ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ವಯಸ್ಸು ಎಂಬುದು ಒಂದು ಸಂಖ್ಯೆಯಷ್ಟೇ!

By ಶ್ರೀನಾಥ್ ಭಲ್ಲೆ
|
Google Oneindia Kannada News

ತಾಯಿ ಉದರದಿಂದ ಕೂಸಾಗಿ ಬಂದ ದಿನದಿಂದ ಹರಿಪಾದ ಸೇರುವ ತನಕ, ಏರಿಕೆಯೇ ಆಗುವ, ಎಂದೂ ಇಳಿಕೆಯನ್ನೇ ಕಾಣದ ಒಂದೇ ಅಂಶವೆಂದರೆ, "ವಯಸ್ಸು". ಇದೆಂಥಾ ಏರಿಕೆ ಎಂದರೆ ವರುಷದಿಂದ ವರುಷದ್ದಲ್ಲಾ ಬದಲಿಗೆ ಪ್ರತೀ ಘಳಿಗೆ. ನಿನ್ನೆಗಿಂತ ಇಂದು ನಮ್ಮ ವಯಸ್ಸು ಏರಿದೆ, ಇಂದಿಗಿಂತ ನಾಳೆ ನಮ್ಮ ವಯಸ್ಸು ಏರಲಿದೆ. ಕಳೆದಂತೆಲ್ಲಾ ಏರುವುದೇ ವಯಸ್ಸು. ಕಾಲ ಕಳೆದಂತೆಲ್ಲಾ ಏರುತ್ತೆ ವಯಸ್ಸು!

Recommended Video

ಹಾರ್ದಿಕ್ ಪಾಂಡ್ಯಾಗೆ ಪಾಕ್ ಆಟಗಾರನ ಟಿಪ್ಸ್ | Oneindia Kannada

ಒಂದು ಹಂತದವೆರೆಗೂ ಸರ ಸರ ಅಂತ ವಯಸ್ಸು ಏರುತ್ತಿದೆಯೇನೋ ಅನ್ನಿಸುತ್ತೆ, ಇಪ್ಪತ್ತರಿಂದ ಇಪ್ಪತ್ತೊಂದು, ಇಪ್ಪತ್ತೊಂದರಿಂದ ಇಪ್ಪತ್ತೆರಡು ಅಂತಾದಾಗಲೆಲ್ಲ ಹೆಣ್ಣಿನ ಹೃದಯದಲ್ಲಿ ವಯಸ್ಸಿನ ಬಗ್ಗೆ ಕಾಳಜಿ ಏರುತ್ತದೆ ಎಂದು ಒಂದೆಡೆ ಓದಿದ್ದೆ. ವಯಸ್ಸಿನ ಬಗ್ಗೆ ಚಿಂತೆ ಗಂಡಿಗಾಗಲೀ, ಹೆಣ್ಣಿಗಾಗಲೀ ಬೇರೆ ಬೇರೆ ಯಾಕೆ ಎಂಬುದರ ಹಿಂದೆ ಒಂದು ವಿಜ್ಞಾನವೇ ಅಡಗಿದೆ. ಹೆಣ್ಣಿನ ತಲೆಗೂದಲ ಮೂಲೆಯಲ್ಲೆಲ್ಲೋ ಒಂದು ಬೆಳ್ಳಿ ಕೂದಲು ಕಾಣಿಸಿದರೆ ಜಿರಲೆಯನ್ನು ಕಂಡಾಗ ಆಗುವ ಭೀತಿಗಿಂತಾ ಹೆಚ್ಚು ಆತಂಕದ ಅಲೆಗಳು ಹೃದಯದಲ್ಲಿ ಏಳುವುದಂತೆ.

