ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಬಸವ : ಬಸವೇಶ್ವರ ವಚನಗಳು

By Staff
|
Google Oneindia Kannada News

ಶಿವಬಸವ : ಬಸವೇಶ್ವರ ವಚನಗಳು
ನಿಮ್ಮ ಈ ಪ್ರೀತಿಯ ಅಂಕಣಕ್ಕೀಗ 25ರ ಸಂಭ್ರಮ. ಈ ಸಂಭ್ರಮವನ್ನು ಬಸವಣ್ಣನವರ ವಚನಗಳೊಂದಿಗೆ ದ್ವಿಗುಣಗೊಳಿಸೋಣವೇ? ವಚನ ಸಾರ ಅರಿತು ಬಲ್ಲಿದರಾಗೋಣವೇ?

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
[email protected]

ಇಂದು ಮಂಥನದ ಬೆಳ್ಳಿಹಬ್ಬ! 25 ವಾರಗಳಿಂದ ನನ್ನ ಮನಸ್ಸಿನಲ್ಲಿ ಮಥಿಸಿದ ವಿಷಯಗಳನ್ನು, ಹೇಗಿದೆಯೋ ಹಾಗೇ ನಿಮ್ಮ ಮುಂದೆ ಪ್ರಕಟಪಡಿಸಿದ್ದೇನೆ. ನನಗೆ ಬರೆಯುವ ಆಸಕ್ತಿ ಖಂಡಿತ ಇರಲಿಲ್ಲ. ಆದರೆ ನನ್ನ ಮನದ ಚಿಂತನೆಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕೆಂಬ ಒಂದೇ ಆಸೆಯಿಂದ ಬರವಣಿಗೆ ಪ್ರಾರಂಭಿಸಿದೆ. ಮೊದಲಿಗೆ ಕನ್ನಡ ಜಾಗೃತಿ ಲೇಖನಗಳನ್ನು ಬರೆಯಲು ಪ್ರಚೋದನೆ ನೀಡಿದ ನನ್ನ ಮಿತ್ರ ಗಣೇಶ್‌ ಅವರಿಗೆ ಅತ್ಮೀಯ ಧನ್ಯವಾದಗಳು.

ವಿಚಿತ್ರಾನ್ನವನ್ನು ಉಣಬಡಿಸುತ್ತಿರುವ ಶ್ರೀವತ್ಸ ಜೋಶಿಯವರು ನನಗೆ ಅಂಕಣಬರಹ ಬರೆಯಲು ಸ್ಫೂರ್ತಿ ಎಂದರೆ ತಪ್ಪಲ್ಲ. ಅವರಿಗೂ ನನ್ನ ಧನ್ಯವಾದಗಳು. ನನ್ನ ಬರಹಗಳಿಗೆ ವೇದಿಕೆ ಒದಗಿಸಿಕೊಟ್ಟ ದಟ್ಸ್‌ಕನ್ನಡ ಬಳಗದ ಶ್ಯಾಮಸುಂದರ್‌ ಹಾಗು ಪ್ರಸಾದ್‌ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಲೇಖನಿಯಲ್ಲಿ ಬರೆಯುವ ತಾಳ್ಮೆ ಇರದ ನನಗೆ, ಬರಹ ತಂತ್ರಾಂಶವಿಲ್ಲದಿದ್ದರೆ ಬಹುಶ: ನಾನು ಬರೆಯಲು ತೊಡಗುತ್ತಿರಲಿಲ್ಲವೇನೋ. ಗಣಕದಲ್ಲಿ ಸುಲಭವಾಗಿ ಕನ್ನಡದಲ್ಲಿ ಬರೆಯುವ ಸೌಲಭ್ಯ ಒದಗಿಸಿದ ಬರಹದ ರೂವಾರಿಯಾದ ಶೇಷಾದ್ರಿವಾಸು ಅವರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ದಟ್ಸ್‌ಕನ್ನಡದ ಸಹ ಅಂಕಣಕಾರರಾದ ತ್ರಿವೇಣಿ, ನಟರಾಜ್‌, ಲೇಖಕರಾದ ತಳಕು ವಿ. ಶ್ರೀನಿವಾಸ್‌, ವಾಣಿ ಹಾಗೂ ನನ್ನ ಲೇಖನಗಳನ್ನು ಓದಿ ಮೆಚ್ಚಿ ಬರೆಯಲು ಪ್ರೋತ್ಸಾಹಿಸಿದ ಹಿರಿಯರಾದ ಪೆಜತ್ತಾಯರಿಗೂ ನನ್ನ ಅತ್ಮೀಯ ವಂದನೆಗಳು. ಕೊನೆಯದಾಗಿ ಆದರೆ ಮುಖ್ಯವಾಗಿ, ನನ್ನ ಲೇಖನಗಳನ್ನು ಓದಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿ, ತಪ್ಪು ಮಾಡಿದಾಗ ತಿದ್ದಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲ ನನ್ನ ಓದುಗ ಮಿತ್ರರಿಗೂ ನಾನು ಈ ಸಂದರ್ಭದಲ್ಲಿ ಚಿರಋಣಿಯಾಗಿದ್ದೇನೆ.

