ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

*ಶಾಮ್‌

By Staff
|
Google Oneindia Kannada News
ಕಡೆಗೂ..ಹೋಗುವುದಾದರೂ ಎಲ್ಲಿಗೆ ? ನೋಡುವುದಾದರೂ ಏನು? Sampige marada hasirele naduve...
*ಶಾಮ್‌

Wish you a Happy Journeyಬರಲೀ ಬರಲೀ ಎಂದು ಕಾಯುವುದು, ಬಂದಾಗ ಯಾಕಪ್ಪಾ ಬಂತು ಎಂದು ನಾವೇ ಚಕಿತರಾಗುವುದು ! ಈ ವೈಚಿತ್ರ್ಯ ಹೇಗಿರುತ್ತದೆಂದರೆ ಸೆಕೆ..ಸೆಖೆ ಎಂದು ಬಿಸುಸುಯ್ಯುವುದು, ಬೋರಂತ ಮಳೆ ಹೊಯ್ದರೆ ಹಾಳಾದ್ದು ಜಿಟಿಜಿಟಿ ಮಳೆ..ಎಲ್ಲಿಗೂ ಹೋಗುವ ಹಾಗಿಲ್ಲ ಎಂದು ನಮ್ಮಷ್ಟಕ್ಕೆ ನಾವೇ ಸಿಡಿಮಿಡಿಗೊಳ್ಳುವುದು. Ultimately what are you looking for ಎಂದು ನಿಮ್ಮ ಒಡನಾಡಿ ಹುಬ್ಬು ಗಂಟುಹಾಕಿಕೊಂಡು ಕೇಳಿದರೆ No problem, it is perfect ಎನ್ನುತ್ತಾ ಚಡಪಡಿಕೆಗಳನ್ನು ಒಳಗೇ ಇಟ್ಟುಕೊಂಡು ಪ್ರಶ್ನೆ ಕೇಳಿದವರನ್ನೇ ಸಮಾಧಾನಿಸಲು ಸರ್ಕಸ್‌ ಮಾಡುವುದು !

ಹೀಗೇಕಾಗುತ್ತದೆ ?

ಏಕೆಂದರೆ, ಕಾಯುವುದಕ್ಕೂ, ಕಾದದ್ದು ಕಣ್ಣ ಮುಂದೆ ಬಂದು ನಿಂತಾಗ ಅದನ್ನು ಕೈಹಿಡಿದು ಬರಮಾಡಿಕೊಳ್ಳುವುದಕ್ಕೂ ನಾವು ಸಿದ್ಧರಾಗಿರುವುದೇ ಇಲ್ಲ. ಅದಕ್ಕೇ ಒಬ್ಬ ಪಲಾಯನವಾದಿ ಹೇಳಿಬಿಟ್ಟ. Expectation is better than reaching ..ಅಂತ. ನಿಮಗೂ ಹಾಗೇ ಅನ್ನಿಸುತ್ತದಾ ?

ನನಗೆ ಅನ್ನಿಸುವುದಿಲ್ಲ.

**

ಥ್ಯಾಂಕ್ಸ್‌ ಟು ದಸರಾ, ಕರ್ನಾಟಕದಲ್ಲಿ ಈಗ ರಜೆಯ ಸಮಯ. ಎಲ್ಲ ಶಾಲೆಗಳಲ್ಲೂ ಏಕಪ್ರಕಾರವಾಗಿ ಅಲ್ಲದಿದ್ದರೂ ಹೆಚ್ಚೂ ಕಡಿಮೆ ಅಕ್ಟೋಬರ್‌ ಮೊದಲ ತೇದಿಯಿಂದ ಎರಡು ವಾರದ ರಜಾ ಬಂದಿದೆ! ಮಕ್ಕಳಿಗೆಲ್ಲಾ ಕೋಳಿ ಮಜಾ !! ಮಕ್ಕಳ ತಂದೆತಾಯಿಗಳಿಗೆ ಸಜಾ!

