ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪದಾರಿಯ ಹಿಡಿದು..

By Staff
|
Google Oneindia Kannada News

The candle that lights up the dark worldಎಲ್ಲಾ ಮೇಣದಬತ್ತಿಯ ಕೆಳಗೂ ಕತ್ತಲಿರುವುದು ಎಷ್ಟು ಸತ್ಯವೋ, ಬುಡದಲ್ಲಿ ಕತ್ತಲನ್ನು ಹೊದ್ದರೂ ಸುತ್ತಲಿನ ಅಂಧಕಾರವನ್ನು ದೂರಮಾಡುವುದೂ ಅಷ್ಟೇ ಸತ್ಯ. ಈ ಪುಟಾಣಿ ಮೊಂಬತ್ತಿಗಳೇ ಕರೆಂಟ್ ಇಲ್ಲದೇ ತಡವರಿಸುತ್ತಿರುವ ಅನೇಕ ಹಳ್ಳಿಗಳ ಕತ್ತಲನ್ನು ಒದ್ದು ಓಡಿಸುತ್ತಿವೆ. ವಿದ್ಯುತ್ ಇಲ್ಲದೆ ಜೀವನ ಸಾಗಿಸುತ್ತಿರುವ ಅನೇಕ ಹಳ್ಳಿಗಳು ಕರ್ನಾಟಕದಲ್ಲಿವೆ, ಆದರೆ ಮೊಂಬತ್ತಿಯಿಲ್ಲದ ಜೀವನ ಅಸಾಧ್ಯ. ಇದು ಅಂಧಕಾರ ಕಳೆಯುವ ಸಂಕೇತ. ಸಾಮಾನ್ಯ ಜನರ ಜೀವನದ ಅವಿಭಾಜ್ಯ ಅಂಗವಾಗಿರುವ, ಬಡವರ ಬಾಳನ್ನು ಬೆಳಗುತ್ತಿರುವ ಮೇಣದಬತ್ತಿಯ ಬಗ್ಗೆ ಒಂದು ಲೇಖನ.

ಅಂಕಣಕಾರ : ಶ್ರೀನಿಧಿ ಡಿ.ಎಸ್.

ಟನ್ನುಗಟ್ಟಲೆ ಹಾರನ್ನಿನ್ನ ಶಬ್ದ ಮತ್ತು ಲಕ್ಷೋಪಲಕ್ಷ ಚಕ್ರ ಸಹಚರರ ಸಾಂಗತ್ಯ ಮುಗಿಸಿ ಮನೆಗೆ ಬರುವ ಹೊತ್ತಿಗೆ, ಜೀವ ಏಳೂ ಹನ್ನೊಂದು. ಮನೆಗೆ ಬಂದು ಜಾಕೇಟು ಬಿಸಾಕಿ ಸ್ವಿಚ್ಚೊತ್ತಿದರೆ, ಕರೆಂಟಿಲ್ಲ. ಈ ಇಲ್ಲ'ಗಳಿಗೆ ಹೊಂದಿಕೊಂಡು ಬಿಟ್ಟಿದೆ ಪ್ರಪಂಚ ಎಲ್ಲ. ಡೀಸಲಿಲ್ಲ, ಗೊಬ್ರ ಇಲ್ಲ, ಮಳೆ ಇಲ್ಲ, ಕರೆಂಟಿ, ಹೀಗೆ ಆಲೋಚನೆ ಮಾಡುವಾಗ ತಿಳಿಯಿತು, ಮನೆಯಲ್ಲಿ ಯಾವ ಬೆಳಕಿನ ಮೂಲವೂ ಇಲ್ಲ! ಈಗ ವಿದ್ಯುತ್ತು ಬರುತ್ತದೆ ಅಂಬೋ ಆಸೆಯಿಂದ ಸ್ವಲ್ಪೊತ್ತು ಕೂತರೆ, ಊಹೂಂ, ಇಲ್ಲ, ಪತ್ತೆ ಇಲ್ಲ. ಮೆಲ್ಲನೆ ಎದ್ದು, ಬಾಗ್ಲು ಹಾಕಿ ಪಕ್ಕದ ಅಂಗಡಿಯತ್ತ ನಡೆದೆ.

