ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಅಂಕಣ: ನೀವು ಯಾವತ್ತಾದರೂ ಎಲ್ಲಿಯಾದರೂ ಕಳೆದುಹೋಗಿದ್ರಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಎಲಾ ಕುನ್ನಿ! ನಾನು ಕಳೆದು ಹೋಗಿದ್ರೆ ನೀ ಕೇಳೋಗಂಟಾ ನಂಗೆ ಗೊತ್ತಾಗ್ತಾ ಇರ್ಲಿಲ್ವಾ? ಅಂತ ಅನ್ನಬೇಡಿ... "ಕಳೆದುಹೋಗುವುದು" ಎಂಬುದು overloaded ಪದ. 'ಕಳೆದುಹೋಗುವುದು' ಎಂಬ ವಿಚಾರದಲ್ಲಿ ಹಲವಾರು ರೀತಿಗಳಿವೆ . . . ಒಂದೊಂದೇ ನೋಡೋಣು?

  ನಮ್ಮೊಳಗೇ ಕರೆಂಟ್ ಆಫ್ ಆದರೆ ಮತ್ತೊಬ್ಬರಿಗೆ ಇನ್ನೇನು ಬೆಳಕು ಕೊಟ್ಟೇವು?

  ನಾನಾಗ ಬಹಳ ಚಿಕ್ಕವನಿದ್ದೆ. ಒಮ್ಮೆ ಅಪ್ಪ-ಅಮ್ಮನ ಜೊತೆ ಸಂಬಂಧಿಕರ ಮನೆಗೆ ಹೋಗುತ್ತಿದ್ದೆ. ಅಪ್ಪ ಬಸ್'ನ ಹಿಂದಿನ ಬಾಗಿಲಿನಿಂದ ಹತ್ತಿದ್ದರೆ, ನಾನೂ-ಅಮ್ಮ ಮುಂಬಾಗಿಲಿನಿಂದ ಏರಿದ್ದೆವು. ನಾನು ಬಸ್ ಹತ್ತಿದೆ ಅಂತ ಯಾರೂ ಸೀಟು ಬಿಟ್ಟುಕೊಡಲಿಲ್ಲ. ಅಂದಿಗೂ ಇಲ್ಲ, ಇಂದಿಗೂ ಇಲ್ಲ ಬಿಡಿ. ನಿಂತುಕೊಂಡೇ ಪಯಣ! ಮೇಲಕ್ಕೆ ಕೈಚಾಚಿ ರಾಡ್/ಹಸಿರು ಬೆಲ್ಟ್ ಹಿಡಿದುಕೊಳ್ಳುವಷ್ಟು ಎತ್ತರ ಅಂದಿಗೂ ಇಂದಿಗೂ ಇಲ್ಲ. ಹಾಗಾಗಿ ಸೀಟಿನ ಹಿಂಭಾಗ ಇರುವ ಸ್ಟೀಲಿನ ಹಿಡಿಯನ್ನೇ ಹಿಡಿದಿದ್ದೆ. ಆ ಸೀಟಿನಲ್ಲಿ ಕುಳಿತವರು ತಲೆಯನ್ನು ಹಿಂದೆ ಮಾಡಿದರೆ ನನ್ನ ಕೈಗೆ ತಾಕುತ್ತಿತ್ತು. ಅವರೂ ಎಷ್ಟು ಹೊತ್ತೂ ಅಂತ ಕಷ್ಟ ಅನುಭವಿಸುತ್ತಾರೆ? ಕೂತವರಿಬ್ಬರ ಮಧ್ಯೆ ಚೂರು ಜಾಗ ಮಾಡಿ ನನ್ನನ್ನು ಕೂಡಿಸಿಕೊಂಡರು.

  Are you lost in the world like me?

