ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಶದ ಕ್ಲೇಶವಿದೇನಯ್ಯಾ ಕೇಶವಾ?

|
Google Oneindia Kannada News

ಹೆಂಗಳ ಉದ್ದನೆಯ ತಲೆಗೂದಲಾಗಿರಬಹುದು, ಮಾಡರ್ನ್ ಹೆಣ್ಣಿನ ಬಾಬ್ ಕಟ್ ತಲೆಗೂದಲಾಗಿರಬಹುದು, ಅಥವಾ ಗಂಡಿನ ತಲೆಗೂದಲಾಗಿರಬಹುದು ಹಲವು ಸನ್ನಿವೇಶಗಳಲ್ಲಿ ಕಸಿವಿಸಿ ತರುತ್ತವೆ, ಕೆಲವೊಮ್ಮೆ ಹಿಂಸಾತ್ಮಕವೂ ಹೌದು.

ನನ್ನದೇ ಒಂದು ಕಥೆ ಹೇಳುತ್ತೇನೆ. ಒಮ್ಮೆ ಹೀಗೆ ಎಲ್ಲಿಗೋ ಹೋಗಲು ಸಿದ್ದನಾದ ಮೇಲೆ ಮುಖದ ಬಲಭಾಗದಲ್ಲಿ ಕೂದಲು ಕೂತ ಅನುಭವವಾಗುತ್ತಿತ್ತು. ಸರಿ, ಕನ್ನಡಕ ತೆಗೆದು ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡು ಮುಖವನ್ನು ನಯನಾಗಿ ಸವರಿಕೊಂಡೆ. ಕೂದಲು ಕೆಳಗೆ ಬಿತ್ತೇನೋ ಗೊತ್ತಿಲ್ಲ. ಶೂ ಏರಿಸಿ ಹೆಲ್ಮೆಟ್'ಗೆ ಕೈ ಹಾಕಲು ಮತ್ತೊಮ್ಮೆ ಮುಖದ ಬಲಭಾಗದಲ್ಲಿ ಅದೇ ಮುಳಮುಳ ಅನುಭವ. ಈ ಬಾರಿ ಸ್ವಲ್ಪ ಜೋರಾಗೇ ಕೊಡವಿಕೊಂಡೆ.

ಶ್ರೀನಾಥ್ ಭಲ್ಲೆ ಕಾಲಂ: ನೆಲ ನುಣುಪಾಗುತ್ತಿದೆ, ಮನಸ್ಸು ಒರಟಾಗುತ್ತಿದೆ
ಅಮ್ಮ "ಅದೇನು ಮುಖವೋ ಅಥವಾ ಗೋಣೀಚೀಲಾನೋ? ನಿಧಾನಕ್ಕೆ ಒರಸಿಕೊಳ್ಳಬಾರದೇನೋ?" ಅಂದರು. ಹೆಲ್ಮೆಟ್ ಏರಿಸಿದ ಮೇಲೂ ಆಗಾಗ ಹಿಂಸೆ ಆಗುತ್ತಿತ್ತು. ಸಿಗ್ನಲ್'ನಲ್ಲಿ ನಿಂತಾಗಲೂ ಒಂದೆರಡು ಬಾರಿ ಮುಖ ಒರೆಸಿಕೊಂಡೆ ಆದರೂ ಹಿಂಸೆ ಮುಂದುವರೆದಿತ್ತು. ಹೀಗೇ ಅರ್ಧ ದಿನ ಕಳೆದರೂ ಸರಿ ಹೋಗಲಿಲ್ಲ. ಕೊನೆಗೆ ಕಸಿವಿಸಿಯ ಮನಸ್ಸನ್ನು ಪಕ್ಕಕ್ಕೆ ಇರಿಸಿ, ಶಾಂತವಾಗಿ root cause analysis ಮಾಡಿಕೊಂಡೆ.

