ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಎಳೆ ಇದ್ದರೆ ಓದಲು ಕುತೂಹಲ - ರಾಧಿಕಾ

By ರಾಧಿಕಾ ಗಂಗಣ್ಣ, ಬೆಂಗಳೂರು
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ರಾಧಿಕಾ ಗಂಗಣ್ಣ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಬಾಲ್ಯದಲ್ಲಿ ಕಲಿತಿದ್ದ "ಇನ್ನೇನು ಬೇಕು ಇನ್ನೇನು ಬೇಕು" ಪದ್ಯದ ಜ್ಞಾಪಕವಾಯಿತು. ಆಗೆಲ್ಲ ನಮ್ಮ ಆಸೆಗಳು ಎಷ್ಟು ಚಿಕ್ಕವು, ನಿಮಗೇನು ಬೇಕು ಅಂತ ಸುದ್ದಿ ಚಾನಲ್ ನವರು ಕೇಳಿದ್ದರೆ ಬಹುಶಃ ಉತ್ತರ ಸುಲಭವಾಗಿತ್ತೋ ಏನೋ.

ನನ್ನ ಬಹುಪಾಲು ಬ್ರೌಸಿಂಗ್ ಎಲ್ಲ ಆಫೀಸಿನಲ್ಲೇ. ಹಾಗಾಗಿ ನಾನು ಎದುರು ನೋಡುವುದು, ಓದಲು ಹೆಚ್ಚು ಹೊತ್ತು ತೆಗೆದುಕೊಳ್ಳದ, ಬೇಗ ಓದಿ ಮುಗಿಸಬಹುದಾದ ಆಸಕ್ತಿಕರ ಸುದ್ದಿ ತುಣುಕುಗಳು. ಈಗಂತೂ ಯಾಹೂ ಮೆಯ್ಲ್ ಗೆ ಲಾಗಿನ್ ಆದಾಗಲೇ ಪ್ರಪಂಚದ ಬಹುಪಾಲು ರೋಚಕ ಸುದ್ದಿಗಳ ದರ್ಶನವಾಗಿರುತ್ತದೆ. ಮತ್ತದನ್ನೇ ಕನ್ನಡದಲ್ಲಿ ಓದಲು ಅಷ್ಟೇನೂ ಆಸಕ್ತಿದಾಯಕವಾಗಿರುವುದಿಲ್ಲ. ಟೈಮ್ಸ್ ಆಫ್ ಇಂಡಿಯಾ ಮೊದಮೊದಲು ಕನ್ನಡ ಪತ್ರಿಕೆ ನಡೆಸುವ ಉಮೇದಿನಲ್ಲಿ ಭಾಷಾಂತರ ಮಾಡಿದ ಪತ್ರಿಕೆಯನ್ನು ಪ್ರಕಟಿಸುತ್ತಿತ್ತಲ್ಲ, ಹಾಗೆ ಕನ್ನಡದಲ್ಲಿ ಭಾಷಾಂತರಗೊಂಡ ನಮ್ಮ ನೆಲದ್ದಲ್ಲದ ಲೇಖನಗಳನ್ನು ಓದಲು ಬೋರು. ಪ್ರಪಂಚದ ಯಾವ ಸುದ್ದಿಯಾದರೂ ಸರಿ. ಅದರಲ್ಲಿ ಒಂದಿಷ್ಟು ಕನ್ನಡದ ಎಳೆ ಇರಲಿ. ಆಗ ಓದಲು ನಮಗೂ ಒಂಚೂರು ಕುತೂಹಲವಿರುತ್ತದೆ.

ದಿನಪತ್ರಿಕೆಗಳಂತೂ ಯಾವುದೋ ಒಂದು ರಾಜಕೀಯ ಬಣಕ್ಕೆ, ಸಿದ್ಧಾಂತಕ್ಕೆ ಬದ್ಧರಾಗಿರುತ್ತವೆ. ಅಂತರ್ಜಾಲ ಪತ್ರಿಕೆಗಳಿಗೆ ಆ ಬಂಧಗಳಿಲ್ಲ ಅಂದುಕೊಂಡಿದ್ದೇನೆ. ಹಾಗಾಗಿ ಇಲ್ಲಿ ವಸ್ತುನಿಷ್ಠ ಲೇಖನಗಳು ಮೂಡಿ ಬರಲು ಸುಲಭ. ಈ ನಿಟ್ಟಿನೆಡೆಗೆ ಅಂತರ್ಜಾಲ ತಾಣಗಳು ಗಮನ ಹರಿಸಬೇಕು. [ಸಂಜೀವನ ಪಿಂಕ್ ಸ್ಲಿಪ್ ಪ್ರಸಂಗ]

