ಬಸ್ ಜಗ್ಗೇಶರಿಗೆ ಬಸ್ಸು ಬಂಧುಗಳ ಕರೆ
ಮೊದಲೇ ನವೆಂಬರ್ ತಿಂಗಳ ಚಳಿ. ಅದರಮೇಲೆ ಜಿಟಿಜಿಟಿ ಮಳೆ ಗಾಳಿ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದಾಗಲೆಲ್ಲ ಉಂಟಾಗುವಂತೆ ಕಳೆದ ಐದು ದಿನಗಳಿಂದ ತಮಿಳುನಾಡಿನಾದ್ಯಂತ ಕುಂಭದ್ರೋಣ ಮಳೆ. ಅಲ್ಲಿ ಜನಜೀವನ ಅಸ್ತವ್ಯಸ್ಥವಾಗಿ ಮಳೆಹಾವಳಿಗೆ ಇದುವರೆಗೆ 46 ಮಂದಿ ಅಸುನೀಗಿದ ವರದಿಗಳು ಬಂದಿವೆ. ಗುರುವಾರ ಮಧ್ಯಾನ್ಹ ಈ ವರದಿ ಬರೆಯುವ ಸಮಯದಲ್ಲೂ ತಮಿಳುನಾಡಿನಲ್ಲಿ ಮಳೆ ಸುರಿಯುತ್ತಲೇ ಇದೆ. ಇಂದು ಮುಂಜಾನೆ 6 ಗಂಟೆಗೆ ಪಾಂಡಿಚೇರಿಯ ಕಾರೈಕಲ್ಲಿನಿಂದ ಚಂಡಮಾರುತ ಕಾಲಿಗೆ ಬುದ್ಧಿ ಹೇಳಿರುವುದರಿಂದ ಮಳೆ ನಿಧಾನವಾಗಿ ಕಮ್ಮಿಯಾಗುವ ಆಶಾವಾದವನ್ನು ಇಟ್ಟುಕೊಳ್ಳಲಾಗಿದೆ. ಪ್ರಕೃತಿಯ ಈ ಅಟ್ಟಹಾಸಕ್ಕೆ, ಸಾವು ನೋವಿಗೆ ಅನುಕಂಪ ಸೂಚಿಸುವಂತೆ ಬೆಂಗಳೂರಿನ ಆಕಾಶ ಎರಡುದಿನಗಳಿಂದ ಕಣ್ಣೀರಿಡುತ್ತಿದೆ.
ಮಳೆ ಬಂದರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ ಎನ್ನುತ್ತದೆ ಗಾದೆ. ಮಳೆ ಬಂದರೆ ಮೊದಲು ಬೆಂಗಳೂರಿನಿಂದ ಹೊರಹೋಗು ಎಂದು ಹೊಸ ಗಾದೆ ಬರೆಯಬೇಕಿದೆ. ಮಳೆನೀರನ್ನು ಸಾಗಹಾಕುವ ಕಾಲುವೆಗಳು ಉಸಿರುಕಟ್ಟುವುದು, ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡು ರಸ್ತೆಯಲ್ಲಿ ನಡೆದಾಡುವುದಕ್ಕೂ ದುಸ್ತರವಾಗುವುದು ನಗರ ನಾಗರೀಕರ ನಿತ್ಯ ಪರಿತಾಪವಾಗಿದೆ. ಏನೇ ಆಗಲೀ, ಕುಂದುಕೊರತೆಗಳು ಎಷ್ಟೇ ಎದುರಾಗಲೀ, ಬದುಕಿನ ಬಂಡಿ ಓಡಲೇಬೇಕಲ್ಲ. ಅಂತೆಯೇ ನನ್ನ ಬಂಡಿ ಕೂಡ ಮಳೆದಿನಗಳಲ್ಲಿ ಓಡಲು ಪ್ರಯತ್ನಿಸಿತು.
