• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

*ಎಸ್ಕೆ.ಶಾಮಸುಂದರ

By Staff
|
ಸಿ. ದಿನಕರ್‌, ಅಡ್ವೋಕೇಟ್‌, ಇಂದಿರಾನಗರ, ಬೆಂಗಳೂರು. Sampige marada hasirele naduve...
*ಎಸ್ಕೆ.ಶಾಮಸುಂದರ

C. Dinakarರಾಜ್‌ಕುಮಾರ್‌ ಅವರನ್ನು ಕಪಿಮುಷ್ಟಿಯಿಂದ ಬಿಡಿಸಿಕೊಳ್ಳುವುದಕ್ಕೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ವೀರಪ್ಪನ್‌ಗೆ 20 ಕೋಟಿ ರೂಪಾಯಿ ಕೊಟ್ಟರಾ ? ಬಿಟ್ಟರಾ ?‘ಅಷ್ಟೊಂದೆಲ್ಲ ಕೊಟ್ಟಿಲ್ಲ, ಹತ್ತು ಕೋಟಿ ರೂಪಾಯಿ ಕೊಡಲಾಗಿದೆ, ಹದಿನೈದು ಕೋಟಿ ಕೊಟ್ಟರಂತೆ, ಬೆಂಗಳೂರಿನಿಂದ ವಿಮಾನದಲ್ಲಿ ಚೆನ್ನೈಗೆ ಹೋಗಿ ಗೋಪಾಲ್‌ ಕೈಗೇ ದುಡ್ಡು ಕೊಟ್ಟು ಬಂದರಂತೆ. ಅದು ಹೇಗೋ ಗೊತ್ತಿಲ್ಲ ಬೂಟಿಯನ್ನು ವೀರಪ್ಪನ ಕಾಡಿನ ಮನೆಗೆ ನಕ್ಕೀರನ್‌ ಗೋಪಾಲ್‌ ತಲುಪಿಸಿದನಂತೆ.. ’ ಎನ್ನುವಂಥ ವದಂತಿಗಳು ಕೆಲವು ತಿಂಗಳ ಹಿಂದೆ ಚಾಲ್ತಿಯಲ್ಲಿದ್ದವು. ಕರ್ನಾಟಕದ ಆಗುಹೋಗುಗಳಲ್ಲಿ ಆಸಕ್ತಿ ಇರುವ ಎಲ್ಲರ ಕಣ್ಣಿಗೂ, ಕಿವಿಗೂ ಈ ವದಂತಿ ಬಿದ್ದಿತ್ತು. ಆದರೆ ಈ ಸುದ್ದಿಯ ಮೂಲ ಯಾವುದು ? ನಂಬಬಹುದೋ ಇಲ್ಲವೋ ? ಸಂಶಯಗಳು ಮನೆ ಮಾಡಿದ್ದವು. ತಮಗೆ ಎಲ್ಲವೂ ಗೊತ್ತಿರುವಂತೆ, ಗೊತ್ತಿದ್ದೂ ಗೊತ್ತಿಲ್ಲದವರಂತೆ , ಗೊತ್ತಿಲ್ಲದೆಯೂ ಎಲ್ಲ ತಿಳಿದವರಂತೆ ಕನ್ನಡ ಜನ ಸುಮ್ಮನಿದ್ದರು.

--

ಕರ್ನಾಟಕ ಮಾತ್ರವಲ್ಲ. ಭಾರತ ಮತ್ತು ವಿದೇಶಗಳಲ್ಲಿ ಇವತ್ತು ಗಿರಕಿ ಹೊಡೆಯುತ್ತಿರುವ ಮುಖ್ಯ ಪ್ರಶ್ನೆ ಒಂದೇ. ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಸಿ. ದಿನಕರ್‌ ಸಿಡಿಸಿರುವ ಪುಸ್ತಕ ಬಾಂಬ್‌ ಕೂಡ ತಲೆಬಾಲ ಇಲ್ಲದಿರುವ ಮತ್ತೊಂದು ವದಂತಿಯ ಪುಸ್ತಕ ರೂಪವೋ ? ಅಥವಾ ನಡೆದಂತೆ ನುಡಿಯುತ್ತಾರೆ, ನುಡಿದಂತೆ ನಡೆಯುತ್ತಾರೆ ಎಂದು ಹೆಸರುಗಳಿಸಿರುವ ದಿನಕರ್‌, ಈ ಹಂತದಲ್ಲಿ ಸುಳ್ಳು ಆರೋಪಗಳನ್ನು ಕೃಷ್ಣ ಅವರ ತಲೆ ಮೇಲೆ ಹೊರಿಸುತ್ತಿದ್ದಾರೋ ?

