• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

*ಎಸ್ಕೆ.ಶಾಮಸುಂದರ

By Staff
|
ಬಂದವರೆಲ್ಲ ನಮ್ಮವರು, ಅಲ್ಲೇ ಉಳಿದವರು ದೇವರು Sampige marada hasirele naduve...
*ಎಸ್ಕೆ.ಶಾಮಸುಂದರ

ಉತ್ತರ ಅಮೆರಿಕಾದ ಬಹುತೇಕ ಪ್ರಾಂತ್ಯಗಳಲ್ಲಿ ಈಗ ಕೊರೆಯುವ ಚಳಿಗಾಲ. ಲೈಫು ಕಿರಿಕಿರಿ, ಮಿಜಿಮಿಜಿ. ಹೊರಗೆ ಒಂದೇ ಸಮನೆ ಹಿಮ ಸುರಿಯುತ್ತಿದೆ. ಎದ್ದು ಕೆಲಸಕ್ಕೆ ಹೋಗುವುದಕ್ಕೇ ಬೇಜಾರು. ರಗ್ಗು ಹೊದ್ದು, ಬೆಂಕಿಗೂಡಿನ ಬಳಿ ಬೆಕ್ಕಿನ ಥರ ಕುಳಿತು ಕುರುಕಲು ತಿಂಡಿ ತಿನ್ನುವುದಕ್ಕೆ ಮಾತ್ರಯೋಗ್ಯ ಎನ್ನುವಂಥ ಹವೆ. ಪಾನಪ್ರಿಯ ಗುಂಡುಗೋವಿಗಳಿಗೆ ಒಂದು ಪೆಗ್ಗು ವಿಸ್ಕಿ ಫಿಕ್ಸ್‌ ಮಾಡಿಕೊಂಡರೆ ಆವತ್ತು ಸುಸೂತ್ರ ಕಳೆದುಹೋಗುತ್ತದೆ. ಆದರೆ, ಕೇವಲ ಕಾಫಿಯನ್ನು , ಹಬೆಯಾಡುವ ಬಿಸಿ ಊಟವನ್ನು , ನಿತ್ಯ ಒದರುವ ಟಿವಿಯನ್ನು ಮಾತ್ರ ನೆಚ್ಚಿಕೊಂಡ ಹೈಕಳಿಗೆ ಮತ್ತು ಹೆಂಗಸರಿಗೆ ಟೈಮು ಪಾಸಾಗುವುದೇ ಕಷ್ಟ. ಬೆಳಗಾದರೆ ಪಿಕಾಸಿ ಹಿಡಿದು ಹಿಮ ಅಗೆದು ಸ್ವಚ್ಛ ಮಾಡಬೇಕು. ವಾರಾಂತ್ಯ ಇಷ್ಟಮಿತ್ರರ ಮನೆಗೆ ಊಟಕ್ಕೆ ಹೋಗುವುದೂ ಕಿರಿಕಿರಿಯ ಕೆಲಸವೇ. ಜಾರುವ ರಸ್ತೆಗಳಲ್ಲಿ ಕಾರು ಓಡಿಸುವುದೂ ಬಲೇ ಕಿರಿಕಿರಿ. ಜೋಪಾನ ! ಇಂಥ ವಾತಾವರಣದಲ್ಲಿ ಇನ್ನೂ ಎರಡು- ಮೂರು ತಿಂಗಳು ಕಳೆಯುವುದು ಹೇಗಪ್ಪಾ ಎನ್ನುವ ಚಿಂತೆ.