Messy hair dont care

ಪ್ರತೀ ಬಾರಿ ಕನ್ನಡ ಪಕ್ಕಕ್ಕೆ ಇಟ್ಟಾಗಲೂ ಏನೂ ತೊಂದರೆ ಇರಲಿಲ್ಲ. ತಲೆ ಎಂಬ tubelight ಥಟ್ಟನೆ ಉರಿಯತೊಡಗಿತು. ಕನ್ನಡಕವನ್ನು ಕೈಲಿ ತೆಗೆದುಕೊಂಡು ಬಲಬದಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೇ ಒಂದು ಕೂದಲು hinges'ನಲ್ಲಿ ಸಿಕ್ಕಿಕೊಂಡಿತ್ತು! ನಿನಗೆ ಬೇರೆ ಜಾಗ ಸಿಗಲಿಲ್ವಾ ಅಂತ ಅದನ್ನು ಬೈದು ನಿಧಾನವಾಗಿ ತೆಗೆದು ಒಗೆದೆ. ಒಂದು ಸಣ್ಣ ಕೂದಲು ನನ್ನ ಅರ್ಧ ದಿನ ಹಾಳು ಮಾಡಿತ್ತು. ಇಷ್ಟಕ್ಕೂ ಆ ಕೂದಲು ಮಾಡಿದ್ದೇನು? ನಾನಾಗೇ ಅರ್ಧ ದಿನ ಹಿಂಸೆ ಮಾಡಿಕೊಂಡಿದ್ದೆ ಆದರೆ ಆ ಹಿಂಸೆಗೆ ಕಾರಣ ಒಂದು ಸಣ್ಣ ಕೂದಲು.

ನಿಮ್ಮ ಕಥೆ, ನಿಮ್ಮ ಪ್ರಾಬ್ಲಮ್... ನಾನು ಕನ್ನಡಕ ಹಾಕೋಲ್ಲ, ಕೂಲಿಂಗ್ ಗ್ಲಾಸ್ ಏರಿಸೋಲ್ಲ ಅಂತೆಲ್ಲಾ ನನ್ನನ್ನು ದಮನ ಮಾಡಿದರೆ ನಿಮಗೆ ಇನ್ನೊಂದು ಸನ್ನಿವೇಶ ಕೊಡ್ತೀನಿ. ಒಂದು ಸುಂದರ ಸಂಜೆ ಸ್ನೇಹಿತರ ಮನೆಯಲ್ಲಿ ಕೂತು ಹರಟೆ ಹೊಡೆಯುತ್ತಾ ಸಂಸಾರ ಸಮೇತರಾಗಿ ಒಂದು ಹೈ-ಟೆಕ್ bowl'ನಲ್ಲಿ ಗೋಡಂಬಿ ದ್ರಾಕ್ಷಿ ಸಹಿತ ಶಾವಿಗೆ ಪಾಯಸ ಸೇವಿಸುತ್ತಿರುವಾಗ ಬಾಯಿಗೆ ಕೂದಲು ಸಿಕ್ಕಿತು ಅಂದುಕೊಳ್ಳಿ, ಹೇಗಿರುತ್ತೆ?

ಇದು ಒಂದು ಮೊಟ್ಟೆಯ ಕಥೆಯಲ್ಲ, ಹಲವು ಕೂದಲ ಕಥೆ!ಇದು ಒಂದು ಮೊಟ್ಟೆಯ ಕಥೆಯಲ್ಲ, ಹಲವು ಕೂದಲ ಕಥೆ!

ಮತ್ತೊಂದು ಸನ್ನಿವೇಶ. ಯಾರದ್ದೋ ಮನೆಗೆ ಹೋಗಿರ್ತೀರ, ಅವರೋ ಮೊದಲೇ ನಿಮಗೆ ಇಷ್ಟವಾಗದ ಉಪ್ಪಿಟ್ಟನ್ನು ಮಾಡಿರುತ್ತಾರೆ. ಅದರ ಮೇಲೆ, ಚೆನ್ನಾಗಿ ಕೆದಕದೆ ಹೋಗಿದ್ದರಿಂದ ಗಂಟು ಗಂಟು ಆಗಿತ್ತು. ಬೇಗ ಖಾಲಿಯಾಗಲಿ ಅಂತ ಪ್ಲೇಟಿನ ತುಂಬಾ ಕೊಟ್ಟಿರುತ್ತಾರೆ. ನೀವೋ ಸ್ಪೂನಿನಲ್ಲಿ ಕೆದಕೀ ಕೆದಕೀ ತಿನ್ನುವಾಗ ಒಂದು ಕ್ಷಣ ಕಂಡ ಸಣ್ಣಗಿನ ಕೂದಲು ಮರುಕ್ಷಣದಲ್ಲಿ ಎಲ್ಲೋ ಹುದುಗಿ ಹೋಗುತ್ತದೆ. ಸ್ಪೂನಿನಲ್ಲಿ ಎಷ್ಟು ಆ ಉಪ್ಪಿಟ್ಟನ್ನು ಬಗೆದರೂ ಕಣ್ಣಿಗೆ ಬೀಳದೆ ಹೋದಾಗ ಹೇಗಿರುತ್ತೆ, ಯೋಚಿಸಿ?