Kannada online survey 2014 : My expectations - Radhika Ganganna

ಉತ್ತಮ ಓದುಗರ ಸೃಷ್ಟಿಗೆ... : ರಾಜಕೀಯ, ಸಿನೆಮಾ ಹಾಗೂ ಕ್ರೈಂ ಮಾಧ್ಯಮಗಳಲ್ಲಿ ಬಹುಪಾಲು ಆವರಿಸಿವೆ. ಆದರೆ ಅದನ್ನುಮೀರಿ ಮನಸ್ಸನ್ನು ಉಲ್ಲಾಸಗೊಳಿಸುವ, ಸಕಾರಾತ್ಮಕ ಭಾವನೆಗಳನ್ನು ಮೂಡಿಸುವ ವಾರ್ತೆ ನಮಗೆ ಬೇಕಾಗಿದೆ. ರಾಜಕೀಯವೇ ಆದರೂ ಅಲ್ಲಿನ ಸುಗುಣಿಗಳ ಬಗ್ಗೆ, ಒಳ್ಳೆಯ ಕೆಲಸದ ಬಗ್ಗೆ, ಸಿನೆಮಾ ಮಂದಿಯ 'ಸಂಬಂಧ'ಗಳಿಗಿಂತ ಅವರ ಉತ್ತಮ ಸಿನೆಮಾಗಳು, ಹೊಸ ತಂತ್ರಜ್ಞಾನ, ವೃತ್ತಿಯಲ್ಲಿನ ಅವರ ಪರಿಶ್ರಮದ ಬಗ್ಗೆ ವರದಿಯಿರಲಿ. ಪ್ರಪಂಚದ ಉತ್ತಮ ಸಿನಿಮಾಗಳ ಪರಿಚಯ ಆಗೊಮ್ಮೆ ಈಗೊಮ್ಮೆ ಸಿಕ್ಕಲ್ಲಿ ನಿಧಾನವಾಗಿ ಉತ್ತಮ ಓದುಗರ ಸೃಷ್ಟಿಯಾದೀತು.

ಈಗ ಬಹುತೇಕ ಎಲ್ಲ ಸರ್ಕಾರಿ ಸಂಸ್ಥೆಗಳ ಜಾಲತಾಣಗಳು ಚಾಲನೆಯಲ್ಲಿವೆ. ಆದರೆ ತಾಣಗಳ ವಿಳಾಸ, ಅವುಗಳಿಂದ ಪಡೆಯಬಹುದಾದ ಮಾಹಿತಿಯ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಿಲ್ಲ. ಈ ಮಾಹಿತಿ ಒಂದೆಡೆ ಲಭ್ಯವಿದ್ದು, ಆಗಾಗ್ಗೆ ವಿವಿಧ ತಾಣಗಳ ಬಗ್ಗೆ ಪರಿಚಯಿಸುವಂತಿದ್ದರೆ ಬಹು ಉಪಯುಕ್ತ. ಹಾಗೇ ಸ್ಥಳೀಯ ನಿಗಮಗಳ/ಕಛೇರಿಗಳ ದೂರವಾಣಿ ಸಂಖ್ಯೆ/ತುರ್ತು ಸಂದರ್ಭಗಳ ಸಹಾಯವಾಣಿಗಳ ದೂರವಾಣಿ ಸಂಖ್ಯೆ ಇದ್ದಲ್ಲಿ ಜನ ಸಾಮಾನ್ಯರಿಗೆ ಪ್ರಯೋಜನ.

ಎಲ್ಲ ಸುದ್ದಿಗಳು ನಗರ ಕೇಂದ್ರಿತವಾಗುವುದು ಬೇಡ. ಎಲ್ಲರನ್ನೂ ಒಳಗೊಂಡ, ವಿವಿಧ ಸ್ತರಗಳ/ವಯೋಮಾನದ ಜನರಿಗೆ ಬೇಕಾಗುವ ಹಾಗೆ ಸುದ್ದಿ ವ್ಯಾಪ್ತಿ ಹರಡಲಿ. ನಕಾರಾತ್ಮಕ ಸುದ್ದಿಗಳು ದಿನವಿಡೀ ಸಿಗುತ್ತವೆ ದೃಶ್ಯ ಮಾಧ್ಯಮದಲ್ಲಿ. ಜಾಲತಾಣಗಳಲ್ಲೂ ಅದರ ಅತಿವೃಷ್ಟಿ ಬೇಡ. ತುಸು ಸಕಾರಾತ್ಮಕ ಸುದ್ದಿಗಳು ಮೂಡಿಬರಲಿ. ಓದುಗರನ್ನು ಒಳ್ಳೆಯದರೆಡೆಗೆ ಸೆಳೆಯಲಿ.

