• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

*ಶಾಮ್‌

By Staff
|
ಇದು ನಾಗ ಐತಾಳರ ಪುಸ್ತಕ ಮಾತ್ರವಲ್ಲ ; ಪ್ರತಿಯಾಬ್ಬ ಅಮೆರಿಕನ್ನಡಿಗನ ಅನುಭವ ಕಥನ Sampige marada hasirele naduve...
*ಶಾಮ್‌

ಜಿ. ಎಸ್‌. ಶಿವರುದ್ರಪ್ಪನವರು ಮಾತನಾಡುತ್ತಿದ್ದರು !

ಮನೆಯಲ್ಲೇ ಸಿದ್ಧಾರ್ಥನಾಗುವ ತಾಳ್ಮೆ. ಮನೆಬಿಟ್ಟು ಹೊರಟರೆ ಬುದ್ದನಾಗುವ ಕೌತುಕ ! ಮನೆ-ಮಾರುಗಳ ಅಂತರ. ದೇಶಾಂತರದ ಸಾಹಸ ತಂದೊಡ್ಡುವ ಹಲವು ಹತ್ತು ಅವಾಂತರಗಳು ಕಟ್ಟಿಕೊಡುವ ಅನುಭವದ ಬುತ್ತಿ . ಅದರ ಜೊತೆಯಲ್ಲೇ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ನೀರೆರೆಯುವ ದೃಷ್ಟಿ ವೈಶಾಲ್ಯದ ಹರವು..

ಇವೆಲ್ಲವುಗಳನ್ನು ವರ್ಣಿಸುವುದಕ್ಕೆ ಒಂದು ರೂಪಕ :

ಕೈಲಾಸದಲ್ಲಿ ಒಂದು ದಿನ ಪಾರ್ವತಿ ಪರಮೇಶ್ವರರು ತಮ್ಮ ಮಕ್ಕಳಾದ ಗಣೇಶ ಮತ್ತು ಷಣ್ಮುಖನಿಗೆ ಒಂದು ಸ್ಪರ್ಧೆ ಏರ್ಪಡಿಸುತ್ತಾರೆ. ಯಾರು ಬೇಗ ಜಗತ್ತನ್ನು ಸುತ್ತಿ ಬರುತ್ತಾರೋ ಅವರಿಗೊಂದು ಪ್ರೆೃಜು. ಈಗ ಇಬ್ಬರೂ ಹೊರಡಿ.

ಷಣ್ಮುಖ ತನ್ನ ವಾಹನ ನವಿಲನ್ನೇರಿ ಇಡೀ ಜಗತ್ತನ್ನು ಬೇಗ ಸುತ್ತು ಹಾಕಿ ಬರುವ ಉತ್ಸಾಹದಿಂದ ಹೊರಟ. ಗಣೇಶ ಏಳಲೇ ಇಲ್ಲ. ಅಪ್ಪ ಅಮ್ಮ ಕೇಳಿದರು- ‘ಏನಿದು ವಿನಾಯಕ ? ಸೋಮಾರಿತನವೋ, ಅಸಡ್ಡೆಯೋ ಅಥವಾ ಜಡತ್ವವೋ ? ಏನಿದು ?’

ತಂದೆ ಮತ್ತು ತಾಯಿಯೇ ನನಗೆ ಬ್ರಹ್ಮಾಂಡ. ಅವರೇ ನನಗೆ ಜಗತ್ತು . ಅವರನ್ನು ಒಂದು ಪ್ರದಕ್ಷಿಣೆ ಹಾಕಿದರೆ ಇಡೀ ಜಗತ್ತನ್ನೇ ಸುತ್ತಿಬಂದಂತೆ. ಒಂದು ಸುತ್ತು ಪ್ರದಕ್ಷಿಣೆ ಹಾಕಿ ‘ನಾನು ಗೆದ್ದೆ ’ ಎಂದು ಬಂದು ಕುಳಿತುಬಿಟ್ಟ ಗಣೇಶ. ಅಲ್ಲಿ ಷಣ್ಮುಖ ಇನ್ನೂ ಓಡುತ್ತಲೇ ಇದ್ದಾನೆ...

