ಪಾಡಿ ಪೊಗಳಿಸಿಕೊಳ್ಳದ ಪುಂಡರಲ್ಲದವರ ಪಾಡು

By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ನಾವು ನಿತ್ಯ ಜೀವನದಲ್ಲಿ ಎಷ್ಟೆಷ್ಟೋ unsung heroes ಅನ್ನು ಕಂಡಿದ್ದೇವೆ. ದಿನ ನಿತ್ಯದಲ್ಲಿ ಅವರನ್ನು ಕಾಣುತ್ತೇವೆ, ಅವರ ಕೆಲಸಗಳನ್ನು ನೋಡುತ್ತೇವೆ, ಅವರ ಬವಣೆ ನೋಡುತ್ತೇವೆ, ಅವರಿಂದ ಕೆಲಸ ಮಾಡಿಸಿಕೊಳ್ಳುತ್ತೇವೆ. ಎಲ್ಲ ಕಂಡೂ ಅವರಿಗೆ ಧನ್ಯವಾದ ರೂಪಕವಾದ "ಥ್ಯಾಂಕ್ಸ್" ಅನ್ನುವದ ಮರೆಯುತ್ತೇವೆ. ಅಲ್ಲಾ, ಮರೆಯುವುದಿಲ್ಲ ಬದಲಿಗೆ ಥ್ಯಾಂಕ್ಸ್ ಹೇಳಲು ಏನೋ ಬಿಗುಮಾನ.

ಹೃದಯ ಮುಟ್ಟಿ ಮನವನು ತಟ್ಟುವ ಅಳಿಸಲಾರದ ನೆನಪು

ಮೊದಲಿಗೆ ಒಂದು ದಿನನಿತ್ಯದ ನೋಟ. ಆಫೀಸಿಗೆ ಕಾಲಿಟ್ಟ ಕ್ಷಣ "ಥತ್, ಏನು ದರಿದ್ರ ಟ್ರಾಫಿಕ್! ಅದೇನು ಹಾರ್ನ್ ಬಡೀತಾರೋ ಜನ! ಸಿಗ್ನಲ್ ಬಿಡೋದಕ್ಕೆ ಇನ್ನೂ ಮೂವತ್ತು ಸೆಕಂಡ್ ಇದೆ ಅನ್ನೋವಾಗ್ಲೇ ಮುಂದೆ ಮುಂದೆ ಬಂದು ಹೆಚ್ಚೂ ಕಮ್ಮಿ ನಮ್ಮನ್ನು ಬ್ಲಾಕ್ ಮಾಡಿಬಿಡ್ತಾರೆ. ದಿನಾ ಎರಡು ಘಂಟೆಗಳ ಕಾಲ ಈ ಗೋಳು ತಪ್ಪಿದ್ದಲ್ಲ. ತಣ್ಣಗೆ ಏ.ಸಿನಲ್ಲಿ ಬಂದು ಕೂತರೆ ಸಾಕು ಅನ್ನಿಸುತ್ತೆ" ಅಂತ ಅನ್ನುತ್ತಾ ಕುರ್ಚಿಗೆ ಒರಗಿ, ಕಾಫಿ ಕುಡಿಯುತ್ತ ಅರ್ಧ ಘಂಟೆ ರಿಲ್ಯಾಕ್ಸ್ ಮಾಡುತ್ತೇವೆ. ಸಂಜೆ ಮನೆಗೆ ಹೋಗುವ ತರಾತುರಿಯಲ್ಲಿ ನೂರು ಕಾರು ಬಡ್ಕೊಳ್ಳೋ ಹಾರ್ನ್ ಜೊತೆ ನೂರೊಂದನೆಯವರು ನಾವಾಗುತ್ತೇವೆ. ಮನೆ ತಲುಪಿದ ಕೂಡಲೇ ಹಣೆಯನ್ನು ಒತ್ತಿಕೊಂಡು ಹೆಂಡತಿಯೋ ಅಮ್ಮನೋ ಕೊಡುವ ಕಾಫಿ ಕುಡಿದು ಕೆಟ್ಟ ಧಾರಾವಾಹಿಗಳ ನೋಡಿಕೊಂಡು ಮತ್ತೆ ರಿಲ್ಯಾಕ್ಸ್. ಮರುದಿನ ಬೆಳಗಿನವರೆಗೆ ಮತ್ತೆ ಟ್ರ್ಯಾಫಿಕ್ ಗೋಜಿಲ್ಲ.

