ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಬಕೆಟ್ ಬಗ್ಗೆ ಗೊತ್ತಾ?, ಜೀವನದಲ್ಲಿ ಕೊಡದಂತಿರಬೇಕೆ? ಬಕೀಟಿನಂತಿರಬೇಕೆ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊದಲಿಗೆ ಈ ಬಕೆಟ್ ಅಂದ್ರೆ ಏನು ಅಂತ ತಿಳ್ಕೊಂಡ್ ಆಮೇಲೆ ಯಾರ್ಯಾರಿಗೆ, ಛೇ ಛೇ ಯಾವುದಕ್ಕೆಲ್ಲಾ ಹಿಡೀಬಹುದು ಅಂತ ನೋಡೋಣ...

ಬಕೆಟ್ ಎಂದರೆ ಒಂದು ಉದ್ದನೆಯ ಸಿಲಿಂಡರ್ ಆಕೃತಿಯ ವಸ್ತು. ಸಾಮಾನ್ಯವಾಗಿ ಒಂದು ಬದಿ ಮುಚ್ಚಿದ್ದು ಮತ್ತೊಂದು ಬದಿ ತೆರೆದುಕೊಂಡಿರುತ್ತದೆ. ಜೊತೆಗೆ ತಳಭಾಗದ ಸುತ್ತಳತೆ ಮೇಲಿನ ಭಾಗದ ಸುತ್ತಳತೆಗಿಂತ ಕಡಿಮೆ ಇರುತ್ತದೆ. ಬಚ್ಚಲು ಮನೆಯ ಕಾಯಂ ವಸ್ತು ಎಂದರೆ ಈ ಬಕೆಟ್.

ಹುಬ್ಬುಗಳ ಬಗ್ಗೆ ತಿಳಿಯುತ್ತ ಹುಬ್ಬುಗಳಿಂದಲೇ ಕಲಿಯೋಣ...ಹುಬ್ಬುಗಳ ಬಗ್ಗೆ ತಿಳಿಯುತ್ತ ಹುಬ್ಬುಗಳಿಂದಲೇ ಕಲಿಯೋಣ...

ಮನೆಮನೆಗಳಲ್ಲಿ ಈ ಬಕೆಟ್ ಉಪಯೋಗ ಹೇಗೆ? ಬಚ್ಚಲು ಮನೆಯ ನೆಲ್ಲಿಯ ಕೆಳಗೆ ಒಂದು ಬಕೆಟ್, ಅದರ ಜೊತೆ ಒಂದು ಮಗ್ (ತಂಬಿಗೆ) ಬೋಸಿ ಇರಲೇಬೇಕು. ಒಂದು ನಲ್ಲಿಯಿಂದ ತಣ್ಣೀರು, ಗೀಜರ್ ಜೋಡಿಸಿರುವ ಮತ್ತೊಂದು ನಲ್ಲಿಯಿಂದ ಬಿಸಿ ನೀರಿನ ಸಮಾಗಮ ಆಗುವ ದ್ವಿವೇಣಿ ಸಂಗಮ ಸ್ಥಾನ ಈ ಬಕೆಟ್. ಒಗೆಯುವ ಬಟ್ಟೆಗಳನ್ನು ಹಾಕಿಡಲು ಮತ್ತೊಂದು ಬಕೆಟ್, ಕೆಲವೊಮ್ಮೆ ಬೇಸಿನ್.