Cover Page of Amerikannadiganobbana Dinachariyindaಈ ಪೌರಾಣಿಕದ ಪ್ರಸಂಗದ ಹಿನ್ನೆಲೆಯಲ್ಲಿ ಇವತ್ತಿನ ಭಾರತದ , ವಿಶೇಷವಾಗಿ ಕನ್ನಡಿಗರ ಮನೋಭಾವವನ್ನು ನಾನು ವ್ಯಾಖ್ಯಾನಿಸುವುದು ಹೀಗೆ.. ಶಿವರುದ್ರಪ್ಪನವರು ಮುಂದುವರೆದು ಹೇಳತೊಡಗಿದರು-

ನಾವು ಭಾರತೀಯರು ಯಾವತ್ತೂ ಆಕ್ರಮಣಶೀಲರಲ್ಲ. ಆದರೆ, ನಮ್ಮ ನೆಲದ ಮೇಲೆ ದಂಡೆತ್ತಿ ಬಂದವರು ಬಹಳ. ನಾವು ಇರುವಲ್ಲೇ, ಇದ್ದದ್ದರಲ್ಲೇ ತೃಪ್ತರು. ನಾವು ಗಣೇಶನ ಹಾಗೆ ಸ್ವದೇಶೋ ಭುವನತ್ರಯಂ ಎಂದು ನಂಬಿದವರು. ಇದನ್ನು ನಾನು ‘ವಿನಾಯಕ ಪ್ರಜ್ಞೆ’ ಎಂದು ಕರೆಯುತ್ತೇನೆ.

ಆದರೆ, ಷಣ್ಮುಖನ ದಿಕ್ಕು ದೆಸೆಯೇ ಬೇರೆ. ಅವನು ಸವಾಲುಗಳನ್ನು ಸ್ವೀಕರಿಸಿ ಲೋಕ ಸುತ್ತಿ ಬರಲು ಹೊರಟವ. ಅವನದು ‘ಷಣ್ಮುಖ ಸಾಹಸ ’.

ಅರುವತ್ತರ ದಶಕದ ಇತ್ತೀಚೆಗೆ ಭಾರತೀಯರ ಷಣ್ಮುಖ ಸಾಹಸ ಹೆಚ್ಚಾಗಿ ಬೆಳೆಯುತ್ತಿದೆ. ವೈದ್ಯರು, ವಿಜ್ಞಾನಿಗಳು, ಇಂಜಿನಿಯರು, ಪ್ರಾಧ್ಯಾಪಕರು ಪಶ್ಚಿಮಮುಖಿಗಳಾದರು. ಅವರ ಸುಖ, ದುಖಃ, ಕಷ್ಟ, ಕಾರ್ಪಣ್ಯ , ಏಕಾಂಗಿತನ, ಸಂಪತ್ತು, ಆಪತ್ತು ..ಮತ್ತೆಲ್ಲ ಅನುಭವ ದ್ರವ್ಯದ ಸಾರ ಸಂಗ್ರಹದಂತಿರುವ ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಈ ಸಂಜೆ ನನಗೆ ಸಂತೋಷವಾಗುತ್ತಿದೆ ಎಂದರು ಜಿಎಸ್‌ಎಸ್‌.

ಆ ಪುಸ್ತಕದ ಹೆಸರು ‘ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ’.

