• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನೂ ಮತ್ತು ಬೆಂಗಳೂರಿನಲ್ಲಿ ನನ್ನ ಪರವಾಸ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇತ್ತೀಚಿಗೆ ತಾವು ಭಾರತ ಪ್ರವಾಸ ಮಾಡಿ ಬಂದಿದ್ದಲ್ಲವೇ? 'ಹೌದು, ಅದೇ ಪರವಾಸದ ಬಗ್ಗೆ ಹೇಳಲಿಚ್ಛಿಸಿರೋದು'. 'ಓಹೋ ! ಅರ್ಥವಾಯ್ತು ಬಿಡಿ, ಕನ್ನಡ ಪತ್ರಿಕೆಗಳನ್ನು ಓದಿ ಪ್ರವಾಸ ಅನ್ನಲು ಹೋಗಿ ಪರವಾಸ ಅಂದಿರೇನು?'... ಹಾಗೇನಿಲ್ಲ ಬಿಡಿ, ಪ್ರವಾಸ ಅಂದಾಗ ಪರವಾಸ, ಪ್ರಯಾಸ ಇತ್ಯಾದಿಗಳೆಲ್ಲಾ ಅಡಕವಾಗಿ ಇದ್ದೇ ಇರುತ್ತೆ, ಹಾಗಾಗಿ ವಿವಿಧ ರೀತಿ ಪದಪ್ರಯೋಗಗಳು.

ಪ್ರವಾಸ ಅಂತ ಒಂದೆಡೆಯಿಂದ ಮತ್ತೊಂದೆಡೆ ಹೋದಾಗ ಎಲ್ಲೋ ಒಂದು ಕಡೆ ತಂಗಲೇಬೇಕು ಅಲ್ಲವೇ? ಅದನ್ನೇ ಪರವಾಸ ಅನ್ನೋದು. ನನ್ನ ಪ್ರವಾಸದಲ್ಲಿ ಅನ್ನಾಶ್ರಯ ನೀಡಿದವರಿಗೆಲ್ಲಾ ವಂದನೆಗಳನ್ನು ಅರ್ಪಿಸುತ್ತಾ ಮುನ್ನಡೆಯೋಣ. ಇದ್ದ ಇಪ್ಪತ್ತು ದಿನಗಳಲ್ಲಿ ಹಣಪಡೆದು ಊಟ ಹಾಕಿದ ಎಲ್ಲ ಪಾನಿಪುರಿ, ಭೇಲ್ಪುರಿ, ಮಾವಿನಹಣ್ಣು, ಸೀಬೆಹಣ್ಣು ಇತ್ಯಾದಿ ವ್ಯಾಪಾರಿಗಳಿಗೂ, ಐಷಾರಾಮಿ ವಾತಾವರಣದಲ್ಲಿ ಕಡಿಮೆ ದರ್ಜೆಯ ಊಟವಿತ್ತ ತಾರಾ ರೆಸ್ಟೋರೆಂಟ್'ನವರಿಗೂ, ಸಾಧಾರಣ look ಇದ್ದೂ ಉತ್ತಮ ರುಚಿ ಉಣಿಸಿದ ಹೋಟೆಲ್ ಮಂದಿಗೂ ನಮನಗಳು. ಅಲ್ಲಾ, ದುಡ್ಡು ಕಸಿದುಕೊಂಡು ಸರಿಯಾದ ಊಟ ಹಾಕದವರಿಗೆ ಎಂಥದ್ದು ನಮನ, ಅಂದಿರಾ? ಮುಂದಿನ ಸಾರಿ ಬಂದಾಗ ಅಲ್ಲಿಗೆ ಹೋಗದಂತೆ ಬುದ್ದಿ ಕಲಿಸಿದ ಜೀವಾತ್ಮಗಳಿಗೆ ನಮನ ಅಂದೆ!