"ಅಂಕಲ್, ಮೇಣದ ಬತ್ತಿ ಕೊಡಿ"
"ಎಷ್ಟು ಬೇಕಪಾ?"
"ಕೊಡಿ, ನಾಲ್ಕೈದು, ಹೆಂಗೂ ಕರೆಂಟು ಹೋಗ್ತಿದೆ"
"ಎಷ್ಟಾಯ್ತು?"
"20 ರೂಪಾಯಿ.."
"ಹಾಂ! ಈ ಬೆಲೆಏರಿಕೆ ಬಿಸಿ ಇದ್ಕೂ ತಟ್ಟಿದ್ಯೇನ್ರೀ", ಅಂದ್ರೆ
"ಡಿಮಾಂಡು ಜಾಸ್ತಿ , ಕರೆಂಟಿಲ್ವಲ್ಲಾ, ಹಾಗಾಗಿ.., ನೋಡಿ.. ಬೇಕಾದ್ರೆ ತಗಂಡೋಗಿ.."
"ಬೇಕು, ಕೊಡಿ ಅದ್ರಲ್ಲೇನು" ಅಂತಂದು ವಿದ್ಯುತ್ ಇಲಾಖೆಗೆ ಬೈಕಂಡು ಮನೆಗ್ ಬಂದೆ.

ಊರಲ್ಲಿ. ಕರೆಂಟು ಹೋದಾಗೆಲ್ಲ, ಸೀಮೇಯೆಣ್ಣೆ ಧಾರಾಳವಾಗಿ ಸಿಗುತ್ತಿದ್ದ ಕಾಲದಲ್ಲಿ ಚಿಮಣಿ ದೀಪಗಳೇ ಆಧಾರವಾಗಿದ್ದವು. ಹಳೆಯ ಗಾಜಿನ ಬಾಟಲಿಗಳೂ ಕೂಡ ಚಿಮಣಿ ದೀಪಗಳಾಗಿ ಪರಿವರ್ತನೆ ಹೊಂದುತ್ತಿದ್ದವು. ವಿದ್ಯುತ್ ಕೈಕೊಟ್ಟ ಹೊತ್ತಲ್ಲಿ, ಬೇರೆ ಕೆಲಸ ಮಾಡುವುದಕ್ಕಿಂತ, ಆ ಚಿಮಣಿ ದೀಪ ಉರಿಯುವ ಪರಿಯನ್ನು ಗಮನಿಸುವುದು, ಅದರ ಸುತ್ತ ಹಾರುವ ಹಾತೆಗಳನ್ನು ಆದಷ್ಟೂ ದೀಪಕ್ಕೇ ಬಿದ್ದು ಸಾಯುವಂತೆ ಮಾಡುವುದು, ಕಾಗದ ಸುಡುವುದು.. ಇವುಗಳೇ ಮುಖ್ಯ ಸಂಗತಿಗಳು! ಒಂದು ಬಾರಿ ಏನೋ ಪ್ರಯೋಗ ಮಾಡುವಾಗ ಗಾಜಿನ ಚಿಮಣಿ ಬಿದ್ದು ಒಡೆದು, ಬೆಂಕಿ ಹತ್ತಿ ರಣಾರಂಪವಾದ ಮೇಲೆ, ಮೇಣದ ಬತ್ತಿಗಳು ಚಿಮಣಿಯ ಜಾಗ ತುಂಬಿದವು.

ಮೇಣದ ಬತ್ತಿ ಬಂದಮೇಲೂ, ಸಂಶೋಧನೆಗಳೇನೂ ಕಡಿಮೆಯಾಗಲಿಲ್ಲ. ಕರಗಿ ಹರಿದ ಮೇಣವನ್ನು ಮತ್ತೆ ಒಟ್ಟು ಮಾಡಿ, ಬತ್ತಿಯಾಕೃತಿ ನೀಡಿ, ಅದಕ್ಕೊಂದು ದಾರ ಸುರಿದು ಮತ್ತೆ ಉರಿಯುವಂತೆ ಮಾಡುವುದು, ಹಳೆಯ ಪೆನ್ನಿಗೆ ಮೇಣ ತುಂಬಿ ಬೆಂಕಿ ಹಚ್ಚುವುದು- ಹುಚ್ಚು ಮುಂದುವರಿಯಿತು, ಹುಡುಗಾಟಿಕೆ ಬಿಡುವವರೆಗೆ.

