ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ನೇರವಾಗಿ ಒಂದು ಮಾತು straight ಆಗಿ ಹೇಳಿಬಿಡ್ತೀನಿ. ಹೊಗಳಿ ಹೊನ್ನ ಶೂಲಕ್ಕೆ ಏರಿಸದಿರಿ, ಬೇಕಿದ್ರೆ ಅದನ್ನೇ ಕಾಣಿಕೆ ಅಂತ ಕೊಟ್ಟುಬಿಡಿ! ಕಣ್ಣಿಗೊತ್ತಿಕೊಂಡು ತೊಗೋತೀನಿ!

"ಇದು ನಿಮ್ಮ ಓವರ್-ಕಾಂಫಿಡೆನ್ಸ್ ಅಂತ ಅನ್ನಿಸಲಿಲ್ಲವೇ? ನಿಮ್ಮನ್ನು ಯಾರು ಹೊಗಳಿದರೂ ಅಂತ?" . . . "ವಿಷಯ ಇರೋದೇ ಅಲ್ಲಿ! ನನ್ನನ್ನ ಯಾರಾದ್ರೂ ಹೊಗಳಿದ್ರೆ ಇರಲಿ ಅಂತ ಹೇಳ್ದೆ ಅಷ್ಟೇ."

ನೀವು Multitaskerರೋ? Unitaskerರೋ?

ಒಂದಾನೊಂದು ಕಾಲದಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದಾನೊಂದು ಕಾಲದಲ್ಲಿ ಅಂದರೆ 1742 ಅಲ್ಲ. ನಾನು ಅಷ್ಟು ಹಳಬ ಅಲ್ಲ! ಒಂದಷ್ಟು ವರ್ಷಗಳ ಹಿಂದೆ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಒಂದು ಸಮಾರಂಭದಲ್ಲಿ "ನಮ್ಮಮ್ಮ ಶಾರದೆ" ಹಾಡನ್ನು ಹೇಳಿದರು. ಹಾಡು ಎಂದರೇನು ಎಂಬುದನ್ನು ಸ್ವಲ್ಪ ಬಲ್ಲ ನನಗೆ, ಅವರ ಹಾಡುವಿಕೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೇರವಾಗಿ ಆಡೋ ಮಾತು ಒಬ್ಬರ ಉನ್ನತಿಗೆ ಒಳಿತು ಎಂಬರ್ಥದಲ್ಲೇ ನಾನಾಕೆಗೆ 'ನೀವು ಹಾಡಿದ್ದು ನನಗೆ ಹಿಡಿಸಲಿಲ್ಲ' ಎಂದಿದ್ದೆ. ಆ ನಂತರ ಆಕೆ ನನ್ನೊಂದಿಗೆ ಮಾತು ಕಡಿಮೆ ಮಾಡಿದ್ದು ಬೇರೆ ವಿಷಯ. ಆದರೆ ಇಲ್ಲಿನ ಅಸಲಿ ವಿಷಯ ಏನಪ್ಪಾ ಅಂದ್ರೆ, ನಮ್ಮದೇ ಡಿಪಾರ್ಟ್ಮೆಂಟ್ ತಲೆ ಆಲಿಯಾಸ್ ಹೆಡ್ಡು (ಹೆಡ್'ಉ) ಆಕೆಯನ್ನು ಕುರಿತು "ವಾಹ್ ವಾಹ್ ವಾಹ್! ಏನ್ ಹಾಡಿದ್ರಿ . . . ನನಗಂತೂ ಎಂ.ಎಸ್ ಸುಬ್ಬಲಕ್ಷ್ಮಿ ನೆನಪಾದರು" ಅಂತ! ಈ ಲೆವೆಲ್ಗಾ ಹೊಗೊಳೋದು ಅಂದ್ರೆ?!

What kind of appreciation do you expect

ಪರಿಚಯ ಇರದವರಿಂದ ಹೊಗಳಿಕೆ ಸ್ವೀಕರಿಸುವಾಗ ಇರುವ ವಿಶಾಲ ಹೃದಯ, ಪರಿಚಯದವರಿಂದಲೇ / ಸ್ವಂತದವರಿಂದಲೇ ತೆಗಳಿಕೆ ಸ್ವೀಕರಿಸುವಾಗ ಇರುವುದಿಲ್ಲ, ಅಲ್ಲವೇ?

