ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆಗತ್ತಲಲ್ಲಿ ಯಕ್ಷಗಾನ ಮಾಯಾಲೋಕ

By Staff
|
Google Oneindia Kannada News

yakshagana people theatre, img, malenadiga, vikrantakarntakaಮಳೆಗಾಲ ಕಳೆದು, ಅಕ್ಟೋಬರು ನವೆಂಬರು ಬಂತೆಂದರೆ ನಮ್ಮೂರ ಹುಡುಗರಿಗೆ ಎಲ್ಲಿಲ್ಲದ ಹರ್ಷ. ಮಳೆ ಮುಗಿಯಿತೆಂಬುದೇನೂ ಅದಕ್ಕೆ ಕಾರಣವಲ್ಲ. ಇಷ್ಟು ದಿನ ಜಡ್ಡು ಕಟ್ಟಿದ್ದ ಸಂಜೆಗಳು, ಉಲ್ಲಸದಾಯಕವಾಗಿ ಬದಲಾಗುತ್ತದೆ, ಮತ್ತು ರಾತ್ರಿಯ ರಂಗು ಕೂಡ ಹೆಚ್ಚುತ್ತದೆ. ಮನೆಗಳಲ್ಲೇ ಅನಿವಾರ್ಯವಾಗಿ ಕಳೆಯಬೇಕಾದ ಸತ್ತ ರಾತ್ರಿಗಳ ಬದಲು, ಹೊಸ ಉತ್ಸಾಹ ಕೊಡುವ ಝಗಮಗ ನಿಶೆಯ ನಶೆ ಏರುತ್ತದೆ.

ಅಂಕಣಕಾರ:ಶ್ರೀನಿಧಿ.ಡಿ.ಎಸ್

ಸಂಜೆಗತ್ತಲು ಏರುತ್ತಿದ್ದ ಹಾಗೆ, ಮನೆಯಂಗಳದಲ್ಲಿ ಸುಮ್ಮನೆ ನಿಂತಿದ್ದರೆ, ಸುತ್ತಲ ಎಂಟು ದಿಕ್ಕುಗಳಲ್ಲಿ, ಯಾವ ಕಡೆಯಿಂದಲಾದರೂ ಸಣ್ಣಗೆ ಚೆಂಡೆಯ "ಕೇಳಿ" ಸದ್ದು ಕೇಳುತ್ತದೆ. ಕೇಳಿ ಅಂದರೆ, ರಾತ್ರಿಗಳಲ್ಲಿ ಯಕ್ಷಗಾನ ಇರುವಲ್ಲಿ, ಸಂಜೆ ಹೊತ್ತಿಗೇ ಚೆಂಡೆಗಾರ ಊರಿಗೇ ಕೇಳುವ ಚೆಂಡೆ ಬಾರಿಸುವುದು. ಇರಲಿ, ಕೇಳಿಯಲ್ಲದಿದ್ದರೆ ಯಾವುದಾದರೂ ಶಾಲೆಯ ಮೈದಾನದಲ್ಲಿ ಮೈಕು ಸೆಟ್ಟಿನವನು ಸ್ಕೂಲ್ ಡೇ ಗೆ ಕೂಗಿಸುವಂತಿರುವ ಚಿತ್ರಗೀತೆಗಳು ಕೇಳಲೇ ಬೇಕು. ಅದೂ ಇಲ್ಲವಾದಲ್ಲಿ ದೇವಸ್ಥಾನಗಳ ಜಾತ್ರೆಯದೋ, ಯುವಕ ಮಂಡಲಗಳ ವಾರ್ಷಿಕೋತ್ಸವ ಹೀಗೆ ಒಂದಲ್ಲ ಒಂದು ಕಾರ್ಯಕ್ರಮಗಳ ಸದ್ದು ಅಥವ ಸುದ್ದಿ ನಮ್ಮಂತವರನ್ನು ತಲುಪಿಯೇ ತಲುಪುತ್ತದೆ. ಮತ್ತು, ಹೀಗೆ ತಲುಪಿದ ಸುದ್ದಿಯ ಬೆನ್ನು ಹಿಡಿದು ನನ್ನಂತಹ ಯುವಕರ ಗುಂಪು ಹೊರಟೇ ಸಿದ್ಧ.