These children are the real unsung heroes

ಬೆಳಿಗ್ಗೆ ನಾವು ಹೋದ ಹಾದಿಯಲ್ಲಿ ಮತ್ತು ಸಂಜೆ/ರಾತ್ರಿ ನಾವು ಹಿಂದಿರುಗುವ ದಾರಿಯಲ್ಲಿ ನಮ್ಮಂತಹ ನೂರಾರು ವಾಹನಗಳ ಹೊಗೆ ಕುಡಿಯುತ್ತ, ಪ್ರತಿ ಘಳಿಗೆ ಥರಾವರಿ ಹಾರ್ನ್ ಶಬ್ದ ಕೇಳುತ್ತಾ, ಒಂದು ಕ್ಷಣ ಆಚೆ ಈಚೆ ನೋಡಿದ್ದಕ್ಕೆ ಇನ್ಸ್ಪೆಕ್ಟರ್ ಕೈಲಿ ಬೈಸಿಕೊಳ್ಳುವ ಪೇದೆಯ ಬಗ್ಗೆ ಒಂದಿಷ್ಟೂ ಕನಿಕರವಿಲ್ಲದೆ ಬೈಯುತ್ತೇವೆ. ಥ್ಯಾಂಕ್ಸ್ ಬಿಡಿ ದೂರ ಉಳಿಯಿತು.

ಇದು ಒಬ್ಬ unsung hero ಉದಾಹರಣೆ ಅಷ್ಟೇ. ಆದರೆ ನಾ ಹೇಳಹೊರಟಿರುವುದು ಇವರ ಬಗ್ಗೆ ಅಲ್ಲ ಬಿಡಿ. ನಮ್ಮಲ್ಲೇ ಹಾಸುಹೊಕ್ಕಾಗಿರುವ ಒಂದು ವರ್ಗ. ಸಾಮಾನ್ಯವಾಗಿ ಸೀರಿಯಸ್ಸಾಗಿ ಸ್ವೀಕರಿಸಿದ, ಹೆಚ್ಚಾಗಿ ಹಿರಿಯರಿಂದ ದಬ್ಬಾಳಿಕೆಗೆ ಒಳಗಾಗುವ ವರ್ಗ. ಊರೂರು ಓಡಾಡುವ ಕೆಲಸವಿರುವ ಅಪ್ಪ ತನ್ನ ಸಂಸಾರವನ್ನೂ ಹೋದೆಡೆಯೆಲ್ಲಾ ಕರೆದುಕೊಂಡು ಹೋಗಬೇಕಾದಾಗ, ಆ ವಿದ್ಯಾರ್ಥಿ 'ಮಕ್ಕಳು' ಪಡುವ ಬವಣೆ ಇಂದಿನ ಕಥಾನಕದ ವಿಷಯ.

ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?

ಸಾಮಾನ್ಯವಾಗಿ ಒಂದೆಡೆ ಸೇರಿದಾಗ ಹೊಸ ಪರಿಚಯ ಆಗುವಾಗ ಎಲ್ಲಿಯವರು, ಏನು ಎಂಬ ಉಭಯಕುಶಲೋಪರಿಯ ಮಾತುಗಳು ಇರುತ್ತವೆ. ಒಂದೊಮ್ಮೆ ಹೀಗೆ ಒಂದು ಹೊಸ ಮುಖದ ಪರಿಚಯವಾಯ್ತು. ನನಗೆ ಅವರ ಮುಖ ಹೊಸತು, ಆದರೆ ಅವರಿಗೆ ಅವರ ಮುಖ ಹಳತು.