ನವೆಂಬರ್ 26ರ ಬುಧವಾರ ಸಂಜೆ ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಒಂದು ಸಿನಿಮಾ ಸಂಬಂಧಿ ಕಾರ್ಯಕ್ರಮ ವ್ಯವಸ್ಥೆಯಾಗಿತ್ತು. ಎದ್ದೇಳು ಮಂಜುನಾಥ ಚಿತ್ರದ ಧ್ವನಿಸುರಳಿ ಮತ್ತು ಸಿಡಿ ಬಿಡುಗಡೆಗೆ ಸಂಜೆ 7 ಕ್ಕೆ ಮುಹೂರ್ತ. ಹೊಸೂರು ರಸ್ತೆಯ ನಮ್ಮ ಕಚೇರಿಯಿಂದ ಕಬ್ಬನ್ ಪಾರ್ಕಿನ ಒಳಗಿರುವ ಕ್ಲಬ್ ಹೌಸ್ ಗೆ ತಲಪುವುದಕ್ಕೆ ಹರಸಾಹಸ ಪಟ್ಟೆ. ಬೆಂಗಳೂರಿನ 24x7 ಭಯೋತ್ಪಾದಕರಾದ ಆಟೋರಿಕ್ಷದವರು ಕರೆದ ಕಡೆ ಬರುವುದಿಲ್ಲ. ಸಿಟಿ ಬಸ್ಸುಗಳು ಕೈಗೇ ಸಿಗುವುದಿಲ್ಲ. BMTC ನವರು ಎಷ್ಟೇ ಹೊಸ ವಾಹನಗಳನ್ನು ಬೀದಿಗಿಳಿಸಿದರೂ ವಲಸಿಗರ ಮಹಾಪೂರ, ಜನಸಂಖ್ಯಾಸ್ಫೋಟ ಮತ್ತು ಅವೈಜ್ಞಾನಿಕ Bus Route Map ನಿಂದಾಗಿ ಸಿಟಿಬಸ್ಸು ಸಿಕ್ಕವರಿಗೆ ಸೀರುಂಡೆಯಾಗುವ ಗೋಳು ತಪ್ಪುತ್ತಲೇ ಇಲ್ಲ.
ಪ್ರೆಸ್ ಕ್ಲಬ್ಬಿನಲ್ಲಿ ಇಟ್ಟಿಕೊಳ್ಳಲಾಗಿದ್ದ ಎದ್ದೇಳು ಮಂಜುನಾಥ ಚಿತ್ರದ ಧ್ವನಿ ಸುರಳಿ ಮತ್ತು ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಅದೇ ಚಿತ್ರದ ಹೀರೋ ನವರಸ ನಾಯಕ ಜಗ್ಗೇಶ್ ಆಗಮಿಸಿದ್ದರು. ಜಗ್ಗೇಶ್ ಅವರು ಕಲಾವಿದರಷ್ಟೆ ಅಲ್ಲ. ನಿಮಗೆ ಗೊತ್ತಿರುವಂತೆ ತುಮಕೂರು ಜಿಲ್ಲೆ ತುರುವೇಕೆರೆಯಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆ ಆಗಿ ನಂತರ ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿಗೆ ಭರ್ತಿಯಾದವರು. ಪಕ್ಷಾಂತರ ಮಾಡಿದ್ದಕ್ಕೆ ಬಳವಳಿಯಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡವರು.
ಒಳ್ಳೆ ನಟರಾಗಿ ಜಗ್ಗೇಶ್ ಅವರ ಅಭಿಮಾನಿಗಳ ಮನರಂಜಿಸುತ್ತಲೇ ಬಂದಿದ್ದಾರೆ. ಕಲಾಸರಸ್ವತಿ ಅವರನ್ನು ಇನ್ನಷ್ಟು ಹರಸಲಿ. ಈ ಮಧ್ಯೆ ಬೃಹತ್ ಬೆಂಗಳೂರಿನಲ್ಲಿ ಸಂಚರಿಸುವ ಬಿಎಂಟಿಸಿ ಬಸ್ಸುಗಳ ನರನಾಡಿಯನ್ನು ನಿಯಂತ್ರಿಸುವ ಆಡಳಿತಗಾರ ಜಗ್ಗೇಶ್ ಅವರಿಂದ ನನಗೆ ಮತ್ತು ನನ್ನ ಜತೆಗಾರ ಬೆಂಗಳೂರು ನಾಗರಿಕರಿಗೆ ಒಂದು ಉಪಕಾರವಾಗಬೇಕಾಗಿದೆ. ಅದಕ್ಕೋಸ್ಕರ ಈ ಪತ್ರ ಬರೆದಿದ್ದೇನೆ. ಮಾನ್ಯ ಜಗ್ಗೇಶ್ ಅವರು ಪ್ರೆಸ್ ಕ್ಲಬ್ ಅನ್ನು ಒಂದು ಬಿಟಿಎಸ್ ಟರ್ಮಿನಸ್ ಆಗಿ ರೂಪಿಸಲು ತಮ್ಮ ಅಧಿಕಾರಿಗಳಿಗೆ ಆದೇಶ ನೀಡಬೇಕು. ಕ್ಲಬ್ ಆವರಣದಿಂದ ನಗರದ ನಾನಾ ದಿಕ್ಕುಗಳಿಗೆ ಹೊರಡುವ ಮತ್ತು ಜನತೆಯನ್ನು ಕಬ್ಬನ್ ಪಾರ್ಕ್ ಪ್ರದೇಶಕ್ಕೆ ತಂದಿಳಿಸುವ ಬಸ್ಸು ಮಾರ್ಗಗಳನ್ನು ರೂಪಿಸಬೇಕು.
