ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡವರನ್ನೂ ಹೊಸ ಲೋಕಕ್ಕೆ ಕೊಂಡೊಯ್ಯುವ ಮಕ್ಕಳ ಧಾರಾವಾಹಿಗಳು!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮಕ್ಕಳು ತುಂಬಾ ಇಷ್ಟಪಡುವ ಕಾರ್ಟೂನ್ ಗಳನ್ನು, ಧಾರಾವಾಹಿಗಳನ್ನು ದೊಡ್ಡವರು ಇಷ್ಟಪಡದೇ ಇರಬಹುದು ಅಥವಾ ವೇಸ್ಟ್ ಆಫ್ ಟೈಮ್ ಅಂತ ಅಂದುಕೊಳ್ಳಬಹುದು. ಆದರೆ, ಅವುಗಳಿಂದಲೂ ಮಕ್ಕಳು ಮಾತ್ರವಲ್ಲ ದೊಡ್ಡವರೂ ಕಲಿಯುವುದು ಸಾಕಷ್ಟಿರುತ್ತದೆ. ಶ್ರೀನಾಥ್ ಭಲ್ಲೆ ತಮ್ಮ ಅಂಕಣದಲ್ಲಿ ಬರೆದಿದ್ದಾರೆ, ಓದಿರಿ.

***

ಮಕ್ಕಳಿಗೆ bedtime stories ಹೇಳಿ / ಓದಿ ಮಲಗಿಸೋದು ಬಹಳ ಹಿಂದಿನಿಂದಲೂ ಇದೆ. ಕೆಲವು ಸಂಸಾರಗಳಲ್ಲಿ ಇಂದಿಗೂ ಇದೆ ಅಂತ ನಂಬಿದ್ದೀನಿ. ಬಹುಪಾಲು ಮನೆಗಳಲ್ಲಿನ ಪರಿಸ್ಥಿತಿ ಮಾತ್ರ ಬೇರೆಯೇ ಪ್ರಪಂಚ. ಎಲ್ಲರೂ ಅವರವರ ಕೆಲಸಗಳಲ್ಲಿ ಮಗ್ನ. ಕಚೇರಿಯಿಂದ ಬರುವಾಗಲೇ ಸೋತು ಸುಣ್ಣವಾಗಿರೋ ಮಂದಿಗೆ ಮಕ್ಕಳಿಗೆ ಕಥೆ ಹೇಳೋದಕ್ಕೆ ಸಮಯವಾದರೂ ಎಲ್ಲಿರುತ್ತೆ? ಜೊತೆಗೆ ಮಕ್ಕಳ ಪ್ರಪಂಚ ಇನ್ನೂ ದುಸ್ತರ. ಶಾಲೆಯಿಂದ ಬರುತ್ತಲೇ ಟ್ಯೂಷನ್'ಗೆ ಓಡಬೇಕು. ಜೊತೆಗೆ ಲಲಿತಕಲೆಗಳ ಕ್ಲಾಸ್'ಗಳು. ನಂತರ ಹೋಂವರ್ಕ್, ಪ್ರಾಜೆಕ್ಟ್ ಇತ್ಯಾದಿ. ಟೆಸ್ಟ್ ಅಥವಾ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬೇಕು.

ಇಷ್ಟೆಲ್ಲಾ ಯಾಕೆ ಹೇಳಿದೆ ಅಂದ್ರೆ, ಮಕ್ಕಳೊಂದಿಗೆ ಮಕ್ಕಳ ಧಾರಾವಾಹಿ ನೋಡೋದಕ್ಕೆ ಜನಕ್ಕೆ ಸಮಯ ಇದೆಯೇ ಅನ್ನೋದು ನನ್ನ ಪ್ರಶ್ನೆ. ನನ್ನ ಮಗನೊಂದಿಗೆ ನಾನು ನೋಡಿದ ಒಂದಿಷ್ಟು ಧಾರಾವಾಹಿಗಳನ್ನು ನೋಡಿದ್ದೇನೆ.