These children are the real unsung heroes

ಅವರು ಹೇಳಿದ್ದು "ನಾನು ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. ಮಾತೃಭಾಷೆ ಕನ್ನಡ, ಆದರೆ ದೆಹಲಿಯಲ್ಲಿ ಇದ್ದುದರಿಂದ ಹಿಂದಿ ಚೆನ್ನಾಗಿ ಗೊತ್ತು. ಅಕ್ಕಪಕ್ಕ ಅಥವಾ ಹೋಗಿ ಬಂದಲ್ಲಿ ಪಂಜಾಬಿಗಳ ಒಡನಾಟ ಹಾಗಾಗಿ ಸ್ವಲ್ಪ ಪಂಜಾಬಿ ಬರುತ್ತೆ. ಹತ್ತನೇ ವಯಸ್ಸಿನಲ್ಲಿ ಆ ಊರು ಬಿಟ್ಟು ಚೆನ್ನೈಗೆ ಬಂದ್ವಿ. ಅಲ್ಲೊಂದೆರಡು ವರ್ಷ. ಆಮೇಲೆ ಮುಂಬಯಿ, ಬೆಂಗಳೂರು, ನಂತರ ಯು.ಕೆ, ಈಗ ಅಮೆರಿಕ. ಉತ್ತರಭಾರತೀಯರಿಗೆ ನಾನು ದಕ್ಷಿಣದವನು. ಅವರ ಗುಂಪಿಗೆ ನನ್ನ ಸೇರಿಸೋಲ್ಲ. ಹೆಸರು ಕೇಳಿದರೆ ಗೊತ್ತಾಗುತ್ತೆ ನಾನು ಪಂಜಾಬಿ ಅಲ್ಲ ಅಂತ. ತಮಿಳು ಪೂರ್ತಿ ಸರಿಯಾಗಿ ಬರೋಲ್ಲ. ಇನ್ನು ಮಾತೃಭಾಷೆ ಕನ್ನಡ ಸ್ವಲ್ಪ ಮಿಕ್ಸ್ ಆಗಿದೆ. ಒಟ್ಟಿನಲ್ಲಿ ನಾನು ಎಲ್ಲಿಯವನೆಂದು ಕೇಳಿದರೆ ಇಂಥಾ ಜಾಗ ಅಂತ ಹೇಳೋಕ್ಕೆ ಆಗೋಲ್ಲ. ನಾನೊಬ್ಬ ಭಾರತೀಯ. ಹಾಗೆ ಹೇಳಿದಾಗ ಒಂಥರಾ ನೋಡುವವರೇ ಜಾಸ್ತಿ. ಹಾಗಾಗಿ ಸ್ನೇಹಿತರು ಕಡಿಮೆ. ಅಪ್ಪನ ಓಡಾಟದ ಕೆಲಸ ನಮ್ಮ ಮೇಲೆ ಪರಿಣಾಮ ಬೀರಿದೆ but life is a big compromise, right?"

ನೀವು Multitaskerರೋ? Unitaskerರೋ?

ನನ್ನಲ್ಲಿ ಏನು ಕಂಡರೋ ಗೊತ್ತಿಲ್ಲ ಇಷ್ಟು ಸುದೀರ್ಘವಾಗಿ ತಮ್ಮ ಪರಿಚಯ ಹೇಳಿದ್ದರು. ಅವರು ಹೇಳಿದ್ದು ಜೀರ್ಣಿಸಿಕೊಳ್ಳೋದಕ್ಕೆ ಎರಡು ನಿಮಿಷ ಬೇಕಾಯ್ತು. ಕಾರಣ ಇಷ್ಟೇ, ಮದುವೆಯಾಗಿ, ಮಗ ಹುಟ್ಟಿ ಅಮೆರಿಕಕ್ಕೆ ಬರುವ ತನಕ ನಾನು ಮನೆ ಜನರನ್ನು ಬಿಟ್ಟು ಕದಲಿದ್ದಿಲ್ಲ. ಪ್ರಯತ್ನವೂ ಪಟ್ಟಿಲ್ಲ ಬಿಡಿ.

