• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲೆಯನ್ನು ತೆಗೆಯೋ ಬಟ್ಟೆ ಒಗೆಯೋದೂ ಒಂದು ಅದ್ಭುತ ಕಲೆ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಬಟ್ಟೆ ಒಗೆಯೋದೇ ಒಂದು ಕಲೆ . . . 'ಕಲೆಯನ್ನು ತೆಗೆಯೋ ಬಟ್ಟೆ ಒಗೆಯೋದೂ ಒಂದು ಕಲೆ' ಎನ್ನೋಣ. ಬಟ್ಟೆಯನ್ನು ಹೇಗೆಲ್ಲಾ ಒಗೀಬಹುದು? ಬಂಡೆಗೆ ಬಟ್ಟೆಯನ್ನು ಬಡಿಯಬಹುದು, ಬಡಿಗೆಯಿಂದ ಬಟ್ಟೆ ಬಡಿಯಬಹುದು, ಚೆನ್ನಾಗಿ ಸೋಪು ಹಚ್ಚಿ ಕಸಕಬಹುದು, washing machine'ನಲ್ಲಿ ಹಾಕಿಯೂ ಒಗೆಯಬಹುದು.

ಬಟ್ಟೆಯನ್ನು 'ಒಗೆಯುವುದು' ಅಂತೇಕೆ ಕರೀತಾರೆ? ನಮ್ಮಲ್ಲಿ ಒಗೆಯೋದು ಎಂದರೆ ಎಸೆಯುವುದು ಎಂದು ನೀವು ಹೇಳುವುದಾದರೆ, ಸರಿಯಾಗಿ ಬಟ್ಟೆಯನ್ನು ಒಗೆಯದೇ ಇದ್ದರೆ, ಅದು ಹಾಳಾಗಿಹೋಗುತ್ತೆ, ಆಗ ಅದನ್ನು ಒಗೆಯಲೇಬೇಕು (ಎಸೆಯಬೇಕು) ಅಲ್ಲವೇ?

ಕೆಲಸಕ್ಕೆ ಮನೆಗೆ ಬರುವ ಲಚ್ಚಿಗಳು ಬಟ್ಟೆ ಒಗೆಯುವ ಪರಿ ಬಹಳ ಭಿನ್ನ. ಕೆಲವರು ಬಂಡೆಯನ್ನೇ ಸೀಳುವ ಹಾಗೆ ಬಟ್ಟೆ ಒಗೆದರೆ, ಮತ್ತೆ ಕೆಲವರು ಬಂಡೆಗೆಲ್ಲಿ / ಬಟ್ಟೆಗೆಲ್ಲಿ ನೋವಾಗುತ್ತದೋ ಅಂತ ಒಗೀತಾರೆ. ಕೆಲವರದ್ದು ಸಂಗೀತಮಯ. ನಮ್ಮ ಮನೆಗೆ ಬರುತ್ತಿದ್ದ ಕೆಲಸದಾಕೆ ಬಟ್ಟೆಯು ಮೇಲಕ್ಕೆತ್ತಿ ಅದು ಬಂಡೆಯ ಮೇಲೆ ಲ್ಯಾಂಡ್ ಆಗುವಾಗ ಸುಯ್ ಅನ್ನುತ್ತಿದ್ದಳು. ದಿನವೊಂದಕ್ಕೆ ಎಷ್ಟು ಬಟ್ಟೆ ಬಡೀತಿದ್ಲೋ ಎಷ್ಟು ಸುಯ್ ರಾಗ ಆಕೆಯಿಂದ ಹೊರಬರುತ್ತಿತ್ತೋ ನಾನಂತೂ ಲೆಕ್ಕ ಇಟ್ಟಿಲ್ಲ ಬಿಡಿ.

ಬುದ್ಧಿವಂತ ಮಾನವನನ್ನೇ ಧೂಳೆಬ್ಬಿಸುವ ಪರಾಕ್ರಮಿ ಧೂಳು!