  ಕ್ರಮೇಣ ರಶ್ ಕಡಿಮೆಯಾಗುತ್ತಾ ಹೋಯ್ತು. ಎಲ್ಲಿ ಇಳಿಯಬೇಕು ಅಂತ ಗೊತ್ತಿಲ್ಲ. ಮುಂಚೆಯೇ ಮಾತಾಗಿತ್ತು ಅಂತ ಕಾಣುತ್ತೆ, ಅಪ್ಪ ಮಧ್ಯದಲ್ಲೇ ಇಳಿದು ಹೋಗಿದ್ದಾರೆ. ನಂತರ ಅಮ್ಮ ಇಳಿಯುವ ಮುನ್ನ ರಶ್ ಇರದ ಬಸ್ಸಿನಲ್ಲಿ ನನ್ನನ್ನು ಹುಡುಕಿ ನೋಡುವಾಗ ಅಂಥಾ ಸೀಟಿನ ಮೇಲೇ ಮಲಗಿಬಿಟ್ಟಿದ್ದ ನಾನು ಕಂಡಿಲ್ಲ. ಅಪ್ಪನ ಜೊತೆ ಇಳಿದುಹೋಗಿರಬೇಕು ಅಂತ ಅಮ್ಮ ಚಾಮರಾಜಪೇಟೆಯಲ್ಲಿ ಇಳಿದು ಹೋಗಿದ್ದಾರೆ.

  ಬಸ್ಸು ಕೊನೆ ಸ್ಟಾಪಿನಲ್ಲಿ (ಟಿ.ಆರ್.ಮಿಲ್ಸ್) ನಿಂತು ಗಾಡಿ ಆಫ್ ಮಾಡಿ ಎಲ್ಲರೂ ಇಳಿದು ಹೋದಮೇಲೆ ಉಳಿದಿದ್ದು ನಾನು, ಕಂಡಕ್ಟರ್ ಮಾತ್ರ. ಅದೇನೋ ಭಂಡ ಧೈರ್ಯದ ಮೇಲೆ ಹಣದ ಲೆಕ್ಕ ಹಾಕುತ್ತಿದ್ದ ಕಂಡಕ್ಟರ್ ಜೊತೆ ಮಾತಾಡ್ಕೊಂಡ್ ಕೂತಿದ್ದೆ. ಮುಂದೇನು ಅಂತ ನನಗೆ ಗೊತ್ತಿಲ್ಲ. ಅಲ್ಲಿಂದ ಒಂದಷ್ಟು ಸಮಯದ ನಂತರ ಸೈಕಲ್ ಮೇಲೆ ನನ್ನ ಮಾವನ ಮಗನ ಆಗಮನ. ನಂತರ ನಾವು ಸೈಕಲ್ ಏರಿ ಅವನೊಂದಿಗೆ ಹೊರಟೆ. ಅಂದು ಕೆಲವು ಸಮಯಗಳ ಮಟ್ಟಿಗೆ ಕಳೆದುಹೋಗಿದ್ದೆ!

  ಹೃದಯ ಮುಟ್ಟಿ ಮನವನು ತಟ್ಟುವ ಅಳಿಸಲಾರದ ನೆನಪು

  ಬಹುಶ: ನಾನು ನಿಜವಾಗಲೂ ಕಳೆದುಹೋಗಿದ್ದರೆ, ಅಪ್ಪ-ಅಮ್ಮ ಬೀದಿ ಜ್ಯೋತಿಷಿಗಳಲ್ಲಿ ಕೇಳಿದ್ದರೆ, ಅವರು ಕವಡೆ ಹಾಕಿ "ಇಂದು ಬಸ್ಸಿನಲ್ಲಿ ಕಳೆದು ಹೋದ ನಿಮ್ಮ ಮಗ ಇಪ್ಪತ್ತೈದು ವರ್ಷಗಳ ಮೇಲೆ ಬಸ್ ಮಾಲೀಕನಾಗಿ ವಾಪಸ್ ಬರುತ್ತಾನೆ. ನಿಮ್ಮನ್ನು ಕಂಡ ಕೂಡಲೇ ಗುರುತು ಹಿಡಿದು ಅಪ್ಪಿ ಹಿಡಿಯುತ್ತಾನೆ. ಇದು ಸತ್ಯ ಸತ್ಯ ಸತ್ಯ" ಎಂದು ರೀಲ್ ಬಿಟ್ಟು, ಇಬ್ಬರನ್ನೂ ಸಮಾಧಾನ ಮಾಡಿ, ದುಡ್ಡು ಕಿತ್ತುತ್ತಿದ್ದ.

