• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗುವೆಂಬ ಈ ವಕ್ರರೇಖೆಯಲ್ಲಿ ಏನೆಲ್ಲಾ ಅಡಗಿದೆಯಲ್ಲ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಮೊದಲಿಗೆ ಜಾಮೆಟ್ರಿ ವಿಷಯ ತೆಗೆದುಕೊಳ್ಳೋಣ. ಗೆರೆಗಳಿಲ್ಲದ ಜಾಮೆಟ್ರಿಯೇ ಎಂಬ ಅನಿಸಿಕೆ ಬರೋದು ಸಹಜ. ಎಲ್ಲ ರೀತಿ ಕೋನಗಳು, ತ್ರಿಭುಜಗಳು, ಚತುರ್ಭುಜದಿಂದ ಆರಂಭವಾಗಿ ಎಷ್ಟು ಭುಜಗಳು ಸಾಧ್ಯವೋ ಎಲ್ಲವೂ, ಹೀಗೆ ಪ್ರತೀ ವಿಷಯದಲ್ಲೂ ಗೆರೆಗಳು ಇದ್ದೇ ಇವೆ. ಇವೆಲ್ಲವೂ ಒಂದೆಡೆಯಾದರೆ parallell (ಸಮಾನಾಂತರ) ಮತ್ತು perpendicular (ಲಂಬ) ರೇಖೆಗಳದ್ದು ಮತ್ತೊಂದು ವಿಚಾರ.

ಇಬ್ಬರ ನಡುವೆ ಯಾವುದೇ ರೀತಿ ಹೊಂದಾಣಿಕೆ ಇರದೇ ಅಥವಾ ಹೊಂದಾಣಿಕೆಯೇ ಬರದಂತೆ ಇರಬಹುದಾದ ಸನ್ನಿವೇಶಗಳನ್ನು ಸಮಾನಾಂತರ ರೇಖೆಗೆ ಹೋಲಿಸಬಹುದು. ಇಂಥ ಸಂಬಂಧಗಳನ್ನು ಹೆಚ್ಚಾಗಿ ದಂಪತಿಗಳಲ್ಲಿ ನೋಡಬಹುದು. ಇಂತಿಷ್ಟು ಗುಣಗಳು ಹೊಂದಿದ್ದರೆ ಸಂಬಂಧ ಚೆನ್ನಾಗಿ ಇರುತ್ತೆ ಎಂದು ಹೇಳಿ ಇಬ್ಬರಿಗೂ ಗಂಟು ಹಾಕಿದ್ದರೂ ಇಬ್ಬರ ನಡುವೆ ಯಾವ ಹೊಂದಾಣಿಕೆಯೂ ಇರದೇ ಹೋಗಬಹುದು. ಕನಿಷ್ಠ ಒಂದು ಅಂಶದಲ್ಲಾದರೂ ಒಂದೆಡೆ ಹೊಂದಿಕೆಯಾದರೆ ಲಂಬ ಸಂಬಂಧ ಅಂತಲೂ ಅನ್ನಬಹುದು. ಆದರೆ ಆಗಿರಲೇಬೇಕಿಲ್ಲ. ಇಲ್ಲೂ ಒಂದು ವಿಚಾರ ಹೇಳಬಹುದು. ಯಾವ ರೀತಿ ಹೊಂದಾಣಿಕೆಯೂ ಇರದಂತಹ ಎರಡು ಸಮಾನಾಂತರ ರೇಖೆ ಎಂಬ ಸಂಬಂಧದಲ್ಲಿ ಮಕ್ಕಳು ಎಂಬ ರೇಖೆಗಳು ಮೂಡಿ ಬಂದಾಗ ಆ ರೇಖೆಯಿಂದಲಾದರೂ ಇಬ್ಬರೂ ಹೇಗೋ ಒಂದೇ ಸೂರಿನಡಿ ಇರುವರೇನೋ! ಎರಡು ರೇಖೆಗಳು ಸಿನಿಮಾದಲ್ಲಿ ಈ ಸಮಾನಾಂತರ ರೇಖೆಗಳ ಮಹತ್ವವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ.

ಮನಸ್ಸಿಗೆ, ಹೃದಯಕ್ಕೆ ನಾವು ಏನೇನ್ ಕಷ್ಟ ಕೊಡ್ತೀವಿ ಗೊತ್ತಾ...