ನಿಮಗೆಲ್ಲಾ ತಿಳಿದಿರುವಂತೆ Praise ಅಂಬೋದು appraisal'ನ ಭಾಗ. ಮೊದಲಿಗೆ ನಾವು ಮಾಡಿರುವ ಒಳ್ಳೆಯ ಕೆಲಸಗಳು ಇದ್ದರೇ ಅದನ್ನು ಹೊಗಳಿ ನಂತರ improvements ಎಂಬ ಟೈಟಲ್ ಅಡಿಯಲ್ಲಿ ತೆಗಳೋದು! ಇದು norm.

ಉಡುಗೊರೆ ಏನ್ ಕೊಡೋದು, ಅದೇ ಒಂದು ದೊಡ್ಡ ತಲೆಬಿಸಿ

ಒಮ್ಮೆ ಹೀಗಾಯ್ತು. ಹಳೇ ಜೋಕ್ ಎಂದುಕೊಂಡರೂ ಅಡ್ಡಿಯಿಲ್ಲ. ಈತ ತನ್ನ ಬಾಸ್'ನ ಚೇಂಬರ್'ಗೆ ಅಡಿಯಿಟ್ಟು ಆತನ ಮುಂದೆ ಕೂಡುತ್ತಾನೆ. ಬಾಸ್ "ನೀನೊಬ್ಬ ಅದ್ಬುತ ಕೆಲಸಗಾರ. ಚಿಕ್ಕವರು ನಿನ್ನನ್ನು ನೋಡಿ ಕಲೀಬೇಕು. ಕಸ್ಟಮರ್'ಗೆ ನಿನ್ನ ಮೇಲೆ ಅತೀ ವಿಶ್ವಾಸ. ನಿನ್ನನ್ನು ಮೆನೇಜರ್ ಜಾಗಕ್ಕೆ ಪ್ರಮೋಟ್ ಮಾಡ್ತಿದ್ದೀನಿ ಡೇವಿಡ್" ಎನ್ನುತ್ತಾನೆ. ಈವರೆಗೆ ತಾನು ಮಾಡದೆ ಇದ್ದ ಕೆಲಸಕ್ಕೆ ಹೊಗಳಿಸಿಕೊಂಡು ಉಬ್ಬಿಹೋಗಿದ್ದ ಆತ, ಕೊನೆಯಲ್ಲಿ ತನ್ನ ಬಾಸ್ ಆಡಿದ ಮಾತಿಗೆ ಧೊಪ್ಪನೆ ಬೀಳುವಂತಾಗಿ ಸಾವರಿಸಿಕೊಂಡು ನುಡಿಯುತ್ತಾನೆ "Sir! I am John" ಅಂತ!

What kind of appreciation do you expect

ಈ ವಿಷಯ ಯಾಕೆ ಹೇಳಿದೆ ಅಂದ್ರೆ, ಯಾರಾದರೂ ನಮ್ಮನ್ನು ಹೊಗಳುವಾಗ ನಾವು ಆ ಹೊಗಳಿಕೆಗೆ ಪಾತ್ರವೇ ಎಂಬುದನ್ನೇ ಯೋಚಿಸದೆ ಸ್ವೀಕರಿಸುತ್ತಾ ಹೋಗುತ್ತೇವೆ. ಅವರು ಯಾವ ದುರುದ್ದೇಶವೂ ಇಲ್ಲದೆ ಹೊಗಳಿದ್ದರೆ ಅಡ್ಡಿಯಿಲ್ಲ ಬಿಡಿ, ಆದರೆ ಇನ್ನೇನೋ ಹುನ್ನಾರ ಇದ್ದಲ್ಲಿ ಮಿಕ ಬಿತ್ತು ಅಂತಲೇ ಅರ್ಥ!