  ಕಳೆದು ಹೋಗುವುದು ಎಂದರೆ 'ರಾಂಪುರ್ ಕಾ ಲಕ್ಷ್ಮಣ್' ಚಿತ್ರದಲ್ಲಿ ರೈಲಿನಲ್ಲಿ ಕಳೆದುಹೋದ ಶತೃಘ್ನ ಸಿನ್ಹಾ ರೀತಿಯಲ್ಲಿ, ದಾರಿ ತಪ್ಪಿದ ಮಗ'ದಲ್ಲಿ ರಾಜ್ ರೀತಿ, ಮಗನನ್ನು ಜಾತ್ರೆಯಲ್ಲಿ ಕಳೆದುಕೊಂಡ ಸಿಪಾಯಿ ರಾಮು ರೀತಿಯಲ್ಲೇ ಆಗಬೇಕು ಎಂದೇನಿಲ್ಲ. ಎತ್ತಲೋ ಹೋಗುವಾಗ ದಾರಿ ತಪ್ಪಿ ಇನ್ನೆಲ್ಲೋ ಹೋದಾಗಲೂ 'ಕಳೆದು' ಹೋದಂತೆಯೇ.

  ನೀವು Multitaskerರೋ? Unitaskerರೋ?

  ನಾವು ಎಚ್.ಎ.ಎಲ್'ನ ಕ್ವಾರ್ಟರ್ಸ್ ಮನೆಯಲ್ಲಿದ್ದೆವು. ಆ ಮನೆ ಸಾಕಷ್ಟು ವಿಶಾಲವಾಗಿತ್ತು. ಕಿರುಬಾಗಿಲಲ್ಲಿ ಒಳ ಹೊಕ್ಕು ಹಾಲ್ ದಾಟಿ ಸಣ್ಣ ಓಣಿಯಂಥಾ ಜಾಗದಲ್ಲಿ ಒಳ ಹೊಕ್ಕರೆ ಅಡುಗೆ ಮನೆ, ಬಚ್ಚಲು ಮನೆ, ರೂಮುಗಳು, ಹಿತ್ತಲಿನ ಬಾಗಿಲು... ಹೀಗೆ. ಏನೋ ಕೆಲವು ರಿಪೇರಿ ಕೆಲಸಗಳಿಗೆ ಅಂತ ಬಂದ ಒಬ್ಬ ಮಾನವ, ಹಾಲ್'ನಲ್ಲಿ ಕೆಲಸ ಮುಗಿಸಿ ರೂಮಿಗೆ ಹೋದವ ಅಲ್ಲಿ ಕೆಲಸ ಮುಗಿಸಿ ನಂತರ ಹೊರಗೆ ಬಂದು ಬಚ್ಚಲು ಮನೆ ಕಡೆ ಹೋದ, ತಲೆಯಾಡಿಸಿಕೊಂಡು ಹೊರಗೆ ಬಂದು ಅಡುಗೆ ಮನೆಗೆ ಹೋದ. ತಲೆಕೆರೆದುಕೊಂಡು ಅಡುಗೆ ಮನೆಯ ಒಳಕೋಣೆಯಾದ ದೇವರ ಮನೆಗೆ ಹೋಗುವ ಮುನ್ನ 'ನಿನಗೆ ಏನಪ್ಪಾ ಬೇಕು' ಅಂತ ಕೇಳಿದ್ದಕ್ಕೆ 'ನನ್ ಕೆಲಸ ಆಯ್ತು, ಹೊರಗೆ ಹೋಗಬೇಕು. ಬಾಗಿಲೆಲ್ಲಿ?' ಅಂದ. ಅವನಿಗೆ ಆ ಚಿಕ್ಕ ಓಣಿ ಕಾಣಿಸದೆ ಎಲ್ಲಿಗೆ ಹೋಗಬೇಕು ಅಂತ ಗೊತ್ತಾಗದೆ ಎಲ್ಲಾ ಕಡೆ ತಿರುಗುತ್ತಿದ್ದ. ಹೀಗೂ ತಪ್ಪಿಸಿಕೊಳ್ಳಬಹುದು! ಈಗಿನ ಧಾರಾವಾಹಿಗಳಲ್ಲಿ ತೋರಿಸುವ ಮನೆಗಳನ್ನು ನೋಡಿದಾಗ ನನಗೆ ಅನ್ನಿಸೋದು 'ಈ ಮನೆಯ ಒಳಗೆ ಓಡಾಡೋಕ್ಕೆ ನನಗೆ ಜಿ.ಪಿ.ಎಸ್ ಇಲ್ಲದೆ ಹೋದರೆ ಕಳೆದೇ ಹೋಗ್ತೀನಿ' ಅಂತ.

