• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಸರೇ ಇಲ್ಲದವರು ನಾವು! ಹೆಸರೇ ಇಲ್ಲದವರು!

By ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್
|
By any other name rose smells as sweet
ಸುವರ್ಣ ರಾಜ್ಯೋತ್ಸವದ ಶುಭ ದಿನ, ನಮ್ಮ ಸರಕಾರ ಬ್ಯಾಂಗಲೋರನ್ನು ಬೆಂಗಳೂರು ಮಾಡುತ್ತೇನೆಂದು ಅಧಿಕೃತವಾಗಿ ಹೇಳಿದ್ದೇ ತಡ, ನಾನಾ ಬಗೆಯ ಪ್ರತಿಕ್ರಿಯೆಗಳ ಪ್ರವಾಹವೇ ಹರಿದು ಬಂದಿತು.

ಬ್ಯಾಂಗಲೋರ್‌ ಬೆಂಗಳೂರು ಆದ ಮಾತ್ರಕ್ಕೆ ಇಲ್ಲಿಯ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಹೋಗುತ್ತವೆಯೇ? ಎಂದು ಪ್ರತಿ ಹೊಸ ಕೆಲಸಗಳಿಗೂ ಮೂಗೆಳೆಯುವ ನಿರಾಶಾವಾದಿಗಳು; ಹೆಸರು ಬದಲಾವಣೆಗೆ ಮಾಡುವ ಖರ್ಚು, ಸಮಯವನ್ನು ಬೇರೆ ಅಭಿವೃದ್ಧಿ ಕೆಲಸಗಳಿಗಾಗಿ ಉಪಯೋಗಿಸಿದರಾಗದೇ? ಎಂದು ಪುಕ್ಕಟೆ ಉಪದೇಶ ಮಾಡುವವರು; ಆ ವೆಚ್ಚವನ್ನುಳಿಸಿದರೆ ಬೇರೇನೇನೆಲ್ಲಾ ಸಾಧಿಸಬಹುದೆಂದು ಪೆನ್ನು,ಪೇಪರ್‌ ಹಿಡಿದು ಅಂಕಿ-ಅಂಶ ಒದಗಿಸಲು ಮುಂದಾಗುವ ಅತಿ ಬುದ್ಧಿವಂತರು,.... ಎಲ್ಲರ ನಾಲಿಗೆಯ ಮೇಲೆ ಹೊರಳಾಡಿದ್ದು ಒಂದೇ ಮಾತು - ಹೆಸರಲ್ಲೇನಿದೆ ಬಿಡಿ.

ಹೆಸರಿನಲ್ಲೇನಿದೆ? - ಈ ಮಾತು ಇಂದಿನದೇನಲ್ಲ. ‘‘ಗುಲಾಬಿಯನ್ನು ಗುಲಾಬಿಯೆನ್ನದೆ, ಬೇರೆ ಹೆಸರಿನಿಂದ ಕರೆದರೂ ಅದರ ಸುಗಂಧವೇನೂ ಮಾಯವಾಗುವುದಿಲ್ಲ’’ ( By any other name rose smells as sweet) ಎಂದು ಅಂದೇ ಬರೆದಿದ್ದ ಶೇಕ್ಸ್‌ಪಿಯರ್‌. ಹೆಸರಿನಲ್ಲೇನಿದೆ? ಎಂಬ ಮಾತನ್ನು ಒಪ್ಪದವರಂತೆ ‘‘ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು’’ ಎಂದು ತಮ್ಮ ಪ್ರೇಯಸಿಯ ಹೆಸರಿನ ಮೇಲೇ ಮುದ್ದಾದ ಕವನ ಹೊಸೆದಿದ್ದರು ಕೆ.ಎಸ್‌.ನ.