ಹಾಗಂತ ಇಲ್ಲಿ ಯಾವುದೂ ನಿಲ್ಲುವುದಿಲ್ಲ ಎನ್ನುತ್ತೀರಾ ? ಉಳ್ಳವರು ಶಿವಾಲಯ ಮಾಡುವರು ಎನ್ನುವ ಹಾಗೆ ಚಳಿಯಿಂದ ದೂರಾಗಲು ಫ್ಲಾರಿಡಾದಂತಹ ಉಷ್ಣ ಪ್ರದೇಶಕ್ಕೆ ಎರಡು ತಿಂಗಳ ಮಟ್ಟಿಗೆ ವಲಸೆ ಹೋಗುವವರೂ ಉಂಟು. ಈ ಭಾಗ್ಯ ಎಲ್ಲರಿಗೂ ಎಲ್ಲಿ ಸಿಗುತ್ತದೆ. ಈ ದುರ್ಭರ ದಿನಗಳಲ್ಲಿ ಮೂರು ವಾರದ ರಜಾ ಸಿಗುವುದೇ ಕಷ್ಟ. ಆ ರಜಾ ದಿವಸಗಳನ್ನು ಹೊಂದಿಸಿಕೊಂಡು ಊರಿಗೆ ಹೋಗಿಬಂದರೆ ಸಾಕಾಗಿದೆ ಎನ್ನುವಂತ ಪರಿಸ್ಥಿತಿ ಅನೇಕರದು. ಇಡೀ ವರ್ಷ ದುಡಿದ ಶರೀರ, ದೈನಿಕಗಳಲ್ಲಿ ಕಳೆದುಹೋದ ಮನಸ್ಸನ್ನು ಕೊಡವಿಕೊಂಡು ಒಂದು ಹದಿನೈದು ಇಪ್ಪತ್ತು ದಿವಸ ತವರಿಗೆ ಹೋಗಿ ಮೂಡುಗಳನ್ನು ಮತ್ತೆ ಬೆಚ್ಚಗೆ ಮಾಡಿಕೊಳ್ಳುವ ಕಾಲ. ಆ ಮೂರು ವಾರದ ರಜೆಯನ್ನು ಭಾರತ ಭೇಟಿಗೆಂದು ನೀವು ಮುಡಿಪಿಟ್ಟ ಕಾಲ ಇದೀಗ ಬಂದಿದೆ. ಅಂದುಕೊಂಡ ಹಾಗೆ ನೀವು ಈ ಸಲ ಕರ್ನಾಟಕಕ್ಕೆ ಬರುತ್ತಿದ್ದೀರಾ ?

ಪ್ರತಿ ವರ್ಷ ಬರುವುದಕ್ಕೆ ಸಾಧ್ಯವಾಗದಿದ್ದರೂ ಎರಡೋ ಮೂರೋ ವರ್ಷಕ್ಕೊಮ್ಮೆ ನಿಮ್ಮೂರಿಗೆ ಬರಲೇಬೇಕು. ಇಷ್ಟಕ್ಕೂ ನಿಮ್ಮ ಊರಿಗೆ ಬರಲು ಕಾರಣಗಳು ಬೇಕಾದಷ್ಟಿವೆ :

ಅಮೆರಿಕಾ ಬೋರಾಗಿದೆ ! ತಂಗಿಯ, ತಮ್ಮನ , ನಾದಿನಿಯ ಮದುವೆ ಇದೆ. ಅಮ್ಮನನ್ನು ವಾಪಸ್ಸು ಊರಿಗೆ ಬಿಟ್ಟು ಅಪ್ಪನನ್ನು ಈ ಸಲವಾದರೂ ಅಮೆರಿಕಾಗೆ ಕರೆದುಕೊಂಡು ಬರಬೇಕಿದೆ. ಬಿಡುವು ಮಾಡಿಕೊಂಡು ಮನೆದೇವರಿಗೆ ಬೇರೆ ಹೋಗಿಬರಬೇಕು. ಜಮೀನಿಗಂತೂ ಒಂದು ವಿಸಿಟ್‌ ಹಾಕಲೇಬೇಕು. ತೆಂಗು, ಬಾಳೆ, ಅಡಿಕೆ ಗಿಡಗಳನ್ನು ಕಣ್ಣೆತ್ತಿ ನೋಡಬೇಕು. ವರ್ಷವೆಲ್ಲಾ ದುಡಿಯುವ ಅಣ್ಣನಿಗೆ ತೋಟದಿಂದ ಏನಾದರೂ ಉತ್ಪತ್ತಿ ಇದೆಯಾ ? ವಿಚಾರಿಸಿಕೊಳ್ಳಬೇಕು. ಅಪ್ಪ ಸತ್ತು ಹತ್ತು ವರ್ಷವಾದರೂ ಆಸ್ತಿ ವಿಭಾಗ ಆಗಿಲ್ಲ. ಈ ಬಾರಿಯಾದರೂ ರಿಜಿಸ್ಟ್ರೇಷನ್‌ ಆಗತ್ತಾ ?ನೆಂಟರಿಷ್ಟರ ಮನೆಗಂತೂ ಹೋಗಲೇಬೇಕಲ್ಲ. ಕರ್ನಾಟಕದಲ್ಲಿದ್ದಾಗ ಬದುಕಿ ಬಾಳಿದವರ ಜತೆ, ವಿದ್ಯೆ, ಉದ್ಯೋಗ, ಸಮಾಧಾನ, ಏಕಾಂತ ಸಾಧ್ಯವಾದವರ ಜೊತೆಗೆ ಮತ್ತೆ ಒಂದಿಷ್ಟು ಕಾಲ ಕಳೆಯುವ ಇರಾದೆ ಇದೆ. ಇನ್ನೂ ನಿಗದಿಯಾಗದ ಕಾರ್ಯಕ್ರಮ ಮನದೊಳಗೇ ಸುಳಿದಾಡುತ್ತದೆ.

