• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: Hats off ಎಂಬುದು ಗೌರವ ಸೂಚಕವೂ ಹೌದು!

|
Google Oneindia Kannada News

ನನ್ನ ಕಡೆಯಿಂದ ಅದೆಷ್ಟು ಮಂದಿಗೆ ಹ್ಯಾಟ್ಸ್ ಆಫ್ ಹೇಳಬೇಕು ಎಂದರೆ ಹೇಳೋದು ಕಷ್ಟವಾಗಬಹುದು. ಬರೆಯಲೇ ಬಾರದ ದಿನಗಳಿಂದ ಇಂದು ನಾಲ್ಕಕ್ಷರ ಬರೆಯಬಲ್ಲೆ ಎಂಬ ಒಂದು ವಿಶ್ವಾಸ ಮೂಡಿದೆ ಎಂದರೆ ಅದಕ್ಕೆ ಕಾರಣರು ನೂರಾರು. ಒಂದು ಉದಾಹರಣೆ ಎಂದರೆ, ಈ ನನ್ನ ಬರಹ ಈ ಒನ್ಇಂಡಿಯಾ ಕನ್ನಡದ ಅಂಕಣದಲ್ಲಿ 230ನೇ ಬರಹ. ಅರ್ಥಾತ್ ನಾಲ್ಕೂವರೆ ವರುಷಗಳ ನಿರಂತರ ಪಯಣ.

ಅಂಕಣ ಬರಹಗಾರ ಎಂಬ ಪಟ್ಟ ನೀಡಿ ಇಂದಿಗೂ ಪೋಷಿಸುತ್ತಾ ಬಂದಿರುವ ಒನ್ಇಂಡಿಯಾ ಕನ್ನಡದ ಸಂಪಾದಕ ವರ್ಗದವರ ಬೆಂಬಲಕ್ಕೆ ಹ್ಯಾಟ್ಸ್ ಆಫ್ ಎನ್ನುವೆ. ದಿನನಿತ್ಯದ ಬರಹಗಳು, ವಾರದಲ್ಲಿನ ಬರಹಗಳು, ಮಾಸದ ಬರಹಗಳನ್ನು ಬೆಂಬಲಿಸುತ್ತಿರುವ ಸಂಪಾದಕರಿಗೆ ಮತ್ತು ಎಲ್ಲ ರೀತಿಯ ಬರಹಗಳನ್ನು ಪ್ರೋತ್ಸಾಹಿಸುತ್ತಾ ಬಂದು ನಿರಂತರವಾಗಿ ಬೆಂಬಲ ನೀಡುತ್ತಿರುವ ಓದುಗರಿಗೆ ದೊಡ್ಡ ಹ್ಯಾಟ್ಸ್ ಆಫ್.

ಹ್ಯಾಟ್ಸ್ ಆಫ್ ಎಂಬುದು ಗೌರವ ಸೂಚಕ ಎನ್ನುವುದು ಒಂದಾದರೆ 'ನೀನೊಬ್ಬ ಮಹಾನ್ ವ್ಯಕ್ತಿ', 'ತಾವು ಮಾಡಿರುವ ಈ ಕೆಲಸಕ್ಕೆ ನನ್ನ' ಎಂಬುದೂ ಹ್ಯಾಟ್ಸ್ ಆಫ್ ಪಂಗಡಕ್ಕೆ ಸೇರುತ್ತದೆ. ಅಂದರೆ ಹೀಗೆ ಹೇಳೋದು ಒಬ್ಬರಿಗೆ ಕ್ರೆಡಿಟ್ ನೀಡುವ ಬಗೆ. ಮೆಚ್ಚುಗೆ ಸೂಸುವ ಕ್ರಿಯೆ ಆಗಲಿ, ಗೌರವ ನೀಡುವಾಗ ಆಗಲಿ, ಕ್ರೆಡಿಟ್ ನೀಡುದಾಗಲಿ ಮಾಡುವಾಗ ಟೋಪಿ ಯಾಕೆ ಎತ್ತಬೇಕು ಅಂತ?