  ಇದು ಮನೆ ಮನೆ ಕಥೆ ಆಯ್ತು. ಈಗ ಬೀದಿಗೆ ಬರೋಣ. ಇಂದಿಗೂ ನನಗೆ ಜಯನಗರದ ವಿವಿಧ ಬಡಾವಣೆಗಳಿಗೆ ಹೋದರೆ ಕಳೆದು ಹೋಗ್ತೀನಿ. ನಾಲ್ಕನೇ ಬ್ಲಾಕ್'ವರೆಗೂ ಬರೀ ಬಿಟಿಎಸ್ ಬಸ್'ನ ಹಾದಿಯ ಅರಿವಿದ್ದ ನನಗೆ 'ಜಯನಗರದ ಹುಡುಗಿ'ನೇ ನನ್ನ ಜಾತಕಕ್ಕೆ ಸರಿಹೊಂದಬೇಕೇ? ಅದೂ ಒಂಬತ್ತನೇ ಬ್ಲಾಕ್! ಅರ್ಥಾತ್ ನಾಲ್ಕರಿಂದ ಹಿಡಿದು ಒಂಬತ್ತರವರೆಗೆ ನಾನು ತಪ್ಪಿಸಿಕೊಳ್ಳಲು ವಿಪುಲ ಅವಕಾಶಗಳು. ನಿಶ್ಚಿತಾರ್ಥದಿಂದ ಹಿಡಿದು ಮದುವೆ ಆಗುವವರೆಗೂ ನಮಗಿದ್ದ ಆರು ತಿಂಗಳ ಸಮಯದಲ್ಲಿ 'ಕಳೆದು ಹೋಗಬಹುದು' ಎಂಬ ದಿಗಿಲಿನಲ್ಲಿ ಕೇವಲ ಮೂರೇ ಬಾರಿ ಆ ದಿಕ್ಕಿನಲ್ಲಿ ಹೋಗಿದ್ದೆ. ಎರಡು ಬಾರಿ ತಪ್ಪಿಸಿಕೊಂಡಿದ್ದೆ. ಒಮ್ಮೆ ನನ್ನಾಕೆಯನ್ನು ಆಫೀಸಿನಿಂದ ಪಿಕ್ ಮಾಡಿ ಡ್ರಾಪ್ ಮಾಡಲು ಹೋಗಿದ್ದರಿಂದ ತಪ್ಪಿಸಿಕೊಳ್ಳಲಿಲ್ಲ. ವಾಪಸ್ ಬರುವಾಗ ಗಾಡಿಯಲ್ಲಿ ಬಸ್ ನಿಲ್ದಾಣಕ್ಕೆ ಬಂದು ಮೆಜಸ್ಟಿಕ್ ಬಸ್ ಅನ್ನು ಗಾಡಿಯಲ್ಲಿ ಹಿಂಬಾಲಿಸಿದ್ದೆ. ಹಾಗಾಗಿ ಬಚಾವ್.