Basavanna25ನೇ ವಾರದ ಬರಹಕ್ಕೆ ಯಾವ ವಿಷಯ ಆರಿಸಿಕೊಳ್ಳಲಿ ಎಂದು ಯೋಚಿಸುತ್ತಿದ್ದಾಗ ಮನಸ್ಸಿಗೆ ಹೊಳೆದಿದ್ದು ಬಸವಣ್ಣನವರ ವಚನಗಳು. ಶಿವಶರಣರ ವಚನಗಳ ಬಗ್ಗೆ ಬರೆಯಬೇಕೆಂದು ಬಹಳದಿನದ ಆಸೆಯಿತ್ತು.

ಆ ಆಸೆ ಈಗ ಫಲಿಸುತ್ತಿದೆ. ನಮ್ಮ ಕನ್ನಡ ನಾಡಿನ ಎರಡು ವಿಶಿಷ್ಟ ಸಾಹಿತ್ಯ ಪ್ರಕಾರಗಳು -ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ. ಇವು ಕನ್ನಡ ಸಾಹಿತ್ಯ ಭಂಡಾರದ ಅನರ್ಘ್ಯ ರತ್ನಗಳಾಗಿವೆ.

12ನೇ ಶತಮಾನದಲ್ಲಿ ಅಂದಿನ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂಡಿಬಂದ ಶಿವಶರಣರ ವಚನಗಳು, ಸಮಾಜದಲ್ಲಿನ ಹುಳುಕುಗಳನ್ನು, ಜಾತಿ ವ್ಯವಸ್ಥೆಯ ವೈಪರೀತ್ಯಗಳನ್ನು ಲೇವಡಿ ಮಾಡಿ ಶಿವನ ಮುಂದೆ ಎಲ್ಲರೂ ಒಂದೇ ಎಂದು ಸಾರಿದ್ದವು. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮುಂತಾದ ಶಿವಶರಣರು ಜನರ ಆಡುಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸಿ, ಹಾಡಿ ಜನರಲ್ಲಿ ಶಿವನ ಬಗ್ಗೆ ಅಚಲ ಭಕ್ತಿಯ ದೀಪವನ್ನು ಬೆಳಗಿಸಿದ್ದರು. ವಿರಶೈವ ಅಥವಾ ಲಿಂಗಾಯಿತ ಮತದ ಪ್ರವರ್ತಕರಾದ ಮಹಾನ್‌ ಮಾನವತಾವಾದಿ ಬಸವಣ್ಣನವರ ವಚನಗಳ ಮಂಥನ ಮಾಡೋಣ ಬನ್ನಿ.

ಶಿವಬಸವ - ಇದು ಬಸವೇಶ್ವರ ವಚನಗಳ ಧ್ವನಿಸುರುಳಿ. ನನಗೆ ಅತ್ಯಂತ ಮೆಚ್ಚುಗೆಯಾದ ಧ್ವನಿಸುರುಳಿ. ಆಕಾಶ್‌ ಆಡಿಯೋ ಸಂಸ್ಥೆ ಹೊರತಂದಿರುವ ಈ ಧ್ವನಿಸುರುಳಿಯಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾದ ಎಂ.ಎಂ.ಕೀರವಾಣಿಯವರು, ಬಸವಣ್ಣನವರ ವಚನಗಳಿಗೆ ಮಧುರವಾದ ಸಂಗೀತ ಸಂಯೋಜಿಸಿ ಸೊಗಸಾಗಿ ಹಾಡಿದ್ದಾರೆ. ಇವರು ರಾಯಚೂರಿನ ವೀರಶೈವ ಮತಾನುಯಾಯಿಗಳು ಹಾಗೂ ಕನ್ನಡಿಗರು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ!