**

ಇಳಿವಯಸ್ಸಿನ ಈ ದಿನಚರಿಗಳಲ್ಲಿ ಕೃತಿಕಾರರು ತಮ್ಮದೇ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮ ಇರಲಿಲ್ಲ. ಸೆಪ್ಟೆಂಬರ್‌ 13ರಂದು ನಾನು ಅವರ ಲಾಸ್‌ಏಂಜಲಿಸ್‌ ಮನೆಗೆ ಹೋದಾಗಲೂ ಈ ಬಗ್ಗೆ ಯಾವ ಸುಳಿವೂ ಇರಲಿಲ್ಲ. ಪುಸ್ತಕ ಅಚ್ಚಿನ ಮನೆಯಲ್ಲಿದೆ, ನನ್ನ ಭಾವ ಶ್ರೀಪತಿ ಬಾಯರಿಯವರು ಮತ್ತು ಎನ್‌.ಎಸ್‌.ಲಕ್ಷ್ಮಿನಾರಾಯಣಭಟ್ಟರು ಮುತವರ್ಜಿಯಿಂದ ಪುಸ್ತಕ ಪ್ರಕಾಶ ಮಾಡುವ ಕೆಲಸ ಮಾಡುತ್ತಿದ್ದಾರೆಂದಷ್ಟೇ ಹೇಳಿದ್ದರು. ಆವತ್ತಿನ ಸಂಜೆಯೆಲ್ಲ ಅವರ ಪತ್ನಿ ಲಕ್ಷ್ಮಿ ಬಡಿಸಿದ ಅವಲಕ್ಕಿ ಮೊಸರು ತಿನ್ನುತ್ತಾ ಹರಿಹರೇಶ್ವರ, ಶ್ರೀನಿವಾಸ ಭಟ್ಟರು ಮತ್ತು ನಾನು ಲೋಕಾಭಿರಾಮ ಹರಟಿದ್ದಷ್ಟೇ ಆಯಿತು. ಕನ್ನಡ ಸಾರಸ್ವತ ಲೋಕದ ಚಿಂತನೆಗಳನ್ನು ನಿಯಮಿತವಾಗಿ ಮಾಡುತ್ತಲೇ ಇರಬೇಕು, ಅದಕ್ಕಾಗಿ ನಾವು ಸಾಹಿತ್ಯಾಸಕ್ತರ ಚಾವಡಿಯನ್ನು ಎಲ್‌ಎ ನಲ್ಲಿ ಕಟ್ಟಬೇಕು ಎನ್ನುವ ಹುಮ್ಮಸ್ಸು ಮಾತ್ರ ಐತಾಳರ ಮಾತು-ಚಿಂತನೆಗಳಲ್ಲಿ ಅಂತರಗಂಗೆಯಾಗಿ ಹರಿಯುತ್ತಲೇ ಇದ್ದುದು ನಮಗೆ ಎದ್ದು ಕಾಣುತ್ತಿತ್ತು.

ಕೆಲವು ದಿನಗಳ ಹಿಂದಷ್ಟೇ ತೀರಿಕೊಂಡ ತಂಗಿ ಜಾನ್ಹವಿಯ ಪ್ರೀತಿ ನನ್ನನ್ನು ಬೆಂಗಳೂರಿನವರೆಗೆ ಎಳೆದು ತಂದಿತು ಎನ್ನುವ ಮಾತುಗಳಿಂದಲೇ ಕೃತಿಕಾರರ ಮಾತುಗಳನ್ನು ಆರಂಭಿಸಿದರು ನಾಗ ಐತಾಳರು. ಅವರ ಕಾವ್ಯನಾಮ ‘ಅಹಿತಾನಲ’. ಈ ಹೆಸರು ನನಗೆ ಪರಿಚಯವಾಗಿ ಕೆಲವು ತಿಂಗಳುಗಳೇ ಸಂದಿದೆ. ಕಳೆದ ಬಾರಿ ಅಹಿತಾನಲರು ಬೆಂಗಳೂರಿಗೆ ಬಂದಾಗ ಚಾಮರಾಜಪೇಟೆಯ ‘ ಭಾಗೀರಥಿ’ ಮನೆಯಲ್ಲಿ ತಮ್ಮ ಇನ್ನೊಂದು ಕೃತಿ ‘ಕಡಲಾಚೆಯ ಕನ್ನಡಿಗರು ಕಂಡ ಕಾರಂತ ’ ಪುಸ್ತಕವನ್ನು ನನ್ನ ಕೈಗಿತ್ತಿದ್ದರು.