  ಅಮೆರಿಕಕ್ಕೆ ಬಂದ ದಿನಗಳು. ಆಗಿನ್ನೂ ಜಿಪಿಎಸ್ ಹೆಚ್ಚು ಚಾಲ್ತಿಯಲ್ಲಿರಲಿಲ್ಲ. ಮ್ಯಾಪ್ ಹಿಡಿದು ಒಮ್ಮೆ ವಾಷಿಂಗ್ಟನ್ ಡಿಸಿ'ಗೆ ಡ್ರೈವ್ ಮಾಡಿಕೊಂಡು ಹೊರಟೆವು. ಕ್ಯಾಪಿಟಲ್ ಬೆಲ್ಟ್'ವೇ ಹೊಕ್ಕ ನಮಗೆ ನಂತರ ಎಲ್ಲಿಗೆ ಹೋಗಬೇಕು ಎಂದೇ ಅರ್ಥವಾಗುತ್ತಿಲ್ಲ. ನಮಗೆ ಅರ್ಥವಾದಂತೆ ಯಾವುದೋ ರೋಡು ಮತ್ಯಾವುದೋ ಎಕ್ಸಿಟ್ ಎಂದೆಲ್ಲಾ ತಿರುಗುತ್ತಿದ್ದರೆ, ಈಗ ತಾನೇ ಇದೇ ಬೀದಿಗೆ ಬಂದಿದ್ದೆವಲ್ಲಾ? ಈ ಮಳಿಗೆ ಈಗ ತಾನೇ ಕಂಡ ಹಾಗಿತ್ತು! ಎಂದೆಲ್ಲ ಅನಿಸುತ್ತಿತ್ತೇ ಹೊರತು ನಾವು ಎಲ್ಲಿಗೆ ಹೋಗಬೇಕಿತ್ತೋ ಆ ಜಾಗ ಸಿಗಲೇ ಇಲ್ಲ. ಕೇವಲ ಎರಡು ಘಂಟೆಗಳ ಕಾಲ ಬೆಲ್ಟ್-ವೇ ಸುತ್ತಿ, ಅಕ್ಷರಶ: ತಪ್ಪಿಸಿಕೊಂಡು, ನಂತರ ಕಾರಿನ ಹೊಟ್ಟೆ ತುಂಬಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಸ್ ಬಂದೆವು. ನಾವು ಓಡಾಡಿದಷ್ಟೂ ಕಾಲ ಎಲ್ಲೂ ಟೋಲ್ (ಸುಂಕ) ಕಟ್ಟದೆ ಇದ್ದುದರಿಂದ ಈ ಗಾದೆ ಧೈರ್ಯವಾಗಿ ಹೇಳಬಹುದು.

  ಮೇಲೆ ಹೇಳಿದ ಅನುಭವಗಳು ಎಲ್ಲರ ಜೀವನದಲ್ಲೂ ಆಗಿರದೇ ಹೋಗಿದ್ದರೂ 'lost in thoughts' ಅಥವಾ ಆಲೋಚನೆಯಲ್ಲಿ ಕಳೆದು ಹೋಗಿರಬಹುದಾದ ಅನುಭವಗಳು ಖಂಡಿತ ಆಗಿಯೇ ಇರುತ್ತದೆ, ಅಲ್ಲವೇ? ದಿನನಿತ್ಯದಲ್ಲಿ ಹೇಗೆ ಎಂದರೆ ಎದುರಿಗೆ ಲೋಟದಲ್ಲಿ ಬಿಸಿ ಕಾಫಿ ಇಟ್ಟಿದ್ದರೂ ಏನೋ ಆಲೋಚನೆಯಲ್ಲಿ ಅದರ ಕಡೆಗೆ ಗಮನವೇ ಕೊಡದೆ ಹೋಗುವುದು.