ಈ ಧ್ವನಿಸುರುಳಿಯಲ್ಲಿನ ಮೊದಲ ವಚನದಲ್ಲಿ ಬಸವಣ್ಣನವರು ತಾವು ಶಿವನ ವಾಹನವಾದ ನಂದಿಯ ಅಪರಾವತಾರವೆಂಬುದನ್ನು ನಿರೂಪಿಸಿದ್ದಾರೆ. ಶಿವನ ವಾಹನ ನಂದಿ ವೃಷಭನಾಗಿದ್ದಾನೆ. ಆ ವೃಷಭದ ತದ್ಭವ ರೂಪವೇ ಬಸವ.

ಅಯ್ಯಾ ನೀನು ನಿರಾಕಾರವಾಗಿದ್ದಲ್ಲಿ
ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣ

ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯನೆಂಬ ವಾಹನವಾಗಿದ್ದೆ ಕಾಣ

ಅಯ್ಯಾ ನೀನು ಆಕಾರವಾಗಿದ್ದಲ್ಲಿ
ನಾನು ವೃಷಭನೆಂಬ ವಾಹನವಾಗಿದ್ದೆ ಕಾಣ

ಅಯ್ಯಾ ನೀನೆನ್ನ ಭವವಕೊಂದೆಹೆನೆಂದು ಜಂಗಮ
ಲಾಂಛನವಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನನಾಗಿದ್ದೆ ಕಾಣ
ಕೂಡಲ ಸಂಗಮದೇವ ಅಯ್ಯಾ ಕೂಡಲ ಸಂಗಮ ದೇವ

ಶಿವನ ಆಣತಿಯಂತೆ ಎಲ್ಲವೂ ನಡೆಯುತ್ತದೆ. ಅದನ್ನು ಮೀರುವ ಶಕ್ತಿ ತನಗಿಲ್ಲ ಎಂದು ಬಸವಣ್ಣನವರು ಈ ಕೆಳಗಿನ ವಚನದಲ್ಲಿ ತಿಳಿಸಿಕೊಡುತ್ತಾರೆ.

ನೀ ಹುಟ್ಟಿಸಿದಲ್ಲಿ ಹುಟ್ಟಿ ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯಾ
ನೀ ಇರಿಸಿದಲ್ಲಿ ಇರದೇ ಎನ್ನ ವಶವೇ ಅಯ್ಯಾ
ಅಕಟಕಟ ಎನ್ನವನೆನ್ನವನೆನ್ನಯ್ಯಾ ಕೂಡಲಸಂಗಮದೇವಯ್ಯಾ...

ಬಸವಣ್ಣನವರ ಶಿವಭಕ್ತಿ ಎಷ್ಟು ಉತ್ಕಟವಾಗಿತ್ತೆಂಬುದನ್ನು ಈ ವಚನದಲ್ಲಿ ತಿಳಿಯಬಹುದು. ಶಿವನ ನೆನಪೆ ತನಗೆ ಪ್ರಾಣ ಎಂದು ಅವರು ಸಾರಿದ್ದಾರೆ. ಈ ಗೀತೆಯನ್ನು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸೊಗಸಾಗಿ ಹಾಡಿದ್ದರೆ.

ಎನಗೆ ನಿಮ್ಮ ನೆನಹಾದಾಗಲೇ ಉದಯ
ಎನಗೆ ನಿಮ್ಮ ಮರೆ ಆದಾಗಲೇ ಅಸ್ತಮಯ ।

ಎನಗೆ ನಿಮ್ಮ ನೆನಹವೆ ಜೀವನ
ಎನಗೆ ನಿಮ್ಮ ನೆನಹವೆ ಪ್ರಾಣಕಾಣ ತಂದೆ ।

ಎನ್ನ ಹೃದಯದಲ್ಲಿ ನಿಮ್ಮ ಚರಣದುಂಬಿಗೆಯನ್ನೊತ್ತಯ್ಯಾ
ಓಂ ನಮ: ಶಿವಾಯ । ಓಂ ನಮ: ಶಿವಾಯ ।
ವದನದಲ್ಲಿ ನಿಮ್ಮ ಷಡಕ್ಷರಿಯ ಬರೆಯಯ್ಯಾ
ಕೂಡಲಸಂಗಮದೇವ ಕೂಡಲಸಂಗಮದೇವ

ಶಿವಪೂಜೆಯನ್ನು ಕಾಟಾಚಾರಕ್ಕೆ ಮಾಡದೆ, ಸಮಯಕ್ಕೆ ಸರಿಯಾಗಿ, ಸಾವು ಸಮೀಪಿಸುವ ಮುನ್ನವೇ ಮಾಡಬೇಕೆಂದು ತಿಳಿಸಿಕೊಡುವ ಈ ವಚನ ಬಹಳ ಅರ್ಥಗರ್ಭಿತವಾಗಿದೆ.