ಒಬ್ಬೊಬ್ಬರ ಕಷ್ಟ ಸುಖ, ಉದ್ದೇಶ, ನಿರೀಕ್ಷೆ ಒಂದೊಂದು ತೆರನಾಗಿದ್ದರೂ ಊರಿಗೆ ಬಂದು ಹೋಗುವ ವಿಚಾರದಲ್ಲಿ ಎಲ್ಲರೂ ಒಂದೇ. ಈ ಚಳಿಗಾಲದಲ್ಲಿ ನನಗೆ ಗೊತ್ತಿರುವ ಹಾಗೆ ನಮ್ಮ ಓದುಗ ಮಿತ್ರರನೇಕರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅನೇಕರು ಬಂದು ಆಗಲೇ ಹಳಬರಾಗಿದ್ದಾರೆ. ಶತಾಯಗತಾಯ ಕರ್ನಾಟಕಕ್ಕೆ ಹೋಗಲೇಬೇಕು ಎಂದು ಅಂದುಕೊಂಡವರು ಈ ಸಾರಿ ಟೂರ್‌ ಕ್ಯಾನ್ಸ್‌ಲ್‌ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ಅಂಥ ಜನಕ್ಕೆ ಎದುರಾಗಿರುವ ಅನೇಕ ಕಾರಣಗಳಲ್ಲಿ Slow Economy ಎದ್ದು ಕಾಣುವಂಥದ್ದು.

**

Vishwanath Hulikalಉತ್ತರ ಕ್ಯಾಲಿಫೋರ್ನಿಯಾದಿಂದ 15 ದಿವಸದ ಮಟ್ಟಿಗೆಂದು ಬಂದಿರುವ ವಿಶ್ವನಾಥ್‌ ಹುಲಿಕಲ್‌ ಮೊನ್ನೆ ತುಮಕೂರಿನಿಂದ ಫೋನು ಮಾಡಿದ್ದರು. ಒಬ್ಬರೇ ಬಂದಿದ್ದಾರೆ. ಮಕ್ಕಳಿಗೆ ಸ್ಕೂಲು ಹೋಗತ್ತೆ , ಹೋಂವರ್ಕ್‌ ಮಿಸ್‌ ಆಗಿಬಿಡತ್ತೆ ಅಂತ ಅವರ ಹೆಂಡತಿ ಅನ್ನಪೂರ್ಣ ಬಂದಿಲ್ಲ. 69 ವರ್ಷದ ತಂದೆಯವರನ್ನು ಈ ಬಾರಿ ಅಮೆರಿಕಾಗೆ ಕರೆದೊಯ್ಯುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಅದಕ್ಕಾಗಿ ವೀಸಾ ಕಟಕಟೆ ದಾಟಬೇಕು. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಸಾಹಿತ್ಯ ಗೋಷ್ಠಿಯನ್ನು ಕಟ್ಟಿರುವ ವಿಶ್ವನಾಥ್‌ ಹುಲಿಕಲ್‌ ನಿಜ ಅರ್ಥದಲ್ಲಿ ಸಾಹಿತ್ಯ ಪ್ರಿಯರು. ಯಾವುದಾದರೂ ಒಂದು ಒಳ್ಳೆಯ ಕಥಾ ಸಂಕಲನವನ್ನು ಇಂಗ್ಲಿಷಿಗೆ ತರ್ಜುಮೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಕಥೆಗಾರರು ಯಾರು ? ಕಥಾಸಂಕಲನ ಯಾವುದು ? ಕಾಪಿರೈಟ್ಸ್‌ ಯಾರ ಬಳಿ ಇದೆ ? ಅವೆಲ್ಲ ಪತ್ತೆ ಆಗಬೇಕು. ಈ ಮಧ್ಯೆ ದಟ್ಸ್‌ಕನ್ನಡ ಡಾಟ್‌ಕಾಂನ ಸಾಹಿತ್ಯ ವಿಭಾಗದವರು ಸಂದರ್ಶನ ಕೋರಿದ್ದಾರೆ. ಅವರಿಗಾಗಿ ಒಂದೆರಡು ಗಂಟೆ ಮೀಸಲಿಡಬೇಕು. ವಿಶ್ವನಾಥ್‌ ಹುಲಿಕಲ್‌ ಅವರ ಈ ಬಾರಿಯ ಕರ್ನಾಟಕ ಪ್ರವಾಸ ಫಲಪ್ರದವಾಗಲಿ ಎಂದು ಆಶಿಸುತ್ತೇನೆ. ಅವರೀಗ ತುಮಕೂರಿನಲ್ಲಿದ್ದಾರೆ. ಅವರ ಇ-ವಿಳಾಸ ಇಲ್ಲಿ , ನಿಮಗಾಗಿ : vhulikal@yahoo.com