ಭಲ್ಲೆ ಭಲ್ಲೆ! ಶ್ರೀನಾಥ್ ಭಲ್ಲೆಯವರ 'ನವರಸಾಯನ' ಅಂಕಣದ ನೂರನೆಯ ಬರಹ!

"ಏನು ಭಾರತಕ್ಕೆ ಬಂದಿದ್ದು?" ಅನ್ನೋದು ಸರ್ವೇ ಸಾಧಾರಣ ಪ್ರಶ್ನೆ. ಅರ್ಥಾತ್ ಸಾವಿರಾರು ಡಾಲರ್ ಖರ್ಚು ಮಾಡಿಕೊಂಡು ಬಂದಾಗ ಏನೋ ಒಂದು ವಿಶೇಷ ಇರಲೇಬೇಕು ಅಂಬೋದು ತರ್ಕಬದ್ಧವಾದ ಮಾತು. ಆದರೆ ಮಾತುಗಳನ್ನು ಆಡುವ ವಿಧಾನದ ಮೇಲೆ ಅವಲಂಬಿತ ಅಷ್ಟೇ! ಆಡುವ ಮಾತನ್ನು ನಿಗಾ ಇಟ್ಟು ಕೇಳಿ ನಂತರ ಅದಕ್ಕೆ ತಕ್ಕ ಉತ್ತರ ನೀಡಬೇಕಾದ್ದು ನನ್ನ ಕರ್ತವ್ಯವಾಗಿತ್ತು. 'ಏನೋ ಬಂದಿದ್ದು?', 'ಇಲ್ಲಿ ನಿಮ್ಮವರೆಲ್ಲಾ ಆರಾಮ್ ತಾನೇ?', 'ಬಂದಿದ್ದೀರಿ ಅಂದ್ರೆ ಏನೋ ಕೆಲಸ ಇರಬೇಕು ಅನ್ನಿಸುತ್ತೆ', 'ಏನಾದ್ರೂ ಮದುವೆ, ಮುಂಜಿ, ಪೂಜೆ ಪುನಸ್ಕಾರ ಇತ್ತೋ?' ಹೀಗೆ ಹತ್ತು ಹಲವು ಸ್ಯಾಂಪಲ್'ಗಳು ಅನ್ನಿ... ಸಿಂಪಲ್ ಆಗಿ ಹೇಳಬೇಕು ಅಂದರೆ ಬರುತ್ತಿದ್ದೇನೆ ಎಂದಾಗ ಹಮ್ಮಿಕೊಂಡ ಕಾರ್ಯಕ್ರಮ ಹಲವು, ಹಲವು ಕೆಲಸಗಳನ್ನು ಪೂರೈಸಲು ಬಂದಿದ್ದೂ ನಿಜ. ಯಾರಿಗೆ ಯಾವ ಮಾಹಿತಿ ಬೇಕೋ ಅದನ್ನು ತಲುಪಿಸಿದೆನೇ ವಿನಃ ಎಲ್ಲರಿಗೂ ಎಲ್ಲವನ್ನೂ ಅಲ್ಲ. ಎಲ್ಲವನ್ನೂ ಎಲ್ಲರಿಗೂ ಹೇಳಬಾರದು ಎಂಬುದನ್ನು ಕಲಿತಿದ್ದೇನೆ.