ನಿಮಗೆ ದಾಂಧಲೆ ಎಬ್ಬಿಸುವವರು ಗೊತ್ತೇ? ಇದರಿಂದ ಪ್ರಯೋಜನವೂ ಇದೆನಿಮಗೆ ದಾಂಧಲೆ ಎಬ್ಬಿಸುವವರು ಗೊತ್ತೇ? ಇದರಿಂದ ಪ್ರಯೋಜನವೂ ಇದೆ

ಮಕ್ಕಳ ಧಾರಾವಾಹಿಯ ಬಗ್ಗೆ ಮೊದಲಿಗೆ ಒಂದು ಮಾತು ಹೇಳಿಬಿಡುತ್ತೇನೆ. ಈ ಧಾರಾವಾಹಿಗಳು ಸಾಮಾನ್ಯವಲ್ಲ. ಅದು ಆಟದೊಂದಿಗೆ ಪಾಠ. ಬರೀ ವಿನೋದ ಎಂದುಕೊಂಡರೆ ಅದು ತಪ್ಪು. Meaningless ಎಂದು ಮಕ್ಕಳನ್ನು ಅವರಪಾಡಿಗೆ ಅವರನ್ನು ಬಿಟ್ಟು ನಾವೇನೋ ಘನಂಧಾರಿ ಕೆಲಸ ಮಾಡುವುದು ಬೇಕಿಲ್ಲ. ಎಂತೆಂಥದ್ದೋ ಗಹನವಾದ ವಿಚಾರಗಳನ್ನು ನಗ್ತಾ ನಗ್ತಾ ನಮ್ಮ ಮುಂದೆಯೇ ಬಾಳೆಹಣ್ಣು ಸುಲಿದಿಟ್ಟಷ್ಟು ಸರಾಗವಾಗಿ ಹೇಳಿಬಿಡುತ್ತಾರೆ. ಇವುಗಳಲ್ಲಿ ಒಂದು ಅಂಶ ನನಗೆ ಇಷ್ಟವಾಗುತ್ತೆ ಎಂದರೆ ಆಯಾ ದಿನಗಳ ಎಪಿಸೋಡ್'ಗಳಲ್ಲೇ ಆರಂಭ ಅಂತ್ಯ. ಪ್ರತಿ ಎಪಿಸೋಡ್'ನಲ್ಲೂ ಬೇರೆ ಬೇರೆ ಕಥೆ.

SpongeBob SquarePants, an American animated television series for children

Tom & Jerryಯೇ ಮೊದಲಾಗಿ ಹಲವಾರು ಧಾರಾವಾಹಿಗಳನ್ನು ಮಗನೊಂದಿಗೆ ನೋಡಿದ್ದರೂ ಇಂದಿನ ವಿಷಯ Spongebob Squarepants ಎಂಬ animated ಧಾರಾವಾಹಿ ಬಗ್ಗೆ.

ಅಡುಗೆಮನೆಯಲ್ಲಿನ ಪಾತ್ರೆ ತೊಳೆಯುವ ಸ್ಪಾಂಜ್ ಅನ್ನು ಹೋಲುವ ಈ spongebob ಚೌಕಾಕಾರದ ಚಡ್ಡಿಧಾರಿ. ಸಾಗರದ ತಳಭಾಗದಲ್ಲಿ ಒಂದು ಹೂತುಹೋದ pineapple'ನಲ್ಲಿ ತನ್ನ ಸಾಕುಪ್ರಾಣಿ 'ಬಸವನಹುಳು'ವಿನೊಂದಿಗೆ ಜೀವನ. ಹೊಟ್ಟೆಪಾಡಿಗಾಗಿ ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಕೆಲಸ. ಅಲ್ಲಿನ ಬಾಸ್ Crusty Crabs ಎಂಬ ಏಡಿ. ಬಲೇ ಜಿಪುಣ. ಟಿಪಿಕಲ್ ಬಾಸ್ ಎಂಬಂತೆ ತೋರಿಸಲಾಗುತ್ತದೆ. ಅಲ್ಲಿನ ಸಹೋದ್ಯೋಗಿ ಮತ್ತು ಪಕ್ಕದ ಮನೆಯಾತ squidward ಎಂಬ ಅಷ್ಟಪಾದಿ. ಇವನೊಬ್ಬ ಅಹಂಕಾರಿ ಮತ್ತು ಮುಂಗೋಪಿ. spongebob'ಗೆ ಒಬ್ಬ ಪ್ರಾಣ ಸ್ನೇಹಿತನಿದ್ದಾನೆ. ಅವನೇ ಪ್ಯಾಟ್ರಿಕ್ ಎಂಬ starfish. ಮಹಾದಡ್ಡ. ಮತ್ತೊಂದು ಪಾತ್ರ ಎಂದರೆ ಗುರುಸಮಾನವಾದ ಸ್ಯಾಂಡಿ ಎಂಬ ಹೆಣ್ಣು ಅಳಿಲು. ನೀರಿನ ಒಳಗೆ ಇರಬೇಕಾದ್ದರಿಂದ ಸದಾ ಮುಖವಾಡ ಹೊತ್ತಿರುವ ಶೂರ ನಾರಿ.

