ಶ್ರೀನಾಥ್ ಭಲ್ಲೆ ಅಂಕಣ: ನಿಮ್ಮ ನಗುವಿನ ಸ್ವರೂಪ ಎಂಥದ್ದು ಅಂತ ಏನಾದ್ರೂ ಗೊತ್ತೇ?

ನಗುವಿನಲ್ಲಿ ಎಷ್ಟು ವಿಧ ಅಂತ ಕೇಳಿದರೆ ಉತ್ತರ ಹೇಗೆ ಕೊಡಬೇಕು? ಹೀಗೆ ಹೇಳಿದರ ಉದ್ದೇಶ ಏನು ಅಂದ್ರಾ? ಚಿಕ್ಕ ಉದಾಹರಣೆ ಹೇಳ್ತೀನಿ. ಮಹಾಭಾರತದಲ್ಲಿ ಎಷ್ಟು ಪರ್ವಗಳಿವೆ ಅಂದರೆ ಏನು ಉತ್ತರ ಕೊಡ್ತೀರಾ? ಅಥವಾ ರಾಮಾಯಣದಲ್ಲಿ ಎಷ್ಟು ಕಾಂಡಗಳಿವೆ ಅಂದ್ರೆ ಏನು ಉತ್ತರ ಕೊಡ್ತೀರಾ? ಎರಡೂ ಪ್ರಶ್ನೆಗಳಿಗೆ ಒಂದು ಸಂಖ್ಯೆಯನ್ನು ತಾನೇ ಹೇಳಿ ಉತ್ತರ ಕೊಡೋದು? ಈ ಯಾವುದೇ ಪ್ರಶ್ನೆಗೆ "ಅವು ಯಾವುವು?' ಅಂತ ಪ್ರಶ್ನೆ ಮುಂದುವರೆಸಿದರೆ ಅದು ಬೇರೆ ವಿಷಯ.

ಇದೇ ಲಾಜಿಕ್ ಅನ್ನು 'ನಗುವಿನಲ್ಲಿ ಎಷ್ಟು ವಿಧ?' ಎಂದರೆ ಉತ್ತರವೇನು? ಹೋಗಲಿ ಬಿಡಿ, ಸರಳವಾಗಿ ಒಂದು ಪ್ರಶ್ನೆ ಕೇಳುವಾ. ನಿಮ್ಮ ಜೀವನದಲ್ಲಿ ಎಷ್ಟು ರೀತಿ ನಗುವನ್ನು ಕಂಡಿದ್ದೀರಿ?

ಬಿದ್ದೂ ಬಿದ್ದೂ ನಗು ಅಂತ ಏನೇನೋ ಕಂಡಿರುತ್ತೇವೆ
ವಾಹ್! ಬಹಳ ಸುಲಭ. ಪಕಪಕ ನಗು, ಕಿಲಕಿಲ ನಗು, ಅಟ್ಟಹಾಸದ ನಗು, ಮುಗುಳ್ನಗು, ಹೂನಗು, ಕಿರುನಗು, ಒಣನಗು, ಪೇಲವನಗು, ಹೊಟ್ಟೆಹುಣ್ಣಾಗುವ ನಗು, ಬಿದ್ದೂ ಬಿದ್ದೂ ನಗು ಅಂತ ಏನೇನೋ ಕಂಡಿರುತ್ತೇವೆ. ಒಬ್ಬರೇ ಎಲ್ಲವನ್ನೂ ಕಂಡಿದ್ದಾರೋ ಗೊತ್ತಿಲ್ಲ, ಯಾಕೆ ಅಂದ್ರೆ ಎಷ್ಟು ರೀತಿ ನಗು ಇದೆ ಅಂತ ಗೊತ್ತಿದ್ರೆ ತಾನೇ ಅಷ್ಟನ್ನೂ ಕಂಡಿದ್ದಾರಾ ಅಂತ ಹೇಳೋದಕ್ಕೆ? ಹಾಗೇ ಸುಮ್ಮನೆ ಒಂದು ರೌಂಡ್ ಹೋಗಿ ಬರೋಣ ಬನ್ನಿ, ಯಾರ್ಯಾರು ಯಾವ ರೀತಿ ನಗ್ತಾರೆ ಮತ್ತು ಯಾವ ಸಂದರ್ಭದಲ್ಲಿ ಅಂತ ನೋಡಿಕೊಂಡು ಬರುವುದಕ್ಕೆ.

