ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಸಾಯನ : ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ವರ್ಷದ ಆರಂಭದಲ್ಲಿ ನೀವು ಯಾವುದೇ ಪಾರ್ಟಿಗೆ ಹೋಗಿ, ಅಲ್ಲಿ ಕಿವಿಗೆ ಕೇಳೋ 'Happy New Year'ಗಳ ಜೊತೆ ಮತ್ತೊಂದು ಅಳಲು ಏನಂದ್ರೆ "ಇನ್ನೂ ಮೊನ್ನೆ ಮೊನ್ನೆ 2017ನ್ನು ಬರಮಾಡಿಕೊಂಡೆವು, ಆಗ್ಲೇ 2018 ಬಂದೇ ಬಿಡ್ತು! ಜೊತೆಗೆ ಹದಿನೆಂಟು ದಿನಗಳೂ ಕಳೆದೇ ಹೋದ್ವು, ಕಣ್ಣು ಮುಚ್ಚಿ ಕಣ್ ತೆರೆಯೋಷ್ಟರಲ್ಲಿ ವರುಷಗಳು ಓಡಿ ಬಿಡ್ತಿವೆ ಅಲ್ಲವಾ?"

ನೀವು ಅಷ್ಟು ಹೊತ್ತು ಕಣ್ಣು ಮುಚ್ಚಿಕೊಂಡ್ರೆ ನಾವೇನು ಮಾಡೋಕ್ಕಾಗುತ್ತೆ ಅನ್ನಬೇಡಿ ಪಾಪ, ಅವರಿಗೆ ಬೇಜಾರಾದೀತು!

ಬಲು ರೋಚಕ ಈ ಶಾಲಾ ಸಮವಸ್ತ್ರದ ಕಥಾನಕ!ಬಲು ರೋಚಕ ಈ ಶಾಲಾ ಸಮವಸ್ತ್ರದ ಕಥಾನಕ!

ಜೀವನ ಬಿಜಿ ಇದ್ದರೆ ಒಳ್ಳೇದು. ಇಲ್ದೇ ಹೋದ್ರೆ "ಟೈಮ್ ಎಷ್ಟೂ? ಆ! ಇನ್ನೂ ಮೂರು ಘಂಟೆನೇ? ಆಗ್ಲೇ ಕೇಳಿದಾಗ 2:45 ಅಂದಿದ್ದೀ... ಹೊತ್ತೇ ಹೋಗವಲ್ದು"! ಪ್ರತೀ ಕಾಲುಘಂಟೆಗೂ ಸಮಯ ನೋಡೋ ಹಾಗೆ ಆದಾಗ, ಜೀವನ ಖಂಡಿತ ಬೋರು ಅನ್ನೋದು ನಿಜವೇ!

The story of life is quicker than the blink of an eye

ನಮ್ಮಲ್ಲಿ ಅರ್ಥಾತ್ ಮಕ್ಕಳ ಮನೆಗೆ ಭಾರತದಿಂದ ಬಂದ ಅಪ್ಪ-ಅಮ್ಮ ಇವರುಗಳ ಪಾಡು ಒಮ್ಮೊಮ್ಮೆ ಹೀಗೆ. "ಹೊತ್ತೇ ಹೋಗವಲ್ದು, ನಮ್ಮೂರಲ್ಲಿ ಆಗಿದ್ದಿದ್ರೆ ಯಾರೊಂದಿಗೋ ಮಾತು... ಪಾರ್ಕ್, ದೇವಸ್ಥಾನ ಅಂತ ಓಡಾಟ... ಏನಿಲ್ಲಾ ಅಂದರೂ ಮನೆಗೆಲಸದವಳ ಜೊತೆ ಮಾತು ಅಂದ್ರೂ ಸಲೀಸಾಗಿ ಒಂದು ಘಂಟೆ ಹಾಗೇ ಹಾರಿ ಹೋಗಿರುತ್ತದೆ".