--

ನವೆಂಬರ್‌ 26ರ ಮಂಗಳವಾರ ಹುಬ್ಬಳ್ಳಿಯಲ್ಲಿ ಕೃಷ್ಣ ಅವರು ಈ ವಿವಾದ ಕುರಿಂತೆ ಆಡಿರುವ ಮಾತುಗಳನ್ನು ನೀವು ಓದಿರಬಹುದು. ಅವರ ಹೇಳಿಕೆಯ ಸಾರಾಂಶ ಇಷ್ಟು : ‘ಯಾರೋ ಪುಸ್ತಕ ಬರೆದರೆ ನಾವು ಯಾಕೆ ಹೆದರಬೇಕು ? ದಿನಕರ್‌ ವಿರುದ್ಧ ಮಾನಹಾನಿ ಮೊಕದ್ದಮೆ ಹಾಕುವ ನಿಟ್ಟಿನಲ್ಲಿ ಕಾನೂನು ತಜ್ಞರೊಂದಿಗೆ ಪರಿಶೀಲಿಸಲಾಗುತ್ತಿದೆ’

‘ಪರಿಶೀಲಿಸಿ, ಪರಿಶೀಲಿಸಿ ..ದಂ ಇದ್ದರೆ ಮೊಕದ್ದಮೆ ಹೂಡಿ, ನಾನು ಅದನ್ನು ಎದುರಿಸಲು ಸಿದ್ಧ ’ ಎಂಬ ರೀತಿಯ ಪ್ರತಿಕ್ರಿಯೆ ದಿನಕರ್‌ ಕಡೆಯಿಂದ ಬಂದಿದೆ. Prize Catch ಕೃತಿ ಹೊರಬರುತ್ತಿದ್ದಂತೆ ಎದುರಾಗಬಹುದಾದ ಎಲ್ಲ ಪರಿಸ್ಥಿತಿಗಳನ್ನು ಮುಂಚೆಯೇ ನಿರೀಕ್ಷಿಸಿ ಪ್ರತಿಯಾಂದು ಆಗುಹೋಗುಗಳಿಗೆ ಕಾನೂನು ನೆಲೆಗಟ್ಟಿನಲ್ಲಿ ಫುಲ್‌ ಪ್ರಿಪೇರ್‌ ಆದವರಂತೆ ಅವರು ಸೆಡ್ಡು ಹೊಡೆಯುತ್ತಿದ್ದಾರೆ.

--

ಚುನಾವಣೆ ಕಣವಾಗಿದ್ದರೆ ಇಂಥ ಪರಿಸ್ಥಿತಿಯನ್ನು ಸಮಬಲರ ಸೆಣೆಸಾಟ, ಇಬ್ಬರು ಪೈಲ್ವಾನರ ಜಂಗೀ ಕುಸ್ತಿ, ಜಯಲಕ್ಷ್ಮಿ ಯಾರಿಗೆ ಒಲಿಯುವಳೋ ಎಂದು ಬಣ್ಣಿಸಬಹುದಿತ್ತು. ಆದರೆ, ಇದು ಕಾನೂನಿನ ಪ್ರಶ್ನೆ. ಕರ್ನಾಟಕದ ಸಿನಿಮಾ, ರಾಜಕೀಯ, ಕಾನೂನು ಮತ್ತು ಸುವ್ಯವಸ್ಥೆ, ಲಂಚ ರುಷುವತ್ತು, ಅವರಿವರ ಅವಮಾನ, ಸ್ವಾಭಿಮಾನದ ಜತೆಗೆ ಕನ್ನಡ ಕುಲಕೋಟಿಯ ಆತ್ಮ ಸಾಕ್ಷಿಯ ಪ್ರಶ್ನೆ.