ಹೊತ್ತಾರೆ ಎದ್ದು ಅಗ್ಗವಣಿಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸೋ ಲಿಂಗವ
ಹೊತ್ತಾರೆ ಎದ್ದು...

ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯು ಮುಟ್ಟದ ಮುನ್ನ
ತುತ್ತುಗೆಲಸವ ಮಾಡು ನಮ್ಮ ಕೂಡಲಸಂಗಮದೇವನ
ಹೊತ್ತಾರೆ ಎದ್ದು...

ಹೆಣ್ಣು, ಹೊನ್ನು, ಮಣ್ಣು ಮಾಯೆಯೆಂಬುದು ಲೋಕದ ರೂಢಿಮಾತು. ಹೆಣ್ಣು ಎಂಬ ಮಾಯೆ ತಾಯಿ, ಹೆಂಡತಿ ಮತ್ತು ಮಗಳಾಗಿ ಬಸವಣ್ಣನವರಿಗೆ ಈ ರೀತಿ ಕಾಣಿಸಿಕೊಳ್ಳುತ್ತಾರೆ.

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗುವಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ

ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೆ ಬಲ್ಲಿರಿ ಕೂಡಲಸಂಗಮದೇವ
ನೀವೆ ಬಲ್ಲಿರಿ ಕೂಡಲಸಂಗಮದೇವ

ಆಸೆಯೇ ದು:ಖಕ್ಕೆ ಮೂಲ ಎಂಬುದು ಜನಜನಿತ. ಈ ಆಸೆಯೆಂಬ ಪಾಶದಲ್ಲಿ ಸಿಕ್ಕಿಕೊಂಡು ಸಂಸಾರ ಬಂಧನದಲ್ಲಿ ತೊಳಲಾಡುತ್ತಿರುವ ತನಗೆ ಈ ಬಂಧನದಿಂದ ಮುಕ್ತಿ ದೊರಕಿಸುವಂತೆ ಬಸವಣ್ಣನವರು ಶಿವನನ್ನು ಹೀಗೆ ಬೇಡುತ್ತಾರೆ.

ಆಶೆಯೆಂಬ ಪಾಶದಲ್ಲಿ ಭವಬಂಧನನಾಗಿದ್ದೆನಯ್ಯಾ
ಸಕೃತು ನಿಮ್ಮ ನೆನೆಯಲು ಎನಗೆ ತೆರೆಹಿಲ್ಲವಯ್ಯಾ
ಕರುಣಾಕರ ಅಭಯಕರ ವರದ ನೀ ಕರುಣಿಸಯ್ಯಾ
ಸಂಸಾರ ಬಂಧನವನು ಮಾಣಿಸಿ ಎನಗೆ ಕೃಪೆಮಾಡಿ
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಿ
ಭಕ್ತಜನ ಮನೋವಲ್ಲಭ ಕೂಡಲಸಂಗಮದೇವ

ಭಕ್ತರು ಭಗವಂತನನ್ನು ಸ್ತುತಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಆ ಭಕ್ತಿ ಭಗವಂತನ್ನನ್ನೇ ಹೀಗೆಳೆಯುವ ಮಟ್ಟಕ್ಕೆ ಹೋಗುತ್ತದೆ! ಬಸವಣ್ಣನವರು ತಮ್ಮ ಸ್ಥಿತಿಗೆ ಮರುಗಿ ಶಿವನನ್ನು ಹೀಗೆ ದೂರಿದ್ದಾರೆ.

ಅಕಟಕಟಾ ಶಿವನಿನಗಿನಿತು ಕರುಣವಿಲ್ಲಾ
ಅಕಟಕಟಾ ಶಿವನಿನಗಿನಿತು ಕೃಪೆಯಿಲ್ಲಾ
ಏಕೆ ಹುಟ್ಟಿಸಿದೆ ಇಹಲೋಕ ದು:ಖಿಯಾ
ಏಕೆ ಹುಟ್ಟಿಸಿದೆ ಪರಲೋಕ ದೂರನಾ
ಏಕೆ ಹುಟ್ಟಿಸಿದೆ ಕೂಡಲಸಂಗಮದೇವ ಕೇಳಯ್ಯಾ

