• search

ನಗಬಾರದಪ್ಪಾ ನಗಬಾರದು, ನಗಬಾರದಮ್ಮಾ ನಗಬಾರದು!

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಹಲವು ವರ್ಷಗಳಿಂದ ಸಿಕ್ಕಾಪಟ್ಟೆ ಖ್ಯಾತಿ ಪಡೆದಿರೋ 'ಹಾಸ್ಯ ಸಮ್ಮೇಳನ'ದಲ್ಲಿ ಸಾಮಾನ್ಯವಾಗಿ ಹೇಳೋ ಮಾತು, ಹಾಸ್ಯ ಎಲ್ಲೆಲ್ಲೂ ಇರುತ್ತೆ, ಅದನ್ನು ಕಾಣೋ ಮನಸ್ಸು, ಹೃದಯ ಇರಬೇಕು ಅಷ್ಟೇ ಅಂತ! ಹಾಗೆಂದರೆ ಅರ್ಥ, ಎಲ್ಲೆಲ್ಲೂ ಹಾಸ್ಯ ಇದೆ, ಅದನ್ನು ಹುಡುಕ್ಕೊಂಡು ಹೋಗುತ್ತಾ, ಸಿಕ್ಕಾಗಲೆಲ್ಲಾ ನಕ್ಕೊಂಡ್ ನಕ್ಕೊಂಡ್ ಹೋಗ್ತಿರಬೇಕು ಅಂತಲ್ಲಾ! ನಾವೇನು ಕೋಳಿಯೇ? ಅಚ್ಚುಕಟ್ಟಾಗಿ ಕೂತು ಉಣ್ಣೋ ಹಾಗೆ ಹಾಸ್ಯವನ್ನು ಆಸ್ವಾದಿಸಿ, ಮುಕ್ತವಾಗಿ ನಗಬೇಕು ಅಂತ!

  ದರ ಏರಿಕೆಯಲ್ಲೂ ನಗೆ ಉಕ್ಕಿಸುತ್ತಿರುವ ಟೊಮೆಟೋ ಜೋಕ್ಸ್!

  ನನ್ನ ಸ್ಲೋಗನ್ ಕೂಡಾ ಇದೇ ... 'smile costs nothing, keep smiling' ಅಂತ. ಮೊನ್ನೆ ಹೀಗೆ ಇದೇ ವಿಚಾರ ಯೋಚನೆ ಮಾಡುವಾಗ ನನಗೆ ಅನ್ನಿಸಿದ್ದು 'smile does cost something' ಅಂತ. ಆ ಆಲೋಚನೆಯೇ ಈ ಬರಹಕ್ಕೆ ನಾಂದಿ. ಕೆಲವು ರಸಮಯ / ರಸಮಯವಲ್ಲದ ಸನ್ನಿವೇಶಗಳನ್ನು ನಿಮ್ಮ ಮುಂದೆ ಇಟ್ಟು "ನಗಬೇಡಿ" ಅಂತ ಹೇಳೋಕ್ಕೆ ಹೊರಟಿದ್ದೀನಿ.

  Laughter should lighten up, not embarass

  ನಾನಿನ್ನೂ ಆಗ ಬಹುಶ: ಒಂದನೇ ಕ್ಲಾಸ್ ಇರಬೇಕು! . . . ಒಹೋ! ರೀಲ್ ಬಿಟ್ಟಿದ್ದು ಸಾಕು, ಅವೆಲ್ಲ ನೆನಪಲ್ಲಿ ಇರುತ್ತಾ ಅನ್ನಬೇಡಿ . . . ಘಟನೆ ಖಂಡಿತಾ ನೆನಪಿದೆ. ಅದೊಂದು ದಿನ ನಮ್ಮ ಟೀಚರ್ ತರಗತಿಯ ಮಧ್ಯೆ ಒಬ್ಬ ಹುಡುಗನನ್ನು ಒಂದು ಪ್ರಶ್ನೆ ಕೇಳಿದರು. ಅವನು ತಪ್ಪು ಉತ್ತರ ಕೊಟ್ಟ. ಅದು ನನಗೆ ಗೊತ್ತಾಯ್ತು. ಕಿಸಕ್ ಅಂತ ನಕ್ಕು ಬಿಟ್ಟೆ! ಅಷ್ಟೇ! ಟೀಚರ್ ನನ್ನತ್ತ ದುರುಗುಟ್ಟಿ ನೋಡಿ ತಮ್ಮ ಡೆಸ್ಕ್ ಬಳಿ ಬಾರೆಂದು ಕರೆದರು. ನಾನು ಅಲ್ಲಾಡಲಿಲ್ಲ. ಎರಡನೇ ಬಾರಿ, ಮೂರನೇ ಬಾರಿ ಕರೆದರೂ ನಾನು ಕೂತಲ್ಲಿಂದ ಅಲ್ಲಾಡಲಿಲ್ಲ. ನೂರು ಬಾರಿ ಕರೆದ ನಂತರ ಶಿಕ್ಷೆ ನೀಡಲು ಅವರೇನು ಶ್ರೀಕೃಷ್ಣ ಪರಮಾತ್ಮನೇ? ನಾಲ್ಕನೇ ಬಾರಿಗೆ ಎದ್ವಾತದ್ವಾ ಸಿಟ್ಟಿನಿಂದ ಸ್ಕೇಲನ್ನು ಹಿಡ್ಕೊಂಡ್ ಎದ್ದುಬಂದು ಸನ್ಮಾನ ಮಾಡಿದರು. ನಗಬಾರದಪ್ಪಾ ನಗಬಾರದು!