These children are the real unsung heroes

ನನ್ನ ತಲೆಗೆ ಹುಳು ಹೊಕ್ಕಿತ್ತು. ಇಂಥಾ ಸನ್ನಿವೇಶಗಳು ಎಷ್ಟು ನೀಡಿರಬಹುದು ಅಂತ ಫ್ಲ್ಯಾಷ್ ಬ್ಯಾಕ್'ಗೆ ಹೋದೆ. ಆರನೇ ತರಗತಿಯ ಮಧ್ಯಭಾಗದಲ್ಲಿ 'ನಾಯಕ್' ಎಂಬ ಹುಡುಗ ನಮ್ಮ ತರಗತಿಗೆ ಸೇರಿದ. ಉತ್ತರ ಭಾರತದಿಂದ ಅವನು ಅಪ್ಪನ transfer ಪ್ರಯುಕ್ತ ಬೆಂಗಳೂರಿಗೆ ಬಂದಿದ್ದ. ಕನ್ನಡದ ಜ್ಞಾನ ಶೂನ್ಯ. ಪ್ರತಿ ಸಂಜೆ ಸ್ಪೆಷಲ್ ಕೋಚಿಂಗ್ ಅವನಿಗೆ. ಆರೇ ತಿಂಗಳಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಕಲಿತ ಎಂದರೆ ಏಳನೆಯ ತರಗತಿಯಲ್ಲಿ ಕನ್ನಡದಲ್ಲಿ ಅವನಿಗೆ 90ಕ್ಕೂ ಹೆಚ್ಚು ಅಂಕ ಬರುತ್ತಿತ್ತು. ಸೊಗಸಾಗಿ ಮಾತನಾಡಲೂ ಕಲಿತಿದ್ದ. ಅವನೊಂದಿಗೆ ಆಂಗ್ಲದಲ್ಲಿ ಮಾತನಾಡಿದರೆ ಅವನು ಸ್ಪಷ್ಟವಾಗಿ ಕನ್ನಡಲ್ಲಿ ಉತ್ತರ ಕೊಡುತ್ತಿದ್ದ. ಇವನು ಹೀರೋನೇ ನಿಜ! ಅಂದ ಹಾಗೆ, ಇಂದಿನ ಬೆಂಗಳೂರಿಗರೇ, ಕೇಳಿಸಿಕೊಂಡಿರಾ?

ಕಾಲೇಜಿಗೆ ಸೇರಿದಾಗ ಇಂಥದ್ದೇ ಮತ್ತೊಂದು ಸನ್ನಿವೇಶ ಆದರೆ ಸ್ವಲ್ಪ ಭಿನ್ನ. ನಮ್ಮ ತರಗತಿಯಲ್ಲಿ "ಶಿವಾನಂದ ಸಿದ್ದರಾಮೇ" ಎಂಬ ಹುಡುಗ. ಮೊದಮೊದಲಿಗೆ "ಸಿದ್ದರಾಮೇ" ಎಂಬ ಹೆಸರೇ ವಿಚಿತ್ರ ಎನಿಸುತ್ತಿತ್ತು. ಒಮ್ಮೆ ಕ್ಲಾಸ್ ಮುಗಿಸಿಕೊಂಡು ಬಸ್ಸಿಗಾಗಿ ಕಾದಿರುವಾಗ ಅವನೂ ಅದೇ ದಿಕ್ಕಿಗೆ ಹೋಗುತ್ತಿದ್ದುದರಿಂದ ಮಾತಿಗೆ ಸಿಕ್ಕ. ಅವನ ಮಾತು ನನಗೆ ಬೇಗ ಅರ್ಥವಾಗುತ್ತಿರಲಿಲ್ಲ ಕಾರಣ ಆತ ಬಿಜಾಪುರದವನು. ಆತ ಶುದ್ಧ ಕನ್ನಡಿಗ. ನಮ್ಮದೋ ಆಂಗ್ಲ ಮಿಶ್ರಿತ ಕನ್ನಡ. "ನನಗೆ ಇವರು ಕಲಿಸೋದು ಏನೂ ಅರ್ಥವಾಗ್ತಿಲ್ಲ. ನನಗೆ ಇಂಗ್ಲಿಷ್ ಬರೋಲ್ಲ. ಈ ಲೆಕ್ಕದ್ ಮೇಷ್ಟ್ರು ಅದೇನೋ obviously ಅಂತಾರಲ್ಲ, ಹಾಗಂದ್ರೇನು?" ಅಂದ.

ಬಹಳ ಮರುಕ ಉಂಟಾಯ್ತು. ಸಮಯ ಸಿಕ್ಕಾಗಲೆಲ್ಲ ಆತನಿಗೆ ಆಂಗ್ಲ ಹೇಳಿಕೊಡುತ್ತಿದ್ದೆ. ಒಮ್ಮೆಯಂತೂ ಪಾಪ physics lecturer ಇವನಿಗೆ ಪ್ರಶ್ನೆ ಕೇಳುತ್ತಿದ್ದರೇ, ಶಿವಾನಂದನಿಗೆ ಅವರ ಭಾಷೆಯೇ ತಲೆ ಹೋಗುತ್ತಿಲ್ಲ. ಇನ್ನೇನು ಉತ್ತರ ಕೊಟ್ಟಾನು? ಇವನು ತಬ್ಬಿಬ್ಬಾಗಿದ್ದು ನೋಡಿ ಹುಡುಗರು ನಗಲು ಶುರು ಮಾಡಿದರು! ಮೊದಲ ವರ್ಷ ಮುಗಿದ ಮೇಲೆ ಎರಡನೇ ಪಿ.ಯು.ಸಿಯಲ್ಲಿ ಅವನು ಕಾಲೇಜಿನಲ್ಲಿ ಇರಲಿಲ್ಲ. ಬೇರೆ ಕಾಲೇಜಿಗೆ ಹೋದನೋ ಅಥವಾ ಊರೇ ಬಿಟ್ಟು ಹೋದನೋ ಗೊತ್ತಿಲ್ಲ.

