• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

*ಎಸ್ಕೆ.ಶಾಮಸುಂದರ

By Staff
|
ಕಾಸ್ಮೋಪಾಲಿಟನ್‌ ರಾಜ್ಯೋತ್ಸವ Sampige marada hasirele naduve...
*ಎಸ್ಕೆ.ಶಾಮಸುಂದರ

Felecitation to B.S. Chandrashekhar and Prof. L.S. Sheshagiri Rao‘ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಸ್ಕೃತಿ, ಕಲೆ, ನೃತ್ಯ, ಗಾಯನ ಕಾರ್ಯಕ್ರಮಗಳ ರಂಗಸ್ಥಳ ನಿರ್ವಹಣೆಯನ್ನು ನನಗೆ ಕೊಡಿ. ಮನರಂಜನೆ ಕಾರ್ಯಕ್ರಮಗಳ ಏರ್ಪಾಟು ಮತ್ತು ಉಸ್ತುವಾರಿ ಜವಾಬ್ದಾರಿಯನ್ನು ನಮಗೆ ಬಿಡಿ. ನಾನು ಮತ್ತು ಶ್ರೀನಿವಾಸ್‌ ಕಪ್ಪಣ್ಣ ಅಚ್ಚುಕಟ್ಟಾಗಿ ಮಾಡುತ್ತೇವೆ ’ ಎಂದು ವೈ.ಕೆ. ಮುದ್ದುಕೃಷ್ಣ ಅಕ್ಕ ಆಡಳಿತ ವರ್ಗದವರಿಗೆ ಕೇಳಿಕೊಂಡಿದ್ದರಂತೆ. ಏನಕೇನಪ್ರಕಾರೇಣ ಅದು ಸಾಧ್ಯವಾಗದಿದ್ದುದು ಈಗ ಇತಿಹಾಸ.

ಮುದ್ದು ಮತ್ತು ಸಂಗಡಿಗರಿಗೆ ಆ ಕೆಲಸ ವಹಿಸಿದ್ದರೆ ಆಗಸ್ಟ್‌ 30, 31 ಸೆಪ್ಟೆಂಬರ್‌ 1 ರ ಕಾರ್ಯಕ್ರಮದ ಅಂದ ಚೆಂದ ಹೇಗಿರುತ್ತಿತ್ತು ಎಂದು ಈಗ ಊಹಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಸಮ್ಮೇಳನದ ಸಾಂಸ್ಕೃತಿಕ ಮತ್ತು ಮನರಂಜನಾ ಸಮಿತಿಯವರು ನಡೆಸಿಕೊಟ್ಟ ಮೂರು ದಿವಸಗಳ ಸಾಂಸ್ಕೃತಿಕ ದಾಸೋಹವನ್ನು ಕಡೆಯಪಕ್ಷ 4000 ಕನ್ನಡಿಗರು ಉಂಡಿದ್ದಾರೆ. ಆ ಕಾರ್ಯಕ್ರಮಗಳ ಬಗ್ಗೆ ಪ್ರೋತ್ಸಾಹದ ಮಾತುಗಳ ಜತೆಗೆ ಟೀಕೆಗಳೂ ಸಾಕಷ್ಟು ಬಂದಿವೆ. ಆರ್‌ಲ್ಯಾಂಡೋ ಕನ್ನಡ ಸಮ್ಮೇಳನದಲ್ಲಿ ಇಂಥ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಅಚ್ಚುಕಟ್ಟುತನದಲ್ಲಿ ನಡೆಯಲಿ ಎಂದು ಆಶಿಸಿ ಬರೆದಿರುವ ಸಲಹೆ - ಸೂಚನೆಗಳನ್ನು ನಮ್ಮ ವೆಬ್‌ ಪುಟಗಳಲ್ಲಿ ನೀವು ಓದಿರುತ್ತೀರಿ.