ನನ್ನ ಸ್ನೇಹಿತನೊಬ್ಬ ಆತನ ಎಸ್.ಎಸ್.ಎಲ್.ಸಿ ಪಾಸಾಗುವ ಕೊನೆಯ ಪ್ರಯತ್ನವೂ ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತಾದ ಮೇಲೆ ದಿಕ್ಕೆಟ್ಟು ಕೂತಿದ್ದ. ಯಾವುದೋ ಪೇಪರಿನಲ್ಲಿ ಸ್ವ ಉದ್ಯೋಗದ ಬಗ್ಗೆ ಅರ್ಧಂಬರ್ಧ ಓದಿದವನೇ, ತಾನೂ ಏನಾದರೂ ಮಾಡಿಯೇ ಸಿದ್ಧ ಅಂತ ಒಂದು ಮೂರ್ನಾಲ್ಕು ತಿಂಗಳು ನಾಪತ್ತೆಯಾಗಿಬಿಟ್ಟ. ವಾಪಾಸು ಬಂದ ಸುದ್ದಿ ಗೊತ್ತಾಗಿ ಮನೆಗೆ ಹೋದರೆ, ಅವನ ಕಿಷ್ಕಿಂದೆ ರೂಮು ತುಂಬ ತರಹೇವಾರೀ ಹತಾರಗಳು, ಮತ್ತು ಸುತ್ತ ಏನೋ ವಿಚಿತ್ರ ಹಾಳೆಗಳು, ಬಿಳಿಯ ಚಚ್ಚೌಕ ವಸ್ತುಗಳು.ಏನಯ್ಯಾ ಇದು ಅಂದರೆ, ನಾನು ಮೇಣದ ಬತ್ತಿ ತಯಾರಿಸುತ್ತೇನೆ ಅಂದ!

ಅಂಗಡಿಯಿಂದ ಅಷ್ಟೊಂದು ಚೆನ್ನಾಗಿ ಪ್ಯಾಕೇಟಿನಲ್ಲಿ ಕುಳಿತು ಬರುತ್ತಿದ್ದ ಮೇಣದಬತ್ತಿಗಳನ್ನು ಈ ಯಬಡ ಆತನ ಹನ್ನೆರಡಗಲದ ರೂಮಲ್ಲಿ ತಯಾರಿಸುತ್ತಾನೆ ಅಂದಾಗ ನಂಬಲು ಕಷ್ಟವಾಯಿತು. ಆದರೆ ಆತ ಸ್ವಲ್ಪ ದಿನಗಳಲ್ಲೇ, ಚಿಗಿತುಕೊಂಡು ಓಡಾಡಲಾರಂಭಿಸಿದ!

ನಾವು ಮನೆಗಳಲ್ಲಿ ನಿತ್ಯ ಬಳಸುವ ಮೇಣದ ಬತ್ತಿಯ ಮೂಲ ಇರುವುದು ಪೆಟ್ರೋಲಿಯಂನ ಉಪ ಉತ್ಪನ್ನ ಪ್ಯಾರಾಫಿನ್‌ನಲ್ಲಿ. ಅದರ ಸುಲಭ ದಹನಕಾರೀ ಗುಣಗಳಿಂದಾಗಿ, ಮೇಣದ ಬತ್ತಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಪ್ಯಾರಾಫಿನ್ ಬರುವ ಮೊದಲು ಜೇನುಮೇಣ ಕ್ಯಾಂಡಲುಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿತ್ತು. ಪ್ಯಾರಫಿನ್ ಅಥವಾ ಜೇನುಮೇಣವನ್ನು ಬಿಸಿಮಾಡಿ, ಅಚ್ಚುಗಳಲ್ಲಿ ಸುರಿದು, ಬತ್ತಿ ಸೇರಿಸಿ ಹೊರತೆಗೆದರೆ ಮೇಣದಬತ್ತಿ ತಯಾರಾಗುತ್ತದೆ. ಭಾರತದಲ್ಲಿ ಅದೆಷ್ಟೋ ಸ್ವಯಂ ಸೇವಾ ಸಂಘಗಳು ಮತ್ತು ಸ್ವ ಉದ್ಯೋಗದ ಆಸೆಯುಳ್ಳವರಿಗೆ ಮೇಣದಬತ್ತಿ ದಾರಿದೀಪವಾಗಿದೆ.