These children are the real unsung heroes

ಹೀರೋ ಸದಾ ಗೆಲ್ಲುವುದಿಲ್ಲ, ಅವನಿಗೆ ಸೋಲೂ ಇರುತ್ತೆ.

ನಮ್ಮದೇ ದೇಶವಾದರೂ ಒಂದೊಂದು ರಾಜ್ಯದ್ದೂ ಒಂದೊಂದು ಭಾಷೆ, ಒಂದೊಂದು ರಾಜ್ಯದಲ್ಲೂ ಹತ್ತು ಹಲವು ರೀತ್ಯ ಭಾಷೆಯ ವೈಖರಿ ಅಥವಾ ಉಪಭಾಷೆ. ರೈಲ್ವೆ, ಬ್ಯಾಂಕ್ ಅಥವಾ ಮತ್ತಿನ್ಯಾವುದೋ ಸರಕಾರೀ ಕೆಲಸ ಎಂದಾಗ ಪ್ರತಿ ಎರಡು ವರ್ಷಕ್ಕೆ ಮತ್ತೊಂದು ಊರಿನಲ್ಲಿ ಟೆಂಟ್ ಹಾಕುವವರು ಇದ್ದಾರೆ. ಒಂದೆಡೆಯಿಂದ ಮಕ್ಕಳು ಇನ್ನೊಂದೆಡೆ ಹೋದಾಗ ಹೆಚ್ಚು ಕಮ್ಮಿ ಅವರದ್ದು ಹೊಸಬಾಳು ಆರಂಭವಾದಂತೆ.

ಇಂಥಾ ಸನ್ನಿವೇಶ ಮನಸ್ಸಿಗೆ ತಂದುಕೊಂಡಾಗಲೆಲ್ಲ ಅತ್ತೆಯ ಮನೆಗೆ ಕಾಲಿಡುವ ಹೆಣ್ಣು ಮನಸ್ಸಿಗೆ ಬರುತ್ತಾಳೆ. ತನ್ನದೇ ವಾತಾವರಣದಲ್ಲಿ ಹುಟ್ಟಿ ಬೆಳೆದು ಹೊಂದಿಕೊಂಡಿದ್ದು ಏಕ್ದಂ ಒಂದು ದಿನ ಮತ್ತಿನ್ಯಾರದೋ ಮನೆಯಲ್ಲಿ ವಾಸ್ತವ್ಯ ಹೂಡಬೇಕು ಎಂದರೆ ಎಂಥಾ ಚಾಲೆಂಜ್ ಇರಬೇಕು. ಹುಟ್ಟಿದ ಮನೆಯಲ್ಲೂ ಸೇರಿದ ಮನೆಯಲ್ಲೂ ಬೆಳಕು ಚೆಲ್ಲಿ ಸೈ ಎನಿಸಿಕೊಳ್ಳುವ ಹೆಂಗಳಿಗೆ ಈ ಮೂಲಕ ನನ್ನ ನಮನಗಳು.

ಈಗ ದೇಶದಲ್ಲಿನ ವಿಚಾರದಿಂದ ಮುಂದೆ ಹೋಗಿ ವಿದೇಶಗಳ ಬಗ್ಗೆ ಮಾತನಾಡೋಣ. ಕೆಲಸಕ್ಕೆಂದು ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಬರುವ ಹೆತ್ತವರ ಹಿಂಬಾಲಿಸುವ 'ವಿದ್ಯಾರ್ಥಿ' ಮಕ್ಕಳು ಅಪ್ಪ ಅಥವಾ ಅಮ್ಮನ ವೀಸಾ / ಪ್ರಾಜೆಕ್ಟ್ ಮೇಲೆ ಸಂಪೂರ್ಣ ಅವಲಂಬಿತ.