Bucket Meaning And Its Applicability In Life

ಅಂದಿನ ದಿನಗಳಲ್ಲಿ, ಕೆಲಸದಾಕೆ ಬರುವ ಮುನ್ನ ಬಕೇಟಿನಲ್ಲಿ ಬಟ್ಟೆಗಳನ್ನು ನೆನೆಸಿಡಬೇಕು. ಇಲ್ಲಾ ಎಂದರೆ ಪಾತ್ರೆ ತೊಳೆಯುವಾಗ ಆಕೆಯ ಸಿಟ್ಟಿನ ಅರಿವಾಗುತ್ತಿತ್ತು. ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ ಆದರೆ ಕೆಲಸದವಳಿಗೆ ಹೆದರುವಷ್ಟು ಇನ್ಯಾರಿಗೂ ಹೆದರೋಲ್ಲ ನೋಡಿ. ಇರಲಿ, ಆಮೇಲೆ ಆಕೆ ಮನೆ ಒರೆಸುವಾಗ ಬಕೇಟಿನಲ್ಲಿ ಫಿನೈಲ್ ಯುಕ್ತ ನೀರನ್ನು ಸಿದ್ಧ ಮಾಡಿ ಕೈಗೆ ಬಟ್ಟೆ ಕೊಡಬೇಕು. ಆಕೆ ಆ ಬಕೇಟು ಬಳಸಿ ನಂತರ ನೀರಿನಲ್ಲಿ ಗಲಬರಿಸಿ ಇಟ್ಟ ಮೇಲೂ ತೊಳೆಯಬೇಕು ಅನ್ನಿ. ತೊಳೆಯುವುದಕ್ಕೆ ಮರೆತು ಆಮೇಲೆ ಅದೇ ಬಕೇಟಿನಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡಿದರೆ ನಾವು ಅಂದು ಅತೀ ಸ್ವಚ್ಛ, ಜೊತೆಗೆ ಸುವಾಸನೆಯುಕ್ತ ಕೂಡ. ಬಕೇಟಿನಲ್ಲಿ ನೆನೆಸಿಟ್ಟ ಬಟ್ಟೆಗಳು ಬಣ್ಣ ಬಿಡೋದು ಸಾಮಾನ್ಯ ನೋಡಿ. ಬಟ್ಟೆಯ ಮೇಲೆ ನಿಲ್ಲದ ಬಣ್ಣ ಬಕೇಟಿನಲ್ಲಿ ಸುರಕ್ಷಿತ. ಒಟ್ಟಿನಲ್ಲಿ ಒಂದು ಮನೆ ಎಂದ ಮೇಲೆ ಬಕೆಟ್ ಇಲ್ಲದೆ ಹೋದರೆ ಆಗೋಲ್ಲ.

ಸಖ್ಯವಿದ್ದರೆ ನಿರ್ಜೀವ ವಸ್ತುಗಳಲ್ಲೂ ಕಾಣುವುದು ಜೀವಂತಿಕೆಸಖ್ಯವಿದ್ದರೆ ನಿರ್ಜೀವ ವಸ್ತುಗಳಲ್ಲೂ ಕಾಣುವುದು ಜೀವಂತಿಕೆ

ನೀರನ್ನು ಶೇಖರಿಸಿಡಲು ಈ ಬಕೆಟ್ ಉಪಯುಕ್ತ. ಆದರೆ ಬಾವಿಯಿಂದ ನೀರು ಸೇದುವಾಗ ಈ ಬಕೆಟ್ ಬಳಕೆ ಸಾಧ್ಯವಿಲ್ಲ. ನೀರು ಸೇದಲು ಕೊಡವೇ ಆಗಬೇಕು, ತುಂಬಿಡಲು ಬಕೆಟ್ ಸಹಾಯ ಬೇಕು. ಇವೆಲ್ಲಾ ಪ್ಲಾಸ್ಟಿಕ್ ಬಕೆಟ್ ಕೆಲಸ ಆಯ್ತು. ಇನ್ನು ಸ್ಟೀಲ್ ಬಕೆಟ್ ಗಳನ್ನು ಮದುವೆಯ ಮನೆಗಳಲ್ಲಿ, ಮಠಗಳಲ್ಲಿ ಸಾಕಷ್ಟು ನೋಡಬಹುದು. ಸಾರು, ಹುಳಿ, ಗೊಜ್ಜು, ಪಲ್ಯ, ಪಾಯಸ ಇತ್ಯಾದಿಗಳನ್ನು ತನ್ನಲ್ಲಿ ಹೊರುವುದೇ ಈ ಸ್ಟೀಲಿನ ಬಕೆಟ್.