ಈಜಿಪ್ಟ್‌ನಲ್ಲಿ ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲೇ ಜೇನುಮೇಣವನ್ನು ಬೆಳಕಿಗಾಗಿ ಬಳಸುತ್ತಿದ್ದರಂತೆ. ರೋಮನ್ನರು ಕುರಿಯ ಕೊಬ್ಬನ್ನು ದೀಪವನ್ನಾಗಿ ಮಾಡಿಕೊಂಡಿದ್ದರು. ಆಮೇಲೆ ಇತರ ಪ್ರಾಣಿಗಳ ಕೊಬ್ಬು ಕೂಡ ಈ ಕೆಲಸಕ್ಕೆ ಉಪಯೋಗಕ್ಕೆ ಬಂತು. ನೀಲ ತಿಮಿಂಗಿಲಗಳ ಕೊಬ್ಬು ಕೂಡ ಮೇಣದ ಬತ್ತಿಯ ಬೆಳಕಾಗಿದೆ!

ಮೇಣದ ಬತ್ತಿಗಳನ್ನು ಗಡಿಯಾರದ ರೂಪದಲ್ಲಿ ಕೂಡ ಬಳಸಲಾಗುತ್ತಿತ್ತು. ಇಂಗ್ಲೆಂಡಿನಲ್ಲಿ 8ನೇ ಶತಮಾನದಲ್ಲಿದ್ದ ಕಿಂಗ್ ಅಲ್ಫ್ರೆಡ್ ದಿ ಗ್ರೇಟ್, ಮೇಣದ ಬತ್ತಿಗಳನ್ನು ವ್ಯವಸ್ಥಿತ ಗಡಿಯಾರಗಳನ್ನಾಗಿ ರೂಪುಗೊಳಿಸಿದ್ದ. ನಿರ್ದಿಷ್ಟ ತೂಕದ, 12 ಇಂಚು ಉದ್ದವಿರುವ ಆರು ಮೇಣದ ಬತ್ತಿಗಳನ್ನು ಬಳಸಿ ಈ ಬೆಳಕ ಗಡಿಯಾರ ತಯಾರಾಗಿತ್ತು. ಮೇಣದ ಬತ್ತಿಗಳಲ್ಲಿ ಒಂದೊಂದು ಇಂಚು ದೂರಕ್ಕೆ ಗುರುತುಗಳನ್ನು ಮಾಡಲಾಗುತ್ತಿತ್ತು. ಪ್ರತಿ ಇಂಚಿಗೆ ಇಪ್ಪತ್ತು ನಿಮಿಷಗಳಂತೆ, ಒಂದು ಬತ್ತಿ 4 ಗಂಟೆಗಳ ಕಾಲ ಉರಿಯುತ್ತಿತ್ತು. ಆರು ಬತ್ತಿಗಳಿಗೆ ಇಪ್ಪತ್ತನಾಲ್ಕು ತಾಸುಗಳ ಚಕ್ರ ಸಂಪೂರ್ಣ. ಚೀನಾದಲ್ಲೂ ಕೂಡ ಮೇಣದ ಬತ್ತಿಯ ಗಡಿಯಾರಗಳಿದ್ದವೆಂದು ಇತಿಹಾಸ ಹೇಳುತ್ತದೆ. ಕಲ್ಲಿದ್ದಲ ಗಣಿಗಳಲ್ಲಿ 20ನೇ ಶತಮಾನದವರೆಗೂ ಕೂಡ ಮೇಣದ ಬತ್ತಿಯ ಗಡಿಯಾರಗಳ ಬಳಕೆಯಾಗುತ್ತಿತ್ತು ಅಂದರೆ ಅಚ್ಚರಿಯಾಗುತ್ತದೆ.

