• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಬುದ್ಧಿಗೆ ಕಸರತ್ತು ನೀಡಬೇಕಾದ್ದು ಯಾಕೆ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕವಿರತ್ನ ಕಾಳಿದಾಸ ಸಿನಿಮಾದ ಒಂದು ಡೈಲಾಗ್ ಇದೆ. "ಒಬ್ಬಟ್ನಾಗೆ ಹೂರಣ ತುಂಬ್ದಾಂಗೆ ತಲೆಯಾಗೆ ಬುದ್ಧಿ ತುಂಬಿರ್ತಾನೆ ದ್ಯಾವ್ರು. ಕುರಿಗೆ ಕುರಿ ಬುದ್ಧಿ, ನರಿಗೆ ನರಿ ಬುದ್ಧಿ"... ಇದರರ್ಥ ಏನು ಅಂದ್ರೆ, ಬುದ್ಧಿ ಎಲ್ಲರಿಗೂ ಇದೆ, ಅವರವರ ಬುದ್ಧಿ ಅವರವರದ್ದು ಅಂತ. ಹಾಗೆ ಆಲೋಚಿಸಿದರೆ ಮತ್ತೊಂದು ವಿಚಾರ ಏನು ಅನಾವರಣವಾಗುತ್ತದೆ ಎಂದರೆ, ಬುದ್ಧಿ ಎಲ್ಲರಿಗೂ ಇದೆ. ಬುದ್ಧಿ ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಹೀಗಿದ್ದೂ ಕೆಲವರು ಕಡಿಮೆ ಬುದ್ಧಿವಂತರು, ಕೆಲವರು ಹೆಚ್ಚು ಬುದ್ಧಿವಂತರು.

   ಬೇರೆ ರಾಜ್ಯಗಳ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಬೆಂಗಳೂರು ಕಮಿಷನರ್ ಹೇಳಿದ್ದೇನು? | Bhaskar Rao | Bengaluru

   ಕೆಲವರು ಆರಂಭದಲ್ಲಿ ಮಂಕರಂತೆ ಇದ್ದರೂ ಆಮೇಲೆ ಇದ್ದಕ್ಕಿದ್ದ ಹಾಗೆ ಕಿಕ್ ಹೊಡೆದಂತೆ ಬುದ್ಧಿವಂತರಾಗಬಹುದು. ಇದರಂತೆಯೇ ಚಿಕ್ಕಂದಿನಲ್ಲಿ ಬುದ್ಧಿವಂತರಾಗಿದ್ದವರು ಕಾರಣಾಂತರದಿಂದ ಮಂಕಾಗಬಹುದು. ಕೆಲವರು ಇನ್ನೂ ಆ ಕಿಕ್ ಬರಲೆಂದೇ ಕಾದಿರಬಹುದು.

   ಶ್ರೀನಾಥ್ ಭಲ್ಲೆ ಅಂಕಣ; ಆಚಾರವಂತ ಈ ನಾಲಿಗೆ ಅಂತ ಅನ್ನೋಣವೇ?

   ನಮಗೆ ಅರಿವಿಲ್ಲದೆ ನಾವು ದಿನನಿತ್ಯದಲ್ಲಿ ಬುದ್ಧಿವಂತರಾಗುತ್ತಾ ಸಾಗುತ್ತೇವೆ. ಹುಟ್ಟಿದಾಗಿನಿಂದ ಎನ್ನುವುದಕ್ಕಿಂತ ಉದರದಲ್ಲಿರುವಾಗಿನಿಂದಲೇ ಕಲಿಕೆ ಆರಂಭವಾಗುತ್ತದೆ. ಹುಟ್ಟಿದ ಮೇಲೂ ದಿನನಿತ್ಯದಲ್ಲಿ ಈ ಕಲಿಕೆ ನಿಲ್ಲದೇ ಸಾಗುತ್ತದೆ. ಪ್ರತೀ ಕಲಿಕೆಯಿಂದ ಬುದ್ಧಿಯು ವಿಕಸಿತವಾಗುತ್ತಾ ಸಾಗುತ್ತದೆ. ಕೆಲವರು ಬೇಗ ಕಲಿಯುತ್ತಾರೆ. ಹಾಗಾಗಿ ಹೊಸ ಕಲಿಕೆಗೆ ಮನ ಸದಾ ಸಿದ್ಧವಿದ್ದು, ಬುದ್ಧಿವಂತರು ಎನಿಸಿಕೊಳ್ಳುತ್ತಾರೆ.

