• search

ನಾನು ಸ್ವಚ್ಛತೆ ಎಂದರೆ ದೇವರೆಂದು ನಂಬಿದ್ದೇನೆ, ನೀವು?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ವಾರಾಂತ್ಯ ಅಕ್ಕನಿಗೆ ಕರೆ ಮಾಡಿದೆ. ಏನ್ ಮಾಡ್ತಿರಬಹುದು ಅನ್ನೋದು ನನಗೆ ಚೆನ್ನಾಗಿ ಗೊತ್ತಿದ್ದರೂ "ಏನ್ ನಡೀತಿದೆ" ಅಂದೆ. "ಮನೆ ಕ್ಲೀನ್ ಮಾಡ್ತಿದ್ದೆ ಕಣೋ" ಅಂದಳು. ನನಗೆ ಬಹಳ ಅಪ್ಯಾಯಮಾನವಾದ ವಿಷಯ ಇದು. ಪ್ರತಿ ವಾರ ಇದೇ ಮೊದಲ ಪ್ರಶ್ನೆ, ಇದೇ ಉತ್ತರ ಆದರೂ ಈ ವಾರದ ಆಕೆಯ ಅದೇ ಉತ್ತರ ಕೇಳಿದ ಕೂಡಲೇ, ಇದರ ಬಗ್ಗೆ ಯಾಕೆ ಬರೀಬಾರದು ಅಂತ ಅನ್ನಿಸಿತು.

  ಸಂಪ್ರದಾಯಸ್ಥರ ಕಿವಿಗೆ Rap ಸಂಗೀತ ಏನನ್ನಿಸಬಹುದೋ ಹಾಗೆ, ಒಬ್ಬರ ಕಿವಿಗೆ ಸಂಗೀತ ಎಂಬುದು ಮತ್ತೊಬ್ಬರ ಕಿವಿಗೆ ಗದ್ದಲ ಎನಿಸಬಹುದು. ಅರ್ಥಾತ್ ಒಬ್ಬರ ಅಭ್ಯಾಸ ಅಥವಾ ಹವ್ಯಾಸ ಮತ್ತೊಬ್ಬರಿಗೆ ಏನೂ ಅನ್ನಿಸದೇ ಹೋಗಬಹುದು ಅಥವಾ ಭಯಂಕರ ಕಿರಿಕಿರಿ ಅನ್ನಿಸಬಹುದು.

  Cleanliness is next to godliness

  ಇಂಥಾ ಅಭ್ಯಾಸ / ಹವ್ಯಾಸಗಳಲ್ಲಿ ಒಂದು ಎಂದರೆ ಸ್ವಚ್ಛತೆ ಆಲಿಯಾಸ್ ಕ್ಲೀನು / ಕ್ಲೀನಿಂಗು! ನನಗೆ ಈ ಅಭ್ಯಾಸ ಸ್ವಲ್ಪ ಭಯಂಕರವಾಗೇ ಇದೆ. ನನ್ನ ಸ್ನೇಹಿತ ಈ ಹವ್ಯಾಸವನ್ನು 'ರೋಗ' ಅಂತ ಕರೀತಾನೆ.

  ನಮ್ಮೊಳಗೇ ಕರೆಂಟ್ ಆಫ್ ಆದರೆ ಮತ್ತೊಬ್ಬರಿಗೆ ಇನ್ನೇನು ಬೆಳಕು ಕೊಟ್ಟೇವು?

  ಅಂದ ಹಾಗೆ ಈ ಕ್ಲೀನಿಂಗ್ ಬಗ್ಗೆ ಹೇಳುವಾಗ ಅಪ್ಪಿತಪ್ಪಿ ಕೂಡಾ ಹಾರ್ಪಿಕ್ ಬಗ್ಗೆಯಾಗಲೀ ಅಥವಾ ಬಚ್ಚಲಮನೆಗೇ ನುಗ್ಗುವ ಅಬ್ಬಾಸ್ ಬಗ್ಗೆಯಾಗಲೀ ಮಾತನಾಡುವುದಿಲ್ಲ.