ವಿಧಾನಸೌಧ , ಕಬ್ಬನ್ ಪಾರ್ಕ್, ನೃಪತುಂಗ ರಸ್ತೆ, ಇನ್ ಫ್ಯಾಂಟ್ರಿ ರಸ್ತೆ, ಶಿವಾಜಿನಗರ, ಚಿನ್ನಸ್ವಾಮಿ ಕ್ರೀಡಾಂಗಣವನ್ನು ಒಳಗೊಳ್ಳುವ ಪ್ರದೇಶಕ್ಕೆ ಹಾಲಿ ನೇರ ಬಸ್ಸು ಮಾರ್ಗಗಳಿಲ್ಲ. ಕೆಲಸದ ದಿನಗಳಂದು ವಿಧಾನಸೌಧ ನೌಕರರಿಗೆ ಅನುಕೂಲವಾಗುವಂತೆ ಬೆಳಗ್ಗೆ 10 ಗಂಟೆ ಮತ್ತು ಸಂಜೆ 5.30 ಕ್ಕೆ PHS Service ಇದೆ. ಇದು ಯಾತಾತಕ್ಕೂ ಸಾಕಾಗದು. ಪ್ರೆಸ್ ಕ್ಲಬ್ ನಿಂದಲೇ ನಗರದ ಮುಖ್ಯ ಬಡಾವಣೆಗಳಿಗೆ ಬಸ್ಸು ಸಂಪರ್ಕ ಕಲ್ಪಿಸಿದರೆ ವಾರ ಪೂರ್ತಿ ಆ ಪ್ರದೇಶಕ್ಕೆ ಹೋಗಿ ಬರುವ ಜನಕ್ಕೆ ಮಹದುಪಕಾರವಾಗುತ್ತದೆ.
ಜಗ್ಗೇಶ್ ಆಗಾಗ ಹೇಳುತ್ತಲೇ ಇರುತ್ತಾರೆ. ಪತ್ರಕರ್ತರು ತಮ್ಮನ್ನು ಬೆಳೆಸಿದ್ದಾರೆಂತಲೂ, ಮಾಧ್ಯಮ ತಮಗೆ ನೀಡಿದ ಪ್ರೋತ್ಸಾಹದಿಂದ ನೂರು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳಲು ಸಾಧ್ಯವಾಗಿದೆ ಎಂತಲೂ ಧನ್ಯವಾದಗಳನ್ನು ಸಮಯ ಸಿಕ್ಕಾಗಲೆಲ್ಲ ಅರ್ಪಿಸುತ್ತಲೇ ಇರುತ್ತಾರೆ. ಈ ಉಪಕಾರ ಸ್ಮರಣೆಯನ್ನು ಅವರು ಪ್ರೆಸ್ ಕ್ಲಬ್ಬಿನಿಂದ ರಾಜಾಜಿನಗರ, ಪ್ರೆಸ್ ಕ್ಲಬ್ಬಿನಿಂದ ಜಯನಗರ, ಪ್ರೆಸ್ ಕ್ಲಬ್ಬಿನಿಂದ ಹಲಸೂರು, ಪ್ರೆಸ್ ಕ್ಲಬ್ಬಿನಿಂದ ಯಲಹಂಕ, ಪ್ರೆಸ್ ಕ್ಲಬ್ಬಿನಿಂದ ಬಿಟಿಎಂ, ಪ್ರೆಸ್ ಕ್ಲಬ್ಬಿನಿಂದ ಕತ್ರಿಗುಪ್ಪೆ , ಪ್ರೆಸ್ ಕ್ಲಬ್ಬಿನಿಂದ ಚಂದ್ರ ಲೇ ಔಟ್ ಮುಂತಾದ ಮಾರ್ಗಗಳನ್ನು ಆರಂಭಿಸುವ ಮೂಲಕ ತೋಪ್ರಡಿಸಿದರೆ ಹೀರೋ ಸ್ಥಾನದಿಂದ ಅವರು ಜನನಾಯಕನ ಪಟ್ಟಕ್ಕೆ ಏರುವುದು ಸುಲಭವಾಗುತ್ತದೆ.
ಈ ಜನೋಪಕಾರಿ ಕೆಲಸವನ್ನು ಜಗ್ಗೇಶ್ ಎಷ್ಟು ಬೇಗ ಆರಂಭಿಸುತ್ತಾರೋ ಅಷ್ಟು ಒಳ್ಳೆಯದು. ಯಾಕೆಂದರೆ, ರಾಜ್ಯ ರಾಜಕೀಯ ಸ್ಥಿತಿಗತಿಗಳಿಗೆ ದಿಕ್ಸೂಚಿಯಾಗುವ ವಿಧಾನಸಬಾ ಕ್ಷೇತ್ರಗಳಿಗೆ ಉಪಚುನಾವಣೆ ಆನಂತರ ಲೋಕಸಭಾ ಚುನಾವಣೆಗೆ ದಿನಾಂಕಗಳು ದಿನೇ ದಿನೇ ಹತ್ತಿರವಾಗುತ್ತಿವೆ.


Click it and Unblock the Notifications