Messy hair dont care

ಒಂದು ಸಮಾರಂಭದಲ್ಲಿ ಹೀಗೆ ಆಯ್ತು. ಒಬ್ಬಾಕೆ ಶಾಂಪೂ ಸ್ನಾನದ ನಂತರ ಗಾಳಿಗೆ ಹಾರುತ್ತಿರುವ ರೇಷ್ಮೆಯಂಥಾ ತಲೆಗೂದಲನ್ನು ಹರವಿಕೊಂಡು ಸಮಾರಂಭವನ್ನು ವೀಕ್ಷಿಸುವಾಗ, ಆಕೆಯ ಪಕ್ಕದಲ್ಲೇ ಕೂತ ಒಬ್ಬ ಮೊಟ್ಟೆ ತಲೆಯವನಿಗೆ ಮಹಾ ಹಿಂಸೆಯಾಗುತ್ತಿತ್ತು. ಅವನು ಎರಡು ಮೂರು ಚಿತ್ರ ತೆಗೆದಾಗಲೂ ಆಕೆಯ ತಲೆಗೂದಲು ಕ್ಯಾಮೆರಾ ಮೇಲೋ, ಅಥವಾ ಅವನ ಮುಖದ ಮೇಲೋ ಹಾರಾಡುವಾಗ ಅತೀ ಕಿರಿಕಿರಿಯಾಗುತ್ತಿತ್ತು. ಏನೂ ಹೇಳಲಾರದೆ ಬೇರೊಂದು ಕಡೆ ಶಿಫ್ಟ್ ಆಗಬೇಕಾದ ಪರಿಸ್ಥಿತಿ ಉಂಟಾಯಿತು ಅವನಿಗೆ. ಹಾರಾಡುತ್ತಿದ್ದ ಕೂದಲು ಅವನಿಗೆ ಹಿಂಸೆ ಮಾಡಿತೋ, ಅಥವಾ ತನಗೆ ಖಾಲಿ ತಲೆ ಇರುವಾಗ, ಈಕೆಗೆ ಇಷ್ಟೊಂದು ಕೂದಲು ಎಂಬ ಹೊಟ್ಟೆಕಿಚ್ಚೋ ಒಂದೂ ಗೊತ್ತಾಗಲಿಲ್ಲ ಅನ್ನಿ.

ಬಹಳಾ ವರ್ಷಗಳ ಹಿಂದಿನ ಘಟನೆ. ಒಬ್ಬ eligible bachelor ಒಮ್ಮೆ ಬಸ್ ಸ್ಟಾಂಡ್'ನಲ್ಲಿ ಒಬ್ಬಾಕೆಯನ್ನು ನೋಡಿದ. ರೂಪಕ್ಕೆ ಮರುಳಾದ, ಲವ್ ಅಟ್ first sight ಅಂತೆಲ್ಲಾ ಅಂದುಕೊಳ್ಳಬೇಡಿ. ಆತ ಮೆಚ್ಚಿದ್ದು ಆಕೆಯ ನೀಳಕೇಶವನ್ನು. ಆಕೆ ನೋಡಲು ಹೇಗಿದ್ದಾಳೆ, ಯಾರು, ಏನು, ಎತ್ತ ಎಂಬ ಆಲೋಚನೆಯೂ ಇಲ್ಲದೆ propose ಮಾಡುವಷ್ಟು ಮುಂದುವರೆದೇ ಬಿಡೋದಾ ಮುಠ್ಠಾಳ? ಆತನ ಪುಣ್ಯವೋ ಏನೋ ಆಕೆಗೆ ಇನ್ನೂ ಮದುವೆ ಆಗಿರಲಿಲ್ಲ. ಒಟ್ಟಿನಲ್ಲಿ ಇಬ್ಬರ ಮದುವೆಯಾಯ್ತು. ಋಣಾನುಬಂಧಕ್ಕೆ ತಲೆಗೂದಲು ಕಾರಣವಾಯ್ತೋ ಏನೋ ಗೊತ್ತಿಲ್ಲ. ಇದು ನೀಳವೇಣಿ ಕಥೆ ಅಷ್ಟೇ!