ಆದರೆ ಅವರುಗಳು ಹೊರಡುವ ಮುನ್ನ ಮನಸ್ಸಿನಲ್ಲೇ ಸಂತೋಷ ಇದ್ದರೂ ಮಕ್ಕಳಿಗೆ ಬೇಸರವಾಗದೆ ಇರಲಿ ಅಂತ "ಆರು ತಿಂಗಳು ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ ಹೊರಟೇ ಹೋಯ್ತು" ಅಂತಾರೆ. ಆ ಮಕ್ಕಳೇನಾದ್ರೂ "ಮುಂದಿನ ವರ್ಷ ಮತ್ತೊಮ್ಮೆ ಬನ್ನಿ" ಅಂತೇನಾದ್ರೂ ಹೇಳಿದರೂ ಅನ್ನಿ, ಅವರುಗಳ ಹೃದಯ "ನೋ.." ಅಂತ ಚೀರುತ್ತೆ.

ಪ್ರಕೃತಿಯೇ ಮೂರ್ತಿವೆತ್ತಂಥಾ ನಾಡು, ನಾ ಕಂಡ ಮೆಕ್ಸಿಕೋಪ್ರಕೃತಿಯೇ ಮೂರ್ತಿವೆತ್ತಂಥಾ ನಾಡು, ನಾ ಕಂಡ ಮೆಕ್ಸಿಕೋ

ಯಾರದಾದರೂ ಮನೆಯಲ್ಲಿ ಏನಾದರೂ ಆಯ್ತು ಅಂದರೆ ಅಕ್ಕಪಕ್ಕ, ಎದುರುಬದುರು ಮನೆಯವರೆಲ್ಲ ಆ ಮನೆಯ ಮುಂದೆ ಜಮಾಯಿಸಿ ಗುಸುಗುಸು ಮಾತನಾಡಿಕೊಳ್ಳುವ ಸನ್ನಿವೇಶ ಊಹಿಸಿಕೊಳ್ಳಿ. ಇಂಥಾ ಮಂದಿ ಅರಣ್ಯದ ಮಧ್ಯೆಯ ಆ ಕುಟೀರದ ಮುಂದೆ ನಿಂತು ಗುಸುಗುಸು ಮಾತಾಡುವಾಗ, ಯಾರೋ ಬಂದು, "ಏನಂತೆ ವಿಷಯ?" ಅಂತ ಮೂತಿ ಉದ್ದ ಮಾಡಿ ಕೇಳುವಾಗ, "ಲಕ್ಷ್ಮಣ ಗೆರೆ ಹಾಕಿಹೋಗಿದ್ನಂತೆ, ಸೀತೆ ಅದನ್ನು ದಾಟಿ ಹೊರಗೆ ಬಂದಳಂತೆ. ಆಕೆ ಹೊರಗೆ ಅಡಿ ಇಟ್ಟಿದ್ದೇ ತಡ, ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ ಆ ರಾಕ್ಷಸ ಆಕೆಯನ್ನು ಹಾರಿಸಿಕೊಂಡು ಹೋದನಂತೆ!"... "ಅಯ್ಯೋ ಪಾಪ! ರಾಮ-ಲಕ್ಷ್ಮಣ ಎಲ್ಲಿ ಹೋಗಿದ್ರಂತೆ?" ಹೀಗೆ...

The story of life is quicker than the blink of an eye

ರಾಮಾಯಣದ ಮತ್ತೊಂದು ದಿವಿನಾದ ಸನ್ನಿವೇಶ ತೆಗೆದುಕೊಳ್ಳಿ. ರಣಭೂಮಿಗೆ ಹೋಗಿ ರಾಮ-ಲಕ್ಷ್ಮಣರನ್ನು ಎದುರಿಸಲು ಕುಂಭಕರ್ಣನನ್ನು ಎಬ್ಬಿಸಲು ರಣಕಹಳೆಯನ್ನೇ ಊದಿಸುತ್ತಾನೆ, ಅಣ್ಣ ರಾವಣ! ಗಲಭೆಯಿಂದ ಎದ್ದು ಕೂತು ನಂತರ ವಿಷಯ ಅರಿತ ಕುಂಭಕರ್ಣ "ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ, ನಮ್ಮಣ್ಣ ಏನೇನೋ ಮಾಡಿಕೊಂಡಿದ್ದಾನೆ ಥತ್!" ಅಂತ ಬೈದುಕೊಂಡಿರಬಹುದೇ? ಈತನ "ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ" ಸಮಯ, ಆರು ತಿಂಗಳಂತೆ!