**

Vallisha Shatry with Manohara Kulakarniವಿಶ್ವನಾಥ್‌ ಸಾಹಿತ್ಯಕ್ಕೆ ಮನಸೋತವರಾದರೆ ಲಾಸ್‌ಏಂಜಲಿಸ್‌ ಡೈಮಂಡ್‌ ಬಾರ್‌ ಪ್ರದೇಶದ ವಲ್ಲೀಶ ಶಾಸ್ತ್ರಿಗಳ ಆಸಕ್ತಿ ಬಹುಮುಖವಾದದ್ದು. ಸಂಗೀತ, ನಾಟಕ, ಜಾನಪದ ಪ್ರದರ್ಶನ ಕಲೆಗಳು ಮಾತ್ರವಲ್ಲದೆ ಕನ್ನಡ ಸಂಘ ಹಮ್ಮಿಕೊಳ್ಳುವ ಬಗೆಬಗೆಯ ಕಾರ್ಯಕ್ರಮಗಳಲ್ಲಿ ಏಕಪ್ರಕಾರದ ಹುಮ್ಮಸ್ಸಿನಿಂದ ಪಾಲ್ಗೊಳ್ಳುವ ಕಲಾವಿದರು ಅವರು. ನೀವು ಡೆಟ್ರಾಯಿಟ್‌ಗೆ ಬಂದಿದ್ದರೆ ನೋಡಿರುತ್ತೀರಿ. ಆವತ್ತು ಭಾನುವಾರ ಬೆಳಗ್ಗೆ ನಡೆದ ಕನ್ನಡ ಕೂಟಗಳ ಮೆರವಣಿಗೆಯಲ್ಲಿ ಇತ್ತಲ್ಲಾ.. ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘದ ತಂಡದ ಮಂಚೂಣಿಯಲ್ಲಿ ಗದೆ ತಿರುಗಿಸುತ್ತಾ ಹೂಂಕರಿಸುತ್ತಿದ್ದ ಬಲಭೀಮ ಪಾತ್ರಧಾರಿ ಇವರೇ. ಮಾರನೆ ದಿವಸ ರಾತ್ರಿ ರಂಗಸ್ಥಳದಲ್ಲಿ ನಡೆದ ಜಡೆ ಕೋಲಾಟ ಕಾರ್ಯಕ್ರಮದಲ್ಲೂ ಅವರು ಬಣ್ಣದ ಕೋಲುಗಳಿಗೆ ಹೊಯ್‌ಕಯ್‌ ಆಗಿದ್ದನ್ನು ನಾನಿನ್ನೂ ಮರೆತಿಲ್ಲ. ಸದ್ಯದಲ್ಲೇ ವಲ್ಲೀಶ ಶಾಸ್ತ್ರಿಗಳು vshastry@yahoo.com ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಭೇಟಿ ಆದ ನಂತರ ಮತ್ತೆ ಬರೆಯುತ್ತೇನೆ.