   ಕೆಲವರ ಕಲಿಕೆ ನಿಧಾನವಾಗಿದ್ದು ಒಂದು ವಿಷಯ ಕಲಿಯಲು ಹಲವು ದಿನಗಳೇ ಬೇಕಾಗಬಹುದು. ಇದಕ್ಕೆ ಕಾರಣಗಳು ಹಲವು. ಮನೆಯಲ್ಲಿನ ಪರಿಸ್ಥಿತಿಗಳು ಇದಕ್ಕೆ ಕಾರಣವಿರಬಹುದು. ಕಲಿಕೆಯ ಬಗ್ಗೆ ಆಸಕ್ತಿಯೇ ಇಲ್ಲದಿರಬಹುದು. ಕಾರಣ, ಅವರ ಮನಸ್ಸು ಬೇರೆಯದ್ದೇ ಆಲೋಚಿಸುತ್ತಿರುತ್ತದೆ. ಎಲ್ಲರೂ ಓದಿ ಇಂಜಿನಿಯರ್, ಡಾಕ್ಟರ್ ಆಗಬೇಕಿಲ್ಲ ಅಥವಾ ಇಂಜಿನಿಯರ್ ಅಥವಾ ಡಾಕ್ಟರ್ ಆದರೆ ಬುದ್ಧಿವಂತರೂ ಅಲ್ಲ. ಒಟ್ಟಾರೆ ಬುದ್ಧಿವಂತಿಕೆ ಅನ್ನೋದಕ್ಕೆ ಒಂದು ಆಯಾಮ ಇಲ್ಲ.

   ಸದ್ಯಕ್ಕೆ ಮಿಕ್ಕೆಲ್ಲಾ ವಿಷಯ ಆ ಕಡೆ ಇಟ್ಟು, ಬುದ್ಧಿಯನ್ನು ಸಾಣೆ ಹಿಡಿದು ಕತ್ತಿಯನ್ನು ಶಾರ್ಪ್ ಆಗಿ ಇಟ್ಟುಕೊಳ್ಳುವಂತೆ ಮತ್ತು ತುಕ್ಕುಹಿಡಿಯಂತೆ ನೋಡಿಕೊಳ್ಳಬೇಕಾದ್ದು ಮುಖ್ಯ. ಹೇಗೆ? ದಿನನಿತ್ಯ ಸಿಕ್ಕಾಪಟ್ಟೆ ಓದಿದರೆ ಆಯ್ತು ಎಂದರೆ ಅದು ತಪ್ಪು. ಜ್ಞಾನಕ್ಕೂ ಬುದ್ಧಿಮತ್ತೆಗೂ ವ್ಯತ್ಯಾಸವಿದೆ.

