• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಮನುಷ್ಯನಿಗೆ ಇರುವ ಪ್ರಮುಖ ಆಸ್ತಿ ಎಂದರೆ ಮಾತು. ದೈವದತ್ತವಾಗಿ ಬಂದ ವರ ಈ ಮಾತು. ದೈವದತ್ತವಾಗಿ ಬಂದಿದೆ ಎಂದ ಮಾತ್ರಕ್ಕೆ ಎಲ್ಲರ ಬಾಯಲ್ಲಿ ದೈವವಾಣಿಯೇ ಉದುರುತ್ತೆ ಅಂತ ಹೇಳೋಕ್ಕಾಗೋಲ್ಲ. ಮಾತನ್ನಾಡುವ ಶಕ್ತಿ ಕೊಟ್ಟಿದ್ದಾನೆಯೇ ಹೊರತು ತಾನೇ ಆ ನಾಲಿಗೆಯ ಮೇಲೆ ಕೂತಿಲ್ಲ. ಇಲ್ಲದೆ ಇದ್ದಿದ್ರೆ ಎಲ್ಲರೂ ಕಾಳಿದಾಸರೇ ಆಗಿರುತ್ತಿದ್ದರು.

ಎಲುವಿಲ್ಲದ ನಾಲಿಗೆ, ಹಾಗಾಗಿ ಹೊರಳಬಹುದು. ಬಾಯೊಳಗೆ ಇದ್ದುಗೊಂಡೂ ಇಡೀ ಪ್ರಪಂಚ ಸುತ್ತಿ ಬರುತ್ತೆ. ಒಂದು ಕೊನೆ ಲೂಸ್ ಆಗಿ ಬಿಟ್ಟಿದ್ದು ಮತ್ತೊಂದು ತುದಿ ಬಿಗಿದುಕೊಂಡಿರೋದಕ್ಕೆ ಆಗಾಗ ಕಂಟ್ರೋಲ್'ಗೆ ತರಬಹುದು, ಆದರೂ ಕೆಲವೊಮ್ಮೆ ಗಾಳಿಪಟದಂತೆ ಹಾರಿದ್ದೂ ಇದೆ. ಹಾಗಾಗಿ ತಲೆಗಳೂ ಹಾರಿದ್ದಿದೆ.

ನಂಬಿಕೆಗಳ ಸುತ್ತ ಶಾಲಾ ದಿನಗಳ ಮಧುರ ನೆನಪುಗಳು

ಅದೆಲ್ಲಾ ಬಿಡಿ, ಮಾತಿನ ಸೊಗಸನ್ನು ಪೊಗಳುತ್ತಲೇ ಸ್ವಲ್ಪ ಎಚ್ಚರಿಕೆ ವಹಿಸೋದೂ ಮುಖ್ಯ ಎನ್ನುವ ದಿಶೆಯಲ್ಲಿ ಮಾತನಾಡೋಣ. ತಲೆ ವಿಷಯಕ್ಕೆ ಬೇಕಾದಾಗ ಬರೋಣ.

Silence is as deep as eternity

"ಮಾತು ಆಡಿದರೆ ಆಯಿತು, ಮುತ್ತು ಒಡೆದರೆ ಹೋಯಿತು" ಅಂತಾರೆ. ಅರ್ಥಾತ್ ಮಾತು ಎಂಬೋದು ಬಿಟ್ಟ ಬಾಣದಂತೆ. ಕಂಪ್ಯೂಟರ್ ಕೀಲಿಮಣೆಯಲ್ಲಿರುವ Undo ಎಂಬ feature ಇಲ್ಲದ್ದು ಈ ಮಾತು. ಹಲವು ಬಾರಿ ಸವಕಲು ಪದವಾದ 'ಸಾರೀ' ಎಂದಾಗ ನಾವು ಹೇಳಿದ್ದು, ಹೊಟ್ಟೆಗೆ ಹಾಕಿಕೊಳ್ಳಿ ಅಂತ ಅರ್ಥ ಮೂಡಿದರೂ ಆಡಿದವರ ಹೊಟ್ಟೆಗೆ / ನಾಲಿಗೆಗೆ ಆ ಮಾತು ವಾಪಸ್ ಹೋಗೋದಿಲ್ಲ. ಅಲ್ಲವೇ?

ನಿಮಗೆ ಗೊತ್ತಾ? ಕಚ್ಚುವುದರಿಂದ ಆಗುವ ಲಾಭಗಳು ಅಷ್ಟಿಷ್ಟಲ್ಲ!

"ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ದಿಯ ಬಿಡು ನಾಲಿಗೆ" ಎಂದು ದಾಸವಾಣಿ ಇದೆ. ಈ ನಾಲಿಗೆಯೋ ಹುಳಿ, ಉಪ್ಪು, ಖಾರ, ಸಿಹಿ ಅಂತೆಲ್ಲಾ ತಿನ್ನೋದ್ರಿಂದ ಆಯಾ ಗುಣಗಳನ್ನು ಸಮಯಕ್ಕೆ ತಕ್ಕಂತೆ ಆಯಾ ರೀತಿಯ ಮಾತಗಳನ್ನು ಹೊರಹಾಕುತ್ತೇನೋ... ಈ ನಾಲಿಗೆಗೆ ತನ್ನದೇ ಬುದ್ದಿ ಇದ್ದಿದ್ರೆ ಈ ರೀತಿ ಅಂತ ಹೇಳಬಹುದಿತ್ತು. ಆದರೆ ತೋರಿಕೆಗೆ ನಾಲಿಗೆ ಆಡಿದರೂ 'ಆಡಿಸುವಾತ' ಮೇಲಿರುವ! ಆಗಲೇ ಹೇಳಿದ 'ತಲೆ' ಇದೇ.

Silence is as deep as eternity

"ಮಾತು ಬೆಳ್ಳಿ ಮೌನ ಬಂಗಾರ" . . . ಬಂಗಾರದಂಥಾ ಕೂಸು, ಏನು ಸೈಲೆಂಟ್ ಆಲ್ವಾ? ಅಂತಾರೆ! ಮುತ್ತಿನಂಥಾ ಮಾತು ಅಂತಾರೆ. ಆದರೆ ಬೆಳ್ಳಿಯಂಥಾ ಮಾತು ಅಂತ್ಯಾರೂ ಹೇಳೊಲ್ಲ. ಹಾಗಾಗಿ ಈ 'ಮಾತು ಬೆಳ್ಳಿ' ಅನ್ನೋದು ಹೇಗೆ ಎಂಟ್ರಿ ಕೊಡ್ತು ಗಾದೆಯಲ್ಲಿ? ಯೋಚಿಸಿ ತಿಳಿಸಿ.

ಇನ್ನು ಈ ಮಾತುಗಳಲ್ಲಿ ಎಷ್ಟು ನಿಗದಿತ ವಿಧಗಳಿವೆ ಅಂತ ನನಗೂ ಗೊತ್ತಿಲ್ಲ. ಗುಸುಗುಸು ಮಾತು, ಪಿಸುಮಾತು, ವಟವಟ, ಕಣ್ಣಲ್ಲೇ ಮಾತು, ತೋರುಬೆರಳ ಮಾತು, ಅಂಗುಷ್ಟದ ಮಾತು, ಮುಂಗುರಳ ಮಾತು, ಅಂತೆಲ್ಲಾ ಏನೆಲ್ಲಾ ಕವಿಕಲ್ಪಿತ ಮಾತುಗಳೇ ಇದ್ದರೂ ನನಗೆ ಪ್ರಿಯವಾದದ್ದು "ಮೌನದ ಮಾತು". ಹೃದಯದಲ್ಲಿ ಆಗುತ್ತಿರುವ ಸಂತಸ / ವೇದನೆಗಳಿಗೆಲ್ಲಾ ಮಾತಿನರೂಪ ಕೊಡಲಾರದೆ ಹೋದಾಗ ಗೆಲ್ಲೋದು ಮುಖದಲ್ಲಿ ತೋರುವ ಭಾವನೆಗಳು. ಅವೇ ಮೌನದ ಮಾತುಗಳು. ಮನದಾಳದ ಮಾತುಗಳು, ಭಾಷೆ ಬೇಕಿಲ್ಲ!

ಇಂಥಾ ಮಾತಿನ ಜೊತೆ ಬರುವುದೇ ವಚನ ನೀಡುವ ಹವ್ಯಾಸಗಳು. ಶಪಥ ಮಾಡುವ ವೀರಾವೇಶಗಳು ಇತ್ಯಾದಿ. ವಚನ ನೀಡಿದ ಬಲಿ, ಮಾತಿಗೆ ತಪ್ಪದೆ ತಾನೇ ಪಾತಾಳ ಸೇರಿದ. ಆದರೆ ತುಳಿದ ಪಾದ ಹರಿಪಾದ, ಹಾಗಾಗಿ ಬಲಿ ಇಂದಿಗೂ ಮಾನ್ಯ.