ಚಳಿ ಸಣ್ಣಗೆ ನಮ್ಮನು ಹಿಡಿಯುವ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ನಾವುಗಳು ಮನೆಯಿಂದ ಹೊರಡುವ ಐಡಿಯಾ ಹಾಕುತ್ತಿರುತ್ತೇವೆ. ನಮ್ಮ ಮನೆಯಲ್ಲಿ ಅಪ್ಪ ಯಕ್ಷಗಾನ ಅಂದ ಕೂಡಲೇ ಅನುಮತಿ ಕೊಡುವುದರಿಂದ, ಮತ್ತು ಉಮೇದು ಇದ್ದ ದಿನ ಅವನೂ ಬರುವುದರಿಂದ ಅಷ್ಟೆಲ್ಲ ತೊಂದರೆ ಇರುವುದಿಲ್ಲ. ಸಮಸ್ಯೆ ಎದುರಾಗುವುದು ಈ ಹುಚ್ಚು ಕುಣಿತ ಅಂತ ನಮ್ಮಪ್ಪ ಅಮ್ಮ ಕರೆಯುವ ಯುವಕ ಮಂಡಲಗಳ ಕಾರ್ಯಕ್ರಮ ಇದ್ದಾಗ. ಅಂತಹ ಸಮಯದಲ್ಲಿ ಬೈಗುಳಗಳು ಇದ್ದಿದ್ದೇ ಆದರೂ ನಮ್ಮ ತಂಡದ ಇತರ ಸದಸ್ಯರು ಮನೆಗೆ ಬರುವುದರಿಂದ, ಸ್ವಲ್ಪ ಗೊಣಗಿದ ನಂತರ. ಅನುಮತಿ ಪಕ್ಕಾ.

ಎಲ್ಲರೂ ಯಾವುದಾದರೂ ನಿಶ್ಚಿತ ಜಾಗದಲಿ ಒಟ್ಟಾಗಿ ನಂತರ ಗದ್ದೆಬಯಲುಗಳ ಹಾದಿಯಲ್ಲಿ ಪಯಣ ಶುರು. ಬ್ಯಾಟರಿ ಬೆಳಕನ್ನು ಸುಖಾ ಸುಮ್ಮನೇ ಸಿಕ್ಕಸಿಕ್ಕಲ್ಲೆಲ್ಲಾ ಹಾಯಿಸುತ್ತ, ಬೆಳಕನ್ನು ಕಂಡು ಸಟಕ್ಕನೆ ನೆಗೆದೋಡುವ ಮೊಲಗಳನ್ನು ಕಂಡು "ಅರೇ, ಹೇಗೆ ಇವುಗಳು ಲಿಗೋರಿ ಪರ್ಬುವಿನ ಬಲೆಗೆ ಬೀಳದೇ ಬಚಾವಾದವು" ಅಂತೆಲ್ಲ ಮಾತಾಡುತ್ತ, ಹನಿಗಳು ಸಣ್ಣಗೆ ಒದ್ದೆ ಮಾಡಿರುವ ಕೊಯ್ದಾದ ಭತ್ತದ ಸಸಿಗಳ ಬುಡಗಳನ್ನು ಮೆಟ್ಟಿಕೊಳ್ಳುತ್ತ, ಯಾರಾದಾದರೂ ಜಾತಕ ಬಯಲು ಮಾಡುತ್ತ ಸಾಗುತ್ತೇವೆ. ಇನ್ಯಾರಿಗಾದರೂ ದನ ಕಟ್ಟುವ ಗೂಟ ಕಾಲಿಗೆ ಸಮಾ ತಾಗಿ ಆ ಗೂಟ ಹುಗಿದವರ ಜನ್ಮ ಜಾಲಾಡುತ್ತಾ ಗಮ್ಯದತ್ತ ಸಾಗುತ್ತೇವೆ.