ಇಂಥಾ ಪರಿ ಬಟ್ಟೆ ಒಗೆಯುವಿಕೆ ಕಂಡಾಗಲೆಲ್ಲಾ 'ಸರ್ವರ್ ಸೋಮಣ್ಣ' ಚಿತ್ರದಲ್ಲಿ ಬಿಳೀ ಶರಟನ್ನು ಒಗೆಯುವ ಜಗ್ಗೇಶ್ ನೆನಪಾಗುತ್ತಾರೆ. ಬಟ್ಟೆಯನ್ನು ಎಷ್ಟು ಒಗೆಯಬೇಕೋ ಅಷ್ಟು ಒಗೆದರೆ ಹೆಚ್ಚು ಬಾಳಿಕೆ ಬರುತ್ತದೆ ಅಂತ ಒಂದೆಡೆ ಓದಿದೆ. ಹೇಗೆ ಅಂತೀರಾ? ಪುಷ್ಪಕ ವಿಮಾನ ಚಿತ್ರದಲ್ಲಿ ಕಮಲಹಾಸನ್ ಷರಟು ಒಗೀತಾರಲ್ಲಾ ಹಾಗೆ. "ಅಂಕೆಯಿರದ ಮನಸನು ದಂಡಿಸುವುದು ನ್ಯಾಯ, ಮೂಕ ಮುಗ್ದ ದೇಹವ ಹಿಂಸಿಸುವುದು ಹೇಯ" ಎಂಬ ಹಾಡು ಈ ರೀತಿಯ ಬಟ್ಟೆ ಒಗೆಯುವಿಕೆಗೆ ಹೊಂದುತ್ತೆ.

ಹಾಗಿದ್ದರೆ ಬಟ್ಟೆಯನ್ನು ಒಗೆಯುವುದು ಹೇಗೆ? ಹಲವರು ಹಲವು ರೀತಿಯಲ್ಲಿ ಹೇಳಿದ್ದಾರೆ. ಕೆಲವರ ಬಟ್ಟೆಗಳು ಕೊಳೆಯೇ ಆಗಿರದೆ ಬೆವರಿನ ವಾಸನೆಯಿಂದ ನರಳುತ್ತಿರಬಹುದು. ಗಾಳಿ ಬೀಸುವ ಕಡೆ ಅದನ್ನು ಒಣಗಿ ಹಾಕಿಬಿಡಿ ಸಾಕು ಎನ್ನುತ್ತಾರೆ ಬಲ್ಲವರು. ಕೆಲವೊಮ್ಮೆ ಬಟ್ಟೆಯನ್ನು ತಣ್ಣೀರಿನಲ್ಲಿ ಹಿಂದಿನ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಜಾಲಿಸಿ ಒಣಗಿ ಹಾಕಿದರೆ ಸಾಕು ಎಂದೂ ಹೇಳುತ್ತಾರೆ.

ನಮ್ಮ ಮನೆಯಲ್ಲಿ, ಅಂದು, ಸೊಳ್ಳೆಪರದೆ, ಹೊದಿಕೆಗಳನ್ನು ನಮ್ಮಪ್ಪ ಒಗೆಯುತ್ತಿದ್ದರು. Power ಬೇಕಿತ್ತಾಲ್ಲಾ ಅದಕ್ಕೆ. ಬೆಳಿಗ್ಗೆ ಅವನ್ನು ಒಂದೆರಡು ಘಂಟೆಗಳ ಕಾಲ ಬಿಸಿನೀರಿನಲ್ಲಿ ನೆನೆಸಿಟ್ಟು ನಂತರ ಜಾಲಿಸಿ, ಮತ್ತೆ ಒಂದು ಘಂಟೆ ಕಾಲ ಸೋಪಿನಪುಡಿಯ ನೊರೆಭರಿತ ನೀರಿನಲ್ಲಿ ಅದ್ದಿಟ್ಟು ಆ ನಂತರ ಒಗೆಯುವಿಕೆ. ಒಗೆಯುವುದೇ ದೊಡ್ಡ ಕೆಲಸವಾದರೆ ಅದನ್ನು ಹಿಂಡುವುದು ಇನ್ನೊಂದು ಸಾಹಸ. ಬಟ್ಟೆಯ ಒಂದು ಕೊನೆ ನಮ್ಮಪ್ಪ ಹಿಡಿದರೆ ಇನ್ನೊಂದು ನಮ್ಮಲ್ಲಿ ಒಬ್ಬರು ಹಿಡಿದು ತಿರುಚುವುದು. ಮಧ್ಯೆ ಕೈಜಾರಿ ಕೆಳಗೆ ಬಿದ್ದು ಮತ್ತೆ ಮಣ್ಣಾದರೆ ಬೈಸಿಕೊಳ್ಳೋದು ಮಾಮೂಲಿ.