ಈಗ, ಸುಂದರ ವದನದ ಮೇಲೆ ಗೆರೆಗಳು ಯಾವಾಗ ಮೂಡುತ್ತದೆ? ಇದೆಂತಹ ಮಾತು? ವಯಸ್ಸಾದ ಮೇಲೆ ಅಲ್ಲವೇ? ನಿಜ, ವಯಸ್ಸಾದ ಮೇಲೆ ಮುಖದ ಮೇಲೆ ಗೆರೆ ಮೂಡುತ್ತದೆ ಎನ್ನುವುದಕ್ಕಿಂತ ಗೆರೆಗಳು ಮೂಡುತ್ತವೆ. ಸುಕ್ಕು ಅನ್ನೋದು ಕೂಡ ಗೆರೆಗಳೇ !

ಮನಃಪೂರ್ವಕವಾಗಿ ಜೋರಾಗಿ ನಗುವ ನಿಮ್ಮ ಮುಖದ ಚಿತ್ರವನ್ನು ಒಮ್ಮೆ ನೋಡಿಕೊಳ್ಳಿ... ಆ ಚಿತ್ರವನ್ನು ನೋಡಿದಾಗ ಅರಿವಾಗುತ್ತೆ ಮುಖದ ಮೇಲೆ ಎಷ್ಟೆಲ್ಲಾ ಗೆರೆಗಳು ಇವೆ ಅಂತ. ಮುಖ್ಯವಾಗಿ ಕಂಗಳ ಎಡ ಮತ್ತು ಬಲ ಭಾಗವನ್ನು ಗಮನಿಸಿದಾಗ, ಮಕ್ಕಳು ಸೂರ್ಯನ ಚಿತ್ರ ಬರೆದಾಗ ಎಳೆಯುವ ಗೀಟಿನಂತೆ ಕಾಣುತ್ತದೆ. ಇದನ್ನು laugh lines ಎಂದೂ ಕರೆಯುತ್ತಾರೆ. ಕೊಂಚ ಹೆಚ್ಚಾಗಿಯೇ ಒತ್ತಾಗಿ ಇದ್ದರೆ ಅದನ್ನು ಕಾಗೆ ಕಾಲು ಅಂತಲೂ ಅನ್ನುತ್ತಾರೆ.

ಕೆನ್ನೆಗಳ ಮೇಲೂ ಗೆರೆಗಳು ಕಂಡುಬರುತ್ತದೆ. "ನಕ್ಕಾಗ ಮುಖದ ಮೇಲೆ ಗೆರೆಗಳು ಮೂಡುತ್ತವೆಯೇ? ಇದನ್ನು ತೆಗೆಸಲು botox ಟ್ರೀಟ್ಮೆಂಟ್ ನಾವು ಮಾಡುತ್ತೇವೆ" ಎಂಬ ಜಾಹೀರಾತುಗಳು ಇವೆ. ಏನನ್ಯಾಯ ಅಲ್ಲವೇ?

ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಸಮಾಜಕ್ಕೂ ಹಿತವಲ್ಲವೇ?

ಯಾರನ್ನಾದರೂ ಅಚ್ಚರಿಯಾಗಿ ಭೇಟಿಯಾದಾಗ ಬಾಯಿ ಕೊಂಚ ಅಗಲವಾಗೇ ತೆರೆಯುತ್ತದೆ ಎಂದುಕೊಳ್ಳಿ. ಆ ಕ್ಷಣದ ನಿಮ್ಮ ಮುಖ ಗಮನಿಸಿದರೆ ಎರಡೂ ಬದಿಯ ಹೊಳ್ಳೆಗಳಿಂದ ಹೊರಟ ಗೆರೆಗಳು ತುಟಿಗಳ ತುದಿಯಲ್ಲಿ ಕೊನೆಗೊಳ್ಳುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಒಂದು ಗಂಟೆಯ ಆಕಾರದಂತೆ ಕಂಡುಬರುತ್ತದೆ.

