ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡು ಹರಟೆ-2: ಹೂಹೃದಯಗಳು ಹಾಳಾಗುತ್ತಿವೆ.

By Staff
|
Google Oneindia Kannada News

Need for protecting the drug addict and neglected childಮಾದಕ ದ್ರವ್ಯಗಳ ಬಗ್ಗೆ ಕಾರ್ಯಕ್ರಮವೊಂದನ್ನು ಮಾಡಲು ಹೊರಟಾಗ, ಒಬ್ಬ ಹುಡುಗನ ಪರಿಚಯವಾಗಿತು. ಅವನಿಗೆ ಹನ್ನೆರಡು ವರ್ಷ. ಮಧ್ಯಮ ವರ್ಗದ ಕುಟುಂಬ ಅವನದು. ಏಳನೇ ವಯಸ್ಸಿಗೆ ಅತನಿಗೆ ತೀರ ಸುಲಭವಾಗಿ ದೊರಕುವ ಮಾದಕದ್ರವ್ಯವೊಂದನ್ನು ಸೇವಿಸುವ ಚಟ ಹತ್ತಿಕೊಂಡಿತ್ತು. ತನ್ನ ಮನೆಯ ಪಕ್ಕದಲ್ಲಿದ್ದ ಸ್ಲಂ ನ ಹುಡುಗರ ಸಹವಾಸದಿಂದ ಈ ಅಭ್ಯಾಸ ರೂಢಿಸಿಕೊಂಡಿದ್ದ.

ಅಂಕಣಕಾರ : ಶ್ರೀನಿಧಿ ಡಿ.ಎಸ್.

ಕೇವಲ ಹತ್ತಿಪ್ಪತ್ತ್ತು ರೂಪಾಯಿಗಳಿಗೆ ಎಲ್ಲ ಸ್ಟೇಶನರಿ ಅಂಗಡಿಗಳಲ್ಲೂ ದೊರಕುವ ಈ ವಸ್ತುಗಾಗಿ ಆ ಹುಡುಗ ಮೊದ ಮೊದಲು ಸ್ನೇಹಿತರ ಬಳಿ ದುಡ್ದು ಈಸಿಕೊಳ್ಳುತ್ತಿದ್ದ. ಅವರ ಜೊತೆಗಿದ್ದಾಗ ಪಾಲು ಸಿಗುತ್ತಿತ್ತು. ಆಮೇಲೆ ದಿನಕ್ಕೆ ಹಲ ಬಾರಿ ಈ ದ್ರವ್ಯ ಬೇಕಾಗುವ ಪರಿಸ್ಥಿತಿ ಬಂತು. ಮನೆಯಲ್ಲಿ ದುಡ್ಡು ಕದಿಯೋಕೆ ಶುರು ಮಾಡಿದ. ಅಪ್ಪನಿಗೆ ಒಂದು ದಿನ ಗೊತ್ತಾಗಿ ಸಾಯ ಬಡಿದ. ಆವತ್ತೊಂದಿನ, ದಮಡಿ ದುಡ್ಡಿಲ್ಲ. ದೊಣ್ಣೆ ತಗೊಂಡು ಬಂದವನೇ ಅಮ್ಮನೆದುರಿಗೆ ನಿಂತ. ಅಮ್ಮಾ, ಇಪ್ಪತ್ತು ರೂಪಾಯಿ ಕೊಡು ಅಂದ. ಅಮ್ಮ ಕೊಡಲಿಲ್ಲ. ಬುದ್ಧಿ ಹೇಳಲು ಬಂದಳು. ದೊಣ್ಣೆ ಎತ್ತಿದವನೇ ಆಕೆಯ ಮೊಣಕಾಲಿಗೆ ಹೊಡೆದು, ದುಡ್ಡು ಕಿತ್ತುಕೊಂಡು ಓಡಿದ. ಹೊಡೆದ ಹೊಡೆತ ಹೇಗಿತ್ತು ಅಂದರೆ, ಆಕೆ ಎರಡು ವರುಷಗಳ ಬಳಿಕ ಇವತ್ತೂ ಕುಂಟುತ್ತಿದ್ದಾಳೆ.