ಈ ಪರಿಯ ಹೊಗಳಿಕೆ ದಿನನಿತ್ಯದ ಜೀವನದಲ್ಲಿ ನಾವು ಕಾಣೋದು ನಮ್ಮೆಲ್ಲರ ನೆಚ್ಚಿನ 'ಫೇಸ್ಬುಕ್'ನಲ್ಲಿ! 'ಅಡೋರಬಲ್' 'ಸಿಂಪ್ಲಿ ಗ್ರೇಟ್' ಬ್ಯೂಟಿಫುಲ್' 'ಅದ್ಬುತ' ಇತ್ಯಾದಿ ವಿಶೇಷಣಗಳ ಮೆರವಣಿಗೆಯೇ ಹೊಗಳಿಕೆ.

ನಗಬಾರದಪ್ಪಾ ನಗಬಾರದು, ನಗಬಾರದಮ್ಮಾ ನಗಬಾರದು!

ಈ ಹೊಗಳಿಕೆಯಿಂದ ಯಾರಿಗೂ ಏನೂ ತೊಂದರೆ ಇಲ್ಲ. ಸಲ್ಲದ ವಿಷಯಕ್ಕೆ ಹೊಗಳಿಕೆ ಸ್ವೀಕರಿಸುವವರು ಸ್ವಲ್ಪ over-confident ಆಗಬಹುದು. ಆದರೇನೀಗಾ? ಒಂದು ಚಿತ್ರಕ್ಕೆ ಜನ ಸಿಕ್ಕಾಪಟ್ಟೆ ಹೊಗಳಿದರೂ ಅಂತ ದಿನಾ ಒಂದೊಂದು ಫೋಟೋ ಹಾಕಬಹುದು, ಏನೀಗ?

ದಿನನಿತ್ಯದಲ್ಲಿ ಹೊಗಳಿಕೆ ಬೇಕೇ ಬೇಕು ಎಂಬ ಬಾಲಿಶ ಆಶಯ ಹೊಂದಿಹ ವರ್ಗವನ್ನು ಗುರುತಿಸಿ ಬಂದಂತಹ ಮೊಬೈಲ್ ಆಪ್'ಗಳಲ್ಲಿ ಸಾರಾ ಕೂಡ ಒಂದು. ಇದರ ಬಗ್ಗೆ ಹೇಳಲು ನಾನೀಗ ಹೊರಟಿಲ್ಲ ಬಿಡಿ. ಹೊನ್ನ ಶೂಲ ಎಂದರೇನು ಎನ್ನುವವರಿಗೆ ಒಂದು ಉದಾಹರಣೆ ಹೇಳಿದೆ ಅಷ್ಟೇ!

What kind of appreciation do you expect

ಹಾಗಿದ್ದರೆ ಹೊಗಳಿಕೆ ಎಂಬೋದು ತಪ್ಪೇ? ಖಂಡಿತ ತಪ್ಪಲ್ಲ! ಒಬ್ಬರು ಹೊಗಳಿದಾಗ ಮತ್ತೊಬ್ಬರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಅದು ಅವಲಂಬಿತ. ನನ್ನ ಬಗ್ಗೆ ಸಣ್ಣ ಉದಾಹರಣೆ ಕೊಡುವುದಾದರೆ ನಾನೂ ಸ್ಟೇಜ್ ಹತ್ತಬೇಕು, ಒಂದು ನಾಟಕದಲ್ಲಿ ಅಭಿನಯಿಸಬೇಕು, ಪುಟ್ಟ ಪಾತ್ರವಾದರೂ ಸರಿ, ಮಾತು ಇಲ್ಲದಿದ್ದರೂ ಅಡ್ಡಿಯಿಲ್ಲ ಎಂಬೆಲ್ಲಾ ಆಶಯ ಇತ್ತು. ಆದರೆ ಯಾವ ನಾಟಕ? ಇತ್ಯಾದಿ ಪ್ರಶ್ನೆಗಳು.

