• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಕರ್ತರಿಗೆ ಸಿಕ್ಕಾಪಟ್ಟೆ ಓಪನಿಂಗ್ಸ್

By * ಶಾಮಿ
|
ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಇವತ್ತು ನೌಕರಿ ಸಿಗದಿರಬಹುದು, ಸಾಫ್ಟ್ ವೇರ್ ಕಂಪನಿಗಳಲ್ಲಿ ಪ್ರಾಜೆಕ್ಟ್ ಅಭಾವ ಇರಬಹುದು, ಮರಳು ಸಾಗಿಸುವ ಲಾರಿ ಮುಷ್ಕರದಿಂದ ಕಟ್ಟಡ ಕಾರ್ಮಿಕರ ಅನ್ನಕ್ಕೆ ಜೆಲ್ಲಿ ಕಲ್ಲು ಬಿದ್ದಿರಬಹುದು. ಆದರೆ, ಕನ್ನಡ ಪತ್ರಿಕೋದ್ಯಮವನ್ನೇ ನಂಬಿರುವ ಕೆಲಸಗಾರರಿಗೆ ನಿರುದ್ಯೋಗ ಎನ್ನುವುದೇ ಇಲ್ಲ. ಏಕೆಂದರೆ, ಇಲ್ಲಿ ಉದ್ಯೋಗಾವಕಾಶಗಳು ಸದಾ ತೆರೆದುಕೊಂಡಿರುತ್ತವೆ. ಸಂಪಾದಕ, ಉಪಸಂಪಾದಕ, ವರದಿಗಾರ, ಡೆಸ್ಕ್ ರಿಪೋರ್ಟರ್, ವಾಣಿಜ್ಯ ವರದಿಗಾರ, ಕ್ರೀಡಾ ಬಾತ್ಮೀದಾರ ಮತ್ತು ಸಂಪಾದಕೀಯ ಬರಹಗಾರರಿಗೆ ಬೇಡಿಕೆ ವಿಪುಲವಾಗಿವೆ, ವೃದ್ಧಿಯಾಗುತ್ತಿವೆ, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಎದ್ದು ಕಣ್ಣಿಗೆ ಹೊಡೆಯುತ್ತಿವೆ.

ನೌಕರಿ ಹುಡುಕುತ್ತಿರುವ ಅಥವಾ ಕೆಲ್ಸ ಬದಲಾಯಿಸಲು ಸಮಯಕ್ಕಾಗಿ ಕಾಯುತ್ತಿರುವ ವರದಿಗಾರ, ಉಪಸಂಪಾದಕರಿಗೆ ಗೊತ್ತಿರುತ್ತದೆ. ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳ ನಾನಾ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳು ಖಾಲಿ ಹೊಡೆಯುತ್ತಿವೆ (ರಾಜಕೀಯ ವರದಿಗಾರಿಕೆ ಒಂದು ಬಿಟ್ಟು) ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್ ಅವರು ಒಮ್ಮೆ ನನಗೆ ಹೇಳಿದ್ದರು. 'ರಾಜ್ಯ ಮತ್ತು ರಾಷ್ಟೀಯ ಮಟ್ಟದಲ್ಲಿ ಸುದ್ದಿ ಜಾಲ ಮತ್ತು ಹಲವು ಹತ್ತು ಕಡೆ ಆವೃತ್ತಿಗಳನ್ನು ಹೊರತರುವ ಒಂದು ಪತ್ರಿಕೆಯಲ್ಲಿ ಸದಾಕಾಲ ಕನಿಷ್ಠ 25 ಉದ್ಯೋಗಾವಕಾಶಗಳು ಖಾಲಿ ಬಿದ್ದಿರುತ್ತವೆ. ಇದಕ್ಕೆ ಕಾರಣ, ಸೂಕ್ತ ಸ್ಥಾನಕ್ಕೆ ಸೂಕ್ತರಾದ ಕೆಲಸಗಾರರ ಅಭಾವ. ಕನ್ನಡದಲ್ಲಿ ಒಂದು ಸುದ್ದಿ ಪತ್ರವನ್ನು ಸ್ಪಷ್ಟವಾಗಿ, ಅಚ್ಚುಕಟ್ಟಾಗಿ ಬರೆಯುವ ಶ್ರದ್ಧೆ ಇಲ್ಲದವರು ಜರ್ನಲಿಸ್ಟ್ ಆಗಲು ಬಯಸುತ್ತಾರೆ, ಪತ್ರಿಕೆಯ ಆಯಕಟ್ಟಿನ ಜಾಗದಲ್ಲಿ ಕುಳಿತುಕೊಳ್ಳಲು ಆಸೆ ಬೀಳುತ್ತಾರೆ.'