ಇನ್ನು ಜಗತ್ತಿನ ಪ್ರತಿ ಧರ್ಮದಲ್ಲೂ ಕೂಡ ಮೇಣದಬತ್ತಿಗಳಿಗೆ ಧಾರ್ಮಿಕವಾಗಿ ವಿಶಿಷ್ಟ ಮತ್ತು ಮರ್ಯಾದೆಯುತ ಸ್ಥಾನವಿದೆ. ಕ್ರಿಶ್ಚಿಯನ್ನರ ಚರ್ಚುಗಳಲ್ಲಿ, ಬೌದ್ಧರ ಧಾರ್ಮಿಕ ಕೇಂದ್ರಗಳಲ್ಲಿ ಮೇಣದ ಬತ್ತಿ ಪ್ರಾರ್ಥನೆಗೆ ಬಳಕೆಯಾಗುತ್ತದೆ. ಹಿಂದೂ ಧರ್ಮ ಆಧುನಿಕತೆಗೆ ತನ್ನನ್ನು ತೆರೆದುಕೊಂಡ ಮೇಲೆ, ಯಾರ ಮನೆಯ ದೀಪಾವಳಿ ತಾನೆ, ಮೇಣದ ಬತ್ತಿಗಳಿಲ್ಲದೆ ಆಚರಿಸಲ್ಪಡುತ್ತಿದೆ ಹೇಳಿ? ದೀಪಾವಳಿಗೆಂದೇ ಹಣತೆಯ ಆಕಾರದ ಪುಟ್ಟ ಪುಟ್ಟ ಸೊಗಸಾದ ಮೇಣದ ಬತ್ತಿಗಳು ಮಾರುಕಟ್ಟೆಗಳಲ್ಲಿ ದೊರಕುತ್ತದೆ.

ಗ್ರೀನ್ ಪೀಸ್ ಸಂಸ್ಥೆ ಮೊನ್ನೆ ಮೇ ತಿಂಗಳಲ್ಲಿ ರತನ್ ಟಾಟಾ ಮನೆಯೆದುರಿಗೆ ಮೇಣದಬತ್ತಿಗಳನ್ನು ಹಿಡಿದು ಪ್ರತಿಭಟನೆ ನಡೆಸಿತು. ಅವರುಗಳ ಉದ್ದೇಶ, ಒರಿಸ್ಸಾದ ಧರ್ಮಾದಲ್ಲಿ ಟಾಟಾ ಕಂಪನಿ ನಿರ್ಮಿಸಲು ಉದ್ದೇಶಿಸಿರುವ ಬಂದರು ನಿರ್ಮಾಣವನ್ನ ಹಿಂದೆಗೆದುಕೊಳ್ಳಬೇಕು ಅನ್ನುವುದು. ಅಲ್ಲಿನ ತೀರ, ಸಮುದ್ರದಾಮೆಗಳು ಸಾಮೂಹಿಕವಾಗಿ ಮೊಟ್ಟೆ ಇಡುವ ಜಗತ್ತಿನ ಅತಿದೊಡ್ಡ ತೀರಪ್ರದೇಶಗಳಲ್ಲೊಂದು. ಹೀಗೆ, ಶಾಂತಿಯುತ ಪ್ರತಿಭಟನೆಗಳಿಗೂ ಕೂಡ, ಮೇಣದ ಬತ್ತಿ ಸಂಕೇತ!

ಕ್ಯಾಂಡಲ್ ಲೈಟು ಡಿನ್ನರುಗಳು ಪ್ರೇಮಿಗಳ ಮಧುರ ಕ್ಷಣಗಳಿಗೆ ಬೆಳಕಾದರೆ, ಧ್ಯಾನ ಮಾಡುವಾಗ, ಸಮ್ಮೋಹನ ಕ್ರಿಯೆಗಳಲ್ಲಿ ಮೇಣದಬತ್ತಿ ಏಕಾಗ್ರತೆಗೆ ಬಳಕೆಯಾಗುತ್ತದೆ!