ಹಾಗೆ ಅಂದುಕೊಳ್ಳುವ ತಂದೆತಾಯಿಗಳನ್ನು ಅಂಡಮಾನ್‌ಗೆ ಪ್ರವಾಸ ಕಳಿಸಿ ಎಂದು ಅಪ್ಪಣೆ ಕೊಡಿಸುತ್ತೇನೆ ನಾನು. ‘ಹೋಂವರ್ಕ್‌ ಮಾಡಿದೆಯೇನೋ, ಮ್ಯಾಥ್ಸ್‌ ನಲ್ಲಿ ನೀನು ತುಂಬಾ ಪೂರು’ ಅಂತ ಇಡೀ ವರ್ಷ ಮಕ್ಕಳ ತಲೆ ತಿಂದಿರುತ್ತೀರಿ. ಅಥವಾ ಹಾಗೆ ತಿನ್ನುವವರನ್ನು ಬೆರಗಾಗಿ ನೋಡಿರುತ್ತೀರಿ. ನಿಮ್ಮ ಕಾಳಜಿಗಳು ಮುತವರ್ಜಿಗಳು ಅರ್ಥವಾಗತಕ್ಕದ್ದೇ. ಆದರೆ, ಈಗ ರಜಾ ಬಂದಿದೆ. ಮಕ್ಕಳಿಗೆ ಶಾಲೆ, ಮನೆಪಾಠದಿಂದ ಬಿಡುಗಡೆ ಘೋಷಿಸಲು, ಅವರ ಮುಗ್ಧ ಮನಸ್ಸುಗಳನ್ನು ಪ್ರಫುಲ್ಲಗೊಳಿಸಲು ಎಲ್ಲಿಗೆ ಪ್ರವಾಸ ಕರೆದುಕೊಂಡು ಹೋಗುತ್ತೀದ್ದೀರಿ ? ಈಗ ಹೇಳಿ.

**

ಎಲ್ಲ ಮರೆತು ನಾಲ್ಕುದಿನ ಎಲ್ಲಿಗಾದರೂ ಹೋಗಿಬಿಡುವುದಕ್ಕೆ ಮೊದಲು ಬೇಕಾದದ್ದು ಮಾನಸಿಕ ಸಿದ್ಧತೆ. ಆಮೇಲೆ ದುಡ್ಡು. ಜೊತೆಜೊತೆಗೆ ಪ್ಲಾನಿಂಗ್‌. ಇವೆಲ್ಲವೂ ಪಕ್ಕಾ ಆಗಿದೆ ಎಂದಾಕ್ಷಣ ರೈಯ.. ಎನ್ನುವ ಹಾಗಿಲ್ಲ. ಮುಖ್ಯ ಸಮಸ್ಯೆ ಎಂದರೆ ಕಡೆಗೂ..ಹೋಗುವುದಾದರೂ ಎಲ್ಲಿಗೆ ? ನೋಡುವುದಾದರೂ ಏನು ?

ಇಂಥ ಸಮಸ್ಯೆಗಳನ್ನು ಎದುರಿಸುವ ಅನೇಕರನ್ನು ನಾನು ಕಂಡಿದ್ದೇನೆ. ಅಷ್ಟೇ ಅಲ್ಲ, ಅನುಭವಿಸಿದ್ದೇನೆ ಕೂಡ.

ಕರ್ನಾಟಕದಲ್ಲಿ ಪ್ರವಾಸೋದ್ಯಮ ಎನ್ನುವುದು ಒಂದು ಇಂಡಸ್ಟ್ರಿಯಾಗಿ ಬೆಳೆಯದೇ ಇರುವುದು ಮೊದಲ ದುರಂತ. ತಲತಲಾಂತರಗಳಿಂದ ನಾವು ಜಪಿಸುತ್ತಾ ಬಂದಿರುವ ಹಳೇಬೀಡು, ಬೇಲೂರು, ಜೋಗ ಮುಂತಾದ ಜಾಗೆಗಳಿಗೆ ಹೋದರೆ ಉಳಿದುಕೊಳ್ಳುವುದಕ್ಕೆ ಅರಮನೆ ಬೇಡ, ಸ್ವಚ್ಛ ಕೊಠಡಿಗಳ ಅಚ್ಚುಕಟ್ಟು ಪರಿಸರ ಕಾಣಿಸುವುದಿಲ್ಲ. ‘ಜೋಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ, ಪ್ರವಾಸಿಗರ ಅನುಕೂಲಕ್ಕೆ ಮೂಲಭೂತ ಸೌಲಭ್ಯಗಳು -ಸಚಿವ’ ಎನ್ನುವಂಥ ಸುದ್ದಿಗಳನ್ನು ಬೇಡಾದಷ್ಟು ಬಾರಿ ನಾನೇ ಪ್ರಕಟಿಸಿದ್ದೇನೆ. ಮೊದಲು ಜಡತ್ವ ಆಮೇಲೆ ರೆಡ್‌ ಟೇಪಿಸಮ್‌ ಕೊನೆಗೆ ಗುತ್ತಿಗೆದಾರರ ಲಂಚದ ಪಾಶಕ್ಕೆ ಬಿದ್ದ ಸರಕಾರಿ ಅಧಿಕಾರಿಗಳಿಂದ ನಾವು ಅನುಕೂಲಗಳನ್ನು ನಿರೀಕ್ಷಿಸಿದರೆ ಎಡವುತ್ತೇವೆ. ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ಬರುವ ಅನೇಕ ಪ್ರವಾಸಿ ತಾಣಗಳಿಗೆ ನಾನು ಸ್ವತಃ ಹೋಗಿ ಬಯ್ದುಕೊಂಡು ಬಂದಿದ್ದೇನೆ. ಪಿಡಬ್ಲ್ಯುಡಿ ಗೆಸ್ಟ್‌ ಹೌಸ್‌ಗಳು ಓಬಿರಾಯನ ಕಾಲದಿಂದ ಸುಣ್ಣ ಬಣ್ಣ ಕಾಣದೆ ರಾಜಕಾರಣಿಗಳ ಮತ್ತು ಅವರ ಚೇಲಾಗಳ ಗಡಂಗುಗಳಾಗಿರುವುದನ್ನು ಕಂಡಿದ್ದೇನೆ.

