ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಕಿ ಬಿದ್ದ ಮನೆಯಲ್ಲಿ ಹಿರಿದದ್ದೇ ಲಾಭ ಎಂದು ನಂಬಿರುವವರ ಸಂತೆಯಲ್ಲಿ ಅವಮಾನ ಆಗುತ್ತಲೇ ಇರುತ್ತದೆ..

By Staff
|
Google Oneindia Kannada News


*ಎಸ್ಕೆ.ಶಾಮಸುಂದರ

S K Shama SundaraWe lost the Battle in the Night clubs
- Naepolean

ಈ ಸಲದ ಅಂಕಣ ಸ್ಪಲ್ಪ ದೀರ್ಘವಾಯಿತು, ಕ್ಷಮ್ಸಿ .

ಕಾವೇರಿ ನೀರು ವಿವಾದವೇ ಕೇಂದ್ರ ಬಿಂದುವಾಗಿ ಇವತ್ತು ಕರ್ನಾಟಕಕ್ಕೆ ಬಂದೊದಗಿರುವ ಪರಿಸ್ಥಿತಿಯನ್ನು ನೀವೆಲ್ಲ , ಎಲ್ಲೋ ಒಂದು ಕಡೆ ಓದಿಯೇ ಇರುತ್ತೀರಿ. ಹೀಗೇಕಾಯಿತು ? ಎಂಬ ಪ್ರಶ್ನೆಯನ್ನು ಮಕ್ಕಳೋ ಮೊಮ್ಮಕ್ಕಳೋ ಕೇಳಿದರೆ ಏನಂತ ಉತ್ತರ ಕೊಡುತ್ತೀರಿ ?

ಭಾರತದ ಸರ್ವೋನ್ನತ ನ್ಯಾಯಾಲಯ ತಳೆದಿರುವ ನಿಲುವಿನಿಂದ ನಾವೆಲ್ಲ ತಲೆ ತಗ್ಗಿಸುವಂತೆ ಆಗಿರುವುದು ನಿಜ. ನಾವೆಲ್ಲ ಸೇರಿಕೊಂಡು ಏನೋ ಪಿತೂರಿ ಮಾಡಿದವರಂತೆ , ಯಾರದೋ ಗಂಟು ತಿಂದವರಂತೆ ಊರೆಲ್ಲ ಡಂಗುರವಾಯಿತು. ದೇಶ ವಿದೇಶಗಳಲ್ಲಿ ನಮ್ಮ ಮಾನ ಮೂರುಕಾಸಿಗೆ ಹರಾಜಾಯಿತು. ನೆರೆಹೊರೆಯವರ ಕಣ್ಣಿನಲ್ಲಿ ನಾವು ಸಣ್ಣವರಾದೆವು. ರಾಜ್ಯದ ಕಾಂಗ್ರೆಸ್‌ ಸರಕಾರಕ್ಕೆ ತಾತ್ಕಾಲಿಕ ವಿಜಯ ಸಿಕ್ಕಿತು. ತಮಿಳುನಾಡಿನ ಗಡಿ ಭಾಗದ ಹೊಲಗಳು ಗದ್ದೆಗಳಾದವು, ಜಯಲಲಿತಾ ಎಣ್ಣೆ ನೀರು ಹಾಕಿಕೊಂಡಳು. ಕಾವೇರಿ ಜಲಾನಯನ ಪ್ರದೇಶದ ಕನ್ನಡಿಗ ರೈತರು ಅರಚುತ್ತಿದ್ದ ಹಾಗೇ ಪೊಲೀಸರು ಅವರನ್ನೆಲ್ಲ ವ್ಯಾನಿನಲ್ಲಿ ತುಂಬಿಕೊಂಡು ಜೈಲಿಗೆ ಕರೆದುಕೊಂಡು ಹೋದರು. ಕೈಗೆ ಬಂದ ಮಗ ಏನೋ ಮಾಡಲು ಹೋಗಿ ಜೈಲು ಸೇರಿದರೆ ಹೆತ್ತವರಿಗೆ ಉಂಟಾಗುವ ತಳಮಳ ನಮಗೆಲ್ಲ ಆಯಿತು.