ತಲ್ಲಣಸಿದಿರು ಕಂಡ್ಯ ತಾಳು ಮನವೆ . . . . ತಲ್ಲಣಸಿದಿರು ಕಂಡ್ಯ ತಾಳು ಮನವೆ . . . .

ನಮ್ಮ ಜೀವನಕ್ಕೆ ಈ ಧಾರಾವಾಹಿ ಹೇಗೆ ಹತ್ತಿರ?

ಒಂದು ಎಪಿಸೋಡ್'ನಲ್ಲಿ ಸಹೋದ್ಯೋಗಿ 'ಸ್ಕ್ವಿಡ್' ಕೆಲಸಕ್ಕೆ ರಜಾ ಹಾಕಿ ದೂರದಲ್ಲೆಲ್ಲೋ ಇರುವ ಒಂದು ಪ್ರವಾಸೀತಾಣಕ್ಕೆ ಹೋಗಬೇಕೆಂದು ತಯಾರಿ ನಡೆಸುತ್ತಾನೆ. ತಾನು ರಜಾ ಹಾಕಿ ಹೋಗುತ್ತಿದ್ದೇನೆ, ನಿನ್ನಿಷ್ಟ ಬಂದ ಹಾಗೆ ಏನು ಬೇಕಾದರೂ ಮಾಡ್ಕೋ, ನಿನ್ನ ಕಾಟದಿಂದ ದೂರ ಇರುತ್ತೇನೆ ಎಂಬ ಧೋರಣೆಯಲ್ಲಿ spongebob ಅನ್ನು ನೋಡುತ್ತಿರುತ್ತಾನೆ. ಆದರೆ ಈ ಸೂಕ್ಷ್ಮವೆಲ್ಲಾ ತಲೆಗೆ ಹಚ್ಚಿಕೊಳ್ಳದ spongebob ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳುತ್ತಾ ಹೋಗುತ್ತಾನೆ. ರಜೆಗೆಂದು ಹೋಗುವ ದಿನಗಳು ಹತ್ತಿರವಾಗುತ್ತಿದ್ದಂತೆ ಸ್ಕ್ವಿಡ್'ಗೆ ಟೆನ್ಶನ್. ಬೀಚಿನಲ್ಲಿ ಕೂತಿರುವಾಗಲೂ ಕೆಲಸದ್ದೇ ಯೋಚನೆ. spongebob'ನ ಬೇಜವಾಬ್ದಾರಿಯಿಂದ ಅಂಗಡಿಯಲ್ಲಿ ಕಳ್ಳತನವಾದಂತೆ, ಬೆಂಕಿ ಹೊತ್ತುಕೊಂಡ ಹಾಗೆ ಏನೇನೋ ಕಲ್ಪನೆಗಳು. ಕೊನೆಗೆ ತಡೆದುಕೊಳ್ಳಲಾರದೆ ಒಂದೇ ದಿನಕ್ಕೆ ಕೆಲಸಕ್ಕೆ ಧಾವಿಸಿ ಬರುತ್ತಾನೆ. ಎಲ್ಲವೂ ಹೇಗಿರಬೇಕೋ ಹಾಗೆ ಇರುತ್ತೆ. ಎಲ್ಲೂ ಯಾವುದೂ ಏರುಪೇರಾಗಿರುವುದಿಲ್ಲ. ತಾನು ನೋಡಿಕೊಳ್ಳುತ್ತೇನೆ ಎಂದರೂ ಕೆಲಸಕ್ಕೆ ಯಾಕೆ ಬಂದಿ ಅನ್ನೋ spongebob'ನ ಪ್ರಶ್ನೆಗೆ ಸ್ಕ್ವಿಡ್ ಬಳಿ ಉತ್ತರವೇ ಇರೋದಿಲ್ಲ.