ಇನ್ನು ಕೆಲವು ಕಡೆ KSTDC - ಅಂದರೆ ಪ್ರವಾಸೋದ್ಯಮದ ಹೊಣೆ ಹೊತ್ತಿರುವ ಸರಕಾರದ ಒಂದು ಸೋಮಾರಿ ಇಲಾಖೆ ಇದೆ. ಬರಗಾಲದಲ್ಲಿ ತತ್ತರಿಸುತ್ತಿರುವ ರಾಜ್ಯದಲ್ಲಿ ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಈ ನಿಗಮ ಹೇಗೆ ಕೆಲಸ ಮಾಡುತ್ತದೆ ? ಒಂದು ಉದಾಹರಣೆ ಓದಿ:

ನಮ್ಮ ಮಾರ್ಕೆಟಿಂಗ್‌ ಮೆನೇಜರ್‌ ಶ್ರೀರಾಂ ಒಂದು ವಾರದ ರಜಾ ಕಾರ್ಯಕ್ರಮ ಹಾಕಿದ್ದಾರೆ. ಅವರ ಇಟನರಿ ಹೀಗಿದೆ : ಗಂಡ, ಹೆಂಡತಿ ಮತ್ತು ಒಂದು ಮಗು. ಮೊದಲು ನೇರವಾಗಿ ಗೋವಾಗೆ ಹೋಗುವುದು. ಅಲ್ಲಿ ಎರಡು ರಾತ್ರಿ ಮೂರು ಹಗಲು ತಂಗುವುದಕ್ಕೆ ಹೋಟಲು, ಟಿಕೇಟು ವ್ಯವಸ್ಥೆ ಮೂರು ನಿಮಿಷದಲ್ಲಿ ಮುಗಿದಿದೆ. ಒಂದು ಫೋನು ಕರೆಗೆ ಏಜೆಂಟ್‌ ಬಂದ. ಎಲ್ಲ ವ್ಯವಸ್ಥೆ ಮಾಡಿ, ದುಡ್ಡು ಪಡೆದು ಕೊಂಡು ರಸೀತಿಕೊಟ್ಟು ಹೋಗಿದ್ದಾನೆ. ಈ ಈ ಮಧ್ಯೆ ಶ್ರೀರಾಂ ಅವರ ಹೆಂಡತಿಗೆ ಇನ್ನೊಂದು ಪ್ಲಾನ್‌ ಇದೆ. ಗೋವಾದಿಂದ ವಾಪಸ್ಸು ಬರುವಾಗ ಮಡಿಕೇರಿ ಮೂಲಕ ಹಾದು ಬರಬೇಕು. ಅಲ್ಲಿ ನ ರಾಜಾಸೀಟ್‌ ಹತ್ತಿರವೇ ಇರುವ ಮಯೂರ ಹೋಟಲ್‌ ಹಿಲ್‌ ವ್ಯೂ ನಲ್ಲಿ ಎರಡುದಿನ ತಂಗಬೇಕು.