Bucket Meaning And Its Applicability In Life

ಕೊಟ್ಟಿಗೆಗಳಲ್ಲಿ ಬಕೆಟ್ ಬಳಕೆ ಇದೆ, ಹಾಲು ಕರೆಯಲು ಸ್ಟೀಲ್ ಬಕೆಟ್ ಬಳಸುತ್ತಿದ್ದುದನ್ನು ಕಂಡಿದ್ದೆ. ಕೊಟ್ಟಿಗೆ ತೊಳೆಯಲು ಬಳಸುತ್ತಿದ್ದುದು ಪ್ಲಾಸ್ಟಿಕ್ ಬಕೆಟ್. ಸೆಗಣಿ ಶೇಖರಣೆ ಕೂಡಾ ಪ್ಲಾಸ್ಟಿಕ್ ಬಕೆಟ್ ಇರಬೇಕು ಅಂತ ಕಾಣುತ್ತೆ. ಆದರೆ ದೊಡ್ಡ ಮನುಷ್ಯರಿಗೆ ಮಸ್ಕಾ ಹೊಡೆದು ಕೆಲಸ ಮಾಡಿಸಿಕೊಳ್ಳುವ ಪರಿಗೆ 'ಬಕೆಟ್ ಹಿಡಿಯುವುದು' ಎಂದೇಕೆ ಹೇಳುತ್ತಾರೋ ಬಲ್ಲವರು ಹೇಳಿ ಆಯ್ತಾ?

ಜಾಮೆಟ್ರಿ ಬಾಕ್ಸ್ ನಲ್ಲಿರುವ ಯಾವ ಸಲಕರಣೆ ನೀವಾಗ ಬಯಸುವಿರಿ?ಜಾಮೆಟ್ರಿ ಬಾಕ್ಸ್ ನಲ್ಲಿರುವ ಯಾವ ಸಲಕರಣೆ ನೀವಾಗ ಬಯಸುವಿರಿ?

2014ರಲ್ಲಿ ಪ್ರಪಂಚಾದ್ಯಂತ ಸಾಮಾಜಿಕ ತಾಣದ ಒಂದು ಸವಾಲು ಬಹಳ ಪ್ರಸಿದ್ಧಿ ಹೊಂದಿತ್ತು. ALS ಎಂಬ ಕಾಯಿಲೆಗೆ ಹಣ ಸಂಗ್ರಹ ಮಾಡುವ ಉದ್ದೇಶದಿಂದ ಹುಟ್ಟು ಹಾಕಿದ ಈ ಸವಾಲಿನ ಹೆಸರು ALS icewater bucket challenge ಅಂತ. ಒಂದು ಬಕೆಟ್ ತುಂಬಾ ಕೊರೆವ ಐಸ್ ನೀರನ್ನು ತಲೆಯ ಮೇಲೆ ಸುರಿದುಕೊಳ್ಳುವುದು. ತಾವೇ ಸುರಿದುಕೊಳ್ಳಬಹುದು ಅಥವಾ ಬೇರೆಯವರೂ ಸುರಿಯಬಹುದು. ಅದರ ವಿಡಿಯೋ ಮಾಡಿ ಫೇಸ್ಬುಕ್ ನಲ್ಲಿ ಹಾಕಿ ಮತ್ತೊಬ್ಬರಿಗೆ ಕೊಕ್ ನೀಡಬೇಕು. ಮುಂದಿನ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಆ ಮತ್ತೊಬ್ಬರು ಚಾಲೆಂಜ್ ಪೂರ್ಣಗೊಳಿಸದೇ ಇದ್ದರೆ ALS ಫೌಂಡೇಶನ್ ಗೆ ಹಣ ನೀಡಬೇಕು. ಒಂದು ಉತ್ತಮ ಉದ್ದೇಶಕ್ಕೆ ಹಣ ಸಂಗ್ರಹ ಮಾಡುವುದು ಸರಿಯೇ ಆದರೆ ನೀರನ್ನು ಈ ರೀತಿ ಪೋಲು ಮಾಡುವುದು ಬೇಕಿರಲಿಲ್ಲ ಎಂಬುದು ಹಲವು ರಾಷ್ಟ್ರಗಳ ದೂರು ಕೂಡ ಆಗಿತ್ತು. ಬಡವನಿಗೆ ಗೊತ್ತು ಬಡತನದ ನೋವು ಎನ್ನುವಂತೆ ಕುಡಿಯುವ ನೀರಿಗೂ ಪರದಾಡುವ ರಾಷ್ಟ್ರಗಳಿಗೆ ಗೊತ್ತು ನೀರಿನ ಬೆಲೆ. ಪುಣ್ಯಕ್ಕೆ ಆ ಒಂದು ವರ್ಷ ಹಾರಾಡಿದ ಮಂದಿ ಮುಂದಿನ ವರ್ಷಗಳಿಂದ ಈ ನೀರನ್ನು ದಂಡ ಮಾಡುವ ಆಟಕ್ಕೆ ವಿರಾಮ ಹಾಕಿದರು ಎಂಬುದೇ ಸಮಾಧಾನ.