ನನ್ನ ಬೇಸಿಗೆ ರಜೆಯ ಮಜಾ ಹೀಗಿತ್ತು! ನಿಮ್ಮದು ಹೇಗಿತ್ತು?ನನ್ನ ಬೇಸಿಗೆ ರಜೆಯ ಮಜಾ ಹೀಗಿತ್ತು! ನಿಮ್ಮದು ಹೇಗಿತ್ತು?

ಸ್ಕ್ವಿಡ್ ಜಾಗದಲ್ಲಿ ನಮ್ಮನ್ನೇ ನಾವು ಊಹಿಸಿಕೊಂಡರೆ, ದಿನನಿತ್ಯದಲ್ಲಿ ನಮ್ಮನ್ನು ನಾವು ಏನೋ ಅಂದುಕೊಂಡಿರುತ್ತೇವೆ. ನಾವಿಲ್ಲದಿದ್ದರೆ ಜಗವೇ ನಿಂತುಹೋಗುತ್ತದೆ ಎಂಬ ಅಹಂಭಾವದಲ್ಲಿ ಸದಾ ಕೆಲಸದಲ್ಲೇ ತೊಡಗುತ್ತೇವೆ. ಹಾಗೆ ಒಂದು ವೇಳೆ ರಜಾ ಹಾಕಿ ಹೋದರೂ, ಮನಸ್ಸೆಲ್ಲಾ ಕೆಲಸ ಬಗ್ಗೆನೇ ಯೋಚನೆ ಮಾಡುತ್ತಾ ಇರುತ್ತದೆ. ಈಮೈಲ್ ಚೆಕ್ ಮಾಡೋದು, ಟೀಮ್'ನ ಜನಕ್ಕೆ ಕರೆ ಮಾಡುವುದು ಎಂದೆಲ್ಲಾ ಮಾಡೋದು. ವಾಪಸ್ ಕೆಲಸಕ್ಕೆ ಹಾಜರಾದ ಮೇಲೆ, ಎಷ್ಟೋ ಬಾರಿ, ನಮ್ಮ ಇಲ್ಲದಿರುವಿಕೆ ಯಾರಿಗೂ ಏನೂ ಅನ್ನಿಸದೇ ಹೋಗಿದ್ದನ್ನು ಕಂಡಾಗ ಮನಸ್ಸಿಗೆ ಪಿಚ್ಚೆನಿಸುತ್ತದೆ.