ವ್ಯಕ್ತಿಗಳ ಬಗ್ಗೆ ಮಾಹಿತಿಪೂರ್ಣ ಲೇಖನ : ಕನ್ನಡ ಪ್ರಾಚೀನ ಭಾಷೆ, ತಮಿಳಿಗಿಂತ ಹಳೆಯದು ಇತ್ಯಾದಿ ವಾದಗಳಲ್ಲಿ ನಾವು ಯಾವತ್ತೂ ಮುಂದೆ. ಕನ್ನಡ ಭಾಷೆಯ ಉಗಮ, ಅದು ನಡೆದು ಬಂದ ದಾರಿ, ಕನ್ನಡಕ್ಕಾಗಿ ಹೋರಾಡಿದವರು, ಹೋರಾಡುತ್ತಿರುವವರು, ಕನ್ನಡ ನಾಡನ್ನು ಆಳಿದ ರಾಜವಂಶಗಳು, ಈಗ ಇರುವ ಅವರ ವಂಶಸ್ಥರು, ಸ್ಥಳ ಪರಿಚಯ, ಈ ಬಗ್ಗೆ ಸಂಶೋಧನಾ/ಮಾಹಿತಿ ಪೂರ್ಣ ಲೇಖನಗಳು ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಓದಲು ಸಿಕ್ಕರೆ ಚಂದ. [ಆತ್ಮೀಯ ಪ್ರಾಧ್ಯಾಪಕಿ ಸುಧಾ ಮೂರ್ತಿ]

ಟಿ.ವಿ ಬಂತು ಓದು ಹೋಯ್ತು ಅನ್ನೋ ಕಾಲ ಒಂದಿತ್ತು. ಈಗ ಇಂಟರ್ನೆಟ್ ಬಂತು ಓದು ಹೋಯ್ತು ಅನ್ನಬಹುದು. ಆದರೆ ಈ ಮಾಧ್ಯಮಗಳನ್ನೇ ಹೊಸ ಓದುಗರನ್ನು ಸೃಷ್ಟಿಸಲು ಬಳಸಿಕೊಳ್ಳಬೇಕು. ಹಳತು, ಹೊಸತು ಪುಸ್ತಕಗಳ, ಸಾಹಿತಿಗಳ ಪರಿಚಯ ಆಗಾಗ್ಗೆ (ಹೌದು ಯಾವುದೇ ಮಾಹಿತಿ ಅಪರೂಪವಾಗಿ ದೊರೆತಾಗ ಮಾತ್ರ ಆಸಕ್ತಿ ಮೂಡಿಸುವುದು ಸಾಧ್ಯ) ಲಭ್ಯವಾದಲ್ಲಿ ಚಂದ. ಸಾಹಿತಿಯ ಹುಟ್ಟುಹಬ್ಬದ ನೆಪದಲ್ಲಿ ಅಥವಾ ಇನ್ಯಾವುದೇ ಸೂಕ್ತ ಸಂದರ್ಭದಲ್ಲಿ ಅವರ ಕೃತಿಗಳ ಬಗ್ಗೆ, ವ್ಯಕ್ತಿಯ ಬಗ್ಗೆ ಪರಿಚಯ ಮಾಡಿಕೊಡಬಹುದು. ಸಾಕಷ್ಟು ಸಂಖ್ಯೆಯಲ್ಲಿ ಇರುವ ಬ್ಲಾಗ್ ಗಳ 'ಉತ್ತಮ' ಬರಹಗಳನ್ನು ಆಗಾಗ ಹೆಕ್ಕಿ ಪ್ರಕಟಿಸಿದಲ್ಲಿ ಬರೆದವರಿಗೂ ಉತ್ತೇಜನ, ಓದುಗರಿಗೂ ಖುಷಿ!