**

Shikaripura Harihareshwaraನಮ್ಮ ಅಂತರ್‌ಜಾಲ ಪತ್ರಿಕೆಗೆ ‘ಅಂಕಣ’ ಅಲಂಕಾರದ ಸೊಬಗನ್ನು ಸಹೃದಯತೆಯಿಂದ ನೀಡಿರುವ ಎಲ್ಲ ಅಂಕಣಕಾರರು ಇದೇ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಜಮಾಯಿಸುತ್ತಿರುವುದು ಒಂದು ವಿಶೇಷ. ‘ಹೊಂಬೆಳಕ ಹೊನಲು ’ ಅಂಕಣ ನಡೆಸಿಕೊಡುತ್ತಿರುವ ಶಿಕಾರಿಪುರ ಹರಿಹರೇಶ್ವರ ಅವರು ಸ್ಟಾಕ್‌ಟನ್‌ನಿಂದ ಗಂಟು ಮೂಟೆ ಕಟ್ಟಿಕೊಂಡು ಕರ್ನಾಟಕಕ್ಕೆ ಬಂದಿದ್ದಾರೆ. ಬರುವ 25 ನೇ ತಾರೀಕಿಗೆ ಅವರ ‘ಮರಳಿ ತವರಿಗೆ ಯಾತ್ರೆ’ ಗೆ ಒಂದು ತಿಂಗಳು ತುಂಬುತ್ತದೆ. ಮೈಸೂರಿನಲ್ಲೇ ಅವರ ಜಾಂಡಾ. ‘ಮದುವೆ ಮಾಡಿಕೊಂಡು, ಮನೆಯ ಹೂಡಿಕೊಂಡು ಮಡದಿಯ ಜತೆಯಲಿ ಇರಬೇಕು’ ಎನ್ನುವ ಆಗಿನ ಕಾಲದ ಜನಪ್ರಿಯ ಕನ್ನಡ ಗೀತೆ ನೆನಪಾಗುತ್ತದೆ. ಆದರೆ, ಈ ವಯಸ್ಸಿನಲ್ಲಿ ಪರದೇಶದಿಂದ ಬಂದು ಮತ್ತೆ ಮನೆಹೂಡುವ ಕೆಲಸ ಛಾಲೆಂಜಿಂಗ್‌. ಆ ಕೆಲಸವನ್ನು ಗೊಣಗದೆ, ಕಂಪ್ಲೇನ್‌ ಮಾಡದೆ ಮಾಡುತ್ತಿರುವ ಹರಿಹರೇಶ್ವರ ದಂಪತಿಗಳಿಗೆ ಶುಭ ಹಾರೈಕೆಗಳು. ನಮ್ಮ ಓದುಗರು ಹರಿಹರೇಶ್ವರ ಅವರನ್ನು ಈ ವಿಳಾಸದಲ್ಲಿ ಸಂಪರ್ಕಿಸಬಹುದು hoysala_usa@hotmail.com

**

Janardhana Swamywww.Thatskannada.com ಗೆ ಹೊಸತನವನ್ನೂ, ಲವಲವಿಕೆಯನ್ನೂ ತಂದುಕೊಟ್ಟ ಇನ್ನಿಬ್ಬರು ಅಂಕಣಕಾರರು ಬೆಂಗಳೂರಿಗೆ ಬರುತ್ತಿದ್ದಾರೆ. ಕಚಗುಳಿ ಇಡುವ ವ್ಯಂಗ್ಯಚಿತ್ರಗಳ ಮೂಲಕ ನಮ್ಮ ಓದುಗರ ಗಮನವನ್ನು ನಿತ್ಯ ಅಪಹರಿಸುತ್ತಿರುವ ಜನಾರ್ದನ ಸ್ವಾಮಿ ಅವರು ನವೆಂಬರ್‌ 26ರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿಗೆ ಬರುತ್ತಿದ್ದಾರೆ. ಜತೆಗೆ ಪತ್ನಿ ಗೀತಾ ಬರುತ್ತಿದ್ದಾರೆ. ಇರುವ ಒಬ್ಬನೇ ಮಗನನ್ನು ಅಮೆರಿಕಾಗೆ ಕಳಿಸಿ ಬೆಂಗಳೂರಿನ ಜೆ.ಪಿ ನಗರ ಬಡಾವಣೆಯಲ್ಲಿ ಇಬ್ಬರೇ ಕಾಲಹಾಕುತ್ತಿರುವ ಅವರ ತಂದೆ ತಾಯಿ ಈ ಸುದ್ದಿಯಿಂದ ಪುಳಕಿತರಾಗಿದ್ದಾರೆ. ಸ್ವಾಮಿಯವರ ಭಾರತ ಪ್ರವಾಸ ಅವಧಿಯಲ್ಲಿ Thatscartoon ಅಂಕಣಕ್ಕೆ ರಜೆ ಘೋಷಿಸಲಾಗುತ್ತದೆ. ಮಾನ್ಯ ಓದುಗರು ಸಹಕರಿಸಬೇಕಾಗಿ ವಿನಂತಿ. ಸ್ವಾಮಿ ಅವರ ವಿಳಾಸ ಯಾವುದಕ್ಕೂ ನಿಮ್ಮ ಬಳಿ ಇರಲಿ jswamy@jswamy.com ( ಜನಾರ್ಧನ ಸ್ವಾಮಿ ಅವರ ಕಾರ್ಟೂನ್‌ ಗೈರು ಹಾಜರಿಯನ್ನು ತುಂಬಲು ಮತ್ತೊಂದು ದೃಶ್ಯ ಆಧರಿತ ಅಂಕಣ ಪ್ರಾರಂಭವಾಗುತ್ತದೆ, ನಿರೀಕ್ಷಿಸಿ )