ದೇವಸ್ಥಾನಕ್ಕೆ ಹೋದಾಗ ಹ್ಯಾಟ್ ತೆಗೆಯಬೇಕು
ನೀನು ನನಗಿಂತ ದೊಡ್ಡವನು ಎಂಬುದು ಮೊದಲ ಗೌರವ. ಇಲ್ಲಿ ಗಂಡುಗಳೂ ಮತ್ತು ಹೆಣ್ಣುಗಳೂ ಭಿನ್ನವಾಗಿ ಗೌರವವನ್ನು ಸೂಚಿಸುತ್ತಾರೆ. ಮೊದಲಿಗೆ, ಹ್ಯಾಟ್ಸ್ ಆಫ್ ಎಂದಾಗ ಗಂಡುಗಳ ತಲೆಯ ಮೇಲೆ ಹ್ಯಾಟ್ ಇರಬೇಕು. ದಿನನಿತ್ಯದ ಸನ್ನಿವೇಶದಿಂದಲೇ ಆರಂಭಿಸುವ. ಒಂದು ದೇವಸ್ಥಾನಕ್ಕೆ ಹೋದಾಗ ತಲೆಗೆ ಒಂದು ಹ್ಯಾಟ್ ಹಾಕಿದ್ದರೆ, ಅದನ್ನು ತೆಗೆಯಬೇಕು ಎಂಬುದು ಗೌರವ ಸೂಚಕ. ಹಾಗಾಗಿ ತಲೆಯ ಮೇಲಿನ ಹ್ಯಾಟ್ ತೆಗೆದು ಕಂಕುಳಲ್ಲಿ ಇರಿಸಿಕೊಳ್ಳುತ್ತಾರೆ. ಹೆಂಗಳು ಮೈತುಂಬಾ ಸೆರಗು ಹೊದೆಯುತ್ತಾರೆ, ಅಥವಾ ದುಪ್ಪಟ್ಟ ಹೊದ್ದುಕೊಳ್ಳಬಹುದು. ಕೆಲವು ಸಂಪ್ರದಾಯದಲ್ಲಿ ತಲೆಯ ಮೇಲೆ ಸೆರಗು ಅಥವಾ ದುಪ್ಪಟ್ಟ ಧರಿಸುತ್ತಾರೆ.

\

ಹ್ಯಾಟ್ ತೆಗೆದು ಕಂಕುಳಲ್ಲಿ ಇರಿಸಿಕೊಳ್ಳುವ ಪದ್ಧತಿ ನಮ್ಮಲ್ಲಿ ಬಂದಿದ್ದು ಬ್ರಿಟಿಷರಿಂದಲೋ ಏನೋ ಗೊತ್ತಿಲ್ಲ. ಏಕೆಂದರೆ ಬ್ರಿಟಿಷ್ ರಾಣಿ, ಹ್ಯಾಟ್ ಧರಿಸಿದ್ದವರು, ಕಂಕುಳಲ್ಲಿ ಇರಿಸಿಕೊಂಡು ನಂತರ ಮತ್ತೆ ಏರಿಸಿಕೊಳ್ಳುತ್ತಿದ್ದರು. ಇದೇ ರೀತಿಯ ಒಂದು ನಡತೆಯನ್ನು ತೀರಿ ಹೋದವರ ದರ್ಶನಕ್ಕೆ ಎಂದು ಬಂದಾಗಲೂ ಗಮನಿಸಬಹುದು.

ಹ್ಯಾಟ್ ಮೇಲಿನ ಮೋಹ
ಈ ಹ್ಯಾಟ್ ಎಂಬುದು ಬಿಸಿಲಿನಿಂದ ತಲೆಯನ್ನು ರಕ್ಷಿಸಿಕೊಳ್ಳಲು ಬಳಸುವಂತೆ, ತಮ್ಮ ಘನತೆಯನ್ನು ತೋರಿಸಿಕೊಳ್ಳುವ ರೂಪವಾಗಿಯೂ ಬಳಸುತ್ತಾರೆ ಮತ್ತು ಸಮವಸ್ತ್ರದ ಅವಿಭಾಜ್ಯವೂ ಆಗಿದೆ. ಕಥೆಗಳಲ್ಲಿ ಮತ್ತು ಸಿನಿಮಾಗಳಲ್ಲಿ ಇದನ್ನು ಹಲವಾರು ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಮೊದಲು ನನ್ನ ನೆಚ್ಚಿನ ಹಾಸ್ಯವನ್ನೇ ತೆಗೆದುಕೊಳ್ಳೋಣ ಬನ್ನಿ.

