• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಮಂಚದಲ್ಲಿ ಮಲಗಿದ ಮಗನ ಕಾಲಬುಡದಲ್ಲಿ ಕುಳಿತ, ಆತಂಕ ಹೆಪ್ಪುಗಟ್ಟಿದ ಕಣ್ಣುಗಳ ಹೆಣ್ಣುಮಗಳ ಕೇಳಿ- ದೀಪಾವಳಿ ಎಂದರೇನು ?

By Staff
|

*ಎಸ್ಕೆ.ಶಾಮಸುಂದರ, ದೊರೆಸ್ವಾಮಿ ರಾಮರಾಜ್‌

ದೀವಳಿಗೆ ಎಂದರೆ ಏನು ? ಇದೆಂಥ ಪ್ರಶ್ನೆ ಅನ್ನುವಿರಾ ?

ದೀಪಾವಳಿ ಎಂದರೆ ಕಣ್ಣು ತುಂಬುವುದು ಬೆಳಕು. ಕಿವಿ ತುಂಬುವುದು ಶಬ್ದ. ಎದೆ ತುಂಬುವುದು ಸಂಭ್ರಮ. ಹೌದು, ಪ್ರತಿಯಾಂದು ಹಬ್ಬದ ಬೀಜವೂ ಸಂಭ್ರಮವೇ. ಅದರಲ್ಲೂ ದೀಪಾವಳಿ ಬೆಳಕಿನ ಹಬ್ಬ. ಎದೆಯಾಳಗಿನ, ಮನುಷ್ಯ ಮನುಷ್ಯರ ನಡುವಿನ, ಊರು ಕೇರಿ ಕೋಶಗಳ ನಡುವಿನ- ಕತ್ತಲೆ ತೊಡೆದು ಅರಿವಿನ ವಿಕಾಸದ ಬೆಳಕು ಬೆಳಗಲಿ ಎಂದು ಹಾರೈಸುವ ಅರ್ಥಪೂರ್ಣ ದಿನ, ದೀಪಾವಳಿ. ಇದೆಲ್ಲವೂ ದೀಪಾವಳಿಯ ಬಗೆಗಿನ ನಮ್ಮೊಳಗಿನ ಕಲ್ಪನೆಗಳು. ಬಾಲ್ಯದಿಂದಲೂ ಪೋಷಿಸಿಕೊಂಡು ಬಂದ ನಂಬಿಕೆಗಳು. ಆದರೆ, ಕಣ್ಣಿಗೆ ಪಟ್ಟಿಕೊಂಡು ಮಂಚದಲ್ಲಿ ಮಲಗಿದ ಮಗನ ಕಾಲಬುಡದಲ್ಲಿ ಕುಳಿತ, ಆತಂಕ ಹೆಪ್ಪುಗಟ್ಟಿದ ಕಣ್ಣುಗಳ ಹೆಣ್ಣುಮಗಳನ್ನು ಕೇಳಿ- ‘ಇನ್ನೆಂದೂ ದೀಪಾವಳಿ ಆಚರಿಸೊಲ್ಲ ಸಾರ್‌..’ ಸಮಾಧಾನ ಹೇಳಲು ಶಬ್ದಗಳೇ ನಿಲುಕುವುದಿಲ್ಲ .

ಅದು ದೀಪಾವಳಿಯ ಇನ್ನೊಂದು ಮುಖ

Minto Ophthalmic Hospital,

T P Kailasam Square, Pampa Mahaakavi Road,

Chamarjapet,

Bangalore – 560 002,

Telephone : 9180 6707176, 91806701646.