ರಾಶಿರಾಶಿ ವಿಶ್ ಗಳ ನಡುವೆ ಮೌಲ್ಯ ಕಳೆದುಕೊಂಡ ಶುಭಾಶಯ

ದೈನಂದಿನ ಬಟ್ಟೆಗಳನ್ನು ತಣ್ಣೀರಿನಲ್ಲಿ ಒಗೆಯಬೇಕು. ಸೋಪಿನಪುಡಿ ಹಾಕಿ ನೆನೆಹಾಕಿ ಒಗೆದರೆ ಸಾಕು ಅಥವಾ ಸೋಪನ್ನು ಹಚ್ಚಿ ಉಜ್ಜಿದರೆ ಸಾಕು. ಮನಸ್ಸು ರೋಸಿದಾಗ ಆ ಸಿಟ್ಟನ್ನು ಬಟ್ಟೆಯ ಮೇಲೆ ತೀರಿಸಿಕೊಳ್ಳಬೇಡಿ. ಹಿತವಾಗಿ ಚಚ್ಚಿದರೆ ಬಟ್ಟೆ ಒಗೆಯುವುದು stress reliever ಎಂಬುದನ್ನೂ ಮರೆಯಬೇಡಿ. ನಮ್ಮ ಮನೆಯಲ್ಲಿ ನಿಂತು ಒಗೆಯುವಂಥಾ ಬಂಡೆ ಕಲ್ಲಿತ್ತು. ಕೆಲವು ಮನೆಯಲ್ಲಿ ಕೂತು ಒಗೆಯುವ inclined ಆಗಿರುವ ಹಾಸುಗಲ್ಲೂ ಇರುತ್ತದೆ. ಮುಂಚಿನ ದಿನಗಳಲ್ಲಿ ಬಂಡೆಗಲ್ಲು ಅನಿವಾರ್ಯ ಅಂತಿತ್ತು, ಈಗ ಇದು backup ಪ್ಲಾನ್ ರೀತಿ ಅಂದುಕೊಳ್ಳುತ್ತೇನೆ. apartment ಜೀವನವು ಕಾಲಿಟ್ಟ ಮೇಲೆ ಬಂಡೆಗಲ್ಲುಗಳೇ ಇಲ್ಲದ ಮನೆಗಳು ಸಾಮಾನ್ಯ ನೋಟ ಎಂದುಕೊಳ್ಳುತ್ತೇನೆ.