ಆ ಹೋಟೆಲಿನಲ್ಲಿ ರೂಂ ಬುಕ್‌ ಮಾಡುವುದು ಹೇಗೆ ? ಇಂಟರ್‌ನೆಟ್‌ ಬುಕಿಂಗ್‌ ಪಂಟರ್‌ನೆಟ್‌ ಬುಕಿಂಗ್‌ ಮರೆತು ಬಿಡಿ. ಏನೋ..ಕೆಎಸ್‌ಟಿಡಿಸಿ ವೆಬ್‌ಸೈಟಿಗೆ ಹೋದೆ.. ಬುಕಿಂಗ್‌ ಸ್ಟೇಟಸ್‌ ನೋಡಿದೆ..ಕಾರ್ಡ್‌ ಸವರಿ ಹಾಯಾಗಿದ್ದು ಬಿಟ್ಟೆ ಎನ್ನುವುದು ಕನಸಿನ ಮಾತು. ಕಾರಣ ಸಿಂಪಲ್ಲು. ನಮ್ಮ ಸರಕಾರ ಕಂಪ್ಯೂಟರ್‌ ಸ್ಯಾವಿ !

ರೂಮು ಬುಕ್‌ ಮಾಡುವುದಕ್ಕೆ ನೀವು ಬೆಂಗಳೂರು ಮಹಾನಗರ ಪಾಲಿಕೆ ಎದುರಿಗೇ ಇರುವ ಬಾದಾಮಿ ಹೌಸ್‌ಗೆ ಮುದ್ದಾಂ ಹೋಗಬೇಕು. ಈಗಲೇ ಹೇಳುತ್ತಿದ್ದೇನೆ. ಅಲ್ಲಿ ಪಾರ್ಕಿಂಗ್‌ ಇಲ್ಲ. ಎಚ್ಚರ. ಒಳಗೆ ಕಾಲಿಟ್ಟರೆ ಕೌಂಟರ್‌ನಲ್ಲಿರುವ ಆತ ಬುಕಿಂಗ್‌ ಸ್ಟೇಟಸ್‌ ತಿಳಿದುಕೊಳ್ಳಲು ಮಡಿಕೇರಿಗೆ ಫೋನು ಮಾಡುತ್ತಾನೆ. ಮುಖ ಸೊಟ್ಟಗೆ ಮಾಡುತ್ತಾನೆ. ಮೂರು ದಿನದಿಂದ ಲೈನ್‌ಗಳೇ ಸರಿಯಿಲ್ಲ ಎಂದು ಸಮಜಾಯಿಷಿ ಕೊಡುತ್ತಾನೆ. ನಂಬರು ಕೊಡೋ ಮಾರಾಯ, ಲೈನ್‌ ಸರಿಹೋದ ಮೇಲೆ ನಾವೇ ಮಾಡುತ್ತೇವೆ ಎಂದರೆ, ಹಾಗೆಲ್ಲ ಡೈರೆಕ್ಟ್‌ ಬುಕಿಂಗ್‌ ಮಾಡುವ ಹಾಗಿಲ್ಲ ಎಂದು ಕಾನೂನು ಹೇಳುತ್ತಾನೆ. ಅಷ್ಟು ಹೊತ್ತಿಗೆ ತಲೆ ಚಿಟ್ಟುಹಿಡಿದಿರುತ್ತದೆ. ಈ ನಾನೂರ ಮೂವತ್ತು ರೂಪಾಯಿ ರೂಂನ ಆಸೆ ಬಿಟ್ಟು ಮಯೂರ ಹಿಲ್‌ ವ್ಯೂ ಪಕ್ಕದಲ್ಲೇ ಇರುವ ಪ್ರೆೃವೇಟ್‌ ಹೋಟಲು ರಾಜ್‌ ದರ್ಶಿನಿಗೆ ಪೋನು ಮಾಡಿದರೆ ಕ್ಷಣಾರ್ಧದಲ್ಲಿ 900 ರೂಪಾಯಿಗಳ ರೂಂ ಬುಕ್‌ ಆಗುತ್ತದೆ. ‘ಪರವಾಗಿಲ್ಲ, ನೀವು ಇಲ್ಲೇ ಬಂದು ದುಡ್ಡು ಕೊಡಿ, ನಿಮಗೆ ರೂಂ ರಿಸರ್ವ್‌ ಮಾಡಿರುತ್ತೇನೆ ಎನ್ನುತ್ತಾನೆ’ ಆ ವ್ಯಾಪಾರಿ. ಹೀಗೆ..ಮತ್ತು ಇನ್ನೂ ಅನೇಕ ಮುಖಗಳಲ್ಲಿ ನಮ್ಮ ಸರಕಾರಿ ಕೃಪಾ ಪೋಷಿತ ಪ್ರವಾಸೋದ್ಯಮ ಸೊರಗಿದ ಸೌತೇಕಾಯಿ ಆಗಿದೆ. ಅದ ಕುರಿತು ಬರೆಯುತ್ತಾ ಹೋದರೆ ನಿಮಗೆ ಕೇವಲ ಕಹಿ ಸುದ್ದಿಗಳೇ ಸಿಕ್ಕುತ್ತದೆ. ಅದಕ್ಕೇ ನಾನು ಬರೆಯುವುದಿಲ್ಲ !