"ಹೇಗಿದ್ರೂ ಚೆನ್ನಾಗಿ ಬರೀತೀರಾ! ನೀವೇ ಯಾಕೆ ನಾಟಕ ಬರೆಯಬಾರದು?" ಅಂತ ಸ್ನೇಹಿತರೊಬ್ಬರು ಸಲಹೆ ನೀಡಿದರು. ಮೊದಲಿಗೆ ಸಲಹೆ ಅನ್ನುವುದು ನನ್ನ ಕಿವಿಗೆ ಬಿದ್ದಿದ್ದು ಹೊಗಳಿಕೆಯಾಗಿಯೇ! ನಕ್ಕು ಸುಮ್ಮನಾದೆ. ಆದರೆ ಅದು ಹೊಗಳಿಕೆ ಹೊನ್ನಶೂಲವಾಗದೆ ಹೊಗಳಿಕೆಯ ಹುಳು ನನ್ನ ಮೆದುಳಲ್ಲಿ ಕಾಡಿತ್ತು! ಅದೇ ಹುಳು ನನ್ನ ಕೈಲಿ ಹತ್ತಾರು ನಾಟಕ ಬರೆಸಿದೆ. ಹಲವಾರು ಬಾರಿ ಸ್ಟೇಜ್ ಹತ್ತಿಸಿದೆ. ಹುಳು ಬಿಟ್ಟವರಿಗೆ ಈ ಮೂಲಕ ಅವರಿಗೆ ಅನಂತ ಧನ್ಯವಾದಗಳು.

What kind of appreciation do you expect

ನಾ ಕಂಡ ಒಬ್ಬರ ಕಥೆ ಇದಕ್ಕೆ ವಿರುದ್ಧವಾದದ್ದು. ಹಾಸ್ಯದ ಒಂದೆರಡು ಬರಹ ಬರೆದರು. ಅದಕ್ಕೆ ಹಲವಾರು ತಿದ್ದುಪಡಿಗಳು ಬೇಕಿತ್ತು. ನಾ ಹೇಳಿದೆ, ಅದರಂತೆ ಮಾಡಿದ್ದರು. ಮತ್ತೆರಡು ಬರಹ ಒಂದೆರಡು ಕವನ ಹೀಗೆ ಮುಂದುವರೆಯಿತು. ಅವರೆಂದುಕೊಂಡಂತೆ ಚಪ್ಪಾಳೆಗಳ ಮಹಾಪೂರ ಹರಿಯಲಿಲ್ಲ. ಮಹಾನ್ ನಿರ್ದೇಶಕರ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗೋದಿಲ್ಲಾ. ಮಹಾನ್ ನಟನ ಎಲ್ಲಾ ಸಿನಿಮಾಗಳೂ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯೋಲ್ಲ. ಹಾಗಂತ ಶಸ್ತ್ರಾಸ್ತ್ರ ಕೆಳಗಿಳಿಸಿ ಕೂಡುತ್ತಾರೆಯೇ? ನಾ ಹೇಳುತ್ತಿರುವವರು ಮಾಡಿದ್ದು ಇದೇ! "ನಾನು ಹೇಳ್ತಿರೋದು ಜನಕ್ಕೆ ಅರ್ಥವಾಗ್ತಾ ಇಲ್ಲ ಅನ್ನಿಸುತ್ತೆ. ಈ ಸಂಪತ್ತಿಗೆ ಯಾಕೆ ಬರೀಬೇಕು?" ಅಂತ ಯಾರನ್ನೋ ದೂರಿ ಲೇಖನಿ ಕೆಳಗಿಟ್ಟರು. ಮೆಚ್ಚುಗೆಯ ಹಿಂದೆ ಬಿದ್ದು ಲೇಖನಿ ತ್ಯಾಗ ಮಾಡಿದ್ದಕ್ಕೆ ನಷ್ಟವಾಗಿದ್ದು ಯಾರಿಗೆ?