‘‘ನಿನ್ನ ಹೆಸರೇ ಹೇಳುವಂತೆ ನೀನು ಒಂದು ಹೂವಿನಂತೆ....’’ - ಈ ಹಾಡನ್ನು ಆಕಾಶವಾಣಿಯಲ್ಲಿ, ಎಚ್‌.ಕೆ. ನಾರಾಯಣ ಎದೆ ತುಂಬಿ ಹಾಡುತ್ತಿದ್ದಾಗ ನಾನಿನ್ನೂ ತುಂಬಾ ಚಿಕ್ಕವಳು. ಆಗೆಲ್ಲ ನನಗೂ ಒಂದು ಹೂವಿನ ಹೆಸರಿರಬಾರದಿತ್ತೇ ಎಂದು ಅನ್ನಿಸಿದ್ದೂ ಇದೆ!

ಎಲ್ಲರಿಗೂ ಅವರವರ ಹೆಸರಿನ ಮೇಲೆ ಹೆಮ್ಮೆ, ಅಭಿಮಾನ ಇದ್ದೇ ಇರುತ್ತದೆ. ಒಂದು ವೇಳೆ ಈ ಹೆಸರಿನ ಬದಲು ಬೇರೊಂದು ಹೆಸರು ನಮ್ಮದಾಗಿದ್ದರೆ ಏನಾಗುತ್ತಿತ್ತು? ಏನೂ ಆಗುತ್ತಿರಲಿಲ್ಲ. ಆಗಲೂ ಈ ಪ್ರಪಂಚದಲ್ಲಿ ಕಿಂಚಿತ್ತೂ ವ್ಯತ್ಯಾಸ ಆಗುತ್ತಿರಲಿಲ್ಲವೆಂಬುದಂತೂ ನೂರಕ್ಕೆ ನೂರು ನಿಜ! ನನಗೆ ಬೇರೊಂದು ಹೆಸರಿರಬಾರದಿತ್ತೇಕೆ? ಅನಿಸಿದ್ದೇ ತಡ, ಅಮ್ಮನನ್ನು ಕೇಳಿಯೇಬಿಟ್ಟಿದ್ದೆ. ‘‘ನನಗೆ ಇದೇ ಹೆಸರು ಯಾಕೆ ಇಟ್ಟಿದ್ದು? ಬೇರೆ ಯಾವುದಾದರೂ ಇನ್ನೂ ಚೆನ್ನಾಗಿರುವ ಹೆಸರು ಇಡಲಿಲ್ಲ ಯಾಕೆ?’’ ತುಂಬು ಕುಟುಂಬದ, ಬಿಡುವಿಲ್ಲದ ಗೃಹಿಣಿ ನಮ್ಮಮ್ಮ. ಇಂತಹ ತಲೆಹರಟೆ ಪ್ರಶ್ನೆಗಳಿಗೆ ಕಿವಿಗೊಡಲು ಅವಳಿಗೆಲ್ಲಿತ್ತು ಪುರುಸೊತ್ತು? ಉತ್ತರ ಕೊಟ್ಟಿದ್ದು ಅಲ್ಲೇ ಕೂತಿದ್ದ ನಮ್ಮಜ್ಜಿ.

ಮಹಾಭಾರತದ ಭೀಷ್ಮನಷ್ಟೇ ವಯಸ್ಸಾಗಿದ್ದ ನಮ್ಮಜ್ಜಿಗೆ ಕಣ್ಣು ಪೂರ್ತಿ ಕಾಣುತ್ತಿರಲಿಲ್ಲ. ಕಿವಿ ಮಾತ್ರ ಬಹಳ ಚುರುಕು. ಮಾತು ಅರಳು ಹುರಿದ ಹಾಗೆ. ಅದೇಕೋ ಏನೋ ಗೊತ್ತಿಲ್ಲ, ಅಜ್ಜಿಯನ್ನು ಮತ್ತು ಸೋದರತ್ತೆಯರನ್ನು ನಾವೆಲ್ಲ ಮಕ್ಕಳು ಅದು, ಇದು, ಹೋಯಿತು, ಬಂತು ಎಂದೇ ಸಂಭೋದಿಸುತ್ತಿದ್ದೆವು. ‘‘ಯಾಕೇ ಹಂಗಂತೀಯಾ. ಏನಾಗಿದೆ ನಿನ್ನ ಹೆಸರಿಗೆ? ನೀನು ಭಾಗೀರಥಿ ಹಬ್ಬದ ದಿನ ಹುಟ್ಟಿದ್ದು. ಅದಕ್ಕೆ ನಿನಗೆ ಲಕ್ಷಣವಾಗಿ ಗಂಗಮ್ಮನ ಹೆಸರು ಇಟ್ಟಿದೀವಿ. ಜಾಹ್ನವಿ ಅಂತಾನೂ ಇರಬೇಕು ನಿನ್ನ ಇನ್ನೊಂದು ಹೆಸರು’’ - ಸಕಾರಣ ನೀಡಿತು ಅಜ್ಜಿ.