Bucket Meaning And Its Applicability In Life

New Orleansನ ಸುಪ್ರಸಿದ್ಧ Bourbon ರಸ್ತೆಯು ಬೆಳಗಿನ ಹೊತ್ತಲ್ಲಿ ಮಾಮೂಲಿನಂತೆ ಇದ್ದರೂ ಸೂರ್ಯ ಸರಿದು ಹೋಗುತ್ತಿದ್ದಂತೆ ರಂಗೇರಲು ಆರಂಭಿಸುತ್ತದೆ. ಕುಡಿತ, ನೃತ್ಯ, ಸಂಗೀತಗಳ ಅಬ್ಬರ ಹೇಳತೀರದ್ದು. ಈ ಪ್ರದೇಶದಲ್ಲಿ ಬೆಳಗಿನ ವೇಳೆ ಬೀದಿ ಬದಿಯಲ್ಲಿ ವಾದ್ಯಗಾರರನ್ನು ಕಾಣಬಹುದು. ಅವರೇನು ದುಡ್ಡಿಗೆ ವಾದ್ಯ ನುಡಿಸುತ್ತಿರುತ್ತಾರೋ ಅಥವಾ ಸಂಜೆಗೆ ತಾಲೀಮು ನಡೆಸುತ್ತಾರೋ ಗೊತ್ತಿಲ್ಲ. ಅಂಥವರಲ್ಲಿ ಒಂದು ಆಕರ್ಷಣೆ ಎಂದರೆ ಪ್ಲಾಸ್ಟಿಕ್ ಬಕೆಟ್ ಅನ್ನು ಬೋರಲು ಹಾಕಿಕೊಂಡು ಅದನ್ನು drums ನಂತೆ ಬಳಸುವುದು. ಕೆಲವರಲ್ಲಿ ಈ ಬಳಕೆಯ ನೈಪುಣ್ಯವನ್ನು ನಿಜಕ್ಕೂ ಮೆಚ್ಚಲೇಬೇಕು.

ಅನಿಲ್ ಕಪೂರನ 'ಮಿಸ್ಟರ್ ಇಂಡಿಯಾ' ಸಿನಿಮಾ ನೋಡಿದ್ದೀರಾ? ಇಲ್ಲಾ ಎಂದರೆ ಅದರದ್ದೇ ಅವತರಣಿಕೆಯಾದ 'ಜೈ ಕರ್ನಾಟಕ' ನೋಡಿದ್ದರೂ ಸರಿ. ಸಿನಿಮಾ ನೋಡಲೇಬೇಕಿಲ್ಲ, ಆದರೆ ಆ ನಾಯಕ ನಟನು ತಲೆಗೆ ಹಾಕುವ ಟೋಪಿ ನೋಡಿದ್ದೀರಾ? ಬೋರಲು ಹಾಕಿರುವ ಬಕೆಟ್ ನಂತೆ ಕಾಣುವ ಈ ಹ್ಯಾಟ್ ಗೆ 'ಬಕೆಟ್ ಹ್ಯಾಟ್' ಎನ್ನುತ್ತಾರೆ. ಕೆರೆಯ ಪಕ್ಕವೋ ನದಿಯ ಪಕ್ಕವೋ ಕೂತು ಮೀನು ಹಿಡಿಯುವ ಹವ್ಯಾಸಿಗಳೂ ಇಂಥ ಹ್ಯಾಟ್ ಧರಿಸಿರುತ್ತಾರೆ.