  ಒಮ್ಮೆ ಗಂಡ-ಹೆಂಡತಿ ಮಾಲ್ ಒಳಗೆ ಓಡಾಡುವಾಗ, ಹೆಂಡತಿಯಾದವಳು ಏನನ್ನೋ ಕೊಂಡುಕೊಳ್ಳಲು ಬದಿಗೆ ಹೋದಳು. ಗಂಡನ ಗಮನ ಮೊಬೈಲ್ ಮೇಲೆ. ಕೆಂಪು ಚೂಡಿದಾರ ಧರಿಸಿದ ಒಬ್ಬಾಕೆ ಅಂಗಡಿಯಿಂದ ಹೊರಗೆ ಬರಲು, ತನ್ನ ಹೆಂಡತಿಯೇ ಬಂದಿದ್ದು ಎಂದುಕೊಂಡು ಆ ಇನ್ನೊಬ್ಬಾಕೆಯೊಂದಿಗೇ ಮೊಬೈಲ್ ನೋಡಿಕೊಂಡು ಸಾಗುತ್ತ ಹೋದವ ಫಜೀತಿಗೆ ಸಿಕ್ಕಿಕೊಂಡ. ಕೆಂಪು ಸೀರೆ ಉಟ್ಟವರೆಲ್ಲ ತನ್ನ ಹೆಂಡತಿ ಅಲ್ಲ ಅಂತ ಅಂದುಕೊಂಡಿದ್ದರೆ ಚೆನ್ನಾಗಿತ್ತು.

  ಆಲೋಚನೆಯಲ್ಲಿ ಕಳೆದುಹೋಗಿ, ನಂತರ ತೊಂದರೆಗೆ ಸಿಲುಕುವ ಸನ್ನಿವೇಶಕ್ಕೆ ದೂರ್ವಾಸ ಮುನಿ-ದುಷ್ಯಂತ-ಶಕುಂತಲೆ ಕಥೆಗಿಂತ ಮತ್ತೊಂದು ಉದಾಹರಣೆ ಇಲ್ಲ.

  ಮತ್ತೊಂದಿಷ್ಟು 'ಕಳೆದು ಹೋಗುವ' ವಿಷಯಗಳತ್ತ ಸೀರಿಯಸ್ಸಾಗಿ ಗಮನ ಹರಿಸೋಣ.

  ಮನೆಯಲ್ಲಿನ ಹಿರಿಯರ (ಅಪ್ಪ-ಅಮ್ಮ) ಅಕಾಲ ಮರಣದಿಂದಾಗಿ ಚಿಕ್ಕ ಮಕ್ಕಳು 'ಕಳೆದುಕೊಂಡ' ಬಾಲ್ಯ ಎಂದೆಂದಿಗೂ ಹಿಂದಿರುಗಿ ಬಾರದು. ನಾ ಕಂಡ ಇತ್ತೀಚಿನ ಉದಾಹರಣೆ ಹೀಗಿದೆ. ಅದೇನು ಕಷ್ಟಗಳಿತ್ತೋ ಸಂಸಾರದಲ್ಲಿ ಗೊತ್ತಿಲ್ಲ, ಗಂಡ ಪರ ಊರಿಗೆ ಹೋಗಿದ್ದಾಗ, ಮಕ್ಕಳು ಹೊರಗೆ ಪಾರ್ಕ್'ನಲ್ಲಿ ಆಡಿಕೊಂಡಿರುವಾಗ ಈಕೆ ನೇಣಿಗೆ ಶರಣಾದಳು. ಇನ್ನೂ ಹೈಸ್ಕೂಲಿನ ಮೆಟ್ಟಿಲೂ ಏರದ ಈ ಮಕ್ಕಳ ಮುಂದಿನ ಜೀವನ? 'ಕಳೆದು ಹೋದ' ಜೀವ ಮತ್ತೆ ಬಾರದು. ಈ ಮಕ್ಕಳು ಕಳೆದುಕೊಳ್ಳುವ ಬಾಲ್ಯ ಮತ್ತೆಂದೂ ಬಾರದು.

