ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

*ಎಸ್ಕೆ.ಶಾಮಸುಂದರ

By Staff
|
Google Oneindia Kannada News
ಅಂತರ್ಜಾಲದಲ್ಲಿ ಕನ್ನಡ ಕಾದಂಬರಿಯ ಮರುಹುಟ್ಟು Sampige marada hasirele naduve...
*ಎಸ್ಕೆ.ಶಾಮಸುಂದರ

Resurgence of Kannada novel on internet

ಕಳೆದ ವರ್ಷ ಬಂದ ಅತ್ಯುತ್ತಮ ಕಾದಂಬರಿ ಯಾವುದು ?
ಬಹುಶಃ ಕನ್ನಡ ಸಾಹಿತ್ಯಲೋಕದ ನಿಕಟ ಪರಿಚಯ ಇರುವವರಿಗೂ ಉತ್ತರಿಸುವುದು ಕಷ್ಟವೇ. ಯಾಕೆಂದರೆ ಇತ್ತಿತ್ತಲಾಗಿ ಅಂಥ ಮಹತ್ವದ ಕಾದಂಬರಿಕಾರರು ಯಾರೂ ಕಾದಂಬರಿಗಳನ್ನು ಬರೆಯುತ್ತಿಲ್ಲ. ಎರಡು ಮೂರು ವರುಷಗಳಿಗೊಮ್ಮೆ ಅನಂತಮೂರ್ತಿ ಮತ್ತು ಎಸ್‌. ಎಲ್‌. ಭೈರಪ್ಪ ಒಂದೊಂದು ಕಾದಂಬರಿ ಬರೆದಾಗ ಸಣ್ಣ ಸಂಚಲನೆ ಕಂಡುಬರುತ್ತದಾದರೂ, ಉಳಿದಂತೆ ಕಾದಂಬರಿ ಲೋಕದಲ್ಲಿ ನೀರವತೆ.

ಹೊಸ ಪೀಳಿಗೆಯ ಲೇಖಕರಿಗೆ ಅದ್ಯಾಕೋ ಕಾದಂಬರಿಯೂ ನಾಟಕವೂ ಆಗಿಬರಲಿಲ್ಲ. ನವ್ಯ ಚಳುವಳಿ ತಾರಕಕ್ಕೇರಿ, ಪ್ರಗತಿಶೀಲ ಮತ್ತು ರಮ್ಯ ಪಂಥದ ಬರಹಗಳನ್ನು ಮೂಲೆಗುಂಪಾಗಿಸುವ ಮೊದಲು ಕಾದಂಬರಿಗಳದ್ದೇ ಸಾಮ್ರಾಜ್ಯ. ಗಳಗನಾಥರಿಂದ ಹಿಡಿದು ದೇವುಡು ತನಕ, ಅನಕೃರಿಂದ ಟಿ.ಕೆ.ರಾಮರಾಯರ ತನಕ, ಸುಲಭದ ಕೈತುತ್ತು ಬೇಕೆನ್ನುವವರಿಗೆ ಎನ್‌. ನರಸಿಂಹಯ್ಯನವರಿಂದ ಬಿ. ಎಲ್‌. ವೇಣು ತನಕ, ಗಾಢವಾದ ಐತಿಹಾಸಿಕ ಅನುಭವ ಬಯಸುವವರಿಗೆ ತ.ರಾ.ಸು. ಅವರಿಂದ ಸಿ.ಕೆ. ನಾಗರಾಜರಾಯರ ತನಕ ಎಲ್ಲ ಥರದ, ಎಲ್ಲ ವರ್ಗದ ಓದುಗರಿಗೆ ಒಬ್ಬೊಬ್ಬ ಕಾದಂಬರಿಕಾರರಿದ್ದರು. ನರಸಿಂಹಯ್ಯನವರಿಂದ ಆರಂಭಿಸಿ, ಯಶವಂತ ಚಿತ್ತಾಲರ ತನಕ ಕ್ರಮಿಸಬಹುದಾದ ಹಾದಿಯಾಂದು ಮುಂದಿರುತ್ತಿತ್ತು.