ಒಂದು ದಿನ ದುಡ್ಡು ಕದಿಯುವಾಗ ಅಪ್ಪನ ಕೈಗೆ ಸಿಕ್ಕಿಕ್ಕೊಂಡ. ಆತ ಮಗನನ್ನ ಎತ್ತಿ ಬಿಸಾಕಿದ. ಹುಡುಗನ ತಲೆ ಕಿಟಕಿಯ ಗ್ರಿಲ್ ಗೆ ಬಡಿದು, ಸೀಳಾಯಿತು. ರಕ್ತ ಸುರಿಯತೊಡಗಿತು. ತನ್ನ ಗಾಯಕ್ಕೇ ಕೈ ಹಾಕಿ, ಅಪ್ಪಾ, ದುಡ್ಡು ಕೊಡು, ಇಲ್ಲದಿದ್ದರೆ ಈ ಗಾಯಾನ ಬಗೆದುಕೊಂಡು ಬಿಡ್ತೀನಿ ಅಂತ ಧಮಕಿ ಹಾಕಿದ್ದ ಈ ಭೂಪ!.

ಮನೆಯಲ್ಲಿದ್ದರೆ ಉಸಿರುಗಟ್ಟಿದಂತಾಗುತ್ತದೆ ಅಂತ ಗೊತ್ತಾಗಿ, ಮನೆ ಬಿಟ್ಟೋಡಿದ. ಸಿಕ್ಕ ಸಿಕ್ಕ ಮನೆಗಳ ಪಾತ್ರೆ ಪರಡಿ ಕದ್ದ. ದೇವಸ್ಥಾನಗಳ , ಮಸೀದಿಗಳ ಹುಂಡಿಯ ಹಣ ಕದ್ದ. ಇದೆಲ್ಲ ಆಗಿಯೂ ದುಡ್ಡು ಸಾಲುತ್ತಿಲ್ಲ ಅಂತಾದಾಗ ಬೆಂಗಳೂರಿನ ಎಂ.ಜಿ.ರೋಡಿನಲ್ಲಿ ಪಿಂಪ್ ಆಗಿ ಕೆಲ್ಸ ಮಾಡಿದ ! ಅಕ್ಷರಶ: ರಾತ್ರಿ ರಾಣಿಯರ ದಲ್ಲಾಳಿಯಾಗಿ ಕೆಲಸ ಮಾಡಿದ್ದ ಈ ಬಾಲಕ. ವಯಸ್ಸು ಕೇವಲ ಹನ್ನೊಂದು ಆಗ.

ಬೇರೆ ಯಾರಾದರೂ ಈ ಕಥೆ ಹೇಳಿದ್ದರೆ ನಂಬುತ್ತಿರಲಿಲ್ಲ. ಆ ಹುಡುಗನೇ ನನ್ನೆದುರು ಕೂತು ತನ್ನ ಚರಿತ್ರೆ ತೆರೆದಿಟ್ಟಾಗ ನಂಬಬೇಕಾಯಿತು.

******

ಮತ್ತೊಬ್ಬ ಹುಡುಗನ ಕಥೆ, ಇದಕ್ಕೂ ಮಿಗಿಲಾದ್ದು. ಮೇಲ್ಮಧ್ಯಮ ವರ್ಗ, ಅಪ್ಪ ಬ್ಯಾಂಕ್ ಉದ್ಯೋಗಿ. ಮಾದಕ ದ್ರವ್ಯದ ಚಟ ಶುರುವಾಗಿದ್ದು ಹದಿಮೂರನೇ ವಯಸ್ಸಿಗೆ. ಗಾಂಜಾದಿಂದ ಶುರುವಾದ ಚಟ ಜಗತ್ತಿನ ಎಲ್ಲ ಜಾತಿಯ ಮಾದಕ ದ್ರವ್ಯಗಳನ್ನು ರುಚಿ ನೋಡುವಂತೆ ಪ್ರೇರೇಪಿಸಿತು. ಮರಿಜುವಾನ, ಹೇರಾಯಿನ್, ಕೋಕೇನ್ ಎಲ್ಲದರ ದಾಸನಾಗಿ ಹೋದ ಈ ಹುಡುಗ. ಅಪ್ಪ ಪಾಕೆಟ್ ಮನಿ ಕೊಡುತ್ತಿದ್ದರು. ಮಗನಿಗೆ ೧೮ ವರ್ಷವಾಗುವವರೆಗೂ, ಹೆತ್ತವರಿಗೆ ಮಗ ಮಾದಕ ದ್ರವ್ಯಕ್ಕೆ ಬಲಿ ಬಿದ್ದದ್ದು ಗೊತ್ತೇ ಇರಲಿಲ್ಲ. ನಿತ್ಯ ತಡರಾತ್ರಿ ಮನೆಗೆ ಬರುತ್ತಿದ್ದ, ಅದಾವುದೋ ಐ ಡ್ರಾಪು ಕಣ್ಣಿಗೆ- ಕೆಂಪು ಕಣ್ಣನ್ನ ಸರಿಯಾಗಿಸಲು. ಮಗ ಮಾದಕ ದ್ರವ್ಯದ ನಶೆಯಲ್ಲಿ ಗಲಾಟೆ ಮಾಡಿಕೊಂಡು ಪಕ್ಕದ ಮನೆಯ ಹುಡುಗ ಕೈ ಮುರಿದಾಗಲೇ ಆವರಿಗೆ ಗೊತ್ತಾಗಿದ್ದು, ಈತ ಹಿಂತಿರುಗಿ ಬರದ ದಾರಿಯಲ್ಲಿ ಹೊರಟಿದ್ದಾನೆ ಅನ್ನುವುದು.