ವಯಸ್ಸು ಚಿಕ್ಕದಾದರೂ ದೊಡ್ಡವರಂತೆ ಕಾಣಬೇಕೆಂಬ ಅನಿವಾರ್ಯತೆ
ಗಂಡಿನ ತಲೆಗೂದಲಲ್ಲಿ ಒಂದಲ್ಲಾ ನಾಲ್ಕು ಬೆಳ್ಳಿಗೂದಲು ಮೂಡಿದರೂ ಬಹುಶಃ ಅವರು ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಕೆಲವರ ಅನುಭವ ತುಂಬಾ ಭಿನ್ನ. ಅವರು Manager ಹುದ್ದೆಯಲ್ಲಿದ್ದರೂ, ಅಚ್ಚ ಕಪ್ಪುಬಣ್ಣದ ಕೂದಲು ಅವರಿಗೆ ಮರ್ಯಾದೆ ಸಿಗದಂತೆ ಆಗಿತ್ತಂತೆ. ಒಂದೆರಡು ಬಿಳಿಗೂದಲು ಕಂಡಿದ್ದಕ್ಕೆ ಅವರಿಗೆ ಧನ್ಯತಾಭಾವ ಮೂಡಿತು ಎನ್ನುತ್ತಾರೆ. ಕ್ಲೀನ್ ಶೇವ್ ಮಾಡಿಕೊಂಡಾಗ ತಮ್ಮ ಎಳೆಯ ಕಳೆ ಕಾಣುತ್ತದೆ ಎಂದು ಗಡ್ಡ ಬೆಳೆಸಿಕೊಳ್ಳುತ್ತಾರೆ. ಇಲ್ಲಿನ ಸೂಕ್ಷ್ಮ ಏನೆಂದರೆ ವಯಸ್ಸು ಚಿಕ್ಕದಾದರೂ ದೊಡ್ಡವರಂತೆ ಕಾಣಬೇಕೆಂಬ ಅನಿವಾರ್ಯತೆ.

Srinath Bhalle Column: Age Is Just a Number


ಒಮ್ಮೆ ಮದುವೆಯಾಯಿತು ಎಂದ ಕೂಡಲೇ ಹೀರೋಯಿನ್‌ಗಳಿಗೆ ಸಿಗುವ ಪಾತ್ರಗಳಲ್ಲಿ ಥಟ್ಟನೆ ವ್ಯತ್ಯಾಸ ಕಂಡುಬರುತ್ತದೆ ಎಂದೇ ಅವರ ಮದುವೆಗಳು ತಡವಾಗುತ್ತದೆ. ಹೀರೋಗಳಿಗೆ ಮದುವೆಯಾದರೂ ಆಗದಿದ್ದರೂ ಅಂಥಾ ವ್ಯತ್ಯಾಸ ಆಗುವುದಿಲ್ಲ. ಕಾಲಕ್ರಮೇಣ ಹೀರೋ ಪಾತ್ರ ದೊರೆಯದಿದ್ದಾಗ ಹಿರಿಯಣ್ಣ, ತಂದೆ ಹೀಗೆ ಬಡ್ತಿ ತೆಗೆದುಕೊಳ್ಳುತ್ತಾರೆ ಆದರೆ ತಮ್ಮ ಛಾಪನ್ನು ಉಳಿಸಿಕೊಂಡೇ ಸಾಗುತ್ತಾರೆ. ಹುಣಿಸೇಹಣ್ಣು ಮುಪ್ಪಾಗಬಹುದು ಆದರೆ ಹುಳಿ ಮುಪ್ಪೇ?

ಹುಣಿಸೇಹಣ್ಣು ಮುಪ್ಪಾದರೂ ಅದರ ಹುಳಿ ಮುಪ್ಪೇ?
ಅಂದ ಹಾಗೆ "ಹುಣಿಸೇಹಣ್ಣು ಮುಪ್ಪಾದರೂ ಅದರ ಹುಳಿ ಮುಪ್ಪೇ?' ಎಂಬುದು ವಯಸ್ಸು ಮತ್ತು ಅನುಭವಗಳ ಸಂಗಮಕ್ಕೆ ಒಪ್ಪುವ ಮಾತು. ನಾ ಕಂಡಂತೆ ಕೆಲವು ನಟರು ತಾವು ಹಿರಿಯ ನಟರಾಗುತ್ತಿರುವಂತೆ, ಅನುಭವಗಳ ಮೂಟೆಯ ಭಾರ ಹೆಚ್ಚಿದಂತೆಲ್ಲಾ, ಒಂದು ಸೈಡ್ ರೋಲ್‌ನಲ್ಲಿ ಕಾಣಿಸಿಕೊಂಡರೂ, ಇಡೀ ಚಿತ್ರವನ್ನೇ ಆಕ್ರಮಿಸಿಕೊಳ್ಳುವಷ್ಟು ತಾಕತ್ತು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ, ಕೆಲವೊಮ್ಮೆ ಹೀರೋನನ್ನೂ ಮೀರಿಸಿ ನಿಲ್ಲುತ್ತಾರೆ.