ಸಮುದ್ರದ ಮಧ್ಯದಿಂದ ಹೊರಗೆದ್ದು ನಿಂತ ರಾಕ್ಷಸಿಯು ದೊಡ್ಡದಾಗಿ ಬಾಯಿ ತೆರೆಯುತ್ತಲೇ ಇರಲು, ಹನುಮಂತನು 'ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ' ಕಿರಿದಾದ ರೂಪ ತಾಳಿ ಆ ರಕ್ಕಸಿಯ ಬಾಯಿ ಹೊಕ್ಕು ಹೊರಗೆ ಬಂದ ಪ್ರಸಂಗವನ್ನು, ಸಂಜೆ ರಾಮದೇವರ ಗುಡಿಯಲ್ಲಿ ಪುರಾಣ ಹೇಳುವ ಕೌಶಿಕರ ಬಾಯಲ್ಲಿ ಕೇಳುತ್ತಿದ್ದರೆ ಮೈ ಝಂ ಎನ್ನುತ್ತಿತ್ತು.

ಅಮೆರಿಕದವರು ಸಾಮಾನ್ಯವಾಗಿ ಹೇಳಿದ ಸಮಯಕ್ಕೆ ಆಗಮಿಸುವುದು ಅಥವಾ ಹೊರಡುವುದು ನಮಗೆಲ್ಲ ಅರಿವಿರುವ ವಿಷಯ. ಅದರಂತೆಯೇ ನಾವು ಭಾರತೀಯರು ಸಮಯ ಪರಿಪಾಲನೆಯಲ್ಲಿ ಸ್ವಲ್ಪ ಹಿಂದೆ ಎನ್ನುವುದೂ ಎಲ್ಲೆಡೆ ಜನಜನಿತ. ಈಗ ಒಂದು ಪ್ರಸಂಗ.

ಅಲ್ಲೊಂದು ಅಖಾಡ... ಕುಸ್ತಿಪಟುಗಳನ್ನು ನೋಡಲು ಜನ ಜಮಾಯಿಸುತ್ತಿದ್ದಾರೆ. ಎಲ್ಲರೂ, ಇನ್ನೇನು ಹೋರಾಟ ಶುರುವಾಗಲಿದೆ ಎಂದು ಕಣ್ಣು ಬಿಟ್ಟು ನೋಡುತ್ತಿರಲು ಮೈಕ್ ಟೈಸನ್ ಎಂಬ ದೈತ್ಯ ಮಾರ್ವಿಸ್ ಎಂಬ ಎದುರಾಳಿಯನ್ನು ಕೇವಲ ಮೂವತ್ತು ಸೆಕಂಡ್'ನಲ್ಲಿ ಸೋಲಿಸಿ "ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ" ಅಂದಿನ ಆಟ ಮುಗಿಸಿದ್ದ. ಅಷ್ಟೊಂದು ದುಡ್ಡು ಕೊಟ್ಟು ಬಂದಿದ್ದರೆ ಇವನು ಹೀಗಾ ಮಾಡೋದು ಅಂತ ಅಮೆರಿಕದವರು ಹಲುಬಿದರೆ, ಐದು ನಿಮಿಷ ಲೇಟ್ ಆಯ್ತು, ಹೋಗೋಷ್ಟರಲ್ಲಿ ಆಟಾನೇ ಮುಗಿದು ಹೋಗಿತ್ತಲ್ರೀ ಅಂತ ಹಲುಬುತ್ತಾನೆ ನಮ್ಮ ಭಾರತೀಯ.

The story of life is quicker than the blink of an eye

ಈ "ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ" ಜೀವನದಲ್ಲಿ ಏನೇನಾಗಬಹುದು ಅನ್ನೋದಕ್ಕೆ ನನ್ನದೇ ಒಂದೆರಡು ಸನ್ನಿವೇಶಗಳನ್ನು ಹೇಳುತ್ತೇನೆ.