--

ಕೃಷ್ಣ ಅವರು ಈ ಕೂಡಲೇ ಮಾನಹಾನಿ ಮೊಕದ್ದಮೆ ಹೂಡಬೇಕೆನ್ನುವುದು ನಮ್ಮ ಸಲಹೆ. ಆ ಸವಾಲನ್ನು ಸ್ವೀಕರಿಸಿ ದಿನಕರ್‌ ಅವರು ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದನ್ನು ನಾವೆಲ್ಲ ಕಾಣಬೇಕು ಎನ್ನುವುದು ಈ ಹೊತ್ತಿನ ಕುತೂಹಲ. ಒಟ್ಟಿನಲ್ಲಿ ಇಬ್ಬರಲ್ಲಿ ಒಬ್ಬರ ಮಾನ-ಮರ್ಯಾದೆ ಉಳಿದರೆ, ನಮಗಷ್ಟೇ ಸಾಕು.

--

ಅಂದಹಾಗೆ ಕೃಷ್ಣ ಅವರ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ಗೊತ್ತುಂಟು. ಆದರೆ ಈ ದಿನಕರ್‌ ಯಾರು ? ಅವರು ಎಂಥ ಆಸಾಮಿ ?

ನಿಮಗೊಂದು ಕಥೆ ಹೇಳುತ್ತೇನೆ. ಇದು ದಿನಕರ್‌ ಸಾಹೇಬರ ವ್ಯಕ್ತಿತ್ವ, ಕುಟುಂಬ, ಸ್ವಭಾವ, ವೃತ್ತಿ ಜೀವನದಿಂದ ಹೆಕ್ಕಿ ತಂದ ಕಥೆ. ಇದೆಲ್ಲ ಓಬಿರಾಯನ ಕಾಲದ ಕಥೆ ಎಂದು ನಿಮಗೆ ಅನ್ನಿಸಿದರೆ ನಿಮ್ಮ ಈ ವಿಶ್ವಾಸಿಯನ್ನು ಕ್ಷಮಿಸಿರಿ. ಚಂದಮಾಮ ಕಥೆ ಅಂದುಕೊಂಡು ಓದುತ್ತಾ ಹೋಗಿ. ಕಥೆಯಾಳಗೆ ನಿಮಗೆ ದಿನಕರ್‌ ಸಿಕ್ಕರೆ ನನಗೂ ತಿಳಿಸಿ.

--

1964-65

ಐಎಎಸ್‌ ಪಾಸುಮಾಡಿದ್ದ ದಿನಕರ್‌ ಆಗತಾನೇ ಆಫೀಸರ್‌ ಜವಾಬ್ದಾರಿ ವಹಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್‌ ಸೂಪರಿಂಟೆಂಡೆಂಟ್‌ ಆಗಿ ಬಳ್ಳಾರಿಯಲ್ಲಿ ಕೆಲಸ. ಅಲ್ಲೇ ವಾಸ. ಇನ್ನೂ ಮಕ್ಕಳಾಗಿರಲಿಲ್ಲ. ಗಂಡ ಗುಂಡಿ ಇಬ್ಬರೇ. ಹೀಗಿರುವಾಗ ಒಂದು ದಿನ ಆಗ ರಾಜ್ಯಪಾಲರಾಗಿದ್ದ ಶಂಕರ ದಯಾಳ ಶರ್ಮ ಅವರು ಸೊಂಡೂರಿಗೆ ಆಗಮಿಸುವ ಕಾರ್ಯಕ್ರಮ ಎದುರಾಯಿತು. ಆ ಕಾರ್ಯಕ್ರಮವನ್ನು ಸೊಂಡೂರಿನ ಮಹಾರಾಜರಾದ ಘೋರ್ಪಡೆಯವರು ಏರ್ಪಡಿಸಿದ್ದರು. ರಾಜ್ಯಪಾಲರು ಜಿಲ್ಲೆಗೆ ಬರುತ್ತಾರೆಂದರೆ ಪೊಲೀಸ್‌ ಅಧಿಕಾರಿಗಳಿಗೆ, ಜಿಲ್ಲಾ ಧಿಕಾರಿಗಳಿಗೆ ಗಡಿಬಿಡಿಯ ಸಮಯ. ಸಕಲವೂ ಅಚ್ಚುಕಟ್ಟಾಗಿ ಏರ್ಪಾಟಾಗಬೇಕು. ಕಾನೂನು, ಸುವ್ಯವಸ್ಥೆ, ಸಂಚಾರ ವ್ಯವಸ್ಥೆ, ಸತ್ಕಾರ .. ಎಲ್ಲೂ , ಯಾವುದಕ್ಕೂ ಲೋಪವಾಗಬಾರದು. ಹಾಗೆ ಎಚ್ಚರ ವಹಿಸಬೇಕಾದ ಹೊಣೆ ದಿನಕರ್‌ ಮೇಲಿತ್ತು.