ಮೂಕಿ ಸಿನಿಮಾದಿಂದ ಶುರುವಾಗಿ ಆಮೇಲೆ ಒಂದಷ್ಟು ಮಾತುಗಳನ್ನೂ ಆಡಿ ಸಕತ್ ನಗಿಸುತ್ತಿದ್ದು ಲಾರೆಲ್ ಮತ್ತು ಹಾರ್ಡಿ. ಆಂಗ್ಲ ನಟರಾದ ಸಣಕಲು (stan Laurel) ಸ್ಟಾನ್ ಲಾರೆಲ್ ಮತ್ತು ಅಮೇರಿಕನ್ ನಟರಾದ ಡುಮ್ಮ (oliver hardy) ಆಲಿವರ್ ಹಾರ್ಡಿ 'ಹಾಸ್ಯ' ಜಗತ್ತಿನ ಮೇರು ನಟರಲ್ಲೊಬ್ಬರು. ಇಬ್ಬರೂ ಸದಾ ಸೂಟು- ಬೂಟು- ಹ್ಯಾಟು ಧರಿಸುತ್ತಿದ್ದರು. ಅದರಲ್ಲೂ ಪ್ರತೀ ಬಾರಿ ಲಾರೆಲ್ ಅವರು ತಮ್ಮ ತಲೆಯ ಮೇಲೆ ಹ್ಯಾಟು ಇರಲೇಬೇಕು ಎಂಬಂತೆ ನಟನೆ ಮಾಡುವಾಗ, ಆ ಹ್ಯಾಟ್ ಮೇಲಿನ ಮೋಹವನ್ನು ತೋರುವಾಗ, ಕೆಲವೊಮ್ಮೆ ನಗು ಬರುತ್ತದೆ, ಕೆಲವೊಮ್ಮೆ 'ಅಯ್ಯೋ, ಆ ಹ್ಯಾಟು ಬಿಡಪ್ಪ' ಎಂಬಂತೆ ಹೇಳಬೇಕು ಎನಿಸುತ್ತದೆ ಕೂಡ.

ರಾಜಕಪೂರ್ ಸಿನಿಮಾಗಳಲ್ಲಿ ಇಂಥಾ ಹ್ಯಾಟ್ ನೋಡಿರುತ್ತೀರಿ
ಇದೇ ಸಾಲಿಗೆ ಸೇರುವವರು ಚಾರ್ಲಿ ಚಾಪ್ಲಿನ್. ಸಾಮಾನ್ಯವಾಗಿ ತಲೆಯ ಮೇಲೆ ಕೂರುವ ಈ ಹ್ಯಾಟಿನ 'ಬ್ರಿಮ್' ಭಾಗ ಅಗಲವಾದ ಹಾಳೆಯಂತೆ ಇರುತ್ತದೆ. ರಾಜಕಪೂರ್ ಸಿನಿಮಾಗಳಲ್ಲಿ ಇಂಥಾ ಹ್ಯಾಟ್ ಅನ್ನು ನೋಡಿರುತ್ತೀರಿ. ಇದಕ್ಕೆ ಕೊಂಚ ಭಿನ್ನವಾಗಿ, ಚಾರ್ಲಿ ಚಾಪ್ಲಿನ್ ಅವರ ಹ್ಯಾಟಿನ ಬ್ರಿಮ್ ಸುತ್ತಿಕೊಂಡಿರುತ್ತದೆ. ಅದೊಂದು rounded crown. ಇದೊಂದು ಫಾರ್ಮಲ್ ಅಲ್ಲದೇ ಸೆಮಿ-ಫಾರ್ಮಲ್ ದಿರಿಸು. ನಮ್ಮ ಪೊಲೀಸರ ಹ್ಯಾಟ್ ಕೂಡಾ ಕೊಂಚ ಭಿನ್ನವೇ. ಒಂದು ಬದಿಯಲ್ಲಿ ಅದು ಮಡಚಿ buckle ಆಗಿರುತ್ತದೆ.