Srinath Bhalle Coumn: Do you know what the nature of your laugh is?


ಇಲ್ಲೊಬ್ಬ ಕೆಟ್ಟ ಮನುಷ್ಯ ಇದ್ದಾನೆ ನೋಡಿ. ತನ್ನೆಲ್ಲಾ ಪ್ಲಾನ್ ಅನ್ನು ನುಚ್ಚುನೂರು ಮಾಡಿ, ತನ್ನೆಲ್ಲಾ ಅನ್ಯಾಯದ ಸಾಮ್ರಾಜ್ಯವನ್ನು ಬುಡಮೇಲು ಮಾಡಿದವನನ್ನು ಅವನ ಕಡೆಯ ಜನ ಹಿಡ್ಕೊಂಡ್ ಬಂದಿದ್ದಾರೆ. ಸೇಡಿಗಾಗಿ ಬಹಳ ದಿನದಿಂದ ಕಾದಿದ್ದ ಅನ್ನಿಸುತ್ತೆ, ಈಗ ಸಮಯ ಒದಗಿ ಬಂದಿದೆ ಎಂಬ ಅತೀವ ಸಂತಸದಿಂದ ಗಹಗಹಿಸಿ ನಗುತ್ತಿದ್ದಾನೆ. ಇದೊಂಥರಾ ಗಬ್ಬರ್ ಸಿಂಗ್ ನಕ್ಕಂತೆ. ಅಥವಾ ಅಲೆ ಅಲೆಯಾಗಿ ತೂಗುದೀಪ ಶ್ರೀನಿವಾಸ್ ನಕ್ಕ ಹಾಗೆ.

ವಿಪರೀತ ನಗು ಅಥವಾ ಅಳು ಒಳಿತಲ್ಲ
ಕೆಲವೊಮ್ಮೆ ಪರಿಸ್ಥಿತಿಗಳು ಹೆಂಗಪ್ಪಾ ಅಂದ್ರೆ ಇತ್ಲಾಗೆ ಅತೀವ ಸಂತೋಷವೂ ಅಲ್ಲಾ, ಅತ್ಲಾಗೆ ಅತೀವ ದುಃಖವೂ ಅಲ್ಲ. ಅತೀ ಸಂತಸದಲ್ಲಿ ಬೇಜಾನ್ ಕಣ್ಣೀರು ಬರುತ್ತೆ. ಅತೀ ದುಃಖದಲ್ಲಿ ಇದೇನ್ಲಾ ನಿನ್ನ ಜೀವನಾ ಅಂತ ತನ್ನ ಬಗ್ಗೆ ತಾನೇ ನಗುವ ಹಾಗೆ ಆಗಲೂಬಹುದು. ಪ್ರತ್ಯಕ್ಷವಾಗಿ ಇಂಥಾ ಪರಿಸ್ಥಿತಿಯಲ್ಲಿ ನಾನ್ಯಾರನ್ನೂ ಕಂಡಿಲ್ಲ ಆದರೆ ಸಾಕಷ್ಟು ಸಿನಿಮಾಗಳಲ್ಲಿ ಕಂಡಿದ್ದೀನಿ. ಈ ವಿಪರೀತ ನಗು ಅಥವಾ ಅಳು ಒಳಿತಲ್ಲಾ ಅಂತ ದೊಡ್ಡವರು ಹೇಳ್ತಾರೆ. ಈಗ ಅಳುವನ್ನು ಅತ್ಲಾಗೆ ಬಿಡಿ. ಕೆಲವೊಮ್ಮೆ ಹಾಸ್ಯದ ಸನ್ನಿವೇಶ ಇನ್ನೆಷ್ಟರ ಮಟ್ಟಿಗೆ ಇರುತ್ತದೆ ಅಂದ್ರೆ ನಿಲ್ಲಿಸಲೇ ಆಗದಷ್ಟು, ಬಿದ್ದೂ ಬಿದ್ದೂ ನಗುವಷ್ಟು. ಅಂಥಾ ನಗುವಿನಿಂದ ಕಣ್ಣಲ್ಲಿ ನೀರು ಹರಿಯುವಷ್ಟು. ಗಂಟಲು ಕಟ್ಟಿ ಕೆಮ್ಮು ಬರುವಷ್ಟು. ಇದನ್ನು hysterical laughter ಅಥವಾ ಹುಚ್ಚೆದ್ದ ನಗೋದು ಅಂತ ಹೇಳುತ್ತಾರೆ.