'ಏನು ವಿಶೇಷ?' ಎಂಬ ಮಾತಿಗೆ 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ' ಅಂತ ಒಮ್ಮೆ ಅಂದೆ. ಬಂತು ನೋಡಿ ಬೈಗುಳ. 'ಹೌದಪ್ಪಾ! ಹೊರದೇಶಕ್ಕೆ ಹೋದ ಮೇಲೆ ಇಲ್ಲಿನ ಆಗುಹೋಗು ನಿಮಗೇಕೆ?' ಅಂತ. ಈ ಬೈಗುಳ ನನಗೆ ಇಂದು ನಿನ್ನೆಯದ್ದಲ್ಲಾ ಬಿಡಿ. ಆದರೆ ನನ್ನ ಮಾತಿನ ಅರ್ಥವೇ ಬೇರೆ! 'ಅಲ್ಲಿದೆ ನಮ್ಮನೆ.. ' ಅಂದ್ರೆ ಹೊರದೇಶದಲ್ಲಿ ಹೊಂದಿರೋ ಮನೆಗೆ ಬಾಡಿಗೆ / mortgage (emi) ಕಟ್ಟುತ್ತಾ ಇದ್ದೀನಿ, 'ಇಲ್ಲಿ ಬಂದೆ ಸುಮ್ಮನೆ... ' ಹಾಗೇ ಸುಮ್ಮನೆ ನಿಮ್ಮನ್ನೆಲ್ಲಾ ನೋಡ್ಕೊಂಡ್ ಹೋಗೋಣ ಅಂತ ಬಂದಿದ್ದೀನಿ ಅಂತ ಅರ್ಥ. ಆದರೆ ಅರ್ಥೈಸಿಕೊಳ್ಳುವ ವ್ಯವಧಾನ ಯಾರಿಗಿದೆ? ಎಲ್ಲರೂ ಬ್ಯುಸಿ!

ಕನ್ನಡ ಭಾಷೆಯಲ್ಲಿ ಸೀಳು ಕಥಾನಕ : ಸೀಳೋದ್ ಸೀಳ್ರಿ ಸೀಳಬಾರದ್ ಸೀಳಬ್ಯಾಡಿ

ಯಾರು ಯಾರನ್ನು ಭೇಟಿಯಾಗಿದ್ದು? ದಿನನಿತ್ಯದಲ್ಲಿ ಕಾಣದಿದ್ದರೂ ವಾರಾಂತ್ಯದಲ್ಲಿ ಟೆಲಿಫೋನ್ ಕರೆಯಲ್ಲಿ ಕೇಳಿ ಸಿಗುವ ಮನೆಯ ಜನರನ್ನು ಕಂಡಿದ್ದು, ಕೆಲವು ವರ್ಷಗಳ ಹಿಂದೆ ಭೇಟಿಯಾದ ಸ್ನೇಹಿತರನ್ನು ಮತ್ತೊಮ್ಮೆ ಕಂಡಿದ್ದು, ಸಾಮಾಜಿಕ ತಾಣದಲ್ಲಿ ಸಂಪರ್ಕದಲ್ಲಿದ್ದು ಕೆಲವು ದಶಕಗಳ ಹಿಂದೆ ಕಂಡಿದ್ದ ಮಂದಿಯನ್ನು ಹೊರತು ಪಡಿಸಿದರೆ ಎಂದೂ ಭೇಟಿಯಾಗದ ಅತೀ ಸಮೀಪರನ್ನು ಭೇಟಿಯಾಗಿದ್ದು ಅತೀ ವಿಶೇಷ. ಸೌಹಾರ್ದ ಭೇಟಿಗಳು, ಊಟ ತಿಂಡಿ ಕಾಫಿ ಭೇಟಿಗಳು, ದೂರವಾಣಿ ಭೇಟಿಗಳು ಎಂಬೆಲ್ಲಾ ರೀತಿಯ ಭೇಟಿಗಳಲ್ಲಿ ಇದ್ದಿದ್ದೇ 'ಮಾತು'. ಒಟ್ಟಾರೆ ಈ ಇಪ್ಪತ್ತು ದಿನಗಳಲ್ಲಿ calorieಗಳನ್ನು ಸುಟ್ಟಿದ್ದೇ ಮಾತುಗಳಿಂದ. ಕೆಲವೊಮ್ಮೆ ಕೆಲವರ ಮಾತುಗಳಿಂದ ಮನಸ್ಸಿಗೆ ಹಿಂಸೆಯಾದರೂ ಮರುಮಾತಿನ ಲಾಭ ಪಡೆಯದೇ ನಕ್ಕು ಸುಮ್ಮನಾದೆ. ಮಾತಿನ ಮೇಲೆ ನಿಗಾ ಇರದಿದ್ದರೆ ಪರಿಣಾಮ ಕೆಟ್ಟದ್ದಾಗಬಹುದು ನೋಡಿ, ಅದಕ್ಕೆ.

