ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

*ಶಾಮ್‌

By Staff
|
Google Oneindia Kannada News
ಸುದೀರ್ಘ ಮಾತುಕತೆಯ ಮೊದಲ ಅಧ್ಯಾಯ Sampige marada hasirele naduve...
*ಶಾಮ್‌

SK Shama Sundaraನಾನೇಕೆ ಬರೆಯುವುದಿಲ್ಲ ?

ಬರೆಯದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಒಂದು ವೇಳೆ ಬರೆದರೆ ಅನಾಮತ್‌ ಬಿದ್ದು ಮಕಾಡೆ ಮಲಗಿರುವ ವಿಶ್ವ ವಾಣಿಜ್ಯ ಮಳಿಗೆ ಮತ್ತೆ ಎದ್ದು ನಿಲ್ಲುವುದಿಲ್ಲ. ಬಿಲ್‌ಗೇಟ್ಸನು ನಿರ್ಮಿಸಿದ ವರ್ಡ್‌ ಪ್ಯಾಡ್‌ ಇದೆ ಅಂತ, ಶ್ರೀಲಿಪಿ ಫಾಂಟ್‌ ಲೋಡ್‌ ಆಗಿದೆ ಅಂತ ಕೀಪ್ಯಾಡ್‌ ಮೇಲೆ ಬೆರಳಾಡಿಸುತ್ತಾ ಕುಕ್ಕರಿಸಿಬಿಟ್ಟರೆ ಲೋಕಕಲ್ಯಾಣವಾಗುವುದಿಲ್ಲ. ಇಷ್ಟಕ್ಕೂ My Experiments with Truth ಬರೆಯಲು ನಾನೇನು ಮಹಾತ್ಮಾ ಗಾಂಧಿಯಲ್ಲ. ಪರಂತು, ಮತ್ತೊಬ್ಬನ ಆತ್ಮ ಚರಿತ್ರೆ ಬರೆಯೋಣವೆಂದರೆ ಎ.ಕೆ. ರಾಮಾನುಜನ್‌ ಅಲ್ಲವೇ ಅಲ್ಲ.

ಹಾಗಾದರೆ ನಾನು ಯಾರು ? ಇಂಥ ಪ್ರಶ್ನೆಗೆ, ಹುಡುಕಿದರೆ ಶಂಕರಾಚಾರ್ಯರ ಸೌಂದರ್ಯಲಹರಿಯಲ್ಲಿ, ಜಿದ್ದು ಕೃಷ್ಣಮೂರ್ತಿಯ ಪ್ರಬಂಧಗಳಲ್ಲಿ ನಿಮಗೆ ಉತ್ತರ ಸಿಕ್ಕೀತು, ಸಿಕ್ಕಿರಲೂಬಹುದು. ಆದರೆ, ನನ್ನಲ್ಲಿ ಉತ್ತರಗಳು ಸಿಕ್ಕುವುದಿಲ್ಲ. ಯಾಕೆಂದರೆ ನಾನು ಸಂಪಾದಕ ! ಅಪಾಯದ ಅಂಚಿನಲ್ಲಿರುವ ಇನ್ನೊಂದು ಜೀವಿ ಪ್ರಬೇಧದ ಸದಸ್ಯ- An endangered species.