ಅಂಥ ಜವಾಬ್ದಾರಿ ಜಿಲ್ಲಾಧಿಕಾರಿಯ ತಲೆಯ ಮೇಲೂ ಇರುತ್ತದೆ. ಆಗ ಜಿಲ್ಲಾಧಿಕಾರಿ ಆಗಿದ್ದವರು ಜಫರ್‌ ಸೈಫುಲ್ಲಾ. ಅವರ ಹೆಸರನ್ನು ನೀವು ಕೇಳಿರಬಹುದು. ಐಎಎಸ್‌ ಆಫೀಸರ್‌. ರಾಜ್ಯದ ಅನೇಕ ಆಯಕಟ್ಟಿನ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದವರು. ಕೇಂದ್ರದಲ್ಲಿ ಸಂಪುಟದ ಮುಖ್ಯ ಕಾರ್ಯದರ್ಶಿ ಆಗಿಯೂ ಸೇವೆ ಮಾಡಿ ನಿವೃತ್ತಿ ಯಾದವರು.

ರಾಜ್ಯಪಾಲರು ಮತ್ತು ಅವರ ಕುಟುಂಬದ ವಾಸ್ತವ್ಯಕ್ಕೆ ತುಂಗಭದ್ರ ಅಣೆಕಟ್ಟು ಗುಡ್ಡದ ಮೇಲಿರುವ ವೈಕುಂಠ ಅತಿಥಿ ಗೃಹ ಗೊತ್ತು ಮಾಡಲಾಗಿತ್ತು. ಗಣ್ಯರು ಉಳಿದುಕೊಳ್ಳಬಹುದಾದ ಕೊಠಡಿಗಳು ಅಲ್ಲಿರುವುದು ಮೂರೇ ಮೂರು.

ದಿನಕರ್‌ಗೆ ಆಗಿನ್ನೂ ಮದುವೆಯಾದ ಹೊಸತು. ಹನಿಮೂನ್‌ಗೆ ಹೋಗಿದ್ದರೋ ಇಲ್ಲವೋ ದೇವರೇ ಬಲ್ಲ. ಗಂಡ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಿದ್ದರೆ ಹೆಣ್ಣುಹೆಂಗಸು ಮನೆಯಲ್ಲಿ ಕುಳಿತು ಏನು ಮಾಡುತ್ತಾಳೆ ಪಾಪ. ನಾನೂ ವೈಕುಂಠಕ್ಕೆ ಬರ್ತೀನ್ರೀ ಅಂತ ಗಂಡನಿಗೆ ಕೇಳಿಕೊಂಡರು.