ವಿಮಾನ ಇಳಿದು, airportನಿಂದ ಹೊರಗೆ ಅಡಿಯಿಟ್ಟಾಗ ನನ್ನನ್ನು ಕಂಡ ಕೂಡಲೇ ಬರ ಸೆಳೆದು ಅಪ್ಪಿದ್ದೇ 'ಹಬೆ'. ಶುದ್ಧ ಮೇ ತಿಂಗಳ ಬಿಸಿಲು ಮತ್ತು ಹಬೆ ನಾನಿದ್ದಷ್ಟೂ ದಿನಗಳು ನಮ್ಮೊಂದಿಗೇ ಇತ್ತು. 'ಅಯ್ಯೋ ಪಾಪ, ಅಲ್ಲಿಂದ ಬಂದ್ರಿ, ಇಲ್ಲಿನ ರಣಬಿಸಿಲು ಹೇಗೆ ತಡೆದುಕೊಳ್ಳುತ್ತಿದ್ದೀರೋ ಏನೋ?' ಎಂಬ ಮಾತೂ ಬಂತು ಅನ್ನಿ. ಒಂದು ಮಾತು ನಿಜ, 'ಅಲ್ಲಿಂದ ಬಂದ್ರಿ' ಅನ್ನೋ ಮಾತು ಕೇಳಿದರೆ ನಾವೇನೋ ದೇವಲೋಕದಿಂದ ಬಂದು ಇಳಿದೆವು ಅನ್ನೋ ರೀತಿ build-up ಹಿಂಸಾತ್ಮಕ. ನಮ್ಮ ನಾಡಿಗೆ ಬರಬೆಕ್ಳು ಅಂತ ಟಿಕೆಟ್ ಬುಕ್ ಮಾಡಿಸಿಕೊಂಡು ಬಂದಿದ್ದೇವೆ ಎಂದ ಮೇಲೆ ಮಿಕ್ಕೆಲ್ಲಕ್ಕೂ ಸಿದ್ದರಾಗೇ ಬಂದಿದ್ದೀವಿ ಅಂತರ್ಥ ಅಷ್ಟೇ! ಬಿಸಿಲು ತಾನೇ, ಇರ್ಲಿ ಬಿಡಿ. carbon, ಬಿಸಿಲು, ಹಬೆಯಿಂದ ಕೊಂಚ ಕಪ್ಪಾಗಬಹುದು ತಾನೇ? ಆಗ್ಲಿ ಬಿಡಿ ಏನೀಗ? ನಾನ್ಯಾವ ಸೌಂದರ್ಯ ಸ್ಪರ್ಧೆಗೆ ಹೋಗಬೇಕಿದೆ? ಒಂದು ಮಾತು ಹೇಳಬಹುದು ಎಂದರೆ ನಮ್ಮಲ್ಲೂ ಬೇಸಿಗೆ ಇದೆ.

ಇನ್ನೊಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಊಹಿಸಿದ್ದೀರಾ?