ಸನ್‌ 1967ರಲ್ಲಿ ಐತಾಳರು ಅಮೆರಿಕಾ ಬಸ್ಸು ಹತ್ತಿದಾಗ ಅವರ ಅಮ್ಮ ಕೇಳಿದ್ದರಂತೆ- ‘ಯಾವಾಗ ವಾಪಸ್ಸು ಬರ್ತೀಯಾ ? ’ ಜೇಬಿನಲ್ಲಿ 8 ಡಾಲರು ಇಟ್ಟುಕೊಂಡು, ಷಣ್ಮುಖ ಸಾಹಸಕ್ಕೆ ಹೊರಟಿದ್ದ ಐತಾಳರು, ‘3 ವರ್ಷದಲ್ಲಿ ಬಂದುಬಿಡ್ತೀನಿ’ ಅಂತ ಪ್ರಾಮಾಣಿಕವಾಗಿ ನುಡಿದಿದ್ದರು. ಆ ಮಾತುಗಳು ಮಥಿಸಿ ಇವತ್ತಿಗೆ ಮೂರು ದಶಕದ ಮೇಲೆ 4 ವರ್ಷಗಳು ತುಂಬಿವೆ.

Naga Aithalಹೀಗೇಕಾಯಿತು ? ಅದನ್ನು ತಿಳಿಯಬೇಕಾದರೆ ‘....ದಿನಚರಿಯಿಂದ ’ ಪುಸ್ತಕವನ್ನು ನೀವು ಖರೀದಿಸಿ ಓದಬೇಕು. ನಮ್ಮ ದೇಶ ಬಿಟ್ಟು ಇಲ್ಲಿಗೆ ಬಂದೆನೇ ಎನ್ನುವ ಅಪರಾಧಿ ಪ್ರಜ್ಞೆ, ಕನ್ನಡ ಪರಿಸರದಿಂದ ದೂರಾಗಿ ಬಿಟ್ಟೆನೇ ಎನ್ನುವ ದುಗುಡ ಸದಾ ಕಾಡುತ್ತಿದ್ದ ಅಂದಿನ ದಿನಗಳಲ್ಲಿ ಐತಾಳರು ತಮಗೆ ತಾವೇ ಸಮಾಧಾನ ಪಡಿಸಿಕೊಳ್ಳುವಂತೆ ಹೇಳಿಕೊಂಡರಂತೆ- ‘ ಕನ್ನಡ ಸಾಂಸ್ಕೃತಿಕ ಪರಂಪರೆಯಿಂದ ದೂರವಾಗಬಾರದು, ಅದು ಇನ್ನೂ ಹತ್ತಿರವಾಗಲು ನಾನೂ ಏನಾದರು ಕಾಣಿಕೆ ಕೊಡುತ್ತಲೇ ಅಮೆರಿಕಾದಲ್ಲಿ ನೆಲೆಸಬೇಕು.’ ಆಗಿನಿಂದಲೇ ಪರಕೀಯ ವೇದನೆಯಿಂದ ಹೊರಬರುವುದಕ್ಕೆ ಕನ್ನಡ ಪ್ರಜ್ಞೆ ನನಗೆ ಊರುಗೋಲಾಯಿತು’ ಎಂದು ಐತಾಳರು ಹೇಳಿ ಸ್ವಲ್ಪ ಹೊತ್ತು ಸರಿದಮೇಲೆ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕವಿ ಮನಸ್ಸು ಶಿವರುದ್ರಪ್ಪನವರು ಒಂದು ನುಡಿಗಟ್ಟಿನಲ್ಲಿ ಇಡೀ ಸಂದರ್ಭವನ್ನು ವಿವರಿಸಿದರು : ವಿರಹದಲ್ಲಿ ಪ್ರೀತಿ ಜಾಸ್ತಿ !