ಹಿಂದೂ ಹಬ್ಬಗಳ ಪಟ್ಟಿಯಲ್ಲಿ ಹುಡುಕಿದರೆ ಅಜ್ಜಿ ಹೇಳಿದ ಭಾಗೀರಥಿ ಹಬ್ಬ ಸಿಗಲಿಕ್ಕಿಲ್ಲ. ಗಂಗಾವತರಣವಾಯಿತೆಂದು ನಂಬಿರುವ ಆ ದಿನ ಅಜ್ಜಿಯ ಮಾತಿನಲ್ಲಿ ಭಾಗೀರಥಿ ಹಬ್ಬವಾಗಿತ್ತು! ಸಂಪ್ರದಾಯಸ್ಥರು ತರ್ಪಣಗಳನ್ನು ಸಲ್ಲಿಸುವ ಪರ್ವಕಾಲವದು. ಅರೆಬರೆ ಉಪವಾಸದ ಆ ದಿನವನ್ನು ಅಜ್ಜಿ ‘‘ಹಬ್ಬ’’ ಎಂದು ಅತಿಶಯವಾಗಿ ಬಣ್ಣಿಸಿದ್ದು ಕೇಳಿ ನನಗೆ ತಡೆಯಲಾರದ ನಗು ಬಂದಿತ್ತು. ಗಣೇಶ, ದೀಪಾವಳಿ, ದಸರ ಮುಂತಾದ ವೈಭವದ ಹಬ್ಬಗಳನ್ನು ಕಂಡಿದ್ದ ನನಗೆ, ಅಜ್ಜಿ ಹೇಳಿದ ಭಾಗೀರಥಿ ಹಬ್ಬ ಅಷ್ಟೇನೂ ಆಕರ್ಷಕ ಅನ್ನಿಸಿರಲಿಲ್ಲ.

ಅಲ್ಲದೆ, ಆಗ ಹೆಸರುಗಳು ಮಗು ಹುಟ್ಟಿದ ದಿನ, ನಕ್ಷತ್ರ, ಹಬ್ಬಗಳಿಗೆ ಸಂಬಂಧಪಟ್ಟಿರುತ್ತಿದ್ದುದು ಸಾಮಾನ್ಯ ವಿಷಯವಾಗಿತ್ತು. ಈಗೆಲ್ಲ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆದರು ಎಂಬ ಗಾದೆಯಂತೆ, ಮಗು ಹುಟ್ಟುವ ಮೊದಲೇ ಹತ್ತಾರು ಪುಸ್ತಕ, ಅಂತರ್ಜಾಲ ತಾಣಗಳಲ್ಲಿ ಹುಡುಕಾಡಿ, ತಮ್ಮ ಮಗುವಿಗೊಂದು ಮುದ್ದಾದ ಹೆಸರನ್ನು ಮೊದಲೇ ಆರಿಸಿಟ್ಟುಕೊಂಡಿರುತ್ತಾರೆ. ಆಗ ಮಗು ಹುಟ್ಟಿದ ಸಂದರ್ಭಕ್ಕೆ ತಕ್ಕಂತೆ, ಮನಸ್ಸಿಗೆ ಹೊಳೆದ ಹೆಸರಿಡುತ್ತಿದ್ದುದೇ ವಾಡಿಕೆ. ಉದಾಹರಣೆಗೆ ರಾಮನವಮಿ ದಿನ ಹುಟ್ಟಿದವರೆಲ್ಲಾ ರಾಮಚಂದ್ರ, ಶ್ರೀರಾಮರಾದರೆ, ಶುಕ್ರವಾರ ಹುಟ್ಟಿದ ಹೆಣ್ಣುಮಕ್ಕಳಿಗೆಲ್ಲಾ ಲಕ್ಷ್ಮೀದೇವಿಯ ಸಾವಿರಾರು ಹೆಸರುಗಳಲ್ಲೊಂದು ಖಚಿತ!