**

ಭಾರತದಲ್ಲಿ ಪ್ರವಾಸೋದ್ಯಮವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಗಳಲ್ಲಿ ಇವತ್ತು ಕೇರಳಕ್ಕೆ ಮೊದಲ ಸ್ಥಾನ. ಈ ಕೀರ್ತಿಯನ್ನು ಕೇರಳವು ರಾಜಾಸ್ತಾನದಿಂದ ಕಸಿದುಕೊಂಡಿದೆ. ಆ ರಾಜ್ಯದ ಒಂದು ವೆಬ್‌ಸೈಟು ಹೇಗೆ User friendly ಆಗಿದೆ ? ತಿಳಿಯಲು ಕೇರಳ ಟೂರಿಸಂ ವೆಬ್‌ ಸೈಟಿಗೆ ಸುಮ್ಮನೆ ಒಮ್ಮೆ ಭೇಟಿ ಕೊಡಿ.

ಅದರ ಬಗ್ಗೆ ನಾನು ಇಲ್ಲಿ ಬರೆಯುವ ಅವಶ್ಯಕತೆ ಇಲ್ಲ. ಮುಖ್ಯವಾಗಿ Facilitator and Information provider ಆಗಿ ಕೆಲಸ ಮಾಡುವ ಅಲ್ಲಿನ ಸರಕಾರ, ಖಾಸಗಿ ಉದ್ದಿಮೆದಾರರನ್ನೂ ಹೇಗೆ ಪ್ರೋತ್ಸಾಹಿಸುತ್ತದೆ? ನೋಡಿ. ನಿಮ್ಮ ಟಿಕೇಟು, ಹೋಟಲು, ಊಟ, ಟ್ಯಾಕ್ಸಿ ವಿಚಾರವನ್ನು ಖಾಸಗಿ ಕುಶಲಿಗಳು ನೋಡಿಕೊಳ್ಳುತ್ತಾರೆ.

ಕಳೆದ ವರ್ಷ ಒಂದು ವಾರದ ರಜೆಯನ್ನು ಕಳೆಯಲು ಪ್ರಧಾನಿ ವಾಜಪೇಯಿ ಬಂದದ್ದು Gods own country ಕೇರಳಕ್ಕೆ.

**

ಸಮಸ್ಯೆಗಳು ಸಮಸ್ಯೆಗಳಷ್ಟೇ. ಕಾರಣಗಳು ಕಾರಣಗಳಷ್ಟೆ. ಕಡೆಗೂ ನಾವು ವಿಹಾರಕ್ಕೆ ಹೋಗಬೇಕು. ನೀವು ಯಾವುದೇ ರಾಜ್ಯ, ದೇಶದಿಂದ ಕರ್ನಾಟಕಕ್ಕೆ ಬರಬಹುದು. ನಮ್ಮ ರಾಜ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಿಕೊಂಡು, ಕೆಲವಾದರೂ ಸುಂದರ ಅನುಭವಗಳನ್ನು ಕಟ್ಟಿಕೊಂಡು ವಾಪಸ್ಸಾಗಬೇಕು. ಅದಕ್ಕೆ ನಾನೇನು ಮಾಡಬಲ್ಲೆ ? ನಿಮ್ಮ ಪ್ರವಾಸ ಸುರಕ್ಷಿತ ಮತ್ತು ಆನಂದದಾಯಕವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನನಗೆ ಮತ್ತು ನನ್ನ ಬಳಗಕ್ಕೆ ಬಿಡಿ. ನಾವು ಮಾಡುತ್ತೇವೆ. ಬರೆಯಿರಿ :

ನನ್ನ ಇ-ವಿಳಾಸ : [email protected]

ದೂರವಾಣಿ : 91-080-5734960

ಮೊಬೈಲ್‌ : 09845362593

Thank you for choosing Thatskannada.com
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X