ಅಲ್ಲಿ ಸಾಧ್ಯವಾಗದ್ದನ್ನು ಇಲ್ಲಿ ಸಾಧಿಸುವಾ ಎಂದುಕೊಂಡಿರಬೇಕು ವೈ.ಕೆ. ಮುದ್ದು ಮತ್ತು ಕಪ್ಪಣ್ಣ. ಹೇಗಿದ್ದರೂ ಅವರು ಕ್ಲಬ್ಬಿನ ಅಧ್ಯಕ್ಷರು ಹಾಗೂ ವ್ಯವಸ್ಥೆಗಳನ್ನು ಮಾಡಲು ಅಧಿಕೃತ ಜವಾಬ್ದಾರಿ ಹೊತ್ತಿದ್ದರು. ಮೇಲಾಗಿ ಇದು ಬೆಂಗಳೂರು. ಕನ್ನಡಿಗರ ಗರಡಿಮನೆ. ಬೆಂಗಳೂರಿನಂಥ ಕಾಸ್ಮೋಪಾಲಿಟನ್‌ ಪರಿಸರದಲ್ಲಿ, ವಿಶೇಷವಾಗಿ ಶ್ರೀಮಂತರು ಹಾಗೂ ಶಿಷ್ಟ ವರ್ಗದವರ ಮನರಂಜನೆಗಾಗಿ ಇರುವ ಒಂದು ಕ್ಲಬ್ಬಿನ ಅಂಗಳದಲ್ಲಿ ರಾಜ್ಯೋತ್ಸವ ಸಮಾರಂಭ ಹೇಗಿರತ್ತೆ ಎಂದು ನೋಡಲು ನವೆಂಬರ್‌ 24ರ ಭಾನುವಾರ ಜಯನಗರದ ನಾಲ್ಕನೇ ಬ್ಲಾಕಿನ ಕಾಸ್ಮೋಪಾಲಿಟನ್‌ ಕ್ಲಬ್ಬಿಗೆ ಹೋಗಿದ್ದೆ.

ಪುಟ್ಟ ಕನ್ನಡ ಸಮ್ಮೇಳನವೊಂದಕ್ಕೆ ಹೋಗಿಬಂದ ಅನುಭವವಾಯಿತು. ಕ್ಲಬ್ಬಿನ ಬಾಗಿಲಲ್ಲೇ ಸಪ್ನ ಬುಕ್‌ ಹೌಸ್‌ ಸಂಸ್ಥೆಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ. ಇತ್ತೀಚೆಗೆ ಪ್ರಕಟವಾದ ಮತ್ತು ಬೆಸ್ಟ್‌ ಸೆಲ್ಲರ್‌ ಪುಸ್ತಕಗಳಿಂದ ತುಂಬಿದ ಕಪಾಟುಗಳು. ಇನ್ನೊಂದು ಮಳಿಗೆಯಲ್ಲಿ ಕನ್ನಡ ಭಾವಗೀತೆ, ಶಾಸ್ತ್ರೀಯ ಸಂಗೀತ ಲೋಕವನ್ನು ಎದೆಯಲ್ಲಿ ತುಂಬಿಕೊಂಡ ಎಲ್ಲ ಗಾಯಕ ಗಾಯಕಿಯರ ಕೆಸೆಟ್ಟುಗಳು. ಕಲಾವಿದರು ಯಾರೋ ಗೊತ್ತಾಗಲಿಲ್ಲ, ಹುಲ್ಲು ಹಾಸಿನ ತುಂಬ ಹರಡಿಕೊಂಡಿದ್ದ ಪೇಯಿಂಟಿಂಗ್‌ಗಳು. ಮುಖ್ಯ ಕಾರ್ಯಕ್ರಮದ ವೇದಿಕೆಗೆ ಹೋಗುವ ಹಾದಿಯಲ್ಲಿ ಹಂಪೆಯನ್ನು ನೆನಪಿಸುವ ಮರದ ಕಲ್ಲಿನ ರಥ !!

ಎಲ್ಲ ಕ್ಲಬ್ಬುಗಳಂತೆ ಇಲ್ಲಿನ ದೈನಂದಿನ ಚಟುವಟಿಕೆಗಳು ಕೂಡ ಮಾಮೂಲಿನಂತೆ. ಬೀರು, ವಿಸ್ಕಿ, ಬ್ರಾಂದಿ ತುಂಬಿದ ಬಾರು . ಇಷ್ಟವಿಲ್ಲದವರಿಗೆ ಕೋಕು, ಪೆಪ್ಸಿ, ಸ್ಪ್ರೈಟು. ವೈದ್ಯರು ಹೇಳಿದ್ದಾರೆ ಎಂಬ ಒಂದೇ ಗಾಬರಿಯಿಂದ ಕೆಲವರು ಟೇಬಲ್‌ ಟೆನಿಸ್‌, ಷಟಲು ಆಡುವುದೂ ಉಂಟು. ಆ ಕಡೆ ಹಾಲ್‌ನಲ್ಲಿ ರೆಮ್ಮಿ, ಜಾಕ್‌ಪಾಟ್‌, ಇಪ್ಪತ್ತೆಂಟು ಎಲೆ ಆಟಗಳು. ರಾಜ್ಯೋತ್ಸವ ದಿನಾಚರಣೆ ಕಾರಣ ಕೆಲವು ಚಟುವಟಿಕೆಗಳಿಗಾದರೂ ಬ್ರೇಕು ಬಿದ್ದಿರಬೇಕು. ಸುಮಾರು ಮುನ್ನೂರು ಸದಸ್ಯರು ಕುಟುಂಬ ಸಮೇತರಾಗಿ ಭಾನುವಾರದ ಸಮಾರಂಭಕ್ಕೆ ಆಗಮಿಸಿದ್ದರು.