ಇಲ್ಲಿನ ಟ್ರಾಫಿಕ್ ಬಗ್ಗೆ ಏನನ್ನಿಸುತ್ತದೆ? ನಮ್ಮೂರಿನ ರಸ್ತೆಗಳು ಮತ್ತು ಟ್ರಾಫಿಕ್ ಸತ್ಯವಾಗಲೂ ಸೌಹಾರ್ದತೆಯ ಜೀವನದ ಪ್ರತೀಕ ಎಂದರೆ ಅಡ್ಡಿಯಿಲ್ಲ. ಒಂದು ರಸ್ತೆಯ ಎರಡೂ ಬದಿಯಲ್ಲಿ ಕಸವನ್ನು ಹಾಕಿದ್ದು, ಅಲ್ಲಲ್ಲೇ ಆಟೋಗಳು ಅಡ್ಡ ನಿಂತಿದ್ದಾಗಿ, ಅಡ್ಡಾದಿಡ್ಡಿ ಎರಡು ಚಕ್ರದ ವಾಹನಗಳು ಓಡಾಡುತ್ತಿದ್ದರೂ, ಒಂದು ಪುಟ್ಟ ರಸ್ತೆಯಲ್ಲಿ ಟ್ರೈನ್, ಹಡಗು, ವಿಮಾನ ಬಿಟ್ಟು ಮಿಕ್ಕೆಲ್ಲಾ ಇದ್ದರೂ ಬೈದಾಡಿಕೊಂಡರೂ ಅನುಸರಿಸಿಕೊಂಡೇ ಸಾಗುತ್ತಾರೆ. ಒಂದು ರಸ್ತೆಯ ಟ್ರಾಫಿಕ್'ಗೂ ಒಂದು ಒಟ್ಟು ಸಂಸಾರಕ್ಕೂ ಏನೇನೂ ವ್ಯತ್ಯಾಸವಿಲ್ಲ. ಒಂದು ರಸ್ತೆ ಒಂದು ಕುಟುಂಬ ಇದ್ದಂತೆ. ಸಹನೆ ಕಲಿಸುತ್ತದೆ. ಸಹಬಾಳ್ವೆ ಕಲಿಸುತ್ತದೆ.

ಹಲವಾರು ಬಾರಿ ಆಟೋರಿಕ್ಷಾ ಮತ್ತು ಓಲಾ ಕಾರುಗಳಲ್ಲಿ ಓಡಾಡಿದ್ದೇನೆ. ಎಲ್ಲ ಡ್ರೈವರ್'ಗಳ ಬಾಯಲ್ಲೂ ಒಂದೇ ಮಾತು 'ಯಾರಿಗೂ ಗಾಡಿ ಓಡಿಸೋಕ್ಕೆ ಬರೋಲ್ಲ ಸರ್. ದಿನಾ ನಮ್ಮ ತಲೆ ತಿಂತಾರೆ!' ಕೊಂಚ ಚಿಂತನೀಯ ಅನ್ನಿ.

ರಜದ ಮಜದ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳು

ಅಂದ ಹಾಗೆ ಆಟೋ ಅಂದಾಗ ಒಂದು ಗಂಭೀರ ವಿಷಯ ಅರಿವಿಗೆ ಬಂತು. ಟ್ರಾಫಿಕ್ ಕಡಿಮೆ ಇದ್ದ ಕಾಲ ಒಂದಿತ್ತು. ಬಸ್ಸಿಗೆ ಕಾಯದೇ ಆಟೋದಲ್ಲಿ ಹೋದರೆ ಬೇಗ ತಲುಪುತ್ತೇವೆ ಎಂಬ ಕಾಲ. ಆ ದಿನಗಳಲ್ಲಿ ಅಲ್ಲಿ ಇಲ್ಲಿ ಅಂತ ಹಲವಾರು ಟ್ರಿಪ್ ಮಾಡಿಕೊಂಡು ಆಟೋ ಒಡೆಯರು ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದರು. ಈಗ ಟ್ರಾಫಿಕ್ ಸಿಕ್ಕಾಪಟ್ಟೆ ಏರಿದೆ. ಒಂದೆಡೆಯಿಂದ ಮತ್ತೊಂದು ಎಡೆಗೆ ಹೋಗಲೇ ಒಂದೆರಡು ಘಂಟೆಗಳು ಕಳೆಯುತ್ತದೆ. ಹೀಗಿರುವಾಗ ಒಂದು ದಿನಕ್ಕೆ ಎಷ್ಟು ಪಯಣಿಗರನ್ನು ಹೊತ್ತೊಯ್ದು ಸಾಗಬಹುದು? ಎಷ್ಟು ಸಂಪಾದಿಸಬಹುದು? ಆತ ನಿಜಕ್ಕೂ ಜೀವನಕ್ಕೆ ಬೇಕಾಗುವಷ್ಟು ಸಂಪಾದನೆ ಮಾಡುತ್ತಿದ್ದಾನೆಯೇ? ನಿಮ್ಮ ಅಭಿಪ್ರಾಯ ಏನು?