ದೀಪಾವಳಿಯ ಇನ್ನೊಂದು ಮುಖವನ್ನು ಕಾಣಲು ಮೇಲಿನ ವಿಳಾಸಕ್ಕೆ ಭೇಟಿ ಕೊಡಬೇಕು. ದೀಪಾವಳಿ ಬಂತೆಂದರೆ ಸಾಕು- ‘ಮಿಂಟೊ ಕಣ್ಣಾಸ್ಪತ್ರೆ’ಯ ವೈದ್ಯರಿಗೆ ಸಿಬ್ಬಂದಿಗೆ ಒಂದು ರೀತಿಯ ಆತಂಕ, ಧಾವಂತ. ಇದು ಈ ವರ್ಷದ ಕತೆಯಲ್ಲ , ಪ್ರತಿವರ್ಷದ್ದು . ಪಟಾಕಿಗೆ ಮುಚ್ಚಿಟ್ಟ ಚಿಪ್ಪು ತಗುಲಿ ಆ ಹುಡುಗನ ಕಣ್ಣು ಘಾಸಿಗೊಂಡಿದೆ, ಗುರಿ ತಪ್ಪಿಬಂದ ರಾಕೆಟ್‌ ಚುಚ್ಚಿ ಆ ಹುಡುಗಿಯ ಕಣ್ಣುಗುಡ್ಡೆಯೇ ತೂತಾಗಿದೆ.. ಮಿಂಟೊ ಆಸ್ಪತ್ರೆಯಲ್ಲಿ ಇಂಥ ಪ್ರಕರಣಗಳು ಒಂದೇ, ಎರಡೇ...

Dr R Vathsala, medical superintendent, Regional Institute of Opthamaology, Minto Ophthalmic Hospital‘ಪಟಾಕಿಗಳನ್ನು ಮೊದಲು ನಿಷೇಧಿಸಿ’..

ಹಾಗೆಂದದ್ದು ಕಣ್ಣು ಹಾಳಾದ ಬಾಲಕನ ತಾಯಿಯಲ್ಲ ; ಡಾ. ಆರ್‌.ವತ್ಸಲಾ . MS, DOMS. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ನೇತ್ರಶಾಸ್ತ್ರದ ಪ್ರೊಫೆಸರ್‌ ಹಾಗೂ ಮಿಂಟೊ ಕಣ್ಣಾಸ್ಪತ್ರೆ ಪ್ರಾದೇಶಿಕ ಸಂಸ್ಥೆಯ ಅಧೀಕ್ಷಕರಾದ ಡಾ.ವತ್ಸಲಾ ಪಟಾಕಿ ಮಾತೆತ್ತಿದರೆ ಸಾಕು, ಖಿನ್ನರಾಗುತ್ತಾರೆ.

ದೀಪಾವಳಿಯ ಮೂರು ದಿನಗಳಲ್ಲಿ 60 ಪ್ರಕರಣಗಳು ಆಸ್ಪತ್ರೆಯಲ್ಲಿ ದಾಖಲಾಗಿವೆ. ಅದರಲ್ಲಿ 30 ಮಂದಿ 15 ವರ್ಷಕ್ಕಿಂಥ ಮೇಲ್ಪಟ್ಟವರು. 18 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. 9 ಮಂದಿಯ ಕೊರೆನ ಘಾಸಿಗೊಂಡಿದೆ. ದುರಾದೃಷ್ಟವಶಾತ್‌ 5 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ನಿಮಗೆ ಗೊತ್ತಾ . ಇದು ಸಂಪೂರ್ಣವಾಗಿ ತಡೆಗಟ್ಟಬಹುದಾದ ಮನುಷ್ಯ ನಿರ್ಮಿತ ದುರಂತ.

ಅಂಕಿ ಅಂಶಗಳನ್ನು ಮುಂದಿಟ್ಟು , ‘ಪಟಾಕಿ ನಿಷೇಧಿಸಬೇಕು’ ಎಂದು ಹೇಳಿದ ಡಾ.ವತ್ಸಲಾ ಎದುರು ಕೂತ ನಮಲ್ಲಿನ ಪತ್ರಕರ್ತನ ನಿರ್ಲಿಪ್ತತೆ ತಣ್ಣಗಾಗಿ, ತೇವ ಒಸರತೊಡಗಿತ್ತು . ಸಂದರ್ಭವೇ ಅಂಥಾದ್ದು .