ಈಗ, ಕಾದಂಬರಿಗಳೇ ಔಟ್‌ಡೇಟೆಡ್‌ ಆಗಿಬಿಟ್ಟಿವೆ. ಪ್ರತಿವರುಷ ಪಂಕಜಾ, ಪದ್ಮಜಾ, ಸರೋಜಾ ಮುಂತಾದ ಹಾಸನ, ಮತ್ತಿಕೆರೆ, ಆನೇಕಲ್ಲು, ನರಸಾಪುರ ಮುಂತಾದ ಊರುಗಳಲ್ಲಿ ಕುಳಿತು ಕಾದಂಬರಿ ಬರೆಯುವ ಅಸಂಖ್ಯ ಮಹಿಳಾ ‘ಲೇಖಕಿ’ಯರ ಕಾದಂಬರಿಗಳು ಲೈಬ್ರರಿ ಸೇರುತ್ತವೆ. ಆಮೇಲೆ ಅವು ಏನಾಗುತ್ತವೆ ಅನ್ನುವುದು ಚಿದಂಬರ ರಹಸ್ಯ.

ಕನ್ನಡದ ಯಾವ ಪತ್ರಿಕೆಗಳೂ ಬಹಿರಂಗಗೊಳಿಸದ, ಬುಕ್‌ ಪಬ್ಲಿಷಿಂಗ್‌ ಮಾಫಿಯಾ ಒಂದಿದೆ. ಯುಂಡಮೂರಿ ವೀರೇಂದ್ರನಾಥ್‌ ಅವರ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಸೃಜನಶೀಲ ಲೇಖಕ ಎನ್ನಿಸಿಕೊಂಡ ರಾಜಾ ಚೆಂಡೂರು ಥರದ ಪ್ರಕಾಶಕರು ಒಂದು ಅಭೂತಪೂರ್ವ ಯೋಜನೆ ಹಾಕಿಕೊಂಡಿದ್ದಾರೆ. ಅದರ ರೂಪರೇಷೆಗಳು ಹೀಗಿವೆ. ನೀವೊಂದು ಕಾದಂಬರಿ ಬರೆದು ಅದನ್ನು ರಾಜಾ ಚೆಂಡೂರರಿಗೆ ಕಳುಹಿಸಿಕೊಡಿ. ಜೊತೆಗೆ ಹತ್ತು ಸಾವಿರದ ಡಿಮ್ಯಾಂಡು ಡ್ರಾಫ್ಟು ಇಟ್ಟಿರಿ. ನಿಮ್ಮ ಕಾದಂಬರಿಯನ್ನು ರಾಜಾ ಚೆಂಡೂರು ಕಂಪೋಸ್‌ ಮಾಡಿಸಿ, ಸಾವಿರ ಪ್ರತಿ ಪ್ರಿಂಟೂ ಮಾಡಿಸುತ್ತಾರೆ. ಇಪ್ಪತ್ತೆೈದು ಪ್ರತಿಗಳನ್ನು ನಿಮಗೆ ಕಳುಹಿಸಿಕೊಡುತ್ತಾರೆ. ಉಳಿದ ಪ್ರತಿಗಳನ್ನು ಅದೆಷ್ಟೋ ಲಂಚ ಕೊಟ್ಟು ಸರ್ಕಾರಿ ಗ್ರಂಥಾಲಯಕ್ಕೆ ತಳ್ಳುತ್ತಾರೆ. ಈ ಪ್ರಾಸೆಸ್ಸಿಗೆ ತಗಲುವ ಸಮಯ ಮೂರು ತಿಂಗಳಿನಿಂದ ಆರುತಿಂಗಳು. ಆ ಅವಧಿಯ ನಂತರ ನೀವು ಕೊಟ್ಟಿದ್ದ ಹತ್ತು ಸಾವಿರ ನಿಮ್ಮ ಕೈಗೆ ವಾಪಸ್ಸು ಬರುತ್ತದೆ. ಆಗ ನೀವು ಮತ್ತೊಂದು ಕಾದಂಬರಿ ಬರೆಯೋದಕ್ಕೆ ಶುರುಹಚ್ಚಿಕೊಳ್ಳಬಹುದು.