ಭಾರತದ ಭೂಮಿಯಲ್ಲಿ ಕೆಲವೊಮ್ಮೆ ಅರ್ಧ ವರ್ಷ ಕಲಿತಿದ್ದು ಮುಂದಿನ ಅರ್ಧ ವರ್ಷ ಹೊರದೇಶದಲ್ಲಿ ವ್ಯಾಸಂಗ ಮಾಡಬೇಕಾದ ಪರಿಸ್ಥಿತಿ ಒದಗಿದಾಗ ಆ ವಿದ್ಯಾರ್ಥಿ ಎದುರಿಸುವ ಸವಾಲು ಚಾಲೆಂಜ್ ಬೇರೆ ರೀತಿಯದ್ದು. ಅಲ್ಲಿ ಕಲಿತ ಹಿಂದಿ, ಕನ್ನಡ ಅಥವಾ ಚರಿತ್ರೆಗಳು ಹೊರದೇಶದಲ್ಲಿ ಚಲಾವಣೆ ಆಗುವುದಿಲ್ಲ. ಮೊದಲಿಗೆ ಪರದೇಶಿಗಳು ಆಡುವ ಮಾತು ಅರ್ಥ ಮಾಡಿಕೊಳ್ಳಬೇಕಾದ್ದೇ ದೊಡ್ಡ ವಿಷಯ. ಯಾವ ದೇಶದಲ್ಲಿ, ಯಾವ ಪ್ರಾಂತ್ಯದಲ್ಲಿ ಇರುತ್ತಾರೋ ಅಲ್ಲಿನ ಸಬ್ಜೆಕ್ಟ್'ಗಳಿಗೆ ಹೊಂದಿಕೊಳ್ಳುವ ಸವಾಲು ಅವರ ಮುಂದೆ. ಇಲ್ಲಿ ಅಡಗಿರುವ ಮತ್ತೊಂದು ವಿಷಯ ಎಂದರೇ ಆ ಮಕ್ಕಳು ಯಾವ ತರಗತಿ ಕಲಿಯುತ್ತಿರುತ್ತಾರೆ ಎಂಬುದು.

ಸಣ್ಣಪುಟ್ಟ ಓದು ಆಗಿದ್ದರೆ ಪರವಾಗಿಲ್ಲ ಮತ್ತು ಚಿಕ್ಕ ಮಕ್ಕಳು ಬಹಳ ಬೇಗ ಕಲಿಯುತ್ತಾರೆ. ಅದೇ ಜಾಗದಲ್ಲಿ ದೊಡ್ಡ ಮಕ್ಕಳಿದ್ದರೆ ಅವರು ಎದುರಿಸುವ ಸವಾಲು ಸ್ವಲ್ಪ ಹೆಚ್ಚು. Accent issue, peer pressure ಅಂತ ಏನೆಲ್ಲಾ ನಿಮಗೆ ಅರಿವಿದೆಯೋ ಎಲ್ಲವೂ ಆ ಮಕ್ಕಳಲ್ಲಿ ಹೇರಳವಾಗಿರುತ್ತದೆ. ಕೆಲವೊಮ್ಮೆ ಮಕ್ಕಳು ಖಿನ್ನತೆಗೂ ಒಳಗಾಗಬಹುದು.

ಇದು ಇಲ್ಲಿಗೇ ಮುಗಿಯುವುದಿಲ್ಲ. ಹೊರದೇಶಕ್ಕೆ ಬಂದವರು ಒಂದೇ ರಾಜ್ಯದಲ್ಲಿ ಪ್ರಾಜೆಕ್ಟ್ ಹಿಡ್ಕೊಂಡ್ ಕೂತಿರುವುದಿಲ್ಲ. ಮತ್ತೊಂದು ರಾಜ್ಯಕ್ಕೆ ಹೋಗಬಹುದು. ಈ ಮಕ್ಕಳ ಜೀವನ ಮತ್ತೊಮ್ಮೆ ಪುನರಾರಂಭ.