spongebob ನಿತ್ಯದಲ್ಲಿ ಸರಿಯಾದ ಸಮಯಕ್ಕೆ ಬರುವುದು, ದಿನದ ಕೊನೆಯವರೆಗೂ ದುಡಿಯುವುದು ಅಂತೆಲ್ಲಾ ನಿಷ್ಠೆಯಿಂದ ಮಾಡಿಕೊಂಡಿದ್ದವನು ಆ ತಿಂಗಳ 'employee of the month' ತನಗೇ ದಕ್ಕುವುದು ಎಂಬ ಖಚಿತವಾಗಿ ಅಂದುಕೊಂಡಿರುತ್ತಾನೆ. ಈ ಪಟ್ಟ ಯಾರಿಗೆ ಅಂತ ಎಲ್ಲರಿಗೂ ತಿಳಿಸುವ ಸಮಾರಂಭದಲ್ಲಿ ಅತೀ ಉತ್ಸುಕತೆಯಿಂದ ಕಾದಿರುತ್ತಾನೆ. ಹೆಸರು ಅನೌನ್ಸ್ ಮಾಡಿದ್ದೆ ತಡ ಸೀಟಿನಿಂದ ಹಾರಿ ಮೈಕ್ ಬಳಿ ಹೋಗುತ್ತಾನೆ. ಅದೇ ಸಮಯಕ್ಕೆ 'ಶುಭಾಶಯಗಳು' ಎಂದು banner ಒಂದನ್ನು ಹಾರಿಸುತ್ತಾ ಸಾಗುತ್ತಾನೆ ಸ್ನೇಹಿತ ಪ್ಯಾಟ್ರಿಕ್. ತನ್ನ ಜೇಬಿನಿಂದ ಭಾಷಣದ ಪ್ರತಿಯನ್ನು ತೆಗೆವ spongebob, ಭಾಷಣ ಶುರು ಮಾಡುವಾಗ ಒಂದು ಕ್ಷಣ ಯೋಚಿಸಿದವನೇ ಸುಮ್ಮನಾಗುತ್ತಾನೆ. ಕಾರಣ, ತನ್ನ ಬಾಸ್ 'employee of the month' ಎಂದು ಅನೌನ್ಸ್ ಮಾಡಿದ್ದು ತನ್ನ ಹೆಸರಲ್ಲ ಬದಲಿಗೆ ಸ್ಕ್ವಿಡ್ ಹೆಸರು ಅಂತ. ಅಷ್ಟು ತಲೆಗೆ ಬಂದಿದ್ದೇ, ತೀವ್ರ ಖಿನ್ನತೆಗೆ ಒಳಗಾಗುತ್ತಾನೆ.

ಬಲು ರೋಚಕ ಈ ಶಾಲಾ ಸಮವಸ್ತ್ರದ ಕಥಾನಕ!ಬಲು ರೋಚಕ ಈ ಶಾಲಾ ಸಮವಸ್ತ್ರದ ಕಥಾನಕ!

ಹೇಳುವವರ ಮಾತನ್ನು ಪೂರ್ತಿ ಕೇಳಿಸಿಕೊಳ್ಳದೇ ಹೋಗುವುದು, ತಮ್ಮ ಬಗ್ಗೆ ವಾಕರಿಕೆ ಬರಿಸುಕೊಳ್ಳುವಷ್ಟು confidence ಇಟ್ಟುಕೊಳ್ಳುವುದು ಅಂತೆಲ್ಲಾ ಆದಾಗ ಸಾರ್ವಜನಿಕವಾಗಿ ಮುಖ ಕೆಡಿಸಿಕೊಳ್ಳುವಂತೆ ಆಗುತ್ತದೆ. ರಮೇಶ್ ಅವರ ಕಾರ್ಯಕ್ರಮದಲ್ಲಿ ಒಬ್ಬರು over confidence'ನಿಂದ ತಪ್ಪು ಉತ್ತರ ಕೊಡುವುದೇ ಅಲ್ಲದೆ ಸರಿ ಉತ್ತರ ನೀಡಿದವರನ್ನು ಬಾಯಿಬಡಿಯುವ ಸನ್ನಿವೇಶ ನೆನಪಾಗುತ್ತೆ ಇಲ್ಲಿ.

