ಹೈಕಮಾಂಡ್ ವಿರುದ್ಧ ತೊಡೆತಟ್ಟಿದ ಯಡಿಯೂರಪ್ಪ

ಯಡಿಯೂರಪ್ಪನವರಿಂದ ರಾಜೀನಾಮೆ ಪಡೆಯುವಲ್ಲಿ ದೆಹಲಿಯಿಂದ ಆಗಮಿಸಿದ್ದ ವೀಕ್ಷಕರು ಸಂಪೂರ್ಣ ವಿಫಲವಾಗಿದ್ದು, ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಭಾರೀ ಮುಖಭಂಗ ಅನುಭವಿಸುವಂತಾಗಿದೆ. ರೇಸ್ ಕೋರ್ಸ್ ಮನೆಗೆ ತೆರಳಿದ್ದ ವೀಕ್ಷಕರು ಬರಿಗೈಯಲ್ಲಿ ಅಶೋಕ ಹೊಟೇಲಿಗೆ ತೆರಳಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಮತ್ತು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಇಬ್ಭಾಗವಾಗಿರುವುದು ಸುಸ್ಪಷ್ಟವಾಗಿದೆ. ಒಂದು ಬಣ ಯಡಿಯೂರಪ್ಪನವರೇ ನಾಯಕರು ಎಂದು ಏರಿಗೆ ಎಳೆಯುತ್ತಿದ್ದರೆ, ಇನ್ನೊಂದು ಬಣ ಮರ್ಯಾದೆಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ನೀರಿಗೆ ಎಳೆಯುತ್ತಿದೆ.
ನನ್ನ ಜೊತೆ 15 ಸಂಸದರು, 21 ಎಂ ಎಲ್ ಸಿ ಗಳು ಸೇರಿದಂತೆ 70 ಜನ ಇದ್ದಾರೆ. ಬಲಪ್ರದರ್ಶನಕ್ಕೆ ನಾನು ಸಿದ್ಧ. ಬೇಕಿದ್ದರೆ ಕಾನೂನು ಸಮರಕ್ಕೂ ರೆಡಿ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರೊಂದಿಗೆ ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ರೇಣುಕಾಚಾರ್ಯ, ಚಂದ್ರೇಗೌಡ, ಸೋಮಣ್ಣ ಮುಂತಾದವರು ಗುರುತಿಸಿಕೊಂಡಿದ್ದಾರೆ.
ಆದರೆ, ನಾಯಕತ್ವ ಬದಲಾವಣೆಯಿಂದ ಉತ್ತೇಜಿತರಾಗಿದ್ದ ಇನ್ನೊಂದು ಬಣ ನಮ್ಮ ಬಳಿಯೂ 50 ಶಾಸಕರಿದ್ದಾರೆ. ವರಿಷ್ಠರ ಅಣತಿಯಂತೆ ಕೂಡಲೆ ರಾಜೀನಾಮೆ ನೀಡಲೇಬೇಕು ಎಂದು ಪಟ್ಟುಹಿಡಿದಿದೆ. ಈಶ್ವರಪ್ಪ, ಸುರೇಶ್ ಕುಮಾರ್, ಅನಂತ್ ಕುಮಾರ್, ಆರ್ ಅಶೋಕ್, ರಾಮದಾಸ್, ಶೆಟ್ಟರ್ ಮುಂತಾದವರಿದ್ದ ಬಣ ಯಡಿಯೂರಪ್ಪನವರನ್ನು ತೊಲಗಿಸಲು ತುದಿಗಾಲಲ್ಲಿ ನಿಂತಿದ್ದಾರೆ. [ಮುಂದಿನ ಮುಖ್ಯಮಂತ್ರಿ ಯಾರು?]
ಶೋಭಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ತಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ರಾಜೀನಾಮೆಗೆ ಸಿದ್ಧವಿರುವುದಾಗಿ ಹೇಳಿದ್ದ ಯಡಿಯೂರಪ್ಪ, ಮತ್ತೆ ಪ್ಲೇಟು ಬದಲಿಸಿದ್ದು ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲ ಎಂದು ಹೊಸ ದಾಳವನ್ನು ಉರುಳಿಸಿದ್ದಾರೆ.
ಆದರೆ, ಯಡಿಯೂರಪ್ಪನವರು ಚಲಿಸುತ್ತಿರುವ ದೋಣಿಯಲ್ಲೇ ಪಯಣಿಸುತ್ತಿರುವ ರೆಡ್ಡಿ ಸಹೋದರರು ಯಡಿಯೂರಪ್ಪನವರ ಪರವಾಗಿ ನಿಂತಿದ್ದಾರೆ. ಅಕ್ರಮ ಗಣಿಗಾರಿಕೆ ವಲಯದಲ್ಲಿ ಯಡಿಯೂರಪ್ಪನವರ ಹೆಸರಿನ ಜೊತೆ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಹೆಸರುಗಳೂ ತಳಕುಹಾಕಿಕೊಂಡಿದೆ.
ಈಗ ಎಲ್ಲರ ಚಿತ್ತ ವರಿಷ್ಠರತ್ತ ನೆಟ್ಟಿದೆ. ಯಡಿಯೂರಪ್ಪ ಅವರ ಮನವೊಲಿಸಲು ಮತ್ತೆ ಪ್ರಯತ್ನಿಸುವುದಾ? ಯಾರೇ ಆಗಲಿ ಬಿಜೆಪಿ ಅಧಿಕಾರದಲ್ಲಿರಲಿ ಎಂದು ಶೋಭಾ ಕರಂದ್ಲಾಜೆಯನ್ನೇ ಪಟ್ಟಕ್ಕೇರಿಸುವುದಾ? ಇಷ್ಟು ವರ್ಷ ಆಡಿಸಿದ ಆಟ ಸಾಕೆಂದು ಯಡಿಯೂರಪ್ಪನವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾ?












Click it and Unblock the Notifications