Recommended Video

      CSk ಪ್ರೆಸ್ಸ್ ಮೀಟ್ ನಲ್ಲಿ ಆಗಿದ್ದು ಏನು ? | Oneindia Kannada

      ನಿಮಗೆ ಕಿಸಕ್ಕನೆ ನಗೋದಕ್ಕೆ ಬರುತ್ತಾ? ಹೀಗೊಂದು ಸನ್ನಿವೇಶ. 'ದೂರ್ವಾಸ ಮುನಿಯಂಥಾ ಅಪ್ಪ, ಮುಖದ ಮೇಲೆ ಸಾಸಿವೆ ಚೆಲ್ಲಿದರೆ ಚಟಚಟ ಅಂತ ಸಿಡಿದೇ ಹೋಗುತ್ತದೆ ಎನಿಸುವ ಮುಖಭಾವದ ಅಪ್ಪ, ಒಮ್ಮೆ 'ಮನೆಯಲ್ಲಿ ದುಂದು ಖರ್ಚು ಜಾಸ್ತಿ ಆಯ್ತು' ಅಂತ ಸಿಟ್ಟು ಮಾಡಿಕೊಂಡು, ಗಾಡಿ ಕೀ ತೊಗೊಂಡ್ ಎಲ್ಲಿಗೋ ಹೊರಟೇಬಿಟ್ಟರು. ಅರ್ಧ ಗಂಟೆಗೇ ಹ್ಯಾಪು ಮೊರೆ ಹಾಕ್ಕೊಂಡ್ ಬಂದು "ಟ್ರಾಫಿಕ್ ಪೊಲೀಸಿನವರು ಹಿಡ್ಕೊಂಡ್ರು. ಜೇಬಲ್ಲಿ ಲೈಸೆನ್ಸ್ ಇಲ್ಲಾ, ತಲೆ ಮೇಲೆ ಹೆಲ್ಮೆಟ್ ಇಲ್ಲಾ ಅಂತ ಐನೂರು ರೂಪಾಯಿ ಫೈನ್ ಕಟ್ಟಿ ಬಂದೆ' ಅಂದಾಗ ಅಮ್ಮ ಕಿಸಕ್ಕನೆ ನಕ್ಕಳು.

      ವಿದ್ಯಾರ್ಥಿಗಳು ಕಿಸಕ್ಕನೆ ನಗ್ತಾರೆ
      ಈ ಕಿಸಕ್ಕನೆ ನಗುವುದು ಸಾಮಾನ್ಯವಾಗಿ ಎಲ್ಲಿ ಕಾಣಬಹುದು? ಶಾಲೆಯಲ್ಲಿ ಪಾಠ ಮಾಡುವಾಗ ಏನೋ ಹೇಳಲು ಹೋಗಿ ಬಾಯಿ ತಪ್ಪಿ ಟೀಚರ್ ಏನೋ ನುಡಿದಾಗ, ವಿದ್ಯಾರ್ಥಿಗಳು ಅದಕ್ಕೆ ಕಿಸಕ್ಕನೆ ನಗ್ತಾರೆ, ಹಿರಿಯರ ಕೆಲವು ನಡೆಗಳು ಕಿರಿಯರು ಕಿಸಕ್ಕನೆ ನಗುವಂತೆ ಮಾಡುತ್ತದೆ. ಗಂಡು ಹುಡುಗರ ಪೋಲಿ ಜೋಕಿಗೆ ಹೆಣ್ಣು ಮಕ್ಕಳು ಕಿಸಕ್ಕನೆ ನಗುತ್ತಾರೆ. ಹೀಗೆ ಸನ್ನಿವೇಶಗಳು ಅನೇಕ. ಕೆಲವು ಬಾರಿ ಇದು ಕೀಟಲೆಯಾದರೆ ಹಲವು ಬಾರಿ ಹಿರಿಯರಿಗೆ ಅವಮಾನ ಆಗುವ ಸಂಭವನೀಯತೆಯೇ ಜಾಸ್ತಿ.