ಯಕ್ಷಗಾನವಾದರೆ, ಆವತ್ತಿನ ರಾತ್ರಿ ನಮ್ಮೂರಿನ ಬಾಕಿಮಾರು ಗದ್ದೆಗಳು ಮಾಯಾಲೋಕವೇ ಆಗಿರುತ್ತದೆ. ಹಿಂದಿನ ದಿನದವರೆಗೂ ಬರಿಯ ಬಯಲು ಗದ್ದೆಯಾಗಿದ್ದ ಜಾಗ, ಅಂದು ಅಮರಾವತಿಯ ಅಪರಾವತಾರ. ಯಾವುದೋ ಮನೆಯೆದುರ ಗದ್ದೆಯಲ್ಲಿ, ಯಕ್ಷಗಾನದ ಹ್ಯಾಂಡ್ ಬಿಲ್ಲುಗಳಲ್ಲಿ ಬರೆದಿರುವ "ವಿದ್ಯುದ್ದೀಪಾಲಂಕೃತ ಭವ್ಯ ದಿವ್ಯ ರಂಗಮಂಟಪ" ಎದ್ದು ನಿಂತು ಸುತ್ತ ಬಯಲಲ್ಲಿ ಹರಡಿರುವ ದಟ್ಟ ಕತ್ತಲೆಯ ವಿರುದ್ಧ ಸ್ಪರ್ಧಿಸುತ್ತ ನಿಂತಿರುತ್ತದೆ.

ಯಕ್ಷಗಾನ ನಡೆಯೋ ಸ್ಥಳಕ್ಕೆ ನಮ್ಮ ತಂಡ ಹೋಗಿ ಮುಟ್ಟುವಾಗ 11 ಗಂಟೆ ಆಗಿಯೇ ಆಗಿರುತ್ತದೆ. ಏಕೆಂದರೆ,ಅದಕ್ಕೂ ಮೊದಲೇ ಹೋದರೆ ಭಯಂಕರ ಚಪ್ಪೆ ವಾತಾವರಣ ಅಂತ ಎಲ್ಲರಿಗೂ ಗೊತ್ತು. ತೀರಾ ಗೋಳಿಬಜೆ ಅಂಗಡಿಯ ಬಾಬಣ್ಣ ಇನ್ನೂ ಎಣ್ಣೆ ಸೈತ ಬಿಸಿಗೆ ಇಟ್ಟಿರುವುದಿಲ್ಲ, ಮತ್ತು ಎದುರಿನ ರಂಗಸ್ಥಳ, ಹೊಸದಾಗಿ ಮೇಳಕ್ಕೆ ಸೇರಿರುವ ಹುಡುಗರ ತರಬೇತಿ ಕೇಂದ್ರವಾಗಿರುತ್ತದೆ. ಜೊತೆಗೆ ಭಾಗವತರೂ ಅಷ್ಟಕ್ಕೆ ಅಷ್ಟೆ. ಹಾಗಂತ ಆಮೇಲೆ ನಾವೇನು ಬೆಳಗಿನ ವರೆಗೆ ಆಟ ನೋಡೇ ನೋಡುತ್ತೇವೆ ಅಂತೇನೂ ಖಂಡಿತ ತಿಳಿದುಕೊಳ್ಳಬೇಡಿ. ಅಲ್ಲಿ ಅಂದು ನಡೆವ ಪ್ರಸಂಗ ಖಂಡಿತವಾಗಿಯೂ ನಾವುಗಳು ಈ ಮೊದಲು ನಾಲ್ಕಾರು ಬಾರಿ ನೋಡಿದವೇ ಆಗಿರುತ್ತದೆ. ದೇವೀ ಮಹಾತ್ಮೆಯಂತಹ ಯಕ್ಷಗಾನಗಳಾಗಿ ಬಿಟ್ಟರಂತೂ, ನಮ್ಮಲ್ಲಿ ಅನೇಕರು ಅವರುಗಳು ಹೇಳುವ ಅರ್ಥವನ್ನು ಕೂಡ ಹಾಗಾಗೇ ಹೇಳಬಲ್ಲರು- ನಿದ್ರೆಗಣ್ಣಿನಲ್ಲೂ. ನಮಗೆ ಆವತ್ತಿನ ರಾತ್ರಿಯ ಮಾಹೋಲ್ ಅನುಭವಿಸುವುದೇ, ಯಕ್ಷಗಾನಕ್ಕಿಂತ ಹೆಚ್ಚಿಗೆ ಮುಖ್ಯವಾಗಿರುತ್ತದೆ. ಹಾಗಂತ ಹೊಸ ಪ್ರಸಂಗವಾದರೆ ಬೆಳಗಿನ ತನಕವೂ ಕುರ್ಚಿಯಲ್ಲಿ ಸ್ಥಾಪಿತ.