ಬೂಟು, ಪ್ಯಾಂಟು- ಷರಟು, ಮೇಲೊಂದು ನೀಳವಾದ ಚಳಿಗಾಲದ ದಪ್ಪನೆ ಕೋಟು, ಕುತ್ತಿಗೆಗೆ ಧರಿಸಿರುವ ಒಂದು ಸ್ಕ್ಯಾರ್ಫ್, ಬಾಯಲ್ಲಿ ಒಂದು ಪೈಪ್ ಮತ್ತು ತಲೆಗೆ ಹ್ಯಾಟು ಎಂದ ಕೂಡಲೇ ನಿಮಗೆ ನೆನಪಾಗುವವರು ಯಾರು? ಸರಿಯಾಗಿ ಊಹಿಸಿದಿರಿ, ಇಂಥಾ ಸಾಂಪ್ರದಾಯಿಕ ಉಡುಪನ್ನು ಧರಿಸುತ್ತಿದ್ದುದು ಷರ್ಲಾಕ್ ಹೋಮ್ಸ್. ಅರ್ಥಾತ್ ಒಬ್ಬ ಪತ್ತೆದಾರ ಎಂದರೆ ಹೀಗೆಯೇ ಇರಬೇಕು ಎಂಬಷ್ಟು. ಇದು ಕೇವಲ ಷರ್ಲಾಕ್ ಹೋಮ್ಸ್ ಮಾತ್ರ ಆಗಿರದೆ ಅದ್ಯಾವ ಭಾಷೆಯ ಸಿನಿಮಾವೇ ಆಗಿರಲಿ ಪತ್ತೆದಾರ ಅಂದ್ರೆ ಇದೇ ದಿರಿಸು.

ಪ್ರೇಮದ ಕಾಣಿಕೆ ಸಿನಿಮಾದ ಮೊದಲ ದೃಶ್ಯ ನೆನಪಿದೆಯೇ?
ಸಿನಿಮಾ ಅಂತ ಬಂದಾಗ, ಒಬ್ಬ ವಿಲನ್ ಕೂಡಾ ಇಂಥಾ ದಿರಿಸನ್ನೇ ಧರಿಸುತ್ತಾನೆ. ಪ್ರಮುಖವಾಗಿ ಒಬ್ಬ ವಿಲನ್‌ಗೆ ಈ ಹ್ಯಾಟ್ ಮುಖ ಮುಚ್ಚಲು ಬಳಕೆಯಾಗುತ್ತದೆ. ಪ್ರೇಮದ ಕಾಣಿಕೆ ಸಿನಿಮಾದ ಮೊದಲ ದೃಶ್ಯ ನೆನಪಿದೆಯೇ? ಸಿನಿಮಾದ ನಾಯಕನೇ ಆದರೂ ಕೊಲೆಗಾರನಾಗಿ ಕಾಣಿಸಿಕೊಳ್ಳುವ ಆ ದೃಶ್ಯದಲ್ಲಿ, ನಾಯಕನ ದಿರಿಸಿನಲ್ಲಿ ಹ್ಯಾಟ್ ಇದೆ. ಇಂಥಾ ಹ್ಯಾಟ್ ಅನ್ನು ಕೌಬಾಯ್ ಹ್ಯಾಟ್ ಎಂದೂ ಹೇಳುತ್ತಾರೆ. ಕ್ಲಿಂಟ್ ಈಸ್ಟ್ ವುಡ್ ಎಂಬ ಖ್ಯಾತ ನಟನ Good Bad Ugly ಸಿನಿಮಾ ನೆನಪಿಸಿಕೊಂಡರೆ ಒಂದು ಅಂದಾಜು ಬರುತ್ತದೆ. ಬೇಡಾ ಬಿಡಿ, ಅಲ್ಲೆಲ್ಲೋ ಏಕೆ ಹೋಗೋದು, ಬೆಟ್ಟದ ಹುಲಿ ಸಿನಿಮಾದ "ಮರೆಯದಿರು ಸ್ನೇಹ' ಹಾಡನ್ನು ನೆನಪಿಸಿಕೊಳ್ಳಿ. ಅಲ್ಲೊಂದು ಕುದುರೆ ಇರಲೇಬೇಕು, ಮಿಕ್ಕೆಲ್ಲಾ ದಿರಿಸಿನ ಜೊತೆ Hat is a must.