ಇನ್ನೊಂದು ಕಾರಣವೆಂದರೆ, ಸರಕಾರಿ ನೌಕರರಂತೆ ಪತ್ರಕರ್ತರೂ ವರ್ತಿಸುತ್ತಿರುವುದರಿಂದ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರಿಗೂ ಬೆಂಗಳೂರಿನಲ್ಲೇ ಪೋಸ್ಟಿಂಗ್ಸ್ ಸಿಗಬೇಕು. ಗಂಗಾವತಿಯಲ್ಲಿ ಎಡಿಟರ್ ಆಗುವುದಕ್ಕಿಂತ ಬೆಂಗಳೂರು ಕಚೇರಿಯಲ್ಲಿ ಕರಡುತಿದ್ದುಗನಾಗಿ ಕೆಲಸ ಮಾಡುವುದಕ್ಕೆ ಎಸ್ ಸಾರ್ ಎನ್ನುತ್ತಾರೆ. ಹಿಂದೆ, ಯುವ ಪತ್ರಕರ್ತರೊಬ್ಬರು ಹೇಳಿದ್ದರು, 'ಇಲ್ಲಿನ ಕೆಲ ಪತ್ರಿಕೆಗಳಲ್ಲಿ ಸಬ್ ಎಡಿಟರ್ ಆಗುವುದಕ್ಕಿಂತ ನ್ಯೂಯಾರ್ಕ್ ಟೈಮ್ಸಲ್ಲಿ ಸ್ವೀಪರ್ ಆಗಲು ಇಚ್ಛೆ ಪಡುತ್ತೇನೆ!'

ಇದೇ ವೇಳೆ, ಪತ್ರಿಕೆ ಮತ್ತು ಟಿವಿ ಕಟ್ಟೆಗಳಲ್ಲಿ ಕೆಲಸಗಾರರ ಅಭಾವದ ಬಿಸಿ ಮತ್ತಷ್ಟು ಏರುತ್ತಿದೆ. ಹತ್ತು ಮರಳು ಲಾರಿ ತುಂಬುವಷ್ಟು ಪತ್ರಕರ್ತರಿಗೆ ಬೇಡಿಕೆ ಬೆಳೆಯುತ್ತಿದೆ. ಸುವರ್ಣ ಟಿವಿ ಚಾನಲ್ ಆಡಳಿತ ಮಂಡಳಿ ದಿನ ಪತ್ರಿಕೆ ಹೊರತರಲು ಹವಣಿಸುತ್ತಿದೆ. ಪತ್ರಿಕೆಗೆ 'ಸುವರ್ಣ ಪ್ರಭ' ಅಥವಾ 'ಸುವರ್ಣ ಕರ್ನಾಟಕ' ಎಂದು ಹೆಸರಿಟ್ಟು ಅದಕ್ಕೆ ಮುದ್ರಣ ಮಾಧ್ಯಮದಲ್ಲೇ ಹೆಚ್ಚು ಪಳಗಿರುವ ಚಾನಲ್ ಎಡಿಟರ್ ರಂಗನಾಥ್ ಅಥವಾ ರವಿ ಹೆಗಡೆ ಅವರನ್ನು ಸಂಪಾದಕರನ್ನಾಗಿ ಪೋಸ್ಟ್ ಮಾಡುವ ಸಂಭವವಿದೆ. ಸುವರ್ಣ ಪ್ರಭ ಅಥವಾ ಸುವರ್ಣ ಕರ್ನಾಟಕ ಬಂತೆಂದರೆ ಕನಿಷ್ಟ 100 ನುರಿತ ಪತ್ರಕರ್ತರಾದರೂ ಬೇಕಾಗುತ್ತಾರೆ.

'ಸಮಯ್ ಟಿವಿ' ಆಗಮನದ ಸುದ್ದಿ ಬೆನ್ನಲ್ಲೇ ತೆಲುಗು ಟಿವಿ 'ಸಾಕ್ಷಿ' ಕನ್ನಡದಲ್ಲಿ ಟಿವಿ ಚಾನಲ್ ತೆರೆಯುವ ಸುದ್ದಿ ಇದೆ. ಅದರ ತಲೆ ಮೇಲೆ ಹೊಡೆದಂತೆ ಬಳ್ಳಾರಿ ರೆಡ್ಡಿಗಳು ತಮ್ಮದೇ ಚಾನಲ್ ಆರಂಭಿಸುವ ಸೂಚನೆ ಇದ್ದು ಅದಕ್ಕೆ ಅನಂತ ಚಿನಿವಾರ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆಂದು ನಮ್ಮ ಟಿವಿ ಚಾನಲ್ ಅಲೆಮಾರಿ ವರದಿಗಾರ್ತಿ ಹೇಳುತ್ತಿದ್ದಾಳೆ.