ಇಲ್ಲಿ ರಾಜಾ ಚೆಂಡೂರು ಹೇಗೆ ಲಾಭ ಮಾಡುತ್ತಾರೆ?
ಅವರ ಲೆಕ್ಕಾಚಾರ ತೀರ ಸರಳ. ನೀವು ಬರೆದ ಕಾದಂಬರಿಯನ್ನು ಅಚ್ಚು ಹಾಕಿಸಲಿಕ್ಕೆ ಅವರಿಗೆ ಮೂವತ್ತು ಸಾವಿರ ಖರ್ಚಾಗುತ್ತದೆ. ಒಂದು ಪ್ರತಿಗೆ ಅರುವತ್ತು ರುಪಾಯಿ ಇಟ್ಟರೆ ಸಾವಿರ ಪ್ರತಿಗೆ ಅರುವತ್ತು ಸಾವಿರವಾಯಿತು. ಅದರಲ್ಲಿ ಕಾಂಪ್ಲಿಮೆಂಟರಿ ಎಂದು ನೂರು ಪ್ರತಿ ತೆಗೆದಿಟ್ಟರೂ ಐವತ್ತನಾಲ್ಕು ಸಾವಿರ ಚೆಂಡೂರು ಕೈಗೆ ಬರುತ್ತದೆ. ನೀವು ಹಾಕಿದ ಹತ್ತು ಸಾವಿರ ವಾಪಸ್ಸು ಕೊಟ್ಟು , ಹಾಕಿದ ಬಂಡವಾಳವಾದ ಮೂವತ್ತು ಸಾವಿರವನ್ನು ವಾಪಸ್ಸು ಪಡೆದುಕೊಂಡರೆ ನಿವ್ವಳ ಲಾಭ ಹದಿನಾಲ್ಕು ಸಾವಿರ. ಅದರಲ್ಲಿ ಅರ್ಧ ಗ್ರಂಥಾಲಯ ಇಲಾಖೆಗೆ ಲಂಚ, ಇನ್ನರ್ಧ ರಾಜಾ ಚೆಂಡೂರ್‌ ಪ್ರೊಫೆಷನಲ್‌ ಚಾರ್ಜು. ಅಂದರೆ ನಿಮಗೆ ಕಾಸಿಲ್ಲದೆ ಒಂದು ಟೈಟಲ್ಲು. ಚೆಂಡೂರಿಗೆ ಕುಳಿತಲ್ಲಿಗೆ ಏಳೆಂಟು ಸಾವಿರ ಸಂಪಾದನೆ. ಗ್ರಂಥಾಲಯ ಇಲಾಖೆಯವರಿಗೆ ಕೈತುಂಬ ಖುಷಿ. ಕನ್ನಡ ಸಾಹಿತ್ಯ ಶಾರದೆಯ ಭಂಡಾರಕ್ಕೆ ಒಂದು ಮಹಾಕೃತಿ. ಇಂಥ ಮೂವತ್ತು ಕಾದಂಬರಿಗಳು ಪ್ರತಿ ತಿಂಗಳು ಲೈಬ್ರರಿ ಸೇರುತ್ತವೆ. ಅವನ್ನು ಯಾರೂ ಓದುವುದಿಲ್ಲ , ಚರ್ಚಿಸುವುದೂ ಇಲ್ಲ .

ಇನ್ನು ವಾರಪತ್ರಿಕೆಗಳನ್ನು ನೋಡಿದರೆ, ಅಲ್ಲಿ ಒಂದಷ್ಟು ಧಾರಾವಾಹಿಗಳಿರುತ್ತವೆ. ಅವುಗಳಲ್ಲಿ ಬರುವ ಕಾದಂಬರಿಗಳು ಅದೇ ಹಳೆಯ ಶೈಲಿಯ ಅತಿರಂಜಕ, ಸೆಂಟಿಮೆಂಟಲ್‌, ಮೆಲೋಡ್ರಾಮಾಟಿಕ್‌ ರಚನೆಗಳೇ. ಅವನ್ನೆಲ್ಲ ಯಾವತ್ತೋ ನಮ್ಮ ಟೀವಿ ಸೀರಿಯಲ್ಲುಗಳು ಮೂಲೆಗುಂಪಾಗಿಸಿವೆ. ಟೀವಿ ಸೀರಿಯಲ್ಲು ನೋಡುವುದಕ್ಕೆ ಸಾಕ್ಷರತೆ ಬೇಕಿಲ್ಲ , ಓದುವುದಕ್ಕೆ ಬೇಕು. ಹೀಗಾಗಿ ಓದುವುದಕ್ಕಿಂತ ನೋಡುವುದೇ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಪ್ರಿಯವಾಗಿಬಿಟ್ಟಿದೆ.

ಈ ಎಲ್ಲಾ ಹಿನ್ನೆಲೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಅಮೆರಿಕನ್ನಡಿಗರ ಹತ್ತಿರ - ನೀವು ಕಾದಂಬರಿ ಓದುತ್ತೀರಾ? ಓದಿದರೆ ಎಂಥಾ ಕಾದಂಬರಿ ಓದಬಯಸುತ್ತೀರಿ? ಎಂಬೆರಡು ಪ್ರಶ್ನೆಗಳನ್ನು ಕೇಳಿದೆ. ಅದಕ್ಕೆ ಸಿಕ್ಕ ಉತ್ತರಗಳಲ್ಲಿ ಮೊದಲನೆಯದು-

ಆ ಕಾದಂಬರಿ ಈಗಾಗಲೇ ಎಲ್ಲೂ ಪ್ರಕಟವಾಗಿರಕೂಡದು.