  ಅಂದೊಂದು ದಿನ ನೀಲಾಕಾಶದಲ್ಲಿ ಒಂದು ತುಣುಕೂ ಮೋಡವಿರದೆ ಚೌತಿ ಚಂದ್ರ ಶೋಭಿಸುತ್ತಿದ್ದ. ಚೌತಿ ಚಂದ್ರ ಅಂದ ಮಾತ್ರಕ್ಕೆ ವಿನಾಯಕ ಚೌತಿಯ ದಿನ ಅಂತೇನೂ ಅಲ್ಲ. it is one other ಚೌತಿ you know! ತಣ್ಣನೆ ಬೀಸುತ್ತಿದ್ದ ಗಾಳಿಗೆ ಮನ ಸೋತು ನೀಲಾಕಾಶದ ಮೇಲಿನ ಚಾಂದ್-ಕಾ-ತುಕುಡ ಮೇಲೆ ಕವನ ಬರೆಯಬಹುದಿತ್ತು. ಆದರೆ ನನ್ನ ಮನಸ್ಸಿನಲ್ಲಿ ಮೂಡಿದ್ದೇ ಬೇರೆ "ಈ ದೇವತೆಗಳೂ ಕ್ಲೀನ್ ಇಲ್ಲ. ಸ್ವಚ್ಛವಾದ ಆಕಾಶದಲ್ಲಿ ಯಾರೋ ಚಂದ್ರನನ್ನು ಅರ್ಧ ತಿಂದು ಎಸೆದು ಹೋಗಿದ್ದಾರೆ" ಅಂತ. ಇದೂ ಒಂದು ಕಲ್ಪನೆ ನಿಜ!

  Cleanliness is next to godliness

  ಇತ್ತೀಚೆಗೆ ವಾಟ್ಸಾಪ್'ನಲ್ಲಿ ಒಂದು ಜೋಕ್ ಓದಿದೆ. ಹಲವು ಬಾರಿ ಓಡಿರೋದೇ... ಎಷ್ಟೇ ಆಗಲಿ ವಾಟ್ಸಾಪ್', ಮತ್ತೆ ಮತ್ತೆ ಓಡ್ತಾ ಇರುತ್ತೆ ನೋಡಿ. ಜೋಕ್ ಇದು. ಆಗ ತಾನೇ ಒರೆಸಿದ ನೆಲದ ಮೇಲೆ ಗಂಡ ಕಾಲಿಟ್ಟ ಅಂತ ಆತನ ಹೆಂಡತಿ ಅವನನ್ನು ಕೊಲೆ ಮಾಡಿರ್ತಾಳಂತೆ. ಜಡ್ಜ್ ಪೊಲೀಸ್ ಅಧಿಕಾರಿಯನ್ನು ಕೇಳುತ್ತಾರೆ "ವಿಷಯ ತಿಳಿದ ತಕ್ಷಣ ಮನೆಗೆ ಹೋಗಿದ್ದರೂ ಆಕೆಯನ್ನು ಬಂಧಿಸಲು ತಡ ಏಕಾಯ್ತು?" ಅಂತ... ಪೊಲೀಸ್ ಅಧಿಕಾರಿ ಜಡ್ಜ್'ಗೆ ಉತ್ತರ ನೀಡುತ್ತಾನೆ "ನೆಲ ಇನ್ನೂ ಒದ್ದೆ ಇತ್ತು . . . ಒಣಗಲಿ ಅಂತ ಕಾಯ್ತಾ ಇದ್ವಿ" ಅಂತ!