ಹೀಗೇಕೆ ಹೇಳಿದೆ ಎಂದರೆ, ವಯಸ್ಸಾಯಿತು ಅಂತ ಶಸ್ತ್ರಾಸ್ತ್ರ ಕೆಳಗಿಡಬಾರದು. ಹಾಗೆ ಇಟ್ಟಾಗಲೇ, ಜನಸಾಮಾನ್ಯರ ಜೀವನದಲ್ಲಿ, ಕೆಲವೊಮ್ಮೆ ಅದೇಕೋ ದಿನಗಳೇ ಮುಂದೆ ಹೋಗುತ್ತಿಲ್ಲ ಎನಿಸುವುದು. ಇದೆಲ್ಲಾ ಅನಿಸಿಕೆ ಯಾವಾಗ ಮೂಡಬಹುದು ಎಂದರೆ, ದಿನ ಬೆಳಗಾದರೆ ತಿನ್ನೋದು, ಕುಡಿಯೋದು, ಮಲಗೋದು, ಏಳೋದು, ಟಿವಿ ನೋಡೋದು, ಮಲಗೋದು ಅಂತಾದಾಗ.

ಕಲಿಕೆಯ ಹಂತದಲ್ಲಂತೂ ಮಕ್ಕಳು ರೇಸ್ ಕುದುರೆಗಳೇ
ಈಗ ಸ್ವಲ್ಪ ಹಿಂದೆ ನಡೆದು ಜೀವನದ ಹಂತಗಳನ್ನು ನೋಡೋಣ. ಕೂಸು ಚಿಕ್ಕದಾಗಿರುವಾಗ ಬೇಗ ಬೆಳೆಯಲಿ ಎಂಬ ಆಸೆಯಿರುತ್ತದೆ. ಕೂಸು ಹೊರಳಿ, ಕೂರಲಿ, ನಿಲ್ಲಲಿ, ಓಡಾಡಲಿ, ಮಾತಾಡಲಿ ಹೀಗೆ ಲಿಸ್ಟ್ ಬಹಳ ಉದ್ದವಿದೆ. ಇನ್ನು ಕಲಿಕೆಯ ಹಂತದಲ್ಲಂತೂ ಮಕ್ಕಳು ರೇಸ್ ಕುದುರೆಗಳೇ ಆಗಿರುತ್ತಾರೆ. ನಿಮ್ಮ ಮಗನಿಗೆ ಹತ್ತು ವರ್ಷ ಆಯ್ತು ಆದರೂ ಇನ್ನೂ IIT coachingಗೆ ಹಾಕಿಲ್ವಾ ಅಂತ ಕೇಳಿದರೂ ಅಚ್ಚರಿಯಿಲ್ಲ. ಆಮೇಲೆ ಒಂದು ಹಂತದಲ್ಲಿ, ಅಪ್ಪ- ಅಮ್ಮ೦ದಿರು ಮಕ್ಕಳ ವಯಸ್ಸಿನ ಬಗ್ಗೆ ಚಿಂತೆ ನಿಲ್ಲಿಸಿದ್ದರೂ, ಮಕ್ಕಳಿಗೆ ಅದು ವರ್ಗಾವಣೆ ಆಗಿರುತ್ತದೆ.

ಪ್ರತೀ ಹುಟ್ಟಿದ ಹಬ್ಬಕ್ಕೆ ತಮಗೆ ವಯಸ್ಸಾಗುತ್ತಿದೆ ಎಂಬ ಭೀತಿ ಹುಟ್ಟಿಕೊಳ್ಳೋದೇ ಜೀವನದಲ್ಲಿ ಇನ್ನೂ ಸೆಟ್ಲ್ ಆಗಿಲ್ಲದೇ ಇರುವಾಗ. ಈ Settle ಅನ್ನೋದಕ್ಕೂ ಅರ್ಥವಿಲ್ಲ ಬಿಡಿ. ಕೆಲವರು ಅರವತ್ತಾದರೂ settle ಆಗಿರೋದಿಲ್ಲ. ಸೆಟ್ಲ್ ಎಂಬುದು ಒಂದು ದೃಷ್ಟಿಕೋನ ಅಷ್ಟೇ. ಇಪ್ಪತ್ಮೂರಕ್ಕೆ ಒಳ್ಳೆಯ ಕೆಲಸ, ಇಪ್ಪತ್ತಾರಕ್ಕೆ ಮದುವೆ, ಇಪ್ಪತ್ತೆಂಟಕ್ಕೆ ಮಕ್ಕಳು ಎಂಬುದು ಒಬ್ಬರ ದೃಷ್ಟಿಕೋನದಲ್ಲಿ ಸೆಟ್ಲ್ ಇರಬಹುದು. ಹೊಟ್ಟೆಬಟ್ಟೆಗೆ ತೊಂದರೆ ಇಲ್ಲ ಎಂಬುದು ಕೆಲವರ settle, ತಿಂಗಳಾ ಸಂಬಳ ಬರ್ತಿದೆ ಎಂಬುದು ಕೆಲವರ settle ಹೀಗೆ ಎಷ್ಟೋ ಸಾರಿ ಈ ವಯಸ್ಸಿಗೂ ಸೆಟ್ಲ್ ಎಂಬುದಕ್ಕೂ ಲಿಂಕ್ ಹೊಡೆಯುವವರು ಇರುತ್ತಾರೆ. ನೀವು ಹೇಗೆ?