ಕಾಲ ಮುಂದೆ ಸಾಗಿ ಬಂದ ಹಾಗೆ ಮಾಮೂಲು ಬಿಳಿಯ ಬಣ್ಣದ ಕ್ಯಾಂಡಲುಗಳು ಹಳೆಯದಾಗುತ್ತಿವೆ. ತರಹೇವಾರಿ ಶೈಲಿಯ, ಬಣ್ಣ ಬಣ್ಣದ ಮೇಣದಬತ್ತಿಗಳ ತಯಾರಿಕೆ ಆಗುತ್ತಿದೆ. ಆನ್ ಲೈನ್ ಅಂಗಡಿಗಳನ್ನು ಭೇಟಿಕೊಟ್ಟು ನೋಡಿ, ಎಂಥೆದ ಬಗೆಯ ಮೊಂಬತ್ತಿಗಳಿವೆ ! ಕೆಂಪು ಬಣ್ಣದ ಜ್ವಾಲೆಗಳ ಜೊತೆಗೆ, ಇತರ ಬಣ್ಣಗಳನ್ನು ಹೊರಸೂಸುವ ಮೇಣದಬತ್ತಿಗಳೂ ಬಂದಿವೆ. ವಿದ್ಯುತ್ತು ಕೈಕೊಡಲಿ ಬಿಡಲಿ, ಮನೆಗಳಲ್ಲಿ ಅಲಂಕಾರಕ್ಕಾದರೂ ಇಂತಹ ಕ್ಯಾಂಡಲುಗಳನ್ನು ನೀವು ಖರೀದಿಬಿಡುತ್ತೀರಿ.

ನಾನು ಪಿ.ಜಿ ಓದಬೇಕಿದ್ದರೆ ಕಣ್ಣು ಕಾಣಿಸದ ಮಕ್ಕಳಿಗಾಗಿಯೇ ಇರುವ ಪುನರ್ವಸತಿ ಕೇಂದವೊಂದಕ್ಕೆ ಹೋಗಿದ್ದೆ. ಅಲ್ಲಿನ ಮಕ್ಕಳಿಗೆ ಎಲ್ಲ ರೀತಿಯ ಬದುಕುವ ಕಲೆಗಳನ್ನ ಹೇಳಿಕೊಡಲಾಗುತ್ತಿತ್ತು. ಆ ಮಕ್ಕಳು ತಯಾರಿಸಿದ ವಸ್ತುಗಳನ್ನೆಲ್ಲ ಒಂದು ಹಾಲ್‌ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಶುಭಾಶಯ ಪತ್ರಗಳು, ಪ್ಲಾಸ್ಟಿಕ್ ಹೂವುಗಳು, ಅಲಂಕಾರಿಕ ಸಾಮಗ್ರಿಗಳು ಮತ್ತು ಬಣ್ಣಬಣ್ಣದ ಮೇಣದ ಬತ್ತಿಗಳು. ಆ ಮೇಣದ ಬತ್ತಿಗಳನ್ನು ನೋಡುತ್ತ ನಿಂತಿರಬೇಕಾದರೆ, ಅಲ್ಲಿದ್ದ ಪುಟ್ಟ ಅಂಧ ಹುಡುಗನೊಬ್ಬ ನನ್ನ ಕೈ ಹಿಡಿದು, ಚೆನ್ನಾಗಿದೆಯಣ್ಣ, ತಗೋ ಅಂದ. ಅವನ ಕೆನ್ನೆ ತಡವಿ ಒಂದಿಷ್ಟು ಕ್ಯಾಂಡಲ್ಲುಗಳನ್ನ ಕೊಂಡೆ. ಜಗದ ಕತ್ತಲೆಯನ್ನ ಹೋಗಲಾಡಿಸಲು ಅಂಧ ಮಕ್ಕಳು ತಯಾರಿಸಿದ ಮೇಣದಬತ್ತಿಗಳು, ಎಂದೂ ಆರಲಾರದ ಬೆಳಕನ್ನು ಮನದೊಳಗೆ ಹಚ್ಚಿದ್ದವು.

ಕಾಡುಹರಟೆ ಅಂಕಣಕಾರ ಶ್ರೀನಿಧಿ ಡಿಎಸ್ ಕುರಿತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X