  ಪಾಡಿ ಪೊಗಳಿಸಿಕೊಳ್ಳದ ಪುಂಡರಲ್ಲದವರ ಪಾಡು

  ನೆಲ ಒರೆಸೋದು ಅಂದಾಗ ರೆಡ್ ಆಕ್ಸೈಡ್ ನೆಲದ ಬಗ್ಗೆ ಹೇಳದೆ ಹೋದರೆ ಹೇಗೆ? ರೆಡ್-ಆಕ್ಸೈಡ್ ನೆಲ ಬೆಳಿಗ್ಗೆ ಒರೆಸಿ ಮಧ್ಯಾಹ್ನ ಆಗೋಷ್ಟರಲ್ಲಿ ಎಲ್ಲೆಲ್ಲೂ ಹೆಜ್ಜೆ ಗುರುತು ಕಾಣುತ್ತಾ ನೆಲ ಒರೆಸಿ ಎಷ್ಟು ವರ್ಷ ಆಯ್ತೋ ಅನ್ನೋ ಹಾಗೆ ಇರುತ್ತೆ. ಮನೆಯಾಕೆ ನೆಲ ಒರೆಸೋವಾಗ ಮಂಚದ ಮೇಲಿದ್ದವರು ಅಲ್ಲೇ, ಸೋಫಾದ ಮೇಲೆ ಇದ್ದವರು ಅಲ್ಲೇ ಇರಬೇಕಿತ್ತು. ಒಟ್ಟಿನಲ್ಲಿ ಯಾರ್ಯಾರು ಎಲ್ಲೆಲ್ಲಿದ್ದಾರೋ ಅವರು ಅಲ್ಲೇ ಇರಬೇಕು. ಅಪ್ಪಿತಪ್ಪಿ ಹೊರಗಿನಿಂದ ಬಂದವರು ಹಾಗೆ ಒಳಗೆ ನುಗ್ಗಿದರೋ ಅಷ್ಟೇ. "ಈಗ ತಾನೇ ಅಲ್ಲಿ ಒರೆಸಿದ್ದೆ. ಒಂದು ಹತ್ತು ನಿಮಿಷ ಅಲ್ಲೇ ಇರೋಕ್ಕೆ ಏನು? ಇಲ್ಲಿ ಬಂದು ಏನು ಮಾಡಬೇಕು?" ಅಂತ ಬೈಗುಳ ಸುರಿ ಮಳೆ. ಒಟ್ಟಿನಲ್ಲಿ ಹೇಳೋದಾದ್ರೆ ನೆಲ ಒರೆಸುವವರಿಗೇ ಗೊತ್ತು ಅದರ ಕಷ್ಟ. ಮನೆ ಮನೆಗೆ ಟೈಲ್ಸ್ ಬಂದ ಮೇಲೆ ಮನೆಯ ಜನಕ್ಕೇ ಅಲ್ಲದೆ ಮನೆಕೆಲಸದ 'ಸುಂದರಿ'ಗೂ ಸಂತಸವಾಯ್ತು ಅನ್ನಿ!

  Cleanliness is next to godliness

  ನನ್ನ ಸ್ವಚ್ಛತಾ ಹುಚ್ಚು ಹೇಗೆ ಎಂದರೆ ಸಿನಿಮಾ ನೋಡುವಾಗಲೂ ಕಿರಿಕಿರಿ ಆಗುವಷ್ಟು. ಗಣೇಶನ ಮದುವೆಯ ಒಂದು ಸೀನ್. ಏರ್ಪೋರ್ಟ್'ನಲ್ಲಿ ಫ್ಲೈಟ್ಟ್'ಗೆ ಕಾಯುವಾಗ ಈ ಗಣೇಶ ತನಗೆ ಬಂದ ಅಂಚೆಯ ನೋಡುವಾಗ ಆ ಲಕೋಟೆಯ ಅಂಟಿಸಿದ ಭಾಗ ಹರಿದು ಅಲ್ಲೇ ಎಸೆಯುತ್ತಾನೆ. ನನಗದು ಬಹಳಾ ಹಿಂಸೆ. ಪುನೀತ್'ರ ಒಂದು ಸಿನಿಮಾದಲ್ಲಿ, ಮನೆಗೆ ಬಂದ ನಾಯಕ ಡಿವೋರ್ಸ್ ಪೇಪರುಗಳನ್ನು ಎಸೆಯುತ್ತಾನೆ. ಆತನ ನೋವು ಏನೋ ನನಗೆ ಬೇಕಿಲ್ಲ ಆದರೆ ಪೇಪರ್ಸ್'ನ ಹಾಗೆಲ್ಲ ಎಲ್ಲೆಂದರಲ್ಲಿ ಎಸೆಯಬಹುದೇ?