   ಹವ್ಯಾಸ ಬೆಳೆಸಿಕೊಳ್ಳಬೇಕು... ಬುದ್ಧಿಯನ್ನು ಬಡಿದೆಬ್ಬಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪದಬಂಧ ಒಂದು ಉದಾಹರಣೆ. ಈ ಪದಬಂಧ ಎಂದರೆ ಏನು? ಕೊಟ್ಟ ಪ್ರಶ್ನೆಗೆ ಉತ್ತರ ತೆಗೆದು ಅದನ್ನು ಬಂಧದ ಮನೆಯಲ್ಲಿ ತುಂಬಬೇಕು. ಈ ಪ್ರಶ್ನೆ ಅನ್ನೋದು ಕೆಲವೊಮ್ಮೆ ಪ್ರಶ್ನೆ ಮಾತ್ರ ಆಗಿರಬಹುದು. ಕಾಡಿನಲ್ಲಿ ಮಾಯಾಜಿಂಕೆಯಾಗಿ ಸೀತೆಗೆ ಕಾಣಿಸಿಕೊಂಡವ (3) ಎಂಬುದು ಪ್ರಶ್ನೆ. ಇದಕ್ಕೆ ಉತ್ತರ ಮಾರೀಚ ಅಂತ ಆ ಮನೆಗಳಲ್ಲಿ ತುಂಬಬೇಕು. ಕೆಲವೊಮ್ಮೆ ಕೊಟ್ಟಿರುವ ಪ್ರಶ್ನೆಯಲ್ಲೇ ಉತ್ತರವೂ ಅಡಗಿರಬಹುದು. ಪ್ರಶ್ನೆಯಲ್ಲೇ ಉತ್ತರ ಹೇಗೆ ಎಂದರೆ "ರಮಣ"ನಲ್ಲಿ ಅಡಗಿರುವ ಸಾವು (3)" ಅಂತ ಇರುವಾಗ 'ರಮಣ' ಪದವನ್ನೇ ಕೊಂಚ ತಿರುಚಿದಾಗ 'ಮರಣ' ಎಂದಾಗುತ್ತದೆ.

   ಪದಬಂಧ ಒಂದು ಒಳ್ಳೆಯ ಹವ್ಯಾಸ. ಕೆಲವೊಮ್ಮೆ ಪ್ರಶ್ನೆ ಸಲೀಸಾಗಿರುತ್ತದೆ. ಕೆಲವೊಮ್ಮೆ ಕ್ಲಿಷ್ಟವೂ ಆಗಿರುತ್ತದೆ. ಅಡ್ಡ ಮತ್ತು ಲಂಬವಾಗಿ ಇರುವ ಪದಗಳ ನಡುವಿನ ಒಂದು ಸಾಮಾನ್ಯ ಅಕ್ಷರ ಅಲ್ಲಲ್ಲೇ ಸೇರುವುದರಿಂದ ಕೆಲವೊಮ್ಮೆ ಕ್ಲೂ ಕೂಡ ಸಿಗುತ್ತದೆ. ಒಟ್ಟಾರೆ ಹೇಳಿದರೆ, ಮೆದುಳಿಗೆ ಕೆಲಸ. ಪದಬಂಧ ಎಂದರೆ ಮೊದಲಿಗೆ ನೆನಪಾಗುವ ಹೆಸರು "ಎ.ಎನ್. ಪ್ರಹ್ಲಾದ ರಾವ್". ಇವರು ಈವರೆಗೆ 35,000ಕ್ಕೂ ಹೆಚ್ಚು ಪದಬಂಧ ರಚಿಸಿದ್ದಾರೆ ಮತ್ತು ಇಂದಿಗೂ ರಚಿಸುತ್ತಾ ಇದ್ದಾರೆ. ಪದಬಂಧ ಹವ್ಯಾಸ ಇರುವ ಇವರು, ಒಂದು ಪದಬಂಧ ರಚಿಸಲು ತೆಗೆದುಕೊಳ್ಳುವ ಸಮಯ ಇಪ್ಪತ್ತು ನಿಮಿಷ ಅಷ್ಟೇ!

   ಶ್ರೀನಾಥ್ ಭಲ್ಲೆ ಅಂಕಣ; ವಿಷಯಗಳ ಬೆಟ್ಟ ಕೊರೆದು ನೋಡಲು ನಾವ್ 'ಇಲಿ'ಯಾಗಬೇಕು!