ಅಪ್ಪ ಅಮ್ಮ ಅದೆಷ್ಟು ಸರಿಯಾಗಿಸಲು ಪ್ರಯತ್ನಿಸಿದರೂ, ಊಹೂಂ ಸರಿಯಾಗಲಿಲ್ಲ. ಬೆಂಗಳೂರಲ್ಲಿ ಡ್ರಗ್ಸ್ ಒಂದಿಷ್ಟು ದಿನ ಸಿಗದೇ ಹೋದಾಗ, ಸೀದಾ ಒಬ್ಬನೇ ಬೈಕ್ ಹತ್ತಿಕೊಂಡು ಗೋವಾಕ್ಕೇ ಹೋಗಿದ್ದ. ಡ್ರಗ್ ಮಾರಾಟ ಮಾಡಿದರೆ ಹೆಚ್ಚು ದುಡ್ದು ಸಿಗುತ್ತದೆ ಅಂತ ಗೊತ್ತಾದ ಕೂಡಲೇ, ತನ್ನ 18ರ ವಯಸ್ಸಿನಲ್ಲೇ , ಡ್ರಗ್ ಪೆಡ್ಲಿಂಗ್ ನಂತಹ ಅತ್ಯಂತ ಅಪಾಯಕಾರೀ ಧಂದೆಗೆ ಇಳಿದಿದ್ದ. ಬೆಂಗಳೂರಿನ ಹೊರವಲಯದ ರಸ್ತೆಗಳಲ್ಲಿ ರಾತ್ರಿ ಹೊತ್ತು ದುಡ್ಡಿಗಾಗಿ ದರೋಡೆ ಪ್ರಯತ್ನವನ್ನೂ ಮಾಡಿತ್ತು ಇವರ ಗುಂಪು. ಜೊತೆಯಲ್ಲಿದ್ದ ಗೆಳೆಯ, ಡ್ರಗ್ಸ್ ಓವರ್ ಡೋಸ್ ಆಗಿ ಇವನ ಪಕ್ಕದಲ್ಲೇ ಸತ್ತು ಬಿದ್ದಿದ್ದ ಒಂದು ರಾತ್ರಿ. ಅಷ್ಟಾದರೂ, ಚಟ ಬಿಡಲಿಲ್ಲ. ಯಾವ ಬಗೆಯ ಮಾದಕ ದ್ರವ್ಯದಲ್ಲೂ ಕಿಕ್ ಹತ್ತದೇ ಹೋದಾಗ, ನಾಲಿಗೆಯಡಿ ಮರಿ ನಾಗರದಿಂದ ಕಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ.

ಮೇಲಿನ ಎರಡು ಘಟನೆಗಳಲ್ಲಿ ಹೇಳಿದ ಹುಡುಗರೂ ಈಗ ಪುನರ್ವಸತಿ ಕೇಂದ್ರಗಳಲ್ಲಿದ್ದಾರೆ, ಕೆಲ ವರುಷಗಳಾದರೂ ಬೇಕು, ಮಾನಸಿಕ ಮತ್ತು ದೈಹಿಕವಾಗಿ ಸರಿಹೊಂದಿ ಸಮಾಜಕ್ಕೆ ಮರಳಲು.