ಇನ್ನು ಮತ್ತೊಂದು ಮಜಲಿನತ್ತ ದೃಷ್ಟಿ ಹರಿಸೋಣ. ಅಪ್ಪ ಅಥವಾ ಅಮ್ಮನ ವೀಸಾ ಮುಗಿದು ದೊಡ್ಡ ತರಗತಿಯಲ್ಲಿ ಓದುವ ಮಕ್ಕಳು ಭಾರತಕ್ಕೆ ಹೋಗಬೇಕಾದ ಪರಿಸ್ಥಿತಿ ಬಂತು ಎಂದುಕೊಳ್ಳಿ. ಕನ್ನಡ ಮಾತನಾಡಿ ಬಲ್ಲವರಿದ್ದರೂ ಓದಲು ಬಾರದ, ಹಳಗನ್ನಡ ಎಂದರೇನು ಎಂದು ಅರಿಯದ ಈ ಮಕ್ಕಳಿಗೆ ಓದು ಹೇಗಿರಬಹುದು. ನಮ್ಮ ದೇಶದಲ್ಲೋ ನಮಗಾಗಿ ಬದುಕುವುದಕ್ಕಿಂತ ಸಮಾಜಕ್ಕೆ ಹೆದರಿ ಬದುಕೋದೇ ಹೆಚ್ಚು.

ನನ್ನ ಜೀವನದಲ್ಲಿ ಇಂಥಾ ವಿದ್ಯಾರ್ಥಿಯ ಒಂದು ನೈಜ ಅನುಭವ ಹೀಗಿದೆ. ಇಲ್ಲಿ ನಮ್ಮೊಡನಿದ್ದು ಮೈಸೂರಿಗೆ ವಾಪಸ್ಸಾದ ಒಂದು ಸುಂದರ ಸಂಸಾರದ ಒಂದು ಘಟನೆ. ತನ್ನ ಪ್ರಾಜೆಕ್ಟ್'ಗೆಂದು ಕನ್ನಡದ ಬರಹಗಳನ್ನು ಓದಿ ಅದರ ಬಗ್ಗೆ ಬರೆಯಬೇಕಾದ್ದು ವಿಷಯ ಇರಬೇಕು ಅನ್ನಿಸುತ್ತೆ. ಆ ಹೆಣ್ಣುಮಗಳು ಸರಳರೂಪದ ಬರಹಗಳು ಎಂದು ನಾ ಬರೆದ ಕಥೆಗಳನ್ನು ತನ್ನ ಪ್ರಾಜೆಕ್ಟ್'ಗೆ ಆಯ್ದುಕೊಂಡಿದ್ದು ನನ್ನ ಜೀವನದ ಅತ್ಯುನ್ನತ ಪ್ರಶಸ್ತಿ.

ಅಕ್ಕಪಕ್ಕ, ಬಂಧು-ಬಳಗದವರ ಬಾಯಿಗೆ ಊಟವಾದ ಮೇಲಿನ ವೀಳ್ಯದಂತೆ ಈ ಮಕ್ಕಳ ವಿಷಯ. 'ಬರೀ ಕಾರಲ್ಲೇ ಓಡಾಡ್ತಿದ್ದ ಮಕ್ಕಳು ಈಗ ಹೇಗೋ?' ಇದೇನು ಪ್ರಶ್ನೆಯೋ, ಕುಹಕವೋ ಅರ್ಥವಾಗೋಲ್ಲ. 'ಎಷ್ಟು ದಿನ ಇಲ್ಲಿ, ಯಾವಾಗ ವಾಪಸ್ಸು ಹೋಗ್ತೀರಾ? ಅಲ್ಲಿದ್ದು ಬಂದಿರೋದು ನೋಡಿ ಹಬ್ಬಹಾಡಿ ಅಂತ ಏನೂ ಗೊತ್ತಿರೋಲ್ಲ ಅಲ್ವಾ? ಇಲ್ಲೆಲ್ಲಾ ಕೈಯಲ್ಲೇ ಊಟ ಮಾಡಬೇಕಪ್ಪಾ, Spoon / Fork ಇರಲ್ಲ ಗೊತ್ತಾಯ್ತಾ?' ಇಂಥಾ ವಿಷಯ ಅಂತಲ್ಲ ಒಂದೊಂದು ವಿಷಯಕ್ಕೂ ಮೂಗುಮುರಿವ ಮಾತು ಅಥವಾ ನೀನು ಇಲ್ಲಿಯವನಲ್ಲ ಎಂಬಂಥಾ ಮಾತುಗಳನ್ನು ಜೀರ್ಣಿಸಿಕೊಂಡು ಗೆದ್ದು ಬರುವ ಈ ಮಕ್ಕಳು ನಿಜಕ್ಕೂ ಹೀರೋಗಳೇ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When father gets transferred to some other place in India or Abroad, it is the children who have face the difficulty while learning the language or attending school in different environment. Don't you think these are the real unsung heroes? A beautiful write by Srinath Bhalle.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