ಕೆಟ್ಟದ್ದೂ ಒಳಿತಿನ ನಡುವಿನ ಸೀಮಾರೇಖೆ ಹಾಕೋದು ಹೇಗೆ?ಕೆಟ್ಟದ್ದೂ ಒಳಿತಿನ ನಡುವಿನ ಸೀಮಾರೇಖೆ ಹಾಕೋದು ಹೇಗೆ?

ದೂರದರ್ಶನದ ಆರಂಭದ ದಿನಗಳಲ್ಲೇ ಇರಬೇಕು, ಒಂದಷ್ಟು ಧಾರಾವಾಹಿಗಳು ಮೂಡಿ ಬರುತ್ತಿತ್ತು. ಆ ದಿನಗಳ ಧಾರಾವಾಹಿಗಳು ನಿಜಕ್ಕೂ ಚೆನ್ನಾಗಿತ್ತು. ಸೊಗಸಾದ ಕಥೆಗಳನ್ನು ಹೊಂದಿತ್ತು. ಅಂಥಾ ಒಂದು ಧಾರಾವಾಹಿಯಲ್ಲಿ ಒಂದು ಕಥೆಯ ಹೆಸರು "ಕಿವಿಯ ಮೇಲಿನ ಕೂದಲು". ನನಗೆ ಗೊತ್ತಿರೋದು ಇಷ್ಟು. ಅದ್ಬುತ ಕಂಠ ಸಿರಿಯ ನಟ ಸುಂದರ ಕೃಷ್ಣ ಅರಸ್ ಈ ಒಂದು ಕಥೆಯ ನಾಯಕ. ಈತನ ಬಲಗಿವಿಯ ಮೇಲೆ ಒಂದು ಕೂದಲಿರುತ್ತದೆ. ಕ್ಷೌರದ ಅಂಗಡಿಗೆ ಹೋಗಿರುತ್ತಾರೆ. ಇಷ್ಟೇ ಕಥೆ ನನ್ನ ನೆನಪಿನಲ್ಲಿ ಇರೋದು. ನಿಮಗ್ಯಾರಿಗಾದ್ರೂ ಕಥೆ ಗೊತ್ತಿದ್ದಲ್ಲಿ ಹೇಳಿ.

Messy hair dont care

TV ಧಾರಾವಾಹಿಗಳಲ್ಲಿ ಒಂದು ಮಜಾ ಇದೆ. ಚಿಕ್ಕ ವಯಸ್ಸಿನ ಪಾತ್ರಧಾರಿಯನ್ನು ಹಿರಿಯ ವಯಸ್ಸಿನವರಂತೆ ತೋರಿಸಬೇಕು ಎಂದರೆ ಮುಂಭಾಗದ ಒಂದಷ್ಟು ಕೂದಲನ್ನು ಬೆಳ್ಳಗೆ ಮಾಡಿಬಿಡುವುದು.

ತಲೆಗೂದಲಿಗೆ ಬಣ್ಣ ಹಚ್ಚುವ ಒಂದು ಕ್ರಿಯೆ ತಪ್ಪೋ ಒಪ್ಪೋ ಎಂಬ ಚರ್ಚೆ ಇದಲ್ಲ. ಆದರೆ ಬಳಿಯೋ ಬಣ್ಣ ತಲೆಯ ಮೇಲೆ ಇರುವ ಕೂದಲಿಗೆ ಮಾತ್ರ apply ಮಾಡಬಹುದು. ಒಂದಾನೊಂದು ಕಾಲದಲ್ಲಿ ನನಗೊಂದು ಆಲೋಚನೆ ಬಂದಿತ್ತು. ಹೇಗೆ ಗಿಡಕ್ಕೆ ಗೊಬ್ಬರ ಹಾಕಿದರೆ ಅದು ಭುವಿಯ ಆಳಕ್ಕೆ ಇಳಿದು, ಆ ನಂತರ ಗಿಡ ಅದನ್ನು ಬಳಸಿಕೊಂಡು ಬೆಳೆಯುತ್ತದೆಯೋ ಹಾಗೆ ಕೂದಲಿಗೆ ಹಾಕುವ ಬಣ್ಣ scalp ಕೆಳಗೆ ಇಳಿದು ಮುಂದೆ ಹುಟ್ಟುವ ಕೂದಲು, ಹಾಕಿದ ಬಣ್ಣವನ್ನು ಪಡೆಯುತ್ತಾ ಬೆಳೆದರೆ ಹೇಗೆ?