ಮುಖದ ಮೇಲೆ ಗೆರೆಗಳು ಮುಖ ಗಂಟಿಕ್ಕಿದ್ದರೂ ಮೂಡುತ್ತವೆ. ಸಾಮಾನ್ಯವಾಗಿ ಯಾವುದೇ ರೀತಿಯ ಮುಖದ ಭಾವನೆಗಳೂ ಮುಖದ ಮೇಲೆ ಗೆರೆಗಳನ್ನು ಮೂಡಿಸುತ್ತವೆ. ಬೇಸರ, ಚಿಂತೆ ಇತ್ಯಾದಿಗಳು ಹಣೆಯ ಮೇಲೆ ನೆರಿಗೆ ಮೂಡಿಸುತ್ತವೆ. ಹಣೆಯ ಮೇಲಿನ ನೆರಿಗೆಗಳನ್ನು ಸಮುದ್ರದ ಅಲೆಗಳಿಗೆ ಹೋಲಿಸಬಹುದು. ಹಣೆಯ ಮೇಲಿನ ನೆರಿಗೆಗಳು ವಯಸ್ಸಾದಂತೆಯೇ ಮೂಡುತ್ತದೆ. ಚಿಂತೆ ಮಾಡಿದರೆ ಹಣೆಯ ಮೇಲೆ ನೆರಿಗೆ ಮೂಡಬೇಕು ಅಂತಿಲ್ಲ.

ಸಾಹಿತ್ಯ - ಮೂಲಕ್ಕಿಂತ ಭಿನ್ನವಾಗೋದು ಹೇಗೆ? ಏಕೆ?

ಹಣೆಯ ಮೇಲೆ, ಸರಿಯಾಗಿ ಮೂಗಿನ ಮೇಲಿನ ಮತ್ತು ಹುಬ್ಬುಗಳ ನಡುವೆ ಇರುವ ಚರ್ಮಕ್ಕೆ 'ಗ್ಲಾಬೆಲ್ಲ' ಅಂತ ಹೆಸರು. ಅಲ್ಲಿ ಮೂಡುವ ಗೆರೆಗಳನ್ನು glabellar ಗೆರೆಗಳು ಅಥವಾ ಹಣೆಯ furrows ಉಬ್ಬುಗಳು ಎನ್ನುತ್ತಾರೆ. ಏರಿದ ಹುಬ್ಬುಗಳೇ ಈ ಗೆರೆಗಳಿಗೆ ಮೂಲ ಕಾರಣ. ಇರಲಿ ಅದೆಲ್ಲಾ ಬಿಡಿ, ಆದರೆ ಈ ಗೆರೆಗಳು ಆ ಗೆರೆಗಳ ಒಡೆಯನ ಗುಣವನ್ನು ಹೇಳುತ್ತಂತೆ ಗೊತ್ತೇ?

ನಿಮ್ಮ ಮುಖವನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ... ಈ ಗ್ಲಾಬೆಲ್ಲ ಲಂಬ ಗೆರೆಗಳು ಹೇಗಿವೆ ಅಂತ ನೋಡಿಕೊಳ್ಳಿ. ಕೆಲವರಿಗೆ ಒಂದು ಗೆರೆ ಇರುತ್ತದೆ. ಕೆಲವರಲ್ಲಿ ಎರಡು ಕೆಲವರಿಗೆ ಮೂರು... ಬಲಭಾಗದಲ್ಲಿ ಒಂದು ಗೆರೆ ಇದ್ದವರು ಒಬ್ಬರ ಕಷ್ಟಕ್ಕೆ ಮರುಗುವ ಗುಣವುಳ್ಳವರಾಗಿರುತ್ತಾರೆ ಎನ್ನುತ್ತಾರೆ. ಎರಡೂ ಬದಿಯಲ್ಲಿ ಗೆರೆಗಳು ಇದ್ದವರು ಎಲ್ಲ ಕೆಲಸದಲ್ಲೂ ಕೈ ಹಾಕುವ ಮಂದಿ ಮತ್ತು ತಾವೇನು ಕೆಲಸ ಮಾಡುತ್ತಾರೋ ಅದನ್ನು ಸಂತೋಷದಿಂದ ಮಾಡುತ್ತಾರಂತೆ. ಇನ್ನು ಮೂರು ಗೆರೆಗಳುಳ್ಳವರು ಬೇಗನೆ ಯಶಸ್ಸು ಗಳಿಸಿ ಸೆಲೆಬ್ರಿಟಿ ಆಗ್ತಾರಂತೆ. ಗೆರೆಗಳೇ ಇಲ್ಲದವರು ಒಳಗೆ ದುಃಖ ಅದುಮಿಟ್ಟುಕೊಂಡವರಾಗಿರುತ್ತಾರಂತೆ. ಬಹುಶಃ ಈ ವಿಚಾರಗಳನ್ನು face readingನವರು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂದುಕೊಳ್ಳುತ್ತೇನೆ.