**

ಎರಡು ದಿವಸದಲ್ಲಿ ಬಿಡುಗಡೆಗೆ ಕಾದಿರುವ ಪುಸ್ತಕವನ್ನು ಓದಿಕೊಂಡು ಶಿವರುದ್ರಪ್ಪನವರು ಸಮಾರಂಭಕ್ಕೆ ಬಂದಿದ್ದರು. ಅವರೂ ಮೂರು ಬಾರಿ ಅಮೆರಿಕಾ ಪ್ರವಾಸ ಮಾಡಿ ಬಂದವರು. ಉತ್ತರ ಅಮೆರಿಕಾದಲ್ಲಿ ಹೋದೆಡೆಯಲ್ಲೆಲ್ಲ ಕನ್ನಡಿಗರ ಅವ್ಯಾಜ ಪ್ರೀತಿ ಕಂಡು ಅವರ ಆತಿಥ್ಯ ಉಂಡು ಬಂದವರು. ಒಮ್ಮೆ ಸಮುದಾಯದಲ್ಲಿ , ಕೆಲವೊಮ್ಮೆ ಏಕಾಕಿಯಾಗಿ ಕನ್ನಡತನವನ್ನು ಕಾಪಿಟ್ಟುಕೊಳ್ಳಲು ಪ್ರೀತಿಯಿಂದ ಕಷ್ಟಪಡುವ ಅಮೆರಿಕಾ ಕನ್ನಡಿಗ ಬಂಧುಗಳನ್ನು ಮನಸಾ ನೆನೆದರು. ಕನ್ನಡ ಅಕ್ಷರ ಪರಂಪರೆ ಅಲ್ಲಿ ಜೀವಂತವಾಗಿಡಲು ಶ್ರಮಿಸಿದ, ಶ್ರಮಿಸುತ್ತಿರುವ ಅನೇಕರನ್ನು ತುಂಬು ಹೃದಯದಿಂದ ಸ್ಮರಿಸಿಕೊಂಡರು. ವಿಶೇಷವಾಗಿ ‘ಅಮೆರಿಕನ್ನಡ’ ಪತ್ರಿಕೆಯ ಮೂಲಕ ಬರೆಯುವ ಮನಸ್ಸುಗಳಿಗೆ ಪ್ರೋತ್ಸಾಹ ಕೊಟ್ಟ ಶಿಕಾರಿಪುರ ಹರಿಹರೇಶ್ವರ, ಭಾರತದ ಬೃಹತ್‌ ಬೇಲಿ ಕೃತಿಕಾರ ಡಾ.ಎಚ್‌.ಕೆ. ಚಂದ್ರಶೇಖರ್‌, ಶಶಿಕಲಾ, ಡಾ. ಎಂ.ಎಸ್‌. ನಟರಾಜ್‌ ಅವರ ‘ ನಾನೂ ಅಮೆರಿಕನ್‌ ಆಗಿಬಿಟ್ಟೆ ’ ಮುಂತಾದ ಅಮೆರಿಕಾ ಕನ್ನಡ ಕವಿ ಕಾವ್ಯ ಪರಂಪರೆಯನ್ನು ನೆನೆಯುವಲ್ಲಿ ಧನ್ಯತಾಭಾವ ತಾಳಿದರು ಜಿಎಸ್‌ಎಸ್‌.