  ಸ್ವಚ್ಛತೆ ಎಂಬೋದರ ಒಂದು ಪಂಕ್ತಿ ಅಥವಾ ಪಂಗಡ ಎಂದರೆ Organized ಆಗಿ ಇರೋದು. ದೊಡ್ಡಣ್ಣ 'ಬೆಳ್ಳಿಮೋಡಗಳು' ಚಿತ್ರದಲ್ಲಿ ಹೇಳುವಂತೆ "ಯಾವುದ್ಯಾವುದು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇದ್ದರೆ ಮರ್ಯಾದೆ, ಗೌರವ". ನನಗೆ ಈ ಡೈಲಾಗ್ ಬಹಳ ಇಷ್ಟ.

  ಮತ್ತೊಂದು ಸನ್ನಿವೇಶ. ಮನೆಗೆ ದಾಳಿ ಮಾಡೋ ರೌಡಿಗಳು ಮನೆಯ ಸಾಮಾನುಗಳನ್ನು ಹೊರಗೆ ಎಸೀತಾರೆ. ಆಮೇಲೆ ಯಾರೋ ಮಧ್ಯವರ್ತಿಯ ಸಹಾಯದಿಂದ ಪರಿಸ್ಥಿತಿ ಸರಿ ಹೋಗುತ್ತೆ. ಆಮೇಲೆ ಎಲ್ಲರೂ ತೆರಳುತ್ತಾರೆ. ನನ್ನ ಹಿಂಸೆ ಏನಪ್ಪಾ ಅಂದ್ರೆ "ಬೀದಿಗೆ ಬಿದ್ದ ಸಾಮಾನುಗಳನ್ನು ನೀಟಾಗಿ ಜೋಡಿಸಲು ಅವರಿಗೆ ಯಾರಾದರೂ ಸಹಾಯ ಮಾಡಿದರೋ ಇಲ್ಲವೋ?" ಅಂತ!

  ನನ್ನ ಬಂಧುವರ್ಗದಲ್ಲಿ ಒಬ್ಬರ ಮನೆಯಲ್ಲಿ ಏನಪ್ಪಾ ಅಂದ್ರೆ, ಅವರ ಮನೆಯಲ್ಲಿ ವಾರಪತ್ರಿಕೆಗಳಾದ ಸುಧಾ, ತರಂಗ ತರಿಸುತ್ತಿದ್ದರು. ಅವರ ಮನೆಗೆ ಹೋದರೆ ನನಗೆ ಅಲ್ಲಿ ಆಟ ಬಿಡಿ ಮಾತಿಗೂ ಹೆಚ್ಚು ಮಂದಿ ಇರುತ್ತಿರಲಿಲ್ಲ. ನನಗೆ ಪುಸ್ತಕ ಓದೋ ಹುಚ್ಚು. ಹೋಗುತ್ತಿದ್ದುದೇ ಭಾನುವಾರ. ಹಿಂದಿನ ವಾರದ ಪತ್ರಿಕೆ ಅಟ್ಟದ ಮೇಲೆ, ಮುಂದಿನ ವಾರದ್ದು ಇನ್ನೂ ಬಂದಿರುತ್ತಿರಲಿಲ್ಲ. ಹಾಗಾಗಿ ಅವರನ್ನು ಪುಸ್ತಕ ತೆಗೆದುಕೊಡಿ ಅಂತ ಕೇಳಿದರೆ, ಎಲ್ಲಿ ಮನೆ ಗಲೀಜಾಗುತ್ತೋ ಅಂತ ಕೊಡ್ತಾನೇ ಇರಲಿಲ್ಲ. ಭಾಳಾ ದು:ಖ ಆಗ್ತಿತ್ತು ಕಣ್ರೀ . . . ಹಾಗಂತ ಸೇಡು ತೀರಿಸಿಕೊಳ್ಳಲು ನಾನೇನೂ unorganized ಆಗಲು ಹೋಗಲಿಲ್ಲ ಬಿಡಿ.