ಒಂದು ಮನೆಯಲ್ಲಿನ ಬಟ್ಟೆಗಳಲ್ಲಿ ಅತೀ ಬೇಗ ಕೊಳೆಯಾಗುವುದು ಯಾವುದು? ಸಿಂಪಲ್ ಪ್ರಶ್ನೆ ಅಲ್ವಾ? ನಾವು ಸ್ನಾನ ಮಾಡಿ ಶುಚಿರ್ಬೂತರಾಗಿದ್ದೇವೆ ಎಂದುಕೊಂಡು ಆ ಮೈಯನ್ನು ಒರೆಸಿಕೊಂಡ 'ಟವೆಲ್'. ಇದು ಬಿಟ್ಟರೆ ಅಡುಗೆಮನೆಯ ಕೈವಸ್ತ್ರ. ಕ್ಲೀನ್ ಆಗಿ ಸ್ನಾನ ಮಾಡಿದ್ದಾಗಿಯೂ ಟವೆಲ್ ಏಕೆ ಕೊಳೆ? ಸ್ನಾನ ಮಾಡಿದಾಗ ಕೆಲವು ಕೊಳೆ, ಬಚ್ಚಲಲ್ಲಿ ಹೋದರೂ ಹಲವು ಬರೀ loosen ಆಗುತ್ತೆ, ಒರೆಸಿಕೊಂಡಾಗ ಟವೆಲ್'ಗೆ ಶಿಫ್ಟ್ ಆಗುತ್ತೆ. ಅದಲ್ಲದೆ, ಒದ್ದೆ ಮೈಯನ್ನು ಧೂಳು ಕ್ಷಣಾರ್ಧದಲ್ಲಿ ಅಪ್ಪುತ್ತೆ. ಧೂಳಿನ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಚರ್ಚೆಯಾಗಿದೆ. ಇಂಥಾ ಟವೆಲ್ ಅನ್ನು ಸರಿಯಾದ ರೀತಿಯೇ ಒಗೆಯಬೇಕು. ವಾರಕ್ಕೊಮ್ಮೆ ಒಗೆಯುವ ಟವೆಲ್'ನಿಂದ ಮೈ ಕೊಳಕಾಗುತ್ತದೆಯೇ ವಿನಃ ಶುಚಿಯಾಗೋಲ್ಲ. ಹಾಗಾಗಿ ಮೈ ಒರೆಸಿಕೊಳ್ಳುವ ಟವೆಲ್ ತೆಳ್ಳಗೆ ಇರಲಿ ಸಾಕು. ದಿನವೂ ಒಗೆದರೂ ಬೇಗ ಒಣಗುತ್ತದೆ. turkey ಟವೆಲ್ ಬೇಗ ಒಣಗೋದಿಲ್ಲ. ನಿಮ್ಮ ಮನೆಯಲ್ಲಿ dryer ಸಾಧನ ಇದ್ದರೆ ಎಂಥಾ towel ಆದರೂ ಅಡ್ಡಿಯಿಲ್ಲ ಬಿಡಿ.

ಅಮೆರಿಕದಲ್ಲಿ ಅತೀ ಚಳಿ... ಅಲ್ಲಲ್ಲ ಮಾರಕ ಚಳಿ!

ಕೊಳೆಯನ್ನು ತೊಳೆದ ಮೈಯನ್ನು ಒರೆಸಿಕೊಂಡ ಟವೆಲ್'ನಲ್ಲೇ ಕೊಳೆ ಇರಬಹುದಾದರೆ, ಈ ಕೊಳೆಯನ್ನು ತೊಳೆಯುವ washing machine ತನ್ನೊಡಲಲ್ಲಿ ಇನ್ನೆಷ್ಟು ಕೊಳೆಯನ್ನು ಹುದುಗಿಸಿಕೊಂಡಿರಬಹುದು? ಮಷೀನ್ ಅನ್ನು ಕ್ಲೀನ್ ಆಗಿ ಇಟ್ಟುಕೊಂಡಲ್ಲಿ ಹೆಚ್ಚಿ ಬಾಳಿಕೆ ಬರುತ್ತದೆ ಎನ್ನುತ್ತಾರೆ ಬಲ್ಲವರು. ಅದರಂತೆಯೇ, ಬಟ್ಟೆ ಒಗೆದ ಮೇಲೆ ಬಂಡೆಯನ್ನೂ ಬ್ರಷ್'ನಿಂದ ಉಜ್ಜಿ ತೊಳೆದುಬಿಡಿ ಆಯ್ತಾ?

ಸಿಕ್ಕಾಪಟ್ಟೆ ಹೇಳಿಕೊಟ್ಟುಬಿಟ್ಟರೆ ಹೇಗೆ ಒಬ್ಬ ವಿದ್ಯಾರ್ಥಿ ಅಹೋರಾತ್ರಿ ಬುದ್ದಿವಂತನಾಗುವುದಿಲ್ಲವೋ ಹಾಗೆಯೇ ತುಂಬಾ ಸೋಪು / ಸೋಪಿನಪುಡಿ ಹಾಕಿದ ಮಾತ್ರಕ್ಕೆ ಕೊಳೆ ಕಿತ್ತುಹೋಗುತ್ತದೆ ಅಂತಲ್ಲಾ! ಬಟ್ಟೆ ಕಿತ್ತುಹೋಗುತ್ತೆ ಅಷ್ಟೇ!

ಮರೆಯಬೇಕು ಅನ್ನೋದನ್ನ ನೆನಪಿಟ್ಟುಕೊಳ್ಳುವುದನ್ನು ಮರೆಯದಿರಿ!