*******

ಒಂದು ತಿಂಗಳ ಹಿಂದಿನ ಮಾತು, ಭಾನುವಾರ ಬೆಳಗ್ಗೆ ರೂಮ್ ಮೇಟು ಹರ್ಷಂಗೆ ಬಾಗಿಲು ಬಡಿದ ಸದ್ದು ಕೇಳಿ ಎಚ್ಚರಾಯಿತು. ಎದ್ದು ಕಣ್ಣುಜ್ಜಿ ಬಾಗಿಲು ತೆರೆದರೆ 5-6ನೇ ಕ್ಲಾಸಿಗೆ ಹೋಗುವ ವಯಸ್ಸಿನ ಹುಡುಗ. "ಅಂಕಲ್, ಪೇಪರ್ ಬಿಲ್ ಕೊಡಿ", ಹರ್ಷ ಬಿಲ್ ಎಲ್ಲಿ ಅಂತ ಕೇಳಿದ್ರೆ "ನಿಮ್ ರೂಂ ಮೇಟ್ ಗೆ ನಿನ್ನೆ ಬಿಲ್ ಕೊಟ್ಟಿದಾರಂತಲ್ಲ".. ಇನ್ನೂ ಮಲಗಿದ್ದ ನಮ್ಮನ್ನು ಎಬ್ಬಿಸೋದು ಯಾಕೆ ಅಂತ 250 ರೂಪಾಯಿ ಕೊಟ್ಟು ಕಳಿಸಿದ . ಮಾರನೇ ದಿನ, ಖಾಯಂ ಪೇಪರ್ ಹಾಕುವ ಹುಡುಗ ಬಿಲ್ ಜೊತೆ ಬಂದಾಗಲೇ ಆತ ಮೋಸ ಹೋಗಿದ್ದು ಗೊತ್ತಾಗಿದ್ದು. ತೀರಾ 10-12 ವರ್ಷದ ಮಕ್ಕಳೆಲ್ಲ ಹೀಗೆ ಮಾಡುತ್ತಾರೆ ಅಂದ್ರೆ ಹೆಂಗೆ ನಂಬೋದು?

ಮೊನ್ನೆ ಭಾನುವಾರ ಮಧ್ಯಾಹ್ನ, ಎಲ್ಲಿಗೋ ಹೊರಡಲು ತಯಾರಾಗಿದ್ದೆ. ಒಬ್ಬ ಹುಡುಗ ಅರ್ಧ ತೆರೆದ ಬಾಗಿಲೊಳಗೆ ಇಣುಕಿ, "ಅಂಕಲ್, ಪೇಪರ್ ಬಿಲ್" ಅಂದ. ಹೋದ ಬಾರಿಯ ಘಟನೆ ನೆನಪಿದ್ದದ್ದರಿಂದ, ಒಳಗೆ ಬಾ ಅಂದೆ. ಬಿಲ್ ಎಲ್ಲಿ ಅಂತ ಕೇಳಿದಾಗ ಹಳೇ ಡೈಲಾಗ್ ರಿಪೀಟಾಯಿತು. ನಾನು, ಮತ್ತೊಬ್ಬ ರೂಮ್ ಮೇಟ್ ದಯಾನಂದ ಹಿಡಿದು ವಿಚಾರಿಸಿದಾಗ ತಾನು ಕಳ್ಳ ಅನ್ನೋದನ್ನ ಒಪ್ಪಿಕೊಂಡ. ಅವನನ್ನ ಮತೂಬ್ಬ ಹುಡುಗ ಕಳಿಸಿದನಂತೆ, ಅವನು ಹೆದರಿಸಿದ್ದಕ್ಕೆ ಇವ ಬಂದನಂತೆ, ಇವನು ದುಡ್ಡು ತರದಿದ್ದರೆ ಅವನು ಹೊಡೆಯುತ್ತಾನಂತೆ ಅನ್ನುವ ಅಂತೆ ಪುರಾಣಗಳನ್ನ ಹೇಳಿದ.

ಪ್ರಹಸನ ರಸ್ತೆಗೆ ಶಿಫ್ಟಾಯಿತು. ಅಕ್ಕ ಪಕ್ಕದವರೆಲ್ಲ ಬಂದರು. ಈ ಹುಡುಗ ಗೋಳೋ ಅಂತ ಅಳುತ್ತಿದ್ದ. ನಿನ್ನ ಮನೆಗೆ ಕರೆದುಕೊಂಡು ಹೋಗ್ತೀವಿ ಬಾ ಅಂದ್ರೆ, ಅಪ್ಪ ನನ್ನ ಕೊಂದು ಬಿಡ್ತಾನೆ ದಮ್ಮಯ್ಯ ಬಿಡಿ, ನಾನು ಇನ್ನು ಹೀಗೆ ಮಾಡಲ್ಲ, ನಂಗಿದೆಲ್ಲ ಗೊತ್ತಿಲ್ಲ, ಆ ಹುಡುಗ ಹೇಳಿದ್ದಕ್ಕೆ ಮಾಡಿದೆ, ಅವನು ಯಾರು ಅಂತ ಗೊತ್ತಿಲ್ಲ, ಇನ್ನು ಈ ಕಡೆ ಬರಲ್ಲ ಬಿಟ್ ಬಿಡಿ ಅಂತ ಒಂದೇ ಸಮನೆ ಅಳುತ್ತಲೇ ಇದ್ದ. ನಮಗೂ ಏನು ಮಾಡುವುದು ಆಂತ ತೋಚದೇ, ಮೊಬೈಲಲ್ಲಿ ಅವನ ಫೋಟೋ ತೆಗೆದು, ಎಚ್ಚರಿಕೆ ನೀಡಿ ಕಳುಹಿಸಿಯಾಯಿತು.