ಕೊನೆಗೂ ಹೀಗೇಕಾಯಿತು ಎಂಬುದು ಯಕ್ಷಪ್ರಶ್ನೆಯಾಗಿ ಉಳಿಯುವುದಿಲ್ಲ. ಕೋರ್ಟು ಕಾನೂನು, ಒಳ ಹರಿವು ಹೊರ ಹರಿವು ಮತ್ತು ಕ್ಯೂಸೆಕ್ಸ್‌ಗಳ ಲೆಕ್ಕ ಗೊತ್ತಿಲ್ಲದ ಒಬ್ಬ ಸಾಮಾನ್ಯ ಪ್ರಜೆಯೂ ಇವತ್ತು ಹೇಳುತ್ತಾನೆ. ‘ ಟೈಂಗೆ ಸರಿಯಾಗಿ ನಮ್ಮ ಲಾಯರುಗಳು ಕೋರ್ಟಿಗೆ ಅಪ್ಲಿಕೇಷನ್‌ ಹಾಕಲಿಲ್ಲವಂತೆ. ನಮ್ಮಲ್ಲಿ ನೀರು ಎಷ್ಟಾದರೂ ಇರಲಿ ಅದು ನಮಗೇ ಸಾಲದು ಎನ್ನುವ ಅಂಶವನ್ನು ಜಡ್ಜ್‌ ಸಾಹೇಬರಿಗೆ ಮನವರಿಕೆ ಮಾಡಿಕೊಡಲಿಲ್ಲವಂತೆ ; ನೀವು ಏನೇ ಹೇಳಿ ಸಾರ್‌ ತಮಿಳು ತಲೆಗಳ ಮುಂದೆ ನಮ್ಮ ಆಟ ನಡೆಯಲಿಲ್ಲ , ಎಲ್ಲಾ ಈ ಅಯ್ಯರ್‌ ಬ್ರೇನುಗಳ ಕರಾಮತ್ತು ಮತ್ತು ಸೆಂಟ್ರಲ್‌ನಲ್ಲಿ ಬಲವಾಗಿರುವ ತಮಿಳುನಾಡು ಲಾಬಿ ಸಾರ್‌’.

ನಮ್ಮಲ್ಲಿ ಬ್ರೇನುಗಳಿಗೆ ಕೊರತೆಯೇನಿಲ್ಲ. ಆದರೆ, ನದಿತೀರದಲ್ಲಿ ನಾವೆಲ್ಲ ಪಿಕ್‌ನಿಕ್‌ ಮಾಡುತ್ತಾ ಚಿತ್ರಾನ್ನ ತಿನ್ನುತ್ತಿರುವಾಗ ಜಯಕ್ಕ ಕೊಡದಲ್ಲಿ ನೀರು ಕದ್ದುಕೊಂಡು ಓಡಿಹೋದಳು ಅಷ್ಟೆ . ನಾವೂ ಲಾಬಿ ಮಾಡಬೇಕಾಗಿತ್ತು ಆದರೆ ಆ ಶ್ಯಾಣ್ಯಾತನ ನಮ್ಮಲ್ಲಿರಲಿಲ್ಲ ಎಂದು ವಿವರಿಸಿಕೊಂಡರೆ ಅದು ನಮಗೆ ನಾವೇ ಕೊಟ್ಟುಕೊಳ್ಳುವ ಕಾಂಪ್ಲಿಮೆಂಟ್‌ ಆಗತ್ತೆ. ಆದರೆ ಬಾಯಿ ಇದ್ದವನು ಮಾತ್ರ ಬದುಕಿದ ಎನ್ನುವುದು ನಿಮ್ಮ ನಂಬಿಕೆಯೂ ಆಗಿದ್ದರೆ, ಅದು ನಿಜಕ್ಕೂ ಒಂದು ಅಸ್ತ್ರವಾದರೆ, ನಮ್ಮ ಬುದ್ಧಿಜೀವಿಗಳು ಯಾಕೆ ಚಾಣಕ್ಯನನ್ನು ಅನುಸರಿಸಲಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ.