ಹಗಲಿನಿಂದಾ ಹಿಡಿದು ರಾತ್ರಿಯವರೆಗೂ ಬೀದಿಯಲ್ಲಿ ತರಾತುರಿ. ಎಲ್ಲರೂ ಸಿಕ್ಕಾಪಟ್ಟೆ ಧಾವಿಸುತ್ತಲೇ ಇರುತ್ತಾರೆ. ಸಿಗ್ನಲ್ ಕೆಂಪು ಕಂಡರೂ ನಿಲ್ಲದೆ ಮುಂದೆ ಹೋಗುವಷ್ಟು ಧಾವಂತ. ಪಕ್ಕದಿಂದ ಗಾಡಿ ಬರುತ್ತಿದ್ದರೂ ಅವನಿಗೆ ಜಾಗ ಬಿಡದೆ ನುಗ್ಗುವಂಥಾ ಧಾವಂತ. ambulence ಬಡ್ಕೊಂಡ್ರೆ ನಮಗೇನು, ಮುಂದೆ ಇರೋ ಗಾಡಿ ಜರುಗದೆ ಇದ್ರೆ ನಾನೇನ್ ಮಾಡೋಕ್ಕಾಗುತ್ತೆ ಎಂಬೋ ಧೋರಣೆಯ ಧಾವಂತ. ಒಟ್ಟಾರೆ ಎಲ್ಲ ಗಾಡಿಯವರೂ ಧಡಭಡ ಅಂತ ಸಾಗುತ್ತಲೇ ಇರುತ್ತಾರೆ. ಏಕೆ ಈ ಧಾವಂತ ಅನ್ನೋದೇ ಅರ್ಥವಾಗೋಲ್ಲ. ಆದರೆ ಗಾಂಧಿಬಜಾರಿನ ಅಂಗಡಿ ಬೀದಿಗೆ ಹೋದರೆ, ಹನ್ನೊಂದರ ಕಡಿಮೆ ಅಂಗಡಿ ಬಾಗಿಲೇ ತೆರೆದಿರೋದಿಲ್ಲ. ಯಾವ ಕಚೇರಿಗೆ ಹೋದರೂ ಕೆಲಸವೇ ಆಗಿರೋದಿಲ್ಲ. ಬ್ಯಾಂಕ್ ಕೆಲಸಕ್ಕೆ ಅಂತ ಹೋದಾಗ 'ಇನ್ನೆರಡು ದಿನ ಬಿಟ್ಟು ಬನ್ನಿ' ಅಂತಾರೆ. ಅರ್ಥಾತ್ ಎಲ್ಲೆಡೆ ಧಾವಂತ ಆದರೆ ಕೆಲಸ ಆಗಿರೋದಿಲ್ಲ. ಇದರ ಅರ್ಥವೇನು?