'ನಾನೇನೇ ಮಾಡಿದರೂ ಕೇಳಕೂಡದು' ಎಂದು ಭಾಷೆ ತೆಗೆದುಕೊಂಡಳು ಗಂಗೆ. ಮುಂದೆ, ವಚನಬದ್ದ ಶಾಂತನು ತನ್ನ ಸಂತಾನವೆಲ್ಲಾ ಕಳೆದುಕೊಳ್ಳುತ್ತಾ ಹೋದ. ಒಮ್ಮೆ ಬಾಯಿಬಿಟ್ಟಿದ್ದೇ ತಪ್ಪಾಗಿ ಗಂಗೆ ವಾಪಸಾದಳು. ಹಿಂದಕ್ಕೆ ಉಳಿದು, ಸಂಕಟದಿಂದ ನೋಡುವುದನ್ನು ಮುಂದುವರೆಸಿದ್ದು ವಚನಬದ್ದ ಭೀಷ್ಮಾಚಾರ್ಯರು.

ದಶರಥನ ರಥದ ಚಕ್ರ ಮುರಿದಾಗ, ಅದನ್ನು ಸರಿಪಡಿಸಿ ಗಂಡನನ್ನು ರಕ್ಷಿಸಿದ್ದು ಕೈಕೇಯಿ. ಆ ಸಮಯದಲ್ಲಿ ಅವಳಿಂದ ತನ್ನ ಪ್ರಾಣ ಉಳಿಯಿತು ಎಂಬ ಸಂತಸದಲ್ಲಿ 'ನಿನ್ನೆರಡು ಕೋರಿಕೆಗಳನ್ನು ಪ್ರಶ್ನಿಸದೆ ಮಾಡಿಸಿಕೊಡುತ್ತೇನೆ' ಎಂದು ವಚನ ನೀಡಿದ್ದೇ ಮುಂದಿನ ಅವಘಡಗಳಿಗೆ ಕಾರಣವಾಯ್ತು.

ಹಾಗಿದ್ರೆ ವಚನ ನೀಡಿದ್ದು ತಪ್ಪೇ? ದೇವನಿಗೂ ಮಾನವನಿಗೂ ಇಷ್ಟೇ ವ್ಯತ್ಯಾಸ. ದೇವ ವಚನ ನೀಡಿದರೂ, ಜೊತೆಗೆ ಷರತ್ತನ್ನೂ ಸೇರಿಸಿರುತ್ತಾನೆ. ಕೊಟ್ಟ ವಚನದಿಂದ ಲೋಕಕ್ಕೆ ಉಪಕಾರವಾಗದೆ ಮುಳುವಾಗುವಂತೆ ಆದಾಗ ಷರತ್ತನ್ನೇ ಶರವಾಗಿ ಬಳಸಿ ಸ್ಥಿತಿಗೆ ತರುತ್ತಾನೆ.

ರಾಜಾ ಸತ್ಯಹರಿಶ್ಚಂದ್ರನ ಕಥೆ ಎಲ್ಲರಿಗೂ ಗೊತ್ತಿರೋದೇ. ಒಂದು ಕಥೆಯ ಪ್ರಕಾರ, ರಾಜ ಒಂದು ಪ್ರಭಾವಕ್ಕೆ ಒಳಗಾಗಿ ವಿಶ್ವಾಮಿತ್ರ ಋಷಿಯನ್ನು ನಿಂದಿಸುತ್ತಾನೆ. ನಂತರ ಪ್ರಭಾವ ಇಳಿದಾಗ ಅವನ ಕಣ್ಣಿಗೆ ಕಂಡಿದ್ದು ಕೋಪೋದ್ರಿಕ್ತನಾದ ಮುನಿ. ಆತನ ಕೋಪಕ್ಕೆ ತುತ್ತಾಗಿ ಶಾಪಕ್ಕೆ ಒಳಗಾಗಬಹುದು ಎಂಬ ಭೀತಿಯಲ್ಲಿ ಋಷಿಯು ಏನು ಕೇಳಿಕೊಂಡರೂ ತಾನು ಈಡೇರಿಸುವುದಾಗಿ ವಚನ ನೀಡುತ್ತಾನೆ. ಆ ಮಾತುಗಳನ್ನು ಆಡುವಾಗ ಕಿಂಚಿತ್ತೂ ಯೋಚಿಸುವುದಿಲ್ಲ. ಆಡಿದ ಮಾತುಗಳನ್ನು ಉಳಿಸಿಕೊಳ್ಳಲು ಪಡಬಾರದ ಕಷ್ಟಗಳನ್ನೆಲ್ಲಾ ಎದುರಿಸಿದ ಕಥೆ ಕೇಳುವಾಗ ಈ 'ಮಾತು' ಎಂಬುದು ಎಂಥಾ ಪ್ರಬಲ ಎನ್ನಿಸದೇ ಇರದು.