ವಿದ್ಯಾರ್ಥಿ ದೆಸೆಯ ಒಂದು ಹಂತ ಮುಗಿಯಿತು ಎಂಬ ಸಂತಸ
ಏನೋ ಒಂದು ರಹಸ್ಯವನ್ನು ಜನರ ಮುಂದೆ ಬಿತ್ತರಿಸಬೇಕು, surprise ಎಂದು ನುಡಿಯುತ್ತಾ ಎಲ್ಲರ ಮುಖದ ಮೇಲಿನ ಸಂತಸವನ್ನು ಕಾಣಬೇಕು ಎನ್ನುವ ಸನ್ನಿವೇಶದಲ್ಲಿ Hats On ಎಂದು ಬಳಸುತ್ತಾರೆ. ಗ್ರ್ಯಾಜುಯೆಟ್ ಆಗುವ ವಿದ್ಯಾರ್ಥಿ ಜೀವನದ ಅವಿಭಾಜ್ಯ ಎಂದರೆ graduation ದಿನ. ಅಂದಿನ ದಿರಿಸಿನಲ್ಲಿ ಮುಖ್ಯವಾದುದು ಒಂದು ಗೌನ್ ಮತ್ತೊಂದು ಹ್ಯಾಟು. ಗ್ರಾಜುಯೇಟ್ ಆಗಿದ್ದೀರಿ ಎಂದು ಅನೌನ್ಸ್ ಮಾಡಿದ ಮರುಕ್ಷಣವೇ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯ ಒಂದು ಹಂತ ಮುಗಿಯಿತು ಎಂಬ ಸಂತಸದಲ್ಲಿ ತಮ್ಮ ಹ್ಯಾಟ್ ಅನ್ನು ಹಾರಿಸುತ್ತಾರೆ. ಇದೊಂದು ವಿಜಯದ ಸಂಕೇತವಾಗಿಯೂ ನೋಡಬಹುದು ಅಂತಾಯ್ತು.

ನೀವು ಯಾರಿಗೆ ಹ್ಯಾಟ್ಸ್ ಆಫ್ ಹೇಳುವಿರಿ?
ಇಷ್ಟೆಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ಕಂಡ ಮೇಲೆ, ಈಗ ನಿಮ್ಮ ಸರದಿ. ನಿಮ್ಮ ಜೀವನದಲ್ಲಿನ ಹ್ಯಾಟ್ಸ್ ಆಫ್ ಸಂದರ್ಭ ಯಾವುದು? ಈ ಪ್ರಶ್ನೆಯನ್ನು ಎರಡು ಬಗೆಯಲ್ಲಿ ಅರ್ಥೈಸಿಕೊಳ್ಳಿ. ಮೊದಲನೆಯದ್ದು ನೀವು Hats Off ಪಡೆದಿದ್ದು. ಎರಡನೆಯದ್ದು ನೀವು Hats Off ಎಂದಿದ್ದು. ಈ ಎರಡನೆಯ ಪ್ರಶ್ನೆಯನ್ನು ಉತ್ತರಿಸುವ ಮುನ್ನ ಒಂದು ವಿಷಯ. ನೀವು ಹ್ಯಾಟ್ಸ್ ಆಫ್ ಎಂದು ಹೇಳಬೇಕು ಎಂದುಕೊಂಡ ಸಂದರ್ಭ ಬರಲಿಲ್ಲ ಎನಿಸಿದ್ದರೆ, ನಿಮ್ಮ ಪ್ರತಿಕ್ರಿಯೆಯ ಮೂಲಕ ಇಲ್ಲಿ ಸಲ್ಲಿಸಬಹುದು. ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನನ್ನ ಹ್ಯಾಟ್ಸ್ ಆಫ್.

English summary
Srinath Bhalle Column: Why lift a hat when giving an act of commendation, respect or credits? Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X