ಬಕೆಟ್ ಎಂದ ಕೂಡಲೇ ಎರಡು ವಿಷಯ ಬಲು ಬೇಗ ತಲೆಗೆ ಬರುತ್ತದೆ. ಎರಡೂ ವಿಷಯವನ್ನು ಒಟ್ಟಾಗಿಯೂ ನೋಡಬಹುದು. ಸಾಯುವ ಮುನ್ನ ಸಾಧಿಸಲೇಬೇಕು ಎಂದುಕೊಂಡಿರುವ ಒಂದಷ್ಟು ಕೆಲಸಗಳನ್ನು ಪಟ್ಟಿ ಹಾಕಿಕೊಂಡು ಅವನ್ನು ಸಾಧಿಸಿ ಟಿಕ್ ಮಾಡೋದು ಕೆಲವರ ಹವ್ಯಾಸ. ಏನೇನು ಸಾಧಿಸಬೇಕು ಎಂಬ ಮನಸ್ಸು ಇರುತ್ತದೋ ಅದೇ ಬಕೆಟ್ ಲಿಸ್ಟ್... ಇದನ್ನು ಸಾಧಿಸುವ ಕ್ರಿಯೆ ಯಾವಾಗ ಅಂದರೆ before kicking the bucket ಅರ್ಥಾತ್ ಸಾಯುವ ಮುನ್ನ. ಬಕೆಟ್ ದೊಡ್ಡದಿರುತ್ತೆ, ಅದರಂತೆಯೇ ನಮ್ಮ ಆಶಯಗಳ ಪಟ್ಟಿ ಕೂಡ ದೊಡ್ಡದೇ ಇರುತ್ತದೆ. ಹಾಗಾಗಿ bucket list ಸರಿ. ಆದರೆ ಈ kick the bucket ಎಲ್ಲಿಂದ ಬಂತು?

ಮನೆ ಎಂದರೆ ಬಕೆಟ್ ಒಂದು ಸರ್ವೇಸಾಮಾನ್ಯ ವಸ್ತು ಅಂತ ಆಗಲೇ ಹೇಳಿದ್ದೆ. ಒಬ್ಬ ವ್ಯಕ್ತಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾಯಬೇಕು ಎಂದಾಗ ಕುತ್ತಿಗೆಗೆ ಹಾಕಿಕೊಳ್ಳಲು ಹಗ್ಗದ ಕುಣಿಕೆ ಮತ್ತು ಕಾಲಿನ ಬುಡದಲ್ಲಿ ಬೋರಲು ಹಾಕಿದ ಬಕೆಟ್ ಸಾಕಂತೆ. ಕುತ್ತಿಗೆಗೆ ಹಗ್ಗ ಬಿದ್ದು ಸೆಳೆಯಬೇಕು ಎಂದರೆ ಬಕೆಟ್ ಒದೆಯಲೇಬೇಕು. kick the bucket ಉಗಮದ ರಹಸ್ಯ ಇದೇ ಅಂತೇ. ಥತ್! ಬೇರೇನೂ ಇರಲಿಲ್ವೆ ಹೇಳೋಕ್ಕೆ ಅಂದಿರಾ? ನನಗೂ ಹಾಗೇ ಅನ್ನಿಸಿತು ಬಿಡಿ.

ಒಂದು ಸೀಟಿನಲ್ಲಿ ಕೂತಾಗ ಆ ಸೀಟು ಕೂತವರನ್ನು ಕೌಚಿ ಹಿಡಿದು ಕೂರಿಸಿದಾಗ ಅದೊಂದು ಹಿತವಾದ ಅನುಭವ ಆಗುತ್ತದೆ. ಇದಕ್ಕೆ bucket seat ಎನ್ನುತ್ತಾರೆ. ಕಾರಿನಲ್ಲಿ ಇಂಥ ಆಸನ ಇದ್ದರೆ ದೂರಪ್ರಯಾಣ ಮಾಡುವಾಗ ಎಂಥ ಹಿತ ಇರುತ್ತೆ ಅಲ್ಲವೇ? ಈಗಿನ ಕಾರುಗಳಲ್ಲಿ ಸಾಮಾನ್ಯವಾಗಿ ಇಂತಹ ಬಕೆಟ್ ಸೀಟ್ ಗಳು ಇದ್ದೇ ಇರುತ್ತದೆ.