ನಿನಗೆ ಅಲ್ಲೇನು ಕೆಲಸ ? ಅಂದಿರಬೇಕು ದಿನಕರ್‌. ಅಂದೇ ಇರುತ್ತಾರೆ ನಿಮಗೆ ಅನುಮಾನ ಬೇಡ. ! ‘ಇದು ಸರಕಾರಿ ಸಮಾರಂಭ . ನೀನು ನನ್ನ ಜತೆ ಬರುವ ಹಾಗಿಲ್ಲ., ಸರಕಾರದ ಕಾರಿನಲ್ಲಿ ನೌಕರರರಲ್ಲದ ಹೆಂಗಸರು ಕುಳಿತುಕೊಳ್ಳಬಾರದು. ಅಷ್ಟು ಇಷ್ಟ ಇದ್ದರೆ ನಿನ್ನ ಪಾಡಿಗೆ ನೀನು ಬಾ’ ಎಂದವರೇ ಜೀಪಿನಲ್ಲಿ ಜುಂಯ್‌ ಅಂತ ಹೊರಟುಬಿಟ್ಟರು.

ದಿನಕರ್‌ಗೆ ಹೆಣ್ಣು ಕೊಟ್ಟ ಮಾವ ಫಿಯಟ್‌ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ. ಅವರ ಮಾವ ಯಾರು ಗೊತ್ತಾ ? ಅಣ್ಣಾದೊರೈ ಮುಖ್ಯಮಂತ್ರಿಗಳಾಗಿದ್ದಾಗ ಮದರಾಸು ರಾಜ್ಯದ ಅಡ್ವೋಕೇಟ್‌ ಜನರಲ್‌ ಆಗಿದ್ದ ರಾಮಸ್ವಾಮಿ ಮೊದಲಿಯಾರ್‌. ಆನಂತರ ಅವರು ಎಂಜಿಆರ್‌ ಮುಖ್ಯಮಂತ್ರಿ ಆಗಿದ್ದಾಗ ಕಾನೂನು ಮತ್ತು ನ್ಯಾಯವ್ಯವಸ್ಥೆ ಸಚಿವರಾಗಿದ್ದರು. ‘ ನಿಮ್ಮ ಅಪ್ಪ ಕೊಟ್ಟ ಫಿಯಟ್‌ ಕಾರಿನಲ್ಲಿ ಬೇಕಿದ್ದರೆ ಬಾ. ಬರುವುದೇ ಆಗಿದ್ದರೆ ಒಬ್ಬ ಚಾಲಕನನ್ನು ಹೈರ್‌ ಮಾಡುತ್ತೇನೆ ’ ಎಂದರು ದಿನಕರರು.

ಹೋಗುವುದೇನೋ ಆಯಿತು. ಉಳಿದುಕೊಳ್ಳುವುದು ಎಲ್ಲಿ ? ದಿನಕರ್‌ ಸಾಹೇಬರು ಜಿಲ್ಲಾಧಿಕಾರಿ ಸೈಫುಲ್ಲಾ ಅವರಿಗೆ ಫೋನು ಮಾಡಿ ಕೇಳಿದರು. ‘ನನ್ನ ಹೆಂಡ್ತೀ ಬರ್ತಾಳಂತೆ, ತಂಗುವುದಕ್ಕೆ ಆಕೆಗೆ ಅಲ್ಲಿ ವ್ಯವಸ್ಥೆ ಏನಾದರೂ ಇದೆಯೋ, ನಿಮ್ಮ ಕೈಲಿ ಮಾಡಕ್ಕೆ ಆಗತ್ತೋ ’..

‘ಬರಲೀ ಪರವಾಗಿಲ್ಲ , ಮಾಡಣಂತೆ , ಅದಕ್ಕೇನಂತೆ ’ ಎಂದರು ಸೈಫುಲ್ಲಾ ಸಾಹೇಬರು.