ಎಂಟರಿಂದ ಒಂಬತ್ತು ಗಂಟೆಗೆ ಸುಸ್ತಾಗಬಹುದು
ವಯಸ್ಸಿರುವವರೆಗೂ ದಿನಕ್ಕೆ ಹದಿನೆಂಟು ಗಂಟೆ ದುಡಿದರೂ ದಣಿಯದ ದೇಹ, ಅದೇಕೋ ಒಂದು ಹಂತವಾದ ಮೇಲೆ ಎಂಟರಿಂದ ಒಂಬತ್ತು ಗಂಟೆಗೆ ಸುಸ್ತಾಗಬಹುದು. ವಯಸ್ಸಿರುವಾಗ ಜುಮ್ ಅಂತ ಎಂಟು ಹತ್ತು ಗಂಟೆಗಳ ಕಾಲ ಡ್ರೈವ್ ಮಾಡುವ ದೇಹ, ಒಂದು ಹಂತವಾದ ಮೇಲೆ ನಾಲ್ಕು ಗಂಟೆ ಡ್ರೈವ್ ಮಾಡಬೇಕೂ ಅಂದ್ರೂ ಅದೇನೋ ಹಿಂಸೆ. ಒಂದು ಹಂತದವರೆಗೆ ವಯಸ್ಸು ಎಂಬುದರ ಬಗ್ಗೆ ಜ್ಞಾನದ ಉದಯವಾಗೋದಿಲ್ಲ. ಕೊಂಚ ಸುಸ್ತು ಹಂಗೆ ಹಿಂಗೇ ಅಂತಾದರೆ ಆ ಕಡೆ ಗಮನ ಹೋಗುತ್ತದೆ.

ಒಂದು ಹಂತದ ಮೇಲೆ ಹುಟ್ಟಿದ ಹಬ್ಬ ಅಂತ ಬಂದಾಗ ಅದರಲ್ಲೂ ವಯಸ್ಸು ನಲವತ್ತು ಹೊಡೆದಾಗ ಬೋಧಿವೃಕ್ಷದ ಸಹಾಯವೇ ಇಲ್ಲದೇ ಅರಿವಿಗೆ ಬರುವುದೇ Age is just a number ಅನ್ನೋದು. ಆದರೆ ಒಂದು ವಿಷಯ ಏನಪ್ಪಾ ಅಂದ್ರೆ, ಯಾವುದೇ ವಯಸ್ಸಾದರೂ ವಯಸ್ಸು ಒಂದು ಸಂಖ್ಯೆಯೇ! ಮೂರು ಎಂಬುದೂ ಸಂಖ್ಯೆ, ಮೂವತ್ತು ಎಂಬುದೂ ಸಂಖ್ಯೆ. ನಾಲ್ಕರಂತೆ ನಲವತ್ತೂ ಸಹ.

ವಯಸ್ಸು ಎಂಬುದು ಒಂದು ಸಂಖ್ಯೆ ಅಷ್ಟೇ ಎಂಬುದು ನಮಗೆ ಸಮಾಧಾನ ಹೇಳಿಕೊಳ್ಳೋಕ್ಕೆ ಅಷ್ಟೇ. ವಾಹ್! ಈಗಲೂ ಬಹಳ ಚಿಕ್ಕವರಂತೆ ಕಾಣುತ್ತೀರಿ. You look so young ಎಂದಾಗ ಹಾಗೇ ಹತ್ತಿಯಂತೆ ಆಗುತ್ತದೆ ದೇಹ. "ಚಿಕ್ಕವರಂತೆ' ಎಂಬುದು "ಚಿಕ್ಕವರೇ' ಅಂತಲ್ಲ. ಈ ಅಂತೇ ಅನ್ನೋದು ಹೋಲಿಕೆ ಅಷ್ಟೇ ಆದರೆ ಹಾಗೆಯೇ ಅಂತೇನಲ್ಲ. "You look young' ಎಂಬುದರ ಅರ್ಥ "You are young' ಅಂತಲ್ಲ.