ನಾನೇಕೆ ಬರೆಯುವುದಿಲ್ಲ ಎನ್ನುವ ನಾನೇ ಒಡ್ಡಿಕೊಂಡಿರುವ ಪ್ರಶ್ನೆಗೆ ನಿಮಗೆ ಕ್ರಮೇಣ ಉತ್ತರಗಳು ಗೋಚರಿಸುತ್ತಾ ಹೋಗುವ ‘ಕೆಂಡ ಸಂಪಿಗೆ ’ ಅಂಕಣದ ಪ್ರಾರಂಭದಲ್ಲೇ ಕೆಲವು ಸಂಗತಿ-ವಿಸಂಗತಿಗಳನ್ನು ಸ್ಪಷ್ಟಪಡಿಸುತ್ತೇನೆ. ಸಂಪಾದಕರು ಬರೆಯುವುದಿಲ್ಲ, ಬರೆಯಬೇಕಾಗೂ ಇಲ್ಲ. ಕಾರಣ ಇಷ್ಟೆ . ಬರೆಯುವ , ಅಂದರೆ ಕಾಮೆಂಟ್‌ ಮಾಡುವ ಸಂಪಾದಕರು ಕಲಿಗಾಲದ ಮೇನೆಜ್‌ಮೆಂಟ್‌ಗಳಿಗೆ ಅಪಥ್ಯ. ಚಲಪತಿ, ಎಂ.ವಿ.ಕಾಮತ್‌, ಪೋತೆನ್‌ ಜೋಸೆಫ್‌, ಅರುಣ್‌ ಶೌರಿ, ವಿನೋದ್‌ ಮೆಹ್ತ, ರಾಜೀವ್‌ ದೀಕ್ಷಿತ್‌, ಪಾ.ವೆಂ. ಆಚಾರ್ಯ, ಖಾದ್ರಿ ಶಾಮಣ್ಣ, ಪಿ.ಲಂಕೇಶ್‌, ಟಿ. ಎಸ್‌. ರಾಮಚಂದ್ರರಾವ್‌, ವೈಎನ್‌ಕೆ ಅಂಥವರನ್ನು ಈಗ ಸಂಪಾದಕರ ಜಾಗದಲ್ಲಿ ಮಾಲಿಕರು ಕೂಡಿಸುವುದಿಲ್ಲ. ಈಗೇನಿದ್ದರೂ ಸಂಪಾದಕರೇ ಮಾಲಿಕರು, ಮಾಲೀಕರೇ ಪ್ರಧಾನ ಸಂಪಾದಕರು.

ಅವರ ಕಣ್ಣು ಸದಾ ಮಾರುಕಟ್ಟೆಯ ಮೇಲೆ, ಮನಸ್ಸು ಮರದ ಮೇಲೆ !

ನನ್ನ ಮನಸ್ಸೂ ಮರದ ಮೇಲೆ. ಯಾವುದಾದರೊಂದು ಕೊಂಬೆ ಅಲ್ಲಾಡಿಸಿದರೆ ಅಕ್ಷರಗಳು ಉದುರುತ್ತವೆ, ಆ ಅಕ್ಷರಗಳನ್ನು ವಯನಾಗಿ ಜೋಡಿಸಿದರೆ ಪದಗಳಾಗುತ್ತವೆ, ಪದಗಳಲ್ಲಿ ಲಾಲಿತ್ಯ- ಅನ್ಯೋನ್ಯತೆ ಇದ್ದರೆ ಅರ್ಥ ತಾನೇತಾನಾಗಿ ಸ್ಫುರಿಸುತ್ತದೆ ಎಂದು ನಂಬಿರುವವರಲ್ಲಿ ನಾನೂ ಒಬ್ಬನು. ಈ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು. ಮಾಧ್ಯಮದಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಸಂಪಾದಕ ಆಗಬಹುದು. ಆದರೆ, ಎಲ್ಲರೂ ವೈದ್ಯರಾದರೆ ದಾದಿಯಾಗುವವರು ಯಾರು ? ಎಲ್ಲರೂ ಬಸಿರಾಗುತ್ತಾ ಕೂತರೆ ಸೂಲಗಿತ್ತಿ ಆಗುವವರು ಯಾರು ? ಎಲ್ಲರಿಗೂ ಬೆಡ್‌ ಕಾಫಿ ಬೇಕಾದರೆ ಮಾಲ್‌ಗೆ ಹೋಗಿ ಹಾಲು, ಕಿತ್ತಲೆ ರಸ ತರುವವರು ಯಾರು ?