  'ಶ್ರೀಕೃಷ್ಣ' ಅಂದ ಮೇಲೆ ಮಹಾಭಾರತ ತಲೆಗೆ ಬಾರದೇ ಇದ್ದೀತೇ? ಹೊಚ್ಚ ಹೊಸಾ ಮನೆಯನ್ನು ನೋಡಲು ಬಂದ ಅತಿಥಿ, ಕಾಲುಜಾರಿ ಬಿದ್ದಾಗ ಮನೆ ಒಡತಿ ನಗಬಹುದೇ? ಅತಿಥಿ ದೇವೋಭವ ಅಂತ ಹೇಳಿ ಉಪಚಾರ ಮಾಡಿ, ನೆಲ ಜಾರಿ ಬಿದ್ದರು ಅಂದಾಗ ನಕ್ಕರೇ, ಮಾಡಿದ ಉಪಚಾರವೆಲ್ಲಾ ಗಾಳಿಗೆ ತೂರಿದಂತೆ ಅಲ್ಲವೇ? ಆ ಒಂದು ನಗು ಯಾವ ಲೆವಲ್'ಗೆ ಹೋಗಿ ತಲುಪಿತು ಅಂತ ತಿಳಿಸೋ ಇರಾದೆ ಈ ಬರಹದ್ದಲ್ಲ. ಒಟ್ಟಿನಲ್ಲಿ 'ನಗಬಾರದಮ್ಮಾ ನಗಬಾರದು!'

  ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!

  ದೇವೋಭವ ಎಂದಾಗ ದೇವನ ಬಗ್ಗೆ ಎರಡು ಮಾತನಾಡದೇ ಇದ್ದರೆ ಹೇಗೆ? ಇನ್ನೇನು ಗಣೇಶ ಹಬ್ಬ ಬರಲಿದೆ. ಗಣೇಶನ ಒಂದು ಕಥೆ ಹೀಗಿದೆ. ಮಹಾಗಣಪತಿ ಸಿಕ್ಕಾಪಟ್ಟೆ ತಿಂದು ಇಲಿಯ ಮೇಲೆ ಕುಳಿತು ಬರುತ್ತಿರಲು, ಹಾದಿಬದಿಯಲ್ಲಿ ಹಾವನ್ನು ಕಂಡು ಇಲಿ ಹೆದರಿ ಓಡಿತಂತೆ! ಗಣೇಶ ಮೂಟೆಯಂತೆ ಕೆಳಕ್ಕೆ ಉರುಳಿ, ಹೊಟ್ಟೆ ಒಡೆದು ತಿಂದ ಎಲ್ಲ ಕಡುಬು ಹೊರಚೆಲ್ಲಲು, ಗಣಪನ ಅವಸ್ಥೆಯನ್ನು ಕಂಡ ಬಿಳೀ ಚಂದ್ರ 'may I help' ಅನ್ನೋದು ಬಿಟ್ಟು ಪಕಪಕ ನಕ್ಕುಬಿಡೋದೇ? ಹದಿನೈದು ದಿನ ಕ್ಷೀಣಿಸು, ಹದಿನೈದು ದಿನ ವೃದ್ದಿಸು ಎಂಬ ಶಾಪ ಹೊತ್ಕೊಂಡು ಎಲ್ಲಾ ಧರ್ಮದವರನ್ನೂ ಒಂದೊಂದು ರೀತಿ ನೋಡ್ಕೋತಾ ಇದ್ದಾನೆ. ನಗಬಾರದಿತ್ತೋ ಚಂದಮಾಮ?