  ಇಂದಿನ ದಿನದಲ್ಲಿ ಜಗತ್ತಿನ ಎಲ್ಲೆಡೆ ಕಾಡುತ್ತಿರುವ ಪಿಡುಗು 'Cancer' ಎಂದರೆ ತಪ್ಪು. ಬದಲಿಗೆ "human trafficking". ಚಿಕ್ಕಮಕ್ಕಳಿಂದ ಹಿಡಿದು ಹದಿಹರೆಯದವರೆಗಿನ ಹೆಣ್ಣು-ಗಂಡುಗಳು ಏನೇನೋ ಕಾರಣಗಳಿಗೆ ಕಣ್ಮರೆಯಾಗುತ್ತಾರೆ. 'ಕಳೆದು ಹೋಗುವ' ಈ ಪರಿ ಇಂದಿನದ್ದಲ್ಲ. ನನ್ನ ಬಾಲ್ಯದ ದಿನಗಳಲ್ಲಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಕೇಸ್ ಎಂದರೆ ಯಾವುದೋ ಒಬ್ಬ 'ಬಾಬಾ' / 'ಸಾಧು' ಮಕ್ಕಳನ್ನು ಕದ್ದೊಯ್ದು ಬಲಿಕೊಡುತ್ತಿದ್ದ ಎಂಬುದು. ಇದೇ ವಿಷಯ ಆಧರಿಸಿ 'ರಾಜೇಶ್ವರಿ' ಎಂಬ ಕನ್ನಡ ಚಿತ್ರ ಕೂಡ ಬಂದಿತ್ತು. ಹೆಚ್ಚಿನ ವಿವರ ನೆನಪಿಲ್ಲ.

  ಅವರು ಟೊಮ್ಯಾಟೋ ಹಬ್ಬ ಮಾಡಿದರು ಅಂತ, ಇವರ್ಯಾರೋ ದನ ತಿಂದರು ಅಂತ, ಮತ್ಯಾರೋ ಕನಿಷ್ಠ ವಸ್ತ್ರಾಧಾರಿಗಳು ಅಂತೆಲ್ಲಾ ಮಾಡುತ್ತಾರೆ ಎಂದು, ನಾವೂ ಮಾಡುತ್ತೇವೆ ಎಂಬ ಅನುಕರಣೆ ಹಾದಿಯಲ್ಲಿ ಸಾಗುತ್ತಿರುವ ನಾವು, ಎಂದೋ ಒಂದು ದಿನ ನಮ್ಮ ಸಂಸ್ಕೃತಿಯನ್ನು 'ಕಳೆದು'ಕೊಳ್ಳುತ್ತೇವೆ. ಯಾವುದೋ ಆಸೆ ಅಥವಾ ಆಶಯವನ್ನು ಬೆನ್ನು ಹತ್ತಿ ಸಾಗಿ ನಮ್ಮನ್ನೇ ನಾವು ಕಳೆದುಕೊಳ್ಳುತ್ತೇವೆ. ಸಾಮಾಜಿಕ ತಾಣವೆಂಬ ಸುಂದರ ಜಗತ್ತನ್ನು ಅತಿಯಾಗಿ ಬಳಸಿ ಅದರ ದಾಸರಾಗಿ ದಿನನಿತ್ಯದ ಸಂತಸವನ್ನು 'ಕಳೆದು'ಕೊಳ್ಳುತ್ತಿದ್ದೇವೆ.

  'ಕಳೆದು'ಕೊಳ್ಳುವ ಪರಿಯಿಂದ ಎಚ್ಚೆತ್ತುಕೊಂಡು 'ಪಡೆದು'ಕೊಳ್ಳಬಹುದಾದ ವಿಷಯಗಳತ್ತ ಗಮನಹರಿಸೋಣವೇ?

  ಚಳಿಗಾಲ ಮೂಡುತ್ತಿದ್ದಂತೆಯೇ ಸ್ವಾಭಾವಿಕವಾಗಿ ತನ್ನೆಲ್ಲ ಎಲೆಗಳನ್ನು 'ಕಳೆದು'ಕೊಳ್ಳುತ್ತಿರುವ ಮನೆಯ ಮುಂದೆ ಇರುವ ಮರವನ್ನು ಕಂಡಾಗ ತಲೆಗೆ ಬಂದ ಎರಡು ಮಾತಿಗೆ ನಿಮ್ಮ ಅನಿಸಿಕೆ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Not until we are lost do we begin to understand ourselves. Losing ourselves in this world itself is blessing in disguise. Then only we invent something or some way to get back to the world where we belong to. A beautiful article by Srinath Bhalle, Richmond.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more