  Cleanliness is next to godliness

  ಒಮ್ಮೆ ಸ್ಥಳೀಯ ಮಳಿಗೆಯಾದ ವಾಲ್-ಮಾರ್ಟ್'ಗೆ ಮಡದಿಯೊಡನೆ ಹೋಗಿದ್ದೆ. Rackಗಳಲ್ಲಿ ಎಲ್ಲೆಡೆ ಲಕ್ಷಣವಾಗಿ ಜೋಡಿಸಿಟ್ಟಿರುವಲ್ಲಿ ಒಂದೆಡೆ ಮಾತ್ರ ಖಾಲಿ ರಟ್ಟಿನ ಡಬ್ಬ ಕೂತಿತ್ತು ಮತ್ತು ಒಂದಷ್ಟು ಸಾಮಾನು ಅಲ್ಲಿ ಇಲ್ಲಿ ಅಂತ ಎಲ್ಲೆಲ್ಲೂ ಇತ್ತು. ನನಗೋ ಸರಿ ಕಾಣಲಿಲ್ಲ. ಖಾಲೀ ಡಬ್ಬ ಅಲ್ಲೇ ಇದ್ದ ಕಬುಗೆ ಹಾಕಿ ಮಿಕ್ಕ ಸಾಮಾನು ಸರಿಯಾದ ರೀತಿ ಜೋಡಿಸಿ ಮೇಲೆ ಸಮಾಧಾನವಾಯ್ತು. ನಂತರ ಇತ್ತ ತಿರುಗಿದರೆ ನನ್ನ ಪರಿಚಯಸ್ಥರಾದ ಒಬ್ಬರು "ಸಂಜೆ ಇಲ್ಲಿ ಕೆಲಸ ಮಾಡ್ತೀರಾ?" ಅನ್ನೋದೇ? ನನ್ನ ಹೆಂಡತಿ ನನ್ನನ್ನು ಏನಾದರೂ ಕೇಳೋ ಮುನ್ನ ಅಲ್ಲಿಂದ ಜಾಗ ಖಾಲಿ.

  ಎಲ್ಲವೂ ಇಟ್ಟೆಡೆ ಇರಬೇಕು, ಸರಿಯಾಗಿ ಇಡಬೇಕು ಎಂದೆಲ್ಲಾ ಕಿರಿಕಿರಿ ಮಾಡೋ ನನಗೆ ಎಲ್ಲಾದರೂ ಹೋದಾಗ ಕೆಲವೊಂದು ವಿಚಾರಕ್ಕೆ ಇರುಸುಮುರುಸು ಆಗೋದು ಖಂಡಿತ. ಹಾಗಿರಬಾರದು ಅಂತ ಅಂದುಕೊಂಡರೂ ಅಷ್ಟು ಬೇಗ 'ಗುಣ' ಬದಲಾಗೋಲ್ಲ ಅಲ್ಲವೇ? ಒಂದೊಮ್ಮೆ ಒಬ್ಬರ ಮನೆಗೆ ಹೋಗಿದ್ದೆ. ಮನೆ ತೋರಿಸುವ ತವಕ ಅವರದ್ದು. ಹಾಗೇ ನೋಡಿಕೊಂಡು ಅವರ ದೇವರ ಮನೆ ಕಡೆ ಹೋದೆ. ನವರಾತ್ರಿ ಆದರೂ ಗಣೇಶನನ್ನು ಬಿಟ್ಟಿರಲಿಲ್ಲ. ಹಳದಿ ಸೇವಂತಿಗೆ ಬಾಡಿ ಒಣಗಿ ಏನೇನೋ ಆಗಿತ್ತು. ಕಳೆದ ಎರಡು ವರ್ಷದಿಂದ ದೀಪ ಹಚ್ಚಲು ಗೀರಿದ್ದ ಬೆಂಕಿಕಡ್ಡಿಗಳು ಅಲ್ಲಿತ್ತು. ಇನ್ನು ಬಚ್ಚಲು ಮನೆಯ ಸಿಂಕ್... ಹೋಗಲಿ ಬಿಡಿ...