ಖೇದದ ಸಂಗತಿ ಎಂದರೆ, ರಾಜ್ಯದ ಒಟ್ಟೂ ಹಿತಾಸಕ್ತಿ ಕಾಪಾಡುವುದಕ್ಕೆ ಪಣತೊಣಬೇಕಾದವರು ಎಲ್ಲಿ ಅಡಗಿ ಕೊಂಡಿದ್ದರೋ ಗೊತ್ತಿಲ್ಲ . ನಮ್ಮಲ್ಲಿ ಬಂಗಾರಪ್ಪ , ಹೆಗಡೆ, ಮೊಯಿಲಿ , ದೇವೇಗೌಡ ಅಂಥ ಘಟಾನುಘಟಿಗಳು ಕಾವೇರಿಯ ತಂಪು-ಬಿಸಿ ಕಂಡವರು ಇಲ್ಲೇ ಎಲ್ಲೋ ಇದ್ದಾರೆ. ಅವರ ಜತೆಗೆ ದುಡ್ಡು ತಿಂದು ದಿಲ್ಲಿಯಲ್ಲಿ ದೀವಾನಾ ಮಾಡಿದ ಲಾಯರುಗಳ ಹಿಂಡೂ ಇದೆ. ಇವರನ್ನೆಲ್ಲ ನೋಡುತ್ತಾ ತಮ್ಮ ಸುಖ ಮಾತ್ರ ಅರಸುತ್ತಾ ತಿರುಗಾಡುವ ಮೂರು ಡಜನ್‌ ಎಂಪಿಗಳು ಈ ನಾಡಿನಲ್ಲೇ ಇದ್ದಾರೆ !

ಇವರಾರಿಗೂ ರಾಜ್ಯದ ಒಟ್ಟಾರೆ ಹಿತಾಸಕ್ತಿಗಳ ಬಗ್ಗೆ ನಿರ್ಮಲವಾದ ಕಾಳಜಿ ಇದ್ದಂತೆ ಕಾಣಿಸುವುದಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಕುಳಿತ ರಾಜಕಾರಣಿ ಎನಿಸಿಕೊಂಡ ಒಬ್ಬಾನೊಬ್ಬ ವ್ಯಕ್ತಿ ತುಟಿಕ್‌ ಪಿಟಕ್‌ ಅನಲಿಲ್ಲ. ಯಾಕೆಂದರೆ ಅವರಿಗೆ ಅವರ ಯೋಗ್ಯತೆ ಏನು ಎನ್ನುವುದು ಚೆನ್ನಾಗಿ ಗೊತ್ತಿತ್ತು. ಕರ್ನಾಟಕಕ್ಕೆ ಕೋರ್ಟು ಮಂಗಳಾರತಿ ಎತ್ತುತ್ತೆ ಅಂತ ಅವರಿಗೆಲ್ಲ ಮುಂಚೆಯೇ ಗೊತ್ತಾಗಿತ್ತು !

ಕೇಂದ್ರ ಸಚಿವ ಅನಂತಕುಮಾರ್‌, ಯತ್ನಾಳ್‌, ಶ್ರೀನಿವಾಸ ಪ್ರಸಾದ್‌ ಅವರ ಚಕಾರಗಳು ಕೇಳಿ ಬರಲಿಲ್ಲ. ವಾಜಪೇಯಿ ಅವರಿಗೆ ಕಾವೇರಿ ವಿವಾದವೂ ಕಾಶ್ಮೀರ ವಿವಾದದ ಥರವೇ ಕಾಣಿಸಿ ‘ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸಬೇಕು’ ಎಂದು ಮುಖ ತಿರುಗಿಸಿ ಬಿಟ್ಟರು. ದಕ್ಷಿಣ ಭಾರತದಲ್ಲಿ ಇದ್ದದ್ದರಲ್ಲಿ ಬಿಜೆಪಿ ಬಲವಾಗಿರುವುದು ಕರ್ನಾಟಕದಲ್ಲಿ . ನಮ್ಮನ್ನು ಎದುರು ಹಾಕಿಕೊಂಡು ಕಾವೇರಿ ವಿವಾದದ ಬೆಂಕಿಗೆ ಕೈ ಹಾಕುವುದು ರಾಜಕೀಯ ಜಾಣ್ಮೆಯಲ್ಲ ಎಂದು ಬಿಜೆಪಿ ಥಿಂಕ್‌ಟ್ಯಾಂಕ್‌ ತೀರ್ಮಾನಿಸಿತು. ದೇವೇಗೌಡರು ಹೊಳೆನರಸೀಪುರಕ್ಕೆ ಸೇರಿದವರು. ಜಾಫರ್‌ ಷರೀಫ್‌ ಅಲಸೂರು ಕೆರೆ ಅಂಗಳಕ್ಕೆ ಸೇರಿದವರು. ಆಸ್ಕರ್‌ ಫರ್ನಾಂಡಿಸ್‌ , ಜನಾರ್ಧನ ಪೂಜಾರಿ, ಧನಂಜಯ ಕುಮಾರ್‌ ಅವರೆಲ್ಲ ನೇತ್ರಾವತಿ ನದಿಗೆ ಸೇರಿದವರು. ಬಂಗಾರಪ್ಪ ಎಷ್ಟೇ ಆಗಲಿ ಶಿವಮೊಗ್ಗಕ್ಕೆ ಸೇರಿದವರು ತಾನೇ ? ತುಂಗೆಗೆ, ಭದ್ರೆಗೆ ಮಾಲಿನ್ಯ ಹೊರತಾಗಿ ಬೇರೇನೂ ಅಪಾಯವಿಲ್ಲವಲ್ಲ. ಅದಕ್ಕೇ ಬಂಗಾರಪ್ಪನವರು ಮೊನ್ನೆ ಕರ್ನಾಟಕದಲ್ಲಿ ಸೂತಕದ ಕಳೆ ಇರುವಾಗ ಹುಟ್ಟು ಹಬ್ಬವನ್ನು ಗುಟ್ಟಾಗಿ, ಸಂಭ್ರಮದಿಂದ ಆಚರಿಸಿಕೊಂಡರು.