**

ಕೃತಿಕಾರರನ್ನು ಕುರಿತು, ಕೃತಿಯ ಒಳನೋಟಗಳನ್ನು ಕುರಿತು ಡಾ. ಎಲ್‌. ಎಸ್‌. ಲಕ್ಷ್ಮಿನಾರಾಯಣಭಟ್ಟರು ಸವಿಸ್ತಾರವಾಗಿ ಮಾತನಾಡಿದರು. ಐತಾಳರ ಕೃತಿಯಲ್ಲಿನ ಬದುಕನ್ನು ಗ್ರಹಿಸುವ , ಸಹಿಸಿ ಸಾಗುವ ಸೂಕ್ಷ್ಮ ಸಂವೇದನೆಗಳ ಪರಿಚಯವನ್ನು ಉದಾಹರಣೆಗಳ ಸಮೇತ ವ್ಯಾಖ್ಯಾನಿಸಿದರು. ಅಂದಹಾಗೆ, ಭಟ್ಟರು ಉದಯವಾಣಿ ಪತ್ರಿಕೆಯಲ್ಲಿ ವಾರ ಬಿಟ್ಟು ವಾರ ಶುಕ್ರವಾರದ ಅಂಕಣ ‘ ಪರಸ್ಪರ’ ಬರೆಯುತ್ತಿದ್ದಾರೆ. ಇವತ್ತಿನ ಸಂಚಿಕೆಯಲ್ಲಿ ಅವರು ಬರೆದಿರುವ ಲೇಖನದ ಶೀರ್ಷಿಕೆ ‘ ಕನ್ನಡ ಪುಸ್ತಕ ಲೋಕಕ್ಕೆ ಅಮೆರಿಕದ ಉಡುಗೊರೆ’.

ಪುಸ್ತಕ ಬಿಡುಗಡೆ ಸಮಾರಂಭ ನಡೆದದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಮೂರನೇ ಮಹಡಿಯ ‘ಪಂಪ ’ ಸಭಾಂಗಣದಲ್ಲಿ. ಪುಸ್ತಕ ಪ್ರೀತಿಯ, ಐತಾಳರ ಪ್ರೀತಿಯ ಜನ ನೆರೆದಿದ್ದ ಸಭೆಯಲ್ಲಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರು, ಗೌರವ ಕಾರ್ಯದರ್ಶಿ ಪುಂಡಲೀಕ ಹಾಲಂಬಿ, ಹೋಟಲ್‌ ಉದ್ಯಮಿ ಬಾಯರಿ ಉಪಸ್ಥಿತರಿದ್ದರು. ಬಿಡುಗಡೆ ಸಮಾರಂಭ ಏರ್ಪಡಿಸಿದವರು ‘ ಉಪಾಸನಾ ’ ಸಂಸ್ಥೆಯ ಉತ್ಸಾಹಿ ಜೆ.ಮೋಹನ್‌. ಅವರ ನಿಲಯದ ಕಲಾವಿದರ ಗೀತಮಾಧುರ್ಯ ಕಾರ್ಯಕ್ರಮದಿಂದ ಆರಂಭವಾದ ಸಭೆ ಮೋಹನ್‌ ಅವರ ವಂದನಾರ್ಪಣೆಯಾಂದಿಗೆ ಕೊನೆ ಆಯಿತು. ರಾಮಣ್ಣ ಅವರ ಕಾರ್ಯಕ್ರಮ ನಿರೂಪಣೆ ಔಚಿತ್ಯಪೂರ್ಣ. ಕಾರ್ಯಕ್ರಮ ಮುಗಿದ ನಂತರವೂ ಐತಾಳರಿಗೆ ಬಿಡುವಿರಲಿಲ್ಲ. ತಮ್ಮ ಅಭಿಮಾನಿಗಳು ಕೌಂಟರ್‌ನಲ್ಲಿ ಖರೀದಿಸಿ ತಂದ ಪುಸ್ತಕಗಳಿಗೆ ಹಸ್ತಾಕ್ಷರ ಹಾಕುತ್ತಲೇ ಇದ್ದರು.

ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ

ಮುನ್ನುಡಿ : ನಳಿನಿ ಮಯ್ಯ ; ಬೆನ್ನುಡಿ : ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟ.

ಪ್ರಕಾಶಕರು : ವಸಂತ ಪ್ರಕಾಶನ , ನಂ 10, ತುಳಸಿವನಂ, ಬೆಂಗಳೂರು-53

ಪುಟಗಳು : 394

ಬೆಲೆ : 250

Thank you for choosing Thatskannada.com

shami.sk@greynium.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X