ಚಳಿಯನ್ನು ಹದವಾಗಿ ಅನುಭವಿಸುತ್ತ, ಎಲ್ಲ ಸೇರಿ ಒಂದೆಂಟು ಪ್ಲೇಟು ಬಾಳೇಕಾಯಿ ಪೋಡಿ ತಿಂದು, ಮತ್ತೊಂದಿಷ್ಟು ಗೋಳಿಬಜೆ -ಮೇಲಿಂದ ಚಹಾ ಸುರಿದುಕೊಂಡು ಯಕ್ಷವೇಷಗಳು ತಯಾರಾಗುತ್ತಿರುವ ಚೌಕಿಗೊಂದು ವಿಸಿಟ್ ಹಾಕಿದರೆ ಆವತ್ತಿನ ಯಕ್ಷಗಾನ ನಮ್ಮ ಪಾಲಿಗೆ ಮುಗಿದ ಹಾಗೆ. ನಮ್ಮಲ್ಲಿ ಕೆಲವರು ಬೆಳಗಿನವರೆಗಿನ ಸ್ಕೆಚ್ಚು ಹಾಕುವವರೂ ಇದ್ದು, ಅಂತವರನ್ನು ಅಲ್ಲೇ ಬಿಟ್ಟು ನಾವು 3 ಗಂಟೆಗೆ ಕಳಚಿಕೊಂಡು ಮನೆಗೆ ವಾಪಾಸಾದರೆ, ಮಲಗಿದ ಮೇಲೂ ಕಿವಿಯಲ್ಲಿ ಚೆಂಡೆಯ ಪೆಟ್ಟು ಅನುರಣನ.

ಜಾತ್ರೆಗಳಿಗೆ ಹೊರಡುವಾಗ ಸ್ವಲ್ಪ ಬದಲಾವಣೆ ಇರುತ್ತದೆ. ದೇವರ ಹೆಸರು ಹೇಳಿ ಮನೆಯಿಂದ ಹೊರಡುವುದರಿಂದ ಯಾವ ತೊಂದರೆಗಳೂ ಇರುವುದಿಲ್ಲ. ನಾಲ್ಕಾರು ಕಿಲೋಮೀಟರು ದೂರದವರೆಗೂ ಹೋಗಬೇಕಾಗಿ ಬರುವುದರಿಂದ ಇಂತಹ ಕಾರ್ಯಕ್ರಮಗಳಿಗೆ ಸೈಕಲು ನಮ್ಮೆಲ್ಲರ ಸಾಥಿ. ಎದುರಿಗೆ ದುಬಾಯಿಂದ ಬಂದ ಹಾಲ್ಬೆಳಕು ಚೆಲ್ಲುವ ಬ್ಯಾಟರಿ ಹಿಡಿದ ಗೆಳೆಯ, ಹಿಂದೆ ನಮ್ಮ ದಂಡು.