  Laughter should lighten up, not embarass

  ಗಣೇಶ ಅಂದ ಮೇಲೆ ಈ ಘಟನೆ ಹೇಳದೆ ಇದ್ದರೆ ಹೇಗೆ? ಗಣೇಶನ ಹಬ್ಬದ ದಿನ ಇಪ್ಪತ್ತೊಂದು ಗಣೇಶಗಳನ್ನು ನೋಡುವ ಹವ್ಯಾಸ ಅಂದಿನ ದಿನಗಳಲ್ಲಿ ಇತ್ತು. ಇಂದು ಕನಿಷ್ಠ ಇನ್ನೂರಾ ಒಂದು ನೋಡ್ತೀವಿ ಸಾಮಾಜಿಕ ತಾಣದಲ್ಲಿ. ಒಟ್ಟಿನಲ್ಲಿ ಪುಣ್ಯ ಬರುತ್ತೆ ಬಿಡಿ. ವಿಷಯ ಇದಲ್ಲಾ. ಹೀಗೇ ಒಬ್ಬರ ಮನೆಯಲ್ಲಿ ಹಲವಾರು ಜನ ಸೇರಿರಲು, ಸಾಂಪ್ರದಾಯಿಕವಾಗಿ ಪಂಚೆ ಉಟ್ಟ ಬಂಧುಜನರೊಬ್ಬರು ಬಂದರು. ಹೂವು - ಅಕ್ಷತೆ ಕಾಳು ತೆಗೆದುಕೊಂಡು ದೇವನಿಗೆ ಏರಿಸಿ ನಮಸ್ಕರಿಸುವಾಗ ಪಂಚೆ ಹರಿಯಿತು. ಯಾರದ್ದೂ ತಪ್ಪಲ್ಲ. ಆದರೆ ಅಲ್ಲೇ ಇದ್ದ ಆ ಮನೆಯ ಮಗಳು ಜೋರಾಗಿ ನಕ್ಕುಬಿಟ್ಟಳು. ಹಿರಿಯರು ಅವಮಾನಿತರಾಗಿ ಕುಗ್ಗಿಹೋದರೇನೋ ನಿಜ. ಆದರೆ ಎರಡು ಮನೆಯವರಿಗೆ ಮಾತು ನಿಂತಿದ್ದು ಇಂದಿಗೂ ಸರಿ ಹೋಗಿಲ್ಲ ಎಂಬುದು ನಿಜ. ನಗಬಾರದಮ್ಮ ಹಿಂಗೆಲ್ಲಾ ನಗಲೇಬಾರದು . . .

  ಅಟ್ಟದ ಮೇಲೆ ಇಟ್ಟಿರಿ ಯಾವಾಗ್ಲಾದ್ರೂ ಬೇಕಾಗತ್ತೆ!

  ಮನೆಯ ಯಜಮಾನಿ ಮನೆಗೆ ಬಂದ ಅತಿಥಿಗಳನ್ನು ಅವಹೇಳನ ಮಾಡಿ ನಕ್ಕ ವಿಷಯ ಹೇಳಿದೆ. ಅದೂ ಆ ಮನೆ ಎಂಥದ್ದು? ಅರಮನೆ! ಈ ಅರಮನೆ, ರಾಜ, ರಾಣಿ ಅಂದಾಗ ಒಂದು ಚಂದಮಾಮ ಕಥೆ ನೆನಪಾಗುತ್ತದೆ. ರಾಜ, ರಾಣಿ ಊಟಕ್ಕೆ ಕುಳಿತಿದ್ದಾರೆ. ಬಿಸಿ ಬಿಸಿ ಅಡುಗೆ ಸಿದ್ದ ಮಾಡಿರುವ ಅಡುಗೆಭಟ್ಟ ಒಂದೆಡೆ ನಿಂತಿದ್ದಾನೆ. ದೊಡ್ಡಮನುಷ್ಯರು ಊಟ ಮಾಡುವಾಗ ಏನಾದರೂ ಹೆಚ್ಚುಕಮ್ಮಿ ಇದ್ದಲ್ಲಿ ಬೈಸಿಕೊಳ್ಳಬೇಕಲ್ಲಾ ಅದಕ್ಕೆ. ರಾಜ-ರಾಣಿಯರಿಗೆ ಊಟ ಬಡಿಸುವ ಭಟ್ಟನ ಹೆಂಡತಿ ತನ್ನ ಕೆಲಸ ಮಾಡುತ್ತಿದ್ದಾಳೆ. ಬೆಳ್ಳಿಯ ತಟ್ಟೆಗೆ ಊಟ ಬಡಿಸಿ ತಲೆ ಎತ್ತಿ ನೋಡಿದ ಅವಳು ಕಿಸಕ್ಕನೆ ನಕ್ಕುಬಿಡುತ್ತಾಳೆ!