ಒಂದು ತರಗತಿಯಲ್ಲಿ ಹೇಗೆ ವಿವಿಧ ಬುದ್ಧಿಮತ್ತೆಯ ಮಕ್ಕಳಿರುವರೋ ಹಾಗೆಯೇ ಒಮ್ಮೆ ಒಗೆಯಬಹುದಾದ ಒಂದು ಬಟ್ಟೆ ರಾಶಿ ಕೂಡಾ. ಹೇಗೆ ಒಬ್ಬೊಬ್ಬ ವಿದ್ಯಾರ್ಥಿಗೂ ಬೇರೆ ಬೇರೆ treatment ನೀಡಿದರೆ ಎಲ್ಲರೂ ತಮ್ಮದೇ ವಿಶಿಷ್ಟ ರೀತಿಯಲ್ಲಿ ಬಾಳುತ್ತಾರೋ ಹಾಗೆಯೇ ಒಂದೊಂದೂ ಬಟ್ಟೆಯನ್ನು ಹೇಗೆ ಒಗೆಯಬೇಕು ಅನ್ನೋದನ್ನು ಅದರ instructions label ಹೇಳುತ್ತದೆ. ಕೆಲವೊಂದನ್ನು ತಣ್ಣೀರಿನಲ್ಲೇ ಒಗೆಯಬೇಕು, ಕೆಲವು ಬಿಸಿನೀರಿನಲ್ಲಿ. ಆ ಬಿಸಿನೀರು ಕೂಡ ಒಂದಷ್ಟು ತಾಪಮಾನ ದಾಟಬಾರದು. ಕೆಲವಕ್ಕೆ ಬ್ಲೀಚ್ ಮಾಡಬೇಕು, ಕೆಲವಕ್ಕೆ ಕೂಡದು. ಕೆಲವನ್ನು ಬಡಿಯಬಾರದು, ಕೆಲವನ್ನು ಮುದುಡಬಾರದು ಹೀಗೆ ಎಲ್ಲವೂ ಹೆಚ್ಚುಕಮ್ಮಿ ಭಿನ್ನ. ಆದರೆ ಹೀಗೆಲ್ಲಾ ವಿವಿಧ ರೀತಿಯಲ್ಲಿ ದಿನವೂ ವಿಂಗಡಿಸಿ ಬಟ್ಟೆ ಒಗೆಯಲು ಸಾಧ್ಯವೇ? ಹೀಗೆಯೇ ಒಂದು ತರಗತಿಯಲ್ಲೂ ಕೂಡ.

ಇಲ್ಲೊಂದು ಪಂಗಡ ಇದೆ. ಕೆಲವಕ್ಕೆ ನೀರು ಸೋಕಿಸಬಾರದು. ಅವಕ್ಕೆ ಡ್ರೈ ಕ್ಲೀನಿಂಗ್ ಆಗಬೇಕು. ಆದರೆ dry cleaning ಎಂದ ಮಾತ್ರಕ್ಕೆ ಅದು ಡ್ರೈ / ಒಣ ಅಂತಲ್ಲಾ. ನೀರಿನ ಬಳಕೆ ಇಲ್ಲಾ ಅಂತ ಅಷ್ಟೇ. ಹಾಗಿದ್ರೆ ಬಟ್ಟೆ ಒಗೆಯೋದು ಹೇಗೆ? perc ಅಥವಾ perchloroethylene ಎಂಬ liquid solvent ಬಳಕೆಯಿಂದ ಬಟ್ಟೆ ಒಗೆಯುವ ವಿಧಾನವನ್ನು ಡ್ರೈ ಕ್ಲೀನಿಂಗ್ ಎನ್ನುತ್ತಾರೆ. ಅರೇ! ಅಷ್ಟೇನಾ? ನಾವೂ ಮನೆಯಲ್ಲೇ ಮಾಡಬಹುದಲ್ಲವೇ? ಸುಮ್ಮನೆ ಆ ಅಂಗಡಿಯನಿಗ್ಯಾಕೆ ಅಷ್ಟು ದುಡ್ಡು ತೆರಬೇಕು ಎನ್ನುವ ಮುಂಚೆ ಇದು ತಿಳಿದಿರಲಿ. perc ಅನ್ನು ಸಿಡಿಸಿ ಕ್ಲೀನಿಂಗ್ ಮಾಡುವುದರಿಂದ ಅಲ್ಲಿನ ಪರಿಸರದಲ್ಲಿರುವವರಿಗೆ ತಲೆನೋವು, ತಲೆಸುತ್ತು, ಮೂರ್ಛೆ ಬೀಳುವುದು ಎಂಬ ಇತ್ಯಾದಿ ತಲೆಬಿಸಿ ಇರುತ್ತದೆ. ಎಚ್ಚರಿಕೆ ವಹಿಸಿ! ಯಪ್ಪಾ ಸಹವಾಸನೇ ಬೇಡ ಅಂತೀರಾ?