ಇದೇನೋ ಸಣ್ಣದಾಗಿರುವ ಉದ್ದನೆಯ ಗೆರೆಗಳ ವಿಷಯವಾಯ್ತು. ಆದರೆ ಢಾಳಾದ ಹಣೆಯ ಮೇಲೆ ಇರೋ ಅಡ್ಡಗೆರೆಗಳ ಬಗ್ಗೆ ಏನಂತೆ ವಿಷಯ?? ಇದೇ ನಮ್ಮೆಲ್ಲರ ಹಣೆಬರಹ!! ಚತುರ್ಮುಖ ಬ್ರಹ್ಮ ಗೀಚುವ ಹಾಳೆ ಈ ನಮ್ಮ ಹಣೆ !!!

ಹುಬ್ಬೇರಿಸಿದಾಗ ಈ ಗೆರೆಗಳು ಕಾಣುತ್ತವೆ. ವಯೋಸಹಜವಾಗಿ ಕಾಣುವಂಥ ರೇಖೆಗಳನ್ನು ಬದಿಗಿರಿಸಿದರೆ, ಕೆಲವರಿಗೆ ಒಂದು ಗೆರೆ ಮೂಡುತ್ತದೆ, ಕೆಲವರಿಗೆ ಎರಡು, ಕೆಲವರಿಗೆ ಮೂರು ಹೀಗೆ... ಪ್ರತೀ ಗೆರೆಗಳು ಆ ಒಡೆಯನ ಗುಣವನ್ನು ಸಾರುತ್ತವೆ. ಇವು ಕೇವಲ ಗುಣಗಳ ಬಗ್ಗೆಯೇ ಹೇಳದೆ ಆರೋಗ್ಯದ ಬಗೆಗಿನ ಮಾಹಿತಿಯನ್ನೂ ಹೇಳುತ್ತದೆ.

ಹಣೆಯ ಮೇಲೆ ಮೂಡುವ ಈ ಗೆರೆಗಳು ಒಟ್ಟು ಏಳು ಮತ್ತು ಏಳು ಗ್ರಹಗಳನ್ನು represent ಮಾಡುತ್ತದೆ ಎನ್ನುತ್ತಾರೆ.

ಲಿವರ್ ತೊಂದರೆ, ಮಧುಮೇಹ ಇತ್ಯಾದಿ ಬಗ್ಗೆ ಸೂಕ್ಷ್ಮವಾಗಿ ಅರಿಯಬಹುದಾಗಿದೆ ಎನ್ನುತ್ತಾರೆ. ಒಂದಂತೂ ನಿಜ, ಇದು ಒಂದು ವಿಜ್ಞಾನವೇ ಸರಿ. ಸರಿಯಾಗಿ ಓದಿಕೊಂಡು ಅರ್ಥೈಸಿಕೊಳ್ಳಬೇಕೇ ಹೊರತು ಸುಮ್ಮನೆ ನಾಲ್ಕು ಪುಸ್ತಕ ತಿರುವಿ ಹಾಕಿ face reading ಮಾಡ್ತೀನಿ ಅಂದ್ರೆ ಅದು ಅರೆಬರೆ ಜ್ಞಾನವೇ ಆಗುತ್ತೆ ಅಷ್ಟೇ. ಇದು ಯಾವುದೇ ಜ್ಞಾನಕ್ಕೂ ಅನ್ವಯಿಸುತ್ತದೆ ಬಿಡಿ.

ಹಣೆಯ ಅಥವಾ ಸಾಮಾನ್ಯವಾಗಿ ಮುಖದ ಮೇಲೆ ಮೂಡುವ ಗೆರೆಗಳು ವಯೋಸಹಜ ಎನ್ನುವುದಾದರೆ ಹುಟ್ಟಿನಿಂದಲೇ ಕರ್ಣನ ಕವಚದಂತೆ ನಮ್ಮೊಂದಿಗೆ ಬರುವ ಗೆರೆಗಳು ಎಂದರೆ ಹಸ್ತಗಳ ಮೇಲಿನ ಗೆರೆಗಳು. ಒಂದು ಹಸ್ತದ ಮೇಲಿನ ರೇಖೆಗಳನ್ನು ಸಾಮಾನ್ಯವಾಗಿ ನಾಲ್ಕು ಮುಖ್ಯ ಗೆರೆಗಳನ್ನಾಗಿ ನೋಡಬಹುದು. ಹೃದಯ, ತಲೆ, ಭದ್ರತೆ ಮತ್ತು ಜೀವನ. ಗೆರೆಗಳು ಉದ್ದ/ಗಿಡ್ಡ ಇರಬಹುದು, ತೆಳುಬಣ್ಣ/ಗಟ್ಟಿ ಬಣ್ಣದ್ದಾಗಿರಬಹುದು, ಗೆರೆಗಳು ತಮ್ಮಷ್ಟಕ್ಕೆ ತಾವು ಫ್ರೀಯಾಗಿ ಇರಬಹುದು ಅಥವಾ ಒಂದನ್ನೊಂದು ಹಾದು ಹೋಗಬಹುದು... ಒಂದಲ್ಲ ಎರಡಲ್ಲ ಅನೇಕ ಸಾಧ್ಯತೆಗಳು ಅನ್ನಿ. ತಕ್ಕಮಟ್ಟಿಗೆ ಅರ್ಥೈಸಿಕೊಂಡವರು ತಾವು ಹಸ್ತಸಾಮುದ್ರಿಕರು ಅಂದುಕೊಂಡು ಒಂದಷ್ಟು ಹೇಳಬಹುದು. ಕೆಲವೊಮ್ಮೆ ತಾಳೆಯಾಗಬಹುದು. ಹಲವೊಮ್ಮೆ ಇಲ್ಲದೆಯೂ ಹೋಗಬಹುದು.