ಅಂದಹಾಗೆ, ಮೇಲೆ ಹೇಳಿದ ಅಂಕಿಅಂಶಗಳು ಮಿಂಟೊ ಆಸ್ಪತ್ರೆಯಲ್ಲಿ ದಾಖಲೆಯಾದ ವಿವರಗಳು ಮಾತ್ರ. ಬೆಂಗಳೂರಿನಲ್ಲಿ ಸಾಕಷ್ಟು ಖಾಸಗಿ ಕಣ್ಣಾಸ್ಪತ್ರೆಗಳಿವೆ. ಅವುಗಳಲ್ಲಿ ಪಟಾಕಿ ಸಿಡಿತದ ಎಷ್ಟು ದುರಂತದ ಪ್ರಕರಣಗಳು ದಾಖಲಾಗಿರಬಹುದು ? ಲೆಕ್ಕ ನಿಮ್ಮ ಊಹೆಗೇ ಬಿಟ್ಟದ್ದು .

***

‘ಎಷ್ಟು ಖರ್ಚಾದರೂ ಚಿಂತಿಲ್ಲ . ಟ್ರಾನ್ಸ್‌ಪ್ಲಾಂಟೇಶನ್‌ ಮಾಡಿದರೂ ಸರಿ. ಹುಡುಗಿಗೆ ದೃಷ್ಟಿ ಬರಬೇಕು. ಆದರೆ, ವೈದ್ಯರು ಕೈ ಚೆಲ್ಲಿದ್ದಾರೆ. ಇಡೀ ಕಣ್ಣು ಹಾಳಾಗಿದೆಯಂತೆ’. ಕಣ್ಣು ಕಳಕೊಂಡ 15 ವರ್ಷ ವಯಸ್ಸಿನ ಪ್ರಿಯಾಳ ಕುರಿತು ಹೇಳುವ ಆಕೆಯ ಆಂಟಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಗಾಂಧಿನಗರದ ಪ್ರಿಯಾ 10ನೇ ತರಗತಿ ವಿದ್ಯಾರ್ಥಿನಿ. ಸೇವಾ ಆಶ್ರಮ ಶಾಲೆಯ ವಿದ್ಯಾರ್ಥಿನಿ. ದಿವಾಳಿ ಸಂಭ್ರಮವ ಕಣ್ಣು ತುಂಬಿಸಿಕೊಳ್ಳುತ್ತಿದ್ದ ಪ್ರಿಯಾಳ ಎಡಗಣ್ಣಿಗೆ ರಾಕೆಟ್‌ ಚುಚ್ಚಿಕೊಂಡಿದೆ. ಪರಿಣಾಮವಾಗಿ ಕಣ್ಣು ಪೂರ್ಣ ಹಾಳು. ಈಗ ಹೇಳಿ, ದೀಪಾವಳಿ ಎಂದರೆ ಬೆಳಕಿನ ಹಬ್ಬ ಎಂದು ಧೈರ್ಯವಾಗಿ ಹೇಳುತ್ತೀರಾ ?

ಮುಳಬಾಗಿಲಿನ 12 ವರ್ಷದ ವಿನಯ್‌, ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಹೊಸೂರಿನ ಮಣಿಕಂಠ, ಕನಕಪುರದ 60 ವರ್ಷದ ಬಸಪ್ಪ , ಮುನಿರೆಡ್ಡಿಪಾಳ್ಯದ 7 ನೇ ತರಗತಿ ವಿದ್ಯಾರ್ಥಿ ಕಾಂತರಾಜು, ಚಿಕ್ಕಬಳ್ಳಾಪುರದ 5 ನೇ ತರಗತಿ ವಿದ್ಯಾರ್ಥಿ ನಂದೀಶ, ಯಲಹಂಕದ ಮಹೇಶ... ದೀಪಾವಳಿ ಕರಾಳ ನೆನಪುಗಳನ್ನು ತುಂಬಿಕೊಂಡ ನತದೃಷ್ಟರ ಸಂಖ್ಯೆ ಬೆಳೆಯುತ್ತದೆ.

ಇದಕ್ಕೆಲ್ಲಾ ಯಾರು ಹೊಣೆ ?

ಯಾರ ಮೇಲೆ ಗೂಬೆ ಕೂರಿಸುವುದು- ಸಾಮಾಜಿಕ ಭದ್ರತೆ, ವೈದ್ಯಕೀಯ ವಿಮೆ ಅಥವಾ ಸಾಮಾಜಿಕ ಜಾಗೃತಿ ಇರದ- ಕಲ್ಪಿಸದ ವ್ಯವಸ್ಥೆಯನ್ನಾ ? ಅಥವಾ ನಮ್ಮ ನಿರ್ಲಕ್ಷತೆಯನ್ನಾ ? ಅಜ್ಞಾನವನ್ನಾ ? ವಿಧಿಯನ್ನಾ ? ಯಾರನ್ನು ?