  Laughter should lighten up, not embarass

  ರಾಜನಿಗೋ ಆ ದಾಸಿಗೆ ಎಲ್ಲಿ ತನ್ನ ಬಕ್ಕತಲೆ ಕಂಡುಬಿಟ್ಟಿತೋ ಎಂಬ ಅಳುಕು! ಹಾಗೆಂದು ಕೇಳಿದರೆ "ಇಲ್ಲಾ ಮಹಾಸ್ವಾಮಿ ನಿಮಗೆ ಬಕ್ಕ ತಲೆ ಅಂತ ನನಗೆ ಗೊತ್ತೇ ಇರಲಿಲ್ಲ, ಈಗ ಗೊತ್ತಾಯ್ತು" ಅಂದುಬಿಟ್ಟರೆ? . . . ತನ್ನ ತಲೆಯ ಬಿಳಿಗೂದಲು ದಾಸಿಗೆ ಕಂಡಿದೆ ಅದಕ್ಕೆ ದಾಸಿ ನಕ್ಕಿದ್ದಾಳೆ ಎಂಬ ಅನುಮಾನ ರಾಣಿಗೆ! ಹೇಗೆ ಕೇಳಿಯಾಳು? ಇನ್ನು ಭಟ್ಟನಿಗೆ, ಅಡುಗೆ ಮಾಡುವಾಗ ಪಂಚೆಯ ಮೇಲೆ ಕಟ್ಟಿದ್ದ ಬಟ್ಟೆಯನ್ನು ಕಳಚಿ ಕೈ ಒರೆಸಿಕೊಂಡಿದ್ದೆ. ಆಗ ತನ್ನ ಪಂಚೆ ಏನಾದರೂ ಅಸ್ತವ್ಯಸ್ತವಾಗಿದೆಯೋ ? ನೋಡಿಕೊಳ್ಳಲೇ ಇಲ್ಲವಲ್ಲ? ಎಂಬ ಮುಜುಗರ.

  ಇಷ್ಟೆಲ್ಲಾ ಹೀಗಿರಬಹುದು ಹಾಗಿರಬಹುದು ಎಂಬೆಲ್ಲಾ ಆಲೋಚನೆಗಳು ಎಲ್ಲರ ಮನಮುತ್ತಿ ಕೊನೆಗೆ ರಾಜ ಗದರುವ ದನಿಯಲ್ಲಿ ದಾಸಿಯನ್ನು ಕೇಳಿಯೇಬಿಟ್ಟ, ನಕ್ಕಿದ್ದೇಕೆಂದು! ಆಗ ಆಕೆ ನುಡಿಯುತ್ತಾಳೆ "ಕ್ಷಮಿಸಿ ಮಹಾಪ್ರಭು... ಈ ನನ್ನ ಗಂಡನಿಗೆ ಬಹಳಾ ಮರೆವು. ಸಂಜೆ ಮನೆಗೆ ಬರೋ ಮುಂಚೆ ದರ್ಜಿಯ ಅಂಗಡಿಯಿಂದ ಬಟ್ಟೆ ತೆಗೆದುಕೊಂಡು ಬಾ ಅಂತ ಹೇಳಿದ್ದೆ. ಮರೀದೇ ಇರಲಿ ಅಂತ ಬೆರಳಿಗೆ ದಾರ ಕಟ್ಟಿದ್ದೆ. ಈ ಯಪ್ಪ ಅದನ್ನೇ ಕಟ್ಕೊಂಡ್ ಅಡುಗೇನೂ ಮಾಡಿದ್ದಾನೆ. ಅದನ್ನ ನೋಡಿ ನಕ್ಕೆ" ಅಂದಳು! ರಾಜಾ-ರಾಣಿ ಮುಂದೆ ಹಿಂಗೆ ನಗಬಾರದಿತ್ತು. ಪಾಪ ಅವರಿಗೂ ಅವರದ್ದೇ ತಂಟೆ ತಾಪತ್ರಯ ಇರುತ್ತೆ!