ನಲ್ಲಿಯಲ್ಲಿ ನೀರು ಬರುವುದೇ ದುಸ್ತರವಾಗಿದ್ದ ಸಮಯದಲ್ಲಿ ಬಕೆಟ್ ಗಳಲ್ಲಿ ನೀರು ತುಂಬಿಸಿ ಇಡುವುದು ಸಾಮಾನ್ಯ ನೋಟ. ಹಲವೊಮ್ಮೆ ಏನಾಗ್ತಿತ್ತು ಎಂದರೆ ದೊಡ್ಡ ಪ್ಲಾಸ್ಟಿಕ್ ಬಕೆಟ್ ನಲ್ಲಿ ನೀರು ತುಂಬಿಸಿ ಅದರ ಹಿಡಿಯನ್ನು ಹಿಡಿದು ಒಮ್ಮೆ ಎತ್ತಿದಾಗ ಆ ಬಕೆಟ್ ಅಂಡಾಕಾರಕ್ಕೆ ತಿರುಗಿ ಹಿಂದೆ ಅಥವಾ ಮುಂದೆ ಫಟ್ ಎಂದು ಸೀಳುತ್ತಿತ್ತು. ನೀರು ದಂಡ ಜೊತೆಗೆ ಸೀಳುಕ ಬಿಟ್ಟ ಬಕೆಟ್. ನೋಡೋಕ್ಕೇನೋ ಥಳುಕು ಬಳುಕು ಅಂತ ಇರುತ್ತೆ ಆದರೆ ಭಾರ ಹೊರುವುದರಲ್ಲಿ ಸೋಲುತ್ತದೆ. ಕಾದ ಕಬ್ಬಿಣದಿಂದ ಈ ಸೀಳುಕವನ್ನು ರಿಪೇರಿ ಮಾಡಬಹುದು. ಆದರೆ ಎಷ್ಟು ದಿನ ಕೂಡಿಕೊಂಡಿರುತ್ತೋ ಗ್ಯಾರಂಟಿ ಇಲ್ಲ.

ತುಂಬಿದ ಕೊಡ ತುಳುಕುವುದಿಲ್ಲ ಎನ್ನುತ್ತಾರೆ ಅಲ್ಲವೇ? ಆದರೆ ತುಂಬಿದ ಬಕೆಟ್ ಖಂಡಿತ ತುಳುಕುತ್ತೆ. ಕೊಡದ ಬಾಯಿ ಚಿಕ್ಕದು, ಬಕೆಟ್ ಬಾಯಿ ದೊಡ್ಡದು. ದೊಡ್ಡ ಬಾಯಿ ಎಂದಾಗ ವಟವಟ ಜಾಸ್ತಿ. ಮಾತು ನಿಲ್ಲೋಲ್ಲ, ರಹಸ್ಯ ನಿಲ್ಲೋಲ್ಲ, ಹಲವೊಮ್ಮೆ ಬರೀ ಬೊಗಳೆ... ಹೀಗೆ ಬರೀ ತುಳುಕೋದೇ ಹೆಚ್ಚು.

ತುಂಬಿದ ಕೊಡ ತುಳುಕೋದಿಲ್ಲ ಎಂದಾಗ ನಡತೆಯ ಬಗೆಗಿನ ಹೇಳಿಕೆ ಅಲ್ಲವೇ? ಜ್ಞಾನ ಭಂಡಾರವೇ ನಿಮ್ಮಲ್ಲಿ ತುಂಬಿದ್ದು ಅದು ಹೊರಗೆ ಚೆಲ್ಲದೇ ಹೋದರೆ ಪ್ರಯೋಜನವೇನು? ತುಂಬಿದ ಬಕೀಟಿನ ದೊಡ್ಡ ಬಾಯಿಂದ ಚೆಲ್ಲಿದರೂ ಅದರಿಂದ ನಾಲ್ಕು ಜನಕ್ಕೆ ಉಪಯೋಗವಾಗುತ್ತದೆ ಅಲ್ಲವೇ? ನಾವು ಜೀವನದಲ್ಲಿ ಕೊಡದಂತೆ ಇರಬೇಕೆ? ಬಕೀಟಿನಂತೆ ಇರಬೇಕೆ?

ನಿಮ್ಮ ಅಭಿಪ್ರಾಯ?

English summary
This column will explain the meaning of bucket and its applicability in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X