Silence is as deep as eternity

ತನ್ನ ರಾಜ್ಯ ದೊರಕಿಸಿಕೊಟ್ಟರೆ, ತಾನು ಸೀತಾದೇವಿಯನ್ನು ಹುಡುಕಲು ಸಹಾಯಮಾಡುತ್ತೇನೆ ಎಂಬುದಾಗಿ ಸುಗ್ರೀವ ವಚನ ನೀಡುತ್ತಾನೆ. ಕೊಟ್ಟ ವಚನದಂತೆ ರಾಮನೇನೋ ಸುಗ್ರೀವನಿಗೆ ರಾಜ್ಯ ದೊರಕಿಸಿಕೊಟ್ಟ. ಆದರೆ ಆ ಸುಗ್ರೀವನದ್ದೋ ಕಪಿ ಮನಸ್ಸು. ಅಧಿಕಾರ ಬಂದೊಡನೆ ಮನಸ್ಸು ಚಂಚಲವಾಗಿ ಕೊಟ್ಟ ಮಾತನ್ನು ಮರೆತಾಗ, ಎಚ್ಚರಿಸಲು ಲಕ್ಷ್ಮಣ ಬರಬೇಕಾಯ್ತು.

ವಿಭೀಷಣನಿಗೆ ರಾಮನು ವಚನ ನೀಡಿ ಅವನನ್ನು ಲಂಕಾಧೀಶ್ವರನನ್ನಾಗಿಸಿದ. ವನವಾಸ ಮುಗಿದ ಕೂಡಲೇ ಅಯೋಧ್ಯೆಗೆ ಹಿಂದಿರುಗುವೆ ಎಂದು ಭರತನಿಗೆ ನೀಡಿದ್ದ ವಚನವನ್ನೂ ಪೂರೈಸಿದ. ಆದರೆ ಈ ವಚನಗಳೆಲ್ಲದರ ಹಿಂದೆ ಅದನ್ನು ನಿಭಾಯಿಸುವ ಪರಿಪಾಟಲು ಅಧಿಕವಿದೆ. ಸಕಾಲಕ್ಕೆ ಯುದ್ಧ ಮುಗಿದು ರಾವಣನ ಅಂತ್ಯವಾಗದೆ ಇದ್ದಿದ್ದರೆ, ವಿಭೀಷಣನಿಗೆ ಕೊಟ್ಟ ವಚನ ಪೂರೈಸದೆ, ಸೀತೆಯನ್ನು ಬಿಡಿಕೊಳ್ಳದೆ ಭರತನನ್ನು ಕಾಣಲು ಅಯೋಧ್ಯೆಗೆ ವಾಪಸಾಗಲು ಸಾಧ್ಯವಾಗುತ್ತಿತ್ತೇ?

ಕೊಟ್ಟ ಮಾತಿಗೆ ತಪ್ಪದವನು ಕರ್ಣ. ಅದರಂತೆಯೇ ಹೆಚ್ಚು ಬವಣೆಗೆ ತುತ್ತಾದವನೂ ಅವನೇ. ಅಂದು ಅವನು ಮಾತು ಕೊಟ್ಟು ಅದರಂತೆ ನಡೆದುಕೊಂಡ ಎಂಬುದಕ್ಕೆ ಇಂದಿಗೂ ಕರ್ಣ ಮಾನ್ಯ. ಮಾತು ಕೊಡುವ ಮುನ್ನ ಅದರಿಂದ ತನಗೆ ತೊಂದರೆ ಆಗೋ ಸಂಭವ ಇದೆ ಎಂಬ ಅರಿವು ಇರಬೇಕು ಮತ್ತು ಅದಕ್ಕೆ ಸಿದ್ಧವಿರಬೇಕು.