ಅಂದು ಕಾಲೇಜಿನಿಂದ ಮಧ್ಯಾಹ್ನ ಬಂದು ಟಿವಿಯಲ್ಲಿನ ಕ್ರಿಕೆಟ್ ಮ್ಯಾಚ್ ಹಾಕಿ ಕೂತೆ. ಆಸ್ಟ್ರೇಲಿಯಾದವರು ಬೌಲಿಂಗ್'ಗೆ ನಮ್ಮವರ ಬ್ಯಾಟಿಂಗ್. ಬಹುಶಃ ಐದು ದಿನದ ಪಂದ್ಯ ಇರಬಹುದು. ಆರಂಭಿಕ batsmen ಕುಟುಕುತ್ತಾ ಆಡುತ್ತಿದ್ದರು. ಮೂವತ್ತು ರನ್ ಆಗಿತ್ತೇನೋ ಆಗ. ಮತ್ತೊಂದು ನಿಮಿಷದಲ್ಲಿ "ಎಷ್ಟಾಯ್ತು score?" ಅಂತ ಹೊರಗಿನಿಂದ ಬಂದ ಅಣ್ಣ ಕೇಳಿದ. "ಮೂವತ್ತು ರನ್ ಆಗಿದೆ ಅಷ್ಟೇ" ಅನ್ನುವ ಮುಂಚೆ ಸ್ಕೋರಿನ ಬೋರ್ಡ್ ನೋಡಿದರೆ ಆಗಲೇ ಆರು ವಿಕೆಟ್ ಬಿದ್ದು ಹೋಗಿದೆ. "ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ" ಅಂತ ನನ್ನ ಭಾವನೆ, ಆದರೆ ಚೇರಿನ ಮೇಲೆ ಕೂತು ಎಷ್ಟು ಹೊತ್ತು ನಿದ್ದೆ ಮಾಡಿದ್ನೋ ಗೊತ್ತಿಲ್ಲ. ಇದು ಬಹಳಾ ಅಗಣಿತ ಸನ್ನಿವೇಶ.

ಒಮ್ಮೆ ಬೆಳಗಿನ ಝಾವ ನಮ್ಮೂರಿನಿಂದ ಆರು ಘಂಟೆಗಳ ಕಾಲ ಡ್ರೈವ್ ಮಾಡಿ ಮತ್ತೊಂದು ಊರಿಗೆ ಹೋಗಿ, ಅಲ್ಲಿ ಶಾಪಿಂಗ್ ಅಂತ ಇಡೀ ಮಧ್ಯಾಹ್ನ ಮತ್ತು ಸಂಜೆ ಓಡಾಡಿ ಸಂಜೆ ಏಳಕ್ಕೆ ಯಾವುದೋ ಆಂಧ್ರ ರೆಸ್ಟೋರೆಂಟ್'ನಲ್ಲಿ ಪುಷ್ಕಳವಾಗಿ ಊಟ ಮಾಡಿ ಮತ್ತೆ ಗಾಡಿ ಓಡಿಸಲು ಕುಳಿತೆ. ಓಡಾಡಿದ ಸುಸ್ತು ಅದರ ಜೊತೆ ಊಟ ಸೇರಿ ಡ್ರೈವ್ ಮಾಡಲೇ ಕಷ್ಟವಾಯ್ತು. ಹನ್ನೊಂದರ ರಾತ್ರಿಯಲ್ಲಿ ಕೊಂಚ ನಿರ್ಜನವಾದ (ನಿರ್ವಾಹನ) ಹೈ-ವೇ'ಯಲ್ಲಿ ಬರುವಾಗ ಮಧ್ಯದ ಲೇನ್'ನಲ್ಲಿ ಬರುತ್ತಿದ್ದ ನಾನು 'ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ' ಕೊನೇ ಲೇನ್'ನಲ್ಲಿ ಇದ್ದೆ! ಆಗಲೇ ಅರ್ಥವಾಗಿದ್ದು ಇಲ್ಲಿಯವರು ಗಾಡಿ ಓಡಿಸುತ್ತಾ ಯಾಕೆ burger ತಿನ್ನುತ್ತಾರೆ ಅಂತ!

ಅಂದಿನ ದಿನಗಳಲ್ಲಿ ಮಾಲ್ಕಮ್ ಮಾರ್ಷಲ್'ನ ಬೌಲಿಂಗ್ ಹೇಗಿತ್ತೂ ಎಂದರೆ ಆಡಲು ಬಂದಿದ್ದ ಗವಾಸ್ಕರ 'ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ' ವಿಕೆಟ್ ಕಳೆದುಕೊಳ್ಳುತ್ತಿದ್ದ.

