ಯ ಪ್ರಚಾರಕ್ಕೆಂದು ವರ್ಷದ ಬಹುಪಾಲು ದಿನಗಳನ್ನು ಹೊರನಾಡುಗಳ ಸಂಚಾರದಲ್ಲಿಯೇ ಕಳೆಯುವ ನಮ್ಮ ಕೆಲವು ವಿದ್ವಾಂಸರು, ಪಂಡಿತರು ನಾಡಿನಲ್ಲಿಯೇ ದಾಸ ಸಾಹಿತ್ಯಕ್ಕಾಗುತ್ತಿರುವ ಅಪಚಾರದತ್ತಲೂ ಗಮನ ಹರಿಸುತ್ತಾರೆಂದು ಆಶಿಸೋಣವೇ?

ಅಲ್ಲಿಯವರೆಗೆ, ಯಾರೂ ಕಾಯುವವರಿಲ್ಲ, ಸಾರಿದೆ ನಿನಗಯ್ಯಾ.....!

(ಪ್ರಿಯ ಓದುಗರೇ, ಪ್ರತಿ ಬುಧವಾರ ಪ್ರಕಟಗೊಳ್ಳುವ 'ತುಳಸಿವನ' ಅಂಕಣ, ಈವಾರ ಭಾನುವಾರವೇ ನಿಮ್ಮ ಮುಂದಿದೆ.. ಒಪ್ಪಿಸಿಕೊಳ್ಳಿ -ಸಂಪಾದಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more