ಬಣ್ಣ ಹೋಗುವ ಬಟ್ಟೆಗಳ ಬಗ್ಗೆ ನಿಮಗೆ ಗೊತ್ತು. ಬಣ್ಣ ಎಲ್ಲೂ ಹೋಗೋಲ್ಲ ಬಕೀಟಲ್ಲೇ ಇರೋದೂ ನಿಮಗೆ ಗೊತ್ತು. ಒಂದು ಬಣ್ಣ ಬಿಡುವ ಬಟ್ಟೆಯನ್ನು ಮಿಕ್ಕ ಬಟ್ಟೆಗಳೊಂದಿಗೆ ನೆನಸಿಟ್ಟಾಗ ಹೇಗೆ ಆ ಬಣ್ಣ ಬಿಟ್ಟ ಬಟ್ಟೆಯಿಂದ ಮಿಕ್ಕ ಬಟ್ಟೆಗಳು ಹಾಳಾಗಬಹುದೋ ಹಾಗೆಯೇ ಜೀವನ. ಎಲ್ಲವೂ ಸರಿಯಿದ್ದು ಎಲ್ಲೋ ಒಂದು ಕಡೆ, ಯಾವುದೋ ಒಂದರಿಂದ ಶುರುವಾದ ಅಪಶ್ರುತಿಯಿಂದ ಮಿಕ್ಕೆಲ್ಲವೂ (ಸಂಬಂಧಗಳೂ) ಹಾಳಾಗಬಹುದು.

ಬಟ್ಟೆಗಳನ್ನು ಒಂದೆಡೆ ಸೇರಿಸಿ ಒಗೆಯುವ ಮುನ್ನ ವಿಂಗಡಿಸಲು ಇಂತಿಷ್ಟು ಸಮಯ ಅಂತ ಇಟ್ಟುಕೊಳ್ಳಿ. ಅದರಂತೆಯೇ ಜೀವನದಲ್ಲಿ ಇನ್ನೆಷ್ಟೇ busy ಇದ್ದರೂ, ಸಂಬಂಧಗಳ ವಿಚಾರದಲ್ಲಿ ಒಂದಷ್ಟು ಸಮಯ ಇಟ್ಟುಕೊಳ್ಳಿ. ಸಮಯ ತೆಗೆದುಕೊಂಡು ಒಗೆಯುವ ಬಟ್ಟೆಗಳನ್ನು ಸರಿಯಾಗಿ ನೋಡಿಕೊಂಡರೆ ಆ ಬಟ್ಟೆಗಳು ಹೆಚ್ಚು ಬಾಳಿಕೆ ಬರುತ್ತದೆ. ಸಂಬಂಧಗಳು ಹಾಳಾಗದಂತೆ ಅವಕ್ಕೆ ಒಂದಷ್ಟು ಸಮಯ ಕೊಟ್ಟು ನೋಡಿಕೊಂಡರೆ ಮನೆಮನೆಗಳಲ್ಲಿನ ಸಂಬಂಧಗಳೂ ಹೆಚ್ಚು ಬಾಳಿಕೆ ಬರುತ್ತದೆ.

ನಾಳೆಯಿಂದ ಬಟ್ಟೆಗಳನ್ನು ನೆನೆಸಿಡುವಾಗ ಲೇಖನ ನೆನಸಿಕೊಳ್ಳಿ ಆಯ್ತಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Your easy guide to the art of washing clothes with various methods. Color of clothes is like maintaining the relationship with dear ones. Srinath Bhalle from Richmond USA, writes about the art of doing laundry. Do you wash your clothes at home?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more