ರಾಧಾ-ಕೃಷ್ಣ, ರಾಮ-ಜಾನಕಿ, ಶ್ರೀನಿವಾಸ-ಪದ್ಮಾವತಿ....ಇವು ಪತ್ನೀಸಮೇತರಾಗಿ ಶೋಭಿಸುವ ನಮ್ಮ ದೇವಾನುದೇವತೆಗಳ ಹೆಸರುಗಳು. ಜೊತೆಗೆ ನಮ್ಮ ಮನೆಯ ಹಿರಿಯರ ಹೆಸರುಗಳೂ ಕೂಡ. ಇದರಂತೆ ಮತ್ತೆ ಕೆಲವು ಪುರಾಣಗಳಲ್ಲಿ ಬರುವ ಜೋಡಿ ಹೆಸರುಗಳು. ಈ ರೀತಿ ಒಂದಕ್ಕೊಂದು ಹೊಂದುವ ಹೆಸರಿರುವರು ಗಂಡ-ಹೆಂಡತಿಯರಾಗಿರುವುದು ಹೇಗೆ? ಎಂಬ ವಿಷಯ, ಬಾಲ್ಯದಲ್ಲಿ ನನ್ನ ಬೆರಗಿಗೆ ಕಾರಣವಾಗಿತ್ತು. ಇಂತಹ ಕುತೂಹಲದ ಪ್ರಶ್ನೆಗಳಿಗೆ ಹಿರಿಯರಿಂದ ಸರಿಯಾದ ಸಮಾಧಾನ ದೊರಕುತ್ತಿರಲಿಲ್ಲ, ಅಥವಾ ಏನೋ ಒಂದು ತಮಾಷೆಯ ಉತ್ತರದೊಂದಿಗೆ ಮಾತು ತೇಲಿಸಿ ಬಿಡುತ್ತಿದ್ದರು.

ಮದುವೆಗೆ ಋಣಾನುಬಂಧವೇ ಕಾರಣ ಎಂಬ ಮಾತುಗಳನ್ನು ಆಗಾಗ ಮನೆಯಲ್ಲಿ ಕೇಳುತ್ತಿದ್ದುದರಿಂದ, ಈ ರೀತಿ ಹೆಸರುಗಳು ಮ್ಯಾಚ್‌ ಆಗುವವರನ್ನೇ ದೇವರು ದಂಪತಿಗಳಾಗಿಸಿರಬಹುದೇನೋ ಎಂದು ನಂಬಿಯೂ ಇದ್ದೆ. ಎಲ್ಲಿಯವರೆಗೆ ಅಂದರೆ, ಮದುವೆಯಲ್ಲಿ ಹೆಣ್ಣಿನ ಹೆಸರನ್ನು ಬದಲಿಸಿ, ಹೊಸ ಹೆಸರು ಇಡುವ ಸಂಪ್ರದಾಯವೊಂದು ನಮ್ಮಲ್ಲಿದೆ ಎಂದು ತಿಳಿಯುವ ತನಕ! ಮುಂದೊಮ್ಮೆ ನಾನೇ, ಈ ಹೆಸರು ಬದಲಿಸುವ ಸಂಪ್ರದಾಯದಿಂದ, ಬದುಕಿನಲ್ಲಿ ಎದುರಿಸಬೇಕಾಗಿ ಬಂದ, ಸಂಕಷ್ಟವೊಂದರ ಸುದೀರ್ಘ ಕಥೆಯನ್ನು ಇಲ್ಲಿ ಬರೆದು, ನಿಮಗೆಲ್ಲಾ ಬೋರ್‌ ಹೊಡೆಸುವ ದುರ್ಬುದ್ಧಿ ನನಗಂತೂ ಇಲ್ಲ.