ಹೊಗಳಿಕೆಯಿಂದ ಲಾಭ ಇದೆ. ನಿಷ್ಠೆಯಿಂದ ದಿನ ನಿತ್ಯ ದುಡಿವ ಒಬ್ಬ ಕೆಲಸಗಾರನಿಗೆ ಆತನ ಮೇಲಧಿಕಾರಿ ಕಿರುನಗೆ ಸೂಸಿ ಥ್ಯಾಂಕ್ಸ್ ಎಂದರೆ ಅದು ಭಯಂಕರ ಮ್ಯಾಜಿಕ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಒಬ್ಬ ನಿಷ್ಠಾವಂತ ಕೆಲಸಗಾರ ಎಷ್ಟು ದುರ್ಲಭವೋ, ಅಷ್ಟೇ ಕಷ್ಟ ಹಾಗೆ ಸಿಕ್ಕವರನ್ನು ಉಳಿಸಿಕೊಳ್ಳುವುದು. ಅವರನ್ನು ಪಾಲಿಸುವುದು, ಪೋಷಿಸುವುದು ಕೇವಲ policy'ಗಳಲ್ಲ!

ಹೊಗಳಿಕೆ ಬೇರೆ ಹೊಗಳು ಭಟ್ಟಂಗಿತನ ಬೇರೆ. ಏನೇ ಕೆಲಸ ಮಾಡಿದರೂ 'ನೀನೇ ಇಂದ್ರ, ನೀನೇ ಚಂದ್ರ' ಎಂದರೆ ವಾಕರಿಕೆ ಬರಬಹುದು. ಒಮ್ಮೊಮ್ಮೆ 'ನನ್ನಿಂದ ಏನಾಗಬೇಕಿತ್ತು?' ಎಂಬ ಪ್ರಶ್ನೆ ಬಂದರೂ ಅಚ್ಚರಿಯಿಲ್ಲ. ಯಾರಾದರೂ ಸುಮ್ಮನೆ ಯಾಕೆ ಹೊಗಳುತ್ತಾರೆ ಎಂಬ ಅನುಮಾನ ಬಂದಲ್ಲಿ ಹೀಗಾಗುತ್ತದೆ. ಸತ್ಯವಾಗಲೂ ನಿಮ್ಮಿಂದ ಇಂಥಾ ಕೆಲಸ ಆಗುತ್ತಿದ್ದಲ್ಲಿ ಹೊಗಳಿಕೆಯ ಕಡೆ ನಿಮಗೆ ಗಮನವೇ ಇರೋಲ್ಲ ಬಿಡಿ.

ಹೊಗಳಿಕೆ ಸ್ವೀಕರಿಸುವ ವಿಚಾರದಲ್ಲಿ ಜನ ಅತೃಪ್ತರು. ಹೊಗಳಿಕೆ ನೀಡುವಲ್ಲಿ ಮಂದಿ ಅತೀ ಜಿಪುಣರು!

ರಿಯಾಲಿಟಿ ಶೋ'ಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಒಬ್ಬ ವ್ಯಕ್ತಿಯನ್ನು ಯಾವ ರೇಂಜಿಗೆ ಹೊಗಳುತ್ತಾರೆ ಎಂದರೆ ಅವರೆಲ್ಲಾ ಉತ್ತಮೋತ್ತಮರು ಎಂಬ ಭಾವ ಮೂಡಿಬರುತ್ತದೆ. ಹಿಂದಿ ಚಾನಲ್'ನಲ್ಲಿ ಹೇಳೋ ಮಾತು "one and the only one" ಈ ಮಾತು ಕೇಳಿದಾಗಲೆಲ್ಲಾ ಹೌದಲ್ಲವೇ ನಾನೂ ಕೂಡ ಅದೇ ರೀತಿ ಅಲ್ಲವೇ? ಯಾಕೆ ಅಂದರೆ "ನನ್ನದೇ ಹೆಸರಿನವರು ಇನ್ನೊಬ್ಬರಿಲ್ಲ"!