ಜಾತ್ರೆಗಳಲ್ಲಿ ದೇವಸ್ಥಾನದ ಎದುರಲ್ಲಿ ಪ್ರತಿ ನಿತ್ಯ ಎಂಥವಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಅವುಗಳ ಯಶಸ್ಸು ಅಥವ ಸೋಲು ನಮ್ಮಂತಹ ಯುವಕರಿಂದಲೇ ನಿರ್ಧರಿಸಲ್ಪಡುತ್ತದೆ, ಈ ಬರೀ ಸೀಡಿ ಟ್ರಾಕು ಹಾಕಿಕೊಂಡು , ಬಾಯಿಮುಚ್ಚಿ ಕಳೆದು ಮಾಡುವ ಹಾಡುಗಾರರಿರುವ ಆರ್ಕೆಷ್ಟ್ರಾ ತಂಡಗಳ ಮಾರ್ಯದೆ ಕಳೆದ ಕೀರ್ತಿ ನಮಗೆ ಸಲ್ಲಬೇಕು. ಜಾತ್ರೆ ಎಂದಮೇಲೆ ಮಾಮೂಲಾಗಿರುವ ಐಸ್ಕ್ರೀಮು ಇತ್ಯಾದಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಇದ್ದೆಲ್ಲ ಅಂಗಡಿಗಳನ್ನು ಒಂದು ರೌಂಡು ಹೊಡೆದು, ನಾಟಕವಿದ್ದರೆ, ಅದೆಂತ ತಗಡೂ ತಂಡವಾದರೂ ಭಕ್ತಿಶೃದ್ಧೆಗಳಿಂದ ಆ ನಾಟಕವನ್ನು ನೋಡಿ, ಅದರಲ್ಲಿನ ಯಾವ ಕಾಮಿಡೀ ಸೀನನ್ನು ನಮ್ಮ ಸ್ಕಿಟ್ಟುಗಳಿಗೆ ಕದ್ದು ಹೊಂದಿಸಬಹುದು ಎಂದು ವಿಚಾರ ಮಾಡುತ್ತ ಮನೆ ಕಡೆಗೆ ಹೊರಟು ಬಿಡುತ್ತೇವೆ. ಎಂಥ ರಶ್ ಇದ್ದರೂ ಒಮ್ಮೆ ದೇವರನ್ನು ನೋಡದೇ ಬರುವುದಿಲ್ಲ. ಅಲ್ಲಿನ ಪ್ರಸಾದವನ್ನು ಮನೆಗೆ ಕೊಡಬೇಕಾದ ಅತ್ಯಂತ ಮುಖ್ಯಜವಾಬ್ದಾರಿ ನಮ್ಮ ಮೇಲಿರುತ್ತದೆ.

ಹಾಗೆ ಮಧ್ಯರಾತ್ರಿ ಕಳೆದ ಮೇಲೆ ಕೆಲಬಾರಿ ಮನೆಗೆ ವಾಪಾಸಾಗುವ ದಾರಿಯಲ್ಲಿ ರಸ್ತೆಯ ಮೇಲೆ ಬಿದ್ದುಕೊಳ್ಳುವುದುಂಟು, ನಮ್ಮದೊಂದು ಖಾಯಂ ಜಂಕ್ಷನಿನಲ್ಲಿ. ಅಲ್ಲಿ ತಲೆ ಮೇಲೆ ಫಳಫಳ ಮಿಂಚುತ್ತಿರುವ ನಕ್ಷತ್ರಗಳನ್ನು ನೋಡುತ್ತ ತಲೆಬುಡವಿಲ್ಲದ ಚರ್ಚೆಗಳನ್ನು ಮಾಡುತ್ತ ಕೂರುವುದು ಅಭ್ಯಾಸ. ಅನ್ಯಗ್ರಹಗಳು- ಭೂಮಿಯಾಚೆಗಿನ ಜೀವನ ಇತ್ಯಾದಿಯಾಗಿ ಜಗತ್ತು ಎಂದಿನಿಂದಲೋ ತಲೆಕೆಡೆಸಿಕೊಂಡಿರುವ ವಿಚಾರ ಸರಣಿಗೆ ನಮ್ಮಿಂದಾದ ಕಾಣಿಕೆ ಕೊಡುವುದೂ ಉಂಟು. ಆದರೆ ಅವುಗಳನ್ನು ಸ್ವೀಕರಿಸುವವರು ಯಾರೂ ಇಲ್ಲದ್ದರಿಂದ ಅವು ಇವತ್ತಿಗೂ ಆ ರಸ್ತೆ ಜಂಕ್ಷನಿನಲ್ಲಿ ಕೊಳೆಯುತ್ತ ಬಿದ್ದಿರಬೇಕು.

ಇವೆಲ್ಲ ನಾನು ಊರಿನಲ್ಲಿದ್ದಾಗ ನಮ್ಮ ತಂಡ ಮಾಡುತ್ತಿದ್ದ ಕೆಲಸಗಳು. ಇಂದು ನಮ್ಮ ಅಲ್ಲಿನ ಟೀಮು ಒಡೆದಿದೆ. ಹಾಗಂತ ಇಲ್ಲಿ ಬೆಂಗಳೂರಿನಲ್ಲಿ ರಾತ್ರಿ ತಿರುಗಾಟಗಳ ಹೊಸ ಸಾಧ್ಯತೆಗಳನ್ನು ಕಂಡುಕೊಂಡಿದ್ದೇವೆ. ಅವುಗಳ ಬಗ್ಗೆ ಮುಂದೆದಾದರೂ ಬರೆಯುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X