  Laughter should lighten up, not embarass

  ನಮ್ಮಲ್ಲಿ ಒಬ್ಬರಿದ್ದಾರೆ. ನಿಮ್ಮಲ್ಲಿ ಬರೀ ಒಬ್ಬರೇ ಇದ್ದಾರಾ? ಹಾಗಿದ್ರೆ ಆ ಒಬ್ಬರು ನೀವೇ ಇರಬೇಕು ಅಲ್ಲವೇ? ಅನ್ನದಿರಿ... ನಮ್ಮಲ್ಲಿ ಒಬ್ಬರಿದ್ದಾರೆ ಅಂದರೆ ಸ್ವಲ್ಪ ಡಿಫೆರೆಂಟ್ ಅಂತ ಅರ್ಥ. ಯಾವ ನಮೂನೆ ಅಂದ್ರೆ ಇದು 'ಹಿಂಗಲ್ಲಾ ಹಂಗೆ' ಅಂದ್ರೆ ಮುಗೀತು ಸಿಟ್ಟು ಬಂತು ಅಂತಲೇ ಅರ್ಥ! ಆಫೀಸಿಗೆ ಹೊರಟವರು ತಮ್ಮ ಹಿರಿಯ ತಾಯಿಗೆ ಹೇಳಿದರು "ನಿನಗೆ ನನ್ನ ಮೇಲಿರೋ ಪ್ರೀತಿ ಸರಿಯೇ ಆದರೆ ಡಬ್ಬಿಯಲ್ಲಿ ತುಂಬೀ ತುಂಬಿ ಊಟ ಕೊಡಬೇಡ! ಅಷ್ಟೆಲ್ಲಾ ತಿಂದರೆ ಊಟ ಆದಮೇಲೆ ಸಿಕ್ಕಾಪಟ್ಟೆ ನಿದ್ದೆ ಬರುತ್ತೆ!" ಪಾಪ ಆ ತಾಯಿಯೋ ನಗುತ್ತಾ "ನಿದ್ದೆ ಬಂದ್ರೆ ಅಲ್ಲೇ ಎಲ್ಲಾದ್ರೂ ಹಾಸಿಗೆ ಇದ್ರೆ ಒಂದರ್ಧ ಘಂಟೆ ನಿದ್ದೆ ಮಾಡೋ" ಅಂದದ್ದೇ ತಡ, ಎಲ್ಲಿತ್ತೋ ಸಿಟ್ಟು ಎದ್ದುಬಿದ್ದು ಬಂದು ಮಗನ ಮೇಲೆ ಆವಾಹನೆ ಆಯಿತು. ಥಟ್! ಪುಟ್! ಅಂತ ಊಟಾನೂ ಬಿಟ್ಟು ಹೋಗೋದೇ? ಮಗ ಸ್ವಲ್ಪ ಹೀಗೆ ಅಂತ ಗೊತ್ತಿದ್ದ ಅಮ್ಮ ನಗಬಾರದಿತ್ತು!

  ಎಷ್ಟೋ ಸಾರಿ ಜೀವನದಲ್ಲಿ ನಡೆಯೋ ಸನ್ನಿವೇಶಗಳಲ್ಲಿ ಖಂಡಿತ ನಗು ಬರುತ್ತೆ ಆದರೆ ಅದು ಕೊನೆಗೆ ಹಾಸ್ಯವಾಗದೆ "ಏನು? ನಗೋಕ್ ಏನಾಗಿದೆ ಈಗ? ನನ್ನ ಮುಖದ ಮೇಲೆ ಕೋತಿ ಕುಣೀತಿದ್ಯಾ?" ಅಂತ ಅವರು ಅಂದಾಗ "ನೀವು ಕುಣೀತಿದ್ರೆ ನಗಬೇಕೂ ಅಂತಲೇ ಅನ್ನಿಸುತ್ತೆ" ಎನ್ನಲಾದೀತೆ?