ಹಿಂದೆಲ್ಲ, ಗಂಡಂದಿರು ತಮ್ಮ ಹೆಂಡತಿಯರ ಹೆಸರು ಹಿಡಿದು ಕರೆಯುವ ರೂಢಿ ಇರಲಿಲ್ಲ. ಲೇ, ಏನೇ, ಈ ರೀತಿಯಾಗಿ ಕರೆಯುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಲು ಅಲ್ಲವಾದರೂ, ಹೆಂಡತಿಯರೂ ಗಂಡನ ಹೆಸರನ್ನು ಕೂಗಿ ಕರೆಯುತ್ತಿರಲಿಲ್ಲ. ಹೆಂಗಸರಿಗೊಂದು ಸ್ವಂತ ಅಸ್ತಿತ್ವವೇ ಇಲ್ಲದೆ, ಇಂತವರ ಮಗಳೆಂದೋ, ಇಂತವರ ಹೆಂಡತಿಯೆಂದೋ, ಇಂತಹ ಮನೆಯ ಸೊಸೆಯೆಂದೋ ಗುರುತಿಸುತ್ತಿದ್ದ ಕಾಲವೂ ಒಂದಿತ್ತು!

ಹೆಸರು ಹಿಡಿದು ಕರೆದರೆ, ಕರೆಸಿಕೊಂಡವರ ಆಯಸ್ಸು ಕ್ಷೀಣಿಸುವುದೆಂಬ ನಂಬಿಕೆಯಿದೆ. ಹಾಗಾಗಿ ಮಕ್ಕಳನ್ನೂ ಕೂಡ ಅವರ ನಿಜನಾಮದಿಂದ ಕರೆಯದೆ ಪಾಪಣ್ಣ, ಕೂಸಣ್ಣ, ಪುಟ್ಟಿ, ಪಾಪು ಮುಂತಾದ ಮುದ್ದಿನ ಹೆಸರುಗಳಿಂದ ಕರೆಯಲಾಗುತ್ತಿತ್ತು. ನಮ್ಮೂರಿನಲ್ಲಂತೂ ಇಂತಹ ಅಡ್ಡ ಹೆಸರುಗಳಿದ್ದ ಜನರನ್ನು ಊರಿನವರೂ ಅದೇ ಹೆಸರಿನಿಂದಲೇ ಕರೆಯುತ್ತಿದ್ದರಿಂದ, ಅವರ ನಿಜ ನಾಮಧೇಯವೇನೆಂಬುದು ನಮಗಿರಲಿ, ಸ್ವತಃ ಆ ವ್ಯಕ್ತಿಗಾದರೂ ಗೊತ್ತಿರುತ್ತಿತ್ತೋ ಇಲ್ಲವೋ. ಇದೇ ರೀತಿ ಊರವರ ಬಾಯಲ್ಲಿ ‘‘ಮಂದಿ’’ ಆದ ಮಂದಾಕಿನಿ ಕಥೆಯನ್ನು, ಹಾಸ್ಯ ಭಾಷಣಕಾರ ಗಂಗಾವತಿ ಬೀಚಿಯವರಿಂದಲೇ ಕೇಳಿ ನಲಿಯಬೇಕು.