ಪಾದದ ಮೇಲೂ ಗೆರೆಗಳಿದ್ದು ಹಸ್ತಸಾಮುದ್ರಿಕೆಯಂತೆ ಪಾದಸಾಮುದ್ರಿಕೆಯೂ ಇದೆ ಅಂತ ಕೇಳಿದ್ದೇನೆ. ಹಸ್ತದ ಹಿಂಬದಿಯಲ್ಲಿ ಪ್ರತೀ ಬೆರಳ ಮೇಲೂ ಹೆಚ್ಚಾಗಿ ಅಡ್ಡರೇಖೆಗಳು ಇರುತ್ತವೆ. ಅದರಲ್ಲೂ ಜಾಯಿಂಟ್ಸ್ ಇರುವ ಕಡೆ ದಟ್ಟವಾಗಿಯೇ ಕಾಣುತ್ತದೆ. ಇವುಗಳು ಬಾಗಿಲಿಗೆ hinges ಕೀಲು ಇರುತ್ತಲ್ಲ ಹಾಗೆ. ಬೆರಳನ್ನು ಬಾಗಿಸಲು ಸಹಾಯಕ. ಇನ್ನು ಚರ್ಮವನ್ನೇ ತೆಗೆದುಕೊಂಡರೆ, ಸೂಕ್ಷ್ಮವಾಗಿ ಗಮನಿಸಿದಾಗ ಎಷ್ಟೆಷ್ಟೋ ರೇಖೆಗಳು ಕಾಣುತ್ತದೆ. ಇಡೀ ದೇಹದಲ್ಲಿ ಇನ್ನೆಷ್ಟು ರೇಖೆಗಳಿವೆಯೋ ಆ ದೇವನೇ ಬಲ್ಲ.

ವಯೋಸಹಜ ಗೆರೆಗಳು ಮೂಡೋದನ್ನ ತಡೆಯೋಕೆ ಯಾರಿಂದಲೂ ಆಗುವುದಿಲ್ಲ. ಅದರ ಮೇಲೆ ನಮ್ಮ ಕಂಟ್ರೋಲ್ ಅಂತೂ ಇಲ್ಲ. ವಯಸ್ಸು ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಕ್ಕು ಮುಖದ ಮೇಲೆ ಗೆರೆಗಳನ್ನು ಮೂಡಿಸಿಕೊಳ್ಳೋಣ. ಜೀವನದಲ್ಲಿನ ಆಗುಹೋಗುಗಳ ರೇಖೆಗಳು ಸದಾ ಏರಿಳಿತವೇ. ಏರಿದಾಗ ಆನಂದವಾಗೋದು ಇಳಿಮುಖವಾದಾಗ ಬೇಸರವಾಗೋದು ಸಹಜ. ಹಾಗಂತ ಏರಿಳಿತ ಬೇಡ ಒಂದೇ ಸಮನಾಗಿರಬೇಕು ಎಂದು ಬಯಸಿದರೆ ಜೀವನ ಅನುಭವಿಸಲು ನಾವೇ ಇರೋದಿಲ್ಲ. ನಸುನಗುತ್ತಲೇ ಇದ್ದರೆ ಆನಂದದ ಗೆರೆಗಳು ಮೂಡಿ ಮೊಗ ಸುಂದರವಾಗುತ್ತದೆ.

ಏನಂತೀರಿ?

English summary
There are different lines which appear on face and also in life. Here is a small explaination regarding these lines
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X