      ಒಂದು ಸಂಜೆ ಕಚೇರಿಯಿಂದ ಮೋಹನನು ಬೇಗನೆ ಮನೆಗೆ ಹೊರಟಾಗ, 'ಏನು ಸ್ಪೆಷಲ್' ಊ? ಅಂತ ಅರ್ಥಗರ್ಭಿತವಾಗಿ ನಕ್ಕ ಸಹೋದ್ಯೋಗಿಯತ್ತ ವಿಷಾದದ ನಗೆ ನಕ್ಕು ಮೋಹನ ನುಡಿದಿದ್ದ 'ಇಷ್ಟು ದಿನದಿಂದ ಅತ್ತೆ- ಸೊಸೆ ಮಧ್ಯೆ ನಡೀತಿದ್ದ ಶೀತಯುದ್ಧ ಇಂದು ಕುರುಕ್ಷೇತ್ರ ಯುದ್ಧವಾಗಿದೆ. ಒಬ್ಬರು ಪೂರ್ವಕ್ಕೆ ಮತ್ತೊಬ್ಬರು ಪಶ್ಚಿಮಕ್ಕೆ ಮುಖ ಮಾಡ್ಕೊಂಡ್ ಕೂತಿದ್ದಾರೆ. ತಲೆಗಳು ಉರುಳೋ ಮುನ್ನ ಮನೆ ಸೇರಬೇಕು' ಎಂದಾಗ ಆ ಸಹೋದ್ಯೋಗಿ ಪೆಚ್ಚಾಗಿ ನಕ್ಕ.

      ಅವಳ ಮನಸ್ಸು ನೂರನೆಯ ಬಾರಿ ನುಡಿದಿತ್ತು
      ಮತ್ತೊಮ್ಮೆ ತನ್ನ ದಪ್ಪನೆಯ ಗಾಜಿನ ಕನ್ನಡಕವನ್ನು ಸರಿಪಡಿಸಿಕೊಂಡು, ಮತ್ತೊಮ್ಮೆ ಸೆರಗಿನ ಪಿನ್ ಸರಿಯಾಗಿದೆಯಾ ಎಂದು ನೋಡಿಕೊಂಡು, ಕನ್ನಡಿಯ ಮುಂದೆ ನಿಂತಾಗ ನಾಚಿ ನಗಲಿಲ್ಲ ಆ ತುಟಿಗಳು. ಅಲ್ಲಿದ್ದುದು ಬರೀ ಒಣನಗು ಅಷ್ಟೇ. ತಾ ಸುಂದರಿಯಲ್ಲಾ ಅಂತ ಅವಳ ಮನಸ್ಸು ನೂರನೆಯ ಬಾರಿ ನುಡಿದಿತ್ತು. ಈ ನೂರು ಬಾರಿ ಕಳೆದ ಒಂದೇ ಗಂಟೆಯಲ್ಲಿ ಎಂಬುದು ಗಮನಾರ್ಹ. ಬಂದ ಹುಡುಗನು, ಇವಳತ್ತ ನೋಡಿ, ವ್ಯಂಗ್ಯವಾಗಿ ನಕ್ಕು, ಅವಳ ತಂಗಿಯನ್ನು ನೋಡಿ ಒಪ್ಪಿ ಹೊರ ನಡೆದಾಗ, ಕೃಷ್ಣಸುಂದರಿಯ ಹೃದಯ ಅತ್ತಿತ್ತು. ಆದರೂ ಬಲವಂತದ ನಗೆಯನ್ನು ನಕ್ಕು ತಂಗಿಯನ್ನು ನಸುನಗುತ್ತಲೇ ಹಾರೈಸಿದ್ದಳು.