ಬೆಂಕಿ ಬಿದ್ದ ಮನೆಯಲ್ಲಿ ಹಿರಿದದ್ದೇ ಲಾಭ ಎಂದು ನಂಬಿರುವವರ ಸಂತೆಯಲ್ಲಿ ಇಂಥ ಅವಮಾನಗಳು ನಡೆಯುತ್ತಲೇ ಇರುತ್ತವೆ. ಯಾವಾಗ ಕೃಷ್ಣ ಅವರು ಕೆಳಗೆ ಬೀಳುತ್ತಾರೋ, ಯಾವಾಗ ನಾನು ಅವರ ಕುರ್ಚಿಯಲ್ಲಿ ಆಸೀನನಾಗುತ್ತೇನೋ ಎಂದು ಹಪಹಪಿಸುವವರು ನಿತ್ಯ ತುದಿಗಾಲಲ್ಲಿ ನಿಂತಿರುವಾಗ ಸಮಗ್ರ ಕರ್ನಾಟಕದ ಕಲ್ಪನೆ ಮತ್ತು ಆಶಯ ನುಚ್ಚುನೂರಾಗುತ್ತದೆ. ಈಗ ಆಗಿರುವುದೂ ಅದೇ. ಉತ್ತರ ಕರ್ನಾಟಕ, ದಕ್ಷಿಣಕ ಕರ್ನಾಟಕ, ಮಧ್ಯ ಕರ್ನಾಟಕ, ಮಡಿಕೇರಿ ಕರ್ನಾಟಕ, ನನ್ನ ಕರ್ನಾಟಕ, ನಿನ್ನ ಕರ್ನಾಟಕ .. ಹೀಗೆ ಪ್ರಾದೇಶಿಕ ವೈವಿಧ್ಯದಲ್ಲಿ ಭೌಗೋಳಿಕ ವಿಶಿಷ್ಟತೆ ಕಾಪಾಡಿಕೊಳ್ಳಲಾಗದೆ ರಾಜಕೀಯವಾಗಿ ರಾಜ್ಯವನ್ನು ವಿಭಾಗಿಸಿ ವೈಯಕ್ತಿಕ ಆಸೆಗಳಿಗೆ ನಮ್ಮ ಹಿರಿಯರು ಮನಸೋತದಕ್ಕೆ ಇದೆಲ್ಲ ಆಯಿತು ಮಗೂ ಎಂದು ಮುಂದಿನ ಜನಾಂಗಕ್ಕೆ ಹೇಳಿಬಿಡಿ.