ಆ ಪದವಿ ಬೇಕು, ಈ ಪದವಿ ಬೇಕು ಎಂದು ಹಲುಬುವವರು ಅನೇಕ ಮಂದಿ. ಆದರೆ ತನಗೆ ವಿಶ್ವದ ಶ್ರೇಷ್ಠ ಪದವಿಗಳಾದ ಸೃಷ್ಟಿ, ಸ್ಥಿತಿ, ಲಯವನ್ನು ಮಾಡುವ ದೇವ ಪದವಿಯೂ ಬೇಡವೆಂದು ತಿರಸ್ಕರಿಸುವ ಬಸವಣ್ಣನವರು, ಶಿವನ ಸದ್ಭಕ್ತರ ಪಾದಸೇವೆ ಮಾಡುವ ಮಹಾಪದವಿಗಾಗಿ ಹಾತೊರೆಯುತ್ತಾರೆ. ಇದು ಅವರ ಶಿವಭಕ್ತಿಯ ಹಿರಿಮೆಯನ್ನು ತೊರಿಸುತ್ತದೆ.

ಬ್ರಹ್ಮ ಪದವಿಯನೊಲ್ಲೆ
ವಿಷ್ಣು ಪದವಿಯನೊಲ್ಲೆ
ರುದ್ರ ಪದವಿಯನೊಲ್ಲೆ
ನಾನು ಮತ್ಯಾವ ಪದವಿಯನೊಲ್ಲೆನಯ್ಯಾ
ಕೂಡಲಸಂಗಮದೇವ ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರೆದಿ ಮಹಾಪದವಿಯ ಕರುಣಿಸಯ್ಯಾ

ವೀರಶೈವ ಮತದಲ್ಲಿ ಜಂಗಮರನ್ನು ಶಿವನ ರೂಪವೆಂದೇ ಪೂಜಿಸುತ್ತಾರೆ. ಆದರೆ ಬಸವಣ್ಣನವರ ಕಾಲದಲ್ಲೇ ಜಂಗಮ ಸಂನ್ಯಾಸಿಗಳು ಬಿಕ್ಷೆಗಾಗಿ ಮನೆಗೆ ಬಂದರೆ, ಇಲ್ಲವೆನ್ನುವ ಮಂದಿಯಿದ್ದರು. ತಾಣು ಉಣ್ಣುವಾಗ, ಬಂಧುಗಳು ಬಂದಾಗ ಇಲ್ಲವೆನ್ನದ ಇವರು, ಜಂಗಮರು ಬಂದಾಗ ಇಲ್ಲವೆಂದು ಸಾಗ ಹಾಕುತಾರಲ್ಲ ಎಂದು ಜನರ ನಡವಳಿಕೆಯ ಬಗ್ಗೆ ಹೀಗೆ ನೊಂದು ಹೇಳಿದ್ದಾರೆ.

ಉಂಬಾಗಳಿಲ್ಲೆನ್ನ ತಾ ಉಳುವಾಗಳಿಲ್ಲೆನ್ನ
ಬಂಧುಗಳು ಬಂದಾಗಳಿಲ್ಲೆನ್ನ
ಲಿಂಗಕ್ಕೆ ಇಲ್ಲೆಂಬ ಜಂಗಮಕೆ ಇಲ್ಲೆಂಬ
ಬಂದ ಪುರಾತರಿಗೆ ಇಲ್ಲೆಂಬ
ಸಾವಾಗ ದೇಹವನ್ನ ದೇಗುಲಕ್ಕೆ ಒಯ್ಯೆಂಬ
ದೇವರಿಗೆ ಆ ಹೆಣ ಬಿಟ್ಟಿ ಹೇಳಿತ್ತೇ
ಕೂಡಲಸಂಗಮದೇವ

ಸಹವಾಸ ದೋಷದಿಂದ ಅವನು ಕೆಟ್ಟ ಎಂದು ಹೇಳುವುದನ್ನು ಕೇಳಿದ್ದೇವೆ. ಅದಕ್ಕೆ ಬಸವಣ್ಣನವರು ಒಳ್ಳೆಯವರ ಸ್ನೇಹ ಮಾಡು, ದುಷ್ಟರಿಂದ ದೂರ ಇರು ಎಂಬ ನಿತ್ಯನೂತನ ಸತ್ಯವನ್ನು ಈ ವಚನದಲ್ಲಿ ಹೇಳಿದ್ದಾರೆ. ಅಂತರಂಗ ಶುದ್ಧವಿಲ್ಲದವರ ಸಂಗವನ್ನು ಕಾಲಕೂಟ ವಿಷಕ್ಕೆ ಹೋಲಿಸಿದ್ದಾರೆ.