ತಾನೊಬ್ಬ ಮಹಾಪರಾಕ್ರಮಿ, ತನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಅಹಂನಿಂದ, ಪುತ್ರಶೋಕದಿಂದ, ತಿಳಿವಳಿಕೆ ಶೂನ್ಯನಾಗಿ 14ನೇ ದಿನದ ಯುದ್ಧದಾಂತ್ಯದ ಒಳಗೆ ಜಯದ್ರಥನನ್ನು ಕೊಲ್ಲುವೆ ಎಂದು ಶಪಥಗೈಯ್ಯುತ್ತಾನೆ ಅರ್ಜುನ. ಹಿಂದುಮುಂದು ಯೋಚಿಸದೆ ಆಡಿದ ಮಾತಿನಿಂದ ಅಗ್ನಿಪ್ರವೇಶ ಆಗುವ ಸಮಯವೇ ಬಂದಿತ್ತು. ಕೃಷ್ಣ ಕಾಪಾಡಿದ.

ಐಟಿ ಕ್ಷೇತ್ರದಲ್ಲಿನ ಎಷ್ಟೋ ಪ್ರಾಜೆಕ್ಟ್'ಗಳು ಮಕಾಡೆ ಮಲಗೋದೇ ಕೊಟ್ಟ ಮಾತಿನಿಂದ. ಇಂತಿಷ್ಟು ಸಮಯದಲ್ಲಿ, ಇಂತಿಷ್ಟು ಹಣದಲ್ಲಿ ಕೆಲಸ ಮುಗಿಸಿಕೊಡ್ತೀವಿ ಅಂತ ತಮ್ಮ ಪ್ರತಾಪ ಕೊಚ್ಚಿಕೊಂಡು ಮಾತು ಕೊಡ್ತಾರೆ. ಆದರೆ ಕಾರ್ಯಗತ ಗೊಳಿಸಿವಾಗ ಒಂದೊಂದೇ ಸಮಸ್ಯೆಗಳು ಅನಾವರಣಗೊಳ್ಳಲು ಶುರುವಾಗಿ ಕೊಟ್ಟ ಗಡುವು ಮುಗಿಯುವ ಗಂಡಾಂತರ ಎದುರಾಗುತ್ತೆ. ಕೆಲವೊಮ್ಮೆ extension ಕೊಟ್ಟ ಮೇಲೆ ಕೆಲಸವಾದರೂ ಆಗಬಹುದು. ಹಲವೊಮ್ಮೆ ಮಾತು ಕೊಟ್ಟವರಿಗೆ ಜುಲ್ಮಾನೆಯೂ ವಿಧಿಸಲಾಗುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಹೋದಾಗ ಕೆಲಸ ಕಳೆದುಕೊಳ್ಳಲೂಬಹುದು. ಮಾತು ಅಂದ್ರೆ ಮಾತೇ.

ಮಾತು ಮತ್ತು ಅರ್ಥ ಪಾರ್ವತೀ ಪರಮೇಶ್ವರರಿದ್ದಂತೆ. ಅವು ಪೂಜನೀಯ. ಪ್ರತೀ ಮಾತಿಗೂ ಅರ್ಥಅನರ್ಥಗಳು ಇದ್ದೇ ಇರುತ್ತದೆ. ಅರ್ಥ-ಅನರ್ಥಗಳು ಇರೋದ್ರಿಂದಲೇ ವಕೀಲರು ಇಂದು ಬದುಕುತ್ತಿರೋದು. ಮಾತು ಎಂಬುದು ಒಬ್ಬ ವ್ಯಕ್ತಿಯನ್ನು ರೋಗಯುಕ್ತನನ್ನಾಗಿಯೂ ಮಾಡಬಹುದು, ರೋಗಮುಕ್ತನನ್ನಾಗಿಯೂ ಮಾಡಬಹುದು.

ವಿದ್ಯೆಗೆ ತಕ್ಕ ಮಾತು ನಿಮ್ಮದಾಗಲಿ ವಿದ್ಯಾರ್ಥಿಗಳೇ. ವಿದ್ಯೆ ಬರೀ ಡಿಗ್ರಿ ಆಗದಿರಲಿ. ಮಾತು ಬರೀ ಶಬ್ದಗಳಾಗದಿರಲಿ. ಮಾತಿನ ಮಹತ್ವ ಅರಿಯಿರಿ. ನವಯುಗದ ಆಟಿಕೆಗಳು ನಿಮ್ಮ ಮಾತುಗಳನ್ನು ನುಂಗದಿರಲಿ. ಬಳಸದೇ ಬಾಲ ಕಳೆದುಕೊಂಡ್ವಿ, ಮಾತು ಕಳೆದುಕೊಳ್ಳುವುದು ಬೇಡಾ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Silence is as deep as eternity, speech a shallow as time. Be sure to taste your words before you spit them out. Chose your word wisely. Beautiful write up by Srinath Bhalle on the world of words.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more