ಒಂದು ಸಮೀಕ್ಷೆಯ ನಡೆಸಿ ಒಂದು ನೂರು ಹೆಂಗಸರನ್ನು ಒಂದು ಪ್ರಶ್ನೆ ಕೇಳಲಾಯಿತಂತೆ. ಅದರ ಪ್ರಕಾರ ತೊಂಬತ್ತು ಪ್ರತಿಶತ ಹೆಣ್ಣುಗಳು ಹೇಳೋ ಮಾತು ಎಂದರೆ ಮಕ್ಕಳು ತಾವು ಮಾಡುವ ಪುಟ್ಟ ಕೆಲಸಗಳಿಗೆ ಹೇಗೆ ಹೊಗಳಿಕೆ ಬಯಸುತ್ತಾರೋ ಹಾಗೆಯೇ ತಮ್ಮ ಪತಿ ಕೂಡಾ ಮಾಡುವ ಪುಟ್ಟ ಕೆಲಸಕ್ಕೂ ಹೊಗಳಿಕೆ ಬಯಸುತ್ತಾರೆ ಅಂತ. ಉದಾಹರಣೆಗೆ ತಾವು ಕಾಫಿ ಕುಡಿದ ಲೋಟ ಸಿಂಕ್'ಗೆ ಹಾಕೋದು.

ಆದರೆ ಹೆಂಡತಿ ಆದವಳು ತಾನು ಮಾಡಿಕೊಂಡಿರುವ ಅಲಂಕಾರಕ್ಕೆ, ಉಟ್ಟಿರುವ ಸೀರೆಗೆ ಪತಿದೇವನ appreciation ಸಿಗದೇ ಹೋದರೆ ಮುಖ ದಪ್ಪವಾಗಿ ಕೊನೆಗೆ ಆತ ಹೊಗಳುವ ಜೊತೆ ಗಿಫ್ಟ್ ಬೇರೆ ಕೊಟ್ಟು ಸಮಾಧಾನ ಮಾಡಬೇಕು ಅಂತ ನನ್ನ ಸಮೀಕ್ಷೆ ಹೇಳುತ್ತಪ್ಪ! ಯಾವ ಸಮೀಕ್ಷೆ ಸರಿ? ನೀವೇನಂತೀರಾ?

ಹೋಗಲಿ ಬಿಡಿ! ಜೀವನದಲ್ಲಿ ಪ್ರತಿಯೊಬ್ಬರೂ ಮುಖ್ಯ. ಪ್ರತಿಯೊಬ್ಬರ ಕೆಲಸವೂ ಮುಖ್ಯ. ಹೊರಗೆ ಕೆಲಸಕ್ಕೆ ಹೋಗದ ಹೆಣ್ಣು ಮನೆಯಲ್ಲಿ ಮಾಡುವ ಕೆಲಸಕ್ಕೆ ಒಂದು ಪುಟ್ಟ ಹೊಗಳಿಕೆ ಬಯಸೋದು ತಪ್ಪಲ್ಲ. ಹೊರಗೂ ಕೆಲಸ ಮಾಡಿ, ಮನೆಯಲ್ಲೂ ಅಡುಗೆ ಕೆಲಸ ಮಾಡಿ ಮಕ್ಕಳನ್ನೂ ನೋಡಿಕೊಳ್ಳುವ ಹೆಣ್ಣು ಹೊಗಳಿಕೆ ಬಯಸೋದು ತಪ್ಪಲ್ಲ. ಟ್ರಾಫಿಕ್ ಎಂಬ ರಣರಂಗದಲ್ಲಿ ಸಿಕ್ಕಿ ನರಳಿ ಗಾಯಾಳುವಾಗದೆ ಹಿಂದಿರುಗಿದ ಗಂಡ ಹೊಗಳಿಕೆಯ ರೂಪದ ಬಿಸಿಕಾಫಿಯನ್ನು ಬಯಸೋದು ತಪ್ಪಲ್ಲ. ಬಾಸ್ ಕಿರಿಕಿರಿಯಿಂದ ತಲೆಬಿಸಿಯಾಗಿ ಮನೆಗೆ ಬಂದ ಗಂಡ 'ಅನುಮಾನ'ವೇ ಮೂಲವಾದ ಧಾರಾವಾಹಿಯನ್ನು ಆರಿಸಬಾರದೇ ಎಂಬ ಹೊಗಳಿಕೆಯ ಗಿಫ್ಟ್ ಬಯಸೋದು ತಪ್ಪಲ್ಲ.

ಹೋಗ್ಲೀ, ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As we express our gratitude, we must never forget that the highest appreciation is not to utter words, but to live by them. But, we have to think whether we deserve any appreciation for our work or not. Thought provoking write by Srinath Bhalle from Richmond, USA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X