ಅಂದ ಹಾಗೆ, ಹುಬ್ಬಿನ ಮೇಲಣ ಕೂದಲಿನ ವೈಶಿಷ್ಟ್ಯ ಗೊತ್ತೇ? ಸುರಿವ ಬೆವರಿನ ಹನಿಗಳು ಹಣೆಯನ್ನು ದಾಟಿ ನೇರವಾಗಿ ಕಣ್ಣಿಗೆ ಇಳಿಯದಿರಲಿ ಎಂದು ಭಗವಂತ ಕೊಟ್ಟಿರುವ ಈ ಹುಬ್ಬಿನ ಕೂದಲು ಉಪ್ಪಿನಂಶ ಕೂಡಿರುವ ಬೆವರನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಈ ಹುಬ್ಬು ಒಬ್ಬ ವ್ಯಕ್ತಿಯ ಭಾವನೆಗಳನ್ನು ತೋರಿಸುವ ಕ್ರಿಯೆಯಲ್ಲೂ ಬಹಳ ಸಹಾಯಕಾರಿ. ಹುಬ್ಬು ಹಾರಿಸಿ trigger ಎಳೆದು Dishkyaav ಅಂತ ಗುಂಡು ಹಾರಿಸುವ 'ಪ್ರಿಯ’ ನಿಮಗೆಲ್ಲ ಗೊತ್ತೇ ಇದೆ!

Messy hair dont care

ಈ ಹುಬ್ಬು ಇಂದಿನ ದಿನಗಳಲ್ಲಿ ಹೆಚ್ಚು ಪ್ರಾಶಸ್ತ್ಯ ಪಡೆದಿದೆ ಎಂದು ಹೇಳಿದರೆ ತಪ್ಪೇನಿಲ್ಲ. ಥ್ರೆಡ್ಡಿಂಗ್ ಎಂಬ ಕ್ರಿಯೆಯಿಂದ ಅಡ್ಡಾದಿಡ್ಡಿ ಬೆಳೆದಿರುವ ಹುಬ್ಬಿನ ಕೂದಲನ್ನು ನೀಟಾಗಿ ಕಾಣುವಂತೆ ಮಾಡಲಾಗುತ್ತದೆ. ಕೂದಲನ್ನು ತೆಗೆಯುವುದೋ, ಸೇರಿಸುವುದೋ, ಹುಬ್ಬಿನ ಕೂದಲಿನ ಬಣ್ಣ ಬದಲಿಸುವುದೋ ಅಥವಾ ಶೇಪ್ ಮಾಡಿ ಹುಬ್ಬಿನ ಸ್ಥಾನವನ್ನೇ ಬದಲಿಸುವುದೂ ಇಂದಿನ ಫ್ಯಾಷನ್. ಈ ಫ್ಯಾಷನ್ ಬರೀ ಹೆಂಗಳಿಗೆ ಮೀಸಲು ಎಂದುಕೊಳ್ಳದಿರಿ, ಇಂದಿನ ಗಂಡು ಯುವಜನಾಂಗವೂ ಈ ದಿಶೆಯಲ್ಲಿ ತಾವೇನೂ ಕಡಿಮೆ ಇಲ್ಲ ಎಂದು ತೋರಿಸುತ್ತಿದೆ.