ತನ್ನ ನಶ್ವರ ಬಾಳುವೆಯ ಅರಿವಿದ್ದೋ ಏನೋ, ಮಾನವನಿಗೆ ತನ್ನ ಹೆಸರನ್ನು ನಾಳೆಗೂ ಉಳಿಸಿಹೋಗುವ ಹಂಬಲ. ರಾಜಮಹಾರಾಜರು ಶಾಸನಗಳ ಮೂಲಕ ತಮ್ಮ ಹೆಸರು ಆಚಂದ್ರಾರ್ಕವಾಗಿ ಉಳಿಯಬೇಕೆಂದು ಬಯಸುತ್ತಿದ್ದರು. ದೇವಾಲಯಗಳಲ್ಲಿ ದೇವರಿಗಿಂತ ದಾನಿಗಳ ಪಟ್ಟಿಯೇ ದೊಡ್ಡದಾಗಿ ಕಾಣುತ್ತದೆ. ಹಣ ಕೊಟ್ಟವರಿಗೆ ಪುಣ್ಯದ ಜೊತೆಗೆ, ತಮ್ಮ ಹೆಸರನ್ನೂ ಗೋಡೆಗಳ ಮೇಲೆ ಮೆರೆಸಿದ ಸಂತೃಪ್ತಿ. ಮಂತ್ರಿಮಹೋದರರು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ತಮ್ಮ ಹೆಸರುಗಳಿರುವ ಅಡಿಗಲ್ಲುಗಳನ್ನು ನೆಡುತ್ತಾರೆ. ಆ ಮೂಲಕ ಇತಿಹಾಸದಲ್ಲಿ ಅಮರರಾಗುಳಿವ ಉದ್ದೇಶ ಅವರದು. ಎಷ್ಟೋ ಕಡೆ ಹೀಗೆ ಹಾಕಿದ ಕಲ್ಲುಗಳಷ್ಟೇ ಇರುತ್ತವೆ! ಉದ್ದೇಶಿತ ಯೋಜನೆಗಳ ಗತಿ ಏನಾಯಿತೆಂದು ಯಾರಿಗೂ ಗೊತ್ತಿರುವುದಿಲ್ಲ. ತಮ್ಮ ಹೆಸರು ಸದಾ ಸುದ್ದಿಯಲ್ಲಿರಬೇಕು, ಪತ್ರಿಕೆ ಪುಟಗಳಲ್ಲಿ ಚಲಾವಣೆಯಲ್ಲಿರಬೇಕು ಎಂದು ಸಿನಿಮಾ ತಾರೆಯರಂತೂ ತರಾವರಿ ಗಿಮಿಕ್ಕುಗಳನ್ನು ಮಾಡುತ್ತಲೇ ಇರುತ್ತಾರೆ.

ಒಟ್ಟಿನಲ್ಲಿ ಎಲ್ಲರಿಗೂ ಹೆಸರು ಬೇಕು! ಮಂಗಳ ಗ್ರಹದ ಅಂಗಳಕ್ಕೆ ಹೋಗಿಳಿದರೂ, ಅಲ್ಲಿಯ ಕಲ್ಲು ಬಂಡೆಗಳನ್ನು ಹುಡುಕಿ ಮೊದಲು ತನ್ನ ಹೆಸರು ಕೊರೆದಿಡಬೇಕು. ಅದೆಲ್ಲ ಇರಲಿ, ಹೆಸರೇಕೆನ್ನುವ, ಹೆಸರು ಬೇಕೆನ್ನುವ, ಹೆಸರುವಾಸಿಯಾದವರ ಹಾಹಾಕಾರಗಳ ನಡುವೆ, ಸದ್ದಿಲ್ಲದೆ ದುಡಿದು, ತೆರೆಮರೆಗೆ ಸರಿದು ಹೋದ, ಹೆಸರಿಲ್ಲದವರ ಲೆಕ್ಕ ಇಟ್ಟವರಾದರೂ ಯಾರು?

ಹೆಸರಿಲ್ಲದೆ ಮಸುಕಾದವರಿಗೆಲ್ಲ ಕವಿವಾಣಿಯ ಸಾಂತ್ವನ ಹನಿಸುತ್ತಾ, ಈ ಹೆಸರು ಪುರಾಣಕ್ಕೆ ಮುಕ್ತಾಯ ಹಾಡಲೇ?

ಹುಲ್ಲು ತಡಿಕೆ ಜೋಪಡಿಯಾಳು ಹುಟ್ಟಿ
ಕಲ್ಲನೆತ್ತಿ ಕಟ್ಟಡಗಳ ಕಟ್ಟಿ
ಜಲ್ಲಿ ಹರಡಿ ಕರಿ ಹಾದಿಯ ಮಾಡುತ
ಹಲ್ಲು ಕಿರಿದು ತೇರೋಟವ ನೋಡುವ
ಹೆಸರೇ ಇಲ್ಲದವರು ನಾವು!
ಹೆಸರೇ ಇಲ್ಲದವರು!!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
By any other name rose smells as sweet. A commentary on names of places and persons in the backdrop of Changing Bangalore as Bengalooru. A write up by Triveni Srinivasa Rao.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more