‘ಪಟಾಕಿಯಿಂದ ಗಾಯಗೊಂಡವರು ಮೆಡಿಕೊ-ಲೀಗಲ್‌ ಕೇಸುಗಳ ವ್ಯಾಪ್ತಿಗೆ ಬರುವುದಿಲ್ಲ . ಹಾಗಿದ್ದಲ್ಲಿ ಯಾರನ್ನು ದೂಷಿಸುವುದು, ದುರಂತಕ್ಕೆ ಯಾರನ್ನು ಹೊಣೆಗಾರರನ್ನಾಗಿಸುವುದು. ಕೆಲವರು 12 ವರ್ಷದೊಳಗಿನ ಮಕ್ಕಳು. ಅವರ ದೃಷ್ಟಿಯನ್ನು ಶಾಶ್ವತವಾಗಿ ನಾಶಪಡಿಸಿದವರಾದರೂ ಯಾರು ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಮಾಜವನ್ನು ನಾನು ಆಗ್ರಹಿಸುತ್ತೇನೆ- ಪಟಾಕಿಗಳನ್ನು ನಿಷೇಧಿಸಿ’ ಎನ್ನುತ್ತಾರೆ ಡಾ. ವತ್ಸಲಾ. ಅವರ ಆಗ್ರಹಕ್ಕೆ ನಾವೂ ದನಿಗೂಡಿಸೋಣ.

ದೀಪಾವಳಿಯಿಂದಲೇ ಆಂದೋಲನ ಶುರುವಾಗಲಿ..

ಇನ್ನು ತಡ ಮಾಡುವಂತಿಲ್ಲ . ದೀಪಾವಳಿಯ ಕರಾಳ ಮುಖ- ಪಟಾಕಿಗಳ ಕುರಿತು ಜಾಗೃತಿ ಆಂದೋಲನ ಶುರುವಾಗಬೇಕು. ಕಣ್ಣು ಕಳಕೊಂಡ ಪ್ರಿಯಾಳಂಥ ಮುಗ್ಧ ಎಳೆಯರನ್ನು ನೋಡಿದ ನಂತರವೂ ಸಮಾಜ ಅರಿವಿನತ್ತ ಹೆಜ್ಜೆ ಹಾಕದಿದ್ದರೆ ದೀಪಾವಳಿ ಎನ್ನುವುದು ಕತ್ತಲ ಹಬ್ಬವೆಂದು ಅರ್ಥೈಸುವ ದಿನ ದೂರವಿಲ್ಲ .

ಜಾಗೃತಿಯ ಆಂದೋಲನ ಒಬ್ಬಿಬ್ಬರಿಂದ ಸಾಧ್ಯವಾಗುವಂಥದ್ದಲ್ಲ . ಇಂಥ ಆಂದೋಲಗಳಿಗೆ ಸರ್ಕಾರಗಳನ್ನು ನೆಚ್ಚಿಕೊಳ್ಳುವಂತೆಯೂ ಇಲ್ಲ . ಸರ್ಕಾರೇತರ ಸಂಸ್ಥೆಗಳು ಪಟಾಕಿಯ ಅನಾಹುತಗಳನ್ನು ಜನರಿಗೆ ತಿಳಿಸುವ ಆಂದೋಲನವನ್ನು ಕೈಗೆತ್ತಿಕೊಳ್ಳಬೇಕು. ಇಂಥದೊಂದು ಆಂದೋಲನ ಮುಂದಿನ ದೀಪಾವಳಿ ವೇಳೆಗಾದರೂ ಜೀವಗೊಳ್ಳುತ್ತದೆಂದು ಆಶಿಸೋಣವಾ ?

ದೀಪಾವಳಿ ಹಣತೆಗಳ ಹಬ್ಬ : ಶಬ್ದಗಳ ಹಂಗು ನಮಗೇಕಯ್ಯಾ ?

Thank you for choosing Thatskannada.com

shami.sk@greynium.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more