  ನಮ್ಮಲ್ಲಿ ಒಂದು ಹಿಂಜರಿಕೆ ಇದೆ, ನೀವೂ ಗಮನಿಸಿರುತ್ತೀರಾ ಅಥವಾ ಅನುಭವಿಸಿರುತ್ತೀರಾ! ಒಂದು ಹಾಸ್ಯದ ಸನ್ನಿವೇಶ ಅಥವಾ ಚಲನಚಿತ್ರ ಮೂಡಿಬರುತ್ತಿರುತ್ತದೆ ಅಂದುಕೊಳ್ಳಿ. ಯಾವುದೇ ಹಿಂಜರಿಕೆ ಇಲ್ಲದೆ ಜೋರಾಗಿ ನಗುತ್ತೀರಾ! ಯಾರೂ ಏನೂ ಅಂದುಕೊಳ್ಳೋದಿಲ್ಲ. ಬದಲಿಗೆ ಹೀರೋಯಿನ್ ಕಷ್ಟ ಅನುಭವಿಸುವ ಸನ್ನಿವೇಶದಲ್ಲಿ ಅಥವಾ ಇನ್ನಾವುದೋ ದು:ಖದ ಸನ್ನಿವೇಶದಲ್ಲಿ ಅವರೊಂದಿಗೆ ನೀವು ಕಣ್ಣೀರು ಹಾಕಿದರೆ ಸುತ್ತಲಿನವರು (ಯಾರಾದರೂ ಇದ್ದರೆ) ನಿಮ್ಮಿಂದ ಕೊಂಚ ದೂರ ಸರಿದು ಕೂಡಬಹುದು.

  Laughter should lighten up, not embarass

  ಟಿವಿ ನೋಡುವಾಗ ಕಣ್ಣೀರು ಅಥವಾ ಆತಂಕ ಅನ್ನುವ ವಿಷಯ ಬಂದಾಗ ಸ್ವಂತ ಅನುಭವ ಹೇಳದೇ ಹೋದರೆ ಹೇಗೆ? ಆ ದಿನಗಳಲ್ಲಿ ನಮ್ಮ ಮನೆಯಲ್ಲಿನ್ನೂ ಟಿವಿ ಕಾಲಿಟ್ಟಿರಲಿಲ್ಲ. ಹಾಗಾಗಿ ವಾರಾಂತ್ಯದಲ್ಲಿ ಕನ್ನಡ ಸಿನಿಮಾ ನೋಡಲು ನಮ್ಮ ಮನೆಯ ಹಿಂದಿನ ಬೀದಿಯಲ್ಲಿನ ಒಬ್ಬರ ಮನೆಗೆ ಹೋಗುತ್ತಿದ್ದೆವು. ಅವರ ತಲ್ಲೀನತೆ ಯಾವ ಲೆವಲ್ ಎಂದರೆ ವಿಲನ್ ಅರ್ಥಾತ್ ಅಂದಿನ ಕೇಡಿ ನಾಯಕಿಯನ್ನು ಅಟ್ಯಾಕ್ ಮಾಡುತ್ತಾನೆ ಅಂದುಕೊಳ್ಳಿ. ಆಕೆ ಹೆದರಿಕೊಂಡು ಮಹಡಿ ಏರಿ ತನ್ನ ಬೆಡ್-ರೂಮಿನ ಕಡೆ ಓಡುತ್ತಾಳೆ. ಇವರು ವಿಲವಿಲ ಒದ್ದಾಡುತ್ತ "ಬೇಡಾ ಕಣೇ ... ಅಲ್ಲಿ ಹೋಗಬೇಡ ಕಣೆ..." ಅಂತ ಅತ್ತೇಬಿಡುತ್ತಿದ್ದರು. ಟಿವಿ ದೃಶ್ಯದಲ್ಲೂ ಕೆಡುಕನ್ನು ಬಯಸದಂಥಾ ಒಳ್ಳೆಯ ಹೃದಯದ ಜನ.