   ಪದಬಂಧವನ್ನು ಪದರಂಗ, ಪದಸಂಪದ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಇದರಂಥದ್ದೇ ಮತ್ತೊಂದು ಕಸರತ್ತು ಎಂದರೆ, ಒಂದು ಬಂಧದಲ್ಲಿ ಅಷ್ಟೂ ಮನೆಗಳಲ್ಲಿ ಮೊದಲೇ ತುಂಬಿರುವ ಅಕ್ಷರಗಳು ಕೂತಿರುತ್ತದೆ. ಅಲ್ಲಿ ಮಾಡಬೇಕಾದ್ದು "ಪದಹುಡುಕು". ಅಡ್ಡ, ಉದ್ದ, ಕರ್ಣ, ಕೆಳಗಿನಿಂದ ಮೇಲೆ ಹೀಗೆ ಎಲ್ಲೋ ಪದ ಇರುತ್ತದೆ. ಅದನ್ನು ಹುಡುಕಬೇಕಾದುದು ಕೆಲಸ. ಇದನ್ನು 'ಕಾಲ ಕಳೆಯುವ' ಎನ್ನದೇ 'ಕಾಲ ಗಳಿಸುವ' ಕೆಲಸ ಎನ್ನಿ.

   Sudoko ಕೇಳಿರುತ್ತೀರಿ. ಇದೊಂದು 9x9 ಮನೆಯ ಒಂದು ಬಂಧ. ಹಲವು ಸಂಖ್ಯೆಗಳನ್ನು ಆಗಲೇ ಇದ್ದು ಸಂಖ್ಯೆ ತುಂಬಬೇಕು. ಅಡ್ಡ ಮತ್ತು ಉದ್ದದ ಮನೆಗಳಲ್ಲಿ ಬಿಟ್ಟ ಸಂಖ್ಯೆಗಳನ್ನು ಪ್ರತೀ ಸಂಖ್ಯೆಯು ಒಂದೇ ಇರುವಂತೆ ಹಾಕಬೇಕು. ಈ ಆಟ ಒಂಥರಾ ಮಧ್ಯಮ ವರ್ಗದ ಜೀವನಕ್ಕೆ ಹೋಲಿಸಬಹುದು. ಒಂದು ಸಂಖ್ಯೆ ಒಂದೆಡೆ ಹಾಕಿದರೆ ಇನ್ನೊಂದೆಡೆ ಕೈಕೊಡುತ್ತದೆ. ಒಂದು ಹೊದಿಕೆಯನ್ನು ಮುಖದ ಮೇಲೆ ಎಳೆದುಕೊಂಡರೆ ಕಾಲಿಗೆ ಸಾಲದು, ಕಾಲು ಮುಚ್ಚಿಕೊಂಡರೆ ಮುಖದ ಮೇಲಿರೋದಿಲ್ಲ ಎನ್ನುತ್ತಾರಲ್ಲಾ ಹಾಗೆ. ಸಂಖ್ಯೆಯನ್ನು ಹೊಂದಿಸೋದೇ ಬುದ್ಧಿಗೆ ಕಸರತ್ತು.