ಕಲ್ಲು ತೂರಾಟ, ಕುರ್ಚಿ ತೂರಾಟ

ಈ ಮಧ್ಯೆ ಸೊಂಡೂರು ಆಸುಪಾಸಿನಲ್ಲಿ ಗಲಾಟೆಯ ವಾತಾವರಣ. ಕಮ್ಯುನಿಸ್ಟ್‌ ಪಕ್ಷದವರು ಏನನ್ನೋ ವಿರೋಧಿಸಿ ಚಳವಳಿ ಹಮ್ಮಿಕೊಂಡಿದ್ದರು. ರಸ್ತೆ ತಡೆ, ಬಂದ್‌, ಬಸ್ಸುಗಳಿಗೆ ಕಲ್ಲು ತೂರಾಟ ನಡದೇ ಇತ್ತು. ರಾಜ್ಯಪಾಲರ ಸುರಕ್ಷೆ ವ್ಯವಸ್ಥೆ ಮಾಡುವುದರ ಜೊತೆಗೆ ದಿನಕರ್‌ ಸಾಹೇಬರಿಗೆ ಉದ್ರಿಕ್ತ ಜನಗಳನ್ನು ಹದ್ದುಬಸ್ತಿನಲ್ಲಿಡುವ ಕೆಲಸ. ಜಿಲ್ಲಾಧಿಕಾರಿಗಳಿಗೂ ನೂರೆಂಟು ಕೆಲಸ. ಈ ಮಧ್ಯೆ ದಿನಕರ್‌ ಹೆಂಡತಿ ಫಿಯಟ್‌ ಕಾರಿನಲ್ಲಿ ಹೊಸಪೇಟೆಯನ್ನೇನೋ ತಲುಪಿದರು. ಆದರೆ ವೈಕುಂಠದಲ್ಲಿ ರೂಮು ಕಾಣದೆ ಕಂಗಾಲಾದರು.

ಗೆಸ್ಟ್‌ ಹೌಸಿನ ಹೊರಗಡೆ ವರಾಂಡದಲ್ಲಿ ಕಾದರು, ಕಾದರು, ಕಾದರು. ಗಂಡನೂ ಬರಲಿಲ್ಲ, ಎಸ್ಪಿ ಸಾಹೇಬರೂ ಬರಲಿಲ್ಲ. ಮಧ್ಯರಾತ್ರಿ ಹೊತ್ತಿಗೆ ಸಾಹೇಬರ ಜೀಪು ಬಂತು. ಕುರ್ಚಿಯಲ್ಲಿ ಕುಳಿತು ತೂಕಡಿಸುತ್ತಿರುವ ಮನದನ್ನೆಯನ್ನು ಕಂಡ ದಿನಕರ್‌ ಬೆಚ್ಚಿಬಿದ್ದರು. ಕೋಪದಲ್ಲಿ ಹೆಂಡತಿ ಏನುಏನು ಅಂದರೋ .. ದಿನಕರ್‌ ಕೆಂಡಾಮಂಡಲ ಕೋಪಿಷ್ಟರಾಗಿ ಮೇಟಿಯನ್ನು ಕೂಗಿ ಎಬ್ಬಿಸಿದರು.

ಅಲ್ಲಿದ್ದ ಮೂರು ರೂಮುಗಳಲ್ಲಿ ಒಂದರಲ್ಲಿ ರಾಜ್ಯಪಾಲರು ಮತ್ತವರ ಕುಟುಂಬ, ಇನ್ನೊಂದರಲ್ಲಿ ರಾಜ್ಯಪಾಲರ ಕಾರ್ಯದರ್ಶಿ, ಮತ್ತೊಂದರಲ್ಲಿ ಸೈಫುಲ್ಲಾ ಮಲಗಿದ್ದರು. ಅಲ್ಲೇ ಇದ್ದ ಕುರ್ಚಿಗಳನ್ನು ಎತ್ತಿ ಸೈಫುಲ್ಲಾ ಮಲಗಿದ್ದ ರೂಮು ಬಾಗಿಲಿಗೆ ಬೀಸಿದರು ದಿನಕರ್‌. ಕುರ್ಚಿಗಳು ಮುರಿದವು, ಬಾಗಿಲು ಚೀರಿತು. ರಾಜ್ಯಪಾಲರಾದಿಯಾಗಿ ಅಲ್ಲಿದ್ದ ಎಲ್ಲರೂ ಎದ್ದು ಬಂದರು. ದೊಡ್ಡ ರಾದ್ಧಾಂತವಾಯಿತು. ರಾಜ್ಯಪಾಲರು ಸಂತೈಸಿದ ಮೇಲೆ ಅವರ ಕಾರ್ಯದರ್ಶಿಗಳ ಕೊಠಡಿಯನ್ನು ಅಮ್ಮಾವರಿಗೆ ಬಿಟ್ಟುಕೊಡಲಾಯಿತು.