**

Srivathsa Joshiಪ್ರತಿ ಮಂಗಳವಾರ ನಿಮಗೆಲ್ಲ ಪ್ರೀತಿಯಿಂದ ವಿಚಿತ್ರಾನ್ನ ಉಣ ಬಡಿಸುತ್ತಿರುವ ಶ್ರೀವತ್ಸ ಜೋಶಿ ಅವರು ಬೆಂಗಳೂರು ತಲುಪಬೇಕಾದರೆ ನವೆಂಬರ್‌ ಕಳೆಯಬೇಕು. ಸುಮಾರು ಒಂದು ವರ್ಷದಿಂದ ಅಮೆರಿಕಾದಲ್ಲಿ ಬಲವಂತ ಬ್ರಹ್ಮಚಾರಿಯಾಗಿ ಕಾಲ ಹಾಕುತ್ತಿರುವ ಜೋಶಿ ಅವರ ಬರುವನ್ನೇ ಕಾಯುತ್ತಿರುವ ಬೆಂಗಳೂರು ಪದ್ಮನಾಭನಗರ ವಾಸಿ ಪತ್ನಿ ಸಹನಾ ಮತ್ತು ಮೂರು ವರ್ಷದ ಪೋರ ಸೃಜನ್‌ಗೆ ಕಂಗ್ರಾಜುಲೇಷನ್ಸ್‌. ಮಡದಿ , ಮಕ್ಕಳು ಯಜಮಾನನ ಗೈರು ಹಾಜರಿಯನ್ನು ಹೇಗೆ ತಾಳಿಕೊಂಡರೋ ನನಗೆ ಗೊತ್ತಿಲ್ಲ. ನಮ್ಮ ವೆಬ್‌ಸೈಟಿಗಂತೂ ಜೋಶಿ ಅವರ ಫ್ರೀ ಟೈಂ ಲಾಭ ಪೂರ್ಣವಾಗಿ ದಕ್ಕಿತು. ಸಂಸಾರದ ದೈನಂದಿನ ಕಾಳಜಿಗಳಿಂದ ದೂರವಾಗಿ ಪ್ರಾಜೆಕ್ಟ್‌ ವರ್ಕ್‌ ಮೇಲೆ ಮೇರಿಲ್ಯಾಂಡ್‌ನಲ್ಲಿ ಮೊಕ್ಕಾಂ ಹೂಡಿರುವ ಪರ್ತ್ರಕರ್ತ ಪ್ರವೃತ್ತಿಯ ಅವರ ಲೇಖನಿ ಮತ್ತು ಕ್ಯಾಮೆರಾದಿಂದ ಆ ಪ್ರದೇಶದ ಅನೇಕ ಕನ್ನಡ ಪರ ಚಟುವಟಿಕೆಗಳು ನಮ್ಮ ಪುಟಗಳಲ್ಲಿ ದಾಖಲಾದವು. ಒಂದು ಭಾಷಾ ಜಾಲಕ್ಕೆ ಬಂಧಿಯಾದ ನಿರ್ದಿಷ್ಟ ಸಮುದಾಯವನ್ನು ಅಂತರ್‌ಜಾಲದ ಕನ್ನಡಿಯಲ್ಲಿ ಪರಸ್ಪರ ಬೆಸೆಯುವ ಕಾಯಕಕ್ಕೆ ಜೋಶಿ ಅಂತಹವರ ಸೇವೆ ಅಮೂಲ್ಯ. ಇಂತಹ ನೆರವು ಮತ್ತು ಸಹಕಾರ ಭಾರತೀಯ ಭಾಷಾ ಪತ್ರಿಕೋದ್ಯಮದಲ್ಲಿ ನಿರತರಾದ ಎಲ್ಲ ಡಾಟ್‌ಕಾಂಗಳಿಗೆ ಪ್ರಾಪ್ತವಾಗಲಿ ಎಂದು ಆಶಿಸೋಣ ! ಜೋಶಿ ಅವರಿಗೆ ವೆಲ್‌ ಕಂ ಟು ಇಂಡಿಯಾ ಹೇಳುತ್ತೀರಾ ? ವಿಳಾಸ : sjoshim@hotmail.com