  ನಿನ್ನೆ ಮಾಲ್'ಗೆ ಹೋಗಿದ್ದೆ. ಅಂದ್ರೆ ಏನೋ ಕೊಂಡ್ಕೋಬೇಕು ಅಂತಲ್ಲ. ಅಲ್ಲಿರೋ ಕಾರಂಜಿ ಮುಂದೆ ಕೂತು ಜನರನ್ನು ಗಮನಿಸೋಕ್ಕೆ. ಅಣತಿ ದೂರದಲ್ಲಿ ಇಬ್ಬರು ಸ್ನೇಹಿತೆಯರು ಕುಳಿತಿದ್ದರು. ಒಬ್ಬಾಕೆ ಮೆಲುದನಿಯಲ್ಲಿ ನಗುತ್ತಿದ್ದರೆ ಇನ್ನೊಬ್ಬಾಕೆಯದು ಗಟ್ಟಿದನಿ ನಗು. ಯಾರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ಓಡಾಡುತ್ತಿದ್ದರು. ಬದಲಿಗೆ ಆಕೆ ಅತ್ತಿದ್ದರೆ? ಕನಿಷ್ಠಪಕ್ಷ 'are you alright?' ಅಂತ ಕೇಳ್ತಿದ್ರು ಅನ್ನೋದು ಗ್ಯಾರಂಟಿ.

  Laughter should lighten up, not embarass

  ಅಳು, ನಗು ಎಲ್ಲವೂ ಅಷ್ಟೇ ಸಮಯ ಸಂದರ್ಭ ನೋಡಿಕೊಂಡು ವ್ಯಕ್ತಪಡಿಸಬೇಕು. ಇದು ಒಂದರ್ಥದಲ್ಲಿ ಸರಿ. ನಗು ಬಂತು ಅಂತ ಇನ್ನೊಬ್ಬರನ್ನು ಆಡಿಕೊಳ್ಳುವಂತೆ ನಗಲಾಗದು. ಹಾಗೆಯೇ ಅಳು ಕೂಡ. ಹೇಗಿದೆ ನಿಮ್ಮ ತಂದೆಯವರ ಆರೋಗ್ಯ ಅಂತ ಕೇಳಿದರು ಅಂದುಕೊಳ್ಳಿ. ಜೋರಾಗಿ ಅಳುತ್ತಾ 'ಮೊನ್ನೆ ಏನಾಯ್ತು ಅಂತೀರಾ, ಸಿಕ್ಕಾಪಟ್ಟೆ . . . . ಸಿಕ್ಕಾಪಟ್ಟೆ ನೆಗಡಿ ಬಂದುಬಿಡ್ತು ಕಣ್ರೀ . . . ಎಷ್ಟು ಅಂದ್ರೇ . . . ' ದಯವಿಟ್ಟು ಮುಂದೆ ಹೇಳಬೇಡಿ! ಅಂದ ಹಾಗೆ ನೀವಿನ್ನೂ ಅಲ್ಲೇ ಇದ್ರೆ ಓಡಿಬಿಡಿ.

  ಇನ್ನೊಂದರ್ಥದಲ್ಲಿ ಹೇಳೋದಾದ್ರೆ, ಭಾವನೆಗಳನ್ನು ಶೇಖರಿಸಿ ಇಟ್ಟುಕೊಂಡು ಆಮೇಲೆ ಬಳಸುತ್ತೇನೆ ಎನ್ನಲಾಗುವುದಿಲ್ಲ. ಇದೇನು ದುಡ್ಡು ಕೂಡಿಟ್ಟು ಆಮೇಲೆ ಇಂಥಾ ವಸ್ತು ತೊಗೊಳ್ತೀನಿ ಅನ್ನೋ ರೀತಿಯೇ? ಅಲ್ಲ! ಈಗ ನಗೋದಕ್ಕೆ ಟೈಮಿಲ್ಲ, ಟ್ರೈನ್ ಹಿಡೀಬೇಕು ಕೆಲಸದಿಂದ ಬಂದ ಮೇಲೆ ನಗ್ತೀನಿ ಅಂತಾರೆಯೇ? ಅಥವಾ ಸದ್ಯಕ್ಕೆ ಅಳೋದಕ್ಕೆ ಆಗಲ್ಲ ವೀಕೆಂಡ್'ನಲ್ಲಿ ನೋಡೋಣ ಅಂತ ಹೇಳಲಾಗದು!

  ನಗೋವಾಗ ನಕ್ಕುಬಿಡಿ ಆದರೆ ಎಚ್ಚರವಿರಲಿ! ಅಳೋವಾಗ ಅತ್ತು ಬಿಡಿ ಆದರೆ ಆಗಲೂ ಎಚ್ಚರವಿರಲಿ!

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Lughter is not not just medicine for many ailments, it is wonderful thing to express happiness. But, untimely laughter or smile may cost something or everything. So, be careful before laughing on somebody. Still smile costs nothing, keep smiling. An article by Srinath Bhalle.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more