ಟಿವಿ9 ಮತ್ತು ಕನ್ನಡಪ್ರಭದಿಂದ ಮಂದಿ ಗುಳೆಯೆದ್ದು ಹೋದನಂತರ ಎರಡೂ ಕಡೆ ತೆರವಾದ ಸ್ಥಾನಗಳಿಗೆ ಫಿಟ್ ಆಗುವ ಪತ್ರಕರ್ತರು ಬೇಕೇಬೇಕಾಗಿದ್ದಾರೆ. ಮುಂಚೆ ಕನ್ನಡ ಹುಡುಗರು ಮತ್ತು ಹುಡುಗಿಯರು ಕೆಲಸ ಸಿಕ್ಕರೆ ಸಾಕು ಎನ್ನುತ್ತಿದ್ದರು, ಆದರೆ ಈಗ ಸಂಬಳ ಎಷ್ಟು ಎಂದು ಸಂದರ್ಶನದಲ್ಲಿ ಮರುಪ್ರಶ್ನೆ ಹಾಕುತ್ತಿರುವುದರಿಂದ ಅಪಾಯಿಂಟ್ ಮೆಂಟುಗಳು ಲಾಗೂ ಆಗುತ್ತಿಲ್ಲ.

ಈಗಿನ ಕಾಲದ ಬಹುತೇಕ ಪತ್ರಕರ್ತರ ಮೊದಲ ಆಯ್ಕೆ ಟಿವಿ. ಅಲ್ಲಿ ಗಿಟ್ಟದಿದ್ದರೆ ದೊಡ್ಡ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ಉದ್ಯೋಗ. ಹೀಗಾಗಿ ನಾಳೆ (ಡಿ.30) ಉದಯವಾಗುತ್ತಿರುವ ಯಾದಗಿರಿ ಸೇರಿದಂತೆ 30 ಜಿಲ್ಲೆಗಳಲ್ಲಿ ವರದಿಗಾರ, ಉಪಸಂಪಾದಕ, ಸ್ಥಾನಿಕ ಸಂಪಾದಕ ಕೆಲಸಕ್ಕೆ ಒಪ್ಪಿಕೊಳ್ಳುವುದು ಕಡೆಯ ಆಯ್ಕೆ. ಪ್ರಭಾವಶಾಲಿ ಪತ್ರಿಕೋದ್ಯಮದ ಬೇಡಿಕೆ ಪೂರೈಕೆ ಸ್ಥಿತಿಗತಿ ಹೀಗಿರುವಾಗ ಮಾಸಿಕ, ಸಾಪ್ತಾಹಿಕ, ದ್ವೈಮಾಸಿಕ ಪತ್ರಿಕೆಗಳ ಕತೆ ಹೇಳುವುದೇ ಬೇಡ. ಅಲ್ಲೆಲ್ಲ ಪಿಆರ್ ಮಾಡುವುದಕ್ಕೆ ಗೊತ್ತಿಲ್ಲದ ಪಾಪದ ಹುಡುಗರು ಹುಡುಗಿಯರು 20ನೇ ಶತಮಾನದ ಸಂಪಾದಕರ ಅಡಿಯಲ್ಲಿ ಏದುಸಿರು ಬಿಡುತ್ತಾ ಬರೆಯುತ್ತಿರುತ್ತಾರೆ.

ಅಂದಹಾಗೆ, ರವಿ ಬೆಳಗೆರೆ ಮಾಲಿಕತ್ವದ ಪಾಕ್ಷಿಕ 'ಓ ಮನಸೆ' ಮತ್ತು ಟ್ಯಾಬ್ಲಾಯ್ಡ್ 'ಹಾಯ್ ಬೆಂಗಳೂರ್'ಗೂ ಜನ ಬೇಕಾಗಿದ್ದಾರೆ ಎಂದು ಈ ವಾರದ ಹಾಯ್ ಬೆಂಗಳೂರಿನಲ್ಲಿ ಪ್ರಚಾರವಿದೆ. ನೀವೂ ಒಂದು ಹಾಯ್ ಹೇಳಿ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more