ಮಕ್ಕಳ ಬಗ್ಗೆ ಯಾಕೆ ಇಷ್ಟು ನಿರ್ಲಕ್ಷ್ಯ? : ಪತ್ರಿಕೆಯ ಪುರವಣಿಗಳಲ್ಲಿ 'ನಗರದಲ್ಲಿ ಇಂದು' ಅಂತ ಒಂದು ಪುಟವಿರುತ್ತದೆ. ಅಂಥದೇ ಒಂದು ಪುಟ ಜಾಲತಾಣಗಳಲ್ಲೂ ಸಿಕ್ಕರೆ ಸಾಂಸ್ಕೃತಿಕ ಕಾರ್ಯಕ್ರಮಾಸಕ್ತರಿಗೆ ಬಹಳ ಅನುಕೂಲ. ಮಕ್ಕಳು ಬಹುಶಃ most neglected lot. ಅವರಿಗಾಗಿಯೇ ಹೊಸ/ಹಳೆಯ/ಜನಪದ ಕತೆ, ಕವನ, ನಾಟಕಗಳು ಒಂದೆಡೆ ಲಭ್ಯವಿರಲಿ. ಅಪ್ಪ-ಅಮ್ಮ, ಮಕ್ಕಳೊಂದಿಗೆ ಸಮಯ ಕಳೆಯಲು ಉತ್ತೇಜಿಸುವ ಚಟುವಟಿಗಳಿರಲಿ ರಸಪ್ರಶ್ನೆ, ಪದಬಂಧ ಇತ್ಯಾದಿ.

ದೇಶ, ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ವಿವಿಧ ಶೈಕ್ಷಣಿಕ ಅವಕಾಶಗಳು, ಅದಕ್ಕೆ ಬೇಕಿರುವ ಪೂರ್ವಭಾವಿ ತಯಾರಿ ಬಗ್ಗೆ ಲೇಖನಗಳು ಬರಲಿ. ಯಾವ ವಿಷಯ ಓದಲು ಯಾವ ವಿದ್ಯಾಲಯ ಉತ್ತಮ ಎನ್ನುವ ಬಗ್ಗೆ 'first hand report' ಇರಲಿ. ದೇಶ, ವಿದೇಶದ ಉತ್ತಮ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ/ಓದುತ್ತಿರುವ ಕನ್ನಡಿಗರಿಂದ ಲೇಖನಗಳು/ಪ್ರಶ್ನೋತ್ತರ ಕಾಲಮ್ ಗಳು ಇದ್ದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ.

ಆರೋಗ್ಯದ ಬಗ್ಗೆ ಎರವಲು ತಂದ ಬರಹಗಳನ್ನು ಪ್ರಕಟಿಸುವುದರ ಬದಲು ನಮ್ಮ ನಡುವೆಯೇ ಇರುವ ತಜ್ಞರ ಸಂದರ್ಶನ/ಲೇಖನಗಳು ಮೂಡಿ ಬರಲಿ. ಅಡುಗೆ ಅಂಕಣಗಳು ಹೈದ್ರಾಬಾದಿ ಬಿರ್ಯಾನಿಯ ಬದಲು ಸಿರ್ಸಿಯ ಶಿರಾವನ್ನು ಪರಿಚಯಿಸಲಿ, ಅಂದರೆ ನಮ್ಮದೇ ನೆಲದ, ಕರ್ನಾಟಕದ ವಿವಿಧ ಸ್ಥಳಗಳ ವಿಶೇಷ ಖಾದ್ಯಗಳ ಪರಿಚಯ ನಮಗಾಗಲಿ!

ವಿವಿಧ ಕ್ಷೇತ್ರಗಳ ಸಾಧಕರು ನಡೆದು ಬಂದ ದಾರಿ ಹಾಗೂ ಎಲೆಮರೆಯ ಕಾಯಿಯ ಹಾಗೆ ಸಮಾಜದ ಒಳಿತಿಗಾಗಿ ಜೀವ ಸವೆಸುತ್ತಿರುವ ಮಂದಿಯ ಶ್ರಮ ಬೆಳಕಿಗೆ ಬರಲಿ. ಸಮಾಜದ ಸಮಸ್ಯೆಗಳ ಬಗ್ಗೆ ವಿವೇಚನಾಯುಕ್ತ, ಆರೋಗ್ಯಕರ ಸಂವಾದಗಳಿರಲಿ. ಈ ಎಲ್ಲವೂ "ಹೊಸ ಬಗೆಯಲಿ ಬರಲಿ ಸುಖ ಸಾವಿರ ತರಲಿ!" [ರಾಧಿಕಾ ಬ್ಲಾಗ್]

English summary
Kannada online survey 2014, My expectations : What is the point in reading Kannada translated news which has already appeared in some other English website? Asks Radhika Ganganna, software engineer from Bengaluru. She also wants to read stories on successful people and positive news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X