ಅಲ್ಲಿಗೆ ಕೊನೆಯಾಗಲಿಲ್ಲ. ಸೈಫುಲ್ಲಾ ಸಾಹೇಬರು ದಿನಕರ್‌ ಹಾವಳಿಯನ್ನು ವಿವರಿಸಿ ಸರಕಾರಕ್ಕೆ ದೂರು ಕೊಟ್ಟರು. ದಿನಕರ್‌ ಕೆಲಸ ಆವತ್ತೇ ಹೋಗಬೇಕಾಗಿತ್ತು. ಆದರೆ, ಅವರ ಮಾವ ರಾಮಸ್ವಾಮಿಗಳಿಗೂ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೂ ಸಂಬಂಧ ಚೆನ್ನಾಗಿತ್ತು. ದಿನಕರ್‌ ಅದೃಷ್ಟ ಕೂಡ.

*

36 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಿ. ದಿನಕರ್‌ ಅವರು ಸೃಷ್ಟಿಸಿದ ಇಂಥ ಚಂದಮಾಮ ಕಥೆಗಳು ಅದೆಷ್ಟೋ. ಅಂದರೆ , ಅವರು ಸದಾ ಕುರ್ಚಿಗಳನ್ನು ಎಸೆಯುತ್ತಿದ್ದರೆಂದು ನೀವು ಅಪಾರ್ಥ ಮಾಡಿಕೊಳ್ಳಬಾರದು ! ತಾನು ಮಾಡಬೇಕಾದ ಕೆಲಸದ ಬಗ್ಗೆ ಗೌರವ. ಅಶಿಸ್ತು, ಅಪ್ರಮಾಣಿಕತೆಯಾಂದಿಗೆ ಯಾವತ್ತೂ ರಾಜಿಯಾಗದ ಜೀವ. ಮಾತೆತ್ತಿದರೆ ಕಾನೂನು, ಕಟ್ಟಳೆ. ಸರಕಾರಿ ಸೇವಾ ನಿಯಮಗಳ ಬಾಯಿಪಾಠ. ಮೇಲಧಿಕಾರಿಗಳಿರಲಿ, ಕೈಕೆಳಗಿನವರಿರಲಿ , ಕೆಲಸದಲ್ಲಿ ಎಚ್ಚರ ತಪ್ಪಿದರೆ ಕಪಾಳ ಮೋಕ್ಷ. ಕೈಯಿ, ಬಾಯಿ, ಕಚ್ಚೆ ಶುದ್ಧ. ಇದು ದಿನಕರ್‌ ನಡೆದು ಬಂದ ದಾರಿ.