  ಕೆಲವೊಮ್ಮೆ ನನ್ನಿಂದ unexpected ಅವಘಡಗಳು ಆಗುತ್ತದೆ. ಹಿಂದೊಮ್ಮೆ ಒಂದಷ್ಟು ಸೌತೆಕಾಯಿಗಳನ್ನು ಹಸಿರು ಬಣ್ಣದ ಹಿಡಿಯ scraper ಬಳಸಿ ಸಿಪ್ಪೆ ತೆಗೆದು, ಹೆಚ್ಚಲು ಹೆಂಡತಿ ಕೈಲಿ ಕೊಟ್ಟಿದೆ. ಅಳಿಲು ಸೇವೆ ಅಂತ ನನ್ನ ಬೆನ್ನು ತಟ್ಟಿಕೊಂಡಿದ್ದು ಬೇರೆ ವಿಷಯ. ಮುಂದಿನ ಒಂದೆರಡು ನಿಮಿಷದಲ್ಲಿ ಸಿಪ್ಪೆಗಳನ್ನೆಲ್ಲ ತಿಪ್ಪೆಗೆ ಎಸೆದು ಅಡುಗೆ ಮನೆ ಕ್ಲೀನ್ ಮಾಡಿದ್ದೆ. ಅದೇನೋ ಗೊತ್ತಿಲ್ಲ, ಅವತ್ತಿಂದ ಆ scraper ಕಾಣ್ತಾನೇ! ನಿಮಗೇನಾದ್ರೂ ಗೊತ್ತೇ?

  ಮತ್ತೊಮ್ಮೆ ಹೀಗೆಯೇ ಆಯಿತು. ಒಂದಷ್ಟು ಹೀರೇಕಾಯಿ ಸಿಪ್ಪೆ ತೆಗೆದು, ಹೆಚ್ಚಿಕೊಟ್ಟು ನನ್ನ ಕೈಲಾದ ಸೇವೆ ಮಾಡಿದ್ದೆ. ಎಲ್ಲ ಲಕ್ಷಣವಾಗಿ ಕ್ಲೀನ್ ಮಾಡಿದ ಮೇಲೆ ಸಮಾಧಾನವಾಯ್ತು. ನಂತರ ನನ್ನ ಹೆಂಡತಿ ಏನೋ ಹುಡುಕ್ತಿದ್ಲು. scraper ತೊಳೆದು ಇಟ್ಟಿದ್ದೆ ಅನ್ನೋದು ಗ್ಯಾರಂಟಿ. 'ಏನು?' ಅಂದೆ. "ಹೀರೆಕಾಯಿ ಸಿಪ್ಪೆ ಎಲ್ಲಿ?" ಅನ್ನೋದೇ! ಟ್ರಾಶ್ ಮಾಡಿದೆ ಅಂದು ಬೈಸಿಕೊಂಡೆ "ಇದ್ದಿದ್ರೆ ಎರಡು ಹೊತ್ತಿಗೆ ಆರಾಮವಾಗಿ ಚಟ್ನಿಗೆ ಆಗಿರೋದು. ಅದೇನು ಕ್ಲೀನೋ?"

  "ದ್ರೌಪದಿ ಕ್ಲೀನ್ ಆಗಿ ಪಾತ್ರೆ ತೊಳೆದಿದ್ರೆ, ಪಾಂಡವರಿಗೆ ದೂರ್ವಾಸರ ಶಾಪ ಗ್ಯಾರಂಟಿ ಆಗ್ತಿತ್ತು. ಅಷ್ಟು ಕ್ಲೀನು ಒಳ್ಳೇದಲ್ಲ" ಅನ್ನೋ ಬಿಟ್ಟೀ ಉಪದೇಶ ನನಗೆ ಸಿಕ್ಕಿದೆ.

  ಒಟ್ಟಾರೆ perfect'ಗಿಂತಲೂ perfect ಆಗೋದು ಹೇಗೆ ಎಂಬ ಜಾಹೀರಾತಿನಂತೆ ಕ್ಲೀನಿಗಿಂತಲೂ ಕ್ಲೀನ್ ಮಾಡೋದು ಹೇಗೆ ಎಂಬಷ್ಟು ಹುಚ್ಚು ಇಲ್ಲ. ಸ್ವಚ್ಛತೆ ಎಂದರೆ ದೇವರು ಎಂದು ನಂಬಿರುವವ ನಾನು. ಮತ್ತೆ ನೀವು?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Mahatma Gandhi had told once, I will not let anyone walk through my mind with their dirty feet. No doubt, cleanliness is next to godliness. Cleaning is irritation for some, but for some it is the state of mind.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more