ಅಜರುದ್ದೀನ್ ಫಾರ್ಮ್'ನಲ್ಲಿ ಇಲ್ಲದೆ ಬಳಲುತ್ತಿದ್ದ ಕಾಲದಲ್ಲಿ, ಆಗ ತಾನೇ ಬ್ಯಾಟ್ ಹಿಡಿದು ಹೋಗುತ್ತಿದ್ದವ 'ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ' ಔಟಾಗಿ ವಾಪಸಾಗುತ್ತಿದ್ದ. ಆಗೆಲ್ಲ ಒಂದಷ್ಟು ದಿನ ಈಮೈಲ್'ಗಳು (ವಾಟ್ಸಪ್ಪ್ ಅಲ್ಲ) ಹರಿದಾಡುತ್ತಿತ್ತು! ಅಜರುದ್ದೀನ್ ಬ್ಯಾಟ್ ಹಿಡಿದು ಹೊರಡುವಾಗ ಒಂದು ಫೋನ್ ಕಾಲ್ ಬರುತ್ತೆ. ಈ ಕಡೆ ಕರೆ ಸ್ವೀಕರಿಸಿದವರು, "ಅಜರುದ್ದೀನ್ ಈಗ ತಾನೇ batting'ಗೆ ಹೋಗಿದ್ದಾರೆ. ಎರಡು ನಿಮಿಷ ಲೈನ್'ನಲ್ಲಿರಿ. ಬರ್ತಾರೆ" ಅಂತ.

"ಕಣ್ಣು ಮುಚ್ಚಿ ತೆರೆಯೋಷ್ಟರಲ್ಲಿ" ಕಥಾನಕ ಇಷ್ಟರಲ್ಲೇ ಇದ್ದಿದ್ರೆ ಚೆನ್ನಿತ್ತು... ಆದರೆ ನವರಸದಲ್ಲಿ ಇನ್ನೂ ಇತರೆ ರಸಗಳಿವೆಯಲ್ಲಾ?

ದಿನವಹಿ ವಹಿವಾಟಿನಲ್ಲಿ ಏನೆಲ್ಲಾ ನಡೆಯುತ್ತದೆ. ಅಹಿತಕರ ಘಟನೆಗಳು ಆದಲ್ಲಿ, ಬಾಯಿಬಿಟ್ಟು ಹೇಳದೆ ಒಳಗೆ ನುಂಗಿಕೊಂಡು ಕೂಡುವ ಸಂದರ್ಭಗಳೇ ಹೆಚ್ಚು. ಅದು ಲಾವಾರಸದಂತೆ ಕುದಿಯುತ್ತಾ ಸಾಗಿ ಯಾವುದೋ ಒಂದು ಕ್ಷಣದಲ್ಲಿ ಭೂಮ್ ಎಂದು ಸಿಡಿಯುತ್ತದೆ. ಪಿನ್ ತೆಗೆದುಕೊಂಡು ಬಲೂನು ಚುಚ್ಚಿದರೆ ಯಾವ ರೀತಿ ಸ್ವರೂಪ ಒಂದೇ ಕ್ಷಣದಲ್ಲಿ ಬದಲಾಗುತ್ತೋ ಹಾಗೆ ಆ ಒಂದು ಕ್ಷಣದಲ್ಲಿ ಅರ್ಥಾತ್ "ಕಣ್ಣು ಮುಚ್ಚಿ ತೆರೆಯೋಷ್ಟರಲ್ಲಿ" ಸಂಬಂಧಗಳು ಕೊಚ್ಚಿಕೊಂಡು ಹರಿದುಹೋಗುತ್ತದೆ.

ಈ "ಕಣ್ಣು ಮುಚ್ಚಿ ತೆರೆಯೋಷ್ಟರಲ್ಲಿ" ಸಂಬಂಧಗಳು ಹಾಳಾಗುವ ತನಕ ಒಳಗೆ ಕುದ್ದು ಒದ್ದಾಡುವ ಬದಲಿಗೆ, ಯಾವುದೇ 'ತಪ್ಪು ತಿಳುವಳಿಕೆ' ಎದುರಾದಾಗ ಎದುರುಬದುರು ಕೂತು ಮಾತನಾಡಿ ಬಗೆ ಹರಿಸಿಕೊಂಡರೆ 2018'ರಲ್ಲಿ ವೈಷಮ್ಯ ಕಡಿಮೆಯಾಗಬಹುದೇನೋ? ಹೇಳೋದು ಸುಲಭ ಅಂತೀರೇನೋ?

English summary
The story of life is quicker than the blink of an eye. Everything can change in the blink of an eye. But don't worry; God never blinks. Interesting and humorous anecdotes by Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X