ಸಂಪಾದಕನಿಗೆ ಮುಖ್ಯವಾದ ಜವಾಬ್ದಾರಿಯಾಂದಿರುತ್ತದೆ. ಮಾಧ್ಯಮದ ಒಂದು ವೇದಿಕೆಯು ಅಕ್ಷರವಾಂತಿಗೆ ಬಚ್ಚಲಾಗದಂತೆ ಎಚ್ಚರ ವಹಿಸುವುದು ಮೊದಲ ಕೆಲಸ. ಬೆಚ್ಚಗಿನ ಮಾತುಗಳನ್ನು ಓದಿ ಜೀರ್ಣಿಸಿಕೊಳ್ಳುವ ಮನಸ್ಸುಗಳನ್ನು ಸಂಪಾದಿಸಿಕೊಳ್ಳುವುದು ಆನಂತರದ ಕೆಲಸ. ಅಂಥ ಮನಸ್ಸುಗಳು ಕಾಲದ ವೇಗಕ್ಕೆ ತಕ್ಕಂತೆ ಹೇಗೆ ತುಡಿಯುತ್ತವೆ ಎಂದು ಅರ್ಥೈಸಿಕೊಂಡು ಆದ್ಯತೆಗಳನ್ನು ಬದಲಾಯಿಕೊಳ್ಳುತ್ತಾ ಹೆಜ್ಜೆ ಹಾಕುವುದು ಅತಿ ಮುಖ್ಯವಾದ ಕೆಲಸ.

ಈ ಬಗೆಯ ಕೆಲಸಗಳನ್ನು ಮಾಡುವ ಸಂಪಾದಕನಿಗೆ ಇನ್ನೂ ಕೆಲವು ಜರೂರತ್ತುಗಳಿರುತ್ತವೆ. ಅವೆಂದರೆ :

  • ನಿನ್ನ ಓದುಗರಾರು ಕಂಡುಕೋ
  • ಅವರು ಎಲ್ಲಿದ್ದಾರೆ ? ಗುರುತು ಹಾಕಿಕೋ
  • ಗೊತ್ತಿದೆ ಎಂದ ಮಾತ್ರಕ್ಕೆ ಬರೆದು, ಓದುಗರನ್ನು ಗೋಳು ಹೊಯ್ದುಕೊಳ್ಳ ಬೇಡ
  • ನಿನ್ನ ಮಾಧ್ಯಮದ ಇತಿ ಮಿತಿಗಳನ್ನು ಮೀರದಂತೆ ನಡೆದುಕೋ
  • ಅವರಿಗೆ ಏನು ಬೇಕು ? ಅರ್ಥ ಮಾಡಿಕೋ
  • ಅದಕ್ಕಿಂತ , ಏನು ಬೇಡ ಎನ್ನುವುದನ್ನು ಬರೆದಿಟ್ಟುಕೋ
  • ಯಾವತ್ತೂ ನಿನ್ನ ಓದುಗರನ್ನು Under Estimate ಮಾಡಬೇಡ
  • Your readers do not know what they want unless some one gives it ಎನ್ನುವ ಅಂಶವನ್ನು ಮನನ ಮಾಡಿಕೊಂಡಿರು.
  • **

    ನಿಮ್ಮ ಮನಸ್ಸು ಯಾವುದರಲ್ಲೋ ಮಗ್ನವಾಗಿರುತ್ತದೆ ಎಂದಿಟ್ಟುಕೊಳ್ಳಿ. ಆಗ ಎಲ್ಲಿಂದಲೋ ಒಂದು ಈ-ಮೇಲ್‌ ಬರುತ್ತದೆ. ಇದ್ದಕ್ಕಿದ್ದಂತೆ ಆ , ಈ-ಮೇಲ್‌ಗೆ ಉತ್ತರ ಕೊಡುವುದಕ್ಕೆ ನಿಮ್ಮ ಯೋಚನೆಯ ದಿಕ್ಕೇ ಬದಲಾಗುತ್ತದೆ, ಕೆಲವೊಮ್ಮೆ ಪರಕಾಯ ಪ್ರವೇಶ ಮಾಡಿದ ಅನುಭವವೂ ಆಗುತ್ತದೆ. ಮೊನ್ನಿನ ಅಮೆರಿಕಾ ಪ್ರವಾಸ ಹಾಗಾಯಿತು ನನಗೆ.