ಒಮ್ಮೆ ಸಂಗೀತ ಪಾಠಕ್ಕೆ ಹೋಗಿದ್ದಾಗ ನಡೆದ ಸಣ್ಣ ಕಸಿವಿಸಿ ಹೀಗಿದೆ. ನನ್ನ batch'ನ ಮುನ್ನ ಯಾವಾಗಲೋ ಹೆಣ್ ಮಕ್ಕಳ batch ಇದ್ದಿರಬೇಕು. ನನ್ನೆದುರಿಗೇ ಇಷ್ಟುದ್ದ ಕೂದಲು ನೆಲ ಮೇಲೆ ಮಲಗಿತ್ತು. ಏನಾದರೂ ಮಾಡೋಣ ಅನ್ನುವಷ್ಟರಲ್ಲಿ ಕ್ಲಾಸ್ ಶುರುವಾಯ್ತು. ಹೇಳಿಕೊಡುವತ್ತ ಕೊಂಚ ಗಮನ ಇದ್ದರೂ, ಹೆಚ್ಚಿನ ನನ್ನ ಗಮನ divert ಮಾಡಿದ್ದು ಆ ಕೂದಲು. ಮೊದಲು ಅದಕ್ಕೊಂದು ಗತಿ ಕಾಣಿಸಬೇಕು ಅನ್ನೋದೇ ನನ್ನ ಮನಸ್ಸಿನಲ್ಲಿ. ಅಂತೂ ಹೇಗೋ ಕ್ಲಾಸ್ ಮುಗಿಯಿತು. "ನಿನ್ನ ಗಮನ ಮಾಮೂಲಿನಂತೆ ಇರಲಿಲ್ಲ ಅಲ್ಲವೇ? any problem?" ಅನ್ನೋದೇ ಗುರುಗಳು? ಆರಂಭದಲ್ಲೇ ಕೇಳಿದ್ದರೆ ನನ್ನ problem ಹೇಳಿಬಿಡುತ್ತಿದ್ದೆ.

ಏನೋ ದೊಡ್ಡ ಅವಘಢವಾಗೋದು ಚಿಕ್ಕದರಲ್ಲೇ ಆಗಿ ತಪ್ಪಿದರೆ 'ಕೂದಲೆಳೆಯ ಅಂತರದಲ್ಲಿ ತಪ್ಪಿತು' ಅಂತಾರೆ. ಒಬ್ಬರಿಗೆ ಅರಿವಾಗದಂತೆ ನಯವಾಗಿ ಕೆಲಸ ಸಾಧಿಸಿದರೆ 'ಬೆಣ್ಣೆಯಲ್ಲಿ ಕೂದಲು ತೆಗೆದಂತೆ'. ಯಾರೋ ಒಂದು ಕಡೆ ಕ್ಷೇಮವಾಗಿ ತಲುಪಿದರೆ 'ಕೂದಲು ಕೊಂಕದ ಹಾಗೆ' ಕ್ಷೇಮದಿಂದ ಬಂದು ಸೇರಿದೆ ಅಂತಾರೆ. ಹೀಗೆ ಈ ಕೂದಲನ್ನು ಕೆಲವು ಕಡೆ reference ಕೊಡ್ತಾರೆ.

ಒಂದು ಕೂದಲಿನ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡ ನಿಮಗೆ ಈ ವಿಷಯ ಗೊತ್ತೇ ಇದೆ. ಕೂದಲಿಗೆ ಜೀವ ಇಲ್ಲ, ಆದರೆ ಪ್ರಾಮುಖ್ಯತೆಗೆ ಕಡಿಮೆ ಇಲ್ಲ... ಅಣ್ಣನ ಆಜ್ಞೆಯಂತೆ, ಜೀವವಿಲ್ಲದ ಕೂದಲಿಗೆ ಕೈಹಾಕಿ ದರದರ ಎಳೆದುಕೊಂಡು ಬಂದದ್ದೇ ಯುದ್ಧಕ್ಕೆ ನಾಂದಿಯಾಗಿ, ಎಷ್ಟೋ ಜೀವಗಳು ರಣರಂಗದಲ್ಲಿ ಜೀವ ಕಳೆದುಕೊಂಡವು ಅಲ್ಲವೇ?

ಜೀವವಿಲ್ಲದ್ದನ್ನು maintain ಮಾಡುವುದರಲ್ಲಿ ಸಾಕಷ್ಟು ಸಮಯ ಮತ್ತು ಹಣ ಖರ್ಚಾಗುತ್ತದೆ.

ಏನು ಹೇಳೋಕ್ಕೆ ಹೋದೆ ಎಂದರೆ, ಜೀವ ಇಲ್ಲದಿರುವ ವಸ್ತುಗಳಲ್ಲಿ ಆಸಕ್ತಿ ತೋರೋ ಮಂದಿ ಜೀವ ಇರುವವರಿಗೂ ತೋರಿದರೆ ನೊಂದ ಜೀವಗಳಿಗೆ ನೆಮ್ಮದಿ ಸಿಗಬಹುದು, ವೃದ್ದಾಶ್ರಮಗಳು ಕಡಿಮೆಯಾಗಬಹುದು. ನಿಮ್ಮ ಅಭಿಪ್ರಾಯ?

English summary
Messy hair don't care. But, you have to take care of your hair. Humorous write up by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X