ಅಸ್ತ್ರ ಕೆಳಗಿಟ್ಟರೆ ಆಗುವ ಪರಿಣಾಮವನ್ನು ಭೀಷ್ಮರಿಂದ ಕಲಿಯಬೇಕು
ಹಸ್ತಿನಾಪುರಕ್ಕೆ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದರು ಆಚಾರ್ಯ ಭೀಷ್ಮರು. ದಿನನಿತ್ಯದಲ್ಲಿ ತಮ್ಮ ಕೆಲಸ ಮಾಡಿಕೊಂಡೇ ಸಾಗಿದ್ದರು. ಕೊನೆಗೆ ಕುರುಕ್ಷೇತ್ರ ಯುದ್ಧದಲ್ಲೂ ತಮ್ಮ ಪ್ರತಾಪ ಮೆರೆಯುವುದನ್ನು ಬಿಡಲಿಲ್ಲ. ಅದೂ ಎಂಥಾ ಪರಾಕ್ರಮ? ಶ್ರೀಕೃಷ್ಣ ಪರಮಾತ್ಮನೇ ಚಕ್ರಧಾರಿಯಾಗಿ ರಣರಂಗಕ್ಕೆ ಇಳಿಯುವಂತೆ ಮಾಡಿದ್ದು. ಯುದ್ಧ ರಂಗದಲ್ಲಿ ಶಿಖಂಡಿಯು ಎದುರಿಗೆ ಬಂದದ್ದೇ ಕಾರಣವಾಗಿ ಇಟ್ಟುಕೊಂಡು ಶಸ್ತ್ರಾಸ್ತ್ರ ಕೆಳಗಿರಿಸಿದಾಗ ಏನಾಯ್ತು? ಬಾಣಗಳ ಸುರಿಮಳೆ. ಅಸ್ತ್ರ ಕೆಳಗಿಟ್ಟರೆ ಆಗುವ ಪರಿಣಾಮವನ್ನು ಭೀಷ್ಮರಿಂದ ಕಲಿಯಲೇಬೇಕು. ನನ್ನ ಕೆಲಸ ಮುಗೀತು ಅಂತ ಹೋರಾಟದ ಜಗತ್ತಿನ ಮಧ್ಯೆ ಸುಮ್ಮನೆ ಕೂತರೆ ಮಂದಿ ತಲೆಯನ್ನೇ ತೆಗೆದುಬಿಡ್ತಾರೆ. ಇದನ್ನು ದ್ರೋಣಾಚಾರ್ಯರಿಂದ ಕಲಿಯಬೇಕು ಅಲ್ಲವೇ?

ಬಾಡಿಯನ್ನು ಬಾಡಿಗೆಗೆ ಬಿಟ್ಟಿರುವ ಭಗವಂತನಿಗೆ, ಭವ ಬಂಧನವಿರುವವರೆಗೂ ಬಾಡಿಯನ್ನು ಬಗ್ಗಿಸಿ ದುಡಿಯುವ ಜೊತೆಗೆ ಭಕ್ತಿಭಾವವೆಂಬ ಬಾಡಿಗೆ ಭರಿಸುವ ಬದಲು, ಬಾಡಿಯು ಬಾಡುವವರೆಗೂ ಭವದ ಬಯಕೆಗಳನ್ನು ಭರಿಸಲೆಂದೇ ಬೇಡುತ್ತಲೋ, ಬಡಿಯುತ್ತಲೋ ಭಂಡ ಬಾಳು ಬಾಳುವವನ ಬಗ್ಗೆ ಬೇಸತ್ತು, ಬಸವಳಿದು, ಭೂಮಿಗೆ ಬಂದ ಭಗವಂತ soul ಅನ್ನು ಎತ್ತಿಕೊಳ್ಳಲ್ ಸೊಲ್ಲೆತ್ತದೇ ಸೋಲನ್ನೊಪ್ಪಿಕೊಳ್ಳಲೇಬೇಕು. ಏಕೆಂದರೆ ಅವನಿಗೂ ಗೊತ್ತು Age is just a number ಅಂತ. ಇಷ್ಟು ವರ್ಷಕ್ಕೆ ಅಂತ ಕಳುಹಿಸಿರುವ ಅವನಿಗೆ ಗೊತ್ತಿಲ್ಲವೇ ಯಾವಾಗ ಕಾಂಟ್ರಾಕ್ಟ್ ಮುಗಿದಿರುತ್ತದೆ ಅಂತ? ಏನಂತೀರಾ?

English summary
Srinath Bhalle Column: Our age is higher today than yesterday, With the passing of days comes the age ascending.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X