ಒಮ್ಮೆ spongebob ಎಲ್ಲಿಗೋ ಹೋಗಿ ವಾಪಸಾಗುವಾಗ ರಾತ್ರಿಯಾಗಿರುತ್ತದೆ. ಬಸ್ ಸ್ಟ್ಯಾಂಡಿಗೆ ಬಂದಾಗ ಅವನನ್ನು ಹೊರತುಪಡಿಸಿ ಮತ್ಯಾರೂ ಅಲ್ಲಿಲ್ಲ. ಒಂದೆಡೆ ಕತ್ತಲಿನ ಭಯ, ಮತ್ತೊಂದೆಡೆ ಹಸಿವು. ಆ ಕಡೆ ಈ ಕಡೆ ನೋಡಲು, ನಾಲ್ಕು ಹೆಜ್ಜೆ ಹೋದರೆ ಅಲ್ಲೊಂದು vending ಮಷೀನ್. ಅವನು ಅಲ್ಲಿಗೆ ಹೋಗಿ ಏನೋ ಕೊಳ್ಳಬೇಕು ಅಂದುಕೊಳ್ಳುವಾಗ ಬಸ್ ಬಂದು ನಿಲ್ಲುತ್ತದೆ. ಇವನು ಅಲ್ಲಿಂದ ಸ್ಟಾಂಡ್'ಗೆ ಓಡಿಬಂದಾಗ ಆ ಬಸ್ ಹೊರಟುಹೋಗುತ್ತದೆ. ಛೇ! ಎಂದುಕೊಂಡು ಮತ್ತೆ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಾನೆ. ಬಸ್ ಬರೋದೇ ಇಲ್ಲ. ಮತ್ತೆ ಮಷೀನ್ ಕಡೆ ಹೋದಾಗ ಬಸ್ ಬರುತ್ತದೆ. ಇವನು ಓಡಿ ಹೋಗುವ ಹೊತ್ತಿಗೆ ಹೊರಟೇ ಹೋಗುತ್ತದೆ. ಹೀಗೆ ನಾಲ್ಕು ಬಾರಿಯಾದ ಮೇಲೆ ಒಂದೂ ಬಸ್ ಬರೋದಿಲ್ಲ. ಅಲ್ಲಿಂದ ನಡೆದುಕೊಂಡು ಮೈನ್ ಬಸ್ ಸ್ಟಾಂಡ್'ಗೆ ಹೋಗಿ ಕೌಂಟರ್ ಬಳಿ ಮುಂದಿನ ಬಸ್ ಯಾವಾಗ ಎಂದು ಕೇಳಿದರೆ ಅವರು 'ನಾಳೆ' ಎಂದು ನುಡಿದು ಆಫೀಸಿನ ಲೈಟ್ ಆರಿಸಿಕೊಂಡು ಹೋಗಿಬಿಡುತ್ತಾರೆ.

ಎಷ್ಟೋ ಬಾರಿ ಈ ಅವಕಾಶಗಳು ಇದ್ದಾಗ ನಾವು ಅಲ್ಲಿರೋದಿಲ್ಲ, ನಾವಿದ್ದಾಗ ಅವಕಾಶಗಳು ಬರೋದಿಲ್ಲ ಅನ್ನಿಸುತ್ತೆ ಅಲ್ಲವೇ? ಹಲ್ಲಿದ್ದಾಗ ಕಡಲೆ ಇರೋದಿಲ್ಲ, ಕಡಲೆ ಇದ್ದಾಗ ಹಲ್ಲು ಇರೋದಿಲ್ಲ. ಅಲ್ವೇ?