ಹೋಗ್ಲಿ ಬಿಡಿ, ಗಂಭೀರದಿಂದ ಆಚೆ ಬರೋಣ. ನಮ್ಮೂರಿನ ಫಲಕಗಳದ್ದೇ ಒಂದು ಸಾಮ್ರಾಜ್ಯ ಎನ್ನಬಹುದು. ಸಣ್ಣ ಸಣ್ಣ ಬೀದಿಗಳ ಆರಂಭದಲ್ಲಿ ಯಾರದ್ದೋ ಒಬ್ಬರ ಫೋಟೋ ಮತ್ತು 'ಶ್ರದ್ದಾಂಜಲಿ' ಫಲಕ ಮತ್ತು ಹಾರ. ಅದೆಷ್ಟು ನೋಡಿದೆನೋ ಲೆಕ್ಕವೇ ಇಲ್ಲ. ಒಮ್ಮೆ ಹಾದಿಯಲ್ಲಿ ಹೋಗುವಾಗ ಒಂದು ಸಣ್ಣ ಹೋಟೆಲ್ ಮುಂದೆ ಒಂದು ಫಲಕ ಇತ್ತು "ಇಂದಿನ ಸ್ಪೆಷಲ್ : ವೆಜೆಟೇರಿಯನ್ ಹಂದಿ ಬಿರಿಯಾನಿ" ಅಂತ. ನನಗೆ ಇನ್ನೂ ಅರ್ಥವಾಗಿಲ್ಲ. ಮತ್ತೊಮ್ಮೆ ಒಂದು ಗೂಡು ಗ್ಯಾರೇಜು ನೋಡಿದೆ. ತುಕ್ಕು ಹಿಡಿದ ಬಾಗಿಲು, ಸೋರುವ ಮಾಳಿಗೆ ಇತ್ಯಾದಿ ಜೊತೆಗೆ ಒಂದು ಫಲಕ "3D ವೀಲ್ alignment" ಅಂತ. 3D ಅಂದ್ರೆ ಬಹುಶ: ಅವನ ಅಂಗಡಿಯ ದಿವಾಕರ, ದಿನಕರ, ದಿನೇಶ ಹುಡುಗರು ಇರಬಹುದು ಎಂದಿತ್ತು ನನ್ನ ಕುಹುಕ ಮನಸ್ಸು. ಮತ್ತೊಮ್ಮೆ ಒಂದು ರೋಡ್ sign ಫಲಕ ನೋಡಿದೆ "3 peg ಕೊಂಡರೆ 2 peg free" ಅಂತ . . . ಯವ್ವೀ ಯವ್ವೀ ಯವ್ವೀ!! ಏನ್ offer ನೋಡ್ರೀ, ಆದರೆ ನಾನು ಕುಡಿಯೋದೇ ಕಲ್ತಿಲ್ಲ!

ಒಟ್ಟಾರೆ ಹೇಳೋದಾದ್ರೆ ಪ್ರತೀ ದಿನ ಹೊರಗೆ ಅಡಿಯಿಟ್ಟು ಮನೆಗೆ ಹಿಂದಿರುಗಿ ಬರುವಷ್ಟರಲ್ಲಿ ಏನೆಲ್ಲಾ ಕಲಿಕೆಗಳು, ಏನೆಲ್ಲಾ ಚಿಂತನೆಗಳು, ಏನೆಲ್ಲಾ ಹಾಸ್ಯಗಳು ನನ್ನನ್ನು ಸುತ್ತುವರೆದು ರಂಜಿಸಿತ್ತು ಎಂದರೆ ಹೇಳತೀರದಷ್ಟು. ಇಷ್ಟೆಲ್ಲಾ ಹೇಳಿದ್ದು ಕೆಲವು ವಿಚಾರಗಳನ್ನು ಕುರಿತು ಮಾತ್ರ. ಯಾವುದೇ ಒಂದು ಸಮಸ್ಯೆ ಅಥವಾ ಸಂತಸವು ನಾವು ಅದರೊಳಗೆ ಇದ್ದಾಗ ಪೂರ್ಣ ಅರಿವು ಮೂಡುವುದಿಲ್ಲ. ಒಮ್ಮೆ ಅದರಿಂದ ಆಚೆ ಬಂದು, ಹೊರಗಿನಿಂದ ಮತ್ತು ಬೇರೆ ದೃಷ್ಟಿಕೋನದಿಂದ ನೋಡಿದಾಗ ಜಗತ್ತೇ ಒಂದು ವಿಸ್ಮಯ ಎನಿಸುತ್ತದೆ.

English summary
My visit to Bengaluru during hot summer - Srinath Bhalle. Many asked him why did he visit India (Bengaluru)? What kind of answers can be given to such question? And Srinath, finds several interesting things in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X