      ಗಂಡಿನ ಮನಸ್ಸನ್ನು ಸೆಳೆಯುತ್ತಾಳೆ ಹೆಣ್ಣು
      "ಮುಸಿಮುಸಿ ನಗುತಾ ಮನಸೆಳೆದಾಗ, ನಾಯಿಯ ಹಾಗೆ ಹಿಂಬಾಲಿಸುವೆ, ತಾಳಿ ಕಟ್ಟುವೆ, ಕೆಟ್ಟುಹೋಗುವೆ, ಗುಲಾಮನಂತೆ ಕೈಯಿ ಕಟ್ಟುವೆ' ಅಪರಾಧಿ ಚಿತ್ರದ ಈ ಹಾಡನ್ನು ಕೇಳಿದ್ದೀರಾ? ಹಾಡಿನ ಸಾಲುಗಳಲ್ಲಿ ಒಂದು ಜೀವನವನ್ನೇ ಕಟ್ಟಿಕೊಟ್ಟಿದ್ದಾರೆ ನೋಡಿ ಸಾಹಿತಿಗಳು. ಈ ಎಲ್ಲಾ ಹಂತಗಳಿಗೆ ಮೂಲ "ಮುಸಿಮುಸಿ' ನಗು. ಈ ನಗುವಿನಿಂದ ಗಂಡಿನ ಮನಸ್ಸನ್ನು ಸೆಳೆಯುತ್ತಾಳೆ ಹೆಣ್ಣು. ಆದರೆ ಎಷ್ಟೋ ಸಾರಿ ಈ ಮುಸಿಮುಸಿ ನಗು ನಕ್ಕು, ಆ ಗಂಡು ಹಿಂದೆ ಬಿದ್ದರೆ, 'ನನಗೆ ನಿನ್ನ ಬಗ್ಗೆ ಆ ಭಾವನೆ ಇರಲಿಲ್ಲ' ಎಂದು ಮತ್ತೊಬ್ಬರನ್ನು ಕಟ್ಟಿಕೊಂಡು ಹೋದಾಗ, ಈ ಗಂಡನ್ನು ಕೈ ಹಿಡಿದು ಕಾಪಾಡುವುದೇ ಮಲ್ಯ ದ್ರವ. ಅದೇನೋ ಗೊತ್ತಿಲ್ಲಪ್ಪ, ಬಯಸಿದ ಹೆಣ್ಣು ಸಿಗದಿದ್ರೆ ಹೆಂಡ ಕುಡೀತಾರೆ. ಬಯಸಿದ ಸಿಕ್ಕ ಮೇಲೂ ಹೆಂಡ ಕುಡಿದು ಅದೇ ಹುಡುಗಿ ಬಾಯಲ್ಲಿ ಉಗಿಸಿಕೊಳ್ತಾರೆ. ಯಾವನೀಗ್ ಗೊತ್ತು?

      ನಗುವಿಗೆ ಹೂನಗೆಯ ಮುತ್ತನೊಂದನು ನೀಡಬಲ್ಲೆ
      ಅವನು ತನ್ನ ಬಾಳ ಪುಟದಲ್ಲಿ ಬರೆದ ಪುಟವೊಂದು ಹೀಗಿತ್ತು 'ಆ ಮೋಹಕವಾದ ನಗುವನ್ನು ಕಂಡು ಆನಂದತುಂದಿಲನಾದೆ. ಒಬ್ಬರು ಅದು ಹೇಗೆ ಅಷ್ಟು ಚೆನ್ನಾಗಿರಲು ಸಾಧ್ಯ? ಆ ಗುಳಿಕೆನ್ನೆಯಲ್ಲಿ ಅದೇನು ಸೌಂದರ್ಯ ಇತ್ತೋ ಗೊತ್ತಿಲ್ಲ, ಬಿದ್ ಹೋದೆ. ಆ ಗುಳಿಗಳಲ್ಲಿ ಗಿಳಿ ಕುಡಿಯೋಷ್ಟು ನೀರು ತುಂಬಬಹುದು ಅನ್ನಿಸುತ್ತೆ. ಆದರೆ ತೊಂದರೆ ಇರುವುದೇ ಇಲ್ಲಿ. ಎಡಗೆನ್ನೆಯ ಗುಳಿಯಲ್ಲಿ ನೀರು ತುಂಬಿದಲ್ಲಿ, ಬಲಗೆನ್ನೆಯ ಗುಳಿಯಲ್ಲಿ ನೀರು ತುಂಬಲಾಗದು. ಹಾಗೆಯೇ ಬಲಗೆನ್ನೆಯ ಗುಳಿಯಲ್ಲಿ ನೀರು ತುಂಬಲು ಎಡಗೆನ್ನೆ ವಾಲಿರುತ್ತದೆ, ಹೇಗೆ ನೀರ ತುಂಬಲಿ? ಈ ಮುಗ್ದ ನಗುವಿಗೆ ಹೂನಗೆಯ ಮುತ್ತನೊಂದನು ನೀಡಬಲ್ಲೆ ಅಷ್ಟೇ. ವರ್ಷಕ್ಕಿಂತಾ ಕಡಿಮೆ ಅವಧಿಯ ಈ ಸಂಬಂಧ ಯಾವ ಹೆಸರನ್ನಿಡೋದು? ಬೆಲೆಕಟ್ಟಲಾಗದ ಆ ನಗುವನ್ನು ನನ್ನಿಂದ ದೂರ ಮಾಡಿದ್ದು ಅವಳಪ್ಪ. ಸ್ನೇಹಿತನೇ ಇರಬಹುದು ಆದರೆ ವಿದೇಶಕ್ಕೆ ಹಾರುವ ಮುನ್ನ ಆ ಒಂದು ವರ್ಷದ ಕೂಸನ್ನು ನನ್ನ ಕೈಗೆ ಕೊಟ್ಟು ಹೋಗಿದ್ರೆ, ಖಂಡಿತ ರಾಜಕುಮಾರಿಯಂತೆ ಸಾಕುತ್ತಿದ್ದೆ"