ಅಷ್ಟು ಹೊತ್ತಿಗೆ ಪೇಪರ್ ಮಾರುವಾತನಿಗೆ ಸುದ್ದಿ ಹೋಗಿತ್ತು . ನಿನ್ನೆ ಬೆಳಗ್ಗೆ ಸೋಮವಾರ, ಆತ ಒಬ್ಬ ಹುಡುಗನ್ನ ಎಳೆದುಕೊಂಡೇ ಬಂದ. ಹರ್ಷನ ಬಳಿ ದುಡ್ದೆತ್ತಿದು ಇದೇ ಹುಡುಗ. ಮೊದಲು ಆತನ ಬಳಿ ಕೆಲಸ ಮಾಡುತ್ತಿದ್ದ ಈ ಹುಡುಗ. ಮನೆಗಳು ಗೊತ್ತು, ಮನೇಲಿ ಇರೋದು ಯಾರು ಅಂತಲೂ ಗೊತ್ತು. ಒಬ್ಬ ಅಸಿಸ್ಟೆಂಟ್ ಹುಡುಗನನ್ನ ಕರೆದುಕೊಂಡು ಪ್ರತಿ ತಿಂಗಳ ಮೊದಲ ಭಾನುವಾರ ಸಿಕ್ಕ ಮನೆಗಳಿಗೆಲ್ಲ ಹೋಗೋದು, ಪೇಪರ್ ಬಿಲ್ ಕೇಳೋದು. ನಮ್ಮಂತ ಬ್ರಹ್ಮಚಾರಿಗಳು ಇರೋ ಮನೆಗಳು ಪ್ರತಿ ಬೀದಿಯಲ್ಲೂ ಹತ್ತಾದರೂ ಇರುತ್ತದೆ. 3-4 ಮನೆಯವರು ಯಾಮಾರಿದರೂ ಸಾವಿರ ರೂಪಾಯಿ ಕಲೆಕ್ಷನ್, ಒಂದು ಬೀದಿಯಲ್ಲಿ!

ಇಬ್ಬರು ಹುಡುಗರೂ ಎಷ್ಟು ಪ್ರೊಫೆಶನಲ್ಲು ಅಂದ್ರೆ, ಅವರ ಮುಖಭಾವಗಳಿಂದ ನೀವು ಈ ಹುಡುಗರು ಹೀಗೆ ಮೋಸ ಮಾಡಿಕೊಂಡು ಓಡಾಡುವವರು ಅಂತ ಹೇಳೋಕೆ ಸಾಧ್ಯವೇ ಇಲ್ಲ. ಇಬ್ಬರೂ ಶಾಲೆಗೆ ಹೋಗುತ್ತಾರೆ ಬೇರೆ. ಅನಕ್ಷರಸ್ಥರಲ್ಲ. ಆ ಪೇಪರ್ ಅಂಗಡಿಯಾತ ತನ್ನ ಬೈಕಿನಲ್ಲಿ ಚೋರ ಗುರುವನ್ನ ಕೂರಿಸಿಕೊಂಡು, ಇನ್ನೊಬ್ಬನನ್ನು ಹುಡುಕಿಕೊಂಡು ಹೊರಟ. ನಾನು ನೋಡುತ್ತ ನಿಂತೆ.

ಯಾವ ದಾರಿಯಲ್ಲಿ ಹೊರಟಿದ್ದಾರೆ ಈ ಹುಡುಗರು?.. ಎಲ್ಲ ಹುಡುಗರಿಗೂ ಪುನರ್ವಸತಿ ಕೇಂದ್ರಗಳು ಸಿಗುವುದಿಲ್ಲ.

ಕಾಡುಹರಟೆ ಅಂಕಣಕಾರ ಶ್ರೀನಿಧಿ ಡಿಎಸ್ ಕುರಿತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X