ಸಾರ ಸಜ್ಜನರ ಸಂಗವ ಮಾಡು
ದೂರ ದುರ್ಜನರ ಸಂಗ ಬೇಡವಯ್ಯಾ
ಆವ ಹಾವಾದಡೇನು ವಿಷವೊಂದೇ
ಅಂಥವರ ಸಂಗ ಬೇಡವಯ್ಯಾ
ಅಂತರಂಗ ಶುದ್ಧವಿಲ್ಲದವರ ಸಂಗ
ಸಿಂಗಿಕಾಲಕೂಟವಿಷವೋ
ಕೂಡಲಸಂಗಮದೇವ

ಒಳಗೆ ಭಕ್ತಿಯಿಲ್ಲದಿದ್ದರೂ ತಾವು ದೊಡ್ಡ ಭಕ್ತರೆಂದು ತೋರಿಸಿಕೊಳ್ಳುವ ಬೂಟಾಟಿಕೆ ಭಕ್ತರ ನಡುವೆ ನಿಜವಾದ ಭಕ್ತನ ಗುಣವನ್ನು ಬಸವಣ್ಣನವರು ಈ ವಚನದಲ್ಲಿ ತಿಳಿಸಿಕೊಡುತ್ತಾರೆ. ಶುದ್ಧವಾದ ಮಾತು, ಪರಿಶುದ್ಧವಾದ ಮನಸ್ಸು ಹಾಗೂ ವಿನಯ ಸಂಪನ್ನತೆಯಿಂದ ಮಾತ್ರ ಶಿವನನ್ನು ಮೆಚ್ಚಿಸಲು ಸಾಧ್ಯವೆನ್ನುತ್ತಾರೆ.

ಕಂಡ ಭಕ್ತರಿಗೆ ಕೈಮುಗಿವಾತನೆ ಭಕ್ತ
ಮೃದುವಚನವೆ ಸಕಲ ಜಪಂಗಳಯ್ಯಾ
ಮೃದುವಚನವೆ ಸಕಲ ತಪಂಗಳಯ್ಯಾ

ಸದುವಿನಯವೆ ಸದಾಶಿವನ ಒಲುಮೆ ಅಯ್ಯಾ
ಕೂಡಲಸಂಗಯ್ಯನಂಥಲ್ಲದೊಲ್ಲನಯ್ಯಾ
ಕಂಡ ಭಕ್ತರಿಗೆ ಕೈಮುಗಿವಾತನೆ ಭಕ್ತ

ಮೂರ್ತರೂಪದಲ್ಲಿ ದೇವರನ್ನು ಪೂಜಿಸುವುದೇ ಭಕ್ತಿಯಲ್ಲ ಎಂದು ಬಸವಣ್ಣನವರು ಈ ವಚನದಲ್ಲಿ ಸಾರಿ ಹೇಳುತ್ತಾರೆ. ತನ್ನ ದೇಹವೇ ಶಿವನಿರುವ ದೇಗುಲ, ಜಂಗಮ ಸ್ವರೂಪವಾದ ಅಳಿವಿಲ್ಲದ ತನ್ನ ಆತ್ಮವೇ ಪರಶಿವನ ರೂಪ ಎಂಬ ಅದ್ವೈತ ತತ್ವವನ್ನು ಹೇಳಿದ್ದಾರೆ.

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೆ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಲಶವಯ್ಯಾ
ಕೂಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಾ

ಶಿವನಿರುವ ಇಂತಹ ದೇಹ ಹಾಗೂ ಮನಸ್ಸು ಹೇಗಿರಬೇಕೆಂದು ಈ ವಚನದಲ್ಲಿ ತಿಳಿಹೇಳಿದ್ದಾರೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ಕೂಡಲಸಂಗಮದೇವನ ಒಲಿಸುವ ಪರಿ

ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ಧಿಯಿಂದ ಮಾತ್ರವೇ ಶಿವನನ್ನು ಒಲಿಸಿಕೊಳ್ಳುವುದು ಸಾಧ್ಯವೆಂಬ ದಿವ್ಯ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ. ಇಂತಹ ಮಹಾನ್‌ ಮಾನವತಾವಾದಿಯನ್ನು ವಿಶ್ವಕ್ಕೆ ಕೊಟ್ಟಿರುವ ಕನ್ನಡನಾಡಿನ ಪುಣ್ಯ ಎಂಥದ್ದು ಯೋಚಿಸಿ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X