Y.K. Muddu Krishna, president Cosmopolitan Club, Bangaloreಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ವೈವಿಧ್ಯ ಇರದಿದ್ದರೆ ಫ್ಲಾಪ್‌ ಷೋ ಆಗುವುದು ಖಂಡಿತ. ಅದಕ್ಕೇ ಮುದ್ದು ಬಗೆಬಗೆಯ ಕಾರ್ಯಕ್ರಮ ಏರ್ಪಾಟು ಮಾಡಿದ್ದರು. ಅವೆಲ್ಲವುಗಳಲ್ಲಿ ಕನ್ನಡತನ ಎದ್ದು ಕಾಣುತ್ತಿದ್ದದ್ದು ಗಮನಾರ್ಹ. ಮೊದಲಿಗೆ ಅರಸೀಕೆರೆ, ಚಿಕ್ಕಮಗಳೂರು, ನಾಗಮಂಗಲದಿಂದ ಕರೆಸಿದ್ದ ಜಾನಪದ ಕಲಾವಿದರಿಂದ ಸುಶ್ರಾವ್ಯ ಚಿಟ್ಟಿ ಮೇಳ. ಪ್ರಾರ್ಥನೆಯ ದ್ಯೋತಕವಾಗಿ ಕರ್ಕಿ ಮತ್ತು ಕುವೆಂಪು ಅವರ ಎರಡು ಗೀತೆಗಳ ಗಾಯನ. ಆನಂತರ ಸಾಧಕರಿಗೆ ಸನ್ಮಾನ ಮತ್ತು ಅವರಿಂದ ಭಾಷಣ.

ನಲವತ್ತು ವರ್ಷ ಇಂಗ್ಲಿಷ್‌ ಸಾಹಿತ್ಯದ ಪಾಠ, ಯಾವತ್ತೂ ಕನ್ನಡ ಚಳವಳಿಯ ಕಾಳಜಿ, ಸದಾ ಜಾಗೃತ ಕನ್ನಡ ಪ್ರೇಮ, ಸಾಹಿತ್ಯ ರಚನೆ, 75 ವಸಂತಗಳನ್ನು ಕಂಡ ಹಿರಿಯ ಜೀವ ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌ ಮತ್ತು ಶತಮಾನದ ಬೌಲರ್‌ - ವಿಸ್ಡನ್‌ ಪ್ರಶಸ್ತಿಗೆ ಭಾಜನರಾದ ಸ್ಪಿನ್‌ ಮಾಂತ್ರಿಕ ಬಿ. ಎಸ್‌. ಚಂದ್ರಶೇಖರ್‌ ಅವರಿಗೆ ಆತ್ಮೀಯ ಸನ್ಮಾನ. ಕಡೇ ಗಳಿಗೆಯಲ್ಲಿ ಮುದ್ದು ಅವರ ಆಮಂತ್ರಣಕ್ಕೆ ಓಗೊಟ್ಟು ಬಂದಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲರು ಕನ್ನಡಕ್ಕೆ ಎದುರಾಗಿರುವ ಸವಾಲುಗಳನ್ನು ಎಳೆಎಳೆಯಾಗಿ ಬಿಡಿಸಿದರು. ಆ ವಿವರಗಳನ್ನು ನಾನಿಲ್ಲಿ ಬರೆಯುತ್ತಿಲ್ಲ. ಏಕೆಂದರೆ ಶೇಷಗಿರಿರಾಯರು ಮತ್ತು ಪಾಟೀಲರು ಬಣ್ಣಿಸಿದ ಹಾಗೆ ಇದು ಕನ್ನಡದ ಹಬ್ಬದ ಸಂಭ್ರಮ ಸಮಯ ! ಬೇಂದ್ರೆ ಬರೆದ ಹಾಗೆ.. ಹಾಡುವ ಸಭೆಯಲ್ಲಿ ನರಳಬಾರದು.