**

M.V.Nagaraja Raoಪ್ರೇರಣಾ ಪ್ರಸಂಗಗಳು ಅಂಕಣ ನಡೆಸಿಕೊಡುತ್ತಿರುವ ಎಂ.ವಿ. ನಾಗರಾಜರಾಯರು ಮತ್ತು ಅವರ ಪತ್ನಿಯವರನ್ನು ಅವರ ಅಮೆರಿಕಾ ಮಗ ಪದ್ಮನಾಭರಾವ್‌ paddu_mn@yahoo.com ಅವರ ಮಿಲ್ಪಿಟಾಸ್‌ ಮನೆಯಲ್ಲಿ ಭೇಟಿ ಆಗಿದ್ದೆ. ಆರು ತಿಂಗಳ ಅಮೆರಿಕಾ ಪ್ರವಾಸದ ನಂತರ ಸೆಪ್ಟೆಂಬರ್‌ನಿಂದ ದಂಪತಿಗಳು ಬೆಂಗಳೂರು ವಾಸಿಗಳಾಗಿದ್ದಾರೆ. ದೀಪಾವಳಿ ಹಬ್ಬದ ಸಮಯಕ್ಕೆ ರಾಯರು ಸ್ವಂತ ಊರಾದ ಚಿಕ್ಕನಾಯಕನಹಳ್ಳಿಯಲ್ಲಿ ತಂಗಿದ್ದರು. ಅಲ್ಲಿಂದಲೇ ನನಗೆ ಶುಭಾಶಯ ಪತ್ರ ಕಳಿಸಿದ್ದರು. ಬರುವ ಡಿಸೆಂಬರ್‌ನಲ್ಲಿ ನಾನು ಆಯೋಜಿಸುತ್ತಿರುವ ‘ದಟ್ಸ್‌ಕನ್ನಡ ಡಾಟ್‌ಕಾಂ ಅಂಕಣಕಾರರ ಸಂಪಾದಕೀಯ ಸಹಭಾಗಿತ್ವ ಸಭೆ ’ ಗೆ ಅವರನ್ನು ಆಹ್ವಾನಿಸುತ್ತಿದ್ದೇನೆ. ಸದಾ ಬರವಣಿಗೆ ಮಗ್ನ ರಾಯರು ಇವತ್ತು ಏನು ಬರೆಯುತ್ತಿದ್ದಾರೋ! ಕೇಳಿ mvnagarajarao@yahoo.com

**

H.K.Nanjundaswamys book- Silent Music released in Detroitಮತ್ತೆ ಗಾಂಧೀ ಬಜಾರಿನಲ್ಲಿ ಸಜ್ಜನರ ಪಿತೂರಿ! ಸರಳ ಕನ್ನಡದಲ್ಲಿ ಮನೋಜ್ಞ ವಿಚಾರಗಳನ್ನು ಬರೆಯುವುದಕ್ಕೆ ಹೆಸರಾದರು ಹಿರಿಯರಾದ ಡಾ. ಎಚ್‌.ಕೆ. ರಂಗನಾಥ್‌. ಪ್ರಸ್ತುತ ಬೆಂಗಳೂರಿನ ಗಾಂಧೀ ಭವನದಲ್ಲಿ ಬರವಣಿಗೆ, ಕೃತಿ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ನಿರತರಾಗಿರುವ ಅವರ ತಮ್ಮ ಡಾ. ಎಚ್‌.ಕೆ. ನಂಜುಂಡಸ್ವಾಮಿ ಅವರು ಈಗ ಬೆಂಗಳೂರಿನಲ್ಲಿದ್ದಾರೆ. ಸ್ವಾಮಿ ಅವರು ಅಣ್ಣ ರಂಗನಾಥ್‌ ಅವರ ‘ನೆನಪಿನ ನಂದನ’ ( ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಮಾಲೆ ) ಕೃತಿಯನ್ನು ಇಂಗ್ಲಿಷ್‌ಗೆ ( Where the Angels roamed)ಭಾಷಾಂತರ ಮಾಡಿದ್ದಾರೆ. ಈ ಕೃತಿ ಮತ್ತು ಸ್ವಾಮಿ ಅವರು ಫ್ಲಾರಿಡಾದಲ್ಲಿ ಕುಳಿತು ಬರೆದ ಅಮೆರಿಕಾ ಅನುಭವಗಳ ಹಾಸ್ಯ ಸಿಂಚನ ‘ ಕಲಸು ಮೇಲೋಗರ’ ಪುಸ್ತಕಗಳು ಇದೇ ಭಾನುವಾರ (ನವೆಂಬರ್‌ 24 , ಬೆಳಗ್ಗೆ 10 )ಬೆಂಗಳೂರು ಗಾಂಧೀಬಜಾರಿನಲ್ಲಿರುವ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಸಭಾಂಗಣದಲ್ಲಿ ಬಿಡುಗಡೆ ಆಗುತ್ತಿವೆ. ನೀವೂ ಬನ್ನಿ. ಬರಲಾಗದವರು ಶುಭಾಶಯ ಕೋರಿ sita@peoplepc.com

