ಸುವರ್ಣ ಟಿವಿ ಚಾನಲ್ಲಿಗೆ ಜೋಗಿ ರಾಜೀನಾಮೆ

ಆಷಾಢದ ಋುತು ಕಟ್ಟಳೆಗಳನ್ನು ಲೆಕ್ಕಿಸದೆ 'ಆಷಾಢದ ಒಂದು ದಿನ' ಗುರುವಾರ ಜುಲೈ 28ರಂದು ಅವರು ರಾಜೀನಾಮೆ ನೀಡಿದ್ದು ಟಿವಿ ಪತ್ರಿಕೋದ್ಯಮಕ್ಕೆ ಗುಡ್ ಬೈ ಹೇಳಿದ್ದಾರೆ.
ಸದ್ಯಕ್ಕೆ ತಾವು ನಿರುದ್ಯೋಗಿ ಎಂದು ಬುಧವಾರ ತಮ್ಮನ್ನು ಭೇಟಿ ಮಾಡಿದ ದಟ್ಸ್ ಕನ್ನಡ ವರದಿಗಾರನೊಂದಿಗೆ ಜೋಗಿ ತಮ್ಮನ್ನು ತಾವು ಬಣ್ಣಿಸಿಕೊಂಡರು.
ನಾಳೆ ಗುರುವಾರದಿಂದ 15 ದಿನಗಳ ಕಾಲ ಕರ್ನಾಟಕ ಪ್ರವಾಸ ಹೊರಡುತ್ತಿರುವುದಾಗಿ ಜೋಗಿ ಹೇಳಿದರು. ಯಥಾಪ್ರಕಾರ ದಕ್ಷಿಣ ಕರ್ನಾಟಕವಲ್ಲದೆ ಉತ್ತರ ಕನ್ನಡದಲ್ಲೂ ಪ್ರವಾಸ ಮಾಡುವುದಾಗಿ ಅವರು ನುಡಿದರು.
ಸದ್ಯಕ್ಕೆ ಹೊಸ ಉದ್ಯೋಗ ಹಿಡಿಯುವ ಆಲೋಚನೆ ಅವರಿಗೆ ಇಲ್ಲ. ಚಲನಚಿತ್ರ ಅಕಾಡೆಮಿಯ ಆಹ್ವಾನದ ಮೇರೆಗೆ 'ಸಂಭಾಷಣೆ ಬರೆಯುವುದು ಹೇಗೆ' ಎಂಬ 100 ಪುಟಗಳ ಕಿರುಹೊತ್ತಿಗೆ ಬರೆಯುವುದರಲ್ಲಿ ಅವರು ತಲ್ಲೀನರಾಗಿದ್ದಾರೆ.
ಇದೇ ವೇಳೆ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹೊರ ತರುತ್ತಿರುವ ಪುಸ್ತಕ ಮಾಲಿಕೆಗೂ ಒಂದು ಕೃತಿ ಬರೆಯುತ್ತಿರುವ ಜೋಗಿ ಪ್ರವಾಸದಿಂದ ವಾಪಸ್ಸು ಬಂದನಂತರ ಯಾವುದಾದರೊಂದು ಪತ್ರಿಕೆಗೆ ಸೇರುವ ಆಲೋಚನೆಯನ್ನು ತಳ್ಳಿಹಾಕುತ್ತಿಲ್ಲ.
ಜೋಗಿ ಅವರನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಒಂಥರಾ ಹೋಲಿಸಬಹುದು. ಅವರ ಸ್ಟೈಲೇ ಬೇರೆ ಇವರ ಸ್ಟೈಲೇ ಬೇರೆ ಆದರೂ ಕಾಕತಾಳೀಯವಾಗಿ ಇಬ್ಬರ ಚಲನವಲನಗಳಲ್ಲಿ ಕೆಲವು ಸಾಮ್ಯತೆ ಕಂಡು ಬಂದಿದೆ. ಇಬ್ಬರೂ ಜು.28ರಂದೇ ರಾಜೀನಾಮೆ ನೀಡಬೇಕಾಗಿತ್ತು.
ಜೋಗಿಯವರು ನಿಗದಿತ 28ರಂದೇ ರಾಜೀನಾಮೆ ಸಲ್ಲಿಸಿ ಇನ್ ಫಂಟ್ರಿ ಕಚೇರಿಯಿಂದ ಹೊರನಡೆದರೆ, ಯಡಿಯೂರಪ್ಪ ಮಾತ್ರ ಆಷಾಢದ ನೆಪವೊಡ್ಡಿ ರಾಜೀನಾಮೆಯನ್ನು ಮೂರು ದಿನಕ್ಕೆ ಮುಂದೆ ತಳ್ಳಿದ್ದು ನಿಮಗೆ ಗೊತ್ತಿದೆ.
ಇವರೀರ್ವರ ರಾಜೀನಾಮೆ ನಡುವಿನ ಅಂತರ 3 ದಿನ. ರಾಜೀನಾಮೆ ಕೊಟ್ಟ ನಂತರ ಈರ್ವರೂ ರಾಜ್ಯ ಪ್ರವಾಸ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಯಡ್ಡಿ ಮೈಗೆ ಗಣಿ ಸಗಣಿ ಮತ್ತು ಭೂಕಬಳಿಕೆ ಹಗರಣ ಮೆತ್ತಿಕೊಂಡಿದ್ದರೆ " ಈ ಜೋಗಿ ಕೈಗೇ ಸಿಗಲ್ಲ, ಈಮೇಲುಗಳಿಗೆ ಉತ್ತರವನ್ನೇ ಕೊಡಲ್ಲ" ಎಂಬ ಗುರುತರ ಆರೋಪ ಎದುರಿಸುತ್ತಿದ್ದಾರೆ.












Click it and Unblock the Notifications