Bannada Badukina Chinnada Hadugalu by B.Jayashreeರಸಮಂಜರಿ ಕಾರ್ಯಕ್ರಮಗಳಲ್ಲಿ ಎದ್ದು ಕಂಡದ್ದು ಹಿಂದುಸ್ತಾನಿ ಗಾಯಕ ವೆಂಕಟೇಶ್‌ ಕುಮಾರ್‌ ಅವರ ಸುಶ್ರಾವ್ಯ ವಚನ ಗಾಯನ. ಭಕ್ತಿಗೀತೆ ಗಾಯನಕ್ಕೆ ಪ್ರಸಿದ್ಧರಾದ ಪುತ್ತೂರು ನರಸಿಂಹ ನಾಯಕ್‌ ಸಂಗಡಿಗರ ಭಾವಗೀತೆ ಗಾಯನ ನನಗೆ ಹಿಡಿಸಲಿಲ್ಲ. ಆದರೆ ಅವರು ಹಾರ್ಮೋನಿಯಮ್‌ ತೆಗೆದಿಟ್ಟ ನಂತರ ವೇದಿಕೆಗೆ ಬಂದ ಬಿ.ಜಯಶ್ರೀ ಅವರ ‘ಬಣ್ಣದ ಬದುಕಿನ ಚಿನ್ನದ ಹಾಡುಗಳು’ ಮೈ ಝುಂ ಎನಿಸಿತು. ಕರಿಮಾಯಿ ಮೈಮೇಲೆ ಬಂದಂತೆ ಆಕೆಯ ಅಭಿನಯ, ಗಾಯನ ಮತ್ತು ವೃತ್ತಿರಂಗಭೂಮಿಯ ಸಂಚಲನಗಳನ್ನು ಒಂದು ಗಂಟೆಯ ಕಾರ್ಯಕ್ರಮದಲ್ಲಿ ಹಿಡಿದಿಡುವ ಪ್ರತಿಭೆ ಅಧ್ಬುತ.

ಮುದ್ದು ಕೃಷ್ಣ ಅವರ ಆಡಳಿತದಲ್ಲಿ ಊಟ ಉಪಚಾರದ ವ್ಯವಸ್ಥೆಗಳು ವೈವಿಧ್ಯ. ಜೋಳದ ರೊಟ್ಟಿ ಊಟ, ದೋಸೆ ಕ್ಯಾಂಪ್‌ ಮತ್ತು ಚಿತ್ರಾನ್ನಗಳೇ ಮೊದಲಾದ ವಿಚಿತ್ರಾನ್ನಗಳ ಜತೆಗೆ ಪಾನಿಪೂರಿಯ ಸಮಾರಾಧನೆ. ಕಾರ್ಯಕ್ರಮ ಮುಗಿದಂತರ ಗಣ್ಯರ ಭೋಜನಶಾಲೆಯಲ್ಲಿ ಮುದ್ದು ಅವರ ಆಸ್ಥಾನ ಕಚೇರಿ. ಬಿ.ಕೆ. ಸುಮಿತ್ರ, ಕಪ್ಪಣ್ಣ, ಚಂಪಾ, ಜಯಶ್ರೀ, ಡೈಮಂಡ್‌ ಬಾರ್‌ ಪ್ರದೇಶದ ಕನ್ನಡಿಗ ವಲ್ಲೀಶ ಶಾಸ್ತ್ರೀ , ವಿದ್ಯಾ ಶಾಸ್ತ್ರೀ ಅವರೊಂದಿಗೆ ಉಭಯ ಕುಶಲೋಪರಿ. ರಾತ್ರಿ 12 ಹೊಡೆದರೂ ಯಾರೂ ಸುಸ್ತಾದಂತೆ ಕಾಣುತ್ತಿರಲಿಲ್ಲ. ಅಪ್ಪಗೆರೆ ಹಾಡುತ್ತಿದ್ದ. ಉದುರು ಉದುರು ಉದುರು ಮಲ್ಲಿಗೆ, ಉದರದಿರು ಉದುರು ಉದುರು ಮಲ್ಲಿಗೇ..

Thank you for choosing Thatskannada.com

shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more