    ಇಸವಿ 2002ರ ಸೆಪ್ಟೆಂಬರ್‌ 17ರಂದು ನಾನು ವಾಷಿಂಗ್‌ಟನ್‌ ಡಿಸಿ ಮೆಟ್ರೋ ಪ್ರದೇಶದ ಮೇರಿಲ್ಯಾಂಡ್‌ನಲ್ಲಿದ್ದೆ. ಆವತ್ತು ಸಂಜೆ ಭೂಮಿಕಾ ಎಂಬ ಸಾಹಿತ್ಯ ಚಟುವಟಿಕೆಗಳ ಪುಟ್ಟ ಚಾವಡಿಯನ್ನು ನಡೆಸುತ್ತಿರುವ ಶ್ರೀಮತಿ ವಿಜಯ ಮನೋಹರ್‌ ಮತ್ತು ಮನೋಹರ್‌ ಕುಲಕರ್ಣಿಯವರ ಮನೆಗೆ ಊಟಕ್ಕೆ ಹೋಗಿದ್ದೆ. ಭೂಮಿಕಾದ ಖಾಯಂ ಆಸಕ್ತರಾದ ಶ್ರೀಮತಿ ಮತ್ತು ಶ್ರೀ ಪ್ರಭಾಕರ್‌, ಶ್ರೀಮತಿ ಮತ್ತು ಶ್ರೀ ನಾಗೇಂದ್ರ, ಶ್ರೀಮತಿ ಮತ್ತು ಶ್ರೀ ಶ್ರೀನಿವಾಸ್‌ ಇದ್ದರು. ಆತಿಥೇಯರ ಜೊತೆಗೆ ಶೀವತ್ಸ ಜೋಷಿ, ನಾನು.

    ಕರ್ನಾಟಕ, ಪತ್ರಿಕೋದ್ಯಮ, ಅಂತರ್‌ಜಾಲದಲ್ಲಿ ಕನ್ನಡ.. ಹೀಗೆ ಮಾತು ಸಾಗುತ್ತಿತ್ತು. ನಮ್ಮ ಅಂತರಜಾಲ ಪತ್ರಿಕೆಯನ್ನು ಎಡಬಿಡದೆ ಓದುತ್ತಾ ಬಂದಿರುವ ಶ್ರೀಮತಿ ಶ್ರೀನಿವಾಸ್‌ ಮೆಚ್ಚುಗೆಯ ಮಾತುಗಳ ಜೊತೆಗೆ ತಮ್ಮ ಸಂದೇಹಗಳನ್ನು ವ್ಯಕ್ತಪಡಿಸುತ್ತಿದ್ದರು. ಮೊಸರನ್ನದ ಪಾಳಿ ಬರುವ ವೇಳೆಗೆ ಕೇಳಿದರು :

    ‘ಎಲ್ಲಾ ಸರಿ , ಆದರೆ ನಿಮ್ಮ ಪತ್ರಿಕೆಯ ಒಲವು-ನಿಲವುಗಳೇನು ಎನ್ನುವುದು ನನಗೆ ಅರ್ಥವಾಗಿಲ್ಲ. ಇದರ ಬಗ್ಗೆ ನೀವು ಬರೆಯಬೇಕು- ಪತ್ರಿಕೆಯಲ್ಲಿ ಸಂಪಾದಕೀಯ ಇರಬೇಕು, ಪತ್ರಿಕೆಯ ಪಾಲಿಸಿ ನಮಗೆ ಗೊತ್ತಾಗಬೇಕು’ ಎಂದರು.

    ಕಾಲಕಾಲಕ್ಕೆ ನಮ್ಮ ಓದುಗರೊಂದಿಗೆ ಈ ದಿಕ್ಕಿನಲ್ಲಿ ಮಾತನಾಡುತ್ತಿರಬೇಕು ಎಂದು ಆ ಕ್ಷಣವೇ ನಿರ್ಧರಿಸಿದೆ. ‘ಕೆಂಡ ಸಂಪಿಗೆ’ ಅಂಕಣದಲ್ಲಿ ಈ ಕುರಿತು ಮಾತುಗಳು ಆರಂಭವಾಗಿವೆ. ಇದನ್ನು ಓದುತ್ತಿರುವ ಜೊತೆಗೆ ವಿಶಾಲ ತಳಹದಿಯಲ್ಲಿ ನಮ್ಮ ಪಾಲಿಸಿ ಹೇಗಿರುತ್ತದೆ ಎನ್ನುವುದನ್ನು ಓದಿಕೊಂಡುಬಿಡಿ.

    • Inform, Entertain and if possible Illuminate
    • Live and let Live
    • Take good, good care of yourself and your family
    • Thank you for choosing Thatskannada.com
      [email protected]
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X