ಅವರು ಯಾವತ್ತೂ ಜನಗಳಿಂದ ಬೈಸಿಕೊಳ್ಳಲಿಲ್ಲ. ಯಾಕೆಂದರೆ , ಖದೀಮರಿಂದ ಪಡೆದ ಬಾಟಲಿ ಗಿಫ್ಟ್‌ನ್ನು ಪತ್ರಕರ್ತರಿಗೆ ಕುಡಿಸಿ ತಮಾಷೆ ನೋಡುವುದರಿಂದ ಹಿಡಿದು ಯಾರಿಗೂ, ಯಾವತ್ತೂ ಅನುಚಿತ ಔದಾರ್ಯ ತೋರಿಸಿದವರಲ್ಲ ಅವರು. ಖಂಡಿತವಾದಿ ಲೋಕವಿರೋಧಿ ಎನ್ನುವ ಗಾದೆಯನ್ನು ದಿನಕರ್‌ ಅಂಥವರನ್ನು ನೋಡಿಯೋ ಮಾಡಿರಬೇಕು. ಇಲಾಖೆಯ ಅತ್ಯುನ್ನತ (Director General of Police, Government of Karnataka) ಸ್ಥಾನಕ್ಕೆ ಅವರು ಏರಲು ಸಾಧ್ಯವಾದದ್ದು ತಮ್ಮ ಖಡಕ್‌ ನಿಲುವಿನಿಂದ. ಅದೂ ಕೋರ್ಟು ಕಾನೂನು ನೆರವಿನಿಂದ. ಕೃಷ್ಣ ಅವರನ್ನೂ ಸೇರಿಸಿಕೊಂಡಂತೆ ಯಾವ ರಾಜಕಾರಣಿಗಳ ಮುಸುರೆಯನ್ನೂ ದಿನಕರ್‌ ತಿಕ್ಕಲಿಲ್ಲ. ಇವರ ಇಂಥ ಜಿಗಟು ಸ್ವಭಾವಕ್ಕೆ ತತ್ತರಿಸಿದ ಜತೆಗಾರ ಉದ್ಯೋಗಿಗಳ ಪಾಡು ಶತ್ರುಗಳಿಗೂ ಬೇಡ. ಇದೇ ಕಾರಣ ಮುಂದು ಮಾಡಿಕೊಂಡು ಅನೇಕರು ದಿನಕರ್‌ ಅವರನ್ನು ‘ಹುಚ್ಚ ’ ಎಂದು ಕರೆಯುವುದುಂಟು. ಮಹಾರಾಷ್ಟ್ರದಲ್ಲಿ ಬದಲಾವಣೆ ತರಲು ಹೊರಟ ಖೈರನಾರ್‌ಗೂ ಜನ ಹೀಗೇ ಅಂದಿದ್ದರು. ಸಾಕ್ರಟೀಸ್‌ನನ್ನೇ ಹುಚ್ಚ ಎಂದು ಕರೆದ ಸಮಾಜ ದಿನಕರ್‌ ಅಂಥವರನ್ನು ಬಿಟ್ಟೀತೆ ?

ತಾನಾಯಿತು, ತನ್ನ ಕೆಲಸವಾಯಿತು, ತಾನು ಗೌರವಿಸುವ , ತನ್ನನ್ನು ಗೌರವಿಸುವ ಕಾನೂನಾಯಿತು ಎನ್ನುತ್ತಲೇ 2000ರಲ್ಲಿ ಸೇವೆಯಿಂದ ನಿವೃತ್ತಿ ಪಡೆದರು ಸಿ. ದಿನಕರ್‌. ನಿವೃತ್ತಿ ಪಡೆದ ಮಾರನೆ ದಿನವೇ ಕರಿಕೋಟು ಹಾಕಿದರು. ಇವತ್ತು ಲಾ ಪ್ರಾಕ್ಟೀಸು ಮಾಡುತ್ತಾರೆ. ದೂರವಾದ ಹೆಂಡತಿ ಮತ್ತು ಆಕೆಗಿಂತ ದೂರವಿರುವ ಇಬ್ಬರ ಮಕ್ಕಳನ್ನು ಮರೆತವರಂತೆ ಸದಾ ಕಾನೂನು ಉಪಾಸನೆ ಮಾಡುತ್ತಿರುತ್ತಾರೆ. ಈ ಹೊತ್ತು ಬೆಂಗಳೂರು ಇಂದಿರಾನಗರದ ಮನೆಯಲ್ಲಿ ಕುಳಿತು ನೋಟ್ಸ್‌ ಮಾಡಿಕೊಳ್ಳುತ್ತ್ತಿರುತ್ತಾರೆ. ಸರಕಾರವನ್ನು ಎದುರು ಹಾಕಿಕೊಂಡ ನಂತರ ಬದುಕುವ ಕಲೆಯನ್ನು ಇನ್ನಷ್ಟು ಕರಗತ ಮಾಡಿಕೊಳ್ಳುವ ಉದ್ದೇಶದ ತಪಸ್ಸು ಅದು.

Thank you for choosing Thatskannada.com

shami.sk@greynium.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X