      ಗೌತಮಬುದ್ಧ ಬೀರಿದ್ದು ಮಂದಹಾಸ
      ನಗು ಎಂಬುದು ಜೀವನದ ಒಂದು ದಿವ್ಯ ಔಷಧ. ಎಷ್ಟೋ ಮಂದಿಯ ಜೀವನದಲ್ಲಿ ಈ ನಗು ಎಂಬುದೇ ಮಾಯವಾಗಿರುತ್ತದೆ. ಹಲವೊಮ್ಮೆ ಕೆಲವರ ಎರಡು ತುಟಿಗಳು ಕೇವಲ ಹಲ್ಲು ಉಜ್ಜುವಾಗ ಮತ್ತು ಊಟ, ತಿಂಡಿ ಮಾಡುವಾಗ ಮಾತ್ರ ತೆರೆದುಕೊಳ್ಳುತ್ತದೆ. ಮಿಕ್ಕೆಲ್ಲಾ ಸಮಯದಲ್ಲಿ ಆ ಎರಡು ತುಟಿಗಳ ನಡುವೆ ಹೆಚ್ಚುಕಮ್ಮಿ ಒಂದು ಸರಳರೇಖೆಯೇ ಇರುತ್ತದೆಯೇ ವಿನಃ ಬೇರಾವ ರೀತಿಯ ರೇಖೆಗಳೂ ಮೂಡಿರಲಾರದು. ವಿಶ್ವ ನಗು ದಿನ ಎಂಬ ಒಂದು ದಿನವೇ ಮಹಾ ದುರಂತ. ಉತ್ತಮ ಆರೋಗ್ಯಕ್ಕೆ ಹತ್ತಾರು ಜನ ಒಂದೆಡೆ ಸೇರಿ ಜೋರಾಗಿ ನಗುವುದು ಮಗದೊಂದು ದುರಂತ. ನಗು ಎಂಬುದು ಜೀವನದ ಉಸಿರಾಗಬೇಕು. ಅದಕ್ಕೆಂದೇ ಒಂದು ದಿನ ಬೇಕೇ?

      ಮೂವತ್ತೆರಡು ಹಲ್ಲುಗಳನ್ನು ತೋರಿಯೇ ನಗಬೇಕಿಲ್ಲ. ಮೊನಾಲಿಸಾ ಚಿತ್ರಪಟದಲ್ಲಿ ಆಕೆ ಹಲ್ಲು ಬಿರಿದು ನಕ್ಕಿಲ್ಲ. ಗೌತಮಬುದ್ಧ ನಕ್ಕಿದ್ದು ಯಾರೂ ನೋಡಿಲ್ಲ ಎಂದೇ ಉಲ್ಲೇಖವಿದೆ. ಅಲ್ಲೊಂದು ಮುಗುಳ್ನಗೆಯೂ ಇಲ್ಲ ಬದಲಿಗೆ ಅಲ್ಲಿರುವುದು ಮಂದಹಾಸ. ಮಕ್ಕಳಿರುವಾಗಿನ ಕಿಲಕಿಲ ನಗು, ಸ್ನೇಹಿತರ ಜೊತೆ ಇದ್ದಾಗಿನ ಮುಕ್ತ ನಗು, ಕಚೇರಿಗಳಲ್ಲಿ ಗಂಭೀರ ನಗು, ಸಂಸಾರದಲ್ಲಿ ಮನಸ್ಸು ಬಿಚ್ಚಿದ ನಗು, ಜಗದ ಹುಚ್ಚರನ್ನು ಕಂಡಾಗಿನ ಸುಪ್ತ ನಗು, ಕೊನೆಯಲ್ಲಿ ಯಾರ ಹಂಗಿಗೂ ಸಿಲುಕದೆ ಹರಿಯ ಪಾದ ಸೇರುವ ಮುನ್ನ ಸಂತೃಪ್ತ ನಗು ನಮ್ಮದಾಗಲಿ. ಏನಂತೀರಾ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+