**

ನಮ್ಮ ಓದುಗ ಬಳಗ ತುಂಬಾ ವಿಸ್ತಾರವಾದದ್ದು. ಪ್ರತಿಯಾಬ್ಬರ ಚಲನವಲನವನ್ನು ಪತ್ತೆ ಮಾಡಿ ಇಲ್ಲಿಗೆ ಎಳೆದು ತರುವುದು ಕಷ್ಟ ವೆ. ಸಾಧ್ಯವಾದಂತೆಲ್ಲ ವಿದೇಶಿ ಕನ್ನಡ ಮಿತ್ರರ ಕರ್ನಾಟಕ ಚಟುವಟಿಕೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಿರುತ್ತೇನೆ. ಕೆಂಡ ಸಂಪಿಗೆ ಅಂಕಣವನ್ನು ತಪ್ಪದೆ ಓದುತ್ತಿರುವ ಎಲ್ಲ ಮಿತ್ರರಿಗೆ ಚಳಿಗಾಲದ ಶುಭಾಶಯ ಹೇಳುವ ಮುಂಚೆ ಇನ್ನೊಬ್ಬ ಕನ್ನಡಿಗನ ಬಗ್ಗೆ ಎರಡು ಮಾತು ಹೇಳಿಬಿಡುತ್ತೇನೆ.

**

ಇವರ ಹೆಸರು ಡಾ. ಸಂಜಯ ರಾವ್‌. ಪತ್ನಿ ಮೀನಾ ರಾವ್‌. ಗಂಡ ಹೆಂಡತಿ ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದಾಗ ಕೋಬೋ ಕನ್‌ವೆನ್ಷನ್‌ ಹಾಲ್‌ ಬಾಗಿಲಲ್ಲೇ ನನ್ನನ್ನು ಗುರುತು ಹಿಡಿದು ಮಾತನಾಡಿಸಿದರು. ಫಕ್ಕನೆ ಫೋಟೋ ತೆಗೆದೆ. ನಾನು ಅವೆರಿಕಾದಲ್ಲಿ ಕ್ಲಿಕ್‌ ಮಾಡಿದ ಮೊದಲ ಫೋಟೋ ಇದು. ನೋಡಿ.

Sanjay Rao and Meena Rao in Detroitಸಂಜಯರಾವ್‌ ವಾಷಿಂಗ್‌ಟನ್‌ ಡಿಸಿ ಮೆಟ್ರೋ ಪ್ರದೇಶದ ಕಾವೇರಿ ಕನ್ನಡ ಸಂಘದ ಸಕ್ರಿಯ ಸದಸ್ಯರಲ್ಲೊಬ್ಬರು. ಸದ್ಯದಲ್ಲೇ ದಂಪತಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಬಂದವರೇ ಮೈಸೂರಿಗೆ ಹೋಗುತ್ತಾರೆ. ನೀವು ಬರಹಗಾಗರರೇ ? ನಿಮ್ಮ ಕೃತಿ ಪ್ರಕಟವಾಗಬೇಕೇ ? ಒಂದು ಕಿವಿಮಾತು : ಸಂಜಯ್‌ ಅವರ ತಂದೆ ಹೆಸರು ಸತ್ಯನಾರಾಯಣ ರಾವ್‌. ಇಂಗ್ಲಿಷ್‌ ಮೇಷ್ಟ್ರಾಗಿದ್ದವರು. ಆನಂತರ ವಿಧಾನ ಪರಿಷತ್‌ನ ಸದಸ್ಯರೂ ಆಗಿದ್ದರು. ಮುಖ್ಯವಾಗಿ ಮೈಸೂರಿನಲ್ಲಿರುವ ಗೀತಾ ಬುಕ್‌ ಹೌಸ್‌ ಮಾಲಿಕರು. ಅಚ್ಚುಕಟ್ಟಾಗಿ ಪುಸ್ತಕ ಪ್ರಕಾಶನ ಮಾಡುವುದಕ್ಕೆ ಹೆಸರಾದ ಗೀತಾ ಪ್ರಕಾಶನದ ಮೂಲಕ ನಿಮ್ಮ ಕೃತಿ ಬೆಳಕು ಕಾಣಿಸುವ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಜಯ್‌ ಅವರಿಗೆ ಬರೆದು ತಿಳಿಯಿರಿ ! sanjaysr@rocketmail.com

Thank you for choosing Thatskannada.com

shami.sk@greynium.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X