ಅದಕ್ಕೆ ಆಧುನಿಕ ಜಗತ್ತಿನ ಜೊತೆ ಸಂವಹನ ಸಾಧ್ಯವಾಗಬೇಕು. ಅದು ಜಾಗತೀಕರಣ ಮತ್ತು ಭೌಗೋಳೀಕರಣದಿಂದ ಆಧುನಿಕ ಮನುಷ್ಯನ ಕಾಲ ಮತ್ತು ದೇಶ ಬದಲಾಗುತ್ತಿರುವುದನ್ನು ಹೇಳಬೇಕು. ಮುಖ್ಯವಾಗಿ ಈ ಕಾಲದ ತವಕ ಮತ್ತು ತಲ್ಲಣಗಳ ಕಥೆಗಳನ್ನು ನಿರುಮ್ಮಳವಾಗಿ ಹೇಳಬೇಕು.

ಆಧುನಿಕತೆಯ ಜೊತೆ ಮುಖಾಮುಖಿಯಾಗುವುದು ಕಷ್ಟದ ಕೆಲಸ. ಯಾಕೆಂದರೆ ಒಬ್ಬ ಕತೆಗಾರ ಅಥವಾ ಒಂದು ಸಾಹಿತ್ಯ ಕೃತಿ ಆಯಾ ಕಾಲಕ್ಕೆ ತಕ್ಕಂಥ ರೂಪಕಗಳನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಗೇಬ್ರಿಯಲ್‌ ಗಾರ್ಸಿಯಾ ಮಾರ್ಕೇಜ್‌ ‘ಲವ್‌ ಇನ್‌ ದಿ ಟೈಮ್‌ ಆಫ್‌ ಕಾಲರಾ’ ಬರೆದಾಗ ಅವನ ದೇಶದಲ್ಲಿ ಕಾಲರಾ ಇರಲಿಲ್ಲ. ಕಮೂನ ‘ಪ್ಲೇಗ್‌’ ಕಾದಂಬರಿಯನ್ನು ಓದಿದಾಗ ಅದೊಂದು ದೈಹಿಕ ಕಾಯಿಲೆ ಅಲ್ಲ ಅಂತಲೇ ಅನ್ನಿಸುತ್ತದೆ. ತೇಜಸ್ವಿಯವರ ‘ಕರ್ವಾಲೋ’ದಲ್ಲಿ ಬರುವ ಹಾರುವ ಓತಿಯನ್ನು ನಾವೂ ಹುಡುಕೋಣವೇ ಎಂದು ಮನಸ್ಸಾಗುತ್ತದೆ. ಅನಂತಮೂರ್ತಿಯ ‘ಸಂಸ್ಕಾರ’ ಓದಿದ ನಂತರ ಧರ್ಮಶಾಸ್ತ್ರದ ಯಾವ ಪುಟದಲ್ಲಿ ನಾರಣಪ್ಪನ ದ್ವಂದ್ವಕ್ಕೆ ಉತ್ತರ ಸಿಕ್ಕೀತೆಂದು ನಾವೂ ಹುಡುಕತೊಡಗುತ್ತೇವೆ. ಶಾಸ್ತ್ರದಲ್ಲಿ ಸಿಕ್ಕದ ಉತ್ತರ ಸಮಾಜದಲ್ಲಿ ಸಿಗುತ್ತದೆ, ಮಾನವೀಯತೆಯಲ್ಲಿ ಸಿಗುತ್ತದೆ ಎಂದುಕೊಳ್ಳುತ್ತೇವೆ.

ಆದರೆ, ಅಂಥ ಪ್ರಭಾವ ಬೀರುವ ಕೃತಿಯನ್ನು ಈ ಕಾಲದಲ್ಲೂ ಸೃಷ್ಟಿಸುವುದು ಸಾಧ್ಯವೇ? ಕಾದಂಬರಿ ಗೆಲ್ಲುವುದು ಮತ್ತು ನಿಲ್ಲುವುದು ಕಾದಂಬರಿಕಾರನಿಂದ ಅಲ್ಲ , ಓದುಗನಿಂದ ಕೂಡ. ಹೀಗಾಗಿ ಅದು ಇಬ್ಬರೂ ಸೇರಿ ನಿಜವಾಗಬೇಕಾದ ಜಗತ್ತು. ಬರೆದದ್ದು ಓದಿಸಿಕೊಂಡಾಗಷ್ಟೇ ಅರ್ಥಪೂರ್ಣವಾಗುತ್ತದೆ.

ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು, ಓದುಗರ ಮೇಲೆ ಮತ್ತು ಲೇಖಕನ ಮೇಲೆ ಏಕಪ್ರಕಾರವಾದ ನಂಬಿಕೆ ಇಟ್ಟುಕೊಂಡು ನಮ್ಮ ಅಂತರ್ಜಾಲದಲ್ಲಿ ಒಂದು ಕಥಾವಾಹಿನಿಯನ್ನು ಹರಿಯಬಿಡಲು ಮುಂದಾಗುತ್ತಿದ್ದೇನೆ, ನವೆಂಬರ್‌ ನಾಲ್ಕರ ಸೋಮವಾರದಿಂದ. ಒಂದನೇ ತಾರೀಕು ರಾಜ್ಯೋತ್ಸವದ ದಿನ ನಿಮಗೆ ಈ ಕಾದಂಬರಿಯ ಕೆಲವು ಒಳನೋಟಗಳು ಲಭ್ಯವಾಗುತ್ತವೆ.

ಈ ಕಾದಂಬರಿ ಬರೆಯುತ್ತಿರುವವರು ಯಾರು?

ಇಂಥ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ ಎಂದು ನನಗೆ ಗೊತ್ತು . ಯಾಕೆಂದರೆ ಸಾಹಿತ್ಯಕೃತಿಯ ಮೌಲ್ಯ ಮತ್ತು ಸತ್ವವನ್ನು ಲೇಖಕರ ಹೆಸರಿನಿಂದಲೇ ನಿರ್ಧರಿಸುವುದು ನಮ್ಮಲ್ಲಿ ಕೆಲವರಿಗಾದರೂ ತುಂಬ ಆಪ್ಯಾಯಮಾನವಾದ ಚಾಳಿ. ಆದರೆ ಅಂಥ ಅಪಾಯ ಮತ್ತು ಅನುಕೂಲಗಳಿಗೆ ನಾನು ಅವಕಾಶ ಕೊಡುವುದಿಲ್ಲ.

ಕಾದಂಬರಿಕಾರ ಅಥವಾ ಕಾದಂಬರಿಗಾರ್ತಿಯ ಹೆಸರನ್ನು ಮರೆಮಾಚಿ, ನಿಮ್ಮನ್ನು ಸಾಧ್ಯವಾದಷ್ಟೂ unbiased readingಗೆ ಅಣಿಗೊಣಿಸುವ ಪ್ರಯತ್ನ ಇದು.

ಸೋಮವಾರದಿಂದ ಮೊದಲುಗೊಂಡು ಶುಕ್ರವಾರದವರೆಗೆ ನೀವು ‘ನದಿಯ ನೆನಪಿನ ಹಂಗು’ ಕಾದಂಬರಿಯನ್ನು ಲೇಖಕ ಅಥವಾ ಲೇಖಕಿಯ ಹೆಸರಿನ ಪ್ರಭಾವಳಿಯ ಹಂಗಿಲ್ಲದೆ ನಿತ್ಯ ಕಂತುಗಳಲ್ಲಿ ಓದುತ್ತಾ ಹೋಗುತ್ತೀರಿ. ಶನಿವಾರ ಹಾಗೂ ಭಾನುವಾರ ನಿಮ್ಮನ್ನು ಕಾಪಾಡಲಾಗಿದೆ. ಇದು ರಾತ್ರಿ ಬರೆಸಿಕೊಂಡು ಬೆಳಗಿನ ಓದುಗರಿಗೆ ಲಭ್ಯವಾಗುವ ಹೊಸ ಮಾಧ್ಯಮದ ಹೊಸ ಅಚ್ಚರಿ.

ಅಂದಹಾಗೆ, ‘ನದಿಯ ನೆನಪಿನ ಹಂಗು’ ಧಾರಾವಾಹಿಯ ರಚನಕಾರರು ಯಾರೆಂಬುದು ಒಂದು ಕಾಲಘಟ್ಟದ ಬಳಿಕ ಬಹಿರಂಗಪಡಿಸುತ್ತೇನೆ ; ಊಹಾಪೋಹ ಚಾಲನೆಯಲ್ಲಿರಲಿ. ಅಲ್ಲಿಯವರೆಗೆ ಕರ್ತೃವಿನ ಹೆಸರಿನ ಹಂಗಿಲ್ಲದೆ ನದಿಯ ನೆನಪಿನ ಹಂಗಿಗೆ ಒಳಗಾಗಿ.

Thank you for choosing Thatskannada.com
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X