   ಒಗಟು ಬಿಡಿಸೋದು ಒಂದು ಹವ್ಯಾಸ. ಚೆಸ್ ಆಟವೂ ಒಂದು ಹವ್ಯಾಸ. ಅಂತಾಕ್ಷರಿ ಆಟವೂ, dumb charades ಕೂಡ ಒಂದು ಹವ್ಯಾಸ. ಎಮೋಜಿ ನೋಡಿ ಚಲನಚಿತ್ರದ ಹೆಸರು ಗುರುತಿಸಿ, ರಸಪ್ರಶ್ನೆಗಳು, palindrome ಸವಾಲು ಬಿಡಿಸುವಿಕೆ ಹೀಗೆ ಎಲ್ಲವೂ ಹವ್ಯಾಸಗಳೇ. ಇವು ಯಾವುದೇ ಆಗಿದ್ದರೂ ಅಲ್ಲಿ ಬುದ್ಧಿಯ ಬಳಕೆ ಇದ್ದೇ ಇರುತ್ತದೆ. ಒಂದು ಸಿನಿಮಾ ಹೆಸರನ್ನೋ ಒಂದು ಒಗಟನ್ನೋ ನೀಡಿ ಅದನ್ನು ಅಭಿನಯಿಸಿ ಮತ್ತೊಬ್ಬರಿಗೆ ತೋರಿಸಿ ಅವರಿಂದ ಉತ್ತರ ತೆಗೆಯೋದು ಸುಲಭವಲ್ಲ. ಕಾರಣ ಇಷ್ಟೇ. ನಿಮ್ಮ ಮನಸ್ಸಿನಲ್ಲಿ ಇರೋದನ್ನು ಅಭಿನಯಿಸಿ ಮತ್ತೊಬ್ಬರಲ್ಲಿ ಬಿತ್ತಿ ಅವರಿಂದ ಉತ್ತರ ತೆಗೆಯಬೇಕು. ನಿಮ್ಮಂತೆ ಒಬ್ಬರನ್ನು ಆಲೋಚಿಸುವ ರೀತಿ ಮಾಡೋದು ಕಷ್ಟ ಅಲ್ಲವೇ? ಕೆಲವರು ಥಟ್ಟನೆ ಹೇಳಬಹುದು, ಕೆಲವರಿಗೆ ನಿಧಾನವಾದ process ಅದು. ಅಭಿನಯಿಸಿ ತೋರಿಸುವಾಗ ಆ ಕಡೆಯ ವ್ಯಕ್ತಿಗೆ ಅರ್ಥವಾಗದೆ ಸಮಯ ಮೀರಿದ ಮೇಲೆ ಉತ್ತರ ಏನು ಅಂದಾಗ 'ನಾನು ಬ್ರಹ್ಮ' ಅಂತ ತೋರಿಸುತ್ತಿದ್ದೆ ಅಂತ ನೀವು ಹೇಳಿದಾಗ "ನಾನು ರಾವಣ" ಅಂದುಕೊಂಡೆ ಎಂದಾಗ ನಿಮಗೆ ಅಚ್ಚರಿಯಾಗಬಹುದು.

   ಸಂಗೀತಕ್ಕೂ ಲೆಕ್ಕಕ್ಕೂ ಒಂದು ಗಾಢವಾದ ಸಂಬಂಧವಿದೆ. ಲೆಕ್ಕಬಲ್ಲವರು ಸಂಗೀತ ಕಲಿಯಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ಸಂಗೀತ ಬಲ್ಲವರಿಗೆ ಲೆಕ್ಕ ಮಾಡುವ ತಲೆ ಇರುತ್ತದೆ ಅನ್ನೋದು ನಿಜ. ಒಂದು ರಚನೆಯನ್ನು ಆದಿತಾಳದಲ್ಲಿ ಕೂಡಿಸಿ ಸಮದಲ್ಲಿ, ಮಾಯಾಮಾಳವಗೌಳದಲ್ಲಿ ಹಾಡಬೇಕು ಎಂದರೆ ಸುಲಭವಾಗಬಹುದು. ಆದರೆ ಅದೇ ಗಾಯನವನ್ನು ಅರಂಗೇಟ್ರಮ್ ಮಾಡುವ ಒಬ್ಬ ನೃತ್ಯಪಟುವಿಗೆ ಹಾಡಬೇಕು ಎಂದರೆ ಅದು ಕ್ಲಿಷ್ಟ. ಒಂದೊಂದೂ ಸೆಟ್ ಇಷ್ಟು ಬಾರಿ ಹಾಡಬೇಕು ಎಂದು ಇರುವಾಗ ಅದನ್ನು ಸರಿಯಾಗಿ ತಲೆಯಲ್ಲಿ ಲೆಕ್ಕ ಇಟ್ಟುಕೊಂಡು ಹಾಡಬೇಕು. ಇಲ್ಲಿ ಹಾಡುಗಾರಿಕೆ ಅಲ್ಲದೇ ನೃತ್ಯ ಮತ್ತು ವಾದ್ಯಸಂಗೀತದವರೊಂದಿಗೆ ಮೇಳೈಸಿಕೊಂಡು ಹಾಡುವುದಕ್ಕೆ ಪರಿಶ್ರಮಬೇಕು.