**

ಸುಪ್ರೀಂಕೋರ್ಟು ಕರ್ನಾಟಕವನ್ನು ಕುರಿತು- ನೀರಿಗಾಗಿ ಎಲ್ಲಾ ಕಡೆ, ಎಲ್ಲರ ಹತ್ತಿರ ಕ್ಯಾತೆ ಎಬ್ಬಿಸುವ ರಾಜ್ಯ ಎಂದದ್ದನ್ನು ಓದಿ ನನಗಂತೂ ತುಂಬ ಬೇಸರವಾಯಿತು. ನವೆಂಬರ್‌ ಒಂದನೇ ತಾರೀಕು ರಾಜ್ಯೋತ್ಸವ. ಕರ್ನಾಟಕವಾಯಿತು ಇಂದು, ನಾವೆಲ್ಲ ಕನ್ನಡಿಗರು ಒಂದು ಎಂಬ ಸ್ಲೋಗಾನನ್ನು ಅಪ್ರಯತ್ನ ಪೂರ್ವಕವಾಗಿ ನೆನಪಿಸಿಕೊಳ್ಳುವ ದಿನ. ಆವತ್ತೇ ಸರ್ವೋನ್ನತ ನ್ಯಾಯಲಯ ನಮ್ಮನ್ನೆಲ್ಲ ಜಾಲಾಡುವ ದಿನ. ಅಕ್ಷರಗಳ ಮೂಲಕ ಒದೆಯುವ, ವಾಚಾಮಗೋಚರ ಉಗಿಯುವ ಅಂತಿಮ ತೀರ್ಪು ದಿಲ್ಲಿಯಿಂದ ಇಳಿದು ಬರುವ ದಿನ. ಆವತ್ತು ನಾವಂತೂ ರಾಜ್ಯೋತ್ಸವ ಆಚರಿಸುವುದಿಲ್ಲ. ನಮಗೆ ಬೇರೆ ಕೆಲಸಗಳಿವೆ. ಆ ಕೆಲಸಗಳು ಏನೆಂಬುದನ್ನೂ ಹೇಳಿಬಿಡುತ್ತೇನೆ :

  • ಕನ್ನಡದಲ್ಲಿ ಮತ್ತು ಇಂಗ್ಲೀಷಿನಲ್ಲಿ ಓದುವುದು, ಆನಂತರ ಕನ್ನಡದಲ್ಲಿ ಬರೆಯುವುದು.
  • ಗಲಾಟೆ, ಗಲಭೆಗಳಾಗದೆ ಆವತ್ತು ಅಂಗಡಿಗಳು ತೆಗೆದಿದ್ದರೆ ಒಂದು ಕನ್ನಡ ಪುಸ್ತಕ ಖರೀದಿಸುವುದು.
  • ಮನೆಯಲ್ಲಿ ಮಕ್ಕಳಿಗೆ ನಾಲ್ಕು ಕನ್ನಡ ಶಬ್ದ ಹೇಳಿ, ಅದನ್ನು ಬಳಸುವ ವಿಧಾನ ಹೇಳಿ ಕೊಡುವುದು.
  • ಕರ್ನಾಟಕದ ಚರಿತ್ರೆಯ ಪುಟಗಳನ್ನು ತಿರುವಿ ಹಾಕುವುದು.
  • ಅಸಡ್ಡಾಳ ಟಿವಿ ಕನ್ನಡ ಕಾರ್ಯಕ್ರಮಗಳಿಗೆ ಬೆನ್ನು ಮಾಡಿ ಏಕಾಂತ ಅನುಭವಿಸುವುದು
  • ಬೋರ್‌ವೆಲ್‌ ಹಾಕಿಸುವುದಕ್ಕೆ ಎಷ್ಟು ದುಡ್ಡಾಗುತ್ತದೆ ಅಂತ ಸಿಟಿ ಮಾರ್ಕೆಟ್‌ನಲ್ಲಿ ವಿಚಾರಿಸುವುದು.
  • ಆವತ್ತು ರಜೆ ಆದ್ದರಿಂದ, ಒಬ್ಬ ಕನ್ನಡಿಗ ಕೂಲಿ ಆಳುವನ್ನು ಕರೆಸಿ ಕೈತೋಟಕ್ಕೆ ಸಗಣಿ ಗೊಬ್ಬರ ಹಾಕಿಸುವುದು.
Thank you for choosing Thatskannada.com
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X