ಒಮ್ಮೆ ಇವನು ವಿದ್ಯಾರ್ಥಿಯಾಗಿದ್ದ ಡ್ರೈವಿಂಗ್ ಸ್ಕೂಲ್'ಗೆ ಒಬ್ಬ ಧಡಿಯ ಬಂದು ಸೇರುತ್ತಾನೆ. ಅವನನ್ನು ಕಂಡ ಕೂಡಲೇ ಇವನಿಗೆ ಭಯ ಶುರುವಾಗುತ್ತೆ. ಇವನನ್ನು ಕಂಡ ಕೂಡಲೇ ಅವನು ಅಂಗೈ ಹೊಸೆಯುತ್ತಾನೆ. ಅವನಿಂದ ಗೂಸಾ ಖಂಡಿತ ಅಂತ spongebob'ಗೆ ಖಾತ್ರಿಯಾಗುತ್ತದೆ. ಪ್ರತೀ ಬಾರಿ ಇವನಿಂದ ದೂರ ಕುಳಿತುಕೊಳ್ಳಬೇಕು ಎಂದುಕೊಂಡರೆ ಮಿಕ್ಕೆಲ್ಲ ಸೀಟುಗಳೂ ಭರ್ತಿಯಾಗಿರುತ್ತದೆ. ಧಡಿಯನ ಪಕ್ಕ ಕೂರದೆ ವಿಧಿಯಿಲ್ಲ. ಭಯ ಹೆಚ್ಚಾಗಿ ಡ್ರೈವಿಂಗ್ ಸ್ಕೂಲಿಗೆ ಹೋಗೋದೇ ನಿಲ್ಲಿಸುತ್ತಾನೆ. ಆದರೆ ಇವನು ಹೋದಲ್ಲೆಲ್ಲಾ ಅವನೂ ಕಾಣಿಸಿಕೊಳ್ಳುತ್ತಾನೆ. ಒಮ್ಮೆಯಂತೂ ಅತೀ ಭೀತಿಯಿಂದ ಮೂರು ದಿನ ಮನೆಯಿಂದಲೇ ಹೊರಗೆ ಬರೋದಿಲ್ಲ. ನಾಲ್ಕನೆಯ ದಿನ ಬಾಗಿಲು ತೆರೆದು ಹೊರಗೆ ಹೋಗಬೇಕು ಎಂದುಕೊಂಡರೆ ಬಾಗಿಲ್ಲಲೇ ನಿಂತಿದ್ದಾನೆ ಆ ಧಡಿಯ. spongebob ಸಂಪೂರ್ಣ ಭೀತಿಯಿಂದ ಅವನ ಕಾಲಿನ ಬಳಿ ಕುಸಿದು ನನ್ನನ್ನು ಬಿಟ್ಟುಬಿಡು, ನಾನೇನೂ ಮಾಡಿಲ್ಲ ಅಂತ ಬೇಡಿಕೊಳ್ಳುತ್ತಾನೆ. ಆದರೆ ಆ ಧಡಿಯ ಹೆಣ್ಣು ದನಿಯಲ್ಲಿ ಮಾತನಾಡುತ್ತಾ "ನನಗೆ ಯಾರೂ ಫ್ರೆಂಡ್ಸ್ ಇಲ್ಲ. ನೀನು ನನ್ನ ಫ್ರೆಂಡ್ ಆಗ್ತೀಯಾ?" ಅನ್ನುತ್ತಾನೆ. ಮತ್ತೇ ಅಂಗೈ ಯಾಕೆ ಹೊಸಕುತ್ತಿದ್ದೆ ಎಂದರೆ 'ನನಗೆ ಯಾವಾಗಲೂ ತುರಿಕೆ' ಎನ್ನುತ್ತಾನೆ.

ಏನನ್ನೋ ಕಂಡು, ಅದರ ಬಗ್ಗೆ ನಮ್ಮಲ್ಲಿ ಇಲ್ಲದ ಕಲ್ಪನೆ ಮೂಡಿಸಿಕೊಂಡು, ಆ ವಿಷಯದ ಬಗ್ಗೆಯೇ ಯೋಚಿಸಿ ಯೋಚಿಸಿ ಹಣ್ಣಾಗಿ ಕೊರಗಿ ಒದ್ದಾಡುವ ಸಂದರ್ಭಗಳು ಅನೇಕ ಅಲ್ಲವೇ? ಈಗ ನೀವು ಕಂಡ ಮಕ್ಕಳ ಧಾರಾವಾಹಿ ಮತ್ತು ಅದು ನಮ್ಮ ಜೀವನಕ್ಕೆ ಹೇಗೆ ಹತ್ತಿರ ಅಂತ ನೀವು ಹೇಳಿ.

English summary
SpongeBob SquarePants, an American animated television series for children. It is the highest rated series to ever air on Nickelodeon. We can learn a lot from these serials, says Srinath Bhalle from Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X