   ಒಂದೆಡೆ ಸುಮ್ಮನೆ ಕೂತರೆ ಮಾಂಸಖಂಡಗಳು ಗಟ್ಟಿಕಟ್ಟಿ ಬಾಗಿಸಲೇ ಬಾರದಂತೆ ಆಗುವುದು ಸಹಜ ಅಲ್ಲವೇ. ಆ ಸ್ಥಿತಿ ತಲುಪಿದಾಗ ಹೆಚ್ಚು ಬಾಗಿಸಲು ಹೋದರೆ ಪಟಕ್ ಎಂದು ಮುರಿಯಬಹುದು ಅಥವಾ ಬಾಗಿಸಲೇ ದುಸ್ತರವಾಗಬಹುದು. ಬಳಸಲೇ ಆಗದಂತೆ ಅಥವಾ ಬಾಗಿಸಲೇ ಆಗದಂಥ ಸ್ಥಿತಿಗೆ plasticity ಎನ್ನುತ್ತಾರೆ. ತೆಳ್ಳಗಿನ plastic ಬಳಸದೆ ಬಿಟ್ಟಾಗ ಹರಿದು ಚೂರಾಗಬಹುದು. ಗಟ್ಟಿ ಪ್ಲಾಸ್ಟಿಕ್ ಆದಾಗ ಮುರಿಯಬಹುದು. ಇದಕ್ಕೆ ವಿರುದ್ಧ ಎಂದರೆ ಬಳಸೀ ಬಳಸೀ elastic ನಂತೆ ಇದ್ದಾಗ ಎದ್ದುಕೂತು ಮಾಡಬಹುದು. ಬುದ್ಧಿಯಲ್ಲಿ elasticity ಮೂಡಿಸಿಕೊಂಡು ಹೆಚ್ಚು ಹೆಚ್ಚು ತುಂಬಿಕೊಳ್ಳಬೇಕು. ಪ್ಲಾಸ್ಟಿಕ್ ನಂತೆ ಬಿಟ್ಟರೆ ಜೀವನದಲ್ಲಿ ಮಜವೇ ಇರೋದಿಲ್ಲ.

   ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು

   ಬುದ್ಧಿಯನ್ನು elasticನಂತೆ ಇರಿಸಿಕೊಳ್ಳಬೇಕಾದರೆ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆಲೋಚನೆಯನ್ನು ಬಿಟ್ಟು ಚಿಂತನೆ ಮಾಡಬೇಕು. ಆಲೋಚನೆ ಮಾಡಿದಾಗ ಬುದ್ಧಿಯು ಹಿಂಡಿದ sponge ನಂತೆ. ಚಿಂತನೆ ಮಾಡುವ ಮನ ವಿಷಯಗಳೆಂಬ ಸಲಿಲವನ್ನು ಹೀರುವ spongeನಂತೆ. ಇದು ಹೇಗೆ ಅದು ಹೇಗೆ ಎಂಬ ಕುತೂಹಲ ಬೆಳೆಸಿಕೊಂಡು ಅರ್ಥೈಸಿಕೊಳ್ಳಲು ಯತ್ನಿಸಬೇಕು. ಇತ್ತಂಡವಾದ ಮಾಡಿ ಮತ್ತೊಬ್ಬರನ್ನು ನೋಯಿಸುವ ಉದ್ದೇಶ ಬೇಡ. ಬದಲಿಗೆ ಇದು ಹೀಗೂ ಇರಬಹುದಾ ಅಂತ ಆಲೋಚಿಸಬೇಕು. ಮತ್ತೊಬ್ಬರನ್ನೂ ಆಲೋಚಿಸುವಂತೆ ಮಾಡಬೇಕು. ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು ಸರಿ, ಆದರೆ ಅವರನ್ನೂ ಆಲೋಚಿಸುವಂತೆ ಮಾಡುವುದೇ ಸರಿಯಾದ ಕಲಿಕೆ.

   ಇಷ್ಟಪ್ಪಾ ವಿಷಯ ನನ್ನ 'ಎದ್ಬಿಟ್ರಾ?', 'ಮಲಗಿಬಿಟ್ರಾ' ಬರಹಗಳ ಹಿಂದಿನ ರಹಸ್ಯ. ಏನಂತೀರಿ?

   English summary
   